Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ನೌಕರಿ ಹೆಸರಲ್ಲಿ ವಸೂಲಿ

Monday, 20.03.2017, 7:18 AM       No Comments

| ರಾಜೀವ ಹೆಗಡೆ

ಬೆಂಗಳೂರು: ಲಕ್ಷಾಂತರ ರೂ. ಖರ್ಚು ಮಾಡಿ ಶಿಕ್ಷಣ ಮುಗಿಸಿ ಉದ್ಯೋಗ ಅರಸುವ ಅಭ್ಯರ್ಥಿಗಳಿಂದ ರಾಜ್ಯ ಸರ್ಕಾರವೇ ವಸೂಲಿಗೆ ನಿಂತಿದೆ. ರಾಜ್ಯದಲ್ಲಿ ಕೆಎಎಸ್ ಅಥವಾ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 300 ರೂ. ಅರ್ಜಿ ಶುಲ್ಕ ನಿಗದಿಯಾಗಿರುವಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಪನ್ಯಾಸಕರ ಹುದ್ದೆಗಾಗಿ ಒಂದು ಅರ್ಜಿಗೆ ಬರೋಬ್ಬರಿ 2500 ರೂ.ಗಳ ಶುಲ್ಕ ಬರೆ ಹೇರಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 1130 ಉಪನ್ಯಾಸಕ ಹುದ್ದೆಗಳಿಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಒಂದು ಅರ್ಜಿಗೆ 2500 ರೂ ಹಾಗೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 2 ಸಾವಿರ ರೂ. ಶುಲ್ಕ ನಿಗದಿ ಪಡಿಸಿದೆ. ಈ ಹಿಂದೆ ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆಯಲ್ಲಿಯೂ ಪ್ರಾಧಿಕಾರ ಇದೇ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡಿತ್ತು. ಆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರು ನಿರ್ಲಕ್ಷ್ಯ ಮಾಡಿದ್ದರಿಂದಾಗಿ ಪ್ರಾಧಿಕಾರದ ಅಧಿಕಾರಿಗಳು ‘ಉನ್ನತ ಶುಲ್ಕ’ ವಸೂಲಿಯ ಚಾಳಿಯನ್ನು ಮುಂದುವರಿಸಿದ್ದಾರೆ.

ಪರೀಕ್ಷಾ ಪ್ರಾಧಿಕಾರ ಹಾಗೂ ಕೆಲವು ಇಲಾಖೆಗಳಲ್ಲಿನ ನೇಮಕ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಂದ ಸಾವಿರಗಟ್ಟಲೆ ಶುಲ್ಕ ಪಡೆಯುವುದು ಖಯಾಲಿಯಾಗುತ್ತಿದೆ. ಅಭ್ಯರ್ಥಿಗಳ ವಿರೋಧ ಹಾಗೂ ಮುಖ್ಯಮಂತ್ರಿಯ ಮಧ್ಯಪ್ರವೇಶದ ಬಳಿಕ ಎಚ್ಚರಗೊಳ್ಳುವುದು ಆಯಾ ಇಲಾಖೆ ಮುಖ್ಯಸ್ಥರಿಗೂ ರೂಢಿಯಾಗಿದೆ.

ಆದರೆ ಅಷ್ಟೊಂದು ಪ್ರಮಾಣದ ಶುಲ್ಕ ವಸೂಲಿ ಅಗತ್ಯ ಕುರಿತು ಮಾತ್ರ ಯಾವೊಬ್ಬ ಅಧಿಕಾರಿಯೂ ಸಮರ್ಪಕ ಉತ್ತರ ಕೊಡುತ್ತಿಲ್ಲ.

ಕೆಎಎಸ್ ಶುಲ್ಕ 300 ರೂ!

ರಾಜ್ಯದಲ್ಲಿನ ಉದ್ಯೋಗಕ್ಕೆ ಸಂಬಂಧಿಸಿ ಕೆಎಎಸ್ ಅಥವಾ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳನ್ನು ಅತ್ಯುನ್ನತ ಹುದ್ದೆ ಎಂದು ಹೇಳಲಾಗುತ್ತದೆ. ಈ ಹುದ್ದೆಗಳ ಅರ್ಜಿಗಳಿಗೆ ಕೆಪಿಎಸ್​ಸಿ ಕೇವಲ 300 ರೂ ಶುಲ್ಕ ಪಡೆಯುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಕೇವಲ 25 ರೂ ನಿಗದಿ ಮಾಡಲಾಗಿದೆ. ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ 10 ಪಟ್ಟು ಕಡಿಮೆ ಶುಲ್ಕವಾಗಿದೆ.

ಹತ್ತು ಪಟ್ಟು ಹೆಚ್ಚು ಶುಲ್ಕ

ಕೆಪಿಎಸ್​ಸಿಗಿಂತ 10 ಪಟ್ಟು ಹೆಚ್ಚು ಶುಲ್ಕ ವಸೂಲಿ ಮಾಡುವ ಪ್ರಾಧಿಕಾರ ಅಸಲಿಗೆ ವಿಶೇಷ ರೀತಿಯ ಪರೀಕ್ಷಾ ವ್ಯವಸ್ಥೆಯನ್ನೂ ಅನುಸರಿಸುತ್ತಿಲ್ಲ. ಎಲ್ಲ ಇಲಾಖೆಗಳಲ್ಲಿ ನಡೆಯುವ ಸಾಮಾನ್ಯ ಪರೀಕ್ಷಾ ಪದ್ಧತಿ ಇಲ್ಲಿಯೂ ಇದ್ದು, ತಾಂತ್ರಿಕವಾಗಿಯೂ ಯಾವುದೇ ವ್ಯತ್ಯಾಸವಿಲ್ಲ. ವಿಚಿತ್ರವೆಂದರೆ ಕೆಪಿಎಸ್​ಸಿ ಪರೀಕ್ಷಾ ವ್ಯವಸ್ಥೆಗೆ ಸೂಕ್ತ ಕಾನೂನು ಹಾಗೂ ನಿಯಮಗಳಿದ್ದು, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ತೀವ್ರ ನಿಗಾ ಇರುತ್ತದೆ. ಆದರೆ ಇಲ್ಲಿ ಸೊಸೈಟಿ ಕಾಯ್ದೆಯಲ್ಲಿ ರೂಪಗೊಂಡಿರುವ ಒಂದು ಸಂಸ್ಥೆ ಈ ಪ್ರಮಾಣದ ದುಬಾರಿ ಪರೀಕ್ಷೆ ನಡೆಸುತ್ತಿದೆ.

ಇದೇ ಮೊದಲಲ್ಲ

ಈ ಹಿಂದೆ ಕರ್ನಾಟಕ ವಿದ್ಯುತ್ ನಿಗಮದ ಇಂಜಿನಿಯರ್​ಗಳ ಹುದ್ದೆಗೆ ಅರ್ಜಿಗೆ 3 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದಾಗ ಅಭ್ಯರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ನಿವಾಸದ ಎದುರು ಅಭ್ಯರ್ಥಿಗಳು ಪ್ರತಿಭಟನೆ ಮಾಡಿದಾಗ ಸಿಎಂ ಸಿದ್ದರಾಮಯ್ಯ ಅವರೇ ಮಧ್ಯಪ್ರವೇಶಿಸಿ ಶುಲ್ಕ ಕಡಿಮೆ ಮಾಡಿಸಿದ್ದರು.

1 ಹುದ್ದೆಗೆ ಒಂದೇ ಅರ್ಜಿ!

ಅರ್ಜಿಗೆ ದುಬಾರಿ ಶುಲ್ಕ ನಿಗದಿ ಮಾಡಿರುವ ಜತೆಗೆ ಒಂದು ಹುದ್ದೆಗೆ ಒಂದೇ ಅರ್ಜಿ ಎಂಬ ವಿಚಿತ್ರ ನಿಯಮವನ್ನೂ ಪರೀಕ್ಷಾ ಪ್ರಾಧಿಕಾರ ರೂಪಿಸಿದೆ. ಯಾವುದಾದರೂ ಅಭ್ಯರ್ಥಿ ಒಂದಕ್ಕಿಂತ ಹೆಚ್ಚಿನ ವಿಷಯಗಳಿಗೆ ಅರ್ಜಿ ಹಾಕಬೇಕಿದ್ದಲ್ಲಿ ಮತ್ತೆ 2500 ರೂ. ಶುಲ್ಕ ತುಂಬಬೇಕಾಗುತ್ತದೆ. ಕರ್ನಾಟಕ ಲೋಕಸೇವಾ ಆಯೋಗದಲ್ಲಿಯೂ ಇಂತಹ ಸಮಸ್ಯೆಗಳು ಉಂಟಾಗಿತ್ತು. ಆದರೆ ಅಲ್ಲಿ ಸುಧಾರಣೆ ತಂದು ಒಂದೇ ಅರ್ಜಿ ಹಾಗೂ ಅದೇ ಶುಲ್ಕದಲ್ಲಿ ಎಷ್ಟು ಹುದ್ದೆಗಳಿಗಾದರೂ ಅರ್ಜಿ ಸಲ್ಲಿಸಬಹುದೆನ್ನುವ ಜನಸ್ನೇಹಿ ನಿಯಮ ತರಲಾಗಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇನ್ನೂ ಜ್ಞಾನೋದಯವಾಗಿಲ್ಲ.

 ವರ್ಷದಲ್ಲಿ ಇಂತಹ ಹತ್ತಾರು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುತ್ತೇವೆ. ಅರ್ಜಿ ಸಲ್ಲಿಕೆಗಾಗಿಯೇ ಹತ್ತಾರು ಸಾವಿರ ರೂ.ಗಳನ್ನು ಯಾವ ಕುಟುಂಬ ನೀಡಲು ಮುಂದಾಗುತ್ತದೆ?

| ಶಾಲಿನಿ ರಾವ್ ಧಾರವಾಡ

 ನೀವೂ ಪ್ರತಿಕ್ರಿಯಿಸಿ

ಸರ್ಕಾರ ಉಪನ್ಯಾಸಕರ ನೇಮಕಕ್ಕೆ ದುಬಾರಿ ಅರ್ಜಿ ಶುಲ್ಕ ನಿಗದಿಪಡಿಸುತ್ತಿರುವುದು ಸರಿಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮೇಲ್ ಮಾಡಿ. ಭಾವಚಿತ್ರವೂ ಇರಲಿ.

[email protected] – ನಿಮ್ಮ ಪ್ರತಿಕ್ರಿಯೆ ಪತ್ರಮಿತ್ರ ಅಂಕಣದಲ್ಲಿ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *

Back To Top