Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ನುಡಿಸಿರಿಯಲ್ಲಿ ನಾಡಿನ ಬಹುತ್ವಕ್ಕೆ ಮನ್ನಣೆ

Thursday, 30.11.2017, 3:05 AM       No Comments

| ಯಶೋಧರ ವಿ.ಬಂಗೇರ

ಕನ್ನಡದ ಕೆಲಸ ಕೇವಲ ಸರ್ಕಾರ, ಸಾಹಿತ್ಯ ಪರಿಷತ್ತುಗಳ ಕೆಲಸವಲ್ಲ. ಪ್ರತಿಯೊಬ್ಬ ಸಹೃದಯ ಕನ್ನಡಿಗನ ಮೇಲಿರುವ ಮಹತ್ತರ ಜವಾಬ್ದಾರಿ ಎಂದು ಭಾವಿಸಿದ ಒಬ್ಬ ಶ್ರೀಸಾಮಾನ್ಯ ಮನಸ್ಸು ಮಾಡಿದರೆ ಕನ್ನಡ ಭಾಷೆ, ಸಂಸ್ಕೃತಿಯನ್ನು ಅದ್ಭುತವಾಗಿ ಕಟ್ಟಿ ಬೆಳೆಸಬಲ್ಲ, ಸುಂದರ ಕನ್ನಡ ಮನಸ್ಸುಗಳನ್ನು ಕಟ್ಟಬಲ್ಲ ಎಂಬುದಕ್ಕೆ ದೊಡ್ಡ ಸಾಕ್ಷಿ ‘ಆಳ್ವಾಸ್ ನುಡಿಸಿರಿ’.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಎಂಬ ವಿದ್ಯಾಸಂಸ್ಥೆ ಹದಿಮೂರು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಕನ್ನಡ ನಾಡುನುಡಿಯ ಈ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ. ಹೊಸ ಆಯಾಮಗಳೊಂದಿಗೆ ಕನ್ನಡಿಗರ ಮನಸ್ಸು ಕಟ್ಟುತ್ತಿರುವ ಸಮಗ್ರ ಕರ್ನಾಟಕದ ನಾಡು-ನುಡಿಯ ಪರಿಕಲ್ಪನೆಯ ರೂವಾರಿ ಡಾ.ಎಂ ಮೋಹನ ಆಳ್ವ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖಾಂತರ ಗುಣಮಟ್ಟದ ಶಿಕ್ಷಣ, ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗೆ ಹೊಸ ಆಯಾಮವನ್ನು ತಂದುಕೊಟ್ಟ ಆಳ್ವರು, ನುಡಿಸಿರಿಯ ಪಯಣ, ಪ್ರಯತ್ನ, ಪ್ರಯೋಗಗಳ ಬಗ್ಗೆ ‘ವಿಜಯವಾಣಿ’ ಜೊತೆ ಮಾತನಾಡಿದ್ದಾರೆ.

# ಹದಿಮೂರು ವರ್ಷಗಳ ನುಡಿಸಿರಿ ಪಯಣ ಹೇಗಿತ್ತು?

ಮೂಡುಬಿದಿರೆಯಲ್ಲಿ 2003ರಲ್ಲಿ ನಡೆದ 71ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಿಹಿಕಹಿ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು, ನಾಡು-ನುಡಿಯ ಮಾದರಿ ಸಮ್ಮೇಳನವನ್ನು ಆಯೋಜಿಸಬೇಕೆಂಬ ಉದ್ದೇಶದಿಂದ 2004ರಲ್ಲಿ ಆಳ್ವಾಸ್ ನುಡಿಸಿರಿ ಪ್ರಾರಂಭಿಸಲಾಯಿತು. ನಾಡಿನ ಸಾಹಿತಿಗಳನ್ನು, ಜನರನ್ನು ಒಂದೇ ಕಡೆ ಸೇರಿಸುವ ನಮ್ಮ ಪ್ರಯತ್ನಕ್ಕೆ ಮೊದಲ ವರ್ಷದಲ್ಲೇ ಉತ್ತಮ ಸ್ಪಂದನೆ ಸಿಕ್ಕಿತ್ತು. ಇದರಿಂದ ಮತ್ತಷ್ಟು ಪ್ರೇರಿತರಾಗಿ ಪ್ರತಿವರ್ಷ ನುಡಿಸಿರಿಯಲ್ಲಿ ಹೊಸತನ, ಹೊಸ ಪ್ರಯತ್ನ, ಪ್ರಯೋಗಗಳು ನಡೆಸುತ್ತಿದ್ದೇವೆ. ನಾಡಿನ ಜನರಿಂದ ಸಿಕ್ಕ ಸ್ಪಂದನೆ ಅಭೂತಪೂರ್ವ. ಸಮ್ಮೇಳನ ಸುದೀರ್ಘ ಅನುಭವ ಅದ್ಭುತ.

# ನುಡಿಸಿರಿಯಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆಯೇ?

ಆಳ್ವಾಸ್ ನುಡಿಸಿರಿಯಿಂದ ನನಗೆ ಶೇ.100ರಷ್ಟು ಸಂತೃಪ್ತಿ ಸಿಕ್ಕಿದೆ. ನಾಡಿನ ವಿವಿಧ ಕಡೆಗಳಿಂದ ಬರುವ ಕನ್ನಡಿಗರು ನುಡಿಸಿರಿ ಬಗ್ಗೆ ತೋರಿಸುವ ಪ್ರೀತಿ ಅವರಿಗೂ ತೃಪ್ತಿ ನೀಡುವಂತೆ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಉನ್ನತ ಪರಿಕಲ್ಪನೆ, ಸಾಂಘಿಕ ಪ್ರಯತ್ನ, ಹೊಸತನದೆಡೆಗಿನ ಪ್ರಯೋಗಗಳಿಂದ ನುಡಿಸಿರಿ ಜನರಿಗೆ ವರ್ಷದಿಂದ ವರ್ಷಕ್ಕೆ ಹತ್ತಿರವಾಗುತ್ತಿದೆ.

# ಕರ್ನಾಟಕ: ಬಹುತ್ವದ ನೆಲೆಗಳು ಪರಿಕಲ್ಪನೆಗೆ ಪ್ರೇರಣೆ ಯಾವ ರೀತಿ?

ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತ್ಯ, ಸಾಹಿತಿಗಳಿಗೆ ಮಾತ್ರ ಸೀಮಿತವಾಗಬಾರದು. ನಾಡಿನ ಸಮಗ್ರ ಚಿಂತನೆ ಅವಕಾಶ ಮಾಡಿಕೊಡಬೇಕು. ಸಾಹಿತ್ಯದ ಜೊತೆಗೆ ಕಲೆ, ಸಂಸ್ಕೃತಿ, ಬಹುವಿಧದಲ್ಲಿ ಕಾಣಸಿಗುವ ನಾಡಿನ ಶ್ರೇಷ್ಠತೆಯ ಒಗ್ಗೂಡುವಿಕ್ಕೊಂದು ವೇದಿಕೆ ಆಗಬೇಕೆನ್ನುವುದು ನನ್ನ ಉದ್ದೇಶ. ಪ್ರತಿ ನುಡಿಸಿರಿಯಲ್ಲೂ, ನಾಡಿನ ಬಹುತ್ವಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದೇವೆ. ಈ ವರ್ಷ ಹಿಂದಿನ ನುಡಿಸಿರಿಗಿಂತಲೂ ಹೆಚ್ಚಿನ ರೀತಿಯಲ್ಲಿ ನಾಡಿನ ಸಾಧ್ಯತೆಗಳನ್ನು ನೀಡುತ್ತಿದ್ದೇವೆ. ನಾಡಿನ ಸಮಗ್ರ ಚಿಂತನೆಯ ಅನುಷ್ಠಾನರೂಪ ನುಡಿಸಿರಿಯಿಂದಾಗಬೇಕು ಎನ್ನುವುದು ನನ್ನ ಬಯಕೆ. ಕರ್ನಾಟಕ: ಬಹುತ್ವದ ನೆಲೆಗಳು ಪರಿಕಲ್ಪನೆ ಹೊಂದಿರುವ ಈ ಬಾರಿಯ ನುಡಿಸಿರಿಗೆ ಕನ್ನಡಕ್ಕೋಸ್ಕರ ಬಹುವಿಧದಲ್ಲಿ ಸೇವೆ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಧ್ಯಕ್ಷತೆ ಸಿಕ್ಕಿರುವುದು ಅರ್ಥಪೂರ್ಣ. ಒಂದು ನುಡಿಸಿರಿ ಮುಗಿದ ಮರುದಿನವೇ ಇನ್ನೊಂದು ನುಡಿಸಿರಿಯ ತಯಾರಿಯ ಕೆಲಸ ಪ್ರಾರಂಭವಾಗಿ, ಇಡೀ ವರ್ಷ ನಡೆಯುತ್ತದೆ. ಇದು ಆಳ್ವಾಸ್ ನುಡಿಸಿರಿಯ ಯಶಸ್ಸಿಗೆ ಕಾರಣ.

# ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸುವ ಪ್ರಯತ್ನ ನುಡಿಸಿರಿಯಿಂದ ಹೇಗೆ?

ಅಳಿವಿನಂಚಿನಲ್ಲಿರುವ ದೇಶಿಯ ಕಲೆಗಳಿಗೆ ನೆಲೆ ನೀಡುವುದು ನುಡಿಸಿರಿಯ ಪ್ರಮುಖ ಉದ್ದೇಶಗಳಲ್ಲಿ ಒಂದು. ರಾಜ್ಯದ ಕೆಲವೇ ಕಡೆ ಇಂದು ಕಾಣಸಿಗುವ ಮಲ್ಲಕಂಬದಂತಹ ಸಾಹಸಮಯ ಪ್ರದರ್ಶನಕ್ಕೆ ಆಳ್ವಾಸ್ ಹೊಸ ರೂಪ ನೀಡಿದೆ. ದೇಶಿಯ ಕಲೆಗಳಾದ ಪುರುಲಿಯಾ ಚಾವೋ, ಗೋಟಿಪುವದಂತಹ ಕಲೆಗಳಿಗೆ ಮರುಜೀವ ನೀಡುವ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷವಿಡೀ ಮಾಡುತ್ತಿದೆ.

# ನುಡಿಸಿರಿಯನ್ನು ‘ಮಾದರಿ’ ಮಾಡಿದ್ದು?

13 ವರ್ಷಗಳ ನುಡಿಸಿರಿಯಲ್ಲಿ ನಾವು ಅನುಸರಿಸುತ್ತಿರುವ ‘ಶಿಸ್ತು’ ನಮ್ಮ ದೊಡ್ಡ ಶಕ್ತಿ. ಸಮಯಪಾಲನೆ, ಸೌಂದರ್ಯಪ್ರಜ್ಞೆ, ಗೊಂದಲರಹಿತವಾಗಿ ಕಾರ್ಯಕ್ರಮಗಳ ಆಯೋಜನೆ, ಅಚ್ಚುಕಟ್ಟುತನ ಕಾಯ್ದುಕೊಳ್ಳುತ್ತಿರುವುದರಿಂದ ನುಡಿಸಿರಿ ‘ಮಾದರಿ ಸಮ್ಮೇಳನ’ ಅನ್ನಿಸಿಕೊಂಡಿದೆ. ಇದೇ ಇಂದು ನುಡಿಸಿರಿಯ ಟ್ರೆಂಡ್ ಎನಿಸಿಕೊಂಡಿದೆ. ನಾಡಿನ ಜನರ ದೃಷ್ಟಿಯಲ್ಲಿ ಹೊಸಸೃಷ್ಟಿಯ ಸಮ್ಮೇಳನವಾಗಿ ನುಡಿಸಿರಿ ಪ್ರತಿವರ್ಷ ಕಂಗೊಳಿಸುತ್ತಿದ್ದು, ನಮಗೆ ಸಮ್ಮೇಳನ ಸಂಘಟಿಸಲು ಧೈರ್ಯ ನೀಡುತ್ತಿದೆ.

# ವಿರಾಸತ್, ನುಡಿಸಿರಿ ಮಾದರಿಯಲ್ಲಿ ಆಳ್ವಾಸ್ ಕೈಗೊಳ್ಳಲಿರುವ ಯೋಜನೆಗಳಾವುವು?

ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಆಳ್ವಾಸ್ ವಿರಾಸತ್, 14 ಹರೆಯದಲ್ಲಿರುವ ಆಳ್ವಾಸ್ ನುಡಿಸಿರಿ ಮುಂದಿಟ್ಟುಕೊಂಡು ವರ್ಷವಿಡಿ ನಾಡಿನ ವಿವಿಧ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುತ್ತಿದ್ದೇವೆ. ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಾಖಲೆಗೆ ಜನ ಸೇರುವುದು ಕೂಡ ಒಂದು ರೀತಿಯ ಕ್ರಾಂತಿ. ‘ಆಳ್ವಾಸ್ ಪ್ರಗತಿ’ ಹೆಸರಿನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದ ಮೂಲಕ ಸಹಸ್ರಾರು ಯುವಕರಿಗೆ ಉದ್ಯೋಗ ಕಲ್ಪಿಸುತ್ತಿದ್ದೇವೆ. ಕೃಷಿಸಿರಿ ಮೂಲಕ ಯುವಕರನ್ನು ಕೃಷಿಯತ್ತ ಸೆಳೆಯುತ್ತಿರುವುದು ಕೂಡ ಒಂದು ಆಶಾದಾಯಕ ಬೆಳವಣಿಗೆ.

# ‘ವಿಶ್ವನುಡಿಸಿರಿ’ ಕುರಿತು?

ನುಡಿಸಿರಿಯಲ್ಲದೆ ದಿನನಿತ್ಯವೂ ಸಂಸ್ಥೆಯಲ್ಲಿ ನಡೆಯುವ ವಿಭಿನ್ನ ಸಾಂಸ್ಕೃತಿಕ ಆಚರಣೆಗಳು ದೇವಸ್ಥಾನದಲ್ಲಿ ನಿತ್ಯ ನಡೆಯುವ ಪೂಜೆ-ಪುನಸ್ಕಾರಗಳಿದ್ದಂತೆ. ವರ್ಷಕ್ಕೊಮ್ಮೆ ನಡೆಯುವ ನುಡಿಸಿರಿ-ವಿರಾಸತ್​ಗಳು ದೇವಸ್ಥಾನದ ವಾರ್ಷಿಕ ಉತ್ಸವಗಳಿದ್ದಂತೆ. ಇನ್ನು 10 ವರ್ಷಕ್ಕೊಮ್ಮೆ ನಡೆಸಲು ಉದ್ದೇಶಿಸಿರುವ ವಿಶ್ವ ನುಡಿಸಿರಿ ವಿರಾಸತ್​ಗಳು ದೇವಸ್ಥಾನದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಬ್ರಹ್ಮ ಕಲಶೋತ್ಸವ ಇದ್ದಂತೆ. ದೇವಸ್ಥಾನದಲ್ಲಿ ಹೇಗೆ ದೇವರ ಪೂಜೆ ಆರಾಧನೆಗಳು ನಿರಂತರವಾಗಿ ನಡೆಯುತ್ತವೆಯೋ ಅದೇ ರೀತಿ ಜ್ಞಾನ ದೇವತೆಯ, ಕಲಾಸರಸ್ವತಿಯ ಅವ್ಯಾಹತ ಆರಾಧನೆ ನುಡಿಸಿರಿಯಲ್ಲಿ ನಡೆಯುತ್ತದೆ. ಈ ನಿರಂತರ ಕಲಾರಾಧನೆ, ಜ್ಞಾನಯಾಗ ನುಡಿಸಿರಿಗೆ ಒಂದು ಮಹೌನ್ನತ್ಯ ಸೃಷ್ಟಿಸಿದೆ.

Leave a Reply

Your email address will not be published. Required fields are marked *

Back To Top