Tuesday, 20th March 2018  

Vijayavani

ಮುಂಬಡ್ತಿ ಕೇಸ್​​ನಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ- ಕಾಲಾವಕಾಶ ನೀಡೋಕೆ ಸುಪ್ರೀಂ ನಕಾರ- ತೀರ್ಪು ಪಾಲಿಸೋಕೆ ಒಂದು ತಿಂಗಳು ಡೆಡ್​​ಲೈನ್​        ಐಸಿಸ್​ನಿಂದ 39 ಭಾರತೀಯರ ಹತ್ಯೆ- ಮಾಹಿತಿ ಬಿಚ್ಚಿಟ್ಟ ಸುಷ್ಮಾ ಸ್ವರಾಜ್​- ಸಾವಿನಲ್ಲೂ ರಾಜಕೀಯ ಅಂತಾ ವಿಪಕ್ಷಗಳಿಗೆ ಚಾಟಿ        ಜೆಡಿಎಸ್​ ರೆಬೆಲ್ಸ್​ ಅಡ್ಡಮತದಾನ ಪ್ರಕರಣ- ನಾಳೆಯೇ ತೀರ್ಪಿಗೆ ಹೈಕೋರ್ಟ್ ಸೂಚನೆ- ಎಜಿ ಕರೆಸಿ ವಿಚಾರಿಸಿದ ಸ್ಪೀಕರ್​        ಮೆಟ್ರೋ ನೌಕರರ ಮುಷ್ಕರ ಇಲ್ಲ- ಬೇಡಿಕೆ ಈಡೇರಿಕೆಗೆ ತಿಂಗಳ ಗಡುವು- ಸಂಧಾನ ಸೂತ್ರಕ್ಕೆ BMRCLಗೆ ಹೈಕೋರ್ಟ್ ಸಲಹೆ        ವೀರಶೈವ ಲಿಂಗಾಯತ ಎರಡೂ ಒಂದೇ- ಸರ್ಕಾರದ ಕ್ರಮ ಅನ್ಯಾಯದ ಪರಮಾವಧಿ- ಸಿಎಂ ವಿರುದ್ಧ ಶಾಮನೂರು ಶಿವಶಂಕರಪ್ಪ ಗರಂ       
Breaking News

ನಿಲ್ಲದ ಪಾಕ್ ಅಟ್ಟಹಾಸ

Wednesday, 04.10.2017, 3:00 AM       No Comments

ಜಮ್ಮು-ಕಾಶ್ಮೀರದಲ್ಲಿನ ಉರಿ ಮತ್ತು ಪಠಾಣ್​ಕೋಟ್ ಸೇನಾನೆಲೆಗಳ ಮೇಲಿನ ಭಯೋತ್ಪಾದಕ ದಾಳಿ ಮರೆಯುವ ಮುನ್ನವೇ ಇಂಥಹ ಮತ್ತೊಂದು ದುರಂತ ಸಂಭವಿಸಿರುವುದು ದುರದೃಷ್ಟಕರ. ಮಂಗಳವಾರ ಬೆಳಗಿನ ಜಾವ ಶ್ರೀನಗರದ ಸೇನಾ ಶಿಬಿರದ ಮೇಲೆ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿರುವ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮನಾಗಿದ್ದಾನೆ. ಹಲವು ಗಂಟೆಗಳ ಕಾಲ ಗುಂಡಿನ ಕಾಳಗ ನಡೆಸಿ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನಾಪಡೆ ಯಶಸ್ವಿಯಾಗಿರುವುದು ಸಮಾಧಾನಕರ. ಮೃತ ಉಗ್ರರ ಬಳಿ 5 ಕೆಜಿ ಸ್ಪೋಟಕ ಪತ್ತೆಯಾಗಿದ್ದು, ಇವರು ಸೇನಾನೆಲೆಯಲ್ಲಿ ದೊಡ್ಡ ಪ್ರಮಾಣದ ಸ್ಫೋಟ ನಡೆಸಿ, ರಕ್ತಪಾತ ನಡೆಸಲು ಯೋಜನೆ ರೂಪಿಸಿದ್ದರು ಎಂಬುದು ತಿಳಿದು ಬಂದಿದೆ. ಈ ಮೂಲಕ ಪಾಕಿಸ್ತಾನಿ ಉಗ್ರ ಸಂಘಟನೆಗಳ ಹೇಯ ಕೃತ್ಯ ಮುಂದುವರಿದಿರುವುದು ಸ್ಪಷ್ಟವಾಗಿದೆ. ಮತ್ತೊಂದೆಡೆ, ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಒಳನುಸುಳುವಿಕೆ ಯತ್ನಗಳು ಹೆಚ್ಚುತ್ತಿದ್ದು, ಸೋಮವಾರ 2 ಕಡೆ ಇಂಥ ಯತ್ನಗಳನ್ನು ಸೇನಾಪಡೆ ವಿಫಲಗೊಳಿಸಿದೆ. ಅಲ್ಲದೆ, ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗಡಿಗ್ರಾಮಗಳಲ್ಲಿ ಆತಂಕದ ಸ್ಥಿತಿ ನೆಲೆಸಿದೆ.

ಇತ್ತೀಚೆಗೆ ಶಾಂತಿ ಬಾವುಟ ಪ್ರದರ್ಶಿಸಿ ಮಾತುಕತೆಗೆ ಒಲವು ತೋರಿದ್ದ ಪಾಕ್ ಸೇನಾಪಡೆ, ಅದರ ಮರುದಿನವೇ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ಅದರ ಉದ್ಧಟತನ ಮತ್ತು ಕಪಟತನಕ್ಕೆ ಸಾಕ್ಷಿಯಾಗಿದೆ. ಉಗ್ರರ ದುಷ್ಕೃತ್ಯ ಮತ್ತು ಪಾಕಿಸ್ತಾನದ ಕುತಂತ್ರಗಳಿಗೆ ತಕ್ಕ ಉತ್ತರ ನೀಡಲೆಂದೇ ಕೇಂದ್ರ ಸರ್ಕಾರ ಕಾಶ್ಮೀರ ನೀತಿಯನ್ನು ಬಿಗಿಗೊಳಿಸಿದ್ದು, ಭಯೋತ್ಪಾದನೆಗೆ ಸಿಗುತ್ತಿರುವ ಎಲ್ಲ ಬಗೆಯ ನೆರವಿನ ಮೂಲಗಳನ್ನು ತಡೆಯಲು ಯತ್ನಿಸುತ್ತಿದೆ. ಸ್ವಾಭಾವಿಕವಾಗಿಯೇ, ಇದರಿಂದ ಪಾಕಿಸ್ತಾನ ಮತ್ತು ಅಲ್ಲಿ ನೆಲೆಸಿರುವ ಭಯೋತ್ಪಾದಕ ಸಂಘಟನೆಗಳು ಹತಾಶವಾಗಿವೆ. ಈ ಹತಾಶೆಯಲ್ಲೇ ಹಿಂಸೆಯನ್ನು ಹೆಚ್ಚಿಸಲು ಷಡ್ಯಂತ್ರ ರೂಪಿಸುತ್ತಿರುವ ಸಾಧ್ಯತೆಯೂ ಇದೆ. ಹಾಗಾಗಿ, ಒಳನುಸುಳುವಿಕೆ ತಡೆಯಲು ಸೂಕ್ತ ಮಾರ್ಗೆಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಗಡಿಯನ್ನು ಭದ್ರಪಡಿಸಲು ಕೇಂದ್ರ ಸರ್ಕಾರ ಲೇಸರ್ ಗೋಡೆ ನಿರ್ಮಾಣ ಸೇರಿದಂತೆ ಹಲವು ಕ್ರಮಗಳನ್ನು ಪ್ರಕಟಿಸಿದೆ. ಆದರೆ, ಈ ಕಾಮಗಾರಿಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಿದೆ. ಗಡಿ ಭದ್ರಗೊಂಡರೆ ನುಸುಳುವಿಕೆಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ. ಚೀನಾದ ಜತೆಗೆ ಡೋಕ್ಲಾಂ ವಿವಾದ ತಲೆದೋರಿದಾಗ ಎರಡೂ ರಾಷ್ಟ್ರಗಳ ನಡುವೆ ಯುದ್ಧವೇ ನಡೆದುಬಿಡುತ್ತದೆ ಎಂಬಂಥ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ಆದರೆ, ಒಂದು ಹನಿಯೂ ರಕ್ತ ಚೆಲ್ಲದೆ ರಾಜತಾಂತ್ರಿಕ ಜಾಣ್ಮೆಯಿಂದ ಭಾರತ ಈ ಸಮಸ್ಯೆಯನ್ನು ಬಗೆಹರಿಸಿತು. ಪಾಕ್ ವಿಚಾರದಲ್ಲೂ ಇದೇ ರಾಜತಾಂತ್ರಿಕ ದಿಟ್ಟತನ ಪ್ರದರ್ಶಿಸಬೇಕಿದೆ. ವಿಶ್ವ ವೇದಿಕೆಯಲ್ಲಿ ಭಾರತ ಪಾಕ್​ನ ಮುಖವಾಡಗಳನ್ನು ಕಳಚಿ, ಆ ರಾಷ್ಟ್ರ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುತ್ತಿರುವ ಬಗ್ಗೆ ಸಾಕ್ಷ್ಯಾಧ್ಯಾರಗಳ ಸಮೇತ ವಿವರಣೆ ನೀಡಿದೆ. ಆದರೆ, ಪಾಕ್ ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹಾಗಾಗಿ, ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರ ನೀಡಬೇಕಿದೆ. ಸೇನಾ ಪಡೆಗಳ ಮೇಲಿನ ದಾಳಿ ಸೇರಿದಂತೆ ಎಲ್ಲ ಬಗೆಯ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕಿದ್ದು, ಪಾಕಿಸ್ತಾನ ಉಗ್ರ ಸಂಘಟನೆಗಳಿಗೆ ನೀಡುತ್ತಿರುವ ನೆರವನ್ನು ತಡೆಯಲು ಅಂತಾರಾಷ್ಟ್ರೀಯ ಒತ್ತಡವನ್ನೂ ಹೇರಬೇಕಿದೆ.

Leave a Reply

Your email address will not be published. Required fields are marked *

Back To Top