Monday, 15th October 2018  

Vijayavani

‘ಉಪ' ಕದನಕ್ಕೆ ಇಂದು ಉಮೇದುವಾರಿಕೆ-ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರ ನಾಮಪತ್ರ- ಇತ್ತ ರಾಮನಗರದಿಂದ ಸಿಎಂ ಪತ್ನಿ        ಕುತೂಹಲ ಕೆರಳಿಸಿದ ಬೆಳಗಾವಿ ಎಪಿಎಂಸಿ ಎಲೆಕ್ಷನ್-ಲಕ್ಷ್ಮೀ ವಿರುದ್ಧ ಸೋಲು ತೀರಿಸಿಕೊಳ್ಳಲು ಜಾರಕಿಹೊಳಿ ಬಣ ಸಿದ್ಧತೆ        ಸ್ಯಾಂಡಲ್​ವುಡ್​ನಲ್ಲೂ ‘ಮೀ ಟೂ’ ಸದ್ದು-ನಟಿ ಸಂಗೀತಾ ಭಟ್ ದಯವಿಟ್ಟು ಗಮನಿಸಿ ಅಂತ ಫೇಸ್​ಬುಕ್​ನಲ್ಲಿ ನೋವು        ಮೀ ಟೂ ಆರೋಪಕ್ಕೆ ಖುಷ್ಬು ತಿರುಗೇಟು-ಕೇಜ್ರಿಸ್ಟಾರ್ ಮೇಲೆ ಬೊಟ್ಟು ಮಾಡಿದವರಿಗೆ ಎದುರೇಟು        MEE TOOಗೆ ಬಿತ್ತು ಮೊದಲ ವಿಕೆಟ್-ಕೇಂದ್ರ ಸಚಿವ ಸ್ಥಾನಕ್ಕೆ ಎಂ.ಜೆ.ಅಕ್ಬರ್ ರಿಸೈನ್​        ಪೆಟ್ರೋಲ್ ಬ್ಯಾರಲ್ ಸ್ಫೋಟಕ್ಕೆ ಕೊಪ್ಪಳದ ಅಧಿಕಾರಿ ಸಾವು -ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನಲ್ಲಿ ಕೊನೆಯುಸಿರು       
Breaking News

ನಾನೇ ಸಿಎಂ ಆದರೆ…

Tuesday, 14.11.2017, 3:05 AM       No Comments

‘ಮಕ್ಕಳ ದಿನ’ದ ಸಡಗರಕ್ಕೆ ಅಕ್ಷರದ ಬಣ್ಣ ಹಚ್ಚಲು ವಿಜಯವಾಣಿ ಪತ್ರಿಕೆಯು ಮಕ್ಕಳಿಗಾಗಿಯೇ ಇಂದು(ನ.14) ವಿಶೇಷ ಸಂಚಿಕೆ ರೂಪಿಸಿದೆ. ಮಕ್ಕಳು ಓದು ಮುಗಿದ ಬಳಿಕ ಏನೇನೋ ಆಗುವ ಕನಸು ಕಂಡಿದ್ದಾರೆ. ಒಂದು ವೇಳೆ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಪಟ್ಟ ಸಿಕ್ಕರೆ..! ಹೌದು.. ಆ ಅವಕಾಶ ಸಿಕ್ಕರೆ ಅವರೆಲ್ಲ ಏನು ಮಾಡಬಹುದೆಂಬ ಕುತೂಹಲ ನಮಗೂ ಇದೆ. ಅದನ್ನು ಅವರ ಮಾತಿನಲ್ಲೇ ವಿಜಯವಾಣಿ ಬಿಚ್ಚಿಟ್ಟಿದೆ. ಅಂದಹಾಗೆ ಎಲ್ಲ ಪುಟಾಣಿಗಳಿಗೂ ‘ಮಕ್ಕಳ ದಿನಾಚರಣೆ’ ಶುಭಾಶಯಗಳು.

 ‘ಬಡ ಮಕ್ಕಳ ಹುಟ್ಟು ಹಬ್ಬವನ್ನು ಜೋರಾಗಿ ಆಚರಿಸಿ ಖುಷಿ ಪಡಿಸ್ತೀನಿ. ಪಾಪ ಹಸು ಮತ್ತು ನಾಯಿಗಳು ಬೀದಿಯಲ್ಲಿ ಕಸದೊಂದಿಗೆ ಇರೋ ಆಹಾರ ತಿನ್ನುತ್ತಿವೆ. ಅವುಗಳಿಗೆ ಒಳ್ಳೆಯ ಆಹಾರ ಕೊಡ್ತೇನೆ. ಶಾಲೆಯಲ್ಲಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ಪಾಠ, ಇನ್ನುಳಿದ ದಿನ ಹಾಡು, ಡಾನ್ಸ್, ಆಟ ಇರಬೇಕು. ಕಳ್ಳರು ಮತ್ತು ಮೋಸಗಾರರಿಗೆ ಎಲ್ಲ ರಸ್ತೆಗಳನ್ನು ಕ್ಲೀನ್ ಮಾಡೋ ಕೆಲ್ಸ ಕೊಡ್ತೀನಿ…’ ಎನ್ನುತ್ತಾಳೆ ಮೈಸೂರಿನ ಕ್ಯಾಪಿಟಲ್ ಪಬ್ಲಿಕ್ ಶಾಲೆಯ ಎಲ್​ಕೆಜಿ ವಿದ್ಯಾರ್ಥಿನಿ ಮನಸ್ವಿ.

‘ಯಾವ ಮಕ್ಕಳಲ್ಲಿ ಟ್ಯಾಲೆಂಟ್ ಇದೆಯೋ ಅವರಿಗೆ ಅವಕಾಶ ಸಿಗುವಂತಾಗಬೇಕು’ ಎನ್ನುವ ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಚೈತ್ರಾ ಎಸ್.ಎಂ., ‘ಶಾಲಾ-ಕಾಲೇಜುಗಳ ಸೀಟ್ ವಿತರಣೆಯಲ್ಲಿ ಜಾತಿ ಆಧಾರದಡಿಯ ಮೀಸಲಾತಿ ಪದ್ಧತಿ ಇಲ್ಲವಾಗಿಸುವೆ. ಈ ಮೀಸಲಾತಿಯಿಂದಾಗಿ ನಾನು ನವೋದಯ ಸೀಟ್ ಕಳೆದುಕೊಳ್ಳಬೇಕಾಯಿತು. ನನ್ನಂತೆ ಅದೆಷ್ಟು ಮಕ್ಕಳು ನೊಂದಿದ್ದಾರೋ.. ಯಾವುದೋ ಹಳೆಯ ನಿಲುವಿಗೆ ಇಂದು ಏನೂ ಅರಿಯದ ನಾವು ನೋವು ಅನುಭವಿಸಬೇಕಿದೆ. ಇಲ್ಲಿ ಎಲ್ಲ ಮಕ್ಕಳೂ ಸಮಾನರಾಗಿರುವಂತೆ ನೋಡಿಕೊಳ್ಳುವೆ’ ಎನ್ನುತ್ತಾಳೆ.

ರಾಜಕೀಯಕ್ಕೆ ಬರುವ ಅಭ್ಯರ್ಥಿಗಳು ರಾಜಕೀಯ ಶಾಸ್ತ್ರ, ಕಾನೂನು ಪದವಿ, ಕನಿಷ್ಠ ಪದವಿ ಪಡೆದಿರಬೇಕು ಎಂಬ ಕಾನೂನು ಮಾಡುತ್ತೇನೆ ಎನ್ನುತ್ತಾನೆ ಸಂತೇಬೆನ್ನೂರಿನ ಎಸ್.ಎಸ್.ಜೆ.ವಿ.ಪಿ. ಶಾಲೆಯ 9ನೇ ತರಗತಿ ವಿದ್ಯಾರ್ಥಿ ಹರ್ಷ ಆರ್.ಬಿ. ಕುಡಿಯುವ ನೀರಿಗಾಗಿ ನನ್ನ ಅಮ್ಮ, ಅಕ್ಕಂದಿರಷ್ಟೇ ಅಲ್ಲ, ನಮ್ಮೂರಿನ ಜನ ಪರದಾಡುತ್ತಿದ್ದಾರೆ. ನನ್ನ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆಯೂ ಇಲ್ಲ. ಆದರೆ ಸಮಯಕ್ಕೆ ಸರಿಯಾಗಿ ಬೀರು, ಬ್ರಾಂದಿ ಚಾಚೂ ತಪ್ಪದೆ ತಲುಪುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 71 ವರ್ಷ ಕಳೆದರೂ ಎಲ್ಲೆಡೆ ಸುಲಭವಾಗಿ ಸಿಗುವುದು ನೀರಲ್ಲ, ಮದ್ಯ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಸರ್ಕಾರ ಬೊಕ್ಕಸಕ್ಕೆ ನಷ್ಟವಾದೀತು ಎಂದು ಮದ್ಯಪಾನ ನಿಷೇಧ ಮಾಡ್ತಿಲ್ಲ. ನಾನು ಬಾರ್​ಗಳನ್ನು ಮುಚ್ಚಿಸಿ ಎಲ್ಲ ಜನರಿಗೂ ಶುದ್ಧ ಕುಡಿವ ನೀರು ಸಿಗುವಂತೆ ಮಾಡುವೆ’ ಎಂಬುದು ದೇವದುರ್ಗದ 5ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಹೀರೆಮಠ ಅವಳ ಶಪಥ.

ರೈತರ ಸಮಸ್ಯೆ ಆಲಿಸಲು ಪ್ರಗತಿಪರ ರೈತರೊಬ್ಬರನ್ನು ಸರ್ಕಾರದ ಸಲಹೆಗಾರರನ್ನಾಗಿ ಮಾಡಿಕೊಳ್ಳುವೆ ಎಂದು ಬೆಂಗಳೂರಿನ ನಿಖಿಲ ಹೊಸಗೌಡರ ಹೇಳಿದರೆ, ಯಾವುದೇ ಕಾರ್ಯಕ್ರಮಗಳಲ್ಲಿ ನಿದ್ರೆ ಮಾಡುವುದಿಲ್ಲ, ಎಚ್ಚರಿಕೆಯಿಂದ ಕೆಲಸ ಮಾಡುವೆ ಎನ್ನುತ್ತಾನೆ ಕೊಪ್ಪಳದ ಶ್ರೀನಿಧಿ ಇನಾಂದಾರ.

ಅಂದಹಾಗೆ ಈ ಮಕ್ಕಳು ಇದೆಲ್ಲವನ್ನೂ ಯಾವಾಗ ಮಾಡ್ತಾರಂತೆ ಗೊತ್ತಾ? ಅವರು ಕರ್ನಾಟಕದ ಮುಖ್ಯಮಂತ್ರಿಯಾದ ಮೇಲೆ! ಹೌದು, ಮಕ್ಕಳ ದಿನಾಚರಣೆ ಅಂಗವಾಗಿ ‘ವಿಜಯವಾಣಿ’ ಪತ್ರಿಕೆಯು 14ವರ್ಷದೊಳಗಿನ ಮಕ್ಕಳಿಗೆ ‘ನೀವು ಕರ್ನಾಟಕದ ಮುಖ್ಯಮಂತ್ರಿಯಾದರೆ ಏನು ಮಾಡುತ್ತೀರಿ?’ ಎಂಬುದನ್ನು ಅಕ್ಷರ ರೂಪಕ್ಕೆ ಇಳಿಸಿ ಕಳುಹಿಸಲು ಆಹ್ವಾನಿಸಿತ್ತು. ರಾಜ್ಯಾದ್ಯಂತ 3500ಕ್ಕೂ ಹೆಚ್ಚು ಮಕ್ಕಳು ತಾವು ಸಿಎಂ ಆದಾಗ ಏನೆಲ್ಲ ಮಾಡುತ್ತೇವೆ- ತಮ್ಮ ನೇತೃತ್ವದ ಸರ್ಕಾರದಲ್ಲಿ ಕರ್ನಾಟಕ ಹೇಗೆ ಬದಲಾಗಲಿದೆ ಎಂಬುದನ್ನು ಅವರವರ ವಯಸ್ಸಿಗೆ ಅನುಗುಣವಾಗಿ ಚಿಂತನಾ ಲಹರಿ-ಗುರಿಯನ್ನು ಬಿಚ್ಚಿಟ್ಟ ಕೆಲ ಉದಾಹರಣೆಗಳು ಇವು.

ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಪಾಡುವುದು, ಎಲ್ಲ ಶಾಲೆಗಳಲ್ಲೂ ಸುಸಜ್ಜಿತ ಶೌಚಗೃಹ ಇರುವುದು ಕಡ್ಡಾಯ, ಅಂಗನವಾಡಿ ಮಕ್ಕಳಿಗೆ ಇಷ್ಟವಾಗುವ ಆಟದ ಸಾಮಗ್ರಿ ಕಲ್ಪಿಸುವಿಕೆ, ಕಸ ಮುಕ್ತ ಮತ್ತು ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ವಣ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆ ಊರಿನ ಕೃಷಿಕರಿಂದ ಕೃಷಿ ಪಾಠ ಮಾಡಿಸುವಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆ, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ, ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಮೂಲಕ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಿಕೆ ಅಂಶಗಳನ್ನು ಬಹುತೇಕ ಮಕ್ಕಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಶಿಕ್ಷಕರನ್ನು ಇತರೆ ಕೆಲಸಕ್ಕೆ ಬಳಕೆ ಮಾಡುವಂತಿಲ್ಲ, ಭೂತಾನ್ ಮಾದರಿಯಲ್ಲಿ ಪರಿಸರ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳುವುದು, ಜಂಕ್​ಫುಡ್ ಬ್ಯಾನ್, ಎಲ್ಲ ಶಾಲಾ ಕಾಲೇಜುಗಳಲ್ಲಿ ಎನ್​ಸಿಸಿ ಕಡ್ಡಾಯ ಮಾಡಿ ಭಾರತೀಯ ಸೇನೆಗೆ ಸೇರಲು ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸುವುದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಶಾಲೆಗಳಲ್ಲೂ ಸಿಸಿ ಕ್ಯಾಮರಾ ಕಡ್ಡಾಯ ಅಳವಡಿಕೆ, ಅರ್ಧವಾರ್ಷಿಕ ಪರೀಕ್ಷೆ ಮುಗಿದ ಬಳಿಕ ವಸತಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಆಗುತ್ತಿರುವ ಅಸಂಬದ್ಧ ಪದ್ಧತಿಗೆ ಬ್ರೇಕ್ ಹಾಕುವಿಕೆ, ಭ್ರಷ್ಟಾಚಾರ ನಿಮೂಲನೆಗಾಗಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವುದು. ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಎಲ್ಲ ಶಾಲೆಗಳಲ್ಲೂ ಕರಾಟೆ ತರಬೇತಿ ಜಾರಿ… ಹೀಗೆ ನಾನಾ ಕಾರ್ಯಗಳನ್ನು ತಾವು ಸಿಎಂ ಸೀಟಿಗೆ ಕುಳಿತಾಗ ಮಾಡುವುದಾಗಿ ಬಹುತೇಕ ಮಕ್ಕಳು ತಿಳಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮಳೆ ಮತ್ತು ರಸ್ತೆ ಗುಂಡಿ ಅವಾಂತರ, ಅನ್ನಭಾಗ್ಯ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದು, ಇದೆಲ್ಲವೂ ಸರಿ ಮಾಡುವುದಾಗಿ ತಿಳಿಸಿದ್ದಾರೆ.

3500ಕ್ಕೂ ಹೆಚ್ಚು ಪತ್ರ : ಆಯ್ಕೆ 10

‘ನಾನು ಸಿಎಂ ಆದರೆ?’ ಏನೆಲ್ಲ ಮಾಡುತ್ತೇನೆ ಎಂದು ರಾಜ್ಯಾದ್ಯಂತ ಮೂರೂವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಪತ್ರ ಬರೆದಿದ್ದರು. ಈ ಪೈಕಿ ಮೊದಲ ಹಂತದಲ್ಲಿ 500 ಪತ್ರಗಳನ್ನು ಆಯ್ಕೆ ಮಾಡಲಾಯಿತು. ಬಳಿಕ 500ರಲ್ಲಿ 150 ಪತ್ರ, 150ರಲ್ಲಿ 50, 50ರಲ್ಲಿ 20 ಪತ್ರಗಳು ಸೆಲೆಕ್ಟ್ ಆದವು. ಅಂತಿಮ ಸುತ್ತಿನಲ್ಲಿ 20 ಪತ್ರಗಳ ಪೈಕಿ ಉತ್ತಮ 10 ಪತ್ರಗಳನ್ನು ಚಿತ್ರನಟಿ ಅಮೂಲ್ಯ ಆಯ್ಕೆ ಮಾಡಿದರು. ಇದಕ್ಕೂ ಮುನ್ನ ಅಮೂಲ್ಯ ಅವರನ್ನು ದೂರವಾಣಿ ಮೂಲಕ ಸಂರ್ಪಸಿ ‘ಮಕ್ಕಳ ದಿನಾಚರಣೆ ವಿಶೇಷ ಸಂಚಿಕೆ’ ಬಗ್ಗೆ ಹೇಳುತ್ತಿದ್ದಂತೆ ಖುಷಿಯಿಂದ ಪತ್ರಗಳನ್ನು ಆಯ್ಕೆ ಮಾಡುವುದಾಗಿ ಒಪ್ಪಿಕೊಂಡ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ವಿಜಯವಾಣಿ ತಂಡವನ್ನು ಆಹ್ವಾನಿಸಿದರು. ಅನ್ಯ ಕಾರ್ಯಕ್ರಮಕ್ಕೆ ತೆರಳುವ ಬಿಜಿಯಲ್ಲಿದ್ದರೂ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಮಕ್ಕಳ ಪತ್ರಗಳ ರಾಶಿ ನೋಡಿ ‘ಇಷ್ಟೊಂದು ಪತ್ರಗಳೇ…’ ಎನ್ನುತ್ತ ಅಚ್ಚರಿ ಪಟ್ಟರು. ಅರ್ಧ ದಿನ ಪೂರ್ತಿ ಕೈಯಲ್ಲಿ ಮಕ್ಕಳ ಪತ್ರಗಳನ್ನು ಹಿಡಿದ ಅಮೂಲ್ಯ, ‘ಅಕ್ಷರ ದುಂಡಾಗಿವೆ. ಎಲ್ಲರೂ ಚೆನ್ನಾಗಿಯೇ ಬರೆದಿದ್ದಾರೆ. ಆದರೆ 10 ಪತ್ರ ಮಾತ್ರ ಆಯ್ಕೆ ಮಾಡಿಕೊಳ್ಳಬೇಕಿದೆ. ಆಯ್ಕೆಯಾಗದ ಮಕ್ಕಳು ಬೇಸರ ಮಾಡಿಕೊಳ್ಳಬಾರದು’ ಎಂದು ಹೇಳುತ್ತ ತಮ್ಮ ತೀರ್ಪು ನಮ್ಮ ಕೈಗಿತ್ತರು.

ಆಸಕ್ತಿ ಇರೋದನ್ನೇ ಮಾಡಿ…

ನಾನು ಮದುವೆ ಆದ ಮೇಲೂ ಮಕ್ಕಳ ದಿನಾಚರಣೆ ಸಡಗರಕ್ಕೆ ಸಾಕ್ಷಿಯಾಗಲು ನನ್ನನ್ನು ‘ವಿಜಯವಾಣಿ’ ಆಯ್ಕೆ ಮಾಡಿಕೊಂಡಿದ್ದಕ್ಕೆ ತುಂಬ ಖುಷಿಯಾಗ್ತಿದೆ ಎಂದು ಮಾತು ಶುರು ಮಾಡಿದ ಸ್ಯಾಂಡಲ್​ವುಡ್ ನಟಿ ಅಮೂಲ್ಯ, ‘ನಾನು ಎಲ್ಲಿ ಹೋದರೂ ಮಕ್ಕಳೇ ಹೆಚ್ಚಾಗಿ ನನ್ನ ಬಳಿಗೆ ಬರ್ತಾರೆ. ಚೆಲುವಿನ ಚಿತ್ತಾರ ಸಿನಿಮಾವನ್ನು ತುಂಬ ಇಷ್ಟಪಟ್ಟಿದ್ದರು. ಅದರಲ್ಲೂ ಶ್ರಾವಣಿ ಸುಬ್ರಮಣ್ಯ ಸಿನಿಮಾದ ನನ್ನ ಪಾತ್ರ ಮಕ್ಕಳಿಗೆ ಜಾಸ್ತಿ ಇಷ್ಟ ಆಗಿತ್ತು. ಮಕ್ಕಳಿಂದ ಆ ಸಿನಿಮಾದ ಡೈಲಾಗ್ಸ್ ಕೇಳುತ್ತಿದ್ದರೆ…’ ಎನ್ನುತ್ತಲೇ ಮಕ್ಕಳಂತೆ ನಕ್ಕರು. ಪೋಷಕರೇ, ಶೇ.99.9 ಮಾರ್ಕ್ಸ್ ಬರಲೇಬೇಕೆಂದು ಮಕ್ಕಳ ಮೇಲೆ ಒತ್ತಾಯ ಹಾಕ್ಬೇಡಿ. ಒಬ್ಬೊಬ್ಬರಿಗೆ ಎಜುಕೇಶನ್ ಮೇಲೆ ಅಷ್ಟು ಆಸಕ್ತಿ ಇರಲ್ಲ, ಆದರೆ ಅವರಲ್ಲೂ ವಿಶೇಷವಾದ ಪ್ರತಿಭೆ ಇರುತ್ತದೆ. ಯಾವುದರಲ್ಲಿ ಆಸಕ್ತಿ ಇದೆಯೋ ಆ ದಾರಿಯಲ್ಲಿ ಅವರನ್ನು ಕರೆದುಕೊಂಡು ಹೋಗುವುದು ಒಳಿತು. ನಾನೂ ಕೂಡ ಅವರೇಜ್ ಸ್ಟೂಡೆಂಟ್. ಶೂಟಿಂಗ್ ಹೋದಾಗಲೂ ನಾನು ತೆಗೆದುಕೊಳ್ಳುತ್ತಿದ್ದ ಮಾರ್ಕ್ಸ್ ಶೇ.70, ಮನೆಯಲ್ಲೇ ಇದ್ದು ಓದುತ್ತಿದ್ದಾಗಲೂ ಶೇ.70 ಮಾರ್ಕ್ಸ್ ಬರ್ತಿತ್ತು.

ಸೋ, ನನ್ನ ಮಮ್ಮಿ ಕೂಡ ಡಿಸೈಡ್ ಮಾಡಿದ್ರು, ಯಾಕೆ ಇವಳನ್ನ ಬೇರೆ ಕ್ಷೇತ್ರದಲ್ಲಿ ನಡೆಸಬಾರದು ಎಂದು. ಹೀಗೆ ಸಿನಿಮಾ ಮತ್ತು ವಿದ್ಯಾಭ್ಯಾಸ ಜರ್ನಿಯನ್ನು ಸಣ್ಣದಾಗಿ ಬಿಡಿಸಿಟ್ಟರು ಅಮೂಲ್ಯ.

 

ಮಕ್ಕಳೇ, ನಿಮಗೆ ಯಾವುದರಲ್ಲಿ ಆಸಕ್ತಿ ಇದೆ ಆ ಮಾರ್ಗದಲ್ಲೇ ನಡೆಯಿರಿ. ಕೆಲವರಿಗೆ ಡಾನ್ಸ್, ಕರಾಟೆ ಇಷ್ಟ. ಇನ್ನೂ ಕೆಲವರು ಓದ್ತಾ ಇದ್ರೂನು ಹಾಡ್ತಾ ಇರ್ತಾರೆ. ಮತ್ತೆ ಹಲವರು ವಾಲಿಬಾಲ್, ಥ್ರೋ ಬಾಲ್… ಹೀಗೆ ಆಟವಾಡೋದ್ರಲ್ಲೇ ಖುಷಿಯಾಗಿರ್ತಾರೆ. ಹೀಗೆ ಒಬ್ಬೊಬ್ಬರಿಗೂ ವಿಶೇಷವಾದ ಪ್ರತಿಭೆ ಇರುತ್ತೆ. ನಿಮ್ಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಬಗ್ಗೆ ಮನೆಯವರಿಗೂ ತಿಳಿಸಿ. ಅವರು ಖಂಡಿತಾ ನಿಮ್ಮ ಟ್ಯಾಲೆಂಟ್​ಗೆ ಸಪೋರ್ಟ್ ಮಾಡೇ ಮಾಡ್ತಾರೆ. ಓದಿನ ಜತೆಗೆ ಆ ಕ್ಷೇತ್ರದಲ್ಲೇ ಮುಂದುವರಿಯಿರಿ.

ಆಲ್ ದ ಬೆಸ್ಟ್ ಮಕ್ಕಳೆ. ಮಕ್ಕಳ ದಿನದ ಶುಭಾಶಯಗಳು.

| ಅಮೂಲ್ಯ ನಟಿ


ಇವರನ್ನೇ ಏಕೆ ಸೆಲೆಕ್ಟ್ ಮಾಡಿದ್ವಿ?

 # ಕೆ.ಆರ್.ಪೇಟೆಯ ಕುಮುದಾ ಬಿ.: ಈಕೆ ಅಂಗವಿಕಲೆ. ಆದರೂ ಕರ್ನಾಟಕವನ್ನು ಪ್ರಪಂಚದಲ್ಲೇ ಅತ್ಯುತ್ತಮ ರಾಜ್ಯವನ್ನಾಗಿ ಮಾಡೇ ಮಾಡ್ತೀನಿ ಎನ್ನುವ ಆತ್ಮವಿಶ್ವಾಸ ಇವಳಲ್ಲಿದೆ.

# ಸಮ್ಮಿತಾ ಸಂಪನ್ನ ಮುತಾಲಿಕ್: ಎಲ್ಲ ಶಾಲೆಗಳಲ್ಲಿ ಹೋಂ ವರ್ಕ್ ಕೊಡುವುದನ್ನು ಬ್ಯಾನ್ ಮಾಡ್ತೀನಿ, ರಾಜ್ಯದಲ್ಲಿ ಭಿಕ್ಷೆ ಬೇಡುವ ಮಕ್ಕಳು ಇರಲೇ ಬಾರದು ಎನ್ನುವ ಈಕೆಯ ಚಿಂತನೆ ಕೂಡ ಮಕ್ಕಳಷ್ಟೇ ಮುದ್ದು.

# ರಶ್ಮಿ ರಮೇಶ ಹುಂಡೇಕಾರ: ಸಚಿವರ ದಿನಚರಿ ಹೇಗಿರಬೇಕು, ಜನಸಾಮಾನ್ಯರ ಕಷ್ಟ ಅರಿಯಲು ವಿಧಾನಸೌಧಕ್ಕೆ ಬರುವಾಗ ಸಾರಿಗೆ ಬಸ್​ನಲ್ಲೇ ಸಚಿವರು ಬರಬೇಕು ಎನ್ನುವ ಈಕೆಯ ಮಾತು ಪ್ರಬುದ್ಧ.

# ಶ್ರವಣ ಕುಮಾರ ಸುರೇಶ ಮದರಖಂಡಿ: ಬರವಣಿಗೆ ಚೆನ್ನಾಗಿದೆ. ಹೈ.ಕ., ಉ.ಕ., ದ.ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ. ಜನತೆಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲವಾದ್ರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವೆ ಎಂದ ಇವರ ಮೇಲೆ ಭರವಸೆ ಮೂಡುತ್ತದೆ.

# ಸೌಜನ್ಯ ಶೆಟ್ಟಿ: ನಾನು ಭಾಷಣ ಮಾಡಲ್ಲ, ರಾಜ್ಯದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯವೇ ಮಾತನಾಡುತ್ತೆ ಎನ್ನುವ ಇವಳ ಛಲ ಆಶಾದಾಯಕ.

# ಅದ್ವೈತ ಖಂಡೇರಿ: ಆಡಳಿತದಲ್ಲಿನ ಅವ್ಯವಸ್ಥೆಯನ್ನು ಗುಡಿಸಿ ಸಾರಿಸಿ ಸುಧಾರಣೆ ಎಂಬ ರಂಗವಲ್ಲಿ ಹಾಕುವ ಪರಿಯ ನಿರೂಪಣೆ ಚೆನ್ನಾಗಿದೆ.

# ವಿಭಾ ವಿಷ್ಣುನಾಯ್ಕ: ಜನರು ಮತ್ತು ಸರ್ಕಾರದ ನಡುವಿನ ಸಂಪರ್ಕ ಹೇಗಿರಲಿದೆ. ಜನರ ಸಮಸ್ಯೆ ಆಲಿಸಲು ಗ್ರಾಮಗಳಿಗೆ ಮಂತ್ರಿಗಳು ವಾರಕ್ಕೊಮ್ಮೆ ಭೇಟಿ ಕಡ್ಡಾಯ ಎಂಬುದು ಸಾರ್ವಕಾಲಿಕ ಅನ್ವಯ.

# ಸಂಕೇತ ಬ್ಯಾಳಿ: ರಾಜ್ಯದ ಆಡಳಿತ ಕೇಂದ್ರದಲ್ಲಿ ಶಿಕ್ಷಿತ ಜನಪ್ರತಿನಿಧಿಗಳಿಗೆ ಪಾಧಾನ್ಯತೆ ನೀಡುವುದರಿಂದ ಅಭಿವೃದ್ಧಿ ಆಯಾಮ ಬದಲಾಗಲಿದೆ.

# ಆದರ್ಶ ದುಗನೂರು: ಅರ್ಥವಿಲ್ಲದಂತೆ ದಾನ ಮಾಡುತ್ತ ರಾಜ್ಯದ ಜನರನ್ನು ಸೋಮಾರಿಗಳನ್ನಾಗಿಸದೆ ಸ್ವಾವಲಂಬನೆಗೆ ಸೌಲಭ್ಯ ಕಲ್ಪಿಸುವ ಚಿಂತನೆ ಪ್ರಗತಿದಾಯಕ.

# ಮಂಜುನಾಥ ಎಂ.: ಆರೋಗ್ಯ ಮಾತ್ರವಲ್ಲ ಕುಟುಂಬಕ್ಕೂ ಹಾನಿಕಾರಕವಾದ ಮದ್ಯಪಾನಕ್ಕೆ ಕಡಿವಾಣ ಹಾಕುವ ವಿಧಾನ ಪ್ರಸ್ತುತ ಅನಿವಾರ್ಯ.

ಪ್ರಕಟಿತ ಹತ್ತು ಪತ್ರಗಳಿಗೆ ಬಹುಮಾನ ಉಂಟು

ಮಕ್ಕಳೇ, ನೀವು ಕಳುಹಿಸಿದ ‘ನಾನು ಕರ್ನಾಟಕದ ಮುಖ್ಯಮಂತ್ರಿಯಾದರೆ?’ ಏನೆಲ್ಲ ಮಾಡುತ್ತೇನೆ ಎಂಬ ಪತ್ರಗಳ ಪೈಕಿ ಪ್ರಕಟಿತ ಹತ್ತು ಮಂದಿಯ ಬರಹಕ್ಕೆ ವಿಜಯವಾಣಿ ಪತ್ರಿಕೆಯು ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಿದೆ. ಆಯಾ ಮಕ್ಕಳ ಮನೆ ಅಥವಾ ಶಾಲೆ ವಿಳಾಸಕ್ಕೆ ಬಹುಮಾನವನ್ನು ಶೀಘ್ರವೇ ಕಳುಹಿಸಲಾಗುವುದು.


ಹತ್ತು ಅತ್ಯುತ್ತಮ ಪತ್ರಗಳು

 ಕೆಟ್ಟದ್ದನ್ನು ರಂಗವಲ್ಲಿ ಹಾಕಿ ಗುಡಿಸುವೆ

 ನಾನು ಸಿಎಂ ಆದರೆ ಮಾನ್ಯ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ನಿರಾಶರಾಗುವುದಿಲ್ಲವೇ? ಬಿಡಿ, ನನ್ನ ಅದೃಷ್ಟವನ್ನು ತಿಳಿದವರು ಯಾರು? ನಾನು ಸಿಎಂ ಆಗಿ ಆಯ್ಕೆಯಾದರೆ ಮೊದಲು ಬೆಂಗಳೂರಿಗೆ ಹೋಗುತ್ತೇನೆ. ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿದ ಬಳಿಕ ಮುಖ್ಯಮಂತ್ರಿಗಳ ಕೊಠಡಿಗೆ ಹೋಗಿ ಆ ಕುರ್ಚಿ ಸದೃಢವಾಗಿದೆ ಎಂದು ದೃಢಪಡಿಸಿಕೊಂಡು ಕುಳಿತುಕೊಳ್ಳುವೆ. ಬಳಿಕ ಒಂದು ಕಪ್ ಬಿಸಿ ಚಹಾ ಕುಡಿದು ಯೋಗ್ಯರಾದವರನ್ನು ಕರೆದು ಮಂತ್ರಿಮಂಡಲವನ್ನು ವಿಸ್ತರಿಸುತ್ತೇನೆ.

ನಮ್ಮಲ್ಲಿ ಬೆಳಗ್ಗೆ ಎದ್ದು ರಂಗೋಲಿ ಹಾಕುವ ಮುನ್ನ ಸ್ಥಳವನ್ನು ಗುಡಿಸಿ ಸಾರಿಸಿ ರಂಗವಲ್ಲಿ ಹಾಕುವುದು ಸಂಪ್ರದಾಯ. ಹಾಗೆಯೇ ನಾನು ಸಹ ಕರ್ನಾಟಕದ ಸಮಸ್ತ ಕಾನೂನು ಬಾಹಿರರನ್ನು, ಭ್ರಷ್ಟಾಚಾರ ಎಸಗುವವರನ್ನು ಮತ್ತು ಮಾನವೀಯತೆ ಮರೆತು ವ್ಯವಹರಿಸುವ ಎಲ್ಲ ಮೂರ್ಖರನ್ನೂ ಗುಡಿಸಿ ಜೈಲಿಗೆ ತಳ್ಳುವ ಕಾರ್ಯಕ್ಕೆ ಮೊದಲು ಕೈ ಹಾಕ್ತೀನಿ. ಬೆಳೆ ಬೆಳೆಸುವುದಕ್ಕೂ ಮೊದಲು ಕಳೆ ಕೀಳುವುದು ಕರ್ತವ್ಯವಲ್ಲವೇ? ಆನಂತರ ರಾಜ್ಯದ ಪ್ರಜೆಗಳ ಮನಸ್ಸಿನಲ್ಲಿ ಅಂಟಿಕೊಂಡಿರುವ ದುರಾಸೆ ಎನ್ನುವ ಧೂಳನ್ನು ಅಜ್ಞಾನದ ಸಹಿತ ಸದ್ಭಾವನೆ ಎಂಬ ಸಗಣಿ ನೀರನ್ನು ಚಿಮುಕಿಸಿ ಮುಂದೆ ಅದು ಮೇಲೇಳದಂತೆ ಮಾಡುತ್ತೇನೆ.

ಇನ್ನು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅವಶ್ಯಕತೆಯಾದ ಊಟ, ಬಟ್ಟೆ, ವಸತಿ ಒದಗಿಸುವುದಕ್ಕಾಗಿ ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ವಾಣಿಜ್ಯ ಇತ್ಯಾದಿ ಕ್ಷೇತ್ರ ಅಭಿವೃದ್ಧಿ ಹೊಂದುವಂತೆ ಎಲ್ಲರಿಗೂ ಉದ್ಯೋಗ ಸಿಗುವಂತೆ, ಸುಭೀಕ್ಷೆ ನೆಲಸುವಂತೆ ಸರಿಯಾದ ವ್ಯವಸ್ಥೆ ಮಾಡುತ್ತೇನೆ. ಪ್ರಜೆಗಳ ಹಿತಕ್ಕಾಗಿ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಸರ್ವ ಪ್ರಗತಿಗೆ ಬೇಕಾದ ಕ್ರಮ.

| ಅದ್ವೈತ ಖಂಡೇರಿ 10ನೇ ತರಗತಿ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೆಟ್ಟಂಪಾಡಿ, ಪುತ್ತೂರು, ದಕ್ಷಿಣ ಕನ್ನಡ


ಆಹಾರಕ್ರಾಂತಿ ಮಾಡುವೆ…

 ನನಗೀಗ ಹದಿಮೂರು ವರ್ಷ ವಯಸ್ಸು. ನಾನು ಮುಖ್ಯಮಂತ್ರಿಯಾಗುವ ವೇಳೆಗೆ ಕರ್ನಾಟಕದ ಜನಸಂಖ್ಯೆ 10 ಕೋಟಿಯಾಗಿರುತ್ತೆ. ನಾನು ಸಿಎಂ ಆದರೆ ಅವರೆಲ್ಲರಿಗೂ ಪೂರಕ ಯೋಜನೆಗಳನ್ನು ರೂಪಿಸುತ್ತೇನೆ.

ಕೃಷಿ: ರೈತರ ಸಾಲ ಮನ್ನಾ ಮಾಡುವುದಿಲ್ಲ. ರಸಗೊಬ್ಬರ, ವ್ಯವಸಾಯೋಪಕರಣ, ಬಿತ್ತನೆಬೀಜವನ್ನು ಉಚಿತವಾಗಿ ಕೊಡುವ ಯೋಜನೆ ರೂಪಿಸಿ ಆಹಾರಕ್ರಾಂತಿ ಉಂಟುಮಾಡಿ ಬಡವರ, ಶ್ರೀಸಾಮಾನ್ಯರ ಹಸಿವು ನೀಗಿಸುವೆ.

ಉದ್ಯೋಗ: ವಿದ್ಯಾಭ್ಯಾಸಕ್ಕೆ ಜಾತಿವಾರು, ವರ್ಗವಾರು ಮೀಸಲಾತಿ ಕಲ್ಪಿಸುವೆ. ಆದರೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದಿಲ್ಲ. ಗುಣಾತ್ಮಕತೆಗೆ ಒತ್ತು ನೀಡಿ ಜಾಗತಿಕ ಮಟ್ಟದಲ್ಲಿ ನಮ್ಮ ನೌಕರರ ಕಾರ್ಯಕ್ಷಮತೆ ತೋರಿಸಲು ಅವಕಾಶ ನೀಡುವೆ.

ಮಹಿಳೆಯರು: ಹೆಣ್ಣುಮಕ್ಕಳಿಗೆ ಉದ್ಯೋಗದಲ್ಲಿ ಹಾಗೂ ಜನಪ್ರತಿನಿಧಿಗಳಾಗಲು ಶೇ.33ಅನ್ನು ಶೇ.50ಕ್ಕೇರಿಸಿ ಮಹಿಳಾ ಸಬಲೀಕರಣ ಮಾಡುತ್ತೇನೆ. ವಿಧವಾ ವಿವಾಹ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಲಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ವಿಶೇಷ ಕಾನೂನು ರೂಪಿಸಿ ಅವರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಮಾಡಲಾಗುವುದು.

ಅಂಗವಿಕಲರು: ವಿಕಲತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗ ಕಲ್ಪಿಸುವೆ. ಅತಿ ಹೆಚ್ಚು ನ್ಯೂನತೆ ಹೊಂದಿರುವವರಿಗೆ ತಿಂಗಳಿಗೆ 15,000 ರೂ. ಮಾಸಾಶನ ನೀಡಿ ಅವರ ಕುಟುಂಬಕ್ಕೆ ನೆರವಾಗುವೆ.

ವೃದ್ಧರು, ಅನಾಥರು: ಭಿಕ್ಷುಕ ರಹಿತ ರಾಜ್ಯಕ್ಕಾಗಿ ವಿಶೇಷ ಕಾನೂನು ರೂಪಿಸಿ ಆರ್ಥಿಕ ಸಹಾಯ ನೀಡಿ ವ್ಯಾಪಾರಸ್ಥರನ್ನಾಗಿಸುವುದು. ಸರ್ಕಾರದಿಂದ ವಿಶೇಷ ಅನಾಥಾಶ್ರಮ ಕಟ್ಟಿಸಿ ಆಸರೆ ಇಲ್ಲದ ವೃದ್ಧರಿಗೆ ಆಸರೆ ನೀಡುವುದು.

ಹಸಿರುವನ: ಹಸಿರು ರಾಜ್ಯವನ್ನಾಗಿ ಮಾಡುವ ಕಟ್ಟುನಿಟ್ಟಿನ ಆದೇಶ ಹೊರಡಿಸುವೆ. ಮಳೆ ನೀರು ಸಂಗ್ರಹ, ಸೌರಶಕ್ತಿ ಬಳಕೆಗೆ ಹೆಚ್ಚಿನ ಆದ್ಯತೆ. ಮುಗಿದುಹೋಗುವ ಸಂಪನ್ಮೂಲಗಳಾದ ಪೆಟ್ರೋಲ್,ಡೀಸೆಲ್, ಸೀಮೆಎಣ್ಣೆ ಉಳಿಕೆಗೆ ಕ್ರಮ.

ವ್ಯಾಪಾರಸ್ಥರು: ಗ್ರಾಹಕರಿಂದ ಹೆಚ್ಚಿನ ದರ ಪಡೆದು ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಟ್ಟು ಬಹುತೇಕ ವ್ಯಾಪಾರಿಗಳು ಮೋಸ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರದಿಂದಲೇ ಪ್ರತಿಯೊಂದು ವಸ್ತು ಮಾರಾಟ ಮಾಡುವ, ಅಮೆರಿಕಾದಲ್ಲಿರುವಂತೆ ಇಲ್ಲಿಯೂ ‘ಮಾಲ್’ ನಿರ್ವಣ, ರಸ್ತೆ ಸುಧಾರಣೆಗೆ ಜಪಾನ್ ರೀತಿಯ ತಂತ್ರಜ್ಞಾನ ಒದಗಿಸಿ, ಸಿಂಗಾಪುರ ದೇಶದಂತೆ ರಾಜ್ಯವನ್ನು ಪರಿವರ್ತಿಸುವಿಕೆ, ಸರ್ಕಾರಿ ಸ್ವಾಮ್ಯದ ಕೈಗಾರಿಕೆಗೆ ಆದ್ಯತೆ ನೀಡುವೆ. ಈ ಹೊಸ ಯೋಜನೆಗಳಿಂದ ನನ್ನ ರಾಜ್ಯವನ್ನು ಪ್ರಪಂಚದಲ್ಲೇ ಅತ್ಯುತ್ತಮ ರಾಜ್ಯವನ್ನಾಗಿ ಮಾಡುವೆ.

| ಕುಮುದಾ.ಬಿ (ಅಂಗವಿಕಲ ವಿದ್ಯಾರ್ಥಿನಿ) 7ನೇ ತರಗತಿ, ಎಸ್​ಎಸ್​ಕೆಸಿ ಹೈಸ್ಕೂಲ್, , ಕೆ.ಆರ್.ಪೇಟೆ, ಮಂಡ್ಯ ಜಿಲ್ಲೆ


 ಹೋಂ ವರ್ಕ್ ಕೊಡುವಂತಿಲ್ಲ!

 ನಾನು ಕರ್ನಾಟಕದ ಸಿಎಂ ಆದ ಕೂಡಲೇ ರಾಜ್ಯದ ಎಲ್ಲ ಶಾಲೆಗಳಲ್ಲಿ ಹೋಂ ವರ್ಕ್ ಕೊಡುವುದನ್ನು ನಿಲ್ಲಿಸ್ತೀನಿ. ತರಗತಿ ಮುಗಿದ ಬಳಿಕ ಓದಿನ ಜತೆಗೆ ಆಟ ಆಡಲು ಮಕ್ಕಳನ್ನು ಬಿಡಬೇಕೆಂದು ಆಜ್ಞೆ ಮಾಡುವೆ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳಲ್ಲವೇ? ಅವರ ಆರೋಗ್ಯ ಚೆನ್ನಾಗಿರಬೇಕು. ಅದಕ್ಕಾಗಿ ಶಾಲೆಗೊಬ್ಬರು ವೈದ್ಯರನ್ನು ನೇಮಿಸುತ್ತೇನೆ.

ಬೀದಿಯಲ್ಲಿ ಭಿಕ್ಷೆ ಬೇಡುವ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸುತ್ತೇನೆ. ಅವರಿಗೆ ಎಲ್ಲ ಸೌಲಭ್ಯವನ್ನೂ ಏರ್ಪಾಡು ಮಾಡುತ್ತೇನೆ. ರಾಜ್ಯದಲ್ಲಿ ಭಿಕ್ಷೆ ಬೇಡುವ ಮಕ್ಕಳು ಇರಲೇಬಾರದು. ‘ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಒಬ್ಬ ಮಂತ್ರಿಯನ್ನು ನೇಮಿಸ್ತೀನಿ’. ಯಾವುದೇ ಬೇಧಭಾವವ್ಲಿಲದೆ ನಮ್ಮ ರಾಜ್ಯದ ಮಕ್ಕಳು ವಿದ್ಯಾವಂತರಾಗಬೇಕು. ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆ ಇರುವಂತೆ ನೋಡಿಕೊಳ್ಳುತ್ತೇನೆ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯದಲ್ಲಿ ನಮ್ಮ ರಾಜ್ಯ ಮೊದಲನೇ ಸ್ಥಾನ ಬರುವಂತೆ ಮಾಡುತ್ತೇನೆ. ಹ್ಞಾಂ! ನನಗೊಂದು ತುಂಬಾ ದಿನದಿಂದ ಒಂದು ಆಸೆ ಇದೆ. ಏನಂದರೆ ನಾನು ಮುಖ್ಯಮಂತ್ರಿಯಾದರೆ ಮೊದಲು ಬರುವ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ನನ್ನ ದಾವಣಗೆರೆಯ ಬಾಪೂಜಿ ಶಾಲೆಗೆ ನಾನೇ ಅತಿಥಿಯಾಗಿ ಹೋಗಿ ರಾಷ್ಟ್ರಧ್ವಜಾರೋಹಣ ಮಾಡುತ್ತೇನೆ.

| ಸಮ್ಮಿತಾ ಸಂಪನ್ನ ಮುತಾಲಿಕ್,  ನಾಲ್ಕನೇ ತರಗತಿ, ಬಾಪೂಜಿ ಶಾಲೆ, ದಾವಣಗೆರೆ


ಕಡಿಮೆ ದರಕ್ಕೆ ಸಿಗಲಿ ಆಹಾರ ಸಾಮಗ್ರಿ

 ನಮ್ಮ ರಾಜ್ಯದ ಜನತೆಗೆ ಯಾವುದು ಅವಶ್ಯಕವಾಗಿದೆಯೋ ಅದು ದುಬಾರಿ. ಉದಾಹರಣೆಗೆ 1 ಕೆಜಿ ಶೇಂಗಾ ಎಣ್ಣೆ ಬೆಲೆ ಕನಿಷ್ಠ 100 ರೂ., ಆದರೆ 90 ಎಂಎಲ್ ಸಾಮಾನ್ಯ ಮದ್ಯದ ಬೆಲೆ 30ರಿಂದ 40 ರೂಪಾಯಿ. ನಾನು ಸಿಎಂ ಆದರೆ ದಿನನಿತ್ಯದ ಬಳಕೆ ವಸ್ತುಗಳಲ್ಲಿ ಪ್ರಮುಖವಾದ ಆಹಾರ ಸಾಮಗ್ರಿಯು ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಸಿಗುವಂತೆ ಮಾಡುವೆ. ಮದ್ಯದ ಬೆಲೆ ಹೆಚ್ಚಿಸುವೆ.

ಯಾಕೆ ಗೊತ್ತಾ? ಮದ್ಯ ಮತ್ತು ತಂಬಾಕು ಉತ್ಪನ್ನ ಮಾರಾಟ ನಿಷೇಧ ಮಾಡಲು ಹೋದರೆ ಜನ ವಿರೋಧಿಸುತ್ತಾರೆ. ಹಾಗಾಗಿ ಇವುಗಳ ಮಾರಾಟ ಬ್ಯಾನ್ ಮಾಡದೆ ದರ ಹೆಚ್ಚು ಮಾಡುವೆ. ಆಗ ದುಬಾರಿ ಬೆಲೆ ಕಂಡು ಜನಸಾಮಾನ್ಯರು ಇಂತಹವುಗಳ ಸೇವನೆಯಿಂದ ಕಾಲ ಕ್ರಮೇಣ ದೂರ ಸರಿಯುತ್ತಾರೆ.

ನಮ್ಮ ದೇಶದಲ್ಲಿ ಲಂಚ ಎನ್ನುವ ಭೂತ ಬೆಂಬಿಡದೆ ಕಾಡುತ್ತಿದೆ. ನೌಕರಿ ಮಾಡೋಕೆ ಹೋದಾಗಲೂ ಪಡೆದ ಉತ್ತಮ ಅಂಕಕ್ಕೆ ಬೆಲೆ ಇಲ್ಲದಾಗಿದೆ. ಪ್ರತಿಭಾವಂತರಿಗೆ ಆಗುತ್ತಿರುವ ಅನ್ಯಾಯಕ್ಕೆ ಕಡಿವಾಣ ಹಾಕುವೆ.

| ಮಂಜುನಾಥ ಎಂ., 10ನೇ ತರಗತಿ, ಸಿದ್ದಗಂಗಾ ಮಠ, ತುಮಕೂರು


ಬಡವರಾಗಿ ಬದುಕುವುದು ತಪ್ಪು

 ಯಾರ ರಕ್ಷಣೆಯೂ ಇಲ್ಲದೆ ನಿರ್ಭೀತಿಯಿಂದ ಓಡಾಡುವ ಪ್ರವೃತ್ತಿ ನನ್ನದು. ಜನರನ್ನು ಮೋಡಿ ಮಾಡುವ ಭಾಷಣ ನನ್ನಲ್ಲಿಲ್ಲ. ಆದರೆ ಕರ್ನಾಟಕವನ್ನು ಅಭಿವೃದ್ಧಿಪಡಿಸಿ ಬೆರಗುಗೊಳಿಸುವ ಛಲ ನನ್ನದು. ಕರ್ನಾಟಕದ ಎಲ್ಲ ಶಾಸಕರಿಗೂ ನಿಸ್ಪಕ್ಷಪಾತವಾಗಿ ಮಂತ್ರಿಮಟ್ಟದ ಅಧಿಕಾರ ನೀಡಿ ಅವರವರ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಅಭಿವೃದ್ಧಿಯನ್ನು ನಿರೀಕ್ಷಿಸುತ್ತೇನೆ.

ಕೃಷಿಕರಿಗೆ ಅವರ ಅಭ್ಯುದಯಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಅದನ್ನು ಅವರು ಉಪಯೋಗಿಸಿಕೊಳ್ಳುವ ರೀತಿ ಹಾಗೂ ಅವರು ಅಳವಡಿಸಿಕೊಂಡಿರುವ ಬೇಸಾಯದ ಕ್ರಮದ ಬಗ್ಗೆ ಗಮನಹರಿಸಲು ವಿಶೇಷ ಅಧಿಕಾರಿಗಳನ್ನು ಪ್ರತಿ ಊರಿನಲ್ಲೂ ನೇಮಿಸುತ್ತೇನೆ. ಇದರಿಂದ ರೈತರ ಆತ್ಮಹತ್ಯೆ ಸರಣಿಗೆ ಪೂರ್ಣವಿರಾಮ ಹಾಕಬಹುದು. ರೈತರಿಗೆ ಗುಣಮಟ್ಟದ ಬಿತ್ತನೆಬೀಜ ಹಾಗೂ ಗೊಬ್ಬರವನ್ನು ವಿಶೇಷ ದರದಲ್ಲಿ ಪೂರೈಸಿ ಬೆಳೆಗಳಿಗೆ ಯೋಗ್ಯ ಮಾರುಕಟ್ಟೆ ಕಲ್ಪಿಸಿಕೊಡುವುದು ನನ್ನ ಪ್ರಮಖ ಯೋಜನೆ. ಶೈಕ್ಷಣಿಕವಾಗಿ ನಮ್ಮ ರಾಜ್ಯ ಮುಂದುವರಿಯಬೇಕಿದ್ದು, ಇದಕ್ಕಾಗಿ ಸರ್ಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ಎಚ್ಚರದಿಂದ ನೋಡಿಕೊಳ್ಳುವೆ. ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವರಾಗಿ ಬದುಕುವುದು ತಪ್ಪು. ಆದ ಕಾರಣ ಬಡವರ ಏಳಿಗೆಗೆ ಅವರವರ ಕೌಶಲ ಹಾಗೂ ಅನುಭವಕ್ಕೆ ತಕ್ಕಂತೆ ಉದ್ಯೋಗ ಕಲ್ಪಿಸಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಅವರನ್ನು ಮೇಲ್ಮಟ್ಟಕ್ಕೆ ಏರಿಸುವುದು ನಮ್ಮ ಗುರಿ. ಜನರಿಗೆ ಅಗತ್ಯ ಸೌಕರ್ಯ ಒದಗಿಸಿ ದುಂದುವೆಚ್ಚವನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು ನಮ್ಮ ಸರ್ಕಾರದ ಆಶಯ. ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದ ಶಾಂತಿಗೆ ಭಂಗವಾಗದಂತೆ ಆಂತರಿಕ ಹಾಗೂ ಬಾಹ್ಯ ಬಂಡುಕೋರರನ್ನು ನಿಯಂತ್ರಿಸುವೆ.

| ಸೌಜನ್ಯ ಶೆಟ್ಟಿ, 7ನೇ ತರಗತಿ, ಮಾದರಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ, ಪಂಜಿಮೊಗರು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ


 ಮಾತಿಗೆ ತಪ್ಪಿದ್ರೆ ರಾಜೀನಾಮೆ

 ಸಿಎಂ ಆದರೆ ರಾಜ್ಯದ ಘನತೆ ಹೆಚ್ಚಿಸುವೆ. ಕರ್ನಾಟಕದ ಕೃಷಿ, ಶಿಕ್ಷಣ, ನೀರಾವರಿ, ಆರೋಗ್ಯ, ಉದ್ಯೋಗ, ರಸ್ತೆ, ಸಾರಿಗೆ, ಮೂಲ ಸೌಲಭ್ಯ, ಸಾಹಿತ್ಯ, ಸಂಗಿತ, ಕಲೆ, ಸಂಸ್ಕೃತಿ… ಹೀಗೆ ಸರ್ವ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ. ನಮ್ಮ ಹೆಮ್ಮೆಯ ನಾಡಧ್ವಜಕ್ಕೆ ಕಾನೂನಾತ್ಮಕ ಮಾನ್ಯತೆಗೊಳಿಸಿ ಧ್ವಜಾರೋಹಣ ಕಡ್ಡಾಯಗೊಳಿಸುತ್ತೇನೆ. ಜನಪ್ರತಿನಿಧಿಗಳಾಗಲು ಬಯಸುವವರಿಗೆ ವಯಸ್ಸು ಮತ್ತು ಶೈಕ್ಷಣಿಕ ಮಾನದಂಡ ನಿಗದಿಗೊಳಿಸುವ ಮೂಲಕ ರಾಜಕೀಯ ಕ್ಷೇತ್ರ ಸುಧಾರಣೆ ಮಾಡುವೆ. ಸಚಿವ ಸಂಪುಟದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಹೈದರಾಬಾದ್ ಕರ್ನಾಟಕದ 371ವಿಶೇಷ ಸೌಲಭ್ಯವು ಯಶಸ್ವಿಯಾಗಿ ಅನುಷ್ಠಾನಗೊಳ್ಳುವಂತೆ ಮತ್ತು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಗಳ ನಡುವಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುವೆ. ಉತ್ತರ ಕರ್ನಾಟಕ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಯನ್ನೂ ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತೇನೆ. ಬೆಳಗಾವಿ ಸುವರ್ಣಸೌಧದಲ್ಲಿ ಕೆಲ ಇಲಾಖೆಗಳ ಕಚೇರಿಗಳನ್ನು ಸ್ಥಾಪಿಸಿ ಉತ್ತರ ಕರ್ನಾಟಕ ಜನರಿಗೆ ಅನುಕೂಲ ಮಾಡುತ್ತೇನೆ. ನೆನಪಿರಲಿ, ಜನರಿಗೆ ನಾನು ಕೊಟ್ಟ ಭರವಸೆ ಈಡೇರಿಸಲು ಸಾಧ್ಯವಾಗದಿದ್ದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವೆ.

| ಶ್ರವಣಕುಮಾರ ಸುರೇಶ ಮದರಖಂಡಿ, 8ನೇ ತರಗತಿ, ಮಂಟೂರ, ಬಾಗಲಕೋಟೆ ಜಿಲ್ಲೆ


 ಮಾದರಿ ರಾಜ್ಯಕ್ಕಾಗಿ ಅಮೃತಾನ್ನ ಯೋಜನೆ ಜಾರಿ

ನಾನು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧ. ಒಂದು ಮಾದರಿ ರಾಜ್ಯದ ಸಿಎಂ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೋ ಹಾಗೇ ನನ್ನ ಕರ್ತವ್ಯ ಇರಲಿದೆ.

ನಮ್ಮ ರಾಜ್ಯದ ಜನರ ಹಸಿವು ನೀಗಿಸಲು ‘ಅಮೃತಾನ್ನ’ ಯೋಜನೆ ಹಮ್ಮಿಕೊಂಡು, ರಾಜ್ಯದ ರೈತರಿಂದ ರಾಗಿ ಮತ್ತು ಜೋಳ ಖರೀದಿಸಿ ಉತ್ತರ ಕರ್ನಾಟಕದಲ್ಲಿ ಜೋಳ ಮತ್ತು ದಕ್ಷಿಣ ಕರ್ನಾಟಕದ ಜನರಿಗೆ ರಾಗಿ ನೀಡುತ್ತೇನೆ. ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕೇತ್ರದಲ್ಲಿ ಎಲ್ಲ ಸರ್ಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುತ್ತೇನೆ. ಆ ಮೂಲಕ ರಾಜ್ಯದ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಒಂದರಿಂದ ದ್ವಿತೀಯ ಪಿಯುಸಿವರೆಗೂ ವಿಶೇಷ ವಿದ್ಯಾರ್ಥಿ ವೇತನ ಯೋಜನೆ, ಪ್ರತಿಭಾ ವೇತನ ಯೋಜನೆ ಜಾರಿಗೆ ತರುತ್ತೇನೆ. ಆರೋಗ್ಯ ಕೇತ್ರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲಿ ಎರಡು ಆಸ್ಪತ್ರೆ ಎಂಬಂತೆ ಆಸ್ಪತ್ರೆಗಳ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡು ಬಡ ಮತ್ತು ಮಧ್ಯಮ ವರ್ಗದವರಿಗೆ ಸಹಾಯವಾಗುವಂತೆ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿ ಮಾಡುತ್ತೇನೆ. ಈಗ ಸರ್ಕಾರದಿಂದ ಆಚರಿಸಲ್ಪಡುವ ದಿನಾಚರಣೆಗಳ ಪ್ರಯುಕ್ತ ಇರುವ ರಜೆಗಳಿಗೆ ಕತ್ತರಿ ಹಾಕುತ್ತೇನೆ. ಪೊಲೀಸ್ ಇಲಾಖೆಯ ಪಾರದರ್ಶಕತೆ ಮತ್ತು ದಕ್ಷತೆ ಹಾಗೂ ರಾಜ್ಯದ ಹಿತಕ್ಕೆ ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇನೆ. ರಾಜ್ಯದ ಜನರೊಂದಿಗೆ ನೇರವಾಗಿ ಮಾತನಾಡಿ ಅವರ ಆಭಿಲಾಷೆಗಳನ್ನು ತಿಳಿಸುಕೊಳ್ಳಲು ನೋವು ನೆರವು ಕಾರ್ಯಕ್ರಮವನ್ನು ಸಮಸ್ಯೆಗಳ ಬಗೆಹರಿಸುವಿಕೆಗೆ ಮಾತ್ರ ಮಾಡುತ್ತೇನೆ.

ನನ್ನ ಸಚಿವ ಸಂಪುಟದಲ್ಲಿ ಸಚಿವರಾಗಲು ಕನಿಷ್ಠ ಪದವಿ ವಿದ್ಯಾರ್ಹತೆ ಹೊಂದಿರಲೇಬೇಕು. ಐಎಎಸ್, ಕೆಎಎಸ್, ಅಧಿಕಾರಿಗಳು ಕನಿಷ್ಠ 2 ವರ್ಷವಾದರೂ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಬೇಕು. ರಾಜ್ಯವು ಸಂಪೂರ್ಣವಾಗಿ ಬಯಲುಶೌಚ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ.

ರಾಜ್ಯಕ್ಕೆ ಸೂಕ್ತವೆನಿಸುವ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುತ್ತೇನೆ ಹಾಗೂ ಪರಿಸರ ನಾಶವಾಗದಂತೆ ರಕ್ಷಿಸುತ್ತೇನೆ, ಒಟ್ಟಿನಲ್ಲಿ ಜನರನ್ನು ಸೋಮಾರಿಗಳನ್ನಾಗಿ ಮಾಡದೆ, ನಾನು ದಾನಿಯಾಗದೆ ಜನ ಕಾಯಕವೇ ಕೈಲಾಸ ಎಂದು ಸರ್ವ ಪ್ರಯತ್ನ ಮಾಡುವೆ.

| ಆದರ್ಶ ದುಗನೂರು, 10ನೇ ತರಗತಿ, ಪ್ರೌಢಶಾಲೆ, ಚಿತ್ತಾಪುರ, ಕಲಬುರಗಿ


 ಸಂಶೋಧನೆಗಾಗಿ ‘ಆಶಾಕಿರಣ’ ಪ್ರಾರಂಭ

 ನನ್ನ ನೇತೃತ್ವದ ಸರ್ಕಾರದಲ್ಲಿ ಜನರು ಸಮಸ್ಯೆ ಬಗ್ಗೆ ನೇರವಾಗಿ ನನಗೇ ಕರೆ ಮಾಡಿ ತಿಳಿಸಬಹುದು. ಅವರ ಸಮಸ್ಯೆಗೆ ಕೂಡಲೇ ಸ್ಪಂದಿಸುವೆ. ನಾಡಿನ ಜನರನ್ನು ಕಡು ಬಡವ, ಬಡವ, ಮಧ್ಯಮ ಮತ್ತು ಶ್ರೀಮಂತ ಎಂದು ಅವರ ವಾರ್ಷಿಕ ಉತ್ಪನ್ನ ವಿಂಗಡಿಸುವ ಮೂಲಕ ಸೂಕ್ತ ಯೋಜನೆ ಜಾರಿಗೊಳಿಸುವೆ. ವಿಶಾಲ ರಸ್ತೆಯಲ್ಲಿ ಹೊಗೆರಹಿತ ವಾಹನ, ಶಬ್ದರಹಿತ ವಾಹನಗಳು ನಿಯಮ ಅನುಸರಿಸಿ ಸಂಚರಿಸುವಂತೆ ಕ್ರಮಕೈಗೊಳ್ಳುವೆ. ಗ್ರಾಮಕ್ಕೊಂದು ಲೈಫ್​ಲೈನ್​ನಂತಹ ಆಸ್ಪತ್ರೆ ತೆರೆದು ಕಡ್ಡಾಯವಾಗಿ ಗ್ರಾಮಸ್ಥರು ಆರೋಗ್ಯ ತಪಾಸಣೆಗೆ ಒಳಪಡಬೇಕು ಎಂದು ನಿಯಮ ರೂಪಿಸುವೆ. ಕಡುಬಡವರಿಗೆ ಉಚಿತವಾಗಿ ಆರೋಗ್ಯ ಕಾರ್ಡ್ ವಿತರಣೆಯಾಗಲಿದೆ. ಪ್ರತಿ ಮನೆಗೊಂದು ಶೌಚಗೃಹ, ಶುದ್ಧ ನೀರು, ರಸ್ತೆ, ವಸತಿ, ಸ್ವಚ್ಛತೆ ಕುರಿತು ವಾರಕ್ಕೊಮ್ಮೆ ದೂರವಾಣಿ ಮೂಲಕ ಸಂರ್ಪಸಿ ರ್ಚಚಿಸುವೆ. ಹೊಸ ಹೊಸ ಸಂಶೋಧನೆ ಕೈಗೊಳ್ಳಲು ‘ಆಶಾಕಿರಣ’ ಹೆಸರಲ್ಲಿ ಶಾಲೆ ಪ್ರಾರಂಭಿಸುವೆ. ಪ್ರತಿ ನಾಗರಿಕರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಓದಿ, ಸರ್ಕಾರದ ಸೌಲಭ್ಯ ಪಡೆಯಬೇಕು. ಸರ್ಕಾರವೇ ಎಲ್ಲ ರೈತರಿಗೆ ಭೂಮಿಯನ್ನು ನೀಡಿ ಉಳುಮೆ ಮಾಡಿಸಿ ಸರ್ಕಾರಕ್ಕೆ ನಿಗದಿತ ಹಣ ಪಾವತಿ ಮಾಡುವ ಯೋಜನೆ ಜಾರಿ ಮಾಡುವೆ. ಡಿಜಿಟಲ್ ಕರ್ನಾಟಕ ವ್ಯವಸ್ಥೆ ಜಾರಿಯಾಗಲಿದೆ. ಕಚೇರಿಯಲ್ಲಿ ಕುಳಿತು ದಿನಕ್ಕೊಂದು ಜಿಲ್ಲೆಯ ಮೇಲ್ವಿಚಾರಣೆ ಮಾಡುತ್ತೇನೆ. ಸಮಸ್ಯೆಗಳಿರುವ ಗ್ರಾಮಕ್ಕೆ ಮಂತ್ರಿಗಳು ಕಡ್ಡಾಯವಾಗಿ ವಾರಕ್ಕೊಮ್ಮೆ ಭೇಟಿಕೊಟ್ಟು ಸ್ಥಳದಲ್ಲೇ ಪರಿಹಾರ ಒದಗಿಸಬೇಕು. ರಾಜ್ಯದಲ್ಲಿ ಪ್ರತಿ ಸರ್ಕಾರಿ ಶಾಲೆ, ಕಾಲೇಜು, ನ್ಯಾಯಾಲಯ, ಆಸ್ಪತ್ರೆ ಸೇರಿ ಸರ್ಕಾರಿ ಕಚೇರಿಗಳಲ್ಲಿ ಅತ್ಯುತ್ತಮ ಸರ್ಕಾರಿ ನೌಕರರನ್ನು ನೇಮಕ ಮಾಡುತ್ತೇನೆ.

| ವಿಭಾ ವಿಷ್ಣುನಾಯ್ಕ, 7ನೇ ತರಗತಿ, ಸರಸ್ವತಿ ವಿದ್ಯಾಕೆಂದ್ರ, ಕಲಭಾಗ, ಕುಮಟಾ, ಉತ್ತರಕನ್ನಡ


 ಸಚಿವರು ಪಾಲಿಸ್ಬೇಕು ದಿನಚರಿ

 ನಾನು ಸಿಎಂ ಆದ್ರೆ ಜನರ ಮನೆಬಾಗಿಲಿಗೆ ಸರ್ಕಾರವೇ ಬರುವಂತೆ ಮಾಡುತ್ತೇನೆ. ಮೊದಲು ಎಲ್ಲ ಮಂತ್ರಿಗಳನ್ನು ಅವರು ಆರಿಸಿ ಬಂದ ಕ್ಷೇತ್ರಗಳಿಗೆ ಕಳುಹಿಸುತ್ತೇನೆ. ವಾರದ ಮೂರು ದಿನ ಅಂದರೆ ಗುರುವಾರ, ಶುಕ್ರವಾರ, ಶನಿವಾರ ಬೈಕ್​ನಲ್ಲಿ ತಿರುಗಾಡಿ ಜನರ ಕುಂದುಕೊರತೆ ವಿಚಾರಿಸಿಕೊಂಡು ಬರುವಂತೆ ಸೂಚಿಸುವೆ. ಪ್ರತಿ ಭಾನುವಾರ ವಿಧಾನಸೌಧದಲ್ಲಿ ಸಭೆ ಕರೆದು ರ್ಚಚಿಸ್ತೀನಿ. ಸೋಮವಾರ, ಮಂಗಳವಾರ, ಬುಧವಾರ ಜನರ ತೊಂದರೆಗಳಿಗೆ ಸೂಕ್ತ ಪರಿಹಾರ ಸೂಚಿಸಲು ತಿಳಿಸುವೆ.

ಪ್ರತಿಯೊಬ್ಬ ಮಂತ್ರಿಯೂ ತಮ್ಮ ಊರಿನಿಂದ ವಿಧಾನಸೌಧಕ್ಕೆ ಬರುವಾಗ ಸಾರಿಗೆ ಬಸ್​ನಲ್ಲಿಯೇ ಬರಬೇಕು. ಬಸ್​ನಲ್ಲಿ ಓಡಾಡುವಂತಾದರೆ ಸಾಮಾನ್ಯ ಜನರ ಸಮಸ್ಯೆ ಮತ್ತು ರಸ್ತೆಯ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅರಿಯಬಹುದು. ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಇರಬೇಕು. ಇದರಿಂದ ರೈತರು ಮಾತ್ರವಲ್ಲ, ಕೂಲಿ ಕಾರ್ವಿುಕರಿಗೂ ಅನುಕೂಲವಾಗಲಿದೆ.

ಪ್ರತಿ ಕುಟುಂಬ ಅವಕಾಶ ಇರುವೆಡೆ ಕನಿಷ್ಠ ನಾಲ್ಕು ಗಿಡ ಬೆಳೆಸುವಿಕೆ ಕಡ್ಡಾಯ. ಇದರಿಂದ ಪರಿಸರದಲ್ಲಿ ಆಮ್ಲಜನಕ ಹೆಚ್ಚುತ್ತದೆ. ಪ್ರತಿ ಮನೆಯ ಆರ್​ಸಿಸಿ ಮೆಲ್ಛಾವಣಿಯು ಮಳೆನೀರು ಸಂಗ್ರಹಣಾ ತೊಟ್ಟಿಗಳಾಗಿ ಬದಲಾಗಲಿದೆ. ಆ ಮೂಲಕ ನೀರಿನ ಕೊರತೆ ನಿವಾರಣೆ ಆಗಲಿದೆ. ಹೆಂಚಿನ ಮನೆಗಳಿಗೆ ಮಳೆನೀರಿನ ಇಂಗುಗುಂಡಿ ಅಳವಡಿಸಿಕೊಳ್ಳಬೇಕು. ಇದರಿಂದ ಬಾವಿ ಹಾಗೂ ಕೊಳವೆಬಾವಿಗಳಿಗೆ ನೀರು ಬರುತ್ತದೆ. ಪ್ರತಿಯೊಬ್ಬ ಮಂತ್ರಿಯ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಕಲಿಯಬೇಕೆಂದು ಕಾನೂನು ಮಾಡುವ ಮೂಲಕ ಕನ್ನ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಮಹತ್ವ ಬರುವಂತೆ ಮಾಡುತ್ತೇನೆ.

| ರಶ್ಮೀ ರಮೇಶ ಹುಂಡೇಕಾರ, 6ನೇ ತರಗತಿ, ಕಾರ್ವೆಲ್ ಹಿರಿಯ ಪ್ರಾಥಮಿಕ ಶಾಲೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ


ಜನಪ್ರತಿನಿಧಿಗಳಿಗೆ ವಿದ್ಯಾರ್ಹತೆ ಕಡ್ಡಾಯ

 ಇಂದಿನ ತಾಂತ್ರಿಕ ಯುಗದಲ್ಲಿ ನಮ್ಮ ದೇಶ, ರಾಜ್ಯ ಬದಲಾವಣೆಯತ್ತ ಸಾಗುತ್ತಿದೆ. ಆದರೆ ರಾಜ್ಯದಲ್ಲಿ ದಿನ ಬೆಳಗಾದರೆ ಸುಳ್ಳು, ಮೋಸ, ವಂಚನೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕೀಯ ಅಖಾಡಲ್ಲಿ ಬದಲಾವಣೆ ತರಲು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ. ನಾನು ಸಿಎಂ ಆದರೆ ನಮ್ಮ ಸಂವಿಧಾನದಲ್ಲಿ ಇರುವಂತೆ ಒಬ್ಬ ಪರಿಚಾರಕನಿಗೆ ವಿದ್ಯಾರ್ಹತೆ ಕೇಳುವಂತೆ, ನಮ್ಮ ಜನಪ್ರತಿನಿಧಿಗೆ ಆಯಾ ಖಾತೆಗಳಿಗೆ ತಕ್ಕಂತೆ ಅಂದರೆ ಅರಣ್ಯ ಖಾತೆಗೆ ಎಂಎಸ್​ಸಿ, ಗೃಹಖಾತೆಗೆ ಐಪಿಎಸ್, ಹಣಕಾಸು ಖಾತೆಗೆ ಎಂಬಿಎ ಅಥವಾ ಎಂಕಾಂ, ಲೋಕೋಪಯೋಗಿ ಖಾತೆಗೆ ಬಿಇ, ಪಶುಖಾತೆಗೆ ಬಿವಿಎಸ್​ಸಿ ಅಥವಾ ಎಂವಿಎಸ್​ಸಿ ಅರ್ಹತೆ ಹೊಂದಿರುವವರನ್ನು, ಇತರ ಖಾತೆಗಳಿಗೆ ವಿದ್ಯಾಭ್ಯಾಸ ಅನ್ವಯ ಕಡ್ಡಾಯವಾಗಲಿದೆ. ಎಲ್ಲ ಇಲಾಖೆಯ ಕಚೇರಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಲಂಚ ನಿಯಂತ್ರಣಕ್ಕೆ ಬ್ರೇಕ್ ಹಾಕಲಾಗುವುದು. ಜನರಿಗೆ ಮೈಗಳ್ಳರಾಗುವ ಭಾಗ್ಯವನ್ನು ನೀಡದೆ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬಿಗಳಾಗಲು ಸರ್ಕಾರದಿಂದ ಸಕಲ ಸೌಲತ್ತು ಒದಗಿಸಲಾಗುವುದು. ತಮ್ಮ ನಗರ, ಪಟ್ಟಣ, ಗ್ರಾಮಗಳನ್ನು ಸ್ವಚ್ಛವಾಗಿರಿಸಿಕೊಂಡವರಿಗೆ ಬಹುಮಾನವಾಗಿ ಆಯಾ ನಗರ, ಪಟ್ಟಣ, ವಾರ್ಡ್, ಗ್ರಾಮಗಳಿಗೆ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಘೋಷಿಸಿವೆ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ನಿರುದ್ಯೋಗಿಗಳು, ಬಡವರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸುವ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮಾಡುತ್ತೇನೆ.

 | ಸಂಕೇತ ಬ್ಯಾಳಿ, 9ನೇ ತರಗತಿ, ವಿಶ್ವಜ್ಯೋತಿ ಇಂಟರ್​ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸಿರುಗುಪ್ಪ, ಬಳ್ಳಾರಿಇವರ ಪತ್ರಗಳೂ ಚೆನ್ನಾಗಿದ್ದವು…

 ನಾನು ಸಿಎಂ ಆದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಏನೆಲ್ಲ ಕ್ರಮ ಕೈಗೊಳ್ಳುವೆ ಎಂದು ಸುಮಾರು 3500 ಕ್ಕೂ ಹೆಚ್ಚು ಮಕ್ಕಳು ಕಳುಹಿಸಿದ ಪತ್ರಗಳ ಪೈಕಿ ಬಹುತೇಕ ಮಕ್ಕಳ ಚಿಂತನಾ ಲಹರಿ ಚೆನ್ನಾಗಿತ್ತು. ಆದರೆ 10 ಪತ್ರ ಮಾತ್ರ ಆಯ್ಕೆ ಮಾಡಬೇಕಿತ್ತು. ಆದಾಗ್ಯೂ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಮತ್ತು ತುಂಬಾ ಚೆನ್ನಾಗಿ ಪತ್ರ ಬರೆದಿದ್ದ ಕೆಲ ಮಕ್ಕಳ ಹೆಸರು ಹೀಗಿದೆ.

 

 • ಹರ್ಷಿತಾ ಪೂಜಾರ, 6ನೇ ತರಗತಿ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕೊಪ್ಪಳ.
 • ಸುಮಂತ ಹೆಗಡೆ, 10ನೇ ತರಗತಿ, ಶ್ರೀನಿಕೇತನ ಶಾಲೆ, ಇಸಳೂರು, ಉತ್ತರ ಕನ್ನಡ.
 • ಶ್ರೀಕೃಷ್ಣ ಕೋಟೆ, 9ನೇ ತರಗತಿ, ಸ.ಸಂ.ಪ.ಪೂ. ಕಾಲೇಜು, ಬೆಳ್ಳಾರೆ.
 • ಮೇಧಾ ಹೆಗಡೆ, 9ನೇ ತರಗತಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಲಾಡಿ, ಕುಂದಾಪುರ ತಾಲೂಕು, ಉಡುಪಿ.
 • ಅಪೇಕ್ಷಾ ಸುರೇಶ್ ಘಾಳಿ, 6ನೇ ತರಗತಿ, ಜೈಂಟ್ಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಅಕ್ಷಯ ಪಾರ್ಕ್, ಹುಬ್ಬಳ್ಳಿ.
 • ಕಾಂಚನಾ ಧರ್ಮರಾಜ ಸಾತಲಗಾಂವ, 5ನೇ ತರಗತಿ, ದನ್ನೂರು, ಕಲಬುರಗಿ ಜಿಲ್ಲೆ.
 • ರಚನಾ ಜಿ.ಎಂ., 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕಲ್ಲುಸಾದರಹಳ್ಳಿ, ಅರಸೀಕರೆ, ಹಾಸನ ಜಿಲ್ಲೆ. 
 • ಸಾವಿತ್ರಿ ನಿಂಗಪ್ಪ ಹೊಸಳ್ಳಿ, 7ನೇ ತರಗತಿ, ಶ್ರೀ ಈಶ್ವರ ಹಿರಿಯ ಪ್ರಾಥಮಿಕ ಶಾಲೆ, ಇರಕಲ್ಲಗಡಾ(ಯಲಮಗೇರಿ), ಕೊಪ್ಪಳ ಜಿಲ್ಲೆ.
 • ಸಾಯಿದೀಕ್ಷಾ ಎಸ್., 5ನೇ ತರಗತಿ, ಪದ್ಮನಾಭನಗರ, ಬೆಂಗಳೂರು.
 • ವೆಂಕಟೇಶ್ ಜಟ್ಟಿ ಪಟಗಾರ, ಹಿರೇಗುತ್ತಿ, ಕುಮಟಾ, ಉತ್ತರ ಕನ್ನಡ ಜಿಲ್ಲೆ.
 • ತನುಜಾ ಜಿ.ಪಿ., 8ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕೆಂಗೇರಿ ಉಪನಗರ, ಬೆಂಗಳೂರು.
 • ಆಕಾಶ್ ಶರಣಪ್ಪ ಶೆಟ್ಟರ್, 9ನೇ ತರಗತಿ, ಆದರ್ಶ ವಿದ್ಯಾಲಯ, ತಳುವಗೇರಾ, ಕುಷ್ಠಗಿ ತಾಲೂಕು, ಕೊಪ್ಪಳ ಜಿಲ್ಲೆ.
 • ಎಚ್.ಎಸ್.ನಂದೀಶ್ ಕುಮಾರ್, 8ನೇ ತರಗತಿ, ಶಾಂತಿನಿಕೇತನ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ, ಸಿರುಗುಪ್ಪ, ಬಳ್ಳಾರಿ ಜಿಲ್ಲೆ.
 • ಮೇಘಾ ಭಟ್, 8ನೇ ತರಗತಿ, ಶ್ರೀಮತಿ ಮಿಮಲಾ ಕುಲಕರ್ಣಿ ಮೆಮೋರಿಯಲ್ ಸ್ಕೂಲ್, ಶಾಂತಿನಗರ, ಹುಬ್ಬಳ್ಳಿ.
 • ಬಸಿನಗೌಡ ಪಾಟೀಲ್, 10ನೇ ತರಗತಿ, ಎಲ್​ಇಎಂ ಸ್ಕೂಲ್, ನರಗುಂದ, ಗದಗ ಜಿಲ್ಲೆ.
 • ಕೆ.ಕೆ. ಮಾನಸ, 5ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಡುವಿನ ಹೊಸಹಳ್ಳಿ, ಹಾಸನ ಜಿಲ್ಲೆ.
 • ಮಲ್ಲಿಕಾರ್ಜನ ಎಂ.ಬಳ್ಳಾರಿ, 7ನೇ ತರಗತಿ, ಲಿಂಗಸೂರು.
 • ಬಿ. ಅಕ್ಷಯ ಶಂಕರಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ನಟ್ಟಬೈಲು, ಉಪ್ಪಿನ ಅಂಗಡಿ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ.
 • ಪೂಜಿತಾ ಯಾಚವ್ ಎಂ.ಎಸ್., 10ನೇ ತರಗತಿ, ಕಾರ್ಡಿಯಲ್ ಆಂಗ್ಲ ಪ್ರೌಢಶಾಲೆ, ಮಧುಗಿರಿ.
 • ಸಿಂಚನಾ ಬಿ.ಎಸ್., 7ನೇ ತರಗತಿ, ಜಿಎಸ್​ಪಿಎಸ್​ಜಿ ಬೊಮ್ಮನಹಳ್ಳಿ, ನಾಗಮಂಗಲ ತಾಲೂಕು, ಮಂಡ್ಯ.
 • ಭಾನುಪ್ರಿಯಾ ಜಿ., 9ನೇ ತರಗತಿ, ಸುಪ್ರೀಮ್ ಪಬ್ಲಿಕ್ ಸ್ಕೂಲ್ ಮೈಸೂರು.
 • ಯಶ್ವಿತಾ ಯಾದವ್ ಎಂ.ಎಸ್., ರಾಘವೇಂದ್ರ ಬಡಾವಣೆ, ಮಧುಗಿರಿ ತಾಲೂಕು, ತುಮಕೂರು.
 • ರಾಹುಲ್ ಅಮೀನ್ ಕೊಮೆ, 5ನೇ ತರಗತಿ, ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ, ಉಡುಪಿ ಜಿಲ್ಲೆ.
 • ಕೆ.ಎಚ್.ಸುಪ್ರೀಯಾ, 10ನೇ ತರಗತಿ, ಅಥಣಿ ವಿದ್ಯಾವರ್ಧಕ ಪ್ರೌಢಶಾಲೆ, ಅಥಣಿ, ಬೆಳಗಾವಿ ಜಿಲ್ಲೆ.
 • ಕೀರ್ತಿ ಭಟ್, ಗಂಗೊಳ್ಳಿ.
 • ಸಂಪತ್ ಸಜ್ಜನ್ 9ನೇ ತರಗತಿ, ಆದಶ್ ವಿದ್ಯಾಲಯ, ರಾಯಚೂರು.
 • ಅಂಜನಾ ಶಂಕರ ಹಗಡೆ, 8ನೇ ತರಗತಿ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿರಸಿ, ಉತ್ತರಕನ್ನಡ ಜಿಲ್ಲೆ.
 • ರವಿಕುಮಾರ ಶ. ಹೋರ್ತಿ, 9ನೇ ತರಗತಿ, ಶ್ರೀ ರುಕ್ಮಣಂಗದ ಪ್ರೌಢಶಾಲೆ, ವಿಜಯಪುರ.
 • ವಿ.ಮಧುಸೂದನ್, 9ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಕ್ಕಲೇರಿ, ಕೋಲಾರ.
 • ಮೈತ್ರಿ ರೋದಾಸ ನಾಯ್ಕ, 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕಾನಗೋಡ, ಸಿದ್ದಾಪುರ ತಾಲೂಕು, ಉತ್ತರಕನ್ನಡ.
 • ಸಿದ್ದರಾಮೇಶ್ವರ ನಂದವಾಡಗಿ, 9ನೇ ತರಗತಿ, ಶ್ರೀಜ್ಞಾನ ಸಂಜೀವಿನಿ ಪ್ರೌಢಶಾಲೆ, ಲಿಂಗಸೂರು.
 • ಅಕ್ಷಯ ಆನಂದ ನಲವಾಲದ, 6ನೇ ತರಗತಿ, ಕೌರವ ಶಿಕ್ಷಣ ಸಂಸ್ಥೆ, ಬಾಳಂಬೀಡ, ಹಿರೇಕೆರೂರು, ಹಾವೇರಿ ಜಿಲ್ಲೆ.
 • ಪೂಜಾ ನಿಂಗಪ್ಪ, 7ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಚ್ಚನಕೇರಿ, ಶಿರಕೋಳ, ಬೆಳಗಾವಿ ಜಿಲ್ಲೆ.
 • ಶ್ರೀಕಾಂತ ವಿರೇಶ್ ಕರೀಕಟ್ಟಿ, 8ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಬೈಲವಾಡ, ಬೈಲಹೊಂಗಲ ತಾಲೂಕು, ಬೆಳಗಾವಿ.
 • ಎಲ್.ಎಂ.ನಚಿಕೇತ್, 7ನೇ ತರಗತಿ, ಶ್ರೀರಾಮಕೃಷ್ಣ ವಿದ್ಯಾಲಯ, ಹೊಸನಗರ, ಶಿವಮೊಗ್ಗ ಜಿಲ್ಲೆ.
 • ಸಂಜೀವ ಜಿ. ಕುಲಕರ್ಣಿ, 7ನೇ ತರಗತಿ, ಪವನ ಆಂಗ್ಲ ಮಧ್ಯಮ ಶಾಲೆ, ಗಣೇಶ್ ನಗರ, ಹಳೇಹುಬ್ಬಳ್ಳಿ.
 • ಅಮೃತಾ ದತ್ ಬಿ., 7ನೇ ತರಗತಿ, ಯಾಜ್ಞವಲ್ಕ ್ಯ ಪಬ್ಲಿಕ್ ಸ್ಕೂಲ್, ಶ್ರೀನಿವಾಸ್ ನಗರ, ಹಿರಿಯೂರು, ಚಿತ್ರದುರ್ಗ ಜಿಲ್ಲೆ.
 • ಕೆ.ಟಿ.ಉಷಾ ಗೌಡ, 9ನೇ ತರಗತಿ, ನ್ಯೂ ಆಕ್ಸ್​ಫರ್ಡ್ ಪಬ್ಲಿಕ್ ಶಾಲೆ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ.
 • ಸೋನಿಯಾ ಚ.ಗಿಡ್ಡಣ್ಣವರ, 8ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಬಚ್ಚನಕೇರಿ, ಬೆಳಗಾವಿ ಜಿಲ್ಲೆ.
 • ತೇಜಸ್ ನೆಸ್ವಿ, 8ನೇ ತರಗತಿ, ಹೆಬ್ಬಾಳ, ಮೈಸೂರು.
 • ಆರ್.ದಿವ್ಯಾ, 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹೊಳೆಹೊನ್ನೂರು, ಭದ್ರಾವತಿ ತಾಲೂಕು, ಶಿವಮೊಗ್ಗ ಜಿಲ್ಲೆ.
 • ಪ್ರಶಾಂತ ರ. ಅರಗಂಜಿ, 8ನೇ ತರಗತಿ, ಜೆ.ಎಸ್.ಎಸ್. ಪಬ್ಲಿಕ್ ಶಾಲೆ, ಬನಶಂಕರಿ 2ನೇ ಹಂತ, ಬೆಂಗಳೂರು.
 • ಸಿ.ಅಭಿನವ್, 6ನೇ ತರಗತಿ, ಶ್ರೀವಿಜಯ ವಿಠಲ ವಿದ್ಯಾಶಾಲೆ, ಮೈಸೂರು.
 • ಎಂ.ಸುಹಾಸ್ ಮಲಗಿಹಾಳ, ಶ್ರೀಜ್ಞಾನ ಸಂಜೀವಿನಿ ಶಾಲೆ, ಲಿಂಗಸೂರು.
 • ಯು.ಬಿ. ರೇವತಿ, 6ನೇ ತರಗತಿ, ಆಚಾರ್ಯ ವಿದ್ಯಾ ಶಾಲೆ, ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ.
 • ವರ್ಷಾ ಶಶಿಕಾಂತ ಭಾವಿಕಟ್ಟೆ, 6ನೇ ತರಗತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಂದಾಲ, ಬಸವನ ಬಾಗೇವಾಡಿ, ವಿಜಯಪುರ ಜಿಲ್ಲೆ.
 • ಕೆ.ಆರ್.ವಿವೇಕ್ ಗೌಡ, 9ನೇ ತರಗತಿ, ಚೇತನಾ ವಿದ್ಯಾ ಮಂದಿರ, ಹೊರಪೇಟೆ, ತುಮಕೂರು.
 • ಎಂ.ಆರ್. ವರುಣ್ ಕುಮಾರ್, 6ನೇ ತರಗತಿ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಮುಗ್ಗಿದರಾಗಿ ಹಳ್ಳಿ, ಜಗಳೂರು, ದಾವಣೆಗೆರೆ.
 • ಎನ್.ಪಿ. ವಿದ್ಯಾಶ್ರೀ, 7ನೇ ತರಗತಿ, ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್, ಬಳ್ಳಾರಿ.
 • ಪೂರ್ಣಿಮಾ ಈ ಪತ್ತಾರ, ಶಿವಾನಂದ ನಗರ, ರೋಣ, ಗದಗ ಜಿಲ್ಲೆ.
 • ಶ್ರೇಯಸ್ ಎಸ್.ಕುಲಕರ್ಣಿ, 3ನೇ ತರಗತಿ, ಸೆಂಟ್ರಲ್ ಸ್ಕೂಲ್, ಹೀರೇಕೆರೂರು, ಹಾವೇರಿ.
 • ಯುಕ್ತ ಕೆ.ಪಿ., 5ನೇ ತರಗತಿ, ಹರ್ಷ ಪಬ್ಲಿಕ್ ಸ್ಕೂಲ್, ಕೆಂಜಿಗನಹಳ್ಳಿ, ದೊಡ್ಡಬಳ್ಳಾಪುರ.
 • ಅಶೋಕ ಗೌಡರ ಎಸ್.ಪಿ., 8ನೇ ತರಗತಿ, ಸೂರಪ್ಪನಹಳ್ಳಿ, ಮಾಗಡಿ ತಾ., ರಾಮನಗರ.
 • ಸುಪ್ರಿಯಾ ಸಿ.ಪಾಟೀಲ್, 9ನೇ ತರಗತಿ, ವಿಶ್ವ ಜ್ಯೋತಿ ಇಂಟರ್​ನ್ಯಾಷನಲ್ ಸ್ಕೂಲ್, ಶಿರಗುಪ್ಪ.
 • ಅನುಷ್ಕಾ ರಾಜೇಂದ್ರ ಸ್ವಾಮಿ, 10ನೇ ತರಗತಿ, ಸೇಂಟ್ ಜೋಸೆಫ್ ಕಾನ್ವೆಂಟ್ ಸ್ಕೂಲ್, ಕಲಬುರಗಿ.
 • ಗಗನ್​ದೀಪ್ ರಾವ್, 9ನೇ ತರಗತಿ, ಜ್ಞಾನಭಾರತಿ ಆಂಗ್ಲ ಪ್ರೌಢಶಾಲೆ, ಕುಣಿಗಲ್, ತುಮಕೂರು.
 • ಅದಿತಿ ಎಂ. ಗುಮಗೋಳ, 5ನೇ ತರಗತಿ, ಸಾಯಿನಿಕೇತನ ಸಿಬಿಎಸ್​ಇ ಸ್ಕೂಲ್, ಮುಧೋಳ.
 • ಕಾವ್ಯಶ್ರೀ ಜೆ.ಆರ್, 9ನೇ ತರಗತಿ, ವಾಗ್ದೇವಿ ವಿಲಾಸ ಶಾಲೆ, ಬಿಡದಿ, ರಾಮನಗರ.
 • ಗುರುಶಶಾಂಕ್ ಎಸ್.ಆರ್, 9ನೇ ತರಗತಿ, ಎಸ್​ಎಸ್ ಪ್ರೌಢ ಶಾಲೆ, ತುಮಕೂರು.
 • ಗೀತಾಂಜಲಿ ಎಚ್, 4ನೇ ತರಗತಿ, ಬಿಜಿಎಸ್ ಕೇಂದ್ರಿಯ ವಿದ್ಯಾಲಯ ಕಾರೇಹಳ್ಳಿ, ಭದ್ರಾವತಿ, ಶಿವಮೊಗ್ಗ.
 • ಶರಣ್ಯ ಜೆ, 10ನೇ ತರಗತಿ, ವಿಇಟಿ ಸ್ಕೂಲ್, ಜೆ.ಪಿ.ನಗರ, ಬೆಂಗಳೂರು.
 • ದಯಾನಿ ಡಿ., ಹೊಸಕೆರೆ ಹಳ್ಳಿ, ಬನಶಂಕರಿ, ಬೆಂಗಳೂರು.
 • ಯಶವಂತ್ ನಾಯ್್ಕ ಎಸ್., 6ನೇ ತರಗತಿ, ಬಿಎನ್​ಎಂ ಸ್ಟೇಟ್ ಸ್ಕೂಲ್, ಬನಶಂಕರಿ, ಬೆಂಗಳೂರು.
 • ಸಮನ್ವಿತಾ ಮನುಕುಮಾರ ಹಿರೇಮಠ, 5ನೇ ತರಗತಿ, ಡಿಕೆ ಪಬ್ಲಿಕ್ ಸ್ಕೂಲ್, ಸಂತೋಷ ನಗರ, ಹುಬ್ಬಳ್ಳಿ.
 • ವಿಪುಲ್ ಹೆಬ್ಬಾರ್, 3ನೇ ತರಗತಿ, ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್, ಇಲವಾಲ.
 • ದೀಪಕ್ ಎಸ್. ಶೆಣೈ,7ನೇ ತರಗತಿ, ನವನಗರ, ಹುಬ್ಬಳ್ಳಿ.
 • ಡಿ.ರಚನಾ ಅಡಿಗ, 10ನೇ ತರಗತಿ, ಸೈಂಟ್ ಸಿಸಿಲಿ ಪ್ರೌಢಶಾಲೆ, ಉಡುಪಿ.
 • ಲಕ್ಷೆ್ಮೕಶ ವಿಕಾಸ ಜಗದಾಳೆ, ಭೆಂಡವಾಡ, ಬೆಳಗಾವಿ.
 • ಪ್ರಜ್ವಲ್.ಬಿ.ಶೇಗಡಿ, 9ನೇ ತರಗತಿ, ಲೋಯೋಲಾ ಪ್ರೌಢಶಾಲೆ, ಬೆಟಗೇರಿ, ಗದಗ.
 • ಸಿದ್ರಾಮ ತೆಲಗಿ, 10ನೇ ತರಗತಿ, ಮಣಿ ವಿಲಾಸ್ ಗಾರ್ಡನ್, ಕಮಲಾ ನಗರ, ಬೆಂಗಳೂರು.
 • ಸೌಂದರ್ಯ ಎಸ್, 9ನೇ ತರಗತಿ, ಸುಪ್ರಿಮ್ ಪಬ್ಲಿಕ್ ಸ್ಕೂಲ್, ಮೈಸೂರು.
 • ಸೌಮ್ಯ ಎಸ್.ಪಾಟೀಲ್, 5ನೇ ತರಗತಿ, ಶ್ರೀ ವಾಗ್ದೇವಿ ಪ್ರಾಥಮಿಕ ಶಾಲೆ, ಹೊಳಲ್ಕೆರೆ, ಚಿತ್ರದುರ್ಗ.
 • ಮಲ್ಲಯ್ಯ ಹಿರೇಮಠ, ಹೆಸರೂರು, ಗದಗ.
 • ಸುಮಂತ್ ಹೆಗಡೆ, 10ನೇ ತರಗತಿ, ಶ್ರೀ ನಿಕೇತನ ಶಾಲೆ, ಇಸಳೂರು, ಉತ್ತರ ಕನ್ನಡ.
 • ಮೇಘ ಜೆ.ಸಿ, 10ನೇ ತರಗತಿ, ಶ್ರೀ ಮಾರುತಿ ಸರ್ಕಾರಿ ಪ್ರೌಢ ಶಾಲೆ, ಲೋಕಿಕೆರೆ, ದಾವಣಗೆರೆ.
 • ದರ್ಶನ್ ಸಿ.ಕೆ, 7ನೇ ತರಗತಿ, ಹಿರಿಯ ಪ್ರಾಥಮಿಕ ಶಾಲೆ, ಚಿಟ್ಟಿಕ್ಯಾತನಹಳ್ಳಿ, ಹುಣಸೂರು, ಮೈಸೂರು.
 • ರೋಹಿತ್ ಸಿ.ಜಿ, 6ನೇ ತರಗತಿ, ಸೇಂಟ್ ಫಿಲೋಮಿನಾಸ್ ಹೈಸ್ಕೂಲ್, ಅತ್ತಿಬೆಲೆ, ಬೆಂಗಳೂರು.

Leave a Reply

Your email address will not be published. Required fields are marked *

Back To Top