Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ನಾರಿಯರ ಸಾಗರ ಸಾಹಸ

Tuesday, 12.09.2017, 3:01 AM       No Comments

ಸಾಗರದ ಮೂಲಕ ವಿಶ್ವ ಪರ್ಯಟನೆ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಮಹಿಳೆಯರು ಇಂತಹ ಸಾಹಸಕ್ಕೆ ಹೊರಡುತ್ತಾರೆ ಎಂದರೆ ಮೆಚ್ಚಲೇ ಬೇಕು. ಭಾರತದ ನೌಕಾಪಡೆಯ ಆರು ಮಹಿಳಾ ಯೋಧರು ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಭಾನುವಾರ(ಸೆ.10) ಅವರ ಸಾಹಸ ಯಾತ್ರೆ ಆರಂಭವಾಗಿದೆ. ಅದರ ವಿವರ ಇಲ್ಲಿದೆ.

 

ಕರಾವಳಿ ತೀರದ ಮೀನುಗಾರರಿಗೆ ಸಾಗರದ ಜತೆಗೇ ಒಡನಾಟ. ಅವರಿಗೆ ಸಾಗರ ಯಾತ್ರೆ ಹೊಸದಲ್ಲ. ಆದರೆ ಅವರೇನೂ ವಿಶ್ವ ಪರ್ಯಟನೆ ಹೋಗುವುದಿಲ್ಲ ಎಂಬುದು ಬೇರೆ ಮಾತು. ಸಾಗರ ಅಂದರೇನೇ ಬಹಳಷ್ಟು ಜನ ಥ್ರಿಲ್ ಆಗುತ್ತಾರಾದರೂ, ಸಾಗರಯಾನ ಎಂದ ಕೂಡಲೇ ಹಿಂದೇಟು ಹಾಕುವುದು ಸಹಜ. ದಿನಗಟ್ಟಲೆ, ತಿಂಗಳುಗಟ್ಟಲೆ ಜಲಯಾನ ಎಂದರೆ ಮನುಷ್ಯ ಸಂಪರ್ಕ ಇಲ್ಲದೇ ಸಾಗುವುದು ಎಂದರೆ ಆತಂಕ, ಕಳವಳ ಮೂಡುವುದು ಸಹಜ. ಅದಕ್ಕೆ ಕೊಂಚ ಧೈರ್ಯ ಹೆಚ್ಚೇ ಬೇಕು. ಮಾನಸಿಕ ದೃಢತೆ ಬೇಕು. ಅಂಥದ್ದರಲ್ಲಿ, ಸಾಗರದ ಮೂಲಕವೇ ವಿಶ್ವಪರ್ಯಟನೆ ಮಾಡ್ತೇವೆ ಎಂದು ಹೊರಟಿದ್ದಾರೆ ಭಾರತದ ನೌಕಾಪಡೆಯ ಆರು ಮಹಿಳಾ ಯೋಧರು. ಮಹಿಳಾ ಯೋಧರು ಇಂತಹ ಸಾಹಸಕ್ಕೆ ಮುಂದಾಗಿರುವುದು ಇದೇ ಮೊದಲು. ಆದರೆ, ನೌಕಾಪಡೆಯಿಂದ ಇಂತಹ ಪರಿಕ್ರಮ ಇದೇ ಮೊದಲಲ್ಲ. ಇದಕ್ಕೂ ಮುನ್ನ ಕ್ಯಾಪ್ಟನ್(ನಿವೃತ್ತ) ದಿಲೀಪ್ ದೊಂಡೆ ಒಂಟಿಯಾಗಿ ಐದು ಹಂತದ ಸಾಗರಯಾನದ ಮೂಲಕ ವಿಶ್ವ ಪರ್ಯಟನೆ ಮಾಡಿದ್ದರು. ಇದು 2009ರಲ್ಲಿ ನಡೆದಿತ್ತು. ಅದೇ ರೀತಿ, ಕಮಾಂಡರ್ ಅಭಿಲಾಷ್ ಟೋಮಿ ಅವರ ನಾನ್-ಸ್ಟಾಪ್ ವಿಶ್ವಪರ್ಯಟನೆಯನ್ನೂ ನೌಕಾಪಡೆ ಏರ್ಪಡಿಸಿತ್ತು. ಇವೆರಡೂ ದಾಖಲೆ ನಿರ್ವಿುಸಿದ ನೌಕಾ ಯಾನಗಳು.

ಪರಿಕ್ರಮದ ಪರಿಕಲ್ಪನೆ: ಭಾರತದ ನೌಕಾಪಡೆಗೆ 2009ರಲ್ಲಿ ಐಎನ್​ಎಸ್​ವಿ ಮಹಾದೇಯಿ ಸೇರ್ಪಡೆಗೊಂಡಾಗ ನಾವಿಕ ಸಾಗರ ಪರಿಕ್ರಮದ ಪರಿಕಲ್ಪನೆ ಹುಟ್ಟಿಕೊಂಡಿತು. ಅದೇ ವರ್ಷ ಒಂದು ನೌಕಾಯಾನ ಪೂರೈಸಿತು ಕೂಡ. 2013ರಲ್ಲಿ ಒಂಟಿಯಾಗಿ ನಾನ್ ಸ್ಟಾಪ್ ನೌಕಾಯಾನವನ್ನು ಪೂರೈಸಿದ್ದು ಕೂಡ ಇದೇ ಮಹಾದೇಯಿ ನೌಕೆ.

ನೌಕಾಪಡೆಯೊಂದರ ಮೊದಲ ಸಾಹಸ : ಸಂಪೂರ್ಣ ಮಹಿಳಾ ತಂಡದ ನೌಕಾಯಾನದ ಪರಿಕಲ್ಪನೆ ಮೂಡಿದಾಗ ಆರಂಭದಲ್ಲಿ ಮೂವರು ಸದಸ್ಯರ ತಂಡ ರಚನೆ ಬಗ್ಗೆ ಚರ್ಚೆಯಾಗಿತ್ತು. ಬಳಿಕ ಸುರಕ್ಷತೆಯ ದೃಷ್ಟಿಯಿಂದ ಆರು ಸದಸ್ಯರ ತಂಡ ರಚಿಸಲು ನೌಕಾಪಡೆ ತೀರ್ವನಿಸಿತು. ಹಾಗೆ, ಈ ಆರು ಸದಸ್ಯರನ್ನು ಆಯ್ಕೆ ಮಾಡಿದ ಬಳಿಕ 2015ರಲ್ಲಿ ಎಲ್ಲರನ್ನೂ ಗೋವಾದ ಸೇನಾ ನೆಲೆಗೆ ನಿಯೋಜಿಸಲಾಗಿತ್ತು. ಜಗತ್ತಿನ ಯಾವುದೇ ದೇಶದ ನೌಕಾಪಡೆ ಇಂತಹ ಸಾಹಸ ಮಾಡಿಲ್ಲ.

ತರಬೇತುದಾರ ಕ್ಯಾಪ್ಟನ್ ದೊಂಡೆ: ನೌಕಾಪಡೆಯ 20 ಮಹಿಳಾ ಯೋಧರ ಪೈಕಿ ಆರು ಸದಸ್ಯರನ್ನು ‘ನಾವಿಕ ಸಾಗರ ಪರಿಕ್ರಮ‘ ಯೋಜನೆಗೆ ಆಯ್ಕೆ ಮಾಡಿದ್ದು ಕ್ಯಾಪ್ಟನ್ ದೊಂಡೆ. ಅವರೇ ಈ ಆರು ಸದಸ್ಯರಿಗೆ ನೌಕಾಯಾನಕ್ಕೆ ಸಂಬಂಧಿಸಿದ ತರಬೇತಿಯನ್ನೂ ನೀಡಿದವರು.

ಐಎನ್​ಎಸ್​ವಿ ತಾರಿಣಿ ವಿಶೇಷ

 • 56 ಅಡಿ ಉದ್ದದ ನೌಕೆ
 • 6 ನಾವಿಕರನ್ನು ಕೊಂಡೊಯ್ಯುವ ಸಾಮರ್ಥ್ಯ
 • 130 ಎಚ್​ಪಿ ವೋಲ್ವೋ ಪೆಂಟಾ ಡಿ5 ಎಂಜಿನ್
 • 30 ಲೀ./ಗಂಟೆಗೆ ನೀರು ಶುದ್ಧೀಕರಿಸುವ ಆರ್​ಒ ಘಟಕ
 • ಕಳೆದ ಫೆಬ್ರವರಿಯಲ್ಲಿ ನೌಕಾಪಡೆಗೆ ಸೇರ್ಪಡೆ
 • ಗೋವಾದ ಅಕ್ವಾರಿಸ್ ಬಂದರಿನಲ್ಲಿ ನಿರ್ಮಾಣ
 • ಎಚ್​ಎಫ್/ವಿಎಚ್​ಎಫ್ ರೇಡಿಯೋ – ಆಯ್ದ ಡಿಜಿಟಲ್ ಕರೆಗೆ ಅವಕಾಶ
 • ತುರ್ತ ಪರಿಸ್ಥಿತಿ ಸಂದೇಶ ರವಾನಿಸುವ ರೇಡಿಯೋ ಬೆಕಾನ್
 • ಸೂಪರ್​ವಿಂಡ್ ಜನರೇಟರ್
 • ರೇಮರೈನ್ ಎಂಬ ವಿದ್ಯುನ್ಮಾನ ಆಟೊ ಪೈಲಟ್ ಹಾಗೂ ಗಾಳಿ ಆಧಾರಿತ ಚಲನೆಯ ಆಟೋ ಪೈಲಟ್ ವ್ಯವಸ್ಥೆ

 

ಸಾಹಸಿಗರು ಯಾರ್ಯಾರು

 • ನೇತೃತ್ವ: ಲೆ.ಕಮಾಂಡರ್ ವಾರ್ತಿಕಾ ಜೋಷಿ
 • ಸದಸ್ಯರು : ಲೆ.ಕಮಾಂಡರ್ ಪ್ರತಿಭಾ ಜಮ್ವಾಲ್
 • ಲೆ.ಕಮಾಂಡರ್ ಪಿ. ಸ್ವಾತಿ
 • ಲೆ. ಎಸ್.ವಿಜಯಾ ದೇವಿ
 • ಲೆ. ಬಿ. ಐಶ್ವರ್ಯಾ ಬೋಡಪಟ್ಟಿ
 • ಲೆ. ಪಾಯಲ್ ಗುಪ್ತಾ

 

ಕ್ಯಾಪ್ಟನ್ ಸಾಗಿದ ಹಾದಿ…

ಕ್ಯಾಪ್ಟನ್ ದೊಂಡೆ 2009ರಲ್ಲಿ ಸಾಗಿದ ಅದೇ ಸಾಗರದ ಹಾದಿಯಲ್ಲಿ ಈ ಮಹಿಳಾ ತಂಡದ ಸಾಗರ ಯಾನವೂ ಆಯೋಜಿಸಲ್ಪಟ್ಟಿದೆ. ಇದರದ್ದು 5 ಹಂತದ ಯಾನ. ಕ್ಯಾಪ್ಟನ್ ದೊಂಡೆ ಪರಿಕ್ರಮದ ನಡುವೆ ಎಲ್ಲೆಲ್ಲಿ ತಂಗಿದ್ದರೋ ಅಲ್ಲಿಯೇ ಈ ತಂಡವೂ ತಂಗಲಿದೆ.

ಬಹುದೊಡ್ಡ ಸವಾಲು ಎದುರಿದೆ..

‘ನಾವು 2015ರಿಂದೀಚೆಗೆ ಈ ನೌಕಾಯಾನಕ್ಕಾಗಿ ತರಬೇತಿ ಪಡೆದಿದ್ದೇವೆ. ಹಲವು ಬಾರಿ ಕಾರವಾರದಿಂದ ಪೋರ್​ಬಂದರ್​ಗೆ(2015-16), ರಿಯೋದಿಂದ ಕೇಪ್​ಟೌನ್, ಅಲ್ಲಿಂದ ಮಾರಿಷಸ್​ಗೂ(2016-17)‰ ಹಲವು ಬಾರಿ ಪಯಣಿಸಿದ್ದೇವೆ. ಬಹುಮುಖ್ಯವಾಗಿ ಈ ನೌಕೆಯ ಉಪಕರಣಗಳನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ಈ ಪಯಣ ನಮಗೆ ಸಹಕಾರಿಯಾಯಿತು. ಇದು ಬಹಳ ವಿರಳ ಅವಕಾಶ ಹಾಗೂ ಬಹುದೊಡ್ಡ ಸವಾಲಿನದ್ದು ಕೂಡ. ಇದನ್ನು ಎದುರಿಸುವುದಕ್ಕೆ ಸಜ್ಜಾಗಿಯೇ ಮುನ್ನುಗ್ಗುತ್ತಿದ್ದೇವೆ‘ ಎನ್ನುತ್ತಾರೆ ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಮ್ವಾಲ್(28). ಹಿಮಾಚಲ ಪ್ರದೇಶದವರಾದ ಅವರು ಕೂಡ ಬಿ.ಟೆಕ್ ಪದವೀಧರೆ. ಪದವಿ ಶಿಕ್ಷಣದ ನಂತರ ಅವರು ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು. ಆದರೂ, ನಂತರ ನೌಕಾಪಡೆಗೆ ಸೇರುವ ತುಡಿತ ಹೆಚ್ಚಾಗಿ ಆ ನಿಟ್ಟಿನಲ್ಲಿ ಪ್ರಯತ್ನಿಸಿ ಯಶ ಕಂಡವರು.

ತಂದೆಯೇ ಸ್ಪೂರ್ತಿ

‘ನೌಕಾಪಡೆ ಸೇರುವಲ್ಲಿ ಹಾಗೂ ಈ ನೌಕಾಯಾನ ಕೈಗೊಳ್ಳುವಲ್ಲಿ ತಂದೆಯೇ ನನಗೆ ಸ್ಪೂರ್ತಿ. ಅವರು ಮಣಿಪುರ ರೈಫಲ್ಸ್​ನ ಸದಸ್ಯರು. ನಾಲ್ವರು ಮಕ್ಕಳ ಪೈಕಿ ನಾನೊಬ್ಬಳೇ ಮಗಳು. ನನ್ನ ಪಾಲಿಗೆ ನೌಕಾ ಪಡೆ ಎಂದರೆ ಸಾಗರ. ಸಿಕ್ಕ ಅವಕಾಶವನ್ನು ಖಂಡಿತಾ ಕೈ ಚೆಲ್ಲಲಾರೆ‘ ಎಂದು ಲೆಫ್ಟಿನೆಂಟ್ ವಿಜಯಾ ದೇವಿ ಹೇಳುತ್ತ ಸಂಭ್ರಮಿಸುತ್ತಾರೆ.

 ನೌಕಾಯಾನದ ನಾಯಕಿ ಜಲಕನ್ಯೆ

ಈ ಜಲ ಪರಿಕ್ರಮದ ನಾಯಕಿ ಲೆಫ್ಟಿನೆಂಟ್ ಕಮಾಂಡರ್ ವಾರ್ತಿಕ ಜೋಷಿ(26) ಉತ್ತರಾಖಂಡದ ರಿಷಿಕೇಶದವರು. ನದಿ ದಂಡೆಯಲ್ಲೇ ಬೆಳೆದವರು. ಬಿ.ಟೆಕ್ ಪದವೀಧರೆ. ತಂದೆಗೆ ಘರ್​ವಾಲ್​ನಲ್ಲಿ ಕೆಲಸ. ತಾಯಿ ರಿಷಿಕೇಶದಲ್ಲೇ ಕಾಲೇಜೊಂದರಲ್ಲಿ ಉಪನ್ಯಾಸಕಿ. ‘ಸಾಹಸ ಯಾತ್ರೆ ಕೈಗೊಳ್ಳುವುದೆಂದರೆ ಬಹಳ ಇಷ್ಟ. ನದಿಗಳ ಜತೆಗೇ ಆಟವಾಡುತ್ತ ಬೆಳೆದವಳು. ಸಾಗರದ ಕನಸು ಕಂಡಿದ್ದೆ. ನೌಕಾಪಡೆಯ ಮೂಲಕ ಆ ಕನಸು ನನಸಾಗುತ್ತಿದೆ. ಇಂತಹ ಯಾತ್ರೆಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಸಮಚಿತ್ತ ಕಾಪಾಡುವುದು ಅತೀಅವಶ್ಯ. ಆ ಸಾಮರ್ಥ್ಯ ನನ್ನಲ್ಲಿದೆ ಎಂಬ ಕಾರಣಕ್ಕೆ ನನಗೆ ಈ ನೌಕಾಯಾನದ ನಾಯಕಿ ಹೊಣೆಗಾರಿಕೆ ಲಭ್ಯವಾಗಿದೆ‘ ಎಂದು ಅವರು ಹೇಳಿದರು.

ಜೀವಮಾನದ ಸಾಹಸ…

‘ಇದು ಜೀವಮಾನದ ಸಾಹಸ ಪಯಣ. ಕನಸು ಕೂಡ ಹೌದು. ಎಂಟು ತಿಂಗಳ ಕಾಲ ಸ್ವಜನರ ಒಡನಾಟ ಬಿಟ್ಟು ಸಾಗರ ಮಧ್ಯೆ ತೇಲುತ್ತ ಸಾಗುವಂಥದ್ದು. ಒಂಟಿತನ ಕಾಡದಂತೆ ಎಲ್ಲರೂ ಸಿನಿಮಾ, ಸಂಗೀತ, ಗೇಮ್್ಸ, ಪುಸ್ತಕ, ಕಿಂಡಲ್ ಮತ್ತು ಲ್ಯಾಪ್​ಟಾಪ್​ಗಳನ್ನು ಜತೆಗೆ ಕೊಂಡೊಯ್ಯುತ್ತಿದ್ದೇವೆ‘ ಎಂದು ಮುಗುಳುನಗು ಚೆಲ್ಲುತ್ತಾರೆ 28 ವರ್ಷದ ಐಶ್ವರ್ಯಾ ಬೋಡಪಟ್ಟಿ. ಈ ಪಯಣ ಆರಂಭಿಸುವುದಕ್ಕೂ ಮುನ್ನ ಇದೇ ನೌಕೆಯಲ್ಲಿ ಗೋವಾದಿಂದ ಕಾರವಾರ, ಮಾರಿಷಸ್​ಗೂ ಪಯಣ ಬೆಳೆಸಿದ್ದೆವು. ಸಮುದ್ರಯಾನ ಎಂದರೆ ನಾವು ನೌಕೆಯಲ್ಲಿ ಹಿಂದೆ ಕುಳಿತರಾಯಿತು. ನೌಕೆ ಮುನ್ನುಗ್ಗುವಾಗ ಹಿಂದೆ ಬಿದ್ದ ನೀರನ್ನು ನೋಡುತ್ತ ಕುಳಿತಿರಬಹುದು ಎಂದು ಭಾವಿಸಿದ್ದೆ. ಆದರೆ, ನಮ್ಮ ನೌಕೆಯ ಆಟೋ ಪೈಲಟ್ ಸರಿಯಾಗಿ ಕೆಲಸ ಮಾಡದೇ ಇದ್ದಾಗ ನಾವು ಹೇಗೆ ಸಜ್ಜಾಗಬೇಕು ಎಂಬ ಅನುಭವ ಆಗುತ್ತಲೇ ಸಾಗರ ಯಾನದ ನೈಜ ಅನುಭವ ವೇದ್ಯವಾಯಿತು. ಎಂತಹ ಕಷ್ಟದ ಸನ್ನಿವೇಶವೇ ಇರಲಿ, ನಾನು ಮ್ಯಾನೇಜ್ ಮಾಡುತ್ತೇನೆ. ನನ್ನಲ್ಲೂ ಕೊಂಚ ಹಾಸ್ಯಪ್ರಜ್ಞೆ, ತುಂಟುತನ ಇದೆ‘ ಎಂದು ಕಣ್ಣು ಮಿಟುಕಿಸಿದರು ಐಶ್ವರ್ಯಾ. ಅಂದ ಹಾಗೆ ಐಶ್ವರ್ಯಾ ಹೈದರಾಬಾದ್​ನವರಾಗಿದ್ದು, ತಂದೆ ಸಿಐಎಸ್​ಎಫ್​ನಲ್ಲಿ ಉದ್ಯೋಗಿ. ಬಿಟೆಕ್ ಪದವೀಧರರಾಗಿರುವ ಅವರು, ಹವ್ಯಾಸಿ ಸಾಹಸ ಪ್ರವೃತ್ತಿಯವರು. ಭಂಗಿ ಜಂಪ್, ರಿವರ್ ರಾಫ್ಟಿಂಗ್, ಡೀಪ್ ಸೀ ಡೈವಿಂಗ್​ನಲ್ಲೂ ಅನುಭವವಿದೆ. ಅವರ ವಿವಾಹ ನಿಶ್ಚಯವಾಗಿದ್ದು, ಈ ಪರ್ಯಟನೆ ಮುಗಿಸಿ ಬಂದ ಬಳಿಕ ನಡೆಯಲಿದೆ.

ಪತಿಯದ್ದೇ ಪ್ರೇರಣೆ

‘ಇದು ಜೀವಮಾನದ ಅವಕಾಶವಾಗಿದ್ದು, ಪತಿ ಮತ್ತು ಕುಟುಂಬದ ಸದಸ್ಯರ ಸಹಕಾರ ಮತ್ತು ಪೂರ್ಣ ಬೆಂಬಲ ಇರುವ ಕಾರಣ ಈ ಸಾಹಸಕ್ಕೆ ಮುಂದಾಗಿದ್ದೇನೆ. ಒಂದೊಮ್ಮೆ ಈ ಸಾಹಸ ಯಾತ್ರೆ ಮದುವೆ ಮೊದಲೇ ಆಗಿದ್ದರೆ ಇನ್ನಷ್ಟು ಚೆನ್ನಾಗಿ ತಯಾರಿ ಮಾಡಿಕೊಳ್ಳಬಹುದಿತ್ತು ಎಂಬುದನ್ನು ಪತಿಯೂ ಒಪ್ಪಿಕೊಂಡಿದ್ದಾರೆ‘ ಎಂದು ನಗುತ್ತಾರೆ ಇನ್ನೋರ್ವ ಅಧಿಕಾರಿ ಲೆಫ್ಟಿನೆಂಟ್ ಪತರಪಳ್ಳಿ ಸ್ವಾತಿ. ಮೂಲತಃ ಆಂಧ್ರದ ವೈಜಾಗ್​ನವರು. ಕಂಪ್ಯೂಟರ್ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಿಚನ್ ಉಸ್ತುವಾರಿ ಪಾಯಲ್

ನೌಕೆಯ ಕಿಚನ್ ಮತ್ತು ದಾಸ್ತಾನು ಕೊಠಡಿ ಉಸ್ತುವಾರಿ ಲೆಫ್ಟಿನೆಂಟ್ ಪಾಯಲ್ ಗುಪ್ತಾ(26) ಅವರದ್ದು.‘ಪರಸ್ಪರ ಉತ್ಸಾಹ ತುಂಬುವ ಕೆಲಸ ಸವಾಲಿನದ್ದು. ಆರು ಸದಸ್ಯರು ಈ ಕೆಲಸ ಮಾಡುತ್ತ ಮುನ್ನುಗ್ಗಬೇಕಾಗುತ್ತದೆ. ಬೇರೆ ಬೇರೆ ವಿಷಯಗಳ ಬಗ್ಗೆ ರ್ಚಚಿಸಬೇಕು. ನಾವು ಹಾಡಬೇಕು. ಕುಣಿಯಬೇಕು. ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಬೇಕು. ಭವಿಷ್ಯದ ಬಗ್ಗೆ ಕನಸು ಕಟ್ಟಬೇಕು. ಹಾಗೆ ನಮ್ಮ ಈ ನೌಕಾಯಾನವನ್ನು ಮನತುಂಬಿಕೊಳ್ಳುತ್ತೇವೆ. ಅಡುಗೆಗೆ ಅಗತ್ಯ ಸಾಮಗ್ರಿಗಳನ್ನು ಇರಿಸಿಕೊಂಡಿದ್ದೇವೆ. ಎರಡು ಎಲ್​ಪಿಜಿ ಸಿಲಿಂಡರ್ ಕೂಡ ಇದೆ. ನಾಲ್ಕು ಕಡೆ ತಂಗಲಿರುವ ಕಾರಣ ಅಲ್ಲೇ ರೀಫಿಲ್ ಕೂಡ ಮಾಡಿಕೊಳ್ತೇವೆ‘ ಎನ್ನುತ್ತಾರೆ ನಗುಮೊಗದ ಪಾಯಲ್(26). ಅವರು ಮೂಲತಃ ಉತ್ತರಾಖಂಡದ ಡೆಹ್ರಾಡೂನ್​ನವರು. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top