Friday, 19th October 2018  

Vijayavani

ನಾಡಿನೆಲ್ಲೆಡೆ ವಿಜಯದಶಮಿ ಸಡಗರ-ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ-ಸಾಂಸ್ಕೃತಿಕ ನಗರಿಯತ್ತ ಜನಸ್ತೋಮ        ತೂಕ ಹೆಚ್ಚಿಸಿಕೊಂಡ ಅರ್ಜುನ & ಟೀಂ-ಅಂಬಾರಿ ಹೊರಲು ಕ್ಯಾಪ್ಟನ್ ಗ್ರೀನ್‌ ಸಿಗ್ನಲ್-ಮೈಸೂರು ನಗರಿಗೆ ಬಿಗಿ ಬಂದೋಬಸ್ತ್​​​        ಡಿಕೆಶಿ ತಪ್ಪೊಪ್ಪಿಗೆಗೆ ಕಾಂಗ್ರೆಸ್​​​​​​ನಲ್ಲಿ ಭಿನ್ನಮತ-ಕನಕಪುರ ನಾಯಕನ ವಿರುದ್ಧ ದಿಗ್ಗಜರ ಆಕ್ರೋಶ        ಶಬರಿಮಲೆ ಸುತ್ತ ನಿಲ್ಲದ ಪ್ರತಿಭಟನೆ-ಸುಪ್ರೀಂಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸಭೆ-ಅಯ್ಯಪ್ಪನ ಪೂಜೆಗೆ ಕರ್ನಾಟಕದ ಅರ್ಚಕ ನೇಮಕ        ಅಮೆರಿಕ ಅಧ್ಯಕ್ಷನಿಂದ ಮತ್ತೊಂದು ಶಾಕ್​-ಎಚ್​​1 ಬಿ ವೀಸಾ ನಿಯಮ ಮತ್ತಷ್ಟು ಬಿಗಿ ಮಾಡಲು ಸಿದ್ಧತೆ-ಅನಿವಾಸಿ ಭಾರತೀಯರಿಗೆ ಶಾಕ್​        ಕಲೆಕ್ಷನ್​​​​​​ನಲ್ಲಿ ಧೂಳೆಬ್ಬಿಸುತ್ತಿದ್ಧಾನೆ ವಿಲನ್​-ಮೊದಲ ದಿನವೇ ಇಪ್ಪತ್ತುವರೆ ಕೋಟಿ ಸಂಗ್ರಹ​-ಸ್ಯಾಂಡಲ್​​​ವುಡ್​​​​ ದಾಖಲೆಗಳೆಲ್ಲ ಪೀಸ್​ ​​       
Breaking News

ನಾಯಕತ್ವದ ಹುಡುಕಾಟದಲ್ಲಿ ಕಾಂಗ್ರೆಸ್

Sunday, 03.12.2017, 3:04 AM       No Comments

|ಕೆ. ರಾಘವ ಶರ್ಮ

ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ 7 ದಿನಗಳಷ್ಟೇ ಬಾಕಿ ಇದೆ. ರಾಜ್ಯದಲ್ಲಿ 22 ವರ್ಷಗಳ ರಾಜಕೀಯ ವನವಾಸವನ್ನು ಅಂತ್ಯಗೊಳಿಸಲು ದಲಿತ, ಪಟೇಲ್, ಒಬಿಸಿಗಳನ್ನು ಪ್ರತಿನಿಧಿಸುವ ಯುವ ನಾಯಕರನ್ನು ಕಟ್ಟಿಕೊಂಡು ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್​ಗೆ ಸ್ಥಳೀಯವಾಗಿ ಪ್ರಬಲ ನಾಯಕತ್ವ ಇಲ್ಲದಿರುವುದೇ ದೊಡ್ಡ ಕೊರತೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದಿಲ್ಲಿಯಿಂದ ಬಂದು ಏನೇ ಹೇಳಿದರೂ, ‘ರಾಜ್ಯಕ್ಕೆ ನಿಮ್ಮ ವಿಶ್ವಾಸಾರ್ಹ ಮುಖ ಯಾವುದು’ ಎಂಬ ಮತದಾರನ ಪ್ರಶ್ನೆಗೆ ಕೈ ನಾಯಕರಲ್ಲಿ ಉತ್ತರವಿಲ್ಲ. 2002ರ ನಂತರ ನಡೆದ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್​ಗೆ ಹೆಚ್ಚುಕಮ್ಮಿ 50-60 ಸೀಟುಗಳನ್ನು ಗೆಲ್ಲಲಷ್ಟೇ ಸಾಧ್ಯವಾಗಿದೆ. ನರೇಂದ್ರ ಮೋದಿಗೆ ಪರ್ಯಾಯ ಎಂಬ ನಾಯಕ ಕಾಂಗ್ರೆಸ್​ನಲ್ಲಿ ಇದುವರೆಗೆ ಕಂಡಿಲ್ಲ.

1980ರ ದಶಕದಲ್ಲಿ ಪಾಟಿದಾರರನ್ನು ಕಡೆಗಣಿಸಿ ಕ್ಷತ್ರಿಯ-ಹರಿಜನ-ಮುಸ್ಲಿಂ-ದಲಿತರನ್ನು ಒಗ್ಗೂಡಿಸುವ ಮೂಲಕ 2 ಬಾರಿ ಅಧಿಕಾರಕ್ಕೆ ಬಂದಿದ್ದ ಮಾಧವ ಸಿನ್ಹ ಸೋಲಂಕಿ ಕಾಂಗ್ರೆಸ್​ನ್ನು ಪ್ರವರ್ಧಮಾನಕ್ಕೆ ಕೊಂಡೊಯ್ದಿದ್ದರು. ಆದರೆ ಪಾಟಿದಾರರನ್ನು ಅಲಕ್ಷಿಸಿದ್ದೇ ಕೈಗೆ ಮುಳುವಾಯಿತು. 1990ರ ನಂತರ ಕೈಗೆ ಇಲ್ಲಿ ನೆಲೆ ಸಿಕ್ಕಲಿಲ್ಲ. ಗುಜರಾತ್ ಕಾಂಗ್ರೆಸ್ ಎಂದ ಕೂಡಲೇ ಈಗ ದೆಹಲಿಯಲ್ಲಿ ಕೂತಿರುವ ಅಹ್ಮದ್ ಪಟೇಲ್ ಮತ್ತು ಮಧುಸೂಧನ್ ಮಿಸ್ತ್ರಿ ನೆನಪಾಗುತ್ತಾರಾದರೂ, ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವುದಕ್ಕಿಂತ ಹೆಚ್ಚು ಹಾಳು ಮಾಡಿದರು ಎಂದೇ ಸ್ಥಳೀಯ ಮುಖಂಡರು, ಕಾರ್ಯಕರ್ತರು ಕಿಡಿ ಕಾರುತ್ತಾರೆ. ವಡೋದರಾದಿಂದ ಸೂರತ್​ಗೆ ಮಧ್ಯೆ ಇರುವ ದಾಭೋಯ್ನಲ್ಲಿ ವಿಜಯವಾಣಿಗೆ ಸಿಕ್ಕ ದೋಖ್ಲಾ ಮತ್ತು ಜಿಲೇಬಿ ಮಾರುತ್ತಿದ್ದ ಉದಯ ಪಟೇಲ್ ಕಾಂಗ್ರೆಸ್​ನ ಪಕ್ಕಾ ಅಭಿಮಾನಿ. ಆದರೆ, 24 ವರ್ಷದ ಹಾರ್ದಿಕ್ ಪಟೇಲ್​ನನ್ನು ರಾಜ್ಯದ ಪಟೇಲರು ಒಪ್ಪುತ್ತಾರೋ ಗೊತ್ತಿಲ್ಲ ಎನ್ನುತ್ತಾನೆ. ‘ಹಮಾರಾ ಪಾರ್ಟಿ ಕೋ ಭೀ ಮೋದಿ ಜೈಸೆ ಕಾಮ್ ಕರ್ನೆವಾಲಾ ಆದ್ಮಿ ಚಾಹಿಯೇ’ ಎಂಬುದು ಉದಯ್ ದೃಢ ನಿಲುವು.

ಮೂಲತಃ ಭರೂಚ್​ನವರಾದ ಅಹ್ಮದ್ ಭಾಯ್ ಪಟೇಲ್ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದರು. ಎಂದಿನಂತೆ ಅವರು ತೆರೆಯ ಹಿಂದೆ ತಂತ್ರಗಳನ್ನು ಹೆಣೆಯುತ್ತಿದ್ದು, ಮುಸ್ಲಿಂ ಪ್ರಾಂತ್ಯಗಳಲ್ಲಿ ಬಿಟ್ಟರೆ ಇತರೆಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯ ಕಾಂಗ್ರೆಸ್​ನಲ್ಲಿ ಬಲಿಷ್ಠ ನಾಯಕರಾದರೂ, ಗುಜರಾತ್​ನಂತಹ ‘ಹಿಂದು ಕೇಂದ್ರಿತ’ ರಾಜ್ಯದಲ್ಲಿ ಮುಸ್ಲಿಂ ವ್ಯಕ್ತಿಯನ್ನು ನಾಯಕನ್ನಾಗಿ ಮಾಡುವುದು ಕಾಂಗ್ರೆಸ್ ವರಿಷ್ಠರಿಗೂ ಬೇಕಿರಲಿಲ್ಲ. ಹೀಗಾಗಿ ಅಹ್ಮದ್ ದಿಲ್ಲಿಯಲ್ಲೇ ಕೂರುತ್ತಾರೆ. ಸೋನಿಯಾ ಗಾಂಧಿ ಜತೆಗೆ ಚೆನ್ನಾಗಿದ್ದರೂ ರಾಹುಲ್ ಜತೆ ಅಷ್ಟಕ್ಕಷ್ಟೇ ಎಂಬುದನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ಇನ್ನು ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೆವಾನಿ ನಿರ್ದಿಷ್ಟ ಜಾತಿ, ಸಮುದಾಯಗಳಿಗೆ ಸೀಮಿತವಾಗಿರುವುದರಿಂದ ಸೀಮಿತ ಭಾಗಗಳಲ್ಲಿ ಮಾತ್ರ ಅವರು ಪ್ರಭಾವ ಬೀರಬಲ್ಲರು.

ಹಾರ್ದಿಕ್ ಪಟೇಲ್ ಬಗ್ಗೆ ನಗರಗಳ ಮತದಾರರಲ್ಲಿ ಹೆಚ್ಚು ನಂಬಿಕೆ ಇದ್ದಂತಿಲ್ಲ. ‘ಮೀಸಲಾತಿಗಾಗಿ ಆಂದೋಲನ ಮಾಡಿ, ಈಗ ಕಾಂಗ್ರೆಸ್ ಜತೆ ಸೇರಿಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್ಸಿಗರಿಂದ ಆತ, ಮನೆ ಕಾರುಗಳನ್ನು ಪಡೆದುಕೊಂಡಿದ್ದಾನೆ. 25 ವಯಸ್ಸಾಗಿದ್ದರೆ ಖಂಡಿತಾ ಆತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ. ಟಿಕೆಟ್​ಗಾಗಿ ಲಾಬಿ ಮಾಡುವಾತನ ಹೋರಾಟದಲ್ಲಿ ನಂಬಿಕೆ ಇಲ್ಲ’ ಎಂದು ಆನಂದ್ ಕ್ಷೇತ್ರದ ಬೀದಿ ಬದಿ ವ್ಯಾಪಾರಿ ದಿನೇಶ್ ಅಗರ್​ವಾಲ್ ಹೇಳುತ್ತಾರೆ.

ಮೇಲ್ವರ್ಗ ಮತ್ತು ನಗರಗಳ ಬಹುತೇಕ ಮತದಾರರು ಬಿಜೆಪಿಗೆ ಮತ ನೀಡುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್ ಗ್ರಾಮೀಣ ಗುಜರಾತನ್ನು ಕೇಂದ್ರೀಕರಿಸಿದೆ. ಉನಾದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ನಡೆಸಿದ ಹೋರಾಟದಿಂದ ಬೆಳಕಿಗೆ ಬಂದ ದಲಿತ ನಾಯಕ ಜಿಗ್ನೇಶ್ ಮೆವಾನಿ ಬಗ್ಗೆ ಗ್ರಾಮೀಣ ಸ್ತರದಲ್ಲಿ ಸ್ವಲ್ಪ ಮಟ್ಟಿಗೆ ವಿಶ್ವಾಸಾರ್ಹತೆ ಕಾಣುತ್ತಿದೆ. ಆದರೆ ರಾಜಕೀಯ ಅನನುಭವಿಗಳಾದ್ದರಿಂದ ಫಲಿತಾಂಶ ಬಂದ ಮೇಲಷ್ಟೇ ಗೊತ್ತಾಗಬೇಕು. ಪಟೇಲರ ಮೀಸಲಾತಿ ವಿರೋಧಿಸಿ ಬೆಳಕಿಗೆ ಬಂದ ಅಲ್ಪೇಶ್ ಠಾಕೂರ್, ಈಗ ಪಟೇಲರ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ನಿಲುವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ. ಹೀಗಾಗಿ, ಅಲ್ಪೇಶ್​ರ ಬದ್ಧತೆಯನ್ನೇ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ.

ರಾಹುಲ್ ಬಗ್ಗೆ ಮುಸ್ಲಿಮರಲ್ಲಿ ಚರ್ಚೆ: ಮಸೀದಿಗಳಿಗೆ ಹೋಗದೆ ಹಿಂದು ದೇವಾಲಯಗಳಿಗೆ ಮಾತ್ರ ಭೇಟಿ ಕೊಡುತ್ತಾ ‘ಮೃದು ಹಿಂದುತ್ವ’ದ ಪ್ರದರ್ಶನ ಮಾಡಿರುವ ರಾಹುಲ್ ಗಾಂಧಿ ಬಗ್ಗೆ ಮುಸ್ಲಿಮರಲ್ಲಿ ಚರ್ಚೆಯಾಗುತ್ತಿದೆ. ಮುಸ್ಲಿಂ ಸಂಘಟನೆಗಳ ಮುಖಂಡರು, ‘ಕಾಂಗ್ರೆಸ್ ನಾಯಕ ಮಂದಿರಕ್ಕೆ ಭೇಟಿ ನೀಡುವುದನ್ನು ನಾವು ‘ಮುಸ್ಲಿಮರ ಕಡೆಗಣನೆ’ ಅಂತ ವ್ಯಾಖ್ಯಾನಿಸುವುದು ಸರಿಯಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರಂತೆ. ಸಾಬರಮತಿಯ ಮಸೀದಿಯೊಂದರ ಪಕ್ಕದಲ್ಲಿ ಸೆಲೂನ್ ಹಾಕಿಕೊಂಡಿರುವ ಮಧ್ಯ ವಯಸ್ಸಿನ ಇಕ್ಬಾಲ್ ಮಹಮ್ಮದ್, ‘ದೇವಸ್ಥಾನಕ್ಕೆ ಹೋದರೆ ತಪ್ಪೇನಿಲ್ಲ. ಮೊದಲು ಕಾಂಗ್ರೆಸ್ ಚುನಾವಣೆ ಗೆಲ್ಲಬೇಕು. ನಂತರ ಎಲ್ಲವೂ ಒಂದೊಂದಾಗಿಯೇ ಸರಿಯಾಗುತ್ತದೆ. ಕಾಂಗ್ರೆಸ್ ಲೋಗ್ ಹಮಾರೆ ಬಾತ್ ಸುನ್ ತೇ ಹೈ’ ಎಂದು ಹೇಳಿದ. ಮುಸ್ಲಿಂ ಮತಬ್ಯಾಂಕ್ ಇರುವ ಪ್ರದೇಶಗಳಲ್ಲಿ ಬಿಜೆಪಿ ರ್ಯಾಲಿಗಳನ್ನು ಕೈಗೊಂಡಿದ್ದರೂ, ಮುಸ್ಲಿಂ ಧರ್ಮದ ಯಾರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ.

ಪಂಚನಾಯಕರು

ರಾಜ್ಯ ಕಾಂಗ್ರೆಸ್​ನಲ್ಲಿ ಶಕ್ತಿಸಿಂಗ್ ಗೋಹಿಲ್, ಭರತ್​ಸಿನ್ಹ ಸೋಲಂಕಿ, ಸಿದ್ಧಾರ್ಥ ಪಟೇಲ್, ಅರ್ಜುನ್ ಮೊಧ್ವಾಡಿಯಾ ಮತ್ತು ಪರೇಶ್ ಧನಾನಿ ಎಂಬ ಐವರು ಮೇಲ್​ಸ್ತರದ ನಾಯಕರಿದ್ದಾರೆ. ಅವರಲ್ಲಿ ಸಿಎಂ ಯಾರೆಂಬ ಪ್ರಶ್ನೆಗೆ ಉತ್ತರ ಇಲ್ಲ. ಪರೇಶ್ ಧನಾನಿ ಹೊರತುಪಡಿಸಿದರೆ ಉಳಿದ ನಾಲ್ವರು 2012ರ ಚುನಾವಣೆಯಲ್ಲಿ ಸೋಲುಂಡಿದ್ದರು.

ಶಕ್ತಿಸಿಂಗ್ ಗೋಹಿಲ್: ಅಹ್ಮದ್ ಪಟೇಲ್ ರಾಜ್ಯಸಭೆಗೆ ಮರು ಆಯ್ಕೆಯಾಗುವುದರಲ್ಲಿ ಗೋಹಿಲ್ ತಂತ್ರಗಳೇ ಹೆಚ್ಚು ಫಲ ನೀಡಿದ್ದವು. ಗೋಹಿಲ್ ಭಾವ್​ನಗರ ಕ್ಷೇತ್ರದಿಂದ 3 ಬಾರಿ ಶಾಸಕರಾಗಿದ್ದು, 2012ರಲ್ಲಿ ಸೋತ ಬಳಿಕ 2014ರ ಮಂಡ್ವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದಿದ್ದರು.

ಭರತ್​ಸಿನ್ಹ ಸೋಲಂಕಿ: ಮಾಜಿ ಸಿಎಂ ಮಾಧವ ಸಿನ್ಹ ಸೋಲಂಕಿ ಪುತ್ರ. 2002ರಿಂದ ಹೀನಾಯ ಸ್ಥಿತಿಗೆ ತಲುಪಿದ್ದ ಪಕ್ಷವನ್ನು 2006ರಿಂದ ಪುನರುಜ್ಜೀವನ ಮಾಡಿದ್ದು ಸೋಲಂಕಿ ಎಂಬ ಅಭಿಪ್ರಾಯವಿದೆ. ಆದರೆ 2007ರಲ್ಲಿ ‘ಅಸಭ್ಯ ವಿಡಿಯೋ’ದಲ್ಲಿ ಕಾಣಿಸಿಕೊಂಡ ಆರೋಪದಿಂದಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2015ರಿಂದ ಮತ್ತೆ ಅವರು ರಾಜ್ಯಾಧ್ಯಕ್ಷರಾಗಿದ್ದಾರೆ.

ಅರ್ಜುನ್ ಮೊಧ್ವಾಡಿಯಾ: 2002ರಲ್ಲಿ ಪೋರಬಂದರ್​ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದ ಮೊಧ್ವಾಡಿಯಾ, 2007ರ ಮೋದಿ ಅಲೆಯ ಮಧ್ಯೆಯೂ ಮತ್ತೊಮ್ಮೆ ಗೆಲುವು ಸಾಧಿಸಿದ್ದರು. 2011ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾದರೂ, 2012ರಲ್ಲಿ ಕೈ ಹೀನಾಯ ಸೋಲು ಕಂಡಿತು.

ಸಿದ್ಧಾರ್ಥ ಪಟೇಲ್: ಮಾಜಿ ಸಿಎಂ ಚಿಮನ್​ಭಾಯ್ ಪಟೇಲ್ ಪುತ್ರ. ಹಾಲಿ ಚುನಾವಣೆಯ ಪ್ರಚಾರ ಸಮಿತಿಯ ಅಧ್ಯಕ್ಷ. ಕಾಂಗ್ರೆಸ್ ಬೆಂಬಲಿಸುವ ಪಾಟಿದಾರರಲ್ಲಿ ಪ್ರಭಾವಿ ನಾಯಕ. 2008ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಟೇಲ್, ಜನರ ಕೈಗೆಟುಕಬಲ್ಲ ನಾಯಕ ಎನಿಸಿಕೊಂಡಿದ್ದಾರೆ.

ಪರೇಶ್ ಧನಾನಿ: ಅಮ್ರೇಲಿ ಕ್ಷೇತ್ರದ ಜನಪ್ರಿಯ ಮುಖಂಡ. ಮೂಲತಃ ರೈತ ಕುಟುಂಬದ ಯುವ ನಾಯಕ ಧನಾನಿ, 2002ರ ತಮ್ಮ ಮೊದಲ ಚುನಾವಣೆಯಲ್ಲೇ ಕೃಷಿ ಸಚಿವ ಪುರುಷೋತ್ತಮ ರೂಪಾಲರನ್ನು ಸೋಲಿಸಿದ್ದರು. ಪಾಟಿದಾರ ಸಮುದಾಯದ ಅವರನ್ನು ಕಾಂಗ್ರೆಸ್​ನ ಭವಿಷ್ಯದ ನಾಯಕ ಎಂದೇ ಅನೇಕರು ಹೇಳುತ್ತಾರೆ.

Leave a Reply

Your email address will not be published. Required fields are marked *

Back To Top