Thursday, 20th September 2018  

Vijayavani

ಸಿಎಂ ಕುಟುಂಬದ ವಿರುದ್ಧ ಬಿಜೆಪಿ ಭೂ ಅಸ್ತ್ರ - ಮೈಸೂರು, ರಾಮನಗರದಲ್ಲೂ ಭೂ ಅಕ್ರಮ - ಬಿಜೆಪಿ ನಾಯಕರಿಂದ ಭೂ ಚಕ್ರ        ಹಾಸನದಲ್ಲಿ ಗೌಡರ ಕುಟುಂಬದಿಂದ ಗೋಮಾಳ ಕಬಳಿಕೆ - ದೇಶಪಾಂಡೆಗೆ ದೂರು -ಎ.ಮಂಜುರಿಂದ ಕಂಪ್ಲೆಂಟ್​ ದಾಖಲು        ಬಿಜೆಪಿಯಿಂದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ - ದಂಗೆ ಏಳುವಂತೆ ಸಿಎಂ ಕರೆ - ಎಚ್ಡಿಕೆ ಮಾತಿನ ಬೆನ್ನಲ್ಲೇ ದಾಂಧಲೆ ಶುರು        ಎಚ್​ಡಿಕೆ-ಬಿಎಸ್​ವೈ ವಾಗ್ದಾಳಿ ಬೆನ್ನಲ್ಲೇ ಹೈಡ್ರಾಮಾ -ಯಡಿಯೂರಪ್ಪ ನಿವಾಸದೆದುರು ಕೈ ಕಾರ್ಯಕರ್ತರ ಹಂಗಾಮಾ        ಡಾಲರ್ಸ್ ಕಾಲನಿ ನಿವಾಸದಲ್ಲಿ ಗಲಾಟೆ - ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ - ಬಿಎಸ್​ವೈ ಭಾವಚಿತ್ರ ಹರಿದು ಹಾಕಿ ಆಕ್ರೋಶ        ಇಲ್ಲಿ ನಿಮ್ಮ ಸರ್ಕಾರ, ಅಲ್ಲಿ ನಮ್ಮ ಸರ್ಕಾರ - ನಿಮ್ಮ ಯಾವುದೇ ಧಮ್ಕಿಗೂ ಹೆದರಲ್ಲ -  ಅಟ್ಯಾಕ್​ಗೆ ಬಿಎಸ್​ವೈ ಕೌಂಟರ್​ ಅಟ್ಯಾಕ್       
Breaking News

ನ್ಯಾಯದ ಭಂಡಾರ

Sunday, 26.11.2017, 3:04 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ನಮ್ಮ ದೇಶ ‘ವಿಶ್ವಗುರು’ವಾಗಬೇಕು ಎಂಬ ಭಾವನೆ ಪ್ರತಿಯೊಬ್ಬ ರಾಷ್ಟ್ರೀಯವಾದಿ ಭಾರತೀಯನದ್ದು. ಅಂತಹ ಪ್ರಭಾವಿ ದೇಶವಾಗಿ ಭಾರತ ಬದಲಾಗುತ್ತಿದೆ ಎಂಬ ಭಾವನೆ ಮೂಡಿಸಿದ್ದು ಕಳೆದ ಕೆಲವು ದಿನಗಳಲ್ಲಿ ನಡೆದ ಬೆಳವಣಿಗೆಗಳು- ಮೂಡಿ’ಸ್ ರೇಟಿಂಗ್, ವಿಶ್ವ ಬ್ಯಾಂಕ್ ಉದ್ಯಮಸ್ನೇಹಿ ರ್ಯಾಂಕಿಂಗ್, ಭಯೋತ್ಪಾದನೆ ವಿಚಾರದಲ್ಲಿ ಪಾಕ್ ವಿರುದ್ಧ ಕಠಿಣ ನಿಲುವು ಅಮೆರಿಕ ತೆಗೆದುಕೊಳ್ಳುವಂತಾಗಿದ್ದು ಹೀಗೆ ಪಟ್ಟಿ ಬೆಳೆಯುತ್ತದೆ. ಕಳೆದ ವಾರದ ಬೆಳವಣಿಗೆಯಲ್ಲಿ ಗಮನಾರ್ಹವಾದುದು ಇಂಟರ್​ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ)ನ 15ನೇ ನ್ಯಾಯಮೂರ್ತಿ ನೇಮಕಕ್ಕೆ ನಡೆದ ಚುನಾವಣೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವೊಂದು ಸಾಮಾನ್ಯ ಸದಸ್ಯ ರಾಷ್ಟ್ರದ ರಾಜತಾಂತ್ರಿಕ ಪ್ರಭಾವದೆದುರು ತಲೆಬಾಗಿದ್ದು ಕೂಡ ಇದೇ ಮೊದಲು. ಕೊನೇ ಹಂತದ ಚುನಾವಣೆಯಲ್ಲಿ ಬ್ರಿಟನ್ ತನ್ನ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್​ವುಡ್​ರನ್ನು ಕಣದಿಂದ ಹಿಂದೆಸರಿಸಿದ್ದರ ಪರಿಣಾಮ, ಐಸಿಜೆಯ 15ನೇ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವಿರೋಧವಾಗಿ ಮರುನೇಮಕವಾಗಿದ್ದಾರೆ.(ವಿಶ್ವಸಂಸ್ಥೆಯ ಸ್ವರೂಪ, ಐಸಿಜೆ ಕಾರ್ಯವೈಖರಿ ಇತ್ಯಾದಿಗಳ ಬಗ್ಗೆ ಹಿರಿಯ ನ್ಯಾಯವಾದಿ ಸಜನ್ ಪೂವಯ್ಯ ತಮ್ಮ ಅಂಕಣ(ನ.23,24)ದಲ್ಲಿ ವಿವರಿಸಿದ್ದಾರೆ.) ಅವರ ಈ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಕೇಂದ್ರ ಸರ್ಕಾರ, ವಿಶೇಷವಾಗಿ ವಿದೇಶಾಂಗ ಸಚಿವಾಲಯ. ಅದರಲ್ಲೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಭಾರತದ ನಿವೃತ್ತ ಸೇನಾ ಸಿಬ್ಬಂದಿ ಕುಲಭೂಷಣ್ ಜಾಧವ್ ಅವರನ್ನು ಅಕ್ರಮವಾಗಿ ಬಂಧಿಸಿದ ಪಾಕಿಸ್ತಾನ, ಅವರಿಗೆ ಕಾನೂನು ಬಾಹಿರವಾಗಿ ಮರಣದಂಡನೆ ವಿಧಿಸಿದ ಪ್ರಕರಣ ಇದೇ ಐಸಿಜೆಯಲ್ಲಿ ವಿಚಾರಣೆಯಲ್ಲಿದೆ. ಹೀಗಾಗಿ, ಅಲ್ಲಿ ಪ್ರಾತಿನಿಧ್ಯ ಕಾಯ್ದುಕೊಳ್ಳುವ ಅನಿವಾರ್ಯತೆ ಭಾರತದ ಎದುರಿಗಿತ್ತು.

ಈ ಚುನಾವಣಾ ಗೆಲುವಿನ ಬಳಿಕ ಅವರು,‘ ಐಸಿಜೆಯಲ್ಲಿ ಖಾಲಿ ಇದ್ದ ಸ್ಥಾನಕ್ಕೆ ಕಳೆದ ಅವಧಿಗೆ ನಾನು ನೇರವಾಗಿ ನಿಯೋಜಿಸಲ್ಪಟ್ಟಿದ್ದೆ. ಇದೇ ಮೊದಲ ಸಲ ಕುತೂಹಲ ಕೆರಳಿಸುವಂತಹ ಚುನಾವಣೆಯಲ್ಲಿ ಭಾಗಿಯಾಗುವ ಸೌಭಾಗ್ಯ ನನ್ನದಾಯಿತು’ ಎಂದಿರುವುದು ಅಲ್ಲಿನ ಬೆಳವಣಿಗೆಯ ರೋಚಕತೆ ಹಾಗೆಯೇ ಮಹತ್ವವನ್ನು ಬಿಂಬಿಸುತ್ತದೆ. ಹೇಗ್​ನಲ್ಲಿರುವ ಐಸಿಜೆಯಲ್ಲಿ ಭಾರತದ ಪ್ರತಿನಿಧಿಯಾಗಿ ಮುಂದುವರಿಯಲು ನ್ಯಾ.ದಲ್ವೀರ್ ಭಂಡಾರಿ ಹೆಸರನ್ನು ಕಳೆದ ಜೂನ್ ತಿಂಗಳಲ್ಲಿ ನಾಮನಿರ್ದೇಶನ ಮಾಡಿತ್ತು ಸರ್ಕಾರ. ಅವರ ಮೊದಲ ಅವಧಿ 2018ರ ಫೆ.5ರಂದು ಮುಕ್ತಾಯವಾಗಲಿದ್ದು, ಅಲ್ಲಿಂದ ಒಂಭತ್ತು ವರ್ಷ 2ನೇ ಅವಧಿ ಆರಂಭವಾಗುತ್ತದೆ. ಭಂಡಾರಿ ವಕೀಲಿಕೆಯ ಕುಟುಂಬದಿಂದಲೇ ಬಂದವರು. 1947ರ ಅ.1ರಂದು ಜನಿಸಿದ ಭಂಡಾರಿಯವರ ತಂದೆ ಮಹಾವೀರ ಚಾಂದ್ ಭಂಡಾರಿ. ಅಜ್ಜ ಬಿ.ಸಿ.ಭಂಡಾರಿ. ಅವರಿಬ್ಬರೂ ರಾಜಸ್ಥಾನದಲ್ಲಿ ವಕೀಲಿಕೆ ಮಾಡಿದವರು. ಜೋಧಪುರ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ದಲ್ವೀರ್, 1968-70ರ ತನಕ ರಾಜಸ್ಥಾನ ಹೈಕೋರ್ಟ್​ನಲ್ಲಿ ವಕೀಲಿಕೆ ಮಾಡಿದ್ದರು. 1970ರ ಜೂನ್​ನಲ್ಲಿ ಷಿಕಾಗೋದಲ್ಲಿನ ಯೂನಿವರ್ಸಿಟಿ ಆಫ್ ಷಿಕಾಗೋ ಆಯೋಜಿಸಿದ್ದ ‘ಭಾರತೀಯ ಕಾನೂನಿನ ಮೇಲಿನ ಸಂಶೋಧನೆ’ ಕುರಿತ ಆರು ವಾರಗಳ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಂತೆ ಭಂಡಾರಿಯವರಿಗೂ ಆಹ್ವಾನ ಸಿಕ್ಕಿತ್ತು. ಇದೇ ಅವಧಿಯಲ್ಲಿ ಅವರು ‘ನಾರ್ತ್​ವೆಸ್ಟರ್ನ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾ’ದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದೊಂದಿಗೆ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಅಲ್ಲದೆ, ಷಿಕಾಗೋ ಕೋರ್ಟ್​ಗಳಲ್ಲಿ ನಾರ್ತ್​ವೆಸ್ಟರ್ನ್ ಲೀಗಲ್ ಅಸಿಸ್ಟೆನ್ಸ್ ಕ್ಲಿನಿಕ್ ಪ್ರತಿನಿಧಿಯಾಗಿ ವಿವಿಧ ಪ್ರಕರಣಗಳಲ್ಲಿ ವಾದ ಮಂಡಿಸಿದರು. ಹಾಗೆಯೇ, ಸೆಂಟರ್ ಫಾರ್ ರೀಸರ್ಚ್​ನಲ್ಲೂ ಕೆಲಸ ಮಾಡಿದ್ದರು. 1973ರ ಜೂನ್​ನಲ್ಲಿ ಅಂತಾರಾಷ್ಟ್ರೀಯ ಫೆಲೋಷಿಪ್ ಪಡೆದ ಅವರು, ಥಾಯ್ಲೆಂಡ್, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ, ಶ್ರೀಲಂಕಾಕ್ಕೆ ವೀಕ್ಷಕ/ಉಪನ್ಯಾಸಕನಾಗಿ ವಿವಿಧ ಕಾನೂನು ವಿಶ್ವವಿದ್ಯಾಲಯ, ಕಾಲೇಜುಗಳಿಗೆ ಭೇಟಿ ನೀಡಿದರು. ವಿಶ್ವಸಂಸ್ಥೆಯ ‘ಡಿಲೇ ಇನ್ ದ ಅಡ್ಮಿನಿಸ್ಟ್ರೇಷನ್ ಆಫ್ ಕ್ರಿಮಿನಲ್ ಜಸ್ಟೀಸ್ ಇನ್ ಇಂಡಿಯಾ’ ಎಂಬ ವಿಷಯದ ಪ್ರಾಜೆಕ್ಟ್​ಗಾಗಿ ಕೆಲಸ ಮಾಡಿದ್ದರು.

ಅಮೆರಿಕದಿಂದ ಅಧ್ಯಯನ ಮುಗಿಸಿ ಭಾರತಕ್ಕೆ ಹಿಂತಿರುಗಿದ ಭಂಡಾರಿಯವರು 1973ರಿಂದ 1976ರ ತನಕ ರಾಜಸ್ಥಾನ ಹೈಕೋರ್ಟ್​ನಲ್ಲಿ ವಕೀಲರಾಗಿ ಕೆಲಸ ಮಾಡಿದರು. ನಂತರ 1977ರಲ್ಲಿ ದೆಹಲಿಗೆ ಸ್ಥಳಾಂತರಗೊಂಡ ಅವರು, ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯವಾದಿಯಾದರು. 23 ವರ್ಷಗಳ ವಕೀಲಿಕೆ ಬಳಿಕ 1991ರಲ್ಲಿ ದೆಹಲಿ ಹೈಕೋರ್ಟ್​ನ ನ್ಯಾಯಮೂರ್ತಿಯಾಗಿ ನಿಯೋಜಿತರಾದರು. ಅದಾಗಿ, ಬಾಂಬೆ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದ ಅವರು 2005ರ ಅಕ್ಟೋಬರ್​ನಲ್ಲಿ ಸುಪ್ರೀಂ ಕೋರ್ಟ್​ಗೆ ಬಡ್ತಿ ಪಡೆದರು. ಅಲ್ಲಿ ಏಳು ವರ್ಷಗಳ ಸೇವೆ ಬಳಿಕ, 2012ರ ಜೂನ್ 19ರಂದು ಐಸಿಜೆಯಲ್ಲಿ ಭಾರತದ ಪ್ರತಿನಿಧಿಯಾಗಿ ನಿಯೋಜಿತರಾದರು. 2014ರಲ್ಲಿ ಭಂಡಾರಿಯವರಿಗೆ ಪದ್ಮಭೂಷಣ ಪುರಸ್ಕಾರದ ಗರಿ ಒದಗಿತು. ಕಾನೂನು ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ, ಕರ್ನಾಟಕದ ತುಮಕೂರು ವಿಶ್ವವಿದ್ಯಾಲಯ ನ್ಯಾ.ಭಂಡಾರಿಯವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಭಂಡಾರಿಯವರು 1994ರಿಂದಲೇ ಇಂಟರ್​ನ್ಯಾಷನಲ್ ಲಾ ಅಸೋಸಿಯೇಷನ್​ನ ಇಂಡಿಯಾ ಚಾಪ್ಟರ್​ನ ಕಾರ್ಯಕಾರಿ ಸದಸ್ಯರಾಗಿದ್ದರು. ಅಲ್ಲದೆ, 2007ರಲ್ಲಿ ಇಂಡಿಯಾ ಇಂಟರ್​ನ್ಯಾಷನಲ್ ಲಾ ಫೌಂಡೇಷನ್​ನ ಚುನಾಯಿತ ಅಧ್ಯಕ್ಷರಾಗಿದ್ದು, ಈಗಲೂ ಮುಂದುವರಿದಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಸಾಂವಿಧಾನಿಕ ಕಾನೂನು, ಅಪರಾಧ ಕಾನೂನು, ನಾಗರಿಕ ನೀತಿ ಸಂಹಿತೆ, ಆಡಳಿತ ಕಾನೂನು, ಮಧ್ಯಸ್ಥಿಕೆ ಕಾನೂನು, ವಿಮೆ, ಬ್ಯಾಂಕಿಂಗ್ ಮತ್ತು ಕೌಟುಂಬಿಕ ಕಾನೂನು ಮುಂತಾದ ವಿಷಯಗಳಲ್ಲಿ ಪರಿಣತರು ಅವರು. ನ್ಯಾಯಮೂರ್ತಿಯಾಗಿ ಅವರು ನೀಡಿದ ಹಲವು ಐತಿಹಾಸಿಕ ತೀರ್ಪಗಳ ಪರಿಣಾಮ ಸರ್ಕಾರ ಕೆಲವು ಕಾನೂನುಗಳನ್ನು ಪರಿಷ್ಕರಿಸಬೇಕಾಗಿ ಬಂದಿದೆ. ವಿಶೇಷವಾಗಿ ಒಂದು ವಿಚ್ಛೇದನ ಪ್ರಕರಣದಲ್ಲಿ ಅವರು ನೀಡಿದ ತೀರ್ಪಿನ ಪರಿಣಾಮ ಕೇಂದ್ರ ಸರ್ಕಾರ ಹಿಂದು ವಿವಾಹ ಕಾಯ್ದೆ 1965ರಲ್ಲಿ ತಿದ್ದುಪಡಿ ತರಬೇಕಾಯಿತು. ಆಹಾರ ಧಾನ್ಯಗಳ ಹಂಚಿಕೆ ಕುರಿತ ತೀರ್ಪಿನ ಪರಿಣಾಮ ದೇಶಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ವಿತರಿಸುವ ಆಹಾರ ಧಾನ್ಯದ ಪ್ರಮಾಣವನ್ನು ಸರ್ಕಾರ ಹೆಚ್ಚಿಸಬೇಕಾಯಿತು. ನಿರ್ಗತಿಕರಿಗೆ ರಾತ್ರಿ ವಾಸ್ತವ್ಯಕ್ಕೆ ಅಗತ್ಯ ಸೂರು ಒದಗಿಸುವ ಕೆಲಸವನ್ನು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಕೀರ್ತಿಯೂ ಭಂಡಾರಿಯವರದ್ದು. ಇನ್ನೂ ಪ್ರಮುಖ ತೀರ್ಪು ಎಂದರೆ, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಕುರಿತಾಗಿ ನೀಡಿದ್ದು. ಇದರ ಪರಿಣಾಮ, ಸರ್ಕಾರ ದೇಶದ ಎಲ್ಲ ಪ್ರಾಥಮಿಕ ಮತ್ತು ಸೆಕಂಡರಿ ಸ್ಕೂಲ್​ಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವ ಹೊಣೆಗಾರಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಬೇಕಾಯಿತು. ಐಸಿಜೆಯಲ್ಲಿನ ಅವರ ಗೆಲುವು ಜಾಗತಿಕ ಮಟ್ಟದಲ್ಲಿ ಹಲವು ವಿಚಾರಗಳಿಗಾಗಿ ಪ್ರಾಮುಖ್ಯತೆ ಪಡೆದುಕೊಂಡಿವೆ. ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಎಂಬ ಭಾರತದ ಆಗ್ರಹಕ್ಕೆ ಈ ಗೆಲುವು ಪುಷ್ಟಿ ನೀಡಿದೆ. ಆದರೆ, ಅದಕ್ಕೆ ಇನ್ನೂ ಕಾಯಂ ಸದಸ್ಯ ರಾಷ್ಟ್ರಗಳ ಬೆಂಬಲ ಸಿಕ್ಕಿಲ್ಲ. ಈಗ ಮುಖ್ಯವಾಗಿ, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ನ್ಯಾ.ಭಂಡಾರಿ ಹೊಣೆಗಾರಿಕೆಯನ್ನು ಹೇಗೆ ನಿರ್ವಹಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

(ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top