Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ನಿರ್ಲಕ್ಷ್ಯ ತರವಲ್ಲ

Monday, 23.10.2017, 3:02 AM       No Comments

ವಿಶ್ವಖ್ಯಾತಿ ಪಡೆದಿರುವ ಶ್ರವಣಬೆಳಗೊಳದ ಬಾಹುಬಲಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯುವುದು ಗೊತ್ತಿರುವ ಸಂಗತಿಯೇ. ಆದರೆ ಈ ಮಹೋತ್ಸವದ ಉದ್ಘಾಟನೆಗೆ 4 ತಿಂಗಳಷ್ಟೇ ಬಾಕಿಯಿದ್ದರೂ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾರ್ಯಕ್ಕಿನ್ನೂ ತೀವ್ರಗತಿ ದಕ್ಕಿಲ್ಲ. ಇಂಥ ನಿರ್ಲಕ್ಷ್ಯ ವಿಳಂಬ ನೀತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಕರ್ನಾಟಕಕ್ಕಿರುವ ವಿವಿಧ ನೆಲೆಗಟ್ಟಿನ ಮಹತ್ವಕ್ಕೆ ಸಂಚಕಾರ ಒದಗುತ್ತದೆ ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು.

ಸುತ್ತಮುತ್ತಲ ಜನರು ಅಥವಾ ನಿರ್ದಿಷ್ಟ ಸಮುದಾಯದ ಭಕ್ತರು ಮಾತ್ರವಲ್ಲದೆ, ದೇಶ-ಭಾಷೆಗಳನ್ನೂ ಮೀರಿದ ಲಕ್ಷಾಂತರ ಪ್ರವಾಸಿಗರು ಸಂಭ್ರಮೋತ್ಸಾಹಗಳಿಂದ ಪಾಲ್ಗೊಳ್ಳುವ ವಿಶಿಷ್ಟ ಸಂದರ್ಭವಿದು. ಹೀಗಾಗಿ ರಸ್ತೆ, ವಸತಿ, ಕುಡಿಯುವ ನೀರು, ಸ್ನಾನ ಮತ್ತು ಶೌಚಗೃಹಗಳು, ಅಬಾಧಿತ ವಿದ್ಯುತ್ ಪೂರೈಕೆ, ಔಷಧೋಪಚಾರ ಮತ್ತು ತುರ್ತಸೇವೆ ಸೇರಿದಂತೆ ಹಲವು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಇಷ್ಟುಹೊತ್ತಿಗಾಗಲೇ ಕಟಿಬದ್ಧವಾಗಿರಬೇಕಿತ್ತು. ಆದರೆ ಅಂಥ ಯತ್ನಗಳಿಗೆ ಇನ್ನೂ ಬಿರುಸು ದಕ್ಕದಿರುವುದು ಸಾರ್ವಜನಿಕರಲ್ಲಿ ಅಸಮಾಧಾನದ ಅಲೆಯೆಬ್ಬಿಸಿದೆ ಎನ್ನಲಡ್ಡಿಯಿಲ್ಲ. ಕೊನೆಗೊಮ್ಮೆ ತರಾತುರಿಯಲ್ಲಿ ಕಲ್ಪಿಸಿದ ಸೌಕರ್ಯಗಳ ಗುಣಮಟ್ಟ ಹೇಗಿದ್ದೀತು ಎಂಬುದನ್ನು ಊಹಿಸಿಕೊಳ್ಳಲು ಬ್ರಹ್ಮಜ್ಞಾನವೇನೂ ಬೇಕಿಲ್ಲ. ಹೀಗಾಗಿ ಸರ್ಕಾರಿ ಬೊಕ್ಕಸದಿಂದ ಅಗಾಧ ಹಣ ಖರ್ಚಾದರೂ ಕಾಮಗಾರಿ ಕಳಪೆಯಾಗೇ ಉಳಿದುಬಿಡುವಂಥ ಸ್ಥಿತಿ ಅನಿವಾರ್ಯವಾಗುತ್ತದೆ.

ವಿಧಾನಸೌಧದ ವಜ್ರಮಹೋತ್ಸವ ಸಂಭ್ರಮಕ್ಕೆ ಕೋಟ್ಯಂತರ ಹಣ ವೆಚ್ಚಮಾಡಲು ತುದಿಗಾಲಲ್ಲಿ ನಿಂತಿದ್ದವರು, ಮಹಾಮಸ್ತಕಾಭಿಷೇಕದಂಥ ಮಹತ್ತರ ಸಂದರ್ಭದೆಡೆಗೆ ದಿವ್ಯನಿರ್ಲಕ್ಷ್ಯ ತೋರಿದ್ದೇಕೆ ಎಂಬುದು ಅರ್ಥವಾಗದ ಸಂಗತಿ. ವಿಧಾನಸೌಧದ ವಜ್ರಮಹೋತ್ಸವವನ್ನು ಸಂಭ್ರಮಿಸಬಾರದು ಎಂಬುದು ಈ ಮಾತಿನರ್ಥವಲ್ಲ; ಆದರೆ ಹಣಕಾಸು ಅಥವಾ ಬೇರಾವುದೇ ಸಂಪನ್ಮೂಲದ ವಿನಿಯೋಗದ ವಿಷಯದಲ್ಲಿ ಯಾವುದು ಆದ್ಯತಾ ವಲಯವಾಗಬೇಕು ಎಂಬುದರ ಕಡೆಗೆ ಸರ್ಕಾರದ ಗಮನವಿರಬೇಕಾದ್ದು ಅಗತ್ಯ. ಜತೆಗೆ ಇಂಥ ವಜ್ರಮಹೋತ್ಸವಗಳನ್ನು ಆಯೋಜಿಸಿದರೂ ಅಲ್ಲಿ ಪಾಲ್ಗೊಳ್ಳುವವರು ‘ಆಯ್ದ’ ಗಣ್ಯರೇ ವಿನಾ, ಶ್ರೀಸಾಮಾನ್ಯರಲ್ಲ. ಆದರೆ ಮಹಾಮಸ್ತಕಾಭಿಷೇಕದಂಥ ಆಚರಣೆಗಳಿಗೆ ಇಂಥ ಯಾವುದೇ ಸೀಮೆಗಳಿರುವುದಿಲ್ಲ ಎಂಬುದನ್ನು ಆಳುಗರು ನೆನಪಿನಲ್ಲಿಟ್ಟುಕೊಳ್ಳಬೇಕು.

ಉತ್ತರ ಭಾರತದಲ್ಲಿ ನಡೆಯುವ ಕುಂಭಮೇಳದಂತೆಯೇ, ಶ್ರವಣಬೆಳಗೊಳದಲ್ಲಿನ ಮಹಾಮಸ್ತಕಾಭಿಷೇಕ ಆಚರಣೆಗೆ ಅದರದ್ದೇ ಆದ ಮಹತ್ವ ಹಾಗೂ ಪ್ರಸಿದ್ಧಿಗಳಿವೆ. ಮಸ್ತಕಾಭಿಷೇಕಕ್ಕೆ ಬರುವವರು ವಿವಿಧ ರಾಜ್ಯ-ದೇಶಗಳಿಗೆ ಸೇರಿದವರಾಗಿರುತ್ತಾರಾದ್ದರಿಂದ, ಪುಣ್ಯಕ್ಷೇತ್ರಗಳು ಮಾತ್ರವಲ್ಲದೆ ಕರ್ನಾಟಕದ ಕಲೆ-ಸಂಸ್ಕೃತಿ, ಪರಂಪರೆ, ಇತಿಹಾಸ ಮುಂತಾದವುಗಳು ಸಮರ್ಥವಾಗಿ ಬಿಂಬಿಸಲ್ಪಡಲು ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಿದೆ. ರಾಜ್ಯದ ಪ್ರವಾಸೋದ್ಯಮ ಏರುಗತಿ ಕಾಣುವುದಕ್ಕೂ ಇದು ಪೂರಕವಾಗಿ ಪರಿಣಮಿಸುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ ‘ರಾಜಕೀಯ ಫಾಯಿದೆ’ ಇಲ್ಲವೆಂದೋ ಅಥವಾ ಇನ್ನಾವುದೋ ಕಾರಣಕ್ಕೋ ಇಂಥ ಆಚರಣೆಗಳನ್ನು ನಿರ್ಲಕ್ಷಿಸುತ್ತ ಬಂದರೆ ನಷ್ಟವಾಗುವುದು ನಮಗೇ ಎಂಬುದನ್ನು ಮರೆಯದಿರೋಣ. ಈಗಾಗಲೇ ‘ವಿಶ್ವ ಕನ್ನಡ ಸಮ್ಮೇಳನ’ಕ್ಕೆ ಅಂಥದೊಂದು ಸ್ಥಿತಿ ಒದಗಿದೆ. ಜಗತ್ತಿನೆಲ್ಲೆಡೆಯ ಕನ್ನಡಿಗರನ್ನು ಒಗ್ಗೂಡಿಸಿ, ಕನ್ನಡನಾಡು-ನುಡಿಗೆ ಸಂಬಂಧಿಸಿದ ವಸ್ತುನಿಷ್ಠ ವಿಚಾರ ವಿನಿಮಯಕ್ಕೆ ವೇದಿಕೆಯಾಗಬೇಕಿದ್ದ ಈ ಸಮ್ಮೇಳನದ ಕುರಿತು ಸ್ಪಷ್ಟ ರೂಪುರೇಷೆಗಳೇ ಇಲ್ಲ ಎಂಬುದೀಗ ಬಹಿರಂಗ ಗುಟ್ಟು. ಅಂಥ ಸ್ಥಿತಿ ಮಿಕ್ಕ ಪಾರಂಪರಿಕ ಆಚರಣೆಗಳಿಗೆ ಬರುವಂತಾಗಬಾರದು. ಇಂಥ ಯಾವುದೇ ಚರ್ಚಾವಿಷಯ ಮುನ್ನೆಲೆಗೆ ಬಂದಾಗ, ಕೇಂದ್ರದ ನೆರವಿನ ನಿರೀಕ್ಷೆ ಇಟ್ಟುಕೊಳ್ಳುವುದು ವಾಡಿಕೆ. ಆದರೆ ಹೇಳಿಕೇಳಿ ಇದು ರಾಜ್ಯದ ಧಾರ್ವಿುಕ-ಸಾಂಸ್ಕೃತಿಕ ಅಸ್ಮಿತೆಯ ವಿಚಾರವಾಗಿರುವುದರಿಂದ, ಇದರಲ್ಲಿ ಬದ್ಧತೆ ತೋರಿದಷ್ಟೂ ರಾಜ್ಯಕ್ಕೇ ಪ್ರಯೋಜನಗಳಿವೆ ಎಂಬುದನ್ನು ಮರೆಯಲಾಗದು.

Leave a Reply

Your email address will not be published. Required fields are marked *

Back To Top