Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ನಿರೀಕ್ಷೆಗಳ ಭಾರದಲ್ಲಿ ಭರವಸೆಯ ಹೆಜ್ಜೆ

Wednesday, 20.09.2017, 3:00 AM       No Comments

ಭಾರಿ ಬಹುಮತದೊಂದಿಗೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಆರು ತಿಂಗಳ ಅವಧಿಯನ್ನು ಪೂರೈಸಿದೆ. ಈ ಅವಧಿಯಲ್ಲಿ, ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಯೋಗಿ ಹೇಳಿಕೊಂಡರೆ ಅಭಿವೃದ್ಧಿಯೇ ನಿಂತುಹೋಗಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಇನ್ನು ಜನಸಾಮಾನ್ಯರು, ಯೋಗಿ ಸರ್ಕಾರದ ಮೇಲೆ ಅಪಾರ ನಿರೀಕ್ಷೆ ಇದ್ದು, ಆಗಬೇಕಾದ್ದು ಬೆಟ್ಟದಷ್ಟಿದೆ ಎನ್ನುತ್ತಾರೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಬಿಂಬಿಸದೆ, ಅಭಿವೃದ್ಧಿ ವಿಷಯವನ್ನು ಮುಖ್ಯ ಕಾರ್ಯಸೂಚಿಯಾಗಿಸಿ ಚುನಾವಣಾ ಕಣಕ್ಕೆ ಇಳಿದಿದ್ದ ಬಿಜೆಪಿ ಉತ್ತರಪ್ರದೇಶದ ಅಧಿಕಾರಗದ್ದುಗೆಯನ್ನು ಪಡೆಯಲು ಹಲವು ತಂತ್ರಗಳನ್ನು ಹೆಣೆದಿದ್ದು ಇತಿಹಾಸ. ಸಮಾಜವಾದಿ ಪಕ್ಷದ ಎರಡು ಅವಧಿಯ ಅಧಿಕಾರವನ್ನು ಕೊನೆಗಾಣಿಸಿ ಬಿಜೆಪಿ ಕೈಗೆ ಜನತಾ ಜನಾರ್ದನ ಅಧಿಕಾರ ಚುಕ್ಕಾಣಿ ನೀಡಿದಾಗ ಮುಖ್ಯಮಂತ್ರಿ ಹುದ್ದೆಗೆ ಹಲವು ಹೆಸರುಗಳು ಕೇಳಿಬಂದವು. ಹಿಂದುತ್ವದ ಫೈರ್​ಬ್ರಾ್ಯಂಡ್ ನಾಯಕ, ಮಠಾಧೀಶ ಯೋಗಿ ಆದಿತ್ಯನಾಥ 2017 ಮಾರ್ಚ್ 19ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ರಾಜಕೀಯ ಪಂಡಿತರೂ ಹುಬ್ಬೇರಿಸಿದ್ದರು. ಆದರೆ, ಸಂಸದರಾಗಿ ರಾಜಕೀಯ ಅನುಭವ ಹೊಂದಿದ್ದ ಯೋಗಿ ಸಿಎಂ ಹುದ್ದೆಗೇರುತ್ತಿದ್ದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತಳೆದು ಗಮನ ಸೆಳೆದದ್ದು, ಸುದ್ದಿಯಾಗಿದ್ದು ಹೌದು. ಆದರೆ, ಕಳೆದ ಆರು ತಿಂಗಳಲ್ಲಿ ಸರ್ಕಾರ ನೀಡಿದ ಎಷ್ಟು ಆಶ್ವಾಸನೆಗಳು ಈಡೇರಿವೆ, ಯಾವೆಲ್ಲ ಸುಧಾರಣೆಗಳು ಆಗಿವೆ, ನಿಜಕ್ಕೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆಯೇ ಎಂಬ ಚರ್ಚೆಯೂ ಈಗ ಗರಿಗೆದರಿದೆ.

ಅಪರಾಧ ನಿಯಂತ್ರಣ

ಉತ್ತರಪ್ರದೇಶಕ್ಕೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಶಾಪವಾಗಿ ಕಾಡುತ್ತಿತ್ತು. ಚುನಾವಣೆ ಸಮಯದಲ್ಲೂ ಅಪರಾಧ ಪ್ರಕರಣಗಳು ಮತ್ತು ಅವುಗಳನ್ನು ನಿಯಂತ್ರಿಸುವ ಕುರಿತು ದೊಡ್ಡದನಿಯಲ್ಲಿ ಚರ್ಚೆ ನಡೆಯಿತು. ಅಲ್ಲದೆ, ಯೋಗಿ ಅಧಿಕಾರಕ್ಕೆ ಬರುತ್ತಿದ್ದಂತೆ-‘ಅಪರಾಧಗಳನ್ನು ನಿಯಂತ್ರಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುವುದೇ ನನ್ನ ಸರ್ಕಾರದ ಪ್ರಥಮ ಆದ್ಯತೆ’ ಎಂದು ಘೋಷಿಸಿದರು. ಸರ್ಕಾರ ಹೇಳುವಂತೆ, ಕಳೆದ 6 ತಿಂಗಳಲ್ಲಿ ಯಾವುದೇ ದಂಗೆ, ಗಲಭೆ ಸಂಭವಿಸಿಲ್ಲ. ಮಾತ್ರವಲ್ಲ, 430 ಎನ್​ಕೌಂಟರ್​ಗಳ ಮೂಲಕ ರೌಡಿಗಳ, ಅಪರಾಧಿಗಳ ಅಟ್ಟಹಾಸಕ್ಕೆ ಕೊನೆ ಹಾಡಲಾಗಿದೆ. ಆದರೆ, ಪ್ರತಿಪಕ್ಷಗಳು ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿವೆ ಎಂದು ಆರೋಪಿಸಿದ್ದು, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದಿವೆ.

ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ

ಗೋರಕ್ಷಣೆಯ ಉದ್ದೇಶದಿಂದ ಯೋಗಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಕಸಾಯಿಖಾನೆಗಳ ಮೇಲೆ ಕಡಿವಾಣ ಹಾಕುವ ಘೋಷಣೆ ಮಾಡಿತು. ಈ ನಿರ್ಧಾರ ಚರ್ಚೆ ಮತ್ತು ವಿವಾದ ಎರಡನ್ನೂ ಹುಟ್ಟುಹಾಕಿತು. ಆದರೆ, ಯಾವುದೇ ಒತ್ತಡಗಳಿಗೂ ಮಣಿಯದೆ ಸರ್ಕಾರ ಅಕ್ರಮ ಕಸಾಯಿಖಾನೆಗಳನ್ನು ಪತ್ತೆ ಹಚ್ಚಿ, ಬೀಗ ಜಡಿಯಿತು.

ವಿದ್ಯುತ್ ಸಮಸ್ಯೆ

ಉತ್ತರಪ್ರದೇಶದ ನಿಕಟಪೂರ್ವ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್​ಟಾಪ್​ಗಳನ್ನೇನೋ ವಿತರಿಸಿದ್ದರು. ಆದರೆ, ಅದು ಚಾರ್ಜ್ ಮಾಡಲು ವಿದ್ಯುತ್ತೇ ಇಲ್ಲದೆ ಅದೆಷ್ಟೋ ಲ್ಯಾಪ್​ಟಾಪ್​ಗಳನ್ನು ಒಎಲ್​ಎಕ್ಸ್​ನಲ್ಲಿ ಮಾರಾಟ ಮಾಡಲಾಗಿತ್ತು. ಗ್ರಾಮಗಳಲ್ಲಿ 12 ಗಂಟೆಗೂ ಹೆಚ್ಚು ಕಾಲ ವಿದ್ಯುತ್ತೇ ಇರಲಿಲ್ಲ. ಹಾಗಾಗಿ, ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ಮಹತ್ತರ ಸವಾಲು ಮತ್ತು ಹೊಣೆಗಾರಿಕೆ ಹೊಸ ಸರ್ಕಾರದ ಮೇಲಿತ್ತು. ಅಲ್ಲದೆ, ಬಿಜೆಪಿ ಚುನಾವಣೆ ಘೊಚಣಾಪತ್ರದಲ್ಲೂ ಈ ಬಗ್ಗೆ ಪ್ರಸ್ತಾಪಿಸಿತ್ತು. ಹಾಗಾಗಿ, ವಿದ್ಯುತ್ ಸಮಸ್ಯೆ ಕುರಿತಂತೆ ಯೋಗಿ ಆದಿತ್ಯನಾಥ ಅಧಿಕಾರಿ ಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರಲ್ಲದೆ, ವಿದ್ಯುತ್ ಸಂಪರ್ಕವೇ ಇಲ್ಲದ ಗ್ರಾಮಗಳ ಸಮೀಕ್ಷೆ ಮಾಡಿ ಪಟ್ಟಿ ತಯಾರಿಸುವಂತೆ ಸೂಚಿಸಿದರು. ಮುಖ್ಯವಾಗಿ, ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು 24 ಗಂಟೆ ವಿದ್ಯುತ್ ವಿತರಿಸುವ ಆಶ್ವಾಸನೆ ಯನ್ನು ಈ ಸರ್ಕಾರ ನೀಡಿದೆ. ಈ ಒಪ್ಪಂದದಂತೆ ಜಿಲ್ಲಾ ಕೇಂದ್ರಗಳಿಗೆ 24 ಗಂಟೆ, ತಾಲೂಕು ಕೇಂದ್ರಗಳಿಗೆ 20 ಗಂಟೆ ಮತ್ತು ಗ್ರಾಮಗಳಿಗೆ 18 ಗಂಟೆ ವಿದ್ಯುತ್ ಪೂರೈಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸದ್ಯಕ್ಕಂತೂ, ವಿದ್ಯುತ್ ಸಮಸ್ಯೆ ಅಬಾಧಿತವಾಗಿ ಮುಂದುವರಿದಿದ್ದು, ಇಲಾಖೆಯ ಅಧಿಕಾರಿಗಳು ಜನತೆಯ ದೂರುಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಇದೆ.

ಆಂಟಿ ರೊಮಿಯೋ ಪಡೆ

ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ, ಛೇಡಿಸುವ ಪುಂಡರನ್ನು ಪತ್ತೆಹಚ್ಚಿ, ಶಿಕ್ಷಿಸಲು ಆಂಟಿ ರೊಮಿಯೋ ಪಡೆ ರಚಿಸಲಾಗುವುದು ಎಂದು ಸಿಎಂ ಯೋಗಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಘೋಷಿಸಿದರು. ಇಂಥದ್ದೊಂದು ಪಡೆ ದೇಶದಲ್ಲೇ ಮೊದಲಾಗಿದ್ದರಿಂದ ಈ ಕುರಿತಾದ ಸಾಧಕ-ಬಾಧಕಗಳ ಚರ್ಚೆಯೂ ಸಾಕಷ್ಟು ನಡೆಯಿತು. ಆರಂಭದಲ್ಲಿ ತನ್ನ ಕಾರ್ಯಾಚರಣೆಯಿಂದಾಗಿ ಈ ಪಡೆ ಸಾಕಷ್ಟು ಸುದ್ದಿ ಮಾಡಿತಾದರೂ ಅಷ್ಟೇ ವೇಗದಲ್ಲಿ ತನ್ನ ಛಾಪು ಕಳೆದುಕೊಂಡಿತು. ಈಗಲೂ, ಯುವತಿಯರು, ಮಹಿಳೆಯರನ್ನು ಛೇಡಿಸುವ ಪ್ರಕರಣಗಳು ದಾಖಲಾಗುತ್ತಿದ್ದು, ಆಂಟಿ ರೊಮಿಯೋ ಪಡೆ ಏನು ಮಾಡುತ್ತಿದೆ ಎಂದು ಜನರೇ ಪ್ರಶ್ನಿಸುವಂತಾಗಿದೆ. ಆರೋಗ್ಯ ಕ್ಷೇತ್ರ

ಗೋರಖಪುರದಲ್ಲಿ ನಡೆದ ಶಿಶುಗಳ ಸರಣಿ ಸಾವುಗಳ ಪ್ರಕರಣ ಉ.ಪ್ರ.ದ ಆರೋಗ್ಯ ಕ್ಷೇತ್ರದ ಸ್ಥಿತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು. ಬಿಆರ್​ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಶಿಶುಗಳ ಸಾವು ಭಾರಿ ಚರ್ಚೆಯನ್ನು ಹುಟ್ಟುಹಾಕಿತಲ್ಲದೆ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ಅಸ್ತ್ರವನ್ನೂ ಒದಗಿಸಿತು. ಸಮಾಜವಾದಿ ಪಕ್ಷ ಯೋಗಿ ರಾಜೀನಾಮೆಗೂ ಆಗ್ರಹಿಸಿತು. ಸಂಸತ್ತಿನಲ್ಲೂ ಪ್ರಕರಣ ಪ್ರತಿಧ್ವನಿಸಿತು. ಫರುಖಾಬಾದ್​ನ ಲೋಹಿಯಾ ಆಸ್ಪತ್ರೆಯಲ್ಲಿ 50 ಶಿಶುಗಳು ಸಾವನ್ನಪ್ಪಿದಾಗ, ಜನಾಕ್ರೋಶವೂ ತೀವ್ರಗೊಂಡಿತು. ಈ ಸಂದರ್ಭದಲ್ಲಿ ಸರ್ಕಾರ ಹಲವು ಬಾರಿ ಸ್ಪಷ್ಟನೆ ನೀಡಿತಲ್ಲದೆ, ಕೊರತೆಗಳನ್ನು ನಿವಾರಿಸುವ ಆಶ್ವಾಸನೆ ನೀಡಿತು. ಈ ಎರಡೂ ಆಸ್ಪತ್ರೆಗಳಲ್ಲಿ ನಡೆದ ಸರಣಿ ಸಾವುಗಳ ಕುರಿತು ತನಿಖೆಗೆ ಆದೇಶ ನೀಡಲಾಗಿದೆಯಾದರೂ, ಸರ್ಕಾರದ ವರ್ಚಸ್ಸಿಗೆ ಚ್ಯುತಿ ಬಂದದ್ದಂತೂ ಹೌದು. ಯೋಗಿ ಮಾತು

2017ರ ಮಾರ್ಚ್ ನಂತರ ಉ.ಪ್ರ.ದಲ್ಲಿ ಒಂದೂ ಗಲಭೆ ಸಂಭವಿಸಿಲ್ಲ. ಕಳೆದ ಆರು ತಿಂಗಳಲ್ಲಿ 430 ಎನ್​ಕೌಂಟರ್​ಗಳನ್ನು ನಡೆಸಲಾಗಿದ್ದು, ಕುಖ್ಯಾತ ರೌಡಿಗಳನ್ನು ಹೊಡೆದುರುಳಿಸಲಾಗಿದೆ. ಈ ಮೂಲಕ ಗೂಂಡಾರಾಜ್​ನ್ನು ಕೊನೆಗೊಳಿಸಲಾಗಿದೆ. ಅಪರಾಧ ಮತ್ತು ಅಪರಾಧಿಗಳನ್ನು ನಿಯಂತ್ರಿಸಲಾಗಿದೆ.

6 ತಿಂಗಳ ಅವಧಿಯಲ್ಲಿ 33 ಲಕ್ಷ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡಿ, ಈ ಮೂಲಕ ನಡೆಯುತ್ತಿದ್ದ ಅವ್ಯವಹಾರವನ್ನು ತಡೆಯಲಾಗಿದೆ.

ರಾಜ್ಯದಲ್ಲಿ ಜಿಎಸ್​ಟಿ ಜಾರಿ ನಂತರ ತೆರಿಗೆ ಸಂಗ್ರಹ ಶೇಕಡ 30ರಷ್ಟು ಹೆಚ್ಚಿದೆ, ಭೂಮಾಫಿಯಾಗಳಿಂದ ಸರ್ಕಾರಿ ಭೂಮಿಯನ್ನು ಮುಕ್ತಗೊಳಿಸಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ 1.5 ಲಕ್ಷ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲಾಗಿದೆ, 95% ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಲಾಗಿದೆ.

86 ಲಕ್ಷ ರೈತರ ಸಾಲಮನ್ನಾ ಮಾಡಲಾಗಿದೆ, ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರೈತೋತ್ಪನ್ನಗಳನ್ನು ಖರೀದಿಸಲಾಗಿದೆ.

ರೈತರ ಉಪಯೋಗಕ್ಕಾಗಿ ಸೋಲಾರ್ ಪಂಪ್​ಗಳನ್ನು ಅಳವಡಿಸಲಾಗಿದ್ದು, ನೀರಾವರಿ ವ್ಯವಸ್ಥೆ ವಿಸ್ತರಿಸಲಾಗಿದೆ.

ಸಚಿವರುಗಳು ಶ್ರಮವಹಿಸಿ, ಆಸ್ಥೆಯಿಂದ ಕೆಲಸ ಮಾಡುತ್ತಿರುವುದರಿಂದ ಜನರಲ್ಲಿ ಹೊಸ ವಿಶ್ವಾಸ ಹುಟ್ಟಿದೆ.

ರಸ್ತೆಗಳನ್ನು ಗುಂಡಿಮುಕ್ತ ಮಾಡುವ ಅಭಿಯಾನ ಅಕ್ಟೋಬರ್ 1ರಿಂದ ಆರಂಭವಾಗಲಿದೆ.

ಸರ್ಕಾರಿ ಕಚೇರಿಗಳನ್ನು ಅಕ್ಟೋಬರ್ 1ರಿಂದ ಹಂತ-ಹಂತವಾಗಿ ಇ-ಆಫೀಸ್​ನೊಂದಿಗೆ ಜೋಡಿಸಲಾಗುವುದು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 9.70 ಲಕ್ಷ ಜನರಿಗೆ ಮನೆಗಳನ್ನು ವಿತರಿಸಲಾಗುತ್ತಿದೆ.

16 ಲಕ್ಷ ಜನರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಈ ಪೈಕಿ 6 ಲಕ್ಷ ಜನರು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದವರು.

ಭ್ರಷ್ಟಾಚಾರದ ವಿರುದ್ಧ

ಹೊಸ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಆಕ್ರಾಮಕ ನಿಲುವು ತಳೆದಿದ್ದು, ಮುಂಚೆಗೆ ಹೋಲಿಸಿದರೆ ಲಂಚದ ಹಾವಳಿ ಕಡಿಮೆಯಾಗಿದೆ ಎಂದು ಜನಸಾಮಾನ್ಯರು, ವ್ಯಾಪಾರಿಗಳು ಪ್ರತಿಕ್ರಿಯಿಸಿದ್ದಾರೆ. ಯಾರಾದರೂ ಲಂಚ ಕೇಳಿದರೆ ನೇರ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಿ ಎಂದು ಯೋಗಿ ಜನರಿಗೆ ಕರೆ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಆಡಳಿತ ಸುಧಾರಣೆಗೆ ಯತ್ನ

ಆಡಳಿತದಲ್ಲಿ ಪಾರದರ್ಶಕತೆ ತರಲು ಯತ್ನಿಸಲಾಗುತ್ತಿದ್ದು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಕಾಸಕಾರ್ಯಗಳನ್ನು ಚುರುಕುಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಕಳೆದ 15 ವರ್ಷಗಳ ಆಡಳಿತ ಅಧಿಕಾರಶಾಹಿಯ ವಿಶ್ವಾಸವನ್ನೇ ಕೊನೆಗಾಣಿಸಿತ್ತು. ಹೀಗಾಗಿ, ಮತ್ತೆ ಅಧಿಕಾರಶಾಹಿಯಲ್ಲಿ ವಿಶ್ವಾಸ ತುಂಬಲು, ಆಡಳಿತಯಂತ್ರ ಚುರುಕುಗೊಳಿಸಲು ಯತ್ನಿಸುತ್ತೇವೆ. ಇದಕ್ಕೆ ಒಂದಿಷ್ಟು ಸಮಯಾವಕಾಶ ಬೇಕಾದರೂ ಕಳೆದ ಆರು ತಿಂಗಳಲ್ಲಿ ಗಣನೀಯ ಸುಧಾರಣೆಗಳನ್ನು ತರಲಾಗಿದೆ. ವಿದ್ಯುತ್ ಸಮಸ್ಯೆ ಗಂಭೀರವಾಗಿದ್ದು, ಇದರ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹೊರ ರಾಜ್ಯಗಳಿಂದಲೂ ವಿದ್ಯುತ್ ಖರೀದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಿಎಂ ಯೋಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 

Leave a Reply

Your email address will not be published. Required fields are marked *

Back To Top