Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ನಿಲ್ಲದ ಡ್ರ್ಯಾಗನ್ ಕಿರಿಕಿರಿ

Wednesday, 02.08.2017, 3:00 AM       No Comments

ಭಾರತ, ಭೂತಾನ್ ಮತ್ತು ಚೀನಾದ ಗಡಿಭಾಗಗಳು ಸಂಧಿಸುವ ಡೋಕ್ಲಾಮ್ ಎಂಬ ತ್ರಿ-ಸಂಧಿಸ್ಥಾನದಲ್ಲಿ ಚೀನಾ ಯೋಧರು ಗಡಿ ಅತಿಕ್ರಮಿಸಿ ಒಳನುಗ್ಗಿ ರಸ್ತೆ ನಿರ್ವಣಕ್ಕೆ ಮುಂದಾದ ಘಟನೆ ನೆನಪಿನಿಂದ ಮಾಸುವ ಮೊದಲೇ, ಅಂಥದೇ ಮತ್ತೊಂದು ಧಾರ್ಷ್ಯrವನ್ನು ಚೀನಾ ತೋರಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಬರಹೋಟಿ ಎಂಬಲ್ಲಿ ಚೀನಿ ಯೋಧರು ಭಾರತದ ಗಡಿಪ್ರದೇಶವನ್ನು ಒಂದು ಕಿ.ಮೀ.ನಷ್ಟು ಅತಿಕ್ರಮಿಸಿರುವುದು ಇತ್ತೀಚಿನ ನಿದರ್ಶನ. ಭಾರತದ ವಿರುದ್ಧ ನೇರಾನೇರ ಯುದ್ಧ ಸಾರಲು ಚೀನಾ ಹಿಂಜರಿಯುತ್ತಿದೆ ಎಂಬುದು ಸ್ಪಷ್ಟ. ಹಾಗಂತ ಗಡಿಭಾಗದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡರೆ, ಅಂತಾರಾಷ್ಟ್ರೀಯ ಸಮುದಾಯದೆದುರು ತಾನು ಹಾಸ್ಯಾಸ್ಪದವಾಗುವ ಅಳುಕು ಅದನ್ನು ಒಳಗೊಳಗೇ ಕಾಡುತ್ತಿರಲಿಕ್ಕೂ ಸಾಕು. ಹಾಗಾಗಿ, ವಿವಿಧ ಹೇಳಿಕೆ, ಬೆದರಿಕೆ, ತೋರಿಕೆಯ ಚಟುವಟಿಕೆಗಳ ಹೊರತಾಗಿಯೂ ಭಾರತದ ಚಾಣಾಕ್ಷ ರಾಜತಾಂತ್ರಿಕ ನಿಲುವು, ವ್ಯೂಹದ ಎದುರು ಚೀನಾ ಅಸಹಾಯಕವಾಗಿ, ಭಾರತವನ್ನು ಕೆಣಕಿ ಕೈಬಿಡುವಂಥ ಸಣ್ಣಪುಟ್ಟ ಕಿರಿಕಿರಿ ಮತ್ತು ಚಕಮಕಿಗಳಲ್ಲೇ ದಿನದೂಡುತ್ತಿದೆ.

ಅದೇನೇ ಇರಲಿ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಭಾರತದ ವಿರುದ್ಧ ವಿಭಿನ್ನ ನೆಲೆಗಟ್ಟಿನ ವ್ಯೂಹಾತ್ಮಕ ಕಾರ್ಯತಂತ್ರಗಳಲ್ಲಿ ಚೀನಾ ವ್ಯಸ್ತವಾಗಿರುವುದಂತೂ ಹೌದು. ಪಾಕಿಸ್ತಾನದ ಗ್ವಾದಾರ್ ಬಂದರಿನಲ್ಲಿ ಸ್ಥಾಪಿಸಿರುವ ಸೇನಾನೆಲೆಯೂ ಸೇರಿದಂತೆ ಭಾರತವನ್ನು ಸುತ್ತುವರಿದಿರುವ ರಾಷ್ಟ್ರಗಳಿಗೆ ಮೂಲಭೂತ ಸೌಲಭ್ಯ ಸೃಷ್ಟಿ, ಉದ್ಯಮ ಸ್ಥಾಪನೆ ಅಥವಾ ಬಂಡವಾಳ ಹೂಡಿಕೆಯ ಪ್ರಲೋಭನೆ ಒಡ್ಡುವ ಮೂಲಕ ಅವನ್ನು ತನ್ನ ಕಕ್ಷೆಗೆ ತೆಗೆದುಕೊಳ್ಳಲು ಚೀನಾ ಸಂಚುಹೂಡಿರುವುದೀಗ ಬಹಿರಂಗ ಗುಟ್ಟು. ಮೇಲ್ನೋಟಕ್ಕೆ ಇಂಥ ಚಟುವಟಿಕೆಗಳ ಹಿಂದೆ ಆಯಾ ‘ಪ್ರದೇಶಾಭಿವೃದ್ಧಿಯ’ ಚಿಂತನೆ ಇರುವಂತೆ ತೋರಿದರೂ, ಉಪಕೃತ ದೇಶ/ಪ್ರದೇಶದ ಮೇಲೆ ಚೀನಾ ರಾಜಕೀಯ ಪ್ರಾಬಲ್ಯ ಸಾಧಿಸುವುದಕ್ಕೆ ಹಾದಿ ಸುಗಮವಾಗುತ್ತದೆ ಎಂಬುದನ್ನು ತಳ್ಳಿಹಾಕಲಾಗದು.

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶವನ್ನೇ ಇದಕ್ಕೆ ಉದಾಹಣೆಯಾಗಿ ತೆಗೆದುಕೊಳ್ಳೋಣ. 2006ರಲ್ಲಿ ಸಂಭವಿಸಿದ ವಿಧ್ವಂಸಕಾರಿ ಭೂಕಂಪದಿಂದಾಗಿ ಈ ಪ್ರದೇಶದ ಭೌಗೋಳಿಕ ಚಿತ್ರಣವೇ ಅಸ್ತವ್ಯಸ್ತವಾಗಿತ್ತು. ಆದರೀಗ ರಸ್ತೆ ನಿರ್ಮಾಣ ಮಾತ್ರವಲ್ಲದೆ, ಜಲವಿದ್ಯುತ್ ಯೋಜನೆಗಳು ಮತ್ತಿತರ ಅಭಿವೃದ್ಧಿ ಚಟುವಟಿಕೆಗಳು ಈ ಪ್ರದೇಶದಲ್ಲಿ ಕ್ಷಿಪ್ರಗತಿಯಲ್ಲಿ ಸಾಗಿರುವುದು ಭಾರತದ ಪಾಲಿಗೆ ಕಳವಳಕಾರಿ ಸಂಗತಿಯೇ ಸರಿ. ಚೀನಾದ ‘ವಿಸ್ತರಣವಾದಿ’ ಕಾರ್ಯತಂತ್ರ ಇದರ ಹಿಂದೆ ಅಡಗಿರುವುದು, ಮುಂದೊಂದು ದಿನ ಅದು ತನಗೇ ಮುಳುವಾಗಬಹುದೆಂಬುದು ಮತ್ತು ‘ಪಾಕ್-ಆಕ್ರಮಿತ’ ಕಾಶ್ಮೀರ ಕ್ರಮೇಣ ‘ಚೀನಾ-ಆಕ್ರಮಿತ’ ಕಾಶ್ಮೀರವಾಗುವ ಅಪಾಯವಿರುವುದು ಸ್ವತಃ ಪಾಕಿಸ್ತಾನಕ್ಕೂ ಅರಿವಾದಂತಿಲ್ಲ! ಇನ್ನು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್​ನಿಂದಾಗಿ ಆರ್ಥಿಕ ಪ್ರಗತಿ ಏರುಗತಿಯನ್ನು ಕಾಯ್ದುಕೊಳ್ಳುತ್ತದೆ ಎಂಬುದು ಪಾಕ್-ಆಕ್ರಮಿತ ಕಾಶ್ಮೀರ ಪ್ರದೇಶದ ಬಹುತೇಕರ ಭ್ರಮೆ. ಆದರೆ ಯೋಜನೆ ಸಂಪೂರ್ಣಗೊಂಡಾಗ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸ್ಥಳೀಯರ ತೊಡಗಿಸುವಿಕೆ ನೆರವೇರಿದಾಗಲಷ್ಟೇ ಈ ನಿಟ್ಟಿನಲ್ಲಿ ಸ್ಪಷ್ಟತೆ ದಕ್ಕೀತು. ಚೀನಾದ ಈ ಎಲ್ಲ ಉಪಕ್ರಮಗಳ ಹಿಂದೆ ಭಾರತದ ಮೇಲೆ ಮುರಕೊಂಡು ಬೀಳುವ ದೂರಗಾಮಿ ಹುನ್ನಾರ ಇರುವುದನ್ನು ತಳ್ಳಿಹಾಕಲಾಗದು. ಆದ್ದರಿಂದ ಚೀನಾದ ಈ ವ್ಯಾಧಿಗೆ ಭಾರತ ಪರಿಣಾಮಕಾರಿಯಾಗಿ ಮದ್ದು ಅರೆಯಬೇಕಿರುವುದು ಈ ಕ್ಷಣದ ಅನಿವಾರ್ಯತೆ.

 

Leave a Reply

Your email address will not be published. Required fields are marked *

Back To Top