Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ನಾವು ಮಡಿದು ದೇಶವನ್ನು ಜಾಗೃತಗೊಳಿಸೋಣ…

Thursday, 21.09.2017, 3:00 AM       No Comments

ಜತೀನನ ಮೂಲಪ್ರೇರಣೆಯಿಂದ ತಯಾರಾದ ಯುವಕರು, ಯುಗಾಂತರದ ಕ್ರಾಂತಿ ಚಟುವಟಿಕೆಗಳಿಗೆ ವಿದೇಶಗಳಿಂದ ಸಹಾಯ ದಕ್ಕಿಸಿಕೊಳ್ಳಲು, ಅನ್ಯಾನ್ಯ ದೇಶಗಳಿಗೆ ತೆರಳಿದರು. ನರೇಂದ್ರನಾಥ ಭಟ್ಟಾಚಾರ್ಯ ಈ ಪೈಕಿ ದೊಡ್ಡ ಹೆಸರು. ಅವನು ಜರ್ಮನಿಯ ಕಡೆ ಪಯಣಿಸಿದ.

ವಿದೇಶಗಳಲ್ಲಿ ಜತೀನನ ಶಿಷ್ಯರು: ಅವನಂತೆ ಜಪಾನ್​ಗೆ ಹೋಗಿ ಮುಂದೆ ಎರಡನೆಯ ಮಹಾಯುದ್ಧದ ವೇಳೆ ‘ಆಜಾದ್ ಹಿಂದ್ ಫೌಜ್’ನ ಕೇಂದ್ರವ್ಯಕ್ತಿಯಾದ ರಾಸ್​ಬಿಹಾರಿ ಬೋಸನನ್ನು ಮಥುರೆಯಲ್ಲಿ ನಿರಾಲಂಬ ಸ್ವಾಮಿ ಜತೀನ್​ಗೆ ಪರಿಚಯಿಸಿದಾಗಿನಿಂದ ಅವರ ನಡುವೆ ಘನಿಷ್ಠ ಸಂಬಂಧ ಬೆಳೆದು ಮುಂದಿನ ದಿನಗಳಲ್ಲಿ ರಾಸ್​ಬಿಹಾರಿ ಬೋಸ್ ಹೆಜ್ಜೆ ಹೆಜ್ಜೆಗೂ ಜತೀನನ ಮಾರ್ಗದರ್ಶನ ಪಡೆಯುತ್ತಿದ್ದ. ಅವನೇ ಹೇಳಿರುವಂತೆ ಜತೀನನ ‘ಅಗ್ನಿಶಕ್ತಿಯ ವ್ಯಕ್ತಿತ್ವ’ಕ್ಕೆ ಮಾರುಹೋಗಿ ಅವನ ಜತೆಗಾರನಾಗಿ ಮೊದಲ ಮಹಾಯುದ್ಧದ ಸಮಯದಲ್ಲಿ ವಸಾಹತುಷಾಹಿ ಸೈನ್ಯದ ಹಲವು ಹತ್ತು ರೆಜಿಮೆಂಟುಗಳ ಮುಖ್ಯಕೇಂದ್ರವಾಗಿದ್ದ ಫೋರ್ಟ್ ವಿಲಿಯಂನಲ್ಲಿ ದೇಶೀ ಸೈನ್ಯಾಧಿಕಾರಿಗಳೊಂದಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದ. ಅವನ ಈ ಕಾರ್ಯದಲ್ಲಿ ಹಾಗೂ ಅವನು ಬ್ರಿಟಿಷ್ ಸರ್ಕಾರದ ಕಣ್ತಪ್ಪಿಸಿ ಪರಾರಿಯಾಗುವ ಸಂದರ್ಭದಲ್ಲಿ ಅವನಿಗೆ ಬೆನ್ನೆಲುಬಿನಂತಿದ್ದವನೇ ಜತೀನ್ ಮುಖರ್ಜಿ.

ಜತೀನನ ಕ್ರಾಂತಿಕಾರಿ ಗೆಳೆಯನೂ ಅಪೂರ್ವ ಜಾಣನೂ ಆಗಿದ್ದ ತಾರಕನಾಥ ದಾಸ್ 1905ರಿಂದಲೂ ಬಹಳ ಕ್ರಿಯಾಶೀಲ. 1907ರಲ್ಲಿ ಅಮೆರಿಕಕ್ಕೆ ಹೋಗಿ ಅಲ್ಲಿ ಜತೀನನ ಸಂಪರ್ಕ ಕೊಂಡಿಯಾಗಿದ್ದುಕೊಂಡು ಲಾಲಾ ಹರದಯಾಳರನ್ನು ಕ್ರಾಂತಿಮಾರ್ಗಕ್ಕೆ ಸೆಳೆಯುವಲ್ಲಿ ಯಶಸ್ಸು ಸಾಧಿಸಿದ. ಅದೇ ಲಾಲಾ ಹರದಯಾಳರನ್ನು ಮತ್ತಷ್ಟು ಹುರಿದುಂಬಿಸಿದವನು ಜತೀನನು ತನ್ನ ಪ್ರತಿನಿಧಿಯಾಗಿ ಅಲ್ಲಿಗೆ ಕಳುಹಿಸಿದ್ದ ಜತೀನ್ ಲಾಹಿರಿ ಎಂಬ ಯುವಕ.

ಬಂಗಾಳದ ಜನಪ್ರಿಯ ಕಾದಂಬರಿಕಾರರೂ ಜತೀನನ ಬಂಧುವರ್ಗಕ್ಕೆ ಸೇರಿದವರೂ ಆಗಿದ್ದ ಧನಗೋಪಾಲ ಮುಖರ್ಜಿ ನ್ಯೂಯಾರ್ಕ್​ನಲ್ಲಿ ನೆಲೆಸಿ ಸಾಹಿತ್ಯ ಕೈಂಕರ್ಯ ನಡೆಸಿದವರು. ಅವರು ಒಂದು ಲೇಖನದಲ್ಲಿ ಹೀಗೆ ಉಲ್ಲೇಖ ಮಾಡಿದ್ದಾರೆ. ‘1914ಕ್ಕೆ ಮೊದಲು ನಾವು ಬ್ರಿಟಿಷ್ ಸರ್ಕಾರದ ಸಮತೋಲನವನ್ನು ಹಾಳುಗೆಡಹುವುದರಲ್ಲಿ ಯಶಸ್ವಿಯಾಗಿದ್ದೆವು… ಬ್ರಿಟಿಷ್ ಪ್ರಪಂಚದ ಕಣ್ಣಿನಲ್ಲಿ ಎಲ್ಲ ಕಾಲಕ್ಕೂ ನಮ್ಮ ಬಗ್ಗೆ ಪೂರ್ವಗ್ರಹ ಉಂಟುಮಾಡಲು, ನಮ್ಮನ್ನು ಭಯೋತ್ಪಾದಕರೆಂದು ಬಿಂಬಿಸಲು ಸರ್ಕಾರ ಪೊಲೀಸರಿಗೆ ಮಿತಿಮೀರಿ ವಿಶೇಷಾಧಿಕಾರಗಳನ್ನು ನೀಡಿತ್ತು… ನಿಮಗೆ ನನ್ನ ಸೋದರ ಸಂಬಂಧಿ ಜತೀನ್ ಮುಖರ್ಜಿ ನೆನಪಿಲ್ಲವೇ? ಒಮ್ಮೆ ಕೇವಲ ಒಂದು ಚೂರಿಯನ್ನು ಹಿಡಿದುಕೊಂಡು ಹುಲಿಯೊಂದಿಗೆ ಹೋರಾಡಿ ಕೊಂದ ಧೀರ! ಅವನು ಬಹು ದೊಡ್ಡ ಮನುಷ್ಯ. ಅವನೇ ನಮ್ಮ ಮೊದಲ ಸಮರ್ಥ ನಾಯಕ. ಅವನು ಅಖಂಡವಾಗಿ ಹತ್ತು ದಿನಗಳು ಬೇಕಾದರೂ ಸಲೀಸಾಗಿ ದೇವರ ಧ್ಯಾನದಲ್ಲಿ ಲೀನವಾಗಿಬಿಡುತ್ತಿದ್ದಂಥ ಶ್ರದ್ಧಾಳು… ಇಂಥವನು ನಮ್ಮ ನಾಯಕನೆಂದು ಸರ್ಕಾರಕ್ಕೆ ತಿಳಿದುಬಂದಾಗ ಅವನ ಸರ್ವನಾಶ ಆರಂಭವಾಯಿತು…’.

ಮೊದಲ ಮಹಾಯುದ್ಧದ ಸಮಯ: ಮೊದಲ ಮಹಾಯುದ್ಧದ ಕಾಮೋಡಗಳು ದಟ್ಟವಾಗಿ ಕವಿದು ಯುದ್ಧ ಅನಿವಾರ್ಯ ಎಂಬ ಪರಿಸ್ಥಿತಿ ಉಂಟಾಗಿದ್ದ ಸಮಯವದು. ಬ್ರಿಟಿಷರನ್ನು ಸದೆ ಬಡಿಯಲು ಇದೇ ಸುಸಮಯವೆಂದು ಜತೀನ್ ನಿರ್ಧರಿಸಿ ಯೋಜನೆಗಳನ್ನು ಮಾಡಲಾರಂಭಿಸಿದ. ಆ ವೇಳೆಗಾಗಲೇ ಬಂಗಾಳ ತತ್ತರಿಸಿಹೋಗಿತ್ತು. ವೈಸರಾಯ್ ಲಾರ್ಡ್ ಹಾರ್ಡಿಂಜನೇ ‘ಪಶ್ಚಿಮ ಬಂಗಾಳ ಮತ್ತು ಪೂರ್ವ ಬಂಗಾಳಗಳಲ್ಲಿ ಎಂದಿಗೂ ಇದಕ್ಕಿಂತಲೂ ಹೆಚ್ಚಿನ ಅಧೋಗತಿ ಇರಲು ಸಾಧ್ಯವಿಲ್ಲ. ಈ ಎರಡು ಪ್ರಾಂತ್ಯಗಳಲ್ಲಿ ಸರ್ಕಾರವೆಂಬುದೇ ಅಸ್ತಿತ್ವದಲ್ಲಿಲ್ಲ’ ಎಂದು ಇಂಗ್ಲೆಂಡಿಗೆ ವರದಿ ಕಳುಹಿಸಿದ್ದನ್ನು ನೆನೆಯಬಹುದು. ವೈಸರಾಯ್ನದೇ ಆದ ಈ ಹೇಳಿಕೆ ಅಧಿಕೃತವಾದದ್ದು. ಇಂಥ ಹಿನ್ನೆಲೆಯಲ್ಲಿ ವಿದೇಶಗಳಿಂದ ಶಸ್ತ್ರಾಸ್ತ್ರಗಳ ನೆರವು ಪಡೆದು ಸರ್ಕಾರದ ಮೇಲೆ ದಾಳಿ ಆರಂಭಿಸಿದರೆ, ವಸಾಹತುಷಾಹಿ ಸೈನ್ಯದ ಸಹಾಯದೊಂದಿಗೆ ಭಾರತದಲ್ಲಿ ಇಂಗ್ಲಿಷರ ಕತೆ ಮುಗಿಸಬಹುದೆಂಬುದು ಜತೀನನ ಚಿಂತನೆ. ಫೋರ್ಟ್ ವಿಲಿಯಂನ ಹಿರಿಯ ಸೈನ್ಯಾಧಿಕಾರಿಗಳಿಂದ ಜತೀನ್ ಅಂದಿನ ಸೈನ್ಯದ ಸ್ಥಿತಿಗತಿಗಳ ಕುರಿತು ಮಾಹಿತಿ ಕಲೆಹಾಕಿದ್ದ. ಯುದ್ಧದ ಸಲುವಾಗಿ 80 ಸಾವಿರ ಬ್ರಿಟಿಷ್ ಸೈನ್ಯಾಧಿಕಾರಿ ಹಾಗೂ ಸೈನಿಕರನ್ನು ಭಾರತದಿಂದ ಹೊರಕ್ಕೆ ಕಳುಹಿಸಲಾಗಿತ್ತು. 2,10, 000 ಭಾರತೀಯ ಸೈನಿಕರು ಹಾಗೂ ಅಪಾರ ಸಂಖ್ಯೆಯ ಶಸ್ತ್ರಾಸ್ತ್ರಗಳು ಕೂಡ ಹೊರದೇಶಗಳಲ್ಲಿ ಯುದ್ಧಭೂಮಿಗೆ ಹೋಗಿದ್ದವು. ಹೀಗಾಗಿ ಭಾರತದಲ್ಲಿ ಉಳಿದಿದ್ದ ಸೈನಿಕರು ಕೇವಲ 12,000 ಮಂದಿ.

ಜತೀನನ ಬಲಗೈ ಬಂಟ ನರೇಂದ್ರನಾಥ ಭಟ್ಟಾಚಾರ್ಯ, ತಾರಕನಾಥ ದಾಸ್, ಅವಿಶಾಶ್ ಭಟ್ಟಾಚಾರ್ಯ ಜರ್ಮನಿಗೆ ಹೋಗಿ ‘ಇಂಡೋ-ಬರ್ಲಿನ್ ಕಮಿಟಿ’ ಎಂಬುದನ್ನು ರಚಿಸಿ ತನ್ಮೂಲಕ ಜರ್ಮನಿ ಸರ್ಕಾರದ ಚಾನ್ಸಲರ್ ಬೆಥ್​ವುನ್ ಹೊಲ್ಲೆವೆಗ್ ಎಂಬುವನ ಜತೆ ಮಾತುಕತೆ ನಡೆಸಿ ಭಾರತದ ಕ್ರಾಂತಿಕಾರಿಗಳಿಗೆ ಜರ್ಮನಿ ಶಸ್ತ್ರಾಸ್ತ್ರ ಪೂರೈಸುವ ಒಪ್ಪಂದ ಮಾಡಿಕೊಂಡರು. ಎಸ್.ಎಸ್. ಮೆವರಿಕ್ ಎಂಬ ಹಡಗು ಶಸ್ತ್ರಾಸ್ತ್ರಗಳನ್ನು ಹೊತ್ತು ಭಾರತದ ಕಡೆ ಹೊರಟಿತು. ಅದೇ ವೇಳೆ ಬ್ರಿಟಿಷ್ ಮತ್ತು ಜರ್ಮನಿ ನೌಕಾಪಡೆಗಳು ಭಾರಿ ಸಮರ ಸಿದ್ಧತೆ ನಡೆಸಿ ಪರಸ್ಪರ ಹದ್ದಿನಗಣ್ಣಿಟ್ಟಿದ್ದವು.

ಜತೀನನ ಬೆನ್ನುಹತ್ತಿದ್ದ ಬ್ರಿಟಿಷ್ ಸರ್ಕಾರ: ಕ್ರಾಂತಿಕಾರಿಗಳು ನಿರೋಧ ಹಲಧರನ ಹತ್ಯೆ ಮಾಡಿದ್ದರು. ಹಲಧರ್ ಕೊನೆಯುಸಿರೆಳೆವಾಗ ಜತೀನ್ ಮುಖರ್ಜಿಯೇ ಕ್ರಾಂತಿಕಾರಿಗಳ ನಾಯಕ ಎಂದು ಹೇಳಿಕೆ ನೀಡಿದ್ದ. ವೈಸರಾಯ್ ಭಾಗವಹಿಸಲಿದ್ದ ಕಲ್ಕತ್ತಾ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದ ಸಮಯದಲ್ಲಿ ಹಾಡು ಹಗಲೇ ಹಿರಿಯ ಪೊಲೀಸ್ ಅಧಿಕಾರಿ ಸುರೇಶ್​ಚಂದ್ರ ಮುಖರ್ಜಿಯ ಕತೆ ಮುಗಿಸಿ ಕ್ರಾಂತಿಕಾರಿಗಳು ಸರ್ಕಾರವನ್ನು ರೊಚ್ಚಿಗೆಬ್ಬಿಸಿದ್ದರು. ಇದರಿಂದ ವೈಸರಾಯ್ನ ಕೋಪ ತಾರಕಕ್ಕೇರಿತ್ತು. ಪರಿಣಾಮ ಲಾರ್ಡ್ ಹಾರ್ಡಿಂಜ್ ದೃಷ್ಟಿಯಲ್ಲಿ ಏಕೈಕ ‘ಪಾತಕಿ’ಯಾಗಿದ್ದ ಜತೀನನನ್ನು ಹುಡುಕಿ ಮರ್ದನ ಮಾಡುವ ದೃಢ ನಿರ್ಧಾರವನ್ನು ಪೊಲೀಸ್ ಇಲಾಖೆ ತಳೆದಿತ್ತು. ಡಿ.ಐ.ಜಿ. ಡೆನ್​ಹ್ಯಾಮ್ ಪೊಲೀಸ್ ಡೆಪ್ಯುಟಿ ಕಮಿಷನರ್ ಚಾರ್ಲ್ಸ್ ಟೆಗಾರ್ಟ್ ಮುಂತಾದ ಪೊಲೀಸ್ ಅಧಿಕಾರಿಗಳ ನಾಯಕತ್ತ್ವದಲ್ಲಿ ಜತೀನನನ್ನು ಮುಗಿಸಿ ಹಾಕುವ ಕಾರ್ಯಪಡೆ ರಚನೆಯಾಯಿತು. ಜತೀನನ ಸುಳಿವು ಕೊಟ್ಟವರಿಗೆ ಭಾರಿ ಬಹುಮಾನ ನೀಡಲಾಗುವುದೆನ್ನುವ ಭಿತ್ತಿಪತ್ರಗಳು ಬಂಗಾಳದೆಲ್ಲೆಡೆ ಕಾಣಿಸಿಕೊಂಡವು. ಇಂಥ ಸನ್ನಿವೇಶದಲ್ಲಿ ಹಿರಿಯ ಕ್ರಾಂತಿಕಾರಿಗಳು ಸೇರಿದ್ದ ರಹಸ್ಯ ಸಭೆಯೊಂದರಲ್ಲಿ, ಸಂಘಟನೆ ಹಾಗೂ ಹೋರಾಟದ ಭವಿಷ್ಯದ ದೃಷ್ಟಿಯಿಂದ ಜತೀನ್ ಸುರಕ್ಷಿತವಾಗಿರಬೇಕೆಂದೂ, ಆ ಕಾರಣ ಕೂಡಲೇ ಅವನು ಭೂಗತನಾಗಬೇಕೆಂದೂ ನಿರ್ಧರಿಸಿ ಅವನ ವಿರೋಧದ ನಡುವೆಯೂ ಅವನನ್ನು ಒಪ್ಪಿಸಲಾಯಿತು. ಅದೇ ಸಮಯ ಮೆವರಿಕ್ ಹಡಗಿನಲ್ಲಿ ಹೊರಟ ಶಸ್ತ್ರಾಸ್ತ್ರಗಳು ಭಾರತದೆಡೆಗೆ ಬರಲಾರಂಭಿಸಿದ್ದ ಸುದ್ದಿ ಕೈ ಸೇರಿತ್ತು. ಹಡಗು ಒಡಿಶಾದ ಬಾಲ್​ಸೋರ್ ಸನಿಹದ ಕಡಲತೀರಕ್ಕೆ ಬರುವ ಸಮಾಚಾರ ತಲಪಿತ್ತು.

1915ರ ಏಪ್ರಿಲ್​ನಲ್ಲಿ ಸ್ಯಾನ್​ಫ್ರಾನ್ಸಿಸ್ಕೊದಿಂದ ಹಡಗು ಹೊರಟ ವಿಷಯ ತಿಳಿದು ಕ್ರಾಂತಿಕಾರಿಗಳಲ್ಲಿ ನವೋತ್ಸಾಹ ಹಾಗೂ ತೀವ್ರ ಚಟುವಟಿಕೆ ಕಾಣಿಸಿಕೊಂಡಿತು. ಜತೀನ್ ಕೆಲ ಆಯ್ದ ಸಂಗಾತಿಗಳೊಂದಿಗೆ ಬಾಲ್​ಸೋರ್ ನಗರದ ಸನಿಹದ ಗೋಪಾಲ್​ಡಿಹಾ ಎಂಬ ಗ್ರಾಮದ ಬಳಿ ಬಂದು ಮಣೀಂದ್ರ ಚಕ್ರವರ್ತಿ ಎಂಬ ಜಮೀನುದಾರನ ಬಳಿ ಸ್ವಲ್ಪ ಜಮೀನು ಪಡೆದು ಅಲ್ಲಿಗೆ ಕಲ್ಕತ್ತಾದಿಂದ ಯುವಕರನ್ನು ಕರೆಸಿ ಸೈನಿಕ ತರಬೇತಿ ಕೊಡಲಾರಂಭಿಸಿದ. ಅಲ್ಲಿ ಅವನದು ಸಾಧು ವೇಷ. ‘ಸಾಧು ಬಾಬಾ’ ಎಂದೇ ಊರಿನವರಿಗೆಲ್ಲ ಪರಿಚಿತ. ಹೋಮಿಯೋಪತಿ, ಜ್ಯೋತಿಷ ಸಲಹೆಗಳ ಮೂಲಕ ಸುತ್ತಮುತ್ತಲ ಜನರಿಗೆ ಪ್ರೀತಿಪಾತ್ರನಾದ. ಅವನ ಯೋಜನೆ ಇದ್ದಿದ್ದು ಶಸ್ತ್ರಾಸ್ತ್ರಗಳು ಬಾಲ್​ಸೋರ್ ಕಡಲತೀರಕ್ಕೆ ಬರುವ ವೇಳೆಗೆ ತಾನೇ ಅಲ್ಲಿಗೆ ಹೋಗಿ ಅವನ್ನು ಪಡೆಯುವುದಾಗಿತ್ತು. ಆದರೆ ಅಷ್ಟರಲ್ಲಿ ಮೆವರಿಕ್ ಹಡಗನ್ನು ಬ್ರಿಟಿಷ್ ನೌಕೆಗಳು ಹಿಂಬಾಲಿಸಿಕೊಂಡು ಹೋದುದರಿಂದ ಹಡಗಿನ ಕ್ಯಾಪ್ಟನ್ ಹೆದರಿ ಆ ಶಸ್ತ್ರಾಸ್ತ್ರಗಳನ್ನೆಲ್ಲ ಸಮುದ್ರಕ್ಕೆ ಎಸೆದು ನೀರುಪಾಲು ಮಾಡಿದ್ದ. ಜತೀನನು ಬಾಲ್​ಸೋರ್ ಪಟ್ಟಣದಲ್ಲಿ ಸ್ಥಾಪಿಸಿದ್ದ ಹೊರನೋಟದ ಅಂಗಡಿ, ಒಳಗೆ ನಿಜವಾಗಿ ಕ್ರಾಂತಿಕಾರಿಗಳ ಸಂಪರ್ಕ ಸಮಾಚಾರಗಳ ಕೊಂಡಿಯಾಗಿದ್ದ ‘ಯೂನಿವರ್ಸಲ್ ಎಂಪೋರಿಯಂ’ ಕೇಂದ್ರದ ಮೂಲಕ ಈ ಸುದ್ದಿ ತಲುಪಿದಾಗ ಅವನು ನಿರಾಶೆಗೊಳ್ಳಲಿಲ್ಲ. ಬದಲಾಗಿ, ‘ಇದು ಪರಮಾತ್ಮನ ಸಂದೇಶ. ನಾವು ನಮ್ಮ ರಾಷ್ಟ್ರವನ್ನು ಹೊರಗಿನ ಸಹಾಯವಿಲ್ಲದೆ ಸ್ವಂತ ಪರಿಶ್ರಮದಿಂದ ಸಂಪಾದಿಸಬೇಕೆಂಬುದು ಅವನಿಚ್ಛೆ’ ಎಂದು ಉದ್ಗರಿಸಿದ. ಪೊಲೀಸ್ ಮತ್ತು ಸೈನ್ಯದ ತುಕಡಿಗಳು ಬಾಲ್​ಸೋರ್​ಗೆ ಬಂದವು. ‘ಯೂನಿವರ್ಸಲ್ ಎಂಪೋರಿಯಂ’ ಮೇಲೆ 1915ರ ಸೆಪ್ಟೆಂಬರ್ 4ರಂದು ಪೊಲೀಸರು ದಾಳಿ ಮಾಡಿದರು. ಅಲ್ಲಿ ಜತೀನನಿರುವ ಸ್ಥಳದ ಬಗ್ಗೆ ಒಂದು ಕಾಗದದ ಚೂರಿನಲ್ಲಿ ಮಾಹಿತಿ ದೊರೆಯಿತು.

ಓಟ… ಓಟ… ನಿರ್ವಿರಾಮ ಓಟ: ಜತೀನ್ ಇದ್ದ ಸ್ಥಳಕ್ಕೂ ಬಂದರು. ಅವರು ಸರ್ವಸನ್ನದ್ಧರಾಗಿ ಬರುತ್ತಿದ್ದ ಸಮಾಚಾರ ತಿಳಿದು ಜತೀನ್ ಅಲ್ಲಿಂದ ಜಾಗ ಖಾಲಿಮಾಡಿದ. ಜತೀನ್ ಆ ಪ್ರದೇಶದಲ್ಲಿಯೇ ಇರುವನೆಂಬುದು ಖಚಿತಪಟ್ಟು ಡೆನ್​ಹಾಮ್ ಮತ್ತು ಟೆಗಾರ್ಟ್ ಎಲ್ಲೆಡೆ ಜನರನ್ನು ಅಟ್ಟಿದರು. ಜತೀನ್ ಮತ್ತು ಸಂಗಡಿಗರು ದರೋಡೆಕೋರರೆಂದೂ ಅವರನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಕೊಡುವುದಾಗಿಯೂ ಹಳ್ಳಿಹಳ್ಳಿಗಳಲ್ಲಿ ಡಂಗುರ ಸಾರಿದರು. ವಿಶಾಲವಾಗಿ ಬಲೆ ಬೀಸಿದರು.

ಈ ವೇಳೆಗೆ ಜತೀನನೊಂದಿಗೆ ನಾಲ್ವರು ಕಿಶೋರ ಕ್ರಾಂತಿಕಾರಿಗಳು ಸೇರಿಕೊಂಡಿದ್ದರು. ಅವರು ಜತೀನ್ ಒಬ್ಬನೇ ತಪ್ಪಿಸಿಕೊಂಡು ಹೋಗಬೇಕೆಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಜತೀನನಿಗೆ ಸಂಗಾತಿಗಳನ್ನು ಬಿಟ್ಟುಹೋಗುವ ಇಚ್ಛೆ ಇರಲಿಲ್ಲ. ಅನನುಭವಿಗಳಾದ ಅವರು ಪೊಲೀಸರ ಕೈಗೆ ಸಿಕ್ಕಿಬೀಳಬಾರದೆಂಬ ಭಾವನೆ. ತಾನು ಅವರನ್ನು ಕಾಪಾಡಬೇಕೆಂಬ ಇಚ್ಛೆ. ಹೀಗಾಗಿ ಅವರನ್ನು ಜತೆಗೆ ಹಾಕಿಕೊಂಡು ಅನ್ನಾಹಾರಗಳಿಲ್ಲದೆ, ಕಾಡು-ಮೇಡು, ಹೊಲ-ಗದ್ದೆ, ನದಿ-ನಾಲೆಗಳನ್ನು ದಾಟುತ್ತ ಪೊಲೀಸರಿಂದ ದೂರಾಗುವ ಯತ್ನದಲ್ಲಿ ಮುಂದೆ ಮುಂದೆ ಧಾವಿಸುತ್ತಿದ್ದ. ಹೀಗೆ 50 ಗಂಟೆ ಕಾಲ ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ಜತೀನ್ ಮತ್ತು ಸಂಗಡಿಗರು ದಾರಿಯಲ್ಲಿ ಅವರ ಹಿಂದೆ ಬಿದ್ದ ಗ್ರಾಮಸ್ಥರ ಗುಂಪುಗಳ ದಾಳಿಯನ್ನೂ ಎದುರಿಸಬೇಕಾಗಿ ಬಂತು.

ಕೊನೆಗೆ ಅವರು ತಲಪಿದ್ದು ಬುಡೀ ಬಲಾಂ ಎಂಬ ನದಿಯ ದಡಕ್ಕೆ. ಅವರನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ನದಿಯನ್ನು ದಾಟಬೇಕಿತ್ತು. ಯಾವ ನಾವೆಯವನೂ ಸಹಾಯಕ್ಕೆ ಬರಲಿಲ್ಲ. ಆದರೆ ಅವರು ನಿಲ್ಲುವ ಹಾಗಿರಲಿಲ್ಲ. ತಮ್ಮ ಬಳಿ ಇದ್ದ ಶಸ್ತ್ರಗಳನ್ನು, ಮದ್ದು ಗುಂಡುಗಳ ಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಈಜಿಕೊಂಡು ಆ ಐವರೂ ನದಿ ದಾಟಿದರು. ಚಾಸ್​ಖಂಡ್ ಎಂಬ ಹಳ್ಳಿ ತಲಪಿದರು. ಅಲ್ಲಿ ಜೌಗುಭೂಮಿಯ ಒಂದು ಗದ್ದೆ. ಅದನ್ನು ದಾಟಿದರೆ ಒಂದು ಎತ್ತರದ ಮಣ್ಣಿನ ದಿಬ್ಬ. ದಿಬ್ಬ ಹತ್ತಲು ಮುಳ್ಳು ಕಂಟೆಗಳಿಂದ ತುಂಬಿದ ಒಂದು ದೊಡ್ಡ ಹೊಂಡ. ಅದರಲ್ಲಿ ಕಾಲಿಟ್ಟು ನಡೆದುಕೊಂಡು ಹೋಗಿ ಐವರೂ ದಿಬ್ಬವನ್ನು ಹತ್ತಿ ಅಲ್ಲಿನ ಗಿಡಗಂಟೆ, ಕಲ್ಲುಬಂಡೆಗಳ ಬಳಿ ಅಡಗಿ ಕುಳಿತರು. ಜತೀನನ ಜತೆಯಲ್ಲಿದ್ದ ನಾಲ್ವರು ಕಿಶೋರ ಹೆಸರುಗಳು ಚಿತ್ತಪ್ರಿಯ ರಾಯ್ಚೌಧುರಿ, ಮನೋರಾಜನ್ ಸೇನ್​ಗುಪ್ತ, ಜ್ಯೋತಿಷ್ ಮತ್ತು ನಿರೇನ್ ಎಂದು.

‘ಆಮ್ರೋ ಮಾರ್ಬೆ ಜಾತ್ ಜಾಗ್ಬೆ’: ರುಥರ್​ಫೋರ್ಡ್ ಮತ್ತು ಕಿಲ್ಬಿ ಎಂಬ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಹಾಗೂ ಸೈನಿಕ ದಳದವರ ಕಾರ್ಯಾಚರಣೆ ಆರಂಭವಾಯಿತು. ಆನೆಗಳ ಮೇಲೂ ಅಲ್ಲಿಗೆ ಸೈನಿಕರು ಬಂದರು. ಜತೀನನ ಪಡೆ ಮೂರು ಗಂಟೆಗಳ ಕಾಲ ವೀರಾವೇಶದಿಂದ ಹೋರಾಡಿತು. ಮಧ್ಯೆ ಗುಂಡುಗಳ ಚೀಲದ ಬಾಯಿ ಬಿಡಿಸಲಾಗದೆ ಅವರ ಕೈಕಟ್ಟಿ ಹಾಕಿದಂತಾಯಿತು. ಹೋರಾಟದಲ್ಲಿ ಅಭಿಮನ್ಯುವಿನಂತೆ ಹೋರಾಡಿದ ಚಿತ್ತಪ್ರಿಯ ಮೊದಲ ಆಹುತಿಯಾದ! ಅವನ ತಲೆಯನ್ನು ತೊಡೆಯ ಮೇಲಿರಿಸಿಕೊಂಡು ಹೋರಾಟ ಮುಂದುವರಿಸಿದ ಜತೀನ್ ಕೂಡ ಪೊಲೀಸರ ಗುಂಡುಗಳಿಂದ ತೀವ್ರ ಗಾಯಗೊಂಡ. ಕೊನೆಗೆ ಪೊಲೀಸರು ತೀವ್ರ ಸುತ್ತುವರಿದು ಅವರನ್ನು ಬಂಧಿಸಿದರು. ಸೂರ್ಯ ಮುಳುಗುತ್ತಿದ್ದಂತೆ ಸಮರ ಕೊನೆಗೊಂಡಿತ್ತು. ಜತೀನ್ ‘ಆಮ್ರೋ ಮಾಬೋ ಜಾತ್ ಜಾಗ್ಬೆ’ ಎಂದು ಯಾವಾಗಲೂ ತನ್ನ ಶಿಷ್ಯರಿಗೆ ಹೇಳುತ್ತಿದ್ದ. ಅಂದರೆ ‘ನಾವು ಮಡಿದು ದೇಶವನ್ನು ಜಾಗೃತಗೊಳಿಸಬೇಕು’ ಎಂದರ್ಥ. ತನ್ನ ಆ ಉಪದೇಶಕ್ಕೆ ತಾನೇ ಉತ್ತಮ ಉದಾಹರಣೆಯಾಗುವ ಸಮಯ ಸನ್ನಿಹಿತವಾಗಿತ್ತು. ಅವನು ಗುಂಡಿನ ಗಾಯಗಳಿಂದ ಜರ್ಜರಿತನಾಗಿದ್ದ. ಟೆಗಾರ್ಟ್ ಅವನನ್ನು ಚಿಕಿತ್ಸೆಗಾಗಿ ಬಾಲ್​ಸೋರ್​ನ ಆಸ್ಪತ್ರೆಗೆ ಸೇರಿಸಿದ. ಗಾಯಗಳಿಗೆ ಬ್ಯಾಂಡೇಜ್ ಕಟ್ಟಲಾಗಿತ್ತು. ತಾನು ಶತ್ರುಗಳ ಬಂಧಿಯಾಗಲು ಇಚ್ಛಿಸದ ಜತೀನ್ ಪಟ್ಟಿಗಳನ್ನು ಬಿಚ್ಚಿಹಾಕಿ ರಾತ್ರಿ ಎಲ್ಲ ರಕ್ತಸ್ರಾವವಾಗುವಂತೆ ಮಾಡಿಕೊಂಡು ಕೊನೆಗೆ ಅಂತಿಮಹಂತ ತಲಪಿದ. ಆಗ ಬಳಿಬಂದ ಟೆಗಾರ್ಟ್​ಗೆ ಆ ನೋವಿನಲ್ಲೂ ಮುಗುಳ್ನಗುತ್ತಾ, ‘ನಿಮಗೆ ಧನ್ಯವಾದ. ಈಗೆಲ್ಲವೂ ಮುಗಿದಿದೆ. ಗುಡ್​ಬೈ’ ಎನ್ನುತ್ತ ಕೊನೆಯುಸಿರೆಳೆದ. ಅಂದು 1915ರ ಸೆಪ್ಟೆಂಬರ್ 10. ಜತೀನನ ಕಿಶೋರ ಸಂಗಾತಿಗಳಾದ ಮನೋರಂಜನ್ ಮತ್ತು ನಿರೇಶ್​ನನ್ನು ಗಲ್ಲಿಗೇರಿಸಲಾಯಿತು. ಜ್ಯೋತಿಷ್​ನನ್ನು ಅಂಡಮಾನಿಗೆ ಕಳಿಸಲಾಯಿತು. ಅವನು ಅಂಡಮಾನಿನ ಜೈಲಿನ ಗೋಡೆಯ ಮೇಲೆ ‘ನಮ್ಮನ್ನು ಈ ಪವಿತ್ರ ಕಾರ್ಯಕ್ಕೆ ತೊಡಗಿಸಿದ ಜತೀನ್​ದಾಗೆ ಕೃತಜ್ಞತೆಗಳು’ ಎಂದು ಬರೆದಿದ್ದ.

(ಲೇಖಕರು ಹಿರಿಯ ಪತ್ರಕರ್ತರು)

 

Leave a Reply

Your email address will not be published. Required fields are marked *

Back To Top