Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ನವಯುಗ ನಿರ್ಮಾತೃ ಮಹರ್ಷಿ ದಯಾನಂದ ಸರಸ್ವತೀ

Tuesday, 29.08.2017, 3:05 AM       No Comments

ಭಾರತೀಯ ಸಮಾಜವು ಬ್ರಿಟಿಷರ ಪಾರತಂತ್ರ್ಯದಲ್ಲಿ ಬಿದ್ದು ‘ಸ್ವರಾಜ್ಯ’ ಸಿದ್ಧಿಗಾಗಿ ಪರಿತಪಿಸುತ್ತಿರುವಾಗ ಈ ಕಲ್ಪನೆಯನ್ನು ಮೊದಲು ಎತ್ತಿಹೇಳಿದವರು ಮಹರ್ಷಿ ದಯಾನಂದರು. ಅನಂತರ ‘ಸ್ವರಾಜ್ಯಸಿದ್ಧಿ’ಯು ತಾರಕಮಂತ್ರವಾಯಿತು. ಅತ್ತ ರಾಜಾರಾಮ ಮೋಹನರಾಯರು, ದೇವೇಂದ್ರನಾಥ ಟ್ಯಾಗೋರರು, ‘ರಾಷ್ಟ್ರಜೀವನ’ ವನ್ನು ವೇದವಾšಯದ ಮಂತ್ರಪೂತರಾಗಿ ಒಂದೆಡೆ ಬೆಳಗಿದರು. ದಯಾನಂದರು ಜಾತಿಪದ್ಧತಿ, ಮೂರ್ತಿಪೂಜೆ ಮುಂತಾದ ಸಂಪ್ರದಾಯಗಳನ್ನು ದೂರೀಕರಿಸಿ, ಪವಿತ್ರ ವೇದಮಾತೆಯನ್ನು ರಾಷ್ಟ್ರಕುಂಡಲಿನಿಯನ್ನಾಗಿ ಬೆಳಗಿಸಿದರು, ‘ಆರ್ಯಸಮಾಜ’ದ ಉತ್ಥಾನಕ್ಕೆ ಕಾರಣರಾದರು. ಒಂದೆಡೆ ಕ್ರೈಸ್ತಮತ ಇನ್ನೊಂದೆಡೆ ಇಸ್ಲಾಂಮತಗಳು ಆರ್ಯಭಾರತವನ್ನು ಇರುಕಿಸಿ, ಸೆಡ್ಡು ಹೊಡೆಯುತ್ತಿರುವಾಗ ದಯಾನಂದರು ವೇದವಾšಯದ ಮೂಲಕವೇ ಅವನ್ನು ತಳ್ಳಿಹಾಕಿ ವೇದಮಾತೆ ಗಾಯತ್ರಿಯನ್ನು ನವ ಯುಗದಲ್ಲಿ ಸ್ಥಾಪಿಸಿದರು. ಒಬ್ಬ ಸುಧಾರಕರಾಗಿ, ಆಚಾರ್ಯರಾಗಿ, ಪಥಪ್ರದರ್ಶಕರಾಗಿ, ಮಾರ್ಗಾನ್ವೇಷಕರಾಗಿ, ಇವೆಲ್ಲಕ್ಕೂ ಮೇಲಾಗಿ ಮಹರ್ಷಿಸ್ಥಾನದಲ್ಲಿ ಅವರು ನಿಂತರು.

ಜನನ-ವಿದ್ಯಾಭ್ಯಾಸ: ಗುಜರಾತ್ ರಾಜ್ಯದ ಸೌರಾಷ್ಟ್ರದ ಸಂಸ್ಥಾನಗಳಲ್ಲೊಂದು ಮೋರವೀ. ಅಲ್ಲಿನ ಟೆಂಕಾರಾ ನಗರದಲ್ಲಿ ಕರ್ಷನ್ ಜೀ ಲಾಲ್​ಜೀ ತಿವಾರಿ ಎಂಬ ಬ್ರಾಹ್ಮಣನಿದ್ದ. ಈತನ ಮನೆತನ ವೇದಪಾಠಕ್ಕೆ ಹೆಸರಾಗಿತ್ತು. ಈತನ ಪತ್ನಿ ಅಮೃತಾ ಬಾಯಿ. ಈ ದಂಪತಿಯ ಕಣ್ಣುಗಳ ಬೆಳಕಾಗಿ 1824ನೆಯ ಇಸವಿಯಲ್ಲಿ ಮೂಲಶಂಕರನ ಜನನವಾಯಿತು. ಸೌರಾಷ್ಟ್ರ ಪದ್ಧತಿಯಂತೆ ‘ದಯಾರಾಮ’ ಎಂಬ ಇನ್ನೊಂದು ಹೆಸರನ್ನು ಕೊಡಲಾಯಿತು. ಅವನಿಗೆ ಇಬ್ಬರು ತಮ್ಮಂದಿರು, ಇಬ್ಬರು ತಂಗಿಯರು.

ಮೂಲಶಂಕರ 5 ವರ್ಷದವನಿದ್ದಾಗ ಕರ್ಷನ್​ಜೀ ದೇವನಾಗರಿ ಅಕ್ಷರಗಳನ್ನು ಕಲಿಸಿದರು. ಎಂಟನೆಯ ವರ್ಷದಲ್ಲಿ ಯಜ್ಞೋಪವೀತ ಸಂಸ್ಕಾರ ವಾಯಿತು. ಆದರೆ, ಮೂಲಶಂಕರನಿಗೆ ತನ್ನ ಚಿಕ್ಕಪ್ಪನ ನಿರಾಡಂಬರ ಪ್ರವೃತ್ತಿ ಹೆಚ್ಚು ಇಷ್ಟವಾಗುತ್ತಿತ್ತು. ಓರ್ವ ವಿದ್ವಾಂಸ, ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ಆತನಿಗೆ ಬಾಹ್ಯ ಪೂಜಾವಿಧಾನದಲ್ಲಿ ಆಸಕ್ತಿ ಇರಲಿಲ್ಲ. ಅದು ಮೂಲಶಂಕರನ ಸ್ವಭಾವಕ್ಕೆ ಹತ್ತಿರವಾಗಿತ್ತು. ಚಿಕ್ಕಪ್ಪನ ಕೃಪೆಯಿಂದಲೇ ಸಂಪೂರ್ಣ ಯಜುರ್ವೆದವನ್ನು ಬಾಯಿಪಾಠ ಮಾಡಿದ ಮೂಲಶಂಕರ.

ಮೂಲಶಂಕರನಿಗೆ 14ರ ಪ್ರಾಯವಾಯಿತು. ಶಿವರಾತ್ರಿ ಮಹೋತ್ಸವ. ಕುಲದ ಪದ್ಧತಿಯಾದ ಉಪವಾಸ, ಜಾಗರಣೆ ಮಾಡಲು ತಂದೆ ಆದೇಶಿಸಿದರು. ಅಂತೆಯೇ ಆಚರಣೆ ನಡೆಯುತ್ತಿತ್ತು. ಹಲವರು ಜಾಗರಣೆ ನೆಪದಲ್ಲಿ ಅರೆನಿದ್ದೆಗೆ ಜಾರಿದ್ದರು. ಆದರೆ, ಮೂಲಶಂಕರ ಎಚ್ಚರದಿಂದ ಶಿವನ ಧ್ಯಾನದಲ್ಲಿದ್ದ. ಶಿವಲಿಂಗದ ಮೇಲೆ ನಾಲ್ಕಾರು ಇಲಿಗಳು ಓಡಾಡಿ ಅಲ್ಲಿದ್ದ ನೈವೇದ್ಯ ತಿಂದದ್ದು ಕಂಡು, ತನ್ನನ್ನೇ ಸಂಭಾಳಿಸಿಕೊಳ್ಳದವನು ಭಕ್ತರನ್ನು ಹೇಗೆ ಸಂಭಾಳಿಸಿಯಾನು? ಎಂಬ ಪ್ರಶ್ನೆ ಅವನಲ್ಲಿ ಮೂಡಿತು. ತಂದೆಗೆ ನಡೆದ ಪ್ರಸಂಗವನ್ನು ಹೇಳಿದ. ಎಲ್ಲ ಕೇಳಿದ ಕರ್ಷನ್ ಜೀ ‘ಶಾಂತಂ ಪಾಪಂ‘ ಎಂದ. ಆದರೆ, ಮೂಲಶಂಕರನಿಗೆ ಪಥಭ್ರಾಂತವಾಯಿತು. ಉಪವಾಸ ಕೈಬಿಟ್ಟು ಮನೆಗೆ ಬಂದ. ‘ಚೇತನನ ದರ್ಶನ ಆಗುವವರೆಗೆ ದೇವರಪೂಜೆಯ ಹವ್ಯಾಸ ಹಚ್ಚಿಕೊಳ್ಳುವುದಿಲ್ಲ’ ಎಂದು ನಿರ್ಧರಿಸಿದ.

ಚಿಕ್ಕಪ್ಪನಲ್ಲಿ ಶಾಸ್ತ್ರಾಧ್ಯಯನದಲ್ಲಿಯೇ ಮುಳುಗಿದ ಮೂಲಶಂಕರನಿಗೆ ಇದೀಗ ಹದಿನಾರರ ವಯಸ್ಸು. ಈ ನಡುವೆ ಆತನ ಮುದ್ದು ತಂಗಿ ಮರಣಹೊಂದಿದಳು. ಮೂಲಶಂಕರನಿಗೆ ಮರಣದ ಪ್ರಶ್ನೆಯೊಂದು ಬಾಧಿಸಿತು. ಮೃತ್ಯುವಿಜಯ ಮತ್ತು ಅಮರಪದವಿಪ್ರಾಪ್ತಿಯ ಬಗೆಗೆ ಹೆಚ್ಚುಹೆಚ್ಚು ಚಿಂತಿಸತೊಡಗಿದ. ಅನೇಕ ಯೋಗಿಗಳನ್ನೂ ಸಂನ್ಯಾಸಿಗಳನ್ನೂ ವಿಚಾರಿಸಿದ. ಆದರೆ, ಯಾರಿಂದಲೂ ಉತ್ತರ ದೊರಕಲಿಲ್ಲ. ಮಗ ಸದಾ ಚಿಂತನಶೀಲನಾಗಿದ್ದು ಆಲೋಚನೆಗಳಲ್ಲಿಯೇ ಇರುವುದನ್ನು ತಂದೆ ಕಂಡು ಮದುವೆ ಮಾಡಿದರೆ ಸರಿಹೋದೀತೆಂದು ಯೋಚಿಸಿದ. ಆದರೆ, ಮೂಲಶಂಕರನಿಗೆ ಇದರಲ್ಲಿ ಆಸಕ್ತಿ ಇರಲಿಲ್ಲ. ಕೊನೆಗೆ ಅಮ್ಮನ ಬಳಿ ತಾನಿನ್ನು ಓದಬೇಕೆಂದೂ ಈಗಲೆ ಮದುವೆ ಬೇಡವೆಂದೂ ಹೇಳಿದ. ಪಕ್ಕದ ಗ್ರಾಮದಲ್ಲಿದ್ದ ವಿದ್ವಾಂಸನೊಬ್ಬನ ಬಳಿ ಅಧ್ಯಯನಕ್ಕೆ ಮೂಲಶಂಕರನನ್ನು ಕಳುಹಿಸಿದ. ಒಮ್ಮೆ ಗುರುಗಳ ಎದುರು ‘ಮಾನವನ ಪಾಶವೀವೃತ್ತಿಯನ್ನು ಹೊಡೆದೆಬ್ಬಿಸಿ ಅವನನ್ನು ಪ್ರಾಣಿಗಳ ಮಟ್ಟಕ್ಕೆ ಇಳಿಸುವ ಉಪಾಯವೇ ಮದುವೆ’ ಎಂದು ಹೇಳಿಬಿಟ್ಟ. ಈ ವಿಷಯ ಹೇಗೋ ತಂದೆಗೆ ತಿಳಿದು ಕೂಡಲೇ ಮಗನನ್ನು ಊರಿಗೆ ಕರೆಸಿಕೊಂಡ. ಮನೆಯಲ್ಲಿ ವಿವಾಹದ ಸನ್ನಾಹ ನಡೆಯುತ್ತಿದ್ದುದನ್ನು ಗಮನಿಸಿದ. ಆಗ ಮೂಲಶಂಕರನಿಗೆ ಇಪ್ಪತ್ತೊಂದರ ಪ್ರಾಯ. ಅವನ ಮನಸ್ಸಿನಲ್ಲಿ ವೈರಾಗ್ಯ ಏಕಪ್ರಕಾರವಾಗಿ ತುಂಬಿಕೊಂಡಿತ್ತು. ಅವನು ತಂದೆ, ತಾಯಿ, ಮನೆಯ ಮೋಹ-ಎಲ್ಲವನ್ನು ಕಡಿದುಕೊಂಡು 1846ನೆಯ ಇಸವಿ ಜೇಷ್ಠಮಾಸದ ಒಂದು ಸಂಜೆ ನಸುಗತ್ತಲಿನಲ್ಲಿ ಮನೆಯನ್ನು ತೊರೆದು ಹೊರಟ. ಅವನು ಅನ್ನ ನೀರಿಲ್ಲದೆ ನಲ್ವತ್ತೈದು ಮೈಲಿಗಳಷ್ಟು ದೂರವನ್ನು ಕ್ರಮಿಸಿದ್ದ. ಯಾರಾದರೂ ಕೇಳಿದರೆ ‘ಸಿದ್ಧಿಪ್ರಾಪ್ತ ಯೋಗೀಶ್ವರನನ್ನು ಹುಡುಕುತ್ತ ಹೊರಟಿದ್ದೇನೆ’ ಎಂದು ಹೇಳುತ್ತಿದ್ದ. ಶೈಲಾಗ್ರಾಮದಲ್ಲಿದ್ದ ಲಾಲಾಭಗತ್ ಎಂಬ ಯೋಗೀಶ್ವರನನ್ನು ದಯಾರಾಮ ಆಶ್ರಯಿಸಿದ. ಆದರೆ, ತಾನು ಅರಸುತ್ತಿದ್ದ ಬಗೆ ಅಲ್ಲಿ ಕಾಣದೆ ಸಿದ್ಧಪುರದತ್ತ ಪ್ರಯಾಣ ಮುಂದುವರೆಸಿದ. ಯೋಗೀಶ್ವರ ಲಾಲಾ ಭಗತ್ ಬಳಿ ಇರುವಾಗ್ಗೆ ಕಾವಿ ಕಪನಿ ತೊಟ್ಟುಕೊಂಡು ಕಮಂಡಲು ಹಿಡಿದು ಬ್ರಹ್ಮಚಾರಿ ಶುದ್ಧಚೈತನ್ಯನಾದ.

ಗುರುವಿನ ಅನುಗ್ರಹ: ಶುದ್ಧಚೈತನ್ಯ ಬಡೋದೆಗೆ ತಲುಪಿದ. ಅಲ್ಲಿ ಸಚ್ಚಿದಾನಂದ ಪರಮಹಂಸರೆಂಬ ಯೋಗಿಗಳನ್ನು ಕಂಡ. ಅವರ ಸೂಚನೆಯಂತೆ ಚಾಣೋದಕರ್ನಾಲೀ ಎಂಬ ಗ್ರಾಮಕ್ಕೆ ಹೋಗಿ ಪರಮಾನಂದ ಪರಮಹಂಸರ ಬಳಿ ವೇದಾಂತಸಾರ ಮತ್ತು ವೇದಾಂತಪರಿಭಾಷಾ ಗ್ರಂಥಗಳನ್ನು ಅಧ್ಯಯನ ಮಾಡಿದ. ಅಲ್ಲಿದ್ದ ಚಿದಾಶ್ರಮರಿಂದ ಸಂನ್ಯಾಸ ದೀಕ್ಷೆ ಪಡೆಯಲು ಬಯಸಿದ. ಅವರು ಒಪ್ಪಲಿಲ್ಲ. ಒಂದು ದಿನ ಒಬ್ಬ ಸಂನ್ಯಾಸಿ ಮತ್ತೊಬ್ಬ ಬ್ರಹ್ಮಚಾರಿಗಳನ್ನು ಮೂಲಶಂಕರ ಕಂಡ. ಅವರು ಶೃಂಗೇರಿ ಮಠದಿಂದ ಬಂದಿದ್ದು, ದ್ವಾರಕೆಗೆ ಹೊರಟದ್ದು ತಿಳಿಯಿತು. ಅವರ ಬಳಿ ತನ್ನ ಮನದಿಂಗಿತವನ್ನು ಹೇಳಿಕೊಂಡ. ಅವರು ಅವನನ್ನು ಪರಿಶೀಲಿಸಿ-ಸಂನ್ಯಾಸಿಯಾಗಬಲ್ಲ ಲಕ್ಷಣ ಇರುವುದನ್ನು ಮನಗಾಣಿಸಿಕೊಂಡರು. ಆತನಿಗೆ ವಿಧಿಪೂರ್ವಕವಾಗಿ ಸಂನ್ಯಾಸದೀಕ್ಷೆ ನೀಡಿ ದಯಾನಂದ ಸರಸ್ವತೀ ಎಂಬ ಅಭಿದಾನವನ್ನು ನೀಡಿದರು. ಒಂದು ತಿಂಗಳಾದ ಮೇಲೆ ಅಹಮದಾಬಾದಿನ ದುಗ್ಧೇಶ್ವರ ಮಹಾಮಂದಿರದಲ್ಲಿ ಯೋಗವಿದ್ಯಾರಹಸ್ಯ ಮತ್ತು ಚರಮ ಪ್ರಣಾಳಿಕೆಯನ್ನು ದಯಾನಂದರಿಗೆ ಅನುಗ್ರಹಿಸಲಾಯಿತು.

ಅನಂತರ ದಯಾನಂದ ಸರಸ್ವತಿಯವರು ಎಲ್ಲಾ ಅದ್ವೈತಗ್ರಂಥಗಳನ್ನು ಓದಿದರು. ಯೋಗಸಾಧನೆ ಅವರ ಶ್ವಾಸವೇ ಆಯಿತು. ತಂತ್ರಗ್ರಂಥಗಳು ಅವರಿಗೆ ಹಿಡಿಸಲಿಲ್ಲ. ಆಮೇಲೆ ಪೂರ್ಣಯೋಗಿಗಳನ್ನು ಹುಡುಕುತ್ತ ಕೇದಾರಘಾಟಿಗೆ ಹೋದರು. ಆಗ ಅವರಿಗೆ ಮೂವತ್ತೊಂದು ವರ್ಷ. ಅವರು ಹತ್ತುವರ್ಷಗಳಲ್ಲಿ ರಾಜಸ್ಥಾನದ ಅರಾವಳೀ ಪರ್ವತ ಮತ್ತು ಭಾರತದ ಉತ್ತರಸೀಮೆಯ ಹಿಮಾಲಯ ಪರ್ವತದ ಗುಹೆಗುಹೆಗಳಲ್ಲಿಯೂ ವನವನಗಳಲ್ಲಿಯೂ ಅಲೆದು ಯೋಗಿಗಳನ್ನು ಅರಸಿದರು. ಈ ನಡುವೆ, ಸಾಂಖ್ಯ ಮತ್ತು ಪಾತಂಜಲ ಸೂತ್ರಗಳನ್ನು ಬಿಟ್ಟರೆ ಬೇರಾವುದೂ ಪ್ರಮಾಣವಲ್ಲ-ಎಂಬ ತೀರ್ವನಕ್ಕೆ ದಯಾನಂದರು ಬಂದರು. ನರ್ಮದಾನದಿಯ ಬಳಿ ಪೂರ್ಣಾನಂದಸ್ವಾಮಿ ಸಿಕ್ಕಿ, ಮಥುರಾಪೌರ ವಿರಜಾನಂದ ದಂಡೀಧರಾಧೀಶ್ವರ ಬಳಿ ಹೋದರೆ ಸತ್ಯವಿಜ್ಞಾನ ಮತ್ತು ಕ್ರಿಯಾತ್ಮಕ ಯೋಗಸಿದ್ಧಿ ದೊರಕುತ್ತದೆಂದು ತಿಳಿಸಿದರು.

1860ರ ನವೆಂಬರ್ 14ರಂದು ಸ್ವಾಮಿ ವಿರಜಾನಂದರ ದರ್ಶನ ದಯಾನಂದರಿಗೆ ಆಯಿತು. ವಿರಜಾನಂದ ದಂಡೀಶ್ವರರು ನೆತ್ತಿಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಭಾಗ್ಯದ ಬಾಗಿಲು ತೆರೆಯಿತು. ಅವರ ಸೂಚನೆಯಂತೆ ಅನಾರ್ಷಗ್ರಂಥಗಳನ್ನು ತೊರೆದರು. ಆರ್ಷಗ್ರಂಥಗಳ ಅಧ್ಯಯನವನ್ನು ನಡೆಸಿದರು. ಸ್ವಾಮಿ ವಿರಜಾನಂದರ ತತ್ತ್ವಬೋಧೆಯನ್ನು ಆಲಿಸುತ್ತ ‘ಇಹಕ್ಕೂ ಬೆಲೆಯುಂಟು; ಇಹವಿಲ್ಲದೆ ಪರವಿಲ್ಲ’ ಎಂಬ ಸೂತ್ರ ದಯಾನಂದರಿಗೆ ಹೊಳೆಯಿತು. ಲೋಕದ ಅಜ್ಞಾನ, ದಾರಿದ್ರ್ಯ, ರೋಗ, ಶೋಕ ಇವುಗಳನ್ನು ತೊಳೆಯುವುದೇ ತಮ್ಮ ಗುರಿಯೆಂದು ತಿಳಿದುಕೊಂಡರು. ಇವುಗಳ ಜತೆಗೆ ವೈದಿಕಧರ್ಮದ ಪ್ರಚಾರ ಮಾಡುವೆನೆಂದು ಗುರುಗಳಿಗೆ ಮಾತುಕೊಟ್ಟರು.

ದೇಶ ಸಂಚಾರ: ಗುರುದೇವ ವಿರಜಾನಂದರ ಅನುಜ್ಞೆ ಪಡೆದು ಮಥುರೆಯಿಂದ ಆಗ್ರಾಕ್ಕೆ ಹೋದರು. ಗುರುಗಳು ಹೇಳಿದಂತೆ ಸುಧಾರಣಾಕಾರ್ಯಕ್ಕೆ ಕೈಹಚ್ಚಿದರು. ಆ ದಿನಗಳಲ್ಲಿ ವಿಗ್ರಹಾರಾಧನೆ ಮತ್ತು ಭಾಗವತ ಮುಂತಾದವುಗಳ ಖಂಡನೆಯನ್ನು ಆರಂಭಿಸಿದರು. ಸಂಧ್ಯಾವಿಧಿ ಎಂಬ ತಮ್ಮ ಮೊದಲನೆಯ ಪುಸ್ತಕವನ್ನು ಪ್ರಕಟಿಸಿದರು. ಅನಂತರ ತಮ್ಮ 41ನೆಯ ವಯಸ್ಸಿನಲ್ಲಿ ಗ್ವಾಲಿಯರ್ ನಗರಕ್ಕೆ ಬಂದರು. ಅಲ್ಲಿ ಗ್ವಾಲಿಯರ್ ಮಹಾರಾಜ ಭಾಗವತ ಸಪ್ತಾಹವನ್ನು ಏರ್ಪಡಿಸಿ ವಿದ್ವಾಂಸರನ್ನು ಕರೆಸಿದ್ದನು. ದಯಾನಂದರಿಗೂ ಆಮಂತ್ರಣ ಹೋಯಿತು. ಆದರೆ, ದಯಾನಂದರು ‘ಭಾಗವತ ಅನಾರ್ಷಗ್ರಂಥ. ಗಾಯತ್ರೀಜಪ ಮಾಡಿಸಿರಿ ನಾನು ಅದರಲ್ಲಿ ಭಾಗವಹಿಸುವೆ’ ಎಂದು ಹೇಳಿಕಳುಹಿಸಿದರು. ಅನಂತರ ದಯಾನಂದರು ಜಯಪುರದತ್ತ ಹೊರಟರು. ಆಗ ಅಲ್ಲಿ ಶೈವ-ವೈಷ್ಣವ ಸಂಪ್ರದಾಯಗಳ ತಿಕ್ಕಾಟ ನಡೆದು ಧಾರ್ವಿುಕ ವಾತಾವರಣ ಪ್ರಕ್ಷುಬ್ಧವಾಗಿತ್ತು. ಬುದ್ಧಿಸಂಗತ, ತರ್ಕಸಿದ್ಧ, ಶಾಸ್ತ್ರಾಧಾರ ಸಹಿತವಾಗಿ ದಯಾನಂದರು ಪ್ರವಚನವನ್ನು ಮಾಡತೊಡಗಿದರು. ಇವರ ಪ್ರಚಂಡ ವಾಗ್ಮಿತೆಗೆ ವಿದ್ವಾಂಸರೆಲ್ಲ ಮರುಳಾದರು. ಗುರ್ಜರ ಬ್ರಾಹ್ಮಣ ಸಂನ್ಯಾಸಿಯ ಬಗೆಗೆ ಎಲ್ಲರಲ್ಲೂ ಆದರ ಉಂಟಾಯಿತು! 1865ನೆಯ ಇಸವಿ ಅಜಮೀರಕ್ಕೆ ತೆರಳಿ ವಂಶೀಧರ ಎಂಬುವನ ಉದ್ಯಾನದಲ್ಲಿ ಉಳಿದರು. ದಯಾನಂದರು ಹಿಂದೂ ಮತಮತಾಂತರವಾದಿಗಳನ್ನು ಚರ್ಚೆಗೆ ಆಹ್ವಾನಿಸುವುದರೊಂದಿಗೆ ಕ್ರೈಸ್ತ-ಮುಸಲ್ಮಾನರನ್ನೂ ಆಹ್ವಾನಿಸುತ್ತಿದ್ದರು. ಆ ದಿನಗಳಲ್ಲಿ ಕ್ರೈಸ್ತಪಂಡಿತರನ್ನು ಎದುರಿಸಬಲ್ಲ ಒಬ್ಬ ವಿದ್ವಾಂಸನೂ ಭಾರತದಲ್ಲಿ ಇರಲಿಲ್ಲ. ಅಲ್ಲಿ ಜಾನ್​ರಬ್ಬನ್ ಎಂಬ ಕ್ರೈಸ್ತಪಾದ್ರಿಯ ಜತೆ ಮೂರುದಿನ ರ್ಚಚಿಸಿ, ಕ್ರೈಸ್ತತತ್ತ್ವಗಳನ್ನು ಯುಕ್ತಿಯುಕ್ತವಾಗಿ ಖಂಡಿಸಿದರು. ಅವರು ಕಟ್ಟುಕತೆಗಳು ಯಾವ ಮತದಲ್ಲಿದ್ದರೂ ಖಂಡನಾರ್ಹವೆಂದು ತಿಳಿಹೇಳಿದರು.

ರಾಜಸ್ಥಾನದಲ್ಲಿ ದಯಾನಂದರು ಇರುವಾಗ ಕರ್ನಲ್ ಬ್ರೂಕ್​ನೆಂಬುವನ ಜತೆ ವಾದ ವಿವಾದಗಳು ನಡೆದುವು. ‘ಒಂದು ಗೋವು ತನ್ನ ಜೀವಿತದಲ್ಲಿ ಹಲವು ಮಂದಿಗೆ ಹಾಲನ್ನು ಕೊಡುತ್ತದೆ. ಆ ಗೋವನ್ನು ಕೊಂದು ನಾಲ್ಕಾರು ಜನ ತಿನ್ನಬಹುದು ಅಷ್ಟೆ. ನಾವು ಗೋಸಂಪತ್ತನ್ನು ಉಳಿಸಿಕೊಳ್ಳುವುದು ಮುಖ್ಯ’ ಎಂಬ ದಯಾನಂದರ ವಾದವನ್ನು ಬ್ರೂಕ್ ಒಪ್ಪಿಕೊಂಡ. ಅನಂತರ ದಯಾನಂದರು ಆಗ್ರಾಕ್ಕೆ 1865ರ ನವೆಂಬರ್ 10ರಂದು ಬಂದರು. ಭಾರತದ ಗವರ್ನರ್ ಜನರಲ್ ಸರ್ ಜಾನ್​ಲಾರೆನ್ಸ್ ಒಂದು ದರಬಾರನ್ನು ಅಲ್ಲಿ ಏರ್ಪಡಿಸಿದ್ದ. ಅಲ್ಲಿ ದಯಾನಂದರು ತಮ್ಮ ವಿಚಾರಗಳನ್ನು ಯುಕ್ತಿಯುಕ್ತವಾಗಿ ಮಂಡಿಸಿದರು.

ಶಾಸ್ತ್ರಾರ್ಥ-ವಾಕ್ಯಾರ್ಥ: 1865ರ ಮಾರ್ಚ್ 12ರಂದು ಹರಿದ್ವಾರಕ್ಕೆ ಬಂದರು. ಕಾಶಿಯ ಪ್ರಸಿದ್ಧ ಸಂನ್ಯಾಸಿ ವಿಶುದ್ಧಾನಂದರು ಪುರುಷಸೂಕ್ತಕ್ಕೆ ಹೇಳಿದ ಅರ್ಥವನ್ನು ಖಂಡಿಸಿ ‘ವಿಶ್ವಕ್ಕೆ ಮುಖದಂತೆ ಬ್ರಾಹ್ಮಣನಿದ್ದಾನೆ, ಬಾಹುಗಳಂತೆ ಕ್ಷತ್ರಿಯನಿದ್ದಾನೆ, ತೊಡೆಗಳಂತೆ ವೈಶ್ಯನಿದ್ದಾನೆ. ಪಾದಗಳ ಕಾರ್ಯಕ್ಕೆ ಶೂದ್ರನಿದ್ದಾನೆ’ ಎಂದು ಅದರ ಅಂತರಾರ್ಥವನ್ನು ಉದ್ಘೋಷಿಸಿದರು. ದಯಾನಂದರು ಧಾರ್ವಿುಕಕ್ರಾಂತಿಯ ಜ್ವಾಲೆಯನ್ನು ಹೊತ್ತಿಸಬೇಕೆಂದು ನಿರ್ಧರಿಸಿ ಕೌಪೀನವನ್ನು ಹೊರತುಪಡಿಸಿ ತಮ್ಮಲ್ಲಿದ್ದ ಎಲ್ಲವನ್ನು ತ್ಯಜಿಸಿಬಿಟ್ಟರು. ವಿಗ್ರಹಾರಾಧನೆ, ತೀರ್ಥಮಹಿಮೆಗಳನ್ನು ನಿರಾಕರಿಸಿ ‘ನಿರಾಕಾರ ಪರಬ್ರಹ್ಮದ ಮಾನಸಧ್ಯಾನ’ದ ಉಪದೇಶವನ್ನು ದಯಾನಂದರು ಎಲ್ಲರಿಗೂ ನೀಡತೊಡಗಿದರು. ಇದು ಸಂಪ್ರದಾಯವಾದಿಗಳಿಗೆ ನುಂಗಲಾರದ ತುತ್ತಾಯಿತು. ಸಂಸ್ಕೃತವನ್ನು ಉಳಿಸಿಬೆಳೆಸಬೇಕೆಂಬ ಉದ್ದೇಶದಿಂದ ದಯಾನಂದರು ಸಂಸ್ಕೃತದಲ್ಲೇ ಉಪನ್ಯಾಸಗಳನ್ನು ನೀಡುತ್ತಿದ್ದರು. ಅಲ್ಲಲ್ಲಿ ಸಂಸ್ಕೃತ ಪಾಠಶಾಲೆಗಳನ್ನು ಶ್ರೀಮಂತರ ನೆರವಿನಿಂದ ಸ್ಥಾಪಿಸಿದರು. ಅವರು ತಮ್ಮ ವಾಕ್ಯಾರ್ಥದಲ್ಲಿ ನಾಲ್ಕು ವೇದಗಳು, ನಾಲ್ಕು ಉಪವೇದಗಳು, ಆರು ವೇದಾಂಗಗಳು, ಆರು ಉಪಾಂಗಗಳು ಮತ್ತು ಪ್ರಕ್ಷೇಪರಹಿತವಾದ ಮನುಸ್ಮೃತಿಯನ್ನು ಪ್ರಮಾಣವೆಂದು ಅಂಗೀಕರಿಸಿದ್ದರು.

1869ರ ನವೆಂಬರ್ 16ರಂದು ಕಾಶಿಯಲ್ಲಿ ಶಾಸ್ತ್ರಾರ್ಥ ಸಭೆಯೊಂದು ನಡೆಯಿತು. ಕಾಶಿರಾಜ ಈಶ್ವರನಾರಾಯಣ ಸಿಂಹ ಸಭಾಧ್ಯಕ್ಷತೆಯನ್ನು ವಹಿಸಿದ್ದ. ಹೊರಗಡೆ ಅರುವತ್ತು ಸಾವಿರ ಜನ ಸೇರಿದ್ದರು. ರಾಜನ ಸೂಚನೆಯಂತೆ ಇಪ್ಪತ್ತೇಳು ಜನ ಉದ್ಧಾಮ ಪಂಡಿತರು ದಯಾನಂದರನ್ನು ಎದುರಿಸಲು ಸಜ್ಜಾಗಿದ್ದರು. ವಿಗ್ರಹಾರಾಧನೆ, ಜಾತಿಭೇದ, ಅನಾರ್ಷಗ್ರಂಥಗಳ ಬಗೆಗೆ ನಿರಂತರ ನಾಲ್ಕುಗಂಟೆಗಳ ಕಾಲ ವಾದ-ವಿವಾದಗಳು ನಡೆದುವು. ಸಭೆಯಲ್ಲಿದ್ದ ವಿದ್ವಾಂಸರ ಕುಯುಕ್ತಿ ಮತ್ತು ಪುಂಡಾಟಿಕೆಗಳಿಂದ ಶಾಸ್ತ್ರಾರ್ಥವು ನಿಂತು ಹೋಯಿತು. ದಯಾನಂದರಿಗೆ ಸಣ್ಣ-ಪುಟ್ಟ ಗಾಯಗಳಾದುವು. ಅನಂತರ ‘ಒಂದು ದಿನವಲ್ಲ; ಒಂದು ವರ್ಷ ಬೇಕಾದರೂ ಕಾಶಿಯಲ್ಲೇ ಇದ್ದು ಶಾಸ್ತ್ರಾರ್ಥ ಮಾಡಲು ಸಿದ್ಧನಿದ್ದೇನೆ’ ಎಂದು ಘೊಷಣಾಪತ್ರವನ್ನು ದಯಾನಂದರು ಹೊರಡಿಸಿದರು. ಅವರು ಪ್ರಯಾಗದಲ್ಲಿದ್ದಾಗ ಮಹರ್ಷಿ ದಯಾನಂದರನ್ನು ಕಾಣಲು ದಕ್ಷಿಣೇಶ್ವರದ ರಾಮಕೃಷ್ಣ ಪರಮಹಂಸರೂ ಬಂದಿದ್ದರು.

ದಯಾನಂದರು ತಮ್ಮ ವಿಚಾರಗಳನ್ನು ಪ್ರಚಾರ ಮಾಡುತ್ತ ಮುಂಬಯಿ, ಸೂರತ್, ಮುಂತಾದ ರಾಜ್ಯಗಳಲ್ಲಿ ಸಂಚರಿಸಿದರು. ದಯಾನಂದರ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ವೈದಿಕಧರ್ಮದ ಪ್ರಚಾರವನ್ನೇ ಧ್ಯೇಯವಾಗುಳ್ಳ ಸಂಸ್ಥೆಯೊಂದನ್ನು ಸ್ಥಾಪಿಸಿರಿ-ಎಂಬ ಸಲಹೆ ಬಂದಿತು. ಆಗ ‘ಆರ್ಯಸಮಾಜ‘ ಎಂಬ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿತು. ಅದರ ನಿಯಮಾವಳಿಗಳನ್ನು ದಯಾನಂದರೇ ರೂಪಿಸಿಕೊಟ್ಟರು. ಇದು 1875ರ ಏಪ್ರಿಲ್ 10ರಂದು ಸಾಯಂಕಾಲ 5.30ಕ್ಕೆ ಬೊಂಬಾಯಿ ನಗರದ ಗಿರಿಗಾಂವ್ ರಸ್ತೆಯಲ್ಲಿ ಡಾ. ಮಾಣಿಕ್ ಜೀ ಉದ್ಯಾನಭವನದಲ್ಲಿ ಸ್ವತಃ ದಯಾನಂದರಿಂದಲೇ ಉದ್ಘಾಟಿತವಾಯಿತು. ಅನೇಕ ಲಬ್ಧಪ್ರತಿಷ್ಠ ನಾಗರಿಕರು ಇದರ ಸದಸ್ಯರಾದರು. ಸುಪ್ರಸಿದ್ಧ ವಿದ್ವಾಂಸರಾದ ಮಹಾದೇವ ಗೋವಿಂದ ರಾನಡೆ ಯವರ ಆಗ್ರಹದ ಮೇರೆಗೆ ಪೂನಾಕ್ಕೆ ಹೋದರು. 1875 ಮೇ 8ರಂದು ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಸಾವಿರಾರು ಜನ ಹಿಂದೂ, ಮುಸಲ್ಮಾನ, ಕ್ರೈಸ್ತ ಮುಂತಾದ ಭಿನ್ನಭಿನ್ನ ಸಂಪ್ರದಾಯಗಳ ಸುಶಿಕ್ಷಿತ ನಾಯಕರು ಅಲ್ಲಿ ಸೇರಿದ್ದರು. ದಯಾನಂದರು ಯಜುರ್ವೆದದ ‘ಯಥೇಮಾಂ ವಾಚಂ ಕಲ್ಯಾಣೀಂ’ ಎಂಬ ಮಂತ್ರಕ್ಕೆ ವ್ಯಾಖ್ಯಾನ ಮಾಡುತ್ತ ‘ಸೋದರ ಸೋದರಿಯರೆ, ವೇದಗಳು ಮಾನವರ ಸಂಪತ್ತು, ನಾವೆಲ್ಲಾ ಪಥಮತಃ ಮಾನವರೇ. ಆಮೇಲೆ ಹಿಂದೂಗಳೋ ಮುಸಲ್ಮಾನರೋ ಕ್ರೈಸ್ತರೋ ಆಗಿರುತ್ತೇವೆ. ನಾವು ಸಮಸ್ತ ಸಾಂಪ್ರದಾಯಿಕ ಸಂಕುಚಿತ ಭಾವನೆಗಳನ್ನು ತೆಗೆದುಹಾಕಿ ವಿಶುದ್ಧಮಾನವರಾಗಲು ವೈದಿಕಧರ್ಮಕ್ಕೆ ಶರಣಾಗಬೇಕು’ ಎಂದು ಒತ್ತಿಹೇಳಿದರು.

ನಿಧನ: ಮಹರ್ಷಿ ದಯಾನಂದರು ಮಹಾರಾಜ ಜಸವಂತಸಿಂಹನ ಆಹ್ವಾನದ ಮೇರೆಗೆ ಜೋಧಪುರಕ್ಕೆ ಬಂದರು. ಹಲವು ತಿಂಗಳುಗಳು ಕಳೆದುವು. ಮಹರ್ಷಿಯವರ ಬಿಡಾರದಲ್ಲಿ ಕೆಲವು ಕಹಿಘಟನೆಗಳು ಸಂಭವಿಸಿದುವು. 1883ರ ಸೆಪ್ಟಂಬರ್ 30ರಂದು ರಾತ್ರಿ ಅಡುಗೆಭಟ್ಟ ಕೊಟ್ಟ ಹಾಲನ್ನು ಕುಡಿದರು. ಸ್ವಲ್ಪಹೊತ್ತು ಕಳೆದ ಮೇಲೆ ಹೊಟ್ಟೆ ತೊಳಸಿದಂತಾಗಿ ವಾಂತಿ ಮಾಡಿಕೊಂಡರು. ಮರುದಿನ ಎದ್ದಾಗ ಆಹಾರದ ಮೂಲಕ ವಿಷಪ್ರಯೋಗ ಆದಬಗ್ಗೆ ಸಂಶಯ ಬಂದಿತು. ಅನೇಕ ವೈದ್ಯರು ಔಷಧಿಗಳನ್ನು ನೀಡಿದರೂ ಗುಣಕಾಣಲಿಲ್ಲ. ಅವರಿಗೆ ಛಳಕು, ಭೇದಿ, ಬಿಕ್ಕಳಿಕೆಗಳು ಪ್ರಾರಂಭವಾದುವು. ದಯಾನಂದರು ತನಗೆ ಹಾಲು ನೀಡಿದ ಧೌಡಮಿಶ್ರನನ್ನು ಕರೆದರು. ಅವನು ಬಂದು ಅರೆದ ಗಾಜಿನಪುಡಿ ಮತ್ತು ವಿಷ ಬೆರೆಸಿಕೊಟ್ಟಿರುವ ವಿಷಯವನ್ನು ತಿಳಿಸಿದನು. ಮಹರ್ಷಿ ದಯಾನಂದರು ಅಜಮೀರ ನಗರದಲ್ಲಿ 1883 ರ ಅಕ್ಟೋಬರ್ 30ರ ಸಾಯಂಕಾಲ 6 ಗಂಟೆಗೆ ತಮ್ಮ ಭೌತಿಕ ಬಂಧನವನ್ನು ಕಳಚಿಹಾಕಿದರು. ಮಾರನೆಯ ದಿನ ಅಂತಿಮ ಸಂಸ್ಕಾರಕ್ಕೆ ಮಸೂದಾಭವನದ ಮುಂದೆ ಹಿಂದೂ, ಮುಸಲ್ಮಾನ, ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ, ಎಲ್ಲ ಮತದ ಸಹಸ್ರಾರು ಜನ ಬಂದು ಸೇರಿದರು. ಮಹರ್ಷಿಯವರ ಸೂಚನೆಯ ಪ್ರಕಾರ ರುದ್ರಭೂಮಿಯಲ್ಲಿ ಸಂಸ್ಕಾರವನ್ನು ನಡೆಸಲಾಯಿತು. ಮಹರ್ಷಿ ದಯಾನಂದರು ವೇದಗಳಿಗೆ ಭೌತಿಕ ಹಾಗೂ ಪಾರಮಾರ್ಥಿಕ ಅರ್ಥ ಬರೆದು ‘ಸತ್ಯಾರ್ಥಪ್ರಕಾಶ’ಗೊಳಿಸಿದರು. ಸಮಸ್ತರನ್ನು ವೇದಮಾತೆಯ ಅಡಿಯಲ್ಲಿ ಸೇರಿಸಿದರು. ಆಧುನಿಕ ನವಸಮಾಜದ ನಿರ್ವಪಕರಾದರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top