Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ನಿಮ್ಮ ಕೈಯಲ್ಲಿರುವ ಪತ್ರಿಕೆಗೆ ಇವರೂ ಕಾರಣ!

Monday, 04.09.2017, 3:00 AM       No Comments

| ಇಮಾಮಹುಸೇನ್ ಗೂಡುನವರ ಬೆಳಗಾವಿ

ಇಂಟರ್​ನೆಟ್​ನಿಂದಾಗಿ ಬೆರಳ ತುದಿಯಲ್ಲೇ ಜಗತ್ತೇ ಬಂದು ನಿಂತಿದ್ದರೂ, ಮುಂಜಾವಿನಲ್ಲಿ ಕೈಗೆ ದಿನಪತ್ರಿಕೆ ಸಿಗದಿದ್ದರೆ ಮನಸ್ಸು ಚಡಪಡಿಸೋಕೆ ಶುರುವಾಗುತ್ತೆ. ಒಂದು ಕಪ್ ಬಿಸಿಬಿಸಿ ಕಾಫಿ/ಟೀ ಹೀರುತ್ತ, ಸುದ್ದಿಗಳ ಮೇಲೆ ಒಂದ್ಸಾರಿ ಕಣ್ಣಾಡಿಸಿದಾಗಲೇ ಮನಸ್ಸಿಗೆ ಸಮಾಧಾನ.

ಆದರೆ, ಈ ದಿನಪತ್ರಿಕೆಯನ್ನು ಬೆಳ್ಳಂಬೆಳಗ್ಗೆ ಮನೆ-ಮನಕ್ಕೆ ತಲುಪಬೇಕಾದರೆ ಅದರ ಹಿಂದೆ ಇರುವ ಶ್ರಮ ಅಷ್ಟಿಷ್ಟಲ್ಲ. ವರದಿ ಬರೆಯುವವರು- ಛಾಯಾಚಿತ್ರ ಕ್ಲಿಕ್ಕಿಸುವವರಿಂದ ಹಿಡಿದು ಅದನ್ನು ತಿದ್ದುವವರು, ಮುದ್ರಿಸುವವರು, ಮಧ್ಯ ರಾತ್ರಿಯೇ ವಾಹನದಲ್ಲಿ ತಂದು ಪ್ರತಿ ಗ್ರಾಮದ ದಿನಪತ್ರಿಕೆ ವಿತರಕರಿಗೆ ತಲುಪಿಸುವವರು, ನಸುಕಿನ ಜಾವವೇ ಎದ್ದು ಇಡೀ ಊರೆಲ್ಲ ಸುತ್ತಾಡಿ ಓದುಗರ ಕೈಗೆ ತಲುಪಿಸುವ ವಿತರಕರೂ ಸೇರಿ ಎಲ್ಲರ ಶ್ರಮ ಅಡಕವಾಗಿರುತ್ತದೆ.

ತುಸು ಹೆಚ್ಚೇ ಪರಿಶ್ರಮ: ಆದರೆ, ವರದಿಗಾರರು ಬಿಟ್ಟರೆ ಬೇರ್ಯಾವ ಸಿಬ್ಬಂದಿ ಶ್ರಮವೂ ಓದುಗರ ಗಮನಕ್ಕೆ ಬರುವುದು ವಿರಳ. ಅದರಲ್ಲೂ ದಿನಪತ್ರಿಕೆ ವಿತರಕರ ಬಗ್ಗೆ ಜನ ಲಕ್ಷ್ಯ ವಹಿಸುವುದೂ ಕಡಿಮೆ. ಆದರೆ, ಬೆಳಗಾಗುವ ಮುನ್ನವೇ ಓದುಗರ ಮನೆಗೆ ಪತ್ರಿಕೆ ಮುಟ್ಟಿಸುವವರ ಪರಿಶ್ರಮ ತುಸು ಹೆಚ್ಚೇ ಇರುತ್ತದೆ. ಒಂದರ್ಥ ದಲ್ಲಿ ಅವರೂ ಪತ್ರಕರ್ತರೇ.

ನಗರ- ಹಳ್ಳಿಗಳಲ್ಲಿ ಜನ ಬೆಳಗ್ಗೆ ದಿನಪತ್ರಿಕೆ ಹಾಕಿ, ನಂತರ ಬೇರೆ ಬೇರೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಇಂದು ದಿನಪತ್ರಿಕೆ ಹಾಕುವವರೂ ಪತ್ರಿಕೋದ್ಯಮದಲ್ಲೇ ಸಣ್ಣ- ಪುಟ್ಟ ಜವಾಬ್ದಾರಿ ವಹಿಸಿಕೊಳ್ಳುತ್ತ ಈ ಕ್ಷೇತ್ರದಲ್ಲೇ ನೆಲೆ ಕಂಡುಕೊಳ್ಳುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅಂಥ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ದಿನಪತ್ರಿಕೆ ಹಾಕುತ್ತಲೇ ಅಧ್ಯಯನಗೈಯ್ಯುತ್ತ, ಪ್ರಚಲಿತ ವಿದ್ಯಮಾನಗಳ ಮೇಲೆ ಆಗಾಗ ಕಣ್ಣು ಹಾಯಿಸುತ್ತ ಸರ್ಕಾರಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ. ಕೆಲವರು ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.

ಟ್ಯಾಕ್ಸಿ ಚಾಲಕರದ್ದು ಮಹತ್ವದ ಪಾತ್ರ

ಸಾಮಾನ್ಯವಾಗಿ ಎಲ್ಲ ದಿನಪತ್ರಿಕೆಗಳ ಮುದ್ರಣ ಕಚೇರಿಯಲ್ಲಿ ಮಧ್ಯರಾತ್ರಿ 12ಕ್ಕೆ ಮುದ್ರಣವಾಗಿ ಹೊರಬೀಳುತ್ತವೆ. ಆಗ ಟ್ಯಾಕ್ಸಿ ಚಾಲಕರು ಮುದ್ರಣ ಕಚೇರಿಯಿಂದ ದಿನಪತ್ರಿಕೆ ಸಂಗ್ರಹಿಸಿ, ನೂರು-ಇನ್ನೂರು ಕಿಮೀ ದೂರ ಕ್ರಮಿಸಿ ವಿತರಕರಿಗೆ ಮುಟ್ಟಿಸುತ್ತಾರೆ. ಈ ಕಾಯಕದಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯ. ಏಕೆಂದರೆ, ವಾಹನ ಬರುವುದು ಸ್ವಲ್ಪ ತಡವಾದರೂ ವಿತರಕನ ದಿನಚರಿಯೇ ಬದಲಾಗುತ್ತದೆ. ಸಮಯಕ್ಕೆ ತಕ್ಕಂತೆ ದಿನಪತ್ರಿಕೆ ಕೈಸೇರದೆ ಓದುಗರು ಪರದಾಡುವಂತಾಗುತ್ತದೆ. ಮನೆ ಮನೆಗೆ ವಿಜಯವಾಣಿ ತಲುಪಿಸುವ ಅಂಜನಾ

ಮಂಜುನಾಥ ಸಾಯೀಮನೆ ಶಿರಸಿ

ಹುಟ್ಟಿನಿಂದಲೇ ಬಡತನ, ಪಾಲಕರ ದುಡಿಮೆ ದೈನಂದಿನ ಖರ್ಚಿಗೆ ಸಮಾ. ಶಿಕ್ಷಣ ಕಲಿಯಬೇಕೆಂಬ ಈಕೆ, ತನ್ನ ಕನಸನ್ನು ಬಡತನಕ್ಕೆ ಬಲಿಕೊಡಲಿಲ್ಲ. ಸೈಕಲ್ ಏರಿ ಪ್ರತಿ ದಿನ ಬೆಳಗ್ಗೆ ಮನೆ ಮನೆಗೆ ‘ವಿಜಯವಾಣಿ’ ಹಂಚುವ ಮೂಲಕ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾಳೆ.

ಹೌದು, ನಗರದ ಎಂಇಎಸ್ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜ್​ನ 2ನೇ ವರ್ಷದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯ ಅಧ್ಯಯನ ಮಾಡುತ್ತಿರುವ ಹುಬ್ಬಳ್ಳಿ ರಸ್ತೆ ನಿವಾಸಿ ಅಂಜನಾ ಪರಸಪ್ಪ ಬನ್ನಿಗೋಳ, ಕಾಲೇಜ್​ನ ಫೀ, ಇನ್ನಿತರ ಖರ್ಚಿಗೆ ಪಾಲಕರನ್ನು ಆಶ್ರಯಿಸದೆ ತನ್ನ ದುಡಿಮೆಯಲ್ಲಿಯೇ ಓದು ಮುಂದುವರಿಸಿದ್ದಾಳೆ. ಅದಕ್ಕಾಗಿ ಕಂಡುಕೊಂಡ ಮಾರ್ಗ ಪತ್ರಿಕೆ ಹಂಚುವುದು. ಅವಳ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತವರು ‘ವಿಜಯವಾಣಿ’ ಏಜೆಂಟ್ ಎನ್.ಡಿ. ಹರಿಜನ. 6 ತಿಂಗಳಿಂದ ಪ್ರತಿ ದಿನ ಬೆಳಗ್ಗೆ 5.30ಕ್ಕೆ ಎದ್ದು ಎನ್.ಡಿ. ಹರಿಜನ ಅವರಿಂದ ಪತ್ರಿಕೆ ಪಡೆದುಕೊಳ್ಳುತ್ತಾಳೆ. ಸೈಕಲ್ ಏರಿ 6 ಗಂಟೆಯಿಂದ 7.30ರ ಒಳಗಾಗಿ ಎಪಿಎಂಸಿ ಪ್ರಾಂಗಣ, ಹುಬ್ಬಳ್ಳಿ ರಸ್ತೆಯ 100ಕ್ಕೂ ಅಧಿಕ ಮನೆಗಳಿಗೆ ‘ವಿಜಯವಾಣಿ’ ತಲುಪಿಸುತ್ತಾಳೆ. ಬಳಿಕ ಮನೆಗೆ ಬಂದು ದೈನಂದಿನ ಕೆಲಸಗಳನ್ನು ಮುಗಿಸಿ ಕಾಲೇಜ್​ಗೆ ಹೋಗುತ್ತಾಳೆ.

‘ಯಾವುದೇ ಕೆಲಸವನ್ನಾದರೂ ನಿಷ್ಠೆಯಿಂದ ಮಾಡಿದರೆ ಯಶಸ್ಸು ಖಂಡಿತ. ಶಿಕ್ಷಣ ಪೂರೈಸಿ ಸ್ವಂತ ಕಾಲ ಮೇಲೆ ನಿಲ್ಲುವ ಕನಸು ಹೊಂದಿದ್ದೇನೆ’ | ಅಂಜನಾ ವಿದ್ಯಾರ್ಥಿನಿ

 

ಪತ್ರಿಕೆ ವಿತರಣೆಗೆ ಅವಕಾಶ ಕೇಳಿದಾಗ ಹೆಣ್ಣು ಮಕ್ಕಳಿಂದ ಈ ಕೆಲಸ ಸಾಧ್ಯವೇ ಎಂದು ನಾನು ಹಿಂಜರಿದಿದ್ದೆ. ಆದರೆ, ಸಮಯಕ್ಕೆ ಸರಿಯಾಗಿ ಮನೆ ಮನೆ ಪತ್ರಿಕೆ ತಲುಪಿಸುವ ಅವಳ ಕಾಳಜಿ, ಶ್ರಮ ಪ್ರಶಂಸನಾರ್ಹ.

| ಎನ್. ಡಿ. ಹರಿಜನ ಪತ್ರಿಕಾ ಏಜೆಂಟ್


ಪತ್ರಿಕೆ ಹಂಚಿ ಲಕ್ಷಾಧೀಶರಾದರು!

ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಎದುರು ಪುಟ್ಟ ಸೈಕಲ್ ಇಟ್ಟುಕೊಂಡು, ಅದರ ಮೇಲೆಯೇ ನೂರಾರು ದಿನಪತ್ರಿಕೆ ಮಾರಾಟ ಮಾಡುವ ಇಳಿಜೀವವನ್ನು ನೀವು ಕಂಡಿರಬಹುದು. ಅವರ ಹೆಸರು ಸುದಯಕುಮಾರ. ರಾಯಚೂರು ಮೂಲದವರು. ವಯಸ್ಸು 62.

ಮನೆಯಲ್ಲಿ ಯಾವುದೋ ಕಾರಣಕ್ಕೆ ಜಗಳವಾಡಿದ್ದರಿಂದ 36 ವರ್ಷಗಳ ಹಿಂದೆ ರಾಯಚೂರಿನಿಂದ ನೇರವಾಗಿ ಬೆಳಗಾವಿ ಬಸ್ಸೇರಿದ ಸುದಯ, ಆರಂಭದಲ್ಲಿ ಪಾನ್​ಬೀಡಾ ಅಂಗಡಿ ನಡೆಸಿದರು. ಅದರಲ್ಲಿ ಭವಿಷ್ಯವಿಲ್ಲದ್ದನ್ನು ಕಂಡುಕೊಂಡ ಅವರು ನಂತರ ಮುಖಮಾಡಿದ್ದು ದಿನಪತ್ರಿಕೆ ವಿತರಣೆ ಕಡೆಗೆ. 1981ರಲ್ಲಿ ಬೆರಳೆಣಿಕೆ ದಿನಪತ್ರಿಕೆ ವಿತರಣೆ ಮಾಡುತ್ತ ಹೊಸ ಕೆಲಸಕ್ಕೆ ಕೈಹಾಕಿದ ಸುದಯ, ಇಂದು ಕನ್ನಡ, ಮರಾಠಿ, ಇಂಗ್ಲಿಷ್, ಉರ್ದು ಹಾಗೂ ತೆಲುಗು ಭಾಷೆಗಳ ದಿನಪತ್ರಿಕೆಗಳನ್ನು ಮಾರುತ್ತ ಅದರಲ್ಲಿ ಬಂದ ಆದಾಯದಲ್ಲೇ ಸ್ವಂತ ಮನೆ ಕಟ್ಟಿಕೊಂಡಿದ್ದಾರೆ. ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇಂತಹ ಹಲವಾರು ಸಾಹಸಗಾಥೆಗಳಿವೆ.

Leave a Reply

Your email address will not be published. Required fields are marked *

Back To Top