Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ನಿಜಾರ್ಥದ ಅಭಿವೃದ್ಧಿಯಾಗಲಿ

Saturday, 18.11.2017, 3:00 AM       No Comments

ತುರ್ತು ಪರಿಸ್ಥಿತಿ ಮತ್ತು ಯುದ್ಧದ ಸಂದರ್ಭದಲ್ಲಿ ಪ್ರಯೋಜನ ಪಡೆದುಕೊಳ್ಳುವ ಆಶಯದೊಂದಿಗೆ ಹಾಗೂ ಪ್ರಾದೇಶಿಕ ತಾಣಗಳ ಅಭಿವೃದ್ಧಿಗೆ ಪೂರಕವಾಗಿ ಪ್ರಾದೇಶಿಕ ಸಂಪರ್ಕ ಯೋಜನೆಯ ಎರಡನೇ ಹಂತದಲ್ಲಿ ಈಶಾನ್ಯ ಭಾರತ ಹಾಗೂ ಜಮ್ಮು-ಕಾಶ್ಮೀರಕ್ಕೆ ಪ್ರಾಧಾನ್ಯ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಿಮಾನ ನಿಲ್ದಾಣಗಳ ಅಭಿವೃದ್ಧಿ, ವಿಸ್ತರಣೆ ಹಾಗೂ ನವೀಕರಣಗಳು ಈ ಆಶಯದ ಭಾಗವಾಗಿರುವುದರಿಂದ, ವ್ಯೂಹಾತ್ಮಕ ಕಾರ್ಯತಂತ್ರದ ದೃಷ್ಟಿಯಿಂದ ಹಾಗೂ ಬಹುಮುಖಿ ನೆಲೆಗಟ್ಟಿನಲ್ಲಿ ಇದು ಭಾರತಕ್ಕೆ ಅನುಕೂಲಕರವಾಗಿ ಪರಿಣಮಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಗಡಿಭಾಗದಲ್ಲಿ ವಿವಿಧ ತೆರನಾದ ಉಪಟಳಗಳಲ್ಲಿ ವ್ಯಸ್ತವಾಗಿರುವ ಪಾಕಿಸ್ತಾನ ಮತ್ತು ಚೀನಾಗಳಿಗೆ ತಕ್ಕ ಉತ್ತರ ನೀಡಲು ‘ಸಮರಸನ್ನದ್ಧ ಸ್ಥಿತಿ’ ಈಗ ಅನಿವಾರ್ಯವಾಗಿರುವುದರಿಂದ, ಜಮ್ಮು-ಕಾಶ್ಮೀರ ಪ್ರದೇಶ ಮಾತ್ರವಲ್ಲದೆ ‘ಸಪ್ತ ಸೋದರಿಯರ ನಾಡು’ ಎಂದೇ ಹೆಸರಾದ ಈಶಾನ್ಯ ಭಾರತವನ್ನೂ ಸಮರ್ಥ ವೇದಿಕೆಯಾಗಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಹಾಗಂತ ಈ ಆಶಯದ ಹಿಂದಿರುವುದು ಸಮರೋನ್ಮಾದ ಎಂದೇ ಭಾವಿಸುವ ಅಗತ್ಯವಿಲ್ಲ. ವಿಮಾನ ನಿಲ್ದಾಣಗಳ ವಿಸ್ತರಣೆ, ಅಭಿವೃದ್ಧಿಯಂಥ ಯೋಜನೆಗಳಿಂದಾಗಿ ‘ಸಂಪರ್ಕಶೀಲತೆ’ ಮಾತ್ರವಲ್ಲದೆ ಪ್ರಾದೇಶಿಕ ಅಭಿವೃದ್ಧಿಗೂ ಬಲ ಬಂದಂತಾಗುತ್ತದೆ.

ಹಾಗೆ ನೋಡಿದರೆ, ಭಾರತದ ಮಿಕ್ಕ ಭಾಗಗಳಿಗೆ ಹೋಲಿಸಿದರೆ ಈಶಾನ್ಯ ಭಾರತಕ್ಕಿರುವ ಸಂಪರ್ಕ-ಸೌಲಭ್ಯ ತೃಪ್ತಿಕರವಾಗೇನೂ ಇಲ್ಲ. ನುಸುಳುಕೋರರ ಹಾವಳಿ, ಜನಾಂಗೀಯ ಘರ್ಷಣೆ/ಹಿಂಸಾಚಾರದಂಥ ಘಟನೆಗಳಿಂದಾಗಿಯೇ ಬಹುತೇಕ ಸುದ್ದಿಗೆ ಗ್ರಾಸವಾಗುವ ಈಶಾನ್ಯ ಭಾರತದ ಒಂದೊಂದು ಭಾಗವೂ ಸಾಂಸ್ಕೃತಿಕ, ಪ್ರಾಕೃತಿಕ ಮತ್ತು ಪಾರಂಪರಿಕ ಸಮೃದ್ಧಿ ಹಾಗೂ ವೈವಿಧ್ಯವನ್ನು ಹೊಂದಿರುವಂಥದ್ದು. ಆದರೆ ಸಮರ್ಥ ಸಂಪರ್ಕದ ಕೊರತೆಯಿಂದಾಗಿ ಔದ್ಯಮಿಕ ಮತ್ತು ವ್ಯಾವಹಾರಿಕ ಚಟುವಟಿಕೆಗಳ ನೆಲೆವೀಡಾಗುವ ಮೂಲಕ ಆರ್ಥಿಕ ಬೆಳವಣಿಗೆಯಿಂದ ಈ ಪ್ರದೇಶಗಳು ವಂಚಿತವಾಗಿವೆ ಎನ್ನಬೇಕು. ಪ್ರಸ್ತುತ ವಿಮಾನ ನಿಲ್ದಾಣಗಳ ವಿಸ್ತರಣೆ, ಸುಧಾರಣೆಯಂಥ ಉಪಕ್ರಮಗಳಿಗೆ ಸರ್ಕಾರ ಮುಂದಾಗಿರುವುದರಿಂದ, ಸಂಪರ್ಕ ಕ್ರಾಂತಿ ಮಾತ್ರವಲ್ಲದೆ ಸರ್ವಾಂಗೀಣ ಅಭಿವೃದ್ಧಿಗೂ ಅದು ಇಂಬುಕೊಡಲಿದೆ ಎಂಬುದು ಬಲ್ಲವರ ಅಭಿಪ್ರಾಯ.

220ಕ್ಕೂ ಹೆಚ್ಚು ಜನಾಂಗೀಯ ಗುಂಪುಗಳು ಮತ್ತು ಅಷ್ಟೇ ಸಂಖ್ಯೆಯ ಉಪಭಾಷೆಗಳಿರುವ ವಿಶಿಷ್ಟ ಭೂಭಾಗ ಈಶಾನ್ಯ ಭಾರತ. ಬಾಂಗ್ಲಾದೇಶ, ಮ್ಯಾನ್ಮಾರ್, ಟಿಬೆಟ್ ಮೊದಲಾದೆಡೆಗಳಿಂದ ಆದ ಜನವಲಸೆಯು ಇಲ್ಲಿನ ಜನಾಂಗೀಯ ವೈವಿಧ್ಯಕ್ಕೆ ಒಂದು ಕಾರಣವಾಗಿದ್ದರೆ, ಸೂಕ್ತ ಅಭಿವೃದ್ಧಿ ಕಾರ್ಯಗಳು ನಡೆಯದೆ ಈಶಾನ್ಯ ಭಾರತ ಹಲವು ಸಮಸ್ಯೆಗಳ ಗೂಡಾಗಿರುವುದೂ ಹೌದು. ಜತೆಗೆ ಗಡಿಭಾಗದಲ್ಲಿ ಸಹಜವಾಗೇ ತಲೆದೋರುವ ತಲ್ಲಣ, ಅನಿಶ್ಚಿತತೆಗೆ ಇವು ನಿರಂತರ ಒಡ್ಡಿಕೊಳ್ಳಬೇಕಾಗಿ ಬಂದಿರುವುದು ಖರೆ. ಹೀಗಾಗಿ ಭಾರತದ ಅಂಗಭಾಗವಾಗಿದ್ದೂ ಪರಕೀಯ ಭಾವನೆ ಇಲ್ಲಿನ ಜನಾಂಗೀಯರಲ್ಲಿ ಮನೆಮಾಡಿದ್ದರೆ ಅದೇನೂ ಅಚ್ಚರಿಯಲ್ಲ. ಈ ಭಾವನೆ ಮತ್ತಷ್ಟು ಆಳವಾಗದಂತಿರಲು, ವ್ಯಾಪಕಗೊಳ್ಳದಂತಿರಲು ಸಮರೋಪಾದಿಯಲ್ಲಿ ಆದ್ಯತಾ ಕಾರ್ಯಕ್ರಮಗಳ, ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಆಗಬೇಕಿದೆ. ವಿಮಾನ ನಿಲ್ದಾಣಗಳ ಅಭಿವೃದ್ಧಿ ಈ ನಿಟ್ಟಿನಲ್ಲಿ ಒಂದು ಮುನ್ನುಡಿಯಾಗಿರಲಿಕ್ಕೂ ಸಾಕು. ಆದರೆ ಈ ಉತ್ಸಾಹ ಇಷ್ಟಕ್ಕೇ ಸೀಮಿತವಾಗದೆ ಸಾಮಾಜಿಕ, ಆರ್ಥಿಕ, ವ್ಯಾವಹಾರಿಕ, ಔದ್ಯಮಿಕ ಸುಧಾರಣೆಯ ಕಡೆಗೂ ಆಳುಗರು ಗಮನ ಹರಿಸುವಂತಾಗಲಿ. ಅದು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅತ್ಯಗತ್ಯವೂ ಹೌದು.

Leave a Reply

Your email address will not be published. Required fields are marked *

Back To Top