Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ನಿತೀಶ್ ನರಿಯೇ ಸರಿ, ಆದರೆ ಮೋದಿ ಮೊದ್ದಾದದ್ದೇಕೆ?

Wednesday, 02.08.2017, 3:05 AM       No Comments

ನಿತೀಶ್ ಕುಮಾರ್ ಬಿಜೆಪಿಯನ್ನು 2002ರಿಂದಲೂ ಮಂಗ ಮಾಡುತ್ತಲೇ ಬಂದಿದ್ದಾರೆ. ಅದರಿಂದ ಮೋದಿ ಮತ್ತೆಮತ್ತೆ ತೊಂದರೆಗೊಳಗಾಗಿದ್ದಾರೆ. ಮೋದಿಯವರ ಬಗ್ಗೆ ನಿತೀಶ್​ಗೆ ವೈಯುಕ್ತಿಕ ದ್ವೇಷವಿದ್ದಿತ್ತೆಂಬುದರ ಸೂಚನೆ ಹಲವು ಸಲ ಕಂಡುಬಂದಿವೆ. ಇದೆಲ್ಲವನ್ನೂ ಬಿಜೆಪಿ, ಮೋದಿ ಇಂದು ಹೇಗೆ ಮರೆತುಬಿಟ್ಟರು?

ನಿತೀಶ್ ಕುಮಾರ್ ಜೆಡಿಯು ಪಕ್ಷವನ್ನು ಲಾಲು ಯಾದವ್​ರ ರಾಷ್ಟ್ರೀಯ ಜನತಾ ದಳದ ಜತೆಗಿನ ಮಹಾಮೈತ್ರಿಯಿಂದ ಹೊರತಂದದ್ದೂ ಆಯಿತು, ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟದ್ದೂ ಆಯಿತು, ಇಪ್ಪತ್ತನಾಲ್ಕು ಗಂಟೆಗಳಲ್ಲಿ ಬಿಜೆಪಿಯ ಜತೆಗೂಡಿ ಮತ್ತೆ ಮುಖ್ಯಮಂತ್ರಿಯಾದದ್ದೂ ಆಯಿತು. ಈ ಇಡೀ ಪ್ರಕರಣ ಎತ್ತಿತೋರುವುದು ನಿತೀಶ್​ರ ಸ್ವಾರ್ಥಪರ ಹುನ್ನಾರ ಮತ್ತದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಬಿಜೆಪಿ ತೋರಿದ ಪೆದ್ದುತನ. ಇದು ಕೇವಲ ಬಿಜೆಪಿಯ ಪೆದ್ದುತನವಲ್ಲ, ಇಂದಿನ ದಿನಮಾನದಲ್ಲಿ ರಾಜಕೀಯ ಚದುರಂಗದಾಟದ ಅದ್ವಿತೀಯ ಆಟಗಾರರೆನಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಾ ನಿತೀಶ್ ಕುಮಾರ್ ಎಂಬ ಗುಳ್ಳೆನರಿಯ ಒಳತೋಟಿಯನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ನಿತೀಶ್ ಬಿಜೆಪಿಯನ್ನು ಮಂಗ ಮಾಡಿದ್ದು ಇದೇ ಮೊದಲಲ್ಲ. ಅದು 2002ರಿಂದಲೂ ನಡೆಯುತ್ತಲೇ ಬಂದಿದೆ ಮತ್ತು ಅದರಿಂದ ಮೋದಿ ಮತ್ತೆಮತ್ತೆ ತೊಂದರೆಗೊಳಗಾಗಿದ್ದಾರೆ.

2002ರ ಗುಜರಾತ್ ಕೋಮು ಹಿಂಸಾಚಾರಕ್ಕೆ ಕಾರಣವಾದದ್ದು ಗೋಧ್ರಾ ರೈಲು ಹತ್ಯಾಕಾಂಡ. ಅದನ್ನು ಎಸಗಿದವರು ಕಾಂಗ್ರೆಸ್ ಬೆಂಬಲಿತ ಘಾಂಚಿ ಮುಸ್ಲಿಮರು. ಆದರೆ ಅದನ್ನು ಮುಚ್ಚಿಟ್ಟ ಕಾಂಗ್ರೆಸ್ ಪಕ್ಷ ಮತ್ತದರ ಕೃಪಾಪೋಷಿತ ಮಾಧ್ಯಮಗಳು ಮತ್ತು ಎನ್​ಜಿಓಗಳು ಎಲ್ಲ ತಪ್ಪನ್ನು ಮುಖ್ಯಮಂತ್ರಿ ಮೋದಿಯವರ ತಲೆಗೆ ಕಟ್ಟಿ ಅವರನ್ನು ನರಹಂತಕ, ಸಾವಿನ ವ್ಯಾಪಾರಿ ಎಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದೀಗ ಇತಿಹಾಸ. ಆ ಸಮಯದಲ್ಲಿ ಸತ್ಯವನ್ನು ಹೊರಗೆಡಹಲು ನೇಮಕವಾದ ನಾನಾವತಿ ಆಯೋಗಕ್ಕೆ ಗೋಧ್ರಾ ಪ್ರಕರಣದ ತನಿಖೆಯಲ್ಲಿ ಅಸಹಕಾರ ತೋರಿದ್ದು ಕೇಂದ್ರದ ರೈಲ್ವೆ ಮಂತ್ರಾಲಯ. ಆಗ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದವರು ಇದೇ ನಿತೀಶ್ ಕುಮಾರ್! ಅವರ ಈ ಕೃತ್ಯದಿಂದ ಮೋದಿ ತಾವು ಮಾಡದ ತಪ್ಪಿಗಾಗಿ ಮುಂದಿನ ಒಂದು ದಶಕದವರೆಗೆ ಹೆಸರಿಗೆ ಕಳಂಕ ಹೊತ್ತುಕೊಂಡು ಬದುಕಬೇಕಾಯಿತು.

ಮೋದಿಯವರ ಬಗ್ಗೆ ನಿತೀಶ್ ಕುಮಾರ್​ಗೆ ವೈಯಕ್ತಿಕ ದ್ವೇಷವಿದ್ದಿತೆಂಬುದರ ಸೂಚನೆಗಳು ಹಲವಾರು ಸಲ ಕಂಡುಬಂದಿವೆ. ಅದು ನಿಚ್ಚಳವಾಗಿ ಕಂಡುಬಂದದ್ದು ಮೋದಿಯವರನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಸೆಪ್ಟೆಂಬರ್ 2013ರಲ್ಲಿ ಘೊಷಿಸಿದಾಗ. ಇದಕ್ಕೆ ಸ್ವಲ್ಪ ಹಿನ್ನೆಲೆಯಿದೆ.

ನಿತೀಶ್ ಕುಮಾರ್ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದದ್ದು ಬಿಜೆಪಿಯ ಸಹಯೋಗದೊಂದಿಗೆ. ಆದರೆ, 2014ರಲ್ಲಿ ನಡೆಯಲಿದ್ದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ಕುದುರೆಯಲ್ಲ, ಅದರಿಂದ ತನಗೆ ಮರುವರ್ಷದ ಬಿಹಾರ ವಿಧಾನಸಭಾ ಚುನಾವಣೆಗಳಲ್ಲೂ ಯಾವ ಲಾಭವೂ ಆಗಲಾರದು ಎಂದು ನಿತೀಶ್ 2013ರ ಆದಿಯಲ್ಲೇ ಲೆಕ್ಕಹಾಕಿದರು. ಅದಕ್ಕೆ ಪೂರಕ ಕಾರಣಗಳನ್ನು ಸಷ್ಟಿಸಿದ್ದು ಬಿಜೆಪಿಯೇ.

ದಶಕದ ಹಿಂದೆ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿ ಅತ್ಯಲ್ಪ ಕಾಲದಲ್ಲಿ ಗುರುತೇ ಸಿಗದಷ್ಟು ಬದಲಾಗಿಹೋಯಿತು. ಅಮೆರಿಕ ಜತೆಗಿನ ನಾಗರಿಕ ಅಣು ಒಪ್ಪಂದ, ವಿದೇಶಿ ನೇರ ಹೂಡಿಕೆ ಸೇರಿದಂತೆ ಹಲವು ಹತ್ತು ವಿಷಯಗಳಿಗೆ ಸಂಬಂಧಿಸಿ ಅದರ ವರ್ತನೆ ಹಿಂದಿನ ನೀತಿಗಳಿಗೆ ಸಂಪೂರ್ಣ ವಿರುದ್ಧವಾಗಿಬಿಟ್ಟಿತು. ಒಂದು ಕಾಲದಲ್ಲಿ ಅದೆಲ್ಲವನ್ನೂ ಬಯಸಿದ್ದ, ಬೆಂಬಲಿಸಿದ್ದ ಬಿಜೆಪಿ 2005ರಿಂದೀಚೆಗೆ ಅವೆಲ್ಲವನ್ನೂ ಉನ್ಮಾದಕರವಾಗಿ ವಿರೋಧಿಸತೊಡಗಿ ತನ್ನದೇ ಕಟ್ಟಾ ಬೆಂಬಲಿಗರಲ್ಲಿ ಅನುಮಾನಗಳನ್ನು ಸಷ್ಟಿಸಿತು. ಅಧಿಕಾರ ಕಳೆದುಕೊಂಡ ನಿರಾಶೆಯಿಂದಲೋ, ಅದು ಮತ್ತೆ ಸಿಗಲಾರದೆಂಬ ಹತಾಶೆಯಿಂದಲೋ ಬಿಜೆಪಿ ಐದಾರು ವರ್ಷಗಳವರೆಗೆ ಸಂಸತ್ತಿನಲ್ಲಿ ಮತ್ತೆಮತ್ತೆ ಮೊಂಡಾಟದ ಚಂಡಿಯಂತೆ ವರ್ತಿಸಿ ಕಲಾಪಗಳನ್ನು ಪದೇಪದೇ ಅಸ್ತವ್ಯಸ್ತಗೊಳಿಸಿದ್ದು ಕಳೆದ ದಶಕದ ರಾಷ್ಟ್ರರಾಜಕಾರಣದ ಅತಿ ದೊಡ್ಡ ದುರಂತಗಳಲ್ಲೊಂದು. ಹೀಗಾಗಿ, ಬಿಜೆಪಿಯ ಸಖ್ಯ ತಮಗೆ ಮುಂದಿನ ಚುನಾವಣೆಗಳಲ್ಲಿ ಅನಾನುಕೂಲಗಳನ್ನು ತಂದೊಡ್ಡಬಹುದೆಂಬ ಸಂಶಯ ಅದರ ಪ್ರಮುಖ ಸಹಯೋಗಿಗಳಲ್ಲಿ ಮೂಡಲು ಅವಕಾಶವಾಯಿತು. ಬಿಜೆಪಿ ಒಂದು ಮುಳುಗುವ ಹಡಗು ಎಂದು ತೀರ್ವನಿಸಿ ಅದರ ಸಂಗವನ್ನು ಮೊದಲು ತೊರೆದದ್ದು ಒಡಿಶಾದ ಬಿಜು ಜನತಾ ದಳ. ಅಂತಹದೇ ನಡೆಗೆ ನಿತೀಶ್ ಕುಮಾರ್ ಮುಂದಾದದ್ದು ಮೋದಿ ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೊಷಿಸಿದಾಗ. ಅವರ ಈ ಕೃತ್ಯಕ್ಕೆ ಬಿಜೆಪಿ ಮುಳುಗುವ ಹಡಗು ಎಂಬ ಕಾರಣದ ಜತೆಗೆ ಮೋದಿಯವರ ಬಗ್ಗೆ ನಿತೀಶ್ ಕುಮಾರ್​ಗಿದ್ದ ವೈಯುಕ್ತಿಕ ದ್ವೇಷ ಅಸಹನೆಗಳೂ ಕಾರಣವಾಗಿದ್ದವು. ಮೋದಿಯವರ ಹೆಸರಿಗೆ ಹತ್ತಿದ ಮಸಿಯಿಂದಾಗಿ ಇನ್ನು ಬಿಜೆಪಿಯ ಇತಿಶ್ರೀಯಾದಂತೇ ಎಂದು ತೀರ್ವನಿಸಿದ ನಿತೀಶ್ ಮುಂದಿನ ಚುನಾವಣೆಗಳಲ್ಲಿ ತನಗೆ, ತನ್ನ ಪಕ್ಷಕ್ಕೆ ಗೆಲುವು ತರುವ ಅತ್ಯುತ್ತಮ ಮಾರ್ಗವೆಂದರೆ ಬಿಜೆಪಿಯಿಂದ ದೂರ ಸರಿದು ಕಾಂಗ್ರೆಸ್ಸನ್ನು ಅಪ್ಪಿಕೊಳ್ಳುವುದು ಎಂದು ರ್ತಸಿದರು. ಒಂದು ಹಂತದಲ್ಲಿ ಅವರ ಬಿಜೆಪಿ-ವಿರೋಧಿ, ಮೋದಿ-ವಿರೋಧಿ ನಿಲುವುಗಳು ಅದೆಂತಹ ಮಟ್ಟಕ್ಕೆ ಹೋದವೆಂದರೆ ಮೋದಿಯವರ ಹತ್ಯೆಗಾಗಿ ಗುಜರಾತ್​ಗೆ ತೆರಳಿದ್ದ ಲಷ್ಕರ್-ಇ-ತೋಯ್ಬಾ ಭಯೋತ್ಪಾದಕಿ ಇಶ್ರತ್ ಜಹಾನ್​ಳನ್ನು ಬಿಹಾರ್ ಕಿ ಬೇಟಿ ಎಂದು ನಿತೀಶ್ ಬಣ್ಣಿಸಿದರು!

ಆದರೆ ಮುಂದಿನ ನಾಲ್ಕೈದು ತಿಂಗಳುಗಳಲ್ಲಿ ನಿತೀಶ್ ಊಹಿಸಿಯೇ ಇರದಂತಹಾ ಅಚ್ಚರಿಯ ಬೆಳವಣಿಗೆಗಳು ಘಟಿಸಿಹೋಗಿ ಅವರ ಎಲ್ಲ ತರ್ಕಗಳು ಹುಸಿಯಾಗತೊಡಗಿದವು. ಚುನಾವಣೆಗಳು ಹತ್ತಿರಾಗುತ್ತಿದ್ದಂತೇ ತನ್ನ ರಾಜಕೀಯ ಮೊಂಡಾಟಗಳನ್ನು ಅತಿಶೀಘ್ರವಾಗಿ ಬದಲಿಸಿಕೊಂಡ ಬಿಜೆಪಿ ಲೋಕಸಭೆಯ ಕಲಾಪಗಳಿಗೆ ತಡೆಯೊಡ್ಡುವುದನ್ನು ನಿಲ್ಲಿಸಿ ಹಲವು ಜನಪರ ಮಸೂದೆಗಳು ಜಾರಿಯಾಗಲು ಸಹಕಾರ ನೀಡಿತು. ಪರಿಣಾಮವಾಗಿಯೇ ಕೋಟ್ಯಂತರ ಬಡವರಿಗೆ ಅನುಕೂಲವಾಗಬಲ್ಲ ಆಹಾರ ಭದ್ರತೆಯ ಮಸೂದೆ, ಮಹಿಳೆಯರ ವಿರುದ್ಧದ ದೌರ್ಜನ್ಯವನ್ನು ತಡೆಗಟ್ಟುವ ಅಪರಾಧ ಕಾನೂನು (ತಿದ್ದುಪಡಿ) ಮಸೂದೆ, 2013, ಪಿಂಚಣಿ ಮಸೂದೆ ಹಾಗೂ ಭ್ರಷ್ಟಾಚಾರ ನಿಗ್ರಹದ ಲೋಕಪಾಲ್ ಮಸೂದೆಯಂತಹ ಹಲವು ಪ್ರಮುಖ ಮಸೂದೆಗಳು ಯಾವುದೇ ತೀವ್ರ ಅಡೆತಡೆಯಿಲ್ಲದೇ ಸಂಸತ್ತಿನಲ್ಲಿ ಅಂಗೀಕಾರ ಪಡೆಯುವಂತಾಯಿತು. ಅದರಲ್ಲೂ, ಆಹಾರ ಭದ್ರತೆಯ ಮಸೂದೆಯ ಬಗ್ಗೆ ಬಿಜೆಪಿಯ ಸಹಮತವಿದ್ದಾಗ್ಯೂ ಬಡಜನತೆಗೆ ತಾನೇ ಅನ್ನದಾತ ಎಂಬಂತೆ ಬಿಂಬಿಸುವ ಹುನ್ನಾರದಿಂದ ಆಹಾರದ ಪ್ರಶ್ನೆಯನ್ನು ತನ್ನ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲು ಆ ಬಗ್ಗೆ ಸುಗ್ರೀವಾಜ್ಞೆಯೊಂದನ್ನು ಕಾಂಗ್ರೆಸ್ ಸರ್ಕಾರ ಹೊರಡಿಸಿದರೂ ಅದರ ಬಗ್ಗೆ ಹೆಚ್ಚು ಗೊಂದಲ ಸೃಷ್ಟಿಸದೇ ಮಸೂದೆಯ ಪರವಾಗಿ ನಿಂತ ಬಿಜೆಪಿ ರಾಜಕೀಯ ಪ್ರಬುದ್ಧತೆ ಪ್ರದರ್ಶಿಸಿತು. ಅಂತಿಮವಾಗಿ, ಕಾಂಗ್ರೆಸ್​ನ ಕುತಂತ್ರ ಅದನ್ನೊಂದು ಸಂಚುಗಾರನಂತೆ ಬಿಂಬಿಸಿತಷ್ಟೇ ಅಲ್ಲ, 2013ರ ಡಿಸೆಂಬರ್​ನಲ್ಲಿ ನಡೆದ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಅದಕ್ಕೆ ಪ್ರತಿಕೂಲ ಫಲಿತಾಂಶವನ್ನೂ ತಂದಿತು. ಬಿಜೆಪಿಯ ಉತ್ಕರ್ಷದ ಯುಗ ಮತ್ತೆ ಆರಂಭವಾಗಿತ್ತು.

ನಿತೀಶ್​ರ ನಿದ್ದೆಗೆಡಿಸಿದ್ದು ಇದಿಷ್ಟೇ ಅಲ್ಲ, ಅವರ ನಿರೀಕ್ಷೆಗೆ ವಿರುದ್ಧವಾಗಿ ನರೇಂದ್ರ ಮೋದಿ ರಾಷ್ಟ್ರದಾದ್ಯಂತ ಜನಪ್ರಿಯತೆ ಗಳಿಸತೊಡಗಿದರು. ನಿತೀಶ್​ರ ಮೂಗಿನ ಕೆಳಗೇ, ಅಂದರೆ ಪಟನಾದಲ್ಲೇ ಮೋದಿಯವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗತೊಡಗಿದ್ದು ಜೆಡಿಯುನ ಈ ನಾಯಕನ ಎಲ್ಲ ಲೆಕ್ಕಾಚಾರಗಳನ್ನೂ ಸಂಪೂರ್ಣವಾಗಿ ತಲೆಕೆಳಗುಮಾಡಿತು. ಅವರನ್ನು ಕಂಗೆಡಿಸಿದ ಮತ್ತೊಂದು ಸಂಗತಿಯೆಂದರೆ ಕಾಂಗ್ರೆಸ್​ನಿಂದ ನಿರೀಕ್ಷಿತ ಇಂಪು ಸಂಗೀತ ಅವರ ಕಿವಿಗೆ ಬೀಳಲಿಲ್ಲ. ಹೀಗಾಗಿ ನಿತೀಶ್​ರ ಮುಂದೆ ಕಂಡ ಹಾದಿಗಳು ಎರಡೇ ಎರಡು. ಒಂದು- ಹಳೆಯ ಗಂಡನ ಪಾದವೇ ಗತಿ ಎಂದು ಬಿಜೆಪಿಯ ತೆಕ್ಕೆಗೆ ಮತ್ತೆ ಹಿಂತಿರುಗುವುದು, ಎರಡು- ಕಾಂಗ್ರೆಸ್​ನಿಂದಲೂ ದೂರ ನಿಂತು ಸ್ವತಂತ್ರವಾಗಿ ಚುನಾವಣಾ ಕಣಕ್ಕಿಳಿಯುವುದು.

ಆದರೆ ನಿತೀಶ್​ರ ದುರದಷ್ಟವೆಂಬಂತೆ ಮೊದಲನೆಯ ಹಾದಿ ಅಷ್ಟರಲ್ಲಿ ಮುಚ್ಚಿಹೋಗಿತ್ತು. ಪಟನಾದಲ್ಲಿ ನಡೆದ ಬಿಜೆಪಿ ರ್ಯಾಲಿಗೆ ಅಗತ್ಯ ಸುರಕ್ಷೆಯನ್ನು ಒದಗಿಸದೇಹೋದದ್ದು, ಅದು ಮೋದಿಯವರ ಪ್ರಾಣಕ್ಕೇ ಗಂಡಾಂತರಕಾರಿಯಾಗಬಹುದಾಗಿದ್ದದ್ದು ನಿತೀಶ್​ರನ್ನು ಬಿಜೆಪಿಯ ದೃಷ್ಟಿಯಲ್ಲಿ ಒಬ್ಬ ಅಕ್ಷಮ್ಯ ಅಪರಾಧಿಯಂತೆ ನಿಲ್ಲಿಸಿಬಿಟ್ಟಿತ್ತು. ಈ ಕಟುವಾಸ್ತವವನ್ನು ಅರಿಯುವುದು ಈ ನರಿ ನಿತೀಶ್​ಗೆ ಕಷ್ಟವೇನೂ ಆಗಲಿಲ್ಲ. ಜತೆಗೆ, ಮತದಾರರ ಮನಸ್ಸನ್ನು ಬಿಜೆಪಿಯಿಂದ ಸೆಳೆದು ತನ್ನೆಡೆಗೆ ತಿರುಗಿಸಿಕೊಳ್ಳಲಾಗದ ಅಸಹಾಯಕತೆಯೂ ಅವರ ಅರಿವಿಗೆ ಬಂತು. ಕಾಂಗ್ರೆಸ್​ನಿಂದಲೂ ದೂರ ನಿಲ್ಲುವ ಎರಡನೆಯ ಮಾರ್ಗವನ್ನು ಆವರು ಅನಿವಾರ್ಯವಾಗಿ ಆಯ್ಕೆಮಾಡಿಕೊಳ್ಳಬೇಕಾಯಿತು. ಅದರ ಅಂಗವಾಗಿ ಮತ್ತೊಂದು ರಾಜಕೀಯ ಲಾಗ ಹಾಕಲುಹೋದ ನರಿ ನಿತೀಶ್ ಬಿಹಾರದ ಎಲ್ಲ ಸಂಕಷ್ಟಗಳಿಗೆ ಕಾಂಗ್ರೆಸ್ ಪಕ್ಷವನ್ನು ಹೊಣೆಯಾಗಿಸುವ ಹಂಚಿಕೆ ರೂಪಿಸಿದರು. ಅದರ ಪ್ರಕಾರ, ಕೇಂದ್ರದ ಕಾಂಗ್ರೆಸ್ ಸರ್ಕಾರದ ಮುಂದೆ ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನದ ಬೇಡಿಕೆಯಿಟ್ಟು ನಿತೀಶ್ 2014ರ ಮಾರ್ಚ್​ನಲ್ಲಿ ರಾಜ್ಯವ್ಯಾಪಿ ಬಂದ್​ಗೆ ಕರೆನೀಡಿದರು. ತಮ್ಮ ಈ ಕತ್ಯವನ್ನು ಮಹಾತ್ಮ ಗಾಂಧಿಯವರ ಸತ್ಯಾಗ್ರಹಕ್ಕೆ ಹೋಲಿಸಿಕೊಂಡ ಅವರ ಆಷಾಢಭೂತಿತನದಲ್ಲಿ ಎದ್ದುಕಂಡದ್ದು ತಮ್ಮ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳುವ ಹುನ್ನಾರವಷ್ಟೇ ಅಲ್ಲ, ಕೆಲವೇ ವಾರಗಳಲ್ಲಿ ಆರಂಭವಾಗಲಿದ್ದ ಲೋಕಸಭಾ ಚುನಾವಣೆಗಳಲ್ಲಿ ಪೂರ್ಣ ಸೋಲನ್ನು ತಡೆಯುವ ಹತಾಶ ಪ್ರಯತ್ನವೂ ಸಹಾ.

ಈ ವಿಧಾನಗಳಿಂದ ಕಾಂಗ್ರೆಸ್​ನಿಂದ ಕಸಿದ ಮತಗಳು ತಮ್ಮ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ವಿಜಯ ತಂದುಕೊಡುತ್ತವೆ ಎಂದೇನೂ ನಿತೀಶ್ ನಂಬಿರಲಿಲ್ಲ. ಬಿಜೆಪಿಯಿಂದ ಸಂಪೂರ್ಣ ಮುಖಭಂಗ ಅನುಭವಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಸ್ಥಿತಿಯಿಂದ ತಪ್ಪಿಸಿಕೊಳ್ಳುವುದಷ್ಟೇ ಆಗ ಅವರಿಗಿದ್ದ ಏಕೈಕ ಉದ್ದೇಶ. ಆ ಉದ್ದೇಶದಲ್ಲಿ ಅವರು ಸಫಲರಾದರೇನೋ ನಿಜ, ಆದರೆ, ಅವರ ಮುಂದೆ ಭೂತಾಕಾರವಾಗಿ ಎದ್ದುನಿಂತದ್ದು ಇನ್ನು ಒಂದೂವರೆ ವರ್ಷದಲ್ಲಿ ಎದುರಿಸಬೇಕಾಗಿದ್ದ ಬಿಹಾರ ವಿಧಾನಸಭಾ ಚುನಾವಣೆ. ಆಗ ಮತ್ತೊಂದು ಪಲ್ಟಿ ಹೊಡೆದ ನಿತೀಶ್ ಅಧಿಕಾರ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಭ್ರಷ್ಟಾಚಾರಿ ಲಾಲು ಜತೆ ಕೂಡಿಕೊಳ್ಳುವ ನೀಚಮಟ್ಟಕ್ಕಿಳಿದರು. ಅವರ ಅದಷ್ಟವೋ ಎಂಬಂತೆ ಬಿಹಾರ್ ಚುನಾವಣೆಗಳನ್ನು ಬಿಜೆಪಿಯ ವಿರುದ್ಧದ ಸಮರ ಎಂದು ತಿಳಿದ ಇಡೀ ಕಾಕ (ಕಾಂಗ್ರೆಸ್-ಕಮ್ಯೂನಿಸ್ಟ್) ಪಡೆ ನಿತೀಶ್ ಬೆನ್ನಿಗೆ ನಿಂತಿತು. ಈ ದುಷ್ಟಕೂಟಕ್ಕೆ ಸೇರಿದ ರಾಜಕೀಯ ಪಕ್ಷಗಳು, ಮಾಧ್ಯಮಗಳು, ವಿಚಾರವಾದಿಗಳು ಎಲ್ಲರೂ ಒಟ್ಟಿಗೆ ಸೇರಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ, ಆರ್​ಎಸ್​ಎಸ್, ಹಿಂದುಗಳನ್ನು ಅವಮಾನಿಸಲು ‘ಅಸಹಿಷ್ಣುತೆ‘ ಎಂಬ ಬೊಬ್ಬೆ ಹೊಡೆಯತೊಡಗಿದರು, ಅಗಾಧ ಪ್ರಚಾರದೊಂದಿಗೆ ಅವಾರ್ಡ್ ವಾಪಸಿ ಎಂಬ ನಾಟಕವೂ ಶುರುವಾಯಿತು. ಪರೋಕ್ಷವಾಗಿ ಇದೆಲ್ಲದರ ಹಿಂದಿದ್ದದ್ದು ನಿತೀಶ್ ಎಂಬ ನರಿ. ಬಿಜೆಪಿಯನ್ನು, ಮೋದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಲು ಅವರು ನಡೆಸಿದ ಪ್ರಯತ್ನಗಳು ಹಲವಾರಿದ್ದವು. ‘ಭಾರತ್ ಕಿ ಬರ್ಬಾದಿ’ ಕುಖ್ಯಾತಿಯ ಕನ್ಹಯ್ಯಾ ಕುಮಾರ್​ಗೆ ನಿತೀಶ್ ಧನಸಹಾಯ ನೀಡಿದರೆಂಬ ಮಾತೂ ಇದೆ. ಇದೆಲ್ಲವನ್ನೂ ಬಿಜೆಪಿ, ಮೋದಿ ಇಂದು ಹೇಗೆ ಮರೆತುಬಿಟ್ಟರು?

ತಮ್ಮ ತಂತ್ರಗಳಿಂದ ನಿತೀಶ್ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡರೇನೋ ನಿಜ. ಆದರೆ ಲಾಲು ಎಂಬ ಸಗಣಿಯವನೊಡನೆ ಸರಸವಾಡುವುದಕ್ಕಿಂತ ಮೋದಿ ಎಂಬ ಗಂಧದವನೊಡನೆ ಗುದ್ದಾಡುವುದೇ ಲೇಸು ಎಂಬ ತೀರ್ವನಕ್ಕೆ ಬರಲು ನಿತೀಶ್​ಗೆ ಹೆಚ್ಚುಕಾಲ ಬೇಕಾಗಲಿಲ್ಲ. ರಾಜಕೀಯ ಪೆಂಡ್ಯುಲಂನಂತೆ ವರ್ತಿಸುವ ಜಾಯಮಾನದ ನಿತೀಶ್​ರ ಇದುವರೆಗಿನ ವರ್ತನೆಗಳೆಲ್ಲವೂ ಎತ್ತಿತೋರುವುದು ಅವರು ಎಂದಿಗೂ ಯಾರಿಗೂ ನಂಬಿಗಸ್ತ ಸಹಯೋಗಿಯಾಗಲಾರರು, ಇತರರನ್ನು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಂಡು ದೂರ ತಳ್ಳುವುದಷ್ಟೇ ಅವರ ಜಾಯಮಾನ ಎನ್ನುವುದನ್ನು. ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲೇಬೇಕು ಎಂಬ ಏಕೈಕ ಉದ್ದೇಶದಿಂದ ಅವರು ಇನ್ನು ಮುಂದೆಯೂ ಯಾವ ಲಾಗವನ್ನಾದರೂ ಹಾಕಲು ಹಿಂಜರಿಯಲಾರರು. ಇವರನ್ನು ಬೆನ್ನಿಗೆ ಕಟ್ಟಿಕೊಂಡು ಬಿಜೆಪಿ 2019 ಚುನಾವಣೆಗೆ ಹೋದರೆ ಕಪ್ಪೆಯನ್ನು ತಕ್ಕಡಿಯಲ್ಲಿಟ್ಟುಕೊಂಡು ಮಾರುಕಟ್ಟೆಗೆ ಹೋದಂತೆ ಅಷ್ಟೇ.

ಅಧಿಕಾರದ ಹಪಾಹಪಿಯ ನರಿ ನಿತೀಶ್ ದಾಖಲೆಯ ಆರನೆಯ ಬಾರಿ ಬಿಹಾರದ ಮುಖ್ಯಮಂತ್ರಿಯಾಗಲು ಸಹಕರಿಸಿದ್ದರಲ್ಲಿ ಮೋದಿ ಹಾಗೂ ಅಮಿತ್ ಷಾ ಅವರುಗಳ ಒಳಹಂಚಿಕೆಗಳೇನಿವೆಯೋ. ಆದಾಗ್ಯೂ, ಎಲ್ಲಕ್ಕಿಂತ ಉತ್ತಮವಾದ ಹಾದಿ ಬೇರೆಯದೇ ಇತ್ತು. ಲಾಲು ಜತೆ ಇನ್ನಷ್ಟು ಕಾಲ ಏಗಲು ನಿತೀಶ್​ರಿಗೆ ಬಿಟ್ಟು ತಮಾಷೆ ನೋಡುವುದು ಬುದ್ಧಿವಂತಿಕೆಯಾಗುತ್ತಿತ್ತು. ಮುರಿಯಲೆಂದೇ ಹುಟ್ಟಿದ್ದ ಮಹಾಘಟಬಂಧನ ಬೀದಿರಂಪ ಮಾಡಿಕೊಂದು ಮುರಿದುಬಿದ್ದಾಗ ಭ್ರಮನಿರಸನಗೊಂಡ ಬಿಹಾರದ ಜನತೆಯ ಒಲವು ಸಹಜವಾಗಿಯೇ ಬಿಜೆಪಿಯತ್ತ ತಿರುಗುತ್ತಿತ್ತು, ಎದುರಾಗುತ್ತಿದ್ದ ಮಧ್ಯಂತರ ಚುನಾವಣೆಗಳಲ್ಲಿ ಮತದಾರರ ಅಯ್ಕೆ ಬಿಜೆಪಿ ಅಗುವುದರಲ್ಲಿ ಯಾವ ಸಂಶಯವೂ ಇರುತ್ತಿರಲಿಲ್ಲ. ಆ ಯಶಸ್ಸು 2019ರ ಲೋಕಸಭಾ ಚುನಾವಣೆಗಳ ಮೇಲೂ ಅಗಾಧ ಧನಾತ್ಮಕ ಪರಿಣಾಮ ಬೀರುತ್ತಿತ್ತು. ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯುವ ಈ ಸರಳ ತಂತ್ರವೇಕೆ ಚಾಣಾಕ್ಷ್ಯ ಮೋದಿ-ಷಾ ಪಾಳಯಕ್ಕೆ ಹೊಳೆಯಲಿಲ್ಲ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top