Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ನ್ಯಾಯಾಂಗದಲ್ಲಿ ಸುಧಾರಣೆ ಹೆಜ್ಜೆ

Saturday, 07.10.2017, 3:00 AM       No Comments

ನ್ಯಾಯಾಂಗದ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ತಳೆದಿದೆ. ಪ್ರಸಕ್ತ ನ್ಯಾಯಾಧೀಶರ ನೇಮಕಕ್ಕೆ ಜಾರಿಯಲ್ಲಿರುವ ಕೊಲಿಜಿಯಂ (ಆಯ್ಕೆ ಮಂಡಳಿ)ನಲ್ಲಿ ಪಾರದರ್ಶಕತೆ ತರಲು ಮುಂದಾಗಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಬಡ್ತಿ, ವರ್ಗಾವಣೆ ಮತ್ತು ಕಾಯಂ ಮಾಡುವುದಕ್ಕೆ ಸಂಬಂಧಿಸಿದಂತೆ ಕೊಲಿಜಿಯಂನಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮಾನದಂಡ ಸಮೇತ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸುವುದಾಗಿ ಹೇಳಿದೆ. ನಿಜಕ್ಕೂ, ಇದೊಂದು ಉತ್ತಮ ಹೆಜ್ಜೆ ಮತ್ತು ನ್ಯಾಯಾಂಗ ಸುಧಾರಣೆಯಲ್ಲಿನ ಹೊಸ ಪರ್ವವೆಂದೇ ಹೇಳಬಹುದು.

ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಕ ಮಾಡುವ, ವರ್ಗಾವಣೆ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿದ್ದವು. ಈ ಬಗ್ಗೆ ಗಂಭೀರ ಚರ್ಚೆಯೂ ನಡೆದು ನ್ಯಾಯಾಧೀಶರ ನೇಮಕಕ್ಕಾಗಿ ಹೊಸ ಕಾಯ್ದೆ ಮೂಲಕ 2015ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ರಚಿಸಿತ್ತು. ಆದರೆ. ಸುಪ್ರೀಂಕೋರ್ಟ್ ಈ ಆಯೋಗವನ್ನು ರದ್ದುಗೊಳಿಸಿತು. ಹಾಗಾಗಿ, ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯೆ ತಿಕ್ಕಾಟದ ಸನ್ನಿವೇಶವೂ ಸೃಷ್ಟಿಯಾಗಿತ್ತು. ಪ್ರತಿಬಾರಿಯೂ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೊಲಿಜಿಯಂ ನಿರ್ಧಾರ ಕೈಗೊಳ್ಳುವುದರಿಂದ ಇದರಲ್ಲಿ ಯಾವುದೇ ರೀತಿಯ ಅನುಮಾನಕ್ಕೆ ಆಸ್ಪದ ನೀಡದಿರಲು ಮತ್ತು ಕೊಲಿಜಿಯಂನಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕರಡಿಗೆ ಒಪ್ಪಿಗೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.

ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಿಸುವ ಎರಡು ದಶಕದಷ್ಟು ಹಳೆಯದಾದ ಆಯ್ಕೆ ಮಂಡಳಿ (ಕೊಲಿಜಿಯಂ) ವ್ಯವಸ್ಥೆಯಲ್ಲಿ ದೋಷವಿದೆ. ಈ ವ್ಯವಸ್ಥೆ ನ್ಯಾಯಾಂಗದಲ್ಲಿ ಪಾರದರ್ಶಕತೆ ತರಲು ಅಡ್ಡಿಯಾಗಿದೆ ಎಂದು ಕೇಂದ್ರ ಸರ್ಕಾರ ಸೇರಿದಂತೆ ಹಲವು ವಲಯಗಳಿಂದಲೂ ಅಭಿಪ್ರಾಯ ಕೇಳಿಬಂದಿತ್ತು. ಆದರೆ, ಎನ್​ಜೆಎಸಿಯಿಂದ ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಸುಪ್ರೀಂಕೋರ್ಟ್ ಪ್ರಸ್ತಾವಿತ ಆಯೋಗವನ್ನೇ ರದ್ದುಪಡಿಸಿದಾಗ ಮತ್ತಷ್ಟು ಚರ್ಚೆಗಳು ಗರಿಗೆದರಿದ್ದು ಹೌದು.

ನ್ಯಾಯಾಂಗಕ್ಕೆ ತನ್ನದೇ ಆದ ಘನತೆ ಇದೆ ಎಂಬುದೇನೋ ನಿಜ. ಆದರೆ, ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳೂ ಪಾರದರ್ಶಕತೆಗೆ ತೆರೆದುಕೊಳ್ಳುತ್ತಿವೆ. ನೇಮಕಾತಿ, ಬಡ್ತಿ ಸೇರಿದಂತೆ ಇತರೆ ಸುಧಾರಣೆ ಮತ್ತು ಬದಲಾವಣೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗುವಂತೆ ಮಾಡುತ್ತಿವೆ. ಇದು ಆಯಾ ಸಂಸ್ಥೆಗಳ ಉತ್ತರದಾಯಿತ್ವವೂ ಹೌದು. ನ್ಯಾಯಾಂಗದ ನೇಮಕಾತಿ ಮತ್ತು ಇತರೆ ವಿವರಗಳು ಮಾತ್ರ ಇದರಿಂದ ಹೊರತಾಗಿದ್ದವು. ಪ್ರಸಕ್ತ ಕೊಲಿಜಿಯಂ ವ್ಯವಸ್ಥೆಯಲ್ಲಿ, ಸುಪ್ರೀಂ ಕೋರ್ಟ್ ನಿರ್ಧರಿಸಿದಂತೆ ಎಲ್ಲ ನ್ಯಾಯಾಂಗ ನೇಮಕಾತಿಗಳಿಗೆ ಮುಖ್ಯ ನ್ಯಾಯಮೂರ್ತಿಗಳ ಅನುಮೋದನೆ ಅಗತ್ಯ. ಅಲ್ಲದೆ ಸುಪ್ರೀಂಕೋರ್ಟಿನ ಇತರೆ ನ್ಯಾಯಾಧೀಶರು ಹಾಗೂ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಯಾರಾಗಬೇಕು ಎಂಬುದನ್ನು ಸುಪ್ರಿಂ ಕೋರ್ಟಿನ ಮೂವರು ಹಿರಿಯ ನ್ಯಾಯಾಧೀಶರು ನಿರ್ಧರಿಸುತ್ತಾರೆ. ಇನ್ಮುಂದೆ, ಈ ನೇಮಕಾತಿಗಳ ಮಾಹಿತಿಗಳು ಮತ್ತು ಯಾವೆಲ್ಲ ಮಾನದಂಡಗಳ ಮೇಲೆ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂಬುದರ ವಿವರ ಸುಪ್ರೀಂಕೋರ್ಟ್​ನ ವೆಬ್​ಸೈಟ್​ನಲ್ಲಿ ಲಭ್ಯವಾಗುವುದರಿಂದ, ಮಾಹಿತಿಗೆ ತಡಕಾಡುವುದು ತಪ್ಪಲಿದೆ. ನ್ಯಾಯಾಂಗದಲ್ಲಿ ಸಂಭವನೀಯ ಅಪಸವ್ಯಗಳನ್ನು ತಡೆಯಲು ಈ ಮಾಹಿತಿಯ ಹರಿವು ನೆರವಾಗಲಿದೆ. ಸ್ವವಿಮರ್ಶೆ ಮತ್ತು ಅವಲೋಕನದಿಂದ ನ್ಯಾಯಾಂಗವೇ ಸುಧಾರಣೆಗಳಿಗೆ ಒಡ್ಡಿಕೊಂಡರೆ ಶಾಸಕಾಂಗದೊಂದಿಗಿನ ಸಂಘರ್ಷವನ್ನೂ ತಪ್ಪಿಸಬಹುದು.

Leave a Reply

Your email address will not be published. Required fields are marked *

Back To Top