Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ನಿಮ್ಮ ನೆರಳಲ್ಲೇ ಬೆಳೆಯಲು ಬಿಡಿ…

Saturday, 08.07.2017, 3:05 AM       No Comments

ಹೊಸ ತಲೆಮಾರು ನಗರಗಳ ಬಂಧ ಕಳಚಿ, ಹಳ್ಳಿಯ ಬೇರಿಗೆ, ಕೃಷಿಯ ಸುಖಕ್ಕೆ ಮರಳಲು ಹಾತೊರೆಯುತ್ತಿದೆ. ಆದರೆ, ಮನೆಯ ಹಿರಿಯರು, ಊರಿನ ಜನರೇ ಇವರಿಗೆ ನೈತಿಕ ಬೆಂಬಲ ನೀಡದಿದ್ದಾಗ ಭ್ರಮನಿರಸನಗೊಂಡು ಮತ್ತೆ ಪೇಟೆ ಹಾದಿ ತುಳಿಯುತ್ತಾರೆ. ಕೃಷಿಯೊಂದಿಗೆ ನಂಟು ಬೆಸೆಯಲು ಹೊರಟಿರುವ ಯುವ ಮನಸ್ಸುಗಳಿಗೆ ಬೆಂಬಲವಾಗಿ ನಿಂತರೆ, ಬದಲಾವಣೆ ಸಾಧ್ಯ.

 ‘ಮಂಗಳೂರಿನಲ್ಲಿರುವ ನನ್ನಣ್ಣನಿಗೆ ಭೂಮಿ ಬೇಕಾಗಿಯೇ ಇಲ್ಲ. ಕೃಷಿಯಲ್ಲಿ ಅವನಿಗೂ ಚೂರೂ ಆಸಕ್ತಿ ಇಲ್ಲ. ಅವನಲ್ಲಿ ಒಂದು ಮಾತು ಕೇಳಿದ್ರೆ ಅವನೇ ಬಿಟ್ಟು ಕೊಡುತ್ತಿದ್ದ. ಇರುವ ನಾಲ್ಕೆಕ್ರೆ ಜಮೀನನ್ನು ಎರಡು ಪಾಲು ಮಾಡಿ ಬರೀ ಎರಡೆಕ್ರೆ ನನಗೆ ಕೊಟ್ಟರೆ ನಾನೇನು ಮಾಡ್ಲಿ? ಈ ಜಾಗವನ್ನು ನಂಬಿಕೊಂಡೇ ಕೆಲಸ ಬಿಟ್ಟು ಬಂದೆ. ತಂದೆ-ತಾಯಿ ಜತೆಗೆ ನಾವಿದ್ರೆ ಅವರಿಗೂ ಭದ್ರತೆ ಎಂದೇ ಭಾವಿಸಿದ್ದೆ. ಈಗ ನೋಡಿದ್ರೆ ಅಣ್ಣನ ತಪ್ಪಿಲ್ಲ. ಅಪ್ಪನದೇ ತಪ್ಪು. ಅವರಿಗೆ ಒಂದು ಮಾತು ಕೇಳಿ ಈ ಜಾಗ, ಮನೆ ಪೂರ್ತಿ ನನಗೆ ಕೊಡಿಸಬಹುದಿತ್ತು. ಅಪ್ಪನಿಗೆ ನೀವಾದರೂ ಸ್ವಲ್ಪ ಹೇಳಿ ಸಾರ್’

ಬಾಯಾರಿನ ವೆಂಕಟೇಶ ಪ್ರಸನ್ನ ಒಂದುಕಾಲದ ನನ್ನ ವಿದ್ಯಾರ್ಥಿ. ಅವನ ಕೃಷಿ ಉಮೇದು ನೋಡಿ ಬೆರಗಾಗಿ ಜಗಲಿಯಲ್ಲಿ ಕೂತಿದ್ದೆ. ಹೌದಲ್ಲ? ಪ್ರಸನ್ನನ ತಂದೆ ರಾಮಕೃಷ್ಣ ಭಟ್ಟರಿಗೆ ಏನಾಗಿದೆ? ಹಿರಿಮಗ ಸೂರ್ಯನಾರಾಯಣ ಸಾಫ್ಟ್​ವೇರ್ ಇಂಜಿನಿಯರ್, ಕೈತುಂಬಾ ಸಂಬಳ, ಕೃಷಿ-ಕೆಸರು ಎಂದರೆ ಮಾರು ದೂರ ಮನಸ್ಸು. ಊರಿಗೆ, ನೆಲಕ್ಕೆ ಮತ್ತೆ ತಿರುಗಿ ಬರುವ ಸಾಧ್ಯತೆಯೇ ಇಲ್ಲ. ಅವನಿಗೆ ಎರಡೆಕ್ರೆ ಕೊಟ್ಟು ಅದನ್ನು ಪಾಳು- ಪಡಿಲು ಬಿಡುವ ಬದಲು ಕಿರಿಮಗನಿಗೇ ಕೊಡಬಹುದಿತ್ತಲ್ಲ? ಪ್ರಸನ್ನ ಎಲ್ಲದಕ್ಕೂ ಹಸುರು ಹಚ್ಚುತ್ತಿದ್ದ. ಬೆವರು ಹರಿಸಿ ದುಡಿಯುತ್ತಿದ್ದ. ತಂದೆ-ತಾಯಿಗೂ ಗಟ್ಟಿ ಆಸರೆಯಾಗುತ್ತಿದ್ದ. ಪ್ರಸನ್ನನ ಮಡದಿಯೂ ಹಳ್ಳಿಯವಳೇ ಕೃಷಿಯ ಬಗ್ಗೆ ಆಸಕ್ತಿ ಇದೆ. ಇದೆಲ್ಲ ಯಾಕೆ ಹೀಗೆ?

ರಾಮಕೃಷ್ಣ ಭಟ್ಟರು ಮಾತನಾಡಲು ಸಿಗಲಿಲ್ಲ. ಗಂಡ, ಹೆಂಡ್ತಿ ಬೆಂಗಳೂರಿಗೆ, ಹಿರಿಮಗನ ಮನೆಗೆ ಹೋದವರು ಬಂದಿರಲಿಲ್ಲ. ವೆಂಕಟೇಶ ಪ್ರಸನ್ನ ಮತ್ತೂ ಒಂದಷ್ಟು ಮಾತು ಸೇರಿಸಿದ, ‘ಸರ್, ನಮ್ಮ ಯುವಕರು ನಗರ ಕಳಚಿ ಮತ್ತೆ ಕೃಷಿಗೆ ಬರಬೇಕು. ಹಣ, ನಗರದ ಮೋಹ, ಬಣ್ಣ ಕಳಚಿ ಗ್ರಾಮಸುಖದಲ್ಲಿ ಲೀನವಾಗಬೇಕು. ಊರಲ್ಲಿ ಹಡಿಲು ಬಿದ್ದ ಪಾಳು ಭೂಮಿಗೆಲ್ಲ ಹಸಿರು ಹಚ್ಚಬೇಕು. ಶುದ್ಧ ನೀರು, ಗಾಳಿ, ಹಸಿರು, ಕೆಸರಿಗೂ ಬೆಲೆಯಿದೆ ಎಂದು ಬದುಕಬೇಕು ಎಂದೆಲ್ಲ ನೀವು ಆಗಾಗ ಬರೆಯುತ್ತಲೇ ಇದ್ದೀರಿ. ಹಾಗೆ ನಗರದ ಉದ್ಯೋಗ ಬಿಟ್ಟು ಬಂದ ನಮಗೆ ಹಿರಿಯರು ಬೆನ್ನು ತಟ್ಟುತ್ತಾರೆಯೇ? ನೈತಿಕವಾಗಿ ಬೆಂಬಲಿಸುತ್ತಾರೆಯೇ?’

‘‘ನನ್ನ ಕಿವಿಗೆ ಕೇಳಿಸುವಂತೆಯೇ ದಿನಕ್ಕೆ ನಾಲ್ಕೈದು ಜನ ನನ್ನಪ್ಪನಿಗೆ ಹೇಳುವುದಿದೆ. ‘ನಿಮಗಿನ್ನೂ ತೊಂದರೆಯಿಲ್ಲ. ಬಾಳಸಂಜೆಯಲ್ಲಿ ಪ್ರಸನ್ನ ಊರಿಗೆ ಬಂದದ್ದು ನಿಮಗೆ ಆಸರೆಯೇ ಆಯಿತು. ಕೃಷಿಯೂ ಅಭಿವೃದ್ಧಿ ಆಗುತ್ತದೆ’. ಇಂಥ ಯಾವ ಮಾತೂ ನನ್ನಪ್ಪನಿಗೆ ಖುಷಿಕೊಡುವುದೇ ಇಲ್ಲ. ಅವರ ಪ್ರಕಾರ ನಾನು ಊರಿಗೆ ವಾಪಾಸು ಬರಲೇ ಬಾರದಿತ್ತು. ನನ್ನಪ್ಪ ಮಾತ್ರವಲ್ಲ ಕೃಷಿಗೆ, ಹಳ್ಳಿಗೆ ತಿರುಗಿ ಬರುವ ಯಾವ ಮಕ್ಕಳ ಬಗ್ಗೆಯೂ ಹಿರಿಯರಿಗೆ ಸಹಮತ-ಸಮ್ಮತಿ ಇದ್ದ ಹಾಗಿಲ್ಲ’.

ಕೃಷಿಗೆ ಇವರೆಲ್ಲ ಅಯೋಗ್ಯರು, ನಾಲಾಯಕ್, ನಾವು ಮಾಡಿಟ್ಟಿದ್ದನ್ನು ಮುಗಿಸಲು ಬಂದವರು, ಹಳ್ಳಿಯಲ್ಲಿ ಇವರು ಗೆಲ್ಲುತ್ತಾರೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ. ಬ್ಯಾಂಕಿನಲ್ಲಿ ಲೋನು ಸಿಗುತ್ತದೆ. ಖರ್ಚು ಮಾಡುವ; ಅಪ್ಪ-ಅಮ್ಮ ನೆಟ್ಟಿದ್ದಾರೆ ನಾವಿನ್ನು ಕೊಯ್ದರಾಯಿತು ಎಂದೆಲ್ಲ ಬರುವವರೇ ಹೊರತು ಮೈ ಬಗ್ಗಿಸಿ ನಮ್ಮ ಹಾಗೆ ಇವರು ದುಡಿಯುವವರಲ್ಲ- ಹೀಗೆ ಜಗಲಿಯ ತುಂಬಾ ತಾಂಬೂಲ ಮೆಲ್ಲುತ್ತ, ಕಿರಿಯನನ್ನು ಕಿಚಾಯಿಸುವ ಅಪ್ಪಂದಿರ ಸಂಘವೇ ಮಲೆನಾಡಿನಲ್ಲಿ ಇದೆ.

ತೀರ್ಥಹಳ್ಳಿ-ಸಾಗರದ ಕಡೆ ಇಂಥ ಕುಟುಕು ಜಗಲಿ ಮಾತುಗಳು ಹೆಚ್ಚು. ಬೆಂಗಳೂರಿನಲ್ಲಿ ಕೂತು ಊರಿಗೆ ವಾಪಾಸು ಬರುವ ಕನಸು ಹೊತ್ತು, ಅಲ್ಲಿಂದಲೇ ಲ್ಯಾಪ್​ಟಾಪ್ ಒಳಗಡೆ ಊರಿನ ಹಡಿಲು ಭೂಮಿಗೆ ಬೇಲಿ ಬರೆದು, ಒಳಗಡೆಯೆಲ್ಲ ಹಸಿರು ಹಚ್ಚಿ ಕನಸಿನೊಳಗಡೆಯೇ ಬೇರು ಬಿಚ್ಚಿ ಊರಿಗೆ ಬಂದ ಯುವಕರನ್ನು ತಿಂಗಳ ಅವಧಿಯಲ್ಲಿ ಭ್ರಮನಿರಸನಗೊಳಿಸುವ ಹಿರಿಯರು ಕಡಿಮೆಯಿಲ್ಲ.

‘ಗೆಲ್ಲಲಿ, ಸೋಲಲಿ ಇಂಥವರಿಗೆ ಒಂದು ಸಲ ಛಾನ್ಸು ಕೊಟ್ಟು ನೋಡಲಿ. ಕೃಷಿಯಲ್ಲಿ ಫೇಲ್ ಆದರೂ ಒಂದು ಅನುಭವವೇ. ಗೆದ್ದರೆ ಕಣ್ಣಾರೆ ದೊಡ್ಡ ಯಶಸ್ಸು ಹಿರಿಯರಿಗೆ ಹೆಮ್ಮೆ’ ಹೀಗೆನ್ನುವ ಅರುಣ್ ಬೆಳ್ತಂಗಡಿಯ ಅಳದಂಗಡಿಯವರು. ಮೈಸೂರಲ್ಲಿ ಕೈತುಂಬಾ ವೇತನದ ಉನ್ನತ ಹುದ್ದೆಯಲ್ಲಿದ್ದವರು. ತಂದೆಯೊಂದಿಗೆ ಇರಬೇಕು. ಕೃಷಿಯಲ್ಲೇ ಬದುಕಬೇಕೆಂದು ಊರಿಗೆ ಬಂದವರು. ಮಡದಿಯ ಒತ್ತಾಸೆ, ಹಿರಿಯರ ಬೆಂಬಲ ಎರಡೂ ಇದೆ. ಅರುಣ್ ಗೆದ್ದಿದ್ದಾರೆ. ‘ಈ ಯಶೋಗಾಥೆ ಬರೀ ನನಗೆ ಮಾತ್ರ ಸೀಮಿತವಲ್ಲ. ನಗರ ಕಳಚಿ ಬರುವ ನನ್ನಂಥ ಬೇರೆ ಮನೆ ಮಕ್ಕಳದ್ದೂ ಆಗಬೇಕು ಅವರಿಗೆಲ್ಲ ಅವರ ಹಿರಿಯರು ಬೆನ್ನಿಗೆ ನಿಲ್ಲಬೇಕು. ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ.

ಮಹಾನಗರ ಕಳಚಿ ಹಳ್ಳಿಗೆ ಬರುವ ಇಂಥ ಯುವಕರು ಏಕಾಂಗಿಯಾಗಿ ಭೂಮಿ ಖರೀದಿಸಿ, ಯೋಜನೆ ರೂಪಿಸಿ, ನೆಲಕ್ಕೆ ಶರಣಾದಾಗ ಗೆಲ್ಲುವುದೇ ಹೆಚ್ಚು. ನಾನು ಗಮನಿಸಿದ ಹಾಗೆ ಕೂಡುಕುಟುಂಬದಲ್ಲಿ ಹೊಸ ಕೃಷಿಕನು ಸೋತದ್ದೇ ಹೆಚ್ಚು. ಕಾರಣ ಯುವಕರ ಹಸಿರ ವೇಗಕ್ಕೆ ಕಡಿವಾಣ ಹಾಕುವವರೇ ಹೆಚ್ಚುಮಂದಿ. ನಮ್ಮ ಹಿರಿಯರಿಗೆ ಮನೆ ಮಕ್ಕಳು ಬೇರೆ ಯಾವುದೇ ಕ್ಷೇತ್ರಕ್ಕೆ ಹೋಗಲಿ, ತೊಡಗಲಿ ನಂಬಿಕೆ ಬರುತ್ತದೆ. ಕೃಷಿಯೋ ಬೇಡವೇ ಬೇಡ ಎನ್ನುವವರೇ ಹೆಚ್ಚು. ಭೂಮಿಯನ್ನು ಮಟ್ಟಸ ಮಾಡಿ ಗಿಡ ನೆಡುತ್ತೇನೆ ಎಂದಾಗ, ಗ್ರೀಸ್​ಹೌಸ್ ನಿರ್ವಿುಸಿ ನರ್ಸರಿ ಮಾಡುತ್ತೇನೆ ಎಂದಾಗ ‘ಅದೆಲ್ಲ ಆಗುವ ಹೋಗುವ ಕೆಲಸವೇ’ ಎನ್ನುತ್ತ ಅಪ್ಪನ ವಾದಕ್ಕೆ ಅಮ್ಮನೂ ಮಾತು ಸೇರಿಸಿ ಭ್ರಮನಿರಸನ ಗೊಳಿಸುತ್ತಾಳೆ. ಮಗನ ಅರ್ಧ ಉಮೇದು ಅಲ್ಲೇ ಸ್ಥಗಿತಗೊಳ್ಳುತ್ತದೆ.

ಇಂಥ ಆಧುನಿಕ ಕೃಷಿಯಲ್ಲಿ ಅಪ್ಪ ಹಣಕ್ಕೆ ಬೆಲೆ ಕೊಡುವವ, ಮಗ ಸಮಯಕ್ಕೆ ಬೆಲೆ ಕೊಡುವವ. ನೆಲದಡಿಗೆ ಹಾಕಿದ ಪೈಪ್ ತೂತಾದರೆ ಅಪ್ಪ ಇಡೀ ದಿನ ಅಲ್ಲೇ ಅಗರು ಬಗೆದು ಅದೇ ಹಳೇ ಪೈಪ್​ನ್ನು ಜೋಡಿಸಿ ಬಿಡುತ್ತಾನೆ. ಮಗ ಹಾಗಲ್ಲ, ಅದರ ಮೇಲೆಯೇ ಮತ್ತೊಂದು ಹೊಸ ಪೈಪ್ ಹಾಕಿ ಅರ್ಧಗಂಟೆಯಲ್ಲಿ ನೀರು ಹಾಯಿಸಿ ಕೆಲಸ ಮುಗಿಸುತ್ತಾನೆ. ಅಪ್ಪ ಇಡೀ ದಿನದ ಕೆಲಸಕ್ಕೆ ಆಳಿಗೆ ಕೊಡುವ ಹಣದ ಅರ್ಧದಷ್ಟರಲ್ಲಿ ಮಗ ಕೆಲಸ ಪೂರೈಸುತ್ತಾನೆ! ಗಮನಿಸಿ, ಅಪ್ಪನ ಕೃಷಿಯಲ್ಲಿ ಸಮಯಕ್ಕೆ ಬೆಲೆಯೇ ಇಲ್ಲ. ಬರೀ ಹಣಕ್ಕೆ ಲೆಕ್ಕ. ಮಗನ ಕಾಲಕ್ಕೆ ಸಮಯಕ್ಕೆ ತುಂಬ ಬೆಲೆ.

ಕಿರಿಯರ, ಹೊಸಬರ ಕೃಷಿ ಆಸಕ್ತಿಯನ್ನು ನಿಸ್ತೇಜಗೊಳಿಸುವ ಇಂಥ ಅಪ್ಪಂದಿರ ಹಿರಿಯರ ಕಿರಿಕಿರಿಕೂಟದ ಎದುರು ಉತ್ಸಾಹಿ ಹಸಿರುವಾಸಿಗಳನ್ನು ನಿಲ್ಲಿಸಬೇಕು. ಹೌದು, ಬಹುಪಾಲು ಶೇಕಡ 80ರಷ್ಟು ಯುವಕರು ಬೇರೆಯೇ ಆಗಿ ನಿಲ್ಲಲು ಆಶಿಸುತ್ತಾರೆ. ಕಿರಿಯರ ವೇಗಕ್ಕೆ ಕಡಿವಾಣ ಮೂಗುದಾರ ಹಾಕಲು ಬಯಸುವ ಹಿರಿಯರ ಸಹವಾಸವೇ ಬೇಡ ಎನ್ನುವ ಇಂಥವರ ಉತ್ತರಗಳಲ್ಲೂ ತಿರುಳು ಇದೆ. ಆಂಧ್ರದ ವಿಜಯವಾಡದ ಬೆಂಕಿ ಬಿಸಿಲ ಸಹವಾಸದಿಂದ ಕಳಚಿ, ಗರಿಷ್ಠ ಸಂಬಳದ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟ ರವೀಂದ್ರ ಶೆಟ್ಟಿ ಇತ್ತೀಚೆಗೆ ಕೇರಳ-ವೈನಾಡಿನ ಕಡೆ ಎರಡೆಕ್ರೆ ಜಾಗ ಖರೀದಿಸಿ ನರ್ಸರಿ ಮಾಡಿ ಗೆದ್ದ ಯಶೋಗಾಥೆಯನ್ನು ಓದಿದ್ದೆ. ಪೇಟೆಯ ಒತ್ತಡ-ತ್ರಿಶಂಕು ಸ್ಥಿತಿಯಲ್ಲಿ ವಿಮುಖವಾದ ಬದುಕು ಅಷ್ಟೇ ವೇಗದಲ್ಲಿ ಹಳ್ಳಿಗೆ ಬಂದಿರುತ್ತದೆ. ಕೈಯಲ್ಲಿ ಒಂದಿಷ್ಟು ಕಾಸೂ ಇರುತ್ತದೆ. ಕೃಷಿ ಸಂಬಂಧಿ ಆಧುನಿಕ ಪರಿಕರ, ಯಂತ್ರಗಳು, ಬೆಳೆ-ಗೊಬ್ಬರ, ಪೋಷಣೆ, ಕೊಯ್ಲು, ಮಾರುಕಟ್ಟೆ ಎಲ್ಲದರ ಪರಿಚಯ ಮಾಡಿಕೊಂಡೇ ಇವರೆಲ್ಲ ಹಳ್ಳಿಗೆ ಬರುವವರು. ರಾಜೀನಾಮೆ ಕೊಡುವ ವರ್ಷಪೂರ್ವದಲ್ಲಿ ಇವರು ನೆಟ್​ಲ್ಲಿ ಕೃಷಿ ಪ್ರಯೋಗ, ಪ್ರಯತ್ನಗಳ ಬಗ್ಗೆ ಗುರಿನೆಟ್ಟು ಹುಡುಕಿ ಜಾಲಾಡಿ ಅಪೂರ್ವ ಮಾಹಿತಿಗಳನ್ನು ಬಗೆದಿರುತ್ತಾರೆ. ಒಮ್ಮೆ ಪೇಟೆ ಬಿಟ್ಟರೆ ಸಾಕಪ್ಪ ಎಂಬ ವೇಗದಲ್ಲೇ ಬಂದು ಇಂಥವರು ಕೆಸರಿಗೆ ಹೊಂದುಕೊಳ್ಳುತ್ತಾರೆ.

ಅಪ್ಪನ ಪ್ರಕಾರ, ಮಗ ಶಾಲೆ-ಕಾಲೇಜಿಗೆ ಹೋಗುವಾಗ ಹೊಲ ತೋಟಕ್ಕೆ ಇಳಿದವನಲ್ಲ. ಉಳುಮೆ- ಒಕ್ಕಲುತನ ಗೊತ್ತಿಲ್ಲ. ಬೀಜ ಪೋಷಣೆ ಗೊತ್ತಿಲ್ಲ. ಕೈಗೆ ಕೆಸರು ಮಾಡಿಕೊಂಡವನಲ್ಲ. ಸೀದಾ ಹಾಗೆ ಬಂದು ಹೀಗೆ ನಿಂತರೆ ಭೂಮಿ ಏನೂ ಕೊಡಲಾರದು. ಅದೊಂದು ತಪಸ್ಸು, ಯೋಗ ಎಂದೆಲ್ಲ ಮಾತುಗಳು. ತಂದೆಯ ಕೈ ಸ್ಪರ್ಶ, ಪರಂಪರೆಯ ಒಳಸುರಿಗಳು, ಹಿರಿಯರ ಅನುಭವಗಳೇ ಕೃಷಿಯ ಪಾಯ ಅಲ್ಲ. ಇದೆಲ್ಲ ಕೃಷಿಗೆ ಇಳಿಯುವವರಿಗೆ ಬೇಕು. ನಾವೆಲ್ಲ ಕೃಷಿಗೆ ಏರುವವರು. ನಮ್ಮ ಕೃಷಿಯಲ್ಲಿ ಬರೀ ಹಸಿರು ಮಾತ್ರವಲ್ಲ, ಹಣವೂ ಇರುತ್ತದೆ. ಲೆಕ್ಕ, ವಿಜ್ಞಾನವೂ ಇರುತ್ತದೆ. ಎನ್ನುವ ಆಧುನಿಕ ಭಗೀರಥರ ಬೆನ್ನಿಗೆ ನಾವೆಲ್ಲ ನಿಲ್ಲುವ ಎಂಬುದೇ ನನ್ನ ಒತ್ತಾಸೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top