Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ನಿನ್ನ ನೀ ಅರಿತರೆ ಬಾಳು ಸುಂದರ

Tuesday, 14.11.2017, 3:00 AM       No Comments

| ಜಯಶ್ರೀ ಜೆ. ಅಬ್ಬಿಗೇರಿ

ಒಮ್ಮೆ ಹದ್ದಿನ ಮೊಟ್ಟೆಯೊಂದು ಅಚಾನಕ್ಕಾಗಿ ಕೋಳಿಯ ಗೂಡಿನಲ್ಲಿ ಸೇರಿಕೊಂಡಿತು. ತಾಯಿಕೋಳಿ ಆ ಮೊಟ್ಟೆಗೆ ಕಾವು ಕೊಡತೊಡಗಿತು. ಒಂದು ದಿನ ಮೊಟ್ಟೆಯಿಂದ ಹೊರಬಂದ ಹದ್ದಿನ ಮರಿ ತನ್ನನ್ನು ಕೋಳಿಯ ಮರಿಯೆಂದೇ ಭಾವಿಸಿತು, ಮಣ್ಣಿನಲ್ಲಿ ಬಿದ್ದಿದ್ದ ಕಾಳುಗಳನ್ನು ಕೋಳಿ ಮರಿಗಳಂತೆಯೇ ಕಾಲಿನಲ್ಲಿ ಕೆದಕಿ ತೆಗೆದು ಸೇವಿಸತೊಡಗಿತು. ಅದು ಬೆಳೆದಂತೆಲ್ಲ ಹಾರಲು ಪ್ರಯತ್ನಿಸಲಿಲ್ಲ; ಏಕೆಂದರೆ ಅದರ ಜತೆಗಿದ್ದ ಕೋಳಿಗಳು ಹಾರುತ್ತಿರಲಿಲ್ಲವಲ್ಲ!

ಒಮ್ಮೆ ಆ ಹದ್ದಿನ ಮರಿ ಆಕಾಶದಲ್ಲಿ ದೊಡ್ಡ ಪಕ್ಷಿಯೊಂದು ನಿರಂತರ ಹಾರಾಡುವುದನ್ನು ಕಂಡು ಬೆರಗಾಗಿ, ‘ಆಕಾಶದಲ್ಲಿ ಹಾರುತ್ತಿರುವ ಪಕ್ಷಿ ಯಾವುದು?’ ಎಂದು ಕೋಳಿಗೆ ಕೇಳಿತು. ಅದಕ್ಕೆ ಕೋಳಿ ಹೇಳಿತು- ‘ಅದು ಹದ್ದು, ಷಕ್ಷಿಗಳಲ್ಲಿಯೇ ಬಲಿಷ್ಠವಾದುದು. ಅದರಂತೆ ನೀನು ಹಾರಲಾರೆ. ಏಕೆಂದರೆ ನೀನೂ ನಮ್ಮ ಹಾಗೆ ಕೋಳಿ’. ಹದ್ದಿನ ಮರಿ ನಿಜ ಸಂಗತಿಯನ್ನು ತಿಳಿಯಲು ಹೋಗಲೇ ಇಲ್ಲ. ಕೋಳಿ ಹೇಳಿದ್ದೇ ಸತ್ಯ ಎಂದು ಭಾವಿಸಿತು. ತಾನು ಹದ್ದಾಗಿದ್ದರೂ ಜೀವನವಿಡೀ ಕೋಳಿಯಂತೆ ಬದುಕಿತು. ಕೊನೇತನಕವೂ ತನ್ನತನ ಅದರ ಅರಿವಿಗೆ ಬರಲೇ ಇಲ್ಲ. ಆಗಸದಲ್ಲಿ ಹಾರಲೆಂದೇ ಜನಿಸಿದ್ದ ಅದು ಕೋಳಿಯಂತೆಯೇ ತಿಪ್ಪೆಯ ಬದಿಯಲ್ಲಿ ಕೊರಗುತ್ತ ಬದುಕಿ, ಒಂದು ದಿನ ಸತ್ತುಹೋಯಿತು.

ಈ ಹದ್ದಿನ ಮರಿಯಂತೆ ಬಹುತೇಕರು ತಮ್ಮಲ್ಲಿರುವ ಅದಮ್ಯ ಶಕ್ತಿಯನ್ನು ತಿಳಿದುಕೊಳ್ಳುವುದೇ ಇಲ್ಲ. ಅಲ್ಪಬುದ್ಧಿಯ ಜನರೊಂದಿಗೆ ಸೇರಿ ತಮ್ಮ ಶಕ್ತಿ ಅಲ್ಪವಿದೆ ಎಂದು ಭಾವಿಸುತ್ತಾರೆ. ಸಾಧಕರ ಅದ್ಭುತ ಶಕ್ತಿಯನ್ನು ಕಂಡು ತಮ್ಮಲ್ಲಿ ಅಂಥ ಶಕ್ತಿ ಇಲ್ಲವಲ್ಲ ಎಂದು ಕೊರಗುತ್ತಾರೆ. ನಾವು ಯಾರೊಂದಿಗೆ ಇರುತ್ತೇವೆಯೋ ಅವರ ಪ್ರಭಾವ ನಮ್ಮ ಮೇಲೆ ಖಂಡಿತ ಆಗುತ್ತದೆ. ಸಾಧಕರೊಂದಿಗೆ ಸೇರಿಕೊಂಡರೆ ನಾವೂ ಸಾಧಕರಾಗುತ್ತೇವೆ ಎಂಬ ಗಮನಾರ್ಹ ಅಂಶವನ್ನು ನಾವು ಅರಿಯಬೇಕು. ಇತರರಿಗೆ ಹೋಲಿಸಿದಾಗ ನಮ್ಮಲ್ಲಿ ಏನೋ ಕೊರತೆಯಿದೆ ಎನ್ನುವ ಭ್ರಮೆಯಿಂದ ಹೊರಬರಬೇಕು. ನಮ್ಮ ರೂಪ, ಕುಟುಂಬದ ಹಿನ್ನೆಲೆ, ಆರ್ಥಿಕ ಪರಿಸ್ಥಿತಿ, ಜಾತಿ-ಮತ-ಧರ್ಮ ಏನಾದರೂ ಇರಲಿ, ಇವೆಲ್ಲ ನಮ್ಮ ವ್ಯಕ್ತಿತ್ವವನ್ನು ಕೀಳಾಗಿಸಿವೆ ಎಂದು ಬೇರೆಯವರು ಆಡಿಕೊಂಡರೆ ಅದನ್ನೇ ನಂಬಿ ‘ಅವರು ಹೇಳಿದ್ದು ಸರಿಯಿತ್ತು’ ಎಂಬಂತೆ ಸಾಬೀತುಪಡಿಸಿಬಿಡುತ್ತೇವೆ! ‘ತನ್ನನ್ನು ತಾನರಿಯುವುದೇ ಜೀವನದ ಪರಮ ಗುರಿ’ ಎಂದು ತತ್ತ್ವಜ್ಞಾನಿ ಸಾಕ್ರೆಟಿಸ್ ಹೇಳಿದ. ‘ನಿನ್ನ ನೀ ಅರಿ, ನಿನ್ನಲ್ಲಿ ಅತ್ಯದ್ಭುತ ಶಕ್ತಿ ಸಾಮರ್ಥ್ಯಗಳು ಅಡಗಿವೆ’ ಎಂದು ವಿಶ್ವಕ್ಕೆಲ್ಲ ವಿವೇಕ ನೀಡಿದರು ವಿವೇಕಾನಂದರು. ನಮ್ಮ ಶಕ್ತಿಯ ಕುರಿತು ನಕಾರಾತ್ಮಕ ಭಾವ ಹೊಂದಿದ್ದರೆ ಎಲ್ಲ ನಿರೀಕ್ಷೆಗಳು ಹುಸಿಯಾಗುತ್ತವೆ. ನಮ್ಮ ಬಲಗಳನ್ನು ಗುರುತಿಸಿ ಅದನ್ನು ಸಾಣೆ ಹಿಡಿಯಬೇಕು. ಇತರರು ಆಡಿದ ಅರ್ಥವಿಲ್ಲದ ಮಾತುಗಳನ್ನು ಅಲ್ಲಿಗೇ ಬಿಟ್ಟು ಸ್ವಯಂಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು. ಅಂತಃಚಕ್ಷು ತೆರೆದು ಒಳಗಿನ ಶಕ್ತಿಯನ್ನು ಗುರುತಿಸಿಕೊಳ್ಳದಿದ್ದರೆ ನಮಗೆ ವಿಧಿಸಿಕೊಂಡ ಸ್ವಯಂ ಗಡಿಯನ್ನು ದಾಟಲಾರೆವು. ಅರಳಿದ ಪ್ರಪುಲ್ಲವಾದ ಆನಂದಭರಿತ ಜೀವನ ಪಡೆಯಲಾರೆವು ಎಂಬುದು ಸರ್ವವಿದಿತ. ಹೀಗಾಗಿ

‘ನಿನ್ನ ನೀ ಅರಿ’ ಎಂಬ ತತ್ತ್ವ ಪಾಲಿಸಿ ಬಾಳು ಸುಂದರವಾಗಿಸಿಕೊಳ್ಳೋದು ಒಳಿತಲ್ಲವೇ?

(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top