Saturday, 24th March 2018  

Vijayavani

ಸಿಎಂ ತವರಿನಲ್ಲಿ AICC ಅಧ್ಯಕ್ಷರ ಸವಾರಿ- ಮೈಸೂರಿನಲ್ಲಿ ಎರಡು ದಿನ ರಾಹುಲ್ ರ‍್ಯಾಲಿ- ನಾಲ್ಕನೇ ಯಾತ್ರೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ        ರಾಜ್ಯಸಭೆ ಚುನಾವಣೆ ಮುಗೀತಿದ್ದಂಗೆ ರಿಸೈನ್​ಗೆ ನಿರ್ಧಾರ- ಜೆಡಿಎಸ್​ಗೆ ರೆಬೆಲ್ಸ್ ಇಂದು ಗುಡ್​ಬೈ- ನಾಳೆ ರಾಹುಲ್​ ಸಮುಖದಲ್ಲಿ ಕೈಗೆ ಜೈ        ಫಲ್ಗುಣಿ ನದಿ ಒಡಲಿಗೆ ರಾಜರೋಷವಾಗಿ ಕನ್ನ- ಬೋಟ್​​ಗಟ್ಟಲೇ ಮರಳು ಲೂಟಿ- ಕಣ್ಣಿದ್ದು ಕುರುಡಾದ ಜಿಲ್ಲಾಡಳಿತ        ಜಿಲ್ಲಾ ಪಂಚಾಯತ್​​ನಲ್ಲೇ​​ ಶುರುವಾಗಿದೆ ನೀರಿಗೆ ಬರ- ಮಳೆನೀರು ಕೊಯ್ಲು ಅಳವಡಿಸಿದ್ರೂ ಜೀವಜಲಕ್ಕೆ ತತ್ವಾರ- ಧಾವಾಡ ZP ಕಚೇರಿಯಲ್ಲಿ ಇದೆಂಥ ನರಕ        ರಜನಿಕಾಂತ್ ಓದಿದ ಶಾಲೆಗೆ ನ್ಯೂ ಲುಕ್​- ಖಾಸಗಿ ಶಾಲೆಗೂ ಸೆಡ್ಡು ಹೊಡೆಯುತ್ತೆ ಫೆಸಿಲಿಟೀಸ್- ಸೂಪರ್ ಶಾಲೆ ಇಂದು ಉದ್ಘಾಟನೆ       
Breaking News

ನೋವಿನ ಮುಖದ ಹಿಂದೆ ಸ್ವಾರ್ಥವೋ, ಪುಕ್ಕಲುತನವೋ?

Tuesday, 20.02.2018, 3:03 AM       No Comments

| ಶಾಂತಾ ನಾಗರಾಜ್

ನಾನು 24 ವರ್ಷದ ಯುವತಿ. ಕಳೆದ ಐದು ವರ್ಷಗಳಿಂದ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾಲ್ಕು ವರ್ಷದ ಕೆಳಗೆ ಹುಡುಗನೊಬ್ಬ ನನ್ನನ್ನು ಪ್ರೀತಿಸುತ್ತೇನೆಂದು ಹೇಳಿದ. ನಾನೂ ಒಪ್ಪಿದ್ದೆ. ನಾಲ್ಕೇ ತಿಂಗಳು ನಾವು ಪರಸ್ಪರ ಪ್ರೀತಿಯನ್ನು ಹಂಚಿಕೊಂಡಿದ್ದು. ಐದನೇ ತಿಂಗಳಲ್ಲೇ ‘ಅತ್ತೆ ಮಗಳ ಜತೆ ಮದುವೆ ನಿಶ್ಚಯವಾಗಿದೆ’ ಎಂದು ಹೇಳಿ ಅವನು ನನ್ನಿಂದ ದೂರವಾದ. ಸ್ವಲ್ಪ ಬೇಜಾರಾದರೂ ನನಗಿನ್ನೂ ಅವನು ಸರಿಯಾಗಿ ಅರ್ಥವಾಗಿರಲಿಲ್ಲವಾದ ಕಾರಣ ನಾನೂ ಅವನನ್ನು ಮರೆತುಬಿಟ್ಟೆ. ನಂತರ ನನ್ನದೇ ಸಹೋದ್ಯೋಗಿಯೊಬ್ಬ ಮೂರು ವರ್ಷದ ಕೆಳಗೆ ನನಗೆ ಪ್ರಪೋಸ್ ಮಾಡಿದ. ನಾನು ಅವನಲ್ಲಿ ಏನನ್ನೂ ಮುಚ್ಚಿಡಲು ಇಷ್ಟಪಡದೆ ನನ್ನ ಹಿಂದಿನ ಪ್ರೀತಿಯ ಬಗ್ಗೆ ಹೇಳಿದೆ. ಅದಕ್ಕವನು ‘ಇದರಲ್ಲಿ ನಿನ್ನ ತಪ್ಪೇನೂ ಇಲ್ಲ’ವೆಂದು ತಿಳಿಸಿ, ತನ್ನ ಪ್ರೀತಿಯನ್ನು ಮುಂದುವರಿಸಿದ. ನನಗೂ ಅವನ ಗುಣ, ಸ್ವಭಾವಗಳು ಇಷ್ಟವಾದ ಕಾರಣ ಅವನ ಪ್ರೀತಿಯನ್ನು ಒಪ್ಪಿಕೊಂಡೆ. ಈಗ ಈ ಹುಡುಗನ ಮನೆಯಲ್ಲಿ ನನ್ನ ಹಿಂದಿನ ಪ್ರೀತಿಯನ್ನೇ ಒಂದು ದೊಡ್ಡ ನೆವ ಮಾಡಿಕೊಂಡು ಅವನ ತಾಯಿ ಮತ್ತು ಅಕ್ಕ ನಮ್ಮ ಮದುವೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ನನ್ನ ಹುಡುಗನೂ ‘ನಾನು ಅಮ್ಮ ಮತ್ತು ಅಕ್ಕನ ಮನಸ್ಸನ್ನು ನೋಯಿಸಲಾರೆ. ನನ್ನನ್ನು ಮರೆತು ನೀನು ಯಾರನ್ನಾದರೂ ಮದುವೆಯಾಗು’ ಎನ್ನುತ್ತಿದ್ದಾನೆ. ನನಗೆ ಇವನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲು ಇಷ್ಟವಿಲ್ಲ. ಈಗ ಏನು ಮಾಡಲಿ ಮೇಡಂ? ನನ್ನ ಹುಡುಗ ಬಾಯಲ್ಲಿ ಹೀಗೆ ಹೇಳಿದರೂ ಅವನ ಮುಖ ನೋವಿನಿಂದ ಕೂಡಿರುತ್ತದೆ. ನಗು ತುಂಬಿದ್ದ ನಮ್ಮಿಬ್ಬರ ಬಾಳೀಗ ಕತ್ತಲೆಯ ಕೂಪವಾಗಿದೆ. ನನ್ನವನ ನೋವಿನ ಮುಖ ನೋಡಲು ಆಗುತ್ತಿಲ್ಲ. ಏನು ಮಾಡಲಿ, ನೀವೇ ಹೇಳಿ ಮೇಡಂ? ಹಾಂ, ಅವನನ್ನು ಬಿಟ್ಟುಬಿಡು ಎಂದು ಮಾತ್ರ ಹೇಳಬೇಡಿ.

ಅಲ್ಲರೀ ನೀವು ಯುವ ಜನ ‘ಪ್ರೀತಿ’ ಎಂದರೆ ಏನೆಂದು ತಿಳಿದಿದ್ದೀರಿ? ಸುಮ್ಮನೇ ರಸ್ತೆಯಲ್ಲಿ ಕೆಲಕಾಲ ‘ಲಗೋರಿ’ ಆಟವಾಡಿದಂತೆ, ‘ನೀನೂ ಆಡು, ನಾನೂ ಆಡುತ್ತೇನೆ, ಸ್ವಲ್ಪಕಾಲ ಸಂತೋಷ ಪಡೋಣ, ಆಮೇಲೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ’ ಎನ್ನುವ ಮನಸ್ಥಿತಿಯನ್ನು ಯಾರಾದರೂ ಪ್ರೀತಿಯೆನ್ನುತ್ತಾರಾ? ಪ್ರೀತಿ ಎಂದರೆ ಕರ್ತವ್ಯ, ಒಂದು ಬದ್ಧತೆ, ನಿರ್ವಹಿಸಲೇಬೇಕಾದ ಜವಾಬ್ದಾರಿ. ಅದು ಬಿಟ್ಟು ಅಕ್ಕ, ಅಮ್ಮನ ಮನಸ್ಸನ್ನು ನೋಯಿಸಲು ಇಷ್ಟವಿಲ್ಲ ಎನ್ನುವ ಹುಡುಗ ಪ್ರೀತಿ ಮಾಡಿದ್ದೇಕೆ? ಹೀಗೆ ತಮ್ಮ ಬದುಕನ್ನು ಬೇರೆಯವರು ನಡೆಸಲಿ ಎನ್ನುವವರನ್ನು ಏನೆಂದು ಕರೆಯಬೇಕು? ನೀವೇ ಹೇಳಿ. ಮೂಗಿಗೆ ದಾರ ಹಾಕಿಸಿಕೊಂಡ ಎತ್ತಿಗೂ, ಕುತ್ತಿಗೆಗೆ ಬೆಲ್ಟ್ ಬಿಗಿಸಿಕೊಂಡ ನಾಯಿಗೂ ತಮ್ಮಿಷ್ಟದಂತೆ ಬದುಕಲಾಗುವುದಿಲ್ಲ. ಅದನ್ನು ಸೂತ್ರ ಹಿಡಿದವರೇ ನಡೆಸಬೇಕಾಗುತ್ತದೆ. ಹಾಗೆ ನಿಮ್ಮ ಹುಡುಗ ತನ್ನ ಬದುಕಿನ ಸೂತ್ರವನ್ನು ಅಕ್ಕ, ಅಮ್ಮನ ಕೈಗೆ ಕೊಟ್ಟು ಕೋಲೆಬಸವ ಆಗಿದ್ದಾರಲ್ಲ? ಜಾಣೆಯಾದ ನೀವು ಇದನ್ನು ಯಾವ ರೀತಿಯಲ್ಲಿ ಅರ್ಥೈಸುತ್ತೀರಿ? ನನಗೆ ಗೊತ್ತು, ‘ನನ್ನ ಹುಡುಗನದು ಏನೂ ತಪ್ಪಿಲ್ಲ, ಅವರ ಅಕ್ಕ, ಅಮ್ಮ ಅವನ ಮೇಲೆ ಒತ್ತಡ ಹಾಕುತ್ತಿದ್ದಾರೆ’ ಅಂತಲೇ ನೀವು ಉತ್ತರಿಸುತ್ತೀರಿ ತಾನೆ? ಇದಕ್ಕೆ ಹಿರಿಯರು ಹೇಳಿರುವುದು ‘ಪ್ರೀತಿ ಕುರುಡು’ ಎಂದು! ಏಕೆಂದರೆ ಪ್ರೀತಿಯಲ್ಲಿ ಕುರುಡಾದ ನಿಮಗೆ ನಿಮ್ಮ ಹುಡುಗನ ತಪ್ಪು ಕಾಣಿಸುತ್ತಿಲ್ಲ. ನಿಮಗೆ 24 ವರ್ಷ ವಯಸ್ಸಾಗಿದೆ ಎಂದ ಮೇಲೆ ಆ ನಿಮ್ಮ ಹುಡುಗನಿಗೆ 28 ಆದರೂ ಆಗಿರಬಹುದಲ್ಲವೇ? ಈ ವಯಸ್ಸಿಗೂ ತನ್ನ ಬದುಕನ್ನು ತಾನೇ ನಡೆಸಲಾರದ ಪ್ರೌಢತೆ ಬಂದಿಲ್ಲವೆಂದರೆ ಇಂಥ ಗಂಡನ್ನು ಮದುವೆಯಾಗಿ ನೀವೇನು ಸುಖ ಪಡುತ್ತೀರಿ? ಒಂದು ವೇಳೆ ಬಲವಂತದಿಂದ ನೀವೇ ಅವನನ್ನೇ ಮದುವೆಯಾದಿರಿ ಎಂದಿಟ್ಟುಕೊಳ್ಳಿ, ನಾಳೆ ಅವನು ಹೇಳುತ್ತಾನೆ ‘ನನ್ನಕ್ಕ, ಅಮ್ಮನಿಗೆ ನಮಗೆ ಮಗು ವಾಗುವುದು ಇಷ್ಟವಿಲ್ಲ, ಆದ್ದರಿಂದ ನಮಗೆ ಮಗು ಬೇಡ’ ಅಂತ, ಅಥವಾ ‘ನಿನ್ನನ್ನು ನನ್ನಕ್ಕ, ಅಮ್ಮ ಇಷ್ಟ ಪಡುತ್ತಿಲ್ಲ ನೀನು ತೌರಿಗೆ ಹೋಗು’ ಅಂತ, ಆಗೇನು ಮಾಡುತ್ತೀರಿ? ನೀವೀಗ ಅವನಿಗೆ ಒಂದೇ ಒಂದು ಮಾತು ಹೇಳಿ, ‘ನಿನ್ನಕ್ಕ, ಅಮ್ಮನನ್ನು ತೊರೆದು ಬಾ. ನಾವಿಬ್ಬರೂ ಮದುವೆಯಾಗೋಣ’ ಎಂದು! ಆಗ ಆ ನಿಮ್ಮವನ ನೋವಿನ ಮುಖದ ಹಿಂದೆ ಸ್ವಾರ್ಥವಿದೆಯೋ, ಪುಕ್ಕಲುತನವಿದೆಯೋ ನಿಮಗೇ ಗೊತ್ತಾಗುತ್ತದೆ! ನೀವೀಗ ನಿಮ್ಮ ಜೀವವನ್ನು ಹಿಡಿ ಮಾಡಿಕೊಂಡು ‘ಅಯ್ಯೋ ನನ್ನವನ ನೋವಿನ ಮುಖ ನೋಡಲಾರೆ’ ಎಂದು ಪರಿತಪಿಸುತ್ತಿದ್ದೀರಲ್ಲ? ಈ ಪರಿತಪಿಸುವಿಕೆಗೆ ಅವನು ಅರ್ಹನೇ ಅಲ್ಲವೇ ಎಂದೂ ಗೊತ್ತಾಗುತ್ತದೆ. ಇಂಥ ವಿಚಾರದಲ್ಲಿ ಹುಡುಗಿಯರು ಗಟ್ಟಿಯಾಗಿರಬೇಕು, ರೀ!!

Leave a Reply

Your email address will not be published. Required fields are marked *

Back To Top