Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ನೋವಿನೊಂದಿಗೆ ಹೋರಾಡುತ್ತಲೇ ಆಲ್ ಈಸ್ ವೆಲ್ ಎಂದಾಕೆ

Wednesday, 30.08.2017, 3:05 AM       No Comments

ನಿಜ, ಬದುಕನ್ನು ಪ್ರೀತ್ಸೋದನ್ನು ಇಂಥವರಿಂದ ಕಲಿಯಬೇಕು! ಬೆಂಗಳೂರು ಹೊರವಲಯದ ಅವರ ಮನೆಯಲ್ಲಿ ಸ್ವಾತಂತ್ರೊ್ಯೕತ್ಸವ(ಆ.15)ದಂದು ಮಾತಾಡ್ತಾ ಇರಬೇಕಾದರೆ ಕಷ್ಟ, ನೋವುಗಳ ಬಂಧನದಿಂದ ಸ್ವತಂತ್ರರಾಗುವುದು ಹೇಗೆ ಎಂಬ ಅರಿವಿನ ಭಾವ ತನ್ನಿಂದತಾನೇ ಗಟ್ಟಿಯಾಗುತ್ತ, ಬದುಕಿನ ಅದಮ್ಯ, ಅಗಾಧತೆಯನ್ನು ಪರಿಚಯಿಸುತ್ತಿತ್ತು. ಜೀವನದ ಓಟದಲ್ಲಿ ಬೆಸ್ಟ್ ಆಕ್ಟರ್, ಬೆಸ್ಟ್ ಪ್ಲೇಯರ್, ಸಿಂಗರ್ ಹೀಗೆ ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವವರು ಇದ್ದಾರೆ. ಆದರೆ, ಇವರಿಗೆ ಒಲಿದಿರುವುದು ಬೆಸ್ಟ್ ಪೇಷಂಟ್ ಪ್ರಶಸ್ತಿ! ಅಚ್ಚರಿಯಾಯಿತೆ? ತಾವು ಕಾಯಿಲೆಯೊಂದಿಗೆ ಗುದ್ದಾಡುತ್ತಲೇ ಇತರೆ ರೋಗಿಗಳಿಗೆ ಆತ್ಮಸ್ಥೈರ್ಯ, ಜೀವನಪ್ರೀತಿ ತುಂಬುವ ಅಸಾಧಾರಣ ಪ್ರಯತ್ನಕ್ಕೆ ಈ ಶಹಬ್ಬಾಸ್​ಗಿರಿ ದೊರೆತಿದೆ. ಒಂದಿಷ್ಟು ಕಷ್ಟಗಳು ಬ್ಯಾಕ್​ಟುಬ್ಯಾಕ್ ಬಂದುಬಿಟ್ಟರೆ ‘ದೇವರು ನಮಗೆ ತುಂಬಾ ಅನ್ಯಾಯ ಮಾಡಿಬಿಟ್ಟ!‘ ಎಂದು ಷರಾ ಬರೆದು ಬಿಡುತ್ತೇವೆ. ಈ ಮಹಿಳೆ ಮಾತ್ರ ಜೀವನವನ್ನು ಉಡುಗೊರೆಯಾಗಿ ನೀಡಿದ್ದಕ್ಕೆ ಆ ದೇವರನ್ನು ದಿನವೂ ಅಭಿನಂದಿಸುತ್ತಾರೆ. ಅಂದಹಾಗೆ, ಇವರು ವಾರದಲ್ಲಿ ಮೂರು ದಿನ ಡಯಾಲಿಸಿಸ್​ಗೆ ಒಳಪಡದಿದ್ದರೆ ನಾಳೆ ಹೇಗೆ, ಏನು ಎಂಬುದೇ ಗೊತ್ತಿರುವುದಿಲ್ಲ!

ಆಶ್ರಿತಾ ಭಟ್. ವೀರಯೋಧರ ತವರು ಮಡಿಕೇರಿ ಇವರ ಊರು. ಬೆಂಗಳೂರಿಗೆ ಬಂದು ಹಲವು ವರ್ಷಗಳೇ ಸಂದಿವೆ. ಕೆನರಾ ಬ್ಯಾಂಕ್​ನಲ್ಲಿ ಉದ್ಯೋಗಿಯಾಗಿರುವ ಆಶ್ರಿತಾರ ಉತ್ಸಾಹ, ಧೈರ್ಯ, ಸ್ಪೂರ್ತಿಮಾತು ನೂರಾರು ರೋಗಿಗಳಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದೆ. ಸದಾ ಲವಲವಿಕೆಯಿಂದ ಬದುಕಬೇಕು, ತಾಪತ್ರಯಗಳಿಗೆಲ್ಲ ಡೋಂಟ್ ಕೇರ್ ಎನ್ನಬೇಕು ಎಂಬ ಮನೋಭಾವದ ಆಶ್ರಿತಾ ಬಾಲ್ಯದಿಂದಲೇ ಹಾಗೇ ಬೆಳೆದು ನಗು ಚೆಲ್ಲುತ್ತ ಬಂದವರು. ಅದು 1998-99ರ ಹೊತ್ತು. ಇದ್ದಕ್ಕಿದ್ದಹಾಗೆ ತೀರಾ ಬಳಲಿಕೆ, ಸುಸ್ತು ಕಾಡತೊಡಗಿದಾಗ ವೈದ್ಯರ ಬಳಿ ಹೋಗಿದ್ದಾಯಿತು. ‘ಏನಿಲ್ಲ, ರಕ್ತಹೀನತೆಯಷ್ಟೇ. ಹೆಣ್ಣುಮಕ್ಕಳಲ್ಲಿ ಹಿಮೋಗ್ಲೋಬಿನ್ ಸಮಸ್ಯೆ ನಾರ್ಮಲ್‘ ಎಂದ ವೈದ್ಯರು ಎಚ್​ಬಿ ಹೆಚ್ಚಿಸಲು ಔಷಧ ಕೊಟ್ಟರು. ಔಷಧದ ಪರಿಣಾಮ ರಕ್ತದ ಪ್ರಮಾಣವೇನೋ ಹೆಚ್ಚುತ್ತಿತ್ತು. ಸ್ವಲ್ಪ ದಿನ ಕಳೆದರೆ ಮತ್ತದೇ ಸ್ಥಿತಿ. ಎಚ್​ಬಿ ಪ್ರಮಾಣ ಮತ್ತಷ್ಟು ಕುಸಿದಾಗ ಎದ್ದು ಓಡಾಡಲೂ ಆಗದಂಥ ಸ್ಥಿತಿ. ಮಣಿಪಾಲ-ಮಂಗಳೂರಿನ ಆಸ್ಪತ್ರೆಗಳನ್ನು ಎಡತಾಕಿ, ಹಲವು ಪರೀಕ್ಷೆಗಳನ್ನು ಮಾಡಿಸಿದಾಗ ಮೂತ್ರಪಿಂಡ ಶೇಕಡ 50ರಷ್ಟು ಡ್ಯಾಮೇಜ್ ಆಗಿದೆ ಎಂಬುದು ಗೊತ್ತಾಯಿತು. ಕೂಡಲೇ ಡಯಾಲಿಸಿಸ್ ಶುರುವಾಯಿತು. ಆದರಿದು, ಶಾಶ್ವತ ಪರಿಹಾರವಲ್ಲ ಎಂದರು ವೈದ್ಯರು. ಎರಡು ವರ್ಷ ಹೇಗೋ ಕಳೆಯಿತು. 2001ರ ಹೊತ್ತಿಗೆ, ಕಿಡ್ನಿ ಟ್ರಾನ್ಸ್​ಪ್ಲಾಂಟ್ ಮಾಡಲೇಬೇಕು ಎಂಬ ಸ್ಥಿತಿ ಸೃಷ್ಟಿಯಾಯಿತು. ಕಿಡ್ನಿ ದಾನ ಮಾಡುವವರು ಕುಟುಂಬದ ಸದಸ್ಯರಾಗಿದ್ದರೆ ಮಾತ್ರ ಈ ಕಸಿ ಚಿಕಿತ್ಸೆ ಸಾಧ್ಯವಿತ್ತು. ಕುಟುಂಬದೊಳಗೇ ಅಂಥವರಿಗಾಗಿ ಹುಡುಕಾಟ ಶುರುವಾಗಿ, ದಾನಿ ಸಿಕ್ಕಾಗ 2002ರಲ್ಲಿ ಕಾಲಿಟ್ಟಾಗಿತ್ತು. ಆ ವರ್ಷದ ಆಗಸ್ಟ್​ನಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ, ಕಿಡ್ನಿ ಟ್ರಾನ್ಸ್​ಪ್ಲಾಂಟ್ ನೆರವೇರಿತು. ಆ ಬಳಿಕ ಮೂರು ತಿಂಗಳು ಆಸ್ಪತ್ರೆಯ ಓಡಾಟ, ನಿಯಮಿತ ತಪಾಸಣೆಗಳು. ಔಷಧಗಳ ಅಡ್ಡ ಪರಿಣಾಮದಿಂದ ಜ್ವರ, ವಾಂತಿ, ಬಾಯಿಹುಣ್ಣು, ಬಳಲಿಕೆ… ಹೀಗೆ ನರಕಯಾತನೆ. ಈ ಹೊತ್ತಲ್ಲೆಲ್ಲ ಬದುಕನ್ನು, ವಿಧಿಯನ್ನು, ದೇವರನ್ನು ಹಳಿಯದೆ ಆತ್ಮಸ್ಥೈರ್ಯದಿಂದ ಮುನ್ನುಗ್ಗುವುದಿದೆಯಲ್ಲ ಅದು ಸಾಮಾನ್ಯವಾದದ್ದೇನಲ್ಲ.

ಈ ಎಲ್ಲ ಕ್ಲಿಷ್ಟ ಪರಿಸ್ಥಿತಿಗಳನ್ನು ಗೆದ್ದು ಬೆಂಗಳೂರಿಗೆ ಬಂದು ಹೊಸದಾಗಿ ಬದುಕು ಆರಂಭಿಸಿದ ಆಶ್ರಿತಾ-ಅನಂತ್ ಭಟ್ ದಂಪತಿಯ ಸ್ಥೈರ್ಯಕ್ಕೆ ಬಂಧುಬಳಗ, ಹತ್ತಿರದವರೆಲ್ಲ ಬೆರಗಾದರು. 2006ರಲ್ಲಿ ಜೀವನಕ್ಕೆ ಮತ್ತೊಂದು ತಿರುವು. ಅದು ಆಶ್ರಿತಾ ಗರ್ಭಿಣಿಯಾದ ಹೊತ್ತು. ತಾಯ್ತನವೆಂದರೆ ಹೆಣ್ಣಿಗೆ ಖುಷಿಯ ಖಜಾನೆಯೇ ಅಲ್ಲವೇ? ಹಾಗೇ ಈ ದಂಪತಿ ಕೂಡ ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ಸುದ್ದಿ ತಿಳಿದು ಪುಳಕಗೊಂಡರು. ಆದರೆ, ವೈದ್ಯರು ಮಾತ್ರ, ಕಿಡ್ನಿ ಟ್ರಾನ್ಸ್​ಪ್ಲಾಂಟ್ ಮಾಡಿಕೊಂಡಿರುವುದರಿಂದ ಮಗುವಿಗೆ ಜನ್ಮ ನೀಡುವ ರಿಸ್ಕ್ ತಗೋಬೇಡಿ ಎಂದುಬಿಟ್ಟರು. ಅಷ್ಟೇ ಅಲ್ಲ, ಮಗು ಜನಿಸಿದರೂ ಅದು ಅಂಗನ್ಯೂನತೆ ಹೊಂದಿರುವ ಸಾಧ್ಯತೆಯೇ ಹೆಚ್ಚು. ಹಾಗಾಗಿ, ಈ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಿ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಇಲ್ಲೂ ಆಶ್ರಿತಾ ವಿಶ್ವಾಸವೇ ಗೆದ್ದಿತು. 2006ರಲ್ಲಿ ಮುದ್ದಾದ ಮತ್ತು ಆರೋಗ್ಯಯುತ ಮಗುವಿನ ತಾಯಿಯಾದರು. ತಾಯ್ತನದ ಹೊಸ ಜವಾಬ್ದಾರಿಯೊಂದಿಗೇ ಈ ಕಾಯಿಲೆಯೊಂದಿಗೂ ಹೋರಾಟ ಮುಂದುವರಿಸಬೇಕಿತ್ತು. ವಿಪರೀತ ಪಥ್ಯ, ಕಚೇರಿಯ ಕೆಲಸ, ಮನೆಯ ನಿರ್ವಹಣೆ… ಇಷ್ಟು ಜತೆಜತೆಯಾಗಿ ಮಾಡುತ್ತ ಮಗುವನ್ನು ಆರೈಕೆ ಮಾಡುವುದು ಸುಲಭವಾಗಿರಲಿಲ್ಲ. ಈ ಸವಾಲಿನಲ್ಲೂ ಅವರು ಗೆದ್ದಿದ್ದಾರೆ. ಮಗ ಶೌರ್ಯ ಈಗ 6ನೇ ತರಗತಿಯಲ್ಲಿ ಓದುತ್ತಿದ್ದು, ತಾಯಿಗೆ ಕೇವಲ ಮಗನಾಗಿ ಅಲ್ಲ ಸ್ನೇಹಿತನಾಗಿಯೂ ಇದ್ದಾನೆ. ಸಣ್ಣವಯಸ್ಸಲ್ಲೇ ದೇಶಭಕ್ತಿ, ದೈವಭಕ್ತಿ ಎರಡೂ ಮೈಗೂಡಿಸಿಕೊಂಡು ಅಮ್ಮನ ನಗುವಿಗೆ, ನೋವಿಗೆ ಜತೆಯಾಗಿದ್ದಾನೆ.

2008ರಲ್ಲಿ ಕಿಡ್ನಿ ಸಮಸ್ಯೆ ಮರುಕಳಿಸಿತು. ಕಸಿ ಮಾಡಿದ್ದ ಕಿಡ್ನಿ ಡ್ಯಾಮೇಜ್ ಆಗಿ, ತನ್ನ ಕೆಲಸ ನಿಲ್ಲಿಸಿತ್ತು. ಹೊಸದಾಗಿ ಕಸಿ ಮಾಡಬೇಕಾದರೆ ಮತ್ತೆ ದಾನಿಗಳನ್ನು ಹುಡುಕಬೇಕು. ಎಷ್ಟೇ ಆಪ್ತರಾಗಿರಲಿ ಸುಲಭದಲ್ಲಿ ಕಿಡ್ನಿದಾನ ಯಾರು ಮಾಡ್ತಾರೆ? ಅಷ್ಟೇ ಅಲ್ಲ, ಇದಕ್ಕಾಗಿ ಅನುಮತಿ ಪಡೆಯಬೇಕಾದರೆ ಹತ್ತೊಂದು ನಿಯಮಗಳು, ಹಲವು ಕಚೇರಿಗಳ ಅಲೆದಾಟ ಅನಿವಾರ್ಯ. ಪತಿ ಅನಂತ್ ತಾಳ್ಮೆಯಿಂದ ಇದನ್ನೆಲ್ಲ ನಿಭಾಯಿಸಿದರು, ಹಲವು ತಜ್ಞರನ್ನು ಭೇಟಿಯಾದರು. ಈ ನಡುವೆ ಡಯಾಲಿಸಿಸ್ ಮುಂದುವರಿದಿತ್ತು. ದಾನಿಗಳು ದೊರೆತು ಕಿಡ್ನಿ ಟ್ರಾನ್ಸ್​ಪ್ಲಾಂಟ್ ಶಸ್ತ್ರಚಿಕಿತ್ಸೆ ನೆರವೇರುವ ಹೊತ್ತಿಗೆ 2010 ಅಡಿಯಿಟ್ಟಾಗಿತ್ತು. ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯೇನೋ ನಡೆಯಿತು, ಆದರೆ ಕಸಿ ಮಾಡಿದ ಮೂತ್ರಪಿಂಡ 24 ಗಂಟೆಯಲ್ಲೇ ವಿಫಲವಾಯಿತು! ಜತೆಗೆ ಇನ್​ಫೆಕ್ಷನ್ ಸೇರಿ ತೀವ್ರ ಜ್ವರದಿಂದ ಒಂದು ತಿಂಗಳ ಕಾಲ ಕಷ್ಟ ಪಡಬೇಕಾಯಿತು. ಪರಿಸ್ಥಿತಿ ವಿಷಮಕ್ಕೆ ಹೋಗಿ ಇವರು ಬದುಕುವುದೇ ಅನುಮಾನ ಎಂದು ಕೈಚೆಲ್ಲಿಬಿಟ್ಟಿದ್ದರು ವೈದ್ಯರು. ಆದರೆ, ಇದ್ಯಾವುದಕ್ಕೂ ಶರಣಾಗಲು ಆಶ್ರಿತಾ ಸಿದ್ಧರಿರಲಿಲ್ಲ. ಅದಕ್ಕೆಂದೇ ಸಾವಿನೊಂದಿಗೆ ಸೆಣೆಸಿದರು. ಸಂಪೂರ್ಣ ಗುಣಮುಖರಾದ ಮೇಲೆ ಮತ್ತೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಗೆಲುವಾಗಿ ಮನೆಗೆ ಮರಳಿದರು. ಈಗ, ಮೂರನೇ ಬಾರಿಯ ಕಸಿ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿರುವುದರಿಂದ ಕಳೆದ ಹಲವು ವರ್ಷಗಳಿಂದ ಡಯಾಲಿಸಿಸ್ ಮೇಲೆ ಅವಲಂಬಿತರಾಗಿದ್ದಾರೆ. ವಾರದಲ್ಲಿ ಮೂರು ದಿನ ಡಯಾಲಿಸಿಸ್ ತೆಗೆದುಕೊಳ್ಳಲೇಬೇಕು. ಇದೆಲ್ಲದರ ಆರ್ಥಿಕ ಒತ್ತಡ, ಮಾನಸಿಕ ಒತ್ತಡ, ಶಾರೀರಿಕ ಯಾತನೆ ಎಲ್ಲವನ್ನೂ ಸಹಿಸಿಕೊಂಡು ದಿನನಿತ್ಯದ ಬದುಕಿನಲ್ಲಿ ಸಾಮಾನ್ಯರಿಗಿಂತಲೂ ತುಸು ಹೆಚ್ಚೇ ಲವಲವಿಕೆಯಿಂದ ಇರುವ ಆಶ್ರಿತಾ ಈಗ ಆಸ್ಪತ್ರೆ ಮತ್ತು ಡಯಾಲಿಸಿಸ್ ಕೇಂದ್ರಗಳಲ್ಲಿ ವೈದ್ಯರ ಮನವಿಯ ಮೇರೆಗೆ ರೋಗಿಗಳಿಗೆ ಸಲಹೆಸೂಚನೆ ಜತೆಗೆ ಹುಮ್ಮಸ್ಸು, ವಿಶ್ವಾಸ ತುಂಬುತ್ತಿದ್ದಾರೆ. ಕಾಯಿಲೆಯೊಂದಿಗಿನ ಹೋರಾಟದಲ್ಲಿ ಗೆಲ್ಲಲು ಸಾಧ್ಯವಿದೆ, ಈ ಹಂತದಲ್ಲಿ ಮನಸ್ಸನ್ನು ದುರ್ಬಲವಾಗಲು ಬಿಡಬೇಡಿ ಎಂದು ಸಲಹೆ ನೀಡುತ್ತಾರೆ.

ಒಂದೇ ಕಷ್ಟಕ್ಕೋ, ನೋವಿಗೋ ಮನುಷ್ಯ ನಲುಗಿ ಹೋಗುತ್ತಾನೆ! ಹಾಗಿರುವಾಗ ಜೀವನದ ಹೆಜ್ಜೆ-ಹೆಜ್ಜೆಗೂ ಬಂದ ಕಷ್ಟಗಳಿಗೆ ನೀವೇ ಸೋಲಿನ ರುಚಿ ತೋರಿಸಿದ್ದೀರಲ್ಲ, ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರೆ ಮುಖದ ತುಂಬ ನಗು ಅರಳಿಸಿಕೊಂಡು ಆಶ್ರಿತಾ(9448828501) ಹೇಳುತ್ತಾರೆ-ಈ ಜೀವ, ಜೀವನ ಅನ್ನೋದು ದೇವರು ನಮಗೆ ಕೊಟ್ಟಿರುವ ಗಿಫ್ಟ್. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಸಂತೋಷ, ಸಮಾಧಾನದಿಂದ ಬಾಳಿ ಅದಕ್ಕೊಂದು ಅರ್ಥ ನೀಡಬೇಕು. ಜೀವನದಲ್ಲಿ ಬರೀ ನೋವು, ಸಂಕಟ, ತಳಮಳಗಳನ್ನೇ ತುಂಬಿಕೊಂಡರೆ ಅದಕ್ಕೇನು ಅರ್ಥ? ನನಗಿಂತ ಗಂಭೀರ ಸ್ಥಿತಿಯಲ್ಲಿರುವವರನ್ನು ನೋಡಿದ್ದೇನೆ, ಕ್ಯಾನ್ಸರ್ ವಾರ್ಡ್​ಗಳಲ್ಲಿ ಸಾವಿನೊಂದಿಗೆ ಹೋರಾಡುವವರನ್ನು ಕಂಡಿದ್ದೇನೆ. ಅವರಿಂದೆಲ್ಲ ಮತ್ತಷ್ಟು ಹೋರಾಡುವ ಸ್ಪೂರ್ತಿ ಪಡೆದಿದ್ದೇನೆ. ಉತ್ಸಾಹದಿಂದ ಬದುಕಬೇಕು, ಚೆನ್ನಾಗಿ ಬದುಕಬೇಕು ಎಂದು ಸಂಕಲ್ಪಿಸಿ ನಡೆದರೆ, ದಾರಿ ಸರಳವಾಗುತ್ತದೆ. ಹೆದರಿದರೆ ಸಣ್ಣಪುಟ್ಟ ಕಷ್ಟಗಳೂ ದೊಡ್ಡದೆನಿಸಿ ಬಿಡುತ್ತವೆ. ನನಗೆ ಕುಟುಂಬದವರು, ಕಚೇರಿಯವರು, ಆಪ್ತರು, ಬಂಧುಬಳಗ… ಎಲ್ಲರೂ ನೆರವಾಗಿದ್ದಾರೆ, ಧೈರ್ಯ ತುಂಬಿದ್ದಾರೆ.‘ ಈ ಮಾತಿಗೆ ಮಾತು ಸೇರಿಸಿದ ಆಶ್ರಿತಾ ಆಪ್ತರೂ, ಸಂಬಂಧಿಕರೂ ಆದ ಪ್ರಸಾದ್ ಎಂ.ವಿ-ಪದ್ಮಾ ದಂಪತಿ, ‘ಅವರ ಇಡೀ ಜೀವನಹೋರಾಟವನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆಶ್ರಿತಾಳ ಧೈರ್ಯ, ಉತ್ಸಾಹ ನೋಡಿ ನಮ್ಮಿಂದ ಸಾಧ್ಯವಾದ ಸಹಾಯ ಮಾಡಿದ್ದೇವೆ. ಆಶ್ರಿತಾ ಸಾಗಿಬಂದ ಹಾದಿ ಇತರರಿಗೆ ಜೀವನದ ಮಹತ್ವವನ್ನು, ಬದುಕು ಸಾಗಿಸುವ ಬಗೆಯನ್ನು ಕಲಿಸುತ್ತದೆ‘ ಎಂದು ಹೆಮ್ಮೆಯಿಂದ ನುಡಿಯುತ್ತಾರೆ. ನಮ್ಮದೇ ಕಷ್ಟಗಳು ದೊಡ್ಡವು ಎಂಬ ಭಾವ ಬದಿಗಿರಿಸಿ ಸುತ್ತಲಿನವರನ್ನು ವಾಸ್ತವ ದೃಷ್ಟಿಯಿಂದ ನೋಡಿದರೆ ಜೀವನದ ಪಾಠಗಳು, ಸ್ಪೂರ್ತಿಗಳು ನಮಗಾಗಿ ಕಾದಿರುತ್ತವೆ. ಏನೇ ಬರಲಿ, ಖುಷಿಖುಷಿಯಾಗಿಯೇ ಬದುಕೋಣ ಎಂಬ ಭರವಸೆಯ ಸಣ್ಣ ಹಣತೆಯನ್ನು ಎದೆಯಲ್ಲಿ ಬೆಳಗಿಸಿಕೊಂಡರೆ ಸಾಕು, ಎಲ್ಲ ಬಗೆಯ ಕತ್ತಲೆ ನಮ್ಮಿಂದ ದೂರವಾಗುತ್ತದೆ. ಹೊಸದೊಂದು ಬೆಳಕು ನಮ್ಮ ಕೈಹಿಡಿದು ಮುಂದೆ ಸಾಗುತ್ತದೆ. ಜೀವನ ಸಾರ್ಥಕವಾಗಿಸಿಕೊಳ್ಳಲು ಇಷ್ಟು ಸಾಕಲ್ಲವೇ?

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top