Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿ-ಗತಿ

Sunday, 11.06.2017, 3:00 AM       No Comments

ಹಿಂದೆ ನಮ್ಮ ವಿಶ್ವವಿದ್ಯಾಲಯಗಳು ವಿದ್ವನ್ಮಣಿಗಳ ಪರಂಪರೆ ಹೊಂದಿದ್ದವು, ಹೊಸ ಪ್ರಯೋಗ ಹಾಗೂ ಗುಣಮಟ್ಟಗಳಿಗೆ ಹೆಸರಾಗಿದ್ದವು. ಆದರೆ, ಈಗ ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಸಂಶೋಧನೆ, ಪ್ರಸಾರಾಂಗ ಯಾವುದೂ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಕಳವಳದ ಸಂಗತಿ. ನಮ್ಮ ವಿಶ್ವವಿದ್ಯಾಲಯಗಳ ಗತಿ ಹೆಳವನ ಹೆಗಲ ಮೇಲೆ ಕುರುಡ ಕುಳಿತು ಹೋಗುತ್ತಿರುವ ಸ್ಥಿತಿಯಾಗಿದೆ.

ನಮ್ಮ ವಿಶ್ವವಿದ್ಯಾನಿಲಯಗಳ ಕಾರ್ಯಕಲಾಪಗಳನ್ನು ಮೂರು ಅಂಗಗಳಾಗಿ ವಿಭಾಗಿಸಬಹುದೆಂದು ಕುವೆಂಪು ಹೇಳುತ್ತಾರೆ: ಮೊದಲನೆಯದು ಸಂಶೋಧನಾಂಗ, ಎರಡನೆಯದು ಬೋಧನಾಂಗ ಹಾಗೂ ಮೂರನೆಯದು ಪ್ರಸಾರಾಂಗ. ಇವುಗಳಲ್ಲಿ ಮೊದಲನೆಯದಾದ ಸಂಶೋಧನಾಂಗ ವಿಶ್ವವಿದ್ಯಾಲಯದ ತಲೆಯಿದ್ದಂತೆ ಎಂಬುದು ಕುವೆಂಪು ಅಭಿಪ್ರಾಯ. ಇದು ಮುಖ್ಯವಾಗಿ ಎಂ.ಎ., ಎಂ.ಎಸ್.ಸಿ. ಮತ್ತು ಅವಕ್ಕೂ ಮುಂದಿನ ವ್ಯಾಸಂಗಕ್ಕೆ ಸಂಬಂಧಪಟ್ಟ ಮೇಲ್ಮಟ್ಟದ ಕೆಲಸ. ಎರಡನೆಯದಾದ ಬೋಧನಾಂಗ ವಿಶ್ವವಿದ್ಯಾಲಯದ ಕೈ ಇದ್ದಂತೆ. ಇದೊಂದು ರೀತಿ ದಾರಿದೀಪ. ಇಂದಿನ ಪೀಳಿಗೆಯವರು ಸುಸಂಸ್ಕೃತರಾಗಿ, ನಾಗರಿಕರಾಗಿ, ವಿದ್ಯಾವಂತರಾಗಿ ಪ್ರಪಂಚದ ಇತರ ಜನಗಳೊಡನೆ ಸಮಸ್ಪರ್ಧಿಗಳಾಗಿ ಹೇಗೆ ಬಾಳಬೇಕೆಂಬುದನ್ನು ಕಲಿಸುವುದು ಇದರ ಕೆಲಸ. ಇದರಲ್ಲಿ ಸ್ನಾತಕೋತ್ತರದ ಬೋಧನೆ, ಅಭ್ಯಾಸಗಳು ಒಂದು ಭಾಗವಾದರೆ ಸ್ನಾತಕಪೂರ್ವ ಶಿಕ್ಷಣ ಜ್ಞಾನಾರ್ಜನೆಗಳು ಇನ್ನೊಂದು ಭಾಗ. ಕುವೆಂಪು ಪ್ರಕಾರ ಈ ಎರಡು ಅಂಗಗಳಿಗಿಂತಲೂ ಮುಖ್ಯವಾದುದು, ಅತ್ಯಂತ ಅವಶ್ಯಕವಾದುದು ಪ್ರಕಟಣೆ ಮತ್ತು ಪ್ರಚಾರೋಪನ್ಯಾಸಗಳ ಅಂಗ. ಅಂದರೆ ಪ್ರಸಾರಾಂಗ. ಇದನ್ನು ಅವರು ವಿಶ್ವವಿದ್ಯಾಲಯದ ಹೃದಯ ಎಂದು ಕರೆಯುತ್ತಾರೆ. ಇದು ವಿಶ್ವವಿದ್ಯಾಲಯದ ಜೀವನಾಡಿಯಿದ್ದಂತೆ.

ವಿಶ್ವವಿದ್ಯಾನಿಲಯದ ಬಗೆಗೆ ದಾರ್ಶನಿಕರೊಬ್ಬರ ಕಲ್ಪನೆಯಿದು. ಇದರ ಕೊಂಚ ಅರಿವು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಉನ್ನತ ಹುದ್ದೆಯಲ್ಲಿರುವ ಮಂದಿಗಿದ್ದರೂ ನಮ್ಮ ವಿಶ್ವವಿದ್ಯಾಲಯಗಳು ಈ ಸ್ಥಿತಿಯಲ್ಲಿರುತ್ತಿರಲಿಲ್ಲ. ಇವತ್ತು ಈ ಎಲ್ಲ ಅಂಗಗಳೂ ನಿಷ್ಕ್ರಿಯವಾಗಿದ್ದು ನಮ್ಮ ವಿಶ್ವವಿದ್ಯಾಲಯಗಳ ಗತಿ ಹೆಳವನ ಹೆಗಲ ಮೇಲೆ ಕುರುಡ ಕುಳಿತು ಹೋಗುತ್ತಿರುವ ಸ್ಥಿತಿಯಾಗಿದೆ.

ಎಲ್ಲಿದೆ ಸಂಶೋಧನೆ?: ಇವುಗಳಲ್ಲಿ ಹೆಚ್ಚು ಸೊರಗಿರುವ ಕ್ಷೇತ್ರವೆಂದರೆ ಸಂಶೋಧನಾಂಗ. ಈ ಮೊದಲು ಸಂಶೋಧನೆ ನಮ್ಮ ವಿದ್ವಾಂಸರ ಆಸಕ್ತಿಯ ಕ್ಷೇತ್ರವಾಗಿತ್ತು. ಅದಕ್ಕೂ ಪದವಿಗೂ ನೇರ ಸಂಬಂಧವಿರಲಿಲ್ಲ. ಕನ್ನಡವನ್ನೇ ಗಮನಿಸಿ ಹೇಳುವುದಾದರೆ ವಿಶ್ವವಿದ್ಯಾಲಯದ ಹೊರಗಿದ್ದೂ ಕನ್ನಡ ಸಂಶೋಧನೆಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ದೊಡ್ಡ ಪರಂಪರೆಯೇ ಇದೆ. ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಶಂಬಾ ಜೋಷಿ, ಹಳಕಟ್ಟಿ ಮೊದಲಾದವರು ಈ ಮಾದರಿಯವರು. ವಿಶ್ವವಿದ್ಯಾಲಯದಲ್ಲಿದ್ದೂ ಸಂಶೋಧನೆಯನ್ನು ಒಂದು ವ್ರತದಂತೆ ಏಕಾಗ್ರಚಿತ್ತದಿಂದ ಮಾಡಿದ ವಿದ್ವಾಂಸರ ಪರಂಪರೆಯೂ ನಮ್ಮಲ್ಲಿದೆ. ಡಿ.ಎಲ್. ನರಸಿಂಹಾಚಾರ್, ಆ.ನೆ. ಉಪಾಧ್ಯೆ, ಭೂಸನೂರಮಠ, ಎಲ್.ಬಸವರಾಜು, ಎಂ.ಎಂ.ಕಲ್ಬುರ್ಗಿ, ಎಂ.ಚಿದಾನಂದ ಮೂರ್ತಿ, ಟಿ.ವಿ. ವೆಂಕಟಾಚಲಶಾಸ್ತ್ರಿ ಮೊದಲಾದವರು ತಕ್ಷಣಕ್ಕೆ ನೆನಪಿಗೆ ಬರುವ ಹೆಸರುಗಳು. ಈಗ ಸಂಶೋಧನೆಯಿರಲಿ ವಿದ್ವತ್ ಪರಂಪರೆಯೇ ಕಾಣೆಯಾಗುತ್ತಿದೆ. ಎಲ್ಲಿ ಹೋದವೋ ಆ ದಿನಗಳು… ಇದು ಹಳಹಳಿಕೆಯಲ್ಲ, ವಾಸ್ತವ ಸತ್ಯ. ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿ ಅಧ್ಯಯನ ಮಾಡಿಯೇ ಈ ಉದ್ಗಾರ!

ಭಾರತದ ವಿಶ್ವವಿದ್ಯಾಲಯಗಳಲ್ಲಿ ಇಂದು ಸುಮಾರು 45 ಸಾವಿರ ವಿದ್ಯಾರ್ಥಿಗಳು ಸಂಶೋಧನೆಯ ಹೆಸರಿನಲ್ಲಿ ಪಿಎಚ್.ಡಿ.ಗೆ ಅಧ್ಯಯನ ಮಾಡುತ್ತಿದ್ದಾರೆ ಎಂದು ಉನ್ನತ ಅಧ್ಯಯನ ಕ್ಷೇತ್ರದ ವರದಿ ಹೇಳುತ್ತದೆ. ಎಷ್ಟೊಂದು ಹುಲುಸು ಬೆಳೆ ಬರಬೇಕು! ಸಂಖ್ಯೆಯ ದೃಷ್ಟಿಯಿಂದ ಸಂಶೋಧನಾ ಕ್ಷೇತ್ರದ ಪ್ರಗತಿ ಭರವಸೆ ಮೂಡಿಸುವಂತಿದೆ. ಆದರೆ ಗುಣಮಟ್ಟ? ಕೇಳಲೇಬೇಡಿ. ವಿಶ್ವವಿದ್ಯಾಲಯದ ಯಾವುದೇ ಸಂಶೋಧನಾ ವಿದ್ಯಾರ್ಥಿಯನ್ನು ಸುಮ್ಮನೆ ಮಾತನಾಡಿಸಿ ನೋಡಿದರೂ ನಮ್ಮ ಸಂಶೋಧನ ಕ್ಷೇತ್ರದ ಸ್ಥಿತಿ-ಗತಿಯ ಅರಿವಾಗುತ್ತದೆ. ಎಷ್ಟು ತೂರಿದರೂ ಗಟ್ಟಿಕಾಳು ಸಿಗುವುದಿಲ್ಲ. ಇವರಲ್ಲಿ ಬಹುಮಂದಿ ಸರ್ಕಾರದ ಅನುದಾನ ಪಡೆಯುತ್ತಿದ್ದಾರೆ. ಅಂದರೆ ಜನರ ತೆರಿಗೆಯ ಹಣದಿಂದ ಇವರ ಅಧ್ಯಯನ ನಡೆಯುತ್ತಿದೆ. ಸಮಾಜಕ್ಕಿರಲಿ, ಅವರು ಮಾಡುತ್ತಿರುವ ಸಂಶೋಧನೆಯ ಕ್ಷೇತ್ರಕ್ಕಾದರೂ ಇವರ ಕೊಡುಗೆಯೇನು?

ಇದಕ್ಕೆ ಕಾರಣವೇನು? ಮೇಲ್ನೋಟಕ್ಕೇ ಕಾಣುವ ಸರಳ ಕಾರಣ ಸಂಶೋಧನೆಗೂ ಪದೋನ್ನತಿಗೂ ಸಂಬಂಧ ಕಲ್ಪಿಸಿದ್ದು. ಉದ್ದೇಶ ಒಳ್ಳೆಯದೇ. ಅಧ್ಯಾಪಕರು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅದರ ಲಾಭ ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂಬ ಆಶಯದಿಂದ ಇದನ್ನು ಜಾರಿಗೆ ತರಲಾಯಿತು. ಎಲ್ಲ ಕ್ಷೇತ್ರಗಳಲ್ಲಾಗುವಂತೆ ಯೋಜನೆಯ ಮೂಲ ಉದ್ದೇಶವನ್ನು ಮೂಲೆಗುಂಪು ಮಾಡಿ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವವರು ಇಲ್ಲಿಯೂ ಹುಟ್ಟಿಕೊಂಡರು. ಸಂಶೋಧನಾ ಕ್ಷೇತ್ರ ಗಬ್ಬೆದ್ದು ಹೋಯಿತು.

ಕುಸಿದ ಗುಣಮಟ್ಟ: ಪಿಎಚ್​ಡಿ ಮಾಡುವವರಿರಲಿ, ಅವರಿಗೆ ಮಾರ್ಗದರ್ಶನ ಮಾಡುವವರ ವಿದ್ವತ್ತನ್ನು ನೋಡಿದರೂ ಗಾಬರಿಯಾಗುತ್ತದೆ. ತಮ್ಮ ಬದುಕಿನಲ್ಲಿ ಒಂದಾದರೂ ಸಂಶೋಧನಾ ಲೇಖನವನ್ನು ಪ್ರಕಟಿಸದ ವಿದ್ವನ್ಮಣಿಗಳು ಮಾರ್ಗದರ್ಶಕರಾಗಿರುತ್ತಾರೆ. ಕಡೆಯ ಪಕ್ಷ ಅವರು ತಮ್ಮ ಅಧ್ಯಯನಕ್ಕಾಗಿ ಆರಿಸಿಕೊಂಡು ಪದವಿ ಪಡೆದ ಸಂಶೋಧನಾ ನಿಬಂಧವನ್ನೂ ಅವರು ಪ್ರಕಟಿಸಿರುವುದಿಲ್ಲ. ಅವರಿಗೇ ಗೊತ್ತಿರುತ್ತದೆ-ಅದು ಪ್ರಕಟಣೆಗೆ ಅರ್ಹವಲ್ಲವೆಂದು. ಅಷ್ಟರಮಟ್ಟಿಗೆ ಅವರಿಗೆ ವಿವೇಕವಿರುವುದು ಮೆಚ್ಚಬೇಕಾದ ಸಂಗತಿ. ಕೆಲವು ಭಂಡರೂ ಇರುತ್ತಾರೆ ಬಿಡಿ.

ಘನತೆ ತಂದುಕೊಡಿ: ಯಾವ ಕ್ಷೇತ್ರದಲ್ಲಾದರೂ ಸಂಶೋಧನೆಗೆ ವಿಶೇಷ ಮಹತ್ವವಿದೆ. ಆರ್​ಡಿ ಎಂಬುದು- ರಿಸರ್ಚ್ ಅಂಡ್ ಡೆವಲಪ್​ವೆುಂಟ್ -ಆ ಕ್ಷೇತ್ರದ ಅಭಿವೃದ್ಧಿಗೆ ಅತ್ಯಂತ ಅವಶ್ಯ. ಕೈಗಾರಿಕಾ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಇದಕ್ಕೆ ಈಗಲೂ ಮಹತ್ವವಿದೆ. ಆದರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಒಂದು ರೀತಿ ಅಣಕವಾಗಿದೆ. ಪಿಎಚ್​ಡಿ ಹೆಸರಿನಲ್ಲಿ ಸಂಶೋಧನೆ ಮಾಡುವವರಿಗೆಲ್ಲರಿಗೂ ಮುಕ್ತ ಅವಕಾಶ ಕಲ್ಪಿಸದೆ ಕಠಿಣ ವಿಧಿ ವಿಧಾನಗಳ ಮೂಲಕ ಅದಕ್ಕೊಂದು ಘನತೆ ತಂದುಕೊಡುವುದರತ್ತ ತಜ್ಞರು ಚಿಂತಿಸಬೇಕಿದೆ. ಅದೊಂದು ಗಂಭೀರ ಬೌದ್ಧಿಕ ಚಟುವಟಿಕೆ ಎಂಬ ಪ್ರಾಥಮಿಕ ಅರಿವಾದರೂ ಇರಬೇಕು. ಸ್ನಾತಕೋತ್ತರ ಪದವಿ ಮಾಡಿದವರೆಲ್ಲ ಸಂಶೋಧನೆ ಮಾಡಬಹುದೆನ್ನುವ ರೂಢಿಯೇ ಅಪಾಯಕಾರಿ. ಸಂಶೋಧನೆ ಮಾಡಲು ಅರ್ಹತೆ ನಿಗದಿಪಡಿಸುವುದು ಒಳ್ಳೆಯದು. ಈಗಿರುವ ಪ್ರವೇಶ ಪರೀಕ್ಷೆ ಯಾವುದೇ ರೀತಿಯಲ್ಲೂ ಅರ್ಹತೆಯ ಗುಣಮಟ್ಟವನ್ನು ಗುರ್ತಿಸುವ ರೀತಿಯಲ್ಲಿಲ್ಲ. ಮಾರ್ಗದರ್ಶಕರಿಗೂ ಮಾರ್ಗದರ್ಶನದ ಅಗತ್ಯವಿದೆ. ಕುವೆಂಪು ಹೇಳುವ ಹಾಗೆ ಸಂಶೋಧನಾಂಗ ವಿಶ್ವವಿದ್ಯಾನಿಲಯದ ತಲೆ ಇದ್ದಂತೆ. ಆದರೆ ಅದೇ ಈಗ ಕೆಟ್ಟಿದೆ.

ಇನ್ನು ಬೋಧನಾಂಗ. ಯಾವುದೇ ವಿಶ್ವವಿದ್ಯಾನಿಲಯಕ್ಕೆ ಘನತೆ ತರುವಂಥವರು ಅಲ್ಲಿಯ ಪ್ರಾಧ್ಯಾಪಕರು. ಎಳೆಯ ಪೀಳಿಗೆಯನ್ನು ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವ, ಜಾಗತಿಕ ಸವಾಲುಗಳಿಗೆ ಸಜ್ಜುಗೊಳಿಸುವ ಮಹತ್ವದ ಹೊಣೆಗಾರಿಕೆ ಇವರದು. ಒಂದು ಕಾಲಕ್ಕೆ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ಪ್ರಾಧ್ಯಾಪಕರಿದ್ದರೆಂಬುದನ್ನು ನಾವು ಕೇಳಿದ್ದೇವೆ. ಈಗ ಅದು ಇತಿಹಾಸ. ಪಾಶ್ಚಾತ್ಯ ವಿಶ್ವವಿದ್ಯಾಲಯಗಳಲ್ಲಿ ಎಷ್ಟು ಜನ ನೊಬೆಲ್ ಪ್ರಶಸ್ತಿ ಪಡೆದ ಪ್ರಾಧ್ಯಾಪಕರಿದ್ದಾರೆ ಎಂಬ ಸಂಗತಿಯ ಮೇಲೆ ಆ ವಿಶ್ವವಿದ್ಯಾಲಯದ ಗುಣಮಟ್ಟ ನಿರ್ಧಾರವಾಗುತ್ತದೆ. ಕೆಲವೊಮ್ಮೆ ವಿಶ್ವವಿದ್ಯಾಲಯಗಳು ನೊಬೆಲ್ ಪ್ರಶಸ್ತಿ ವಿಜೇತರನ್ನು ಅತಿಥಿ ಪ್ರಾಧ್ಯಾಪಕರಾಗಿ ಆಹ್ವಾನಿಸುವುದುಂಟು. ಕೆಲವು ರಾಷ್ಟ್ರಗಳಲ್ಲಿ ಪ್ರಾಧ್ಯಾಪಕರು ಎಲ್ಲರಿಗಿಂತ ಅತ್ಯಂತ ಹೆಚ್ಚು ವೇತನ ಪಡೆಯುತ್ತಾರೆ. ಅವರಿಗೆ ಎಲ್ಲ ರೀತಿಯ ಸವಲತ್ತುಗಳನ್ನೂ ಒದಗಿಸಿಕೊಡುತ್ತಾರೆ. ರಾಷ್ಟ್ರದ ಭವಿಷ್ಯ ಅಧ್ಯಾಪಕರ ಕೈಯಲ್ಲಿದೆ ಎಂದು ಅವರು ನಂಬುತ್ತಾರೆ. ಹೀಗಾಗಿ ಪ್ರತಿಭಾವಂತರನ್ನು ಆ ಕ್ಷೇತ್ರಕ್ಕೆ ಆಹ್ವಾನಿಸುತ್ತಾರೆ.

ಲಾಭದಾಯಕ ಉದ್ಯಮವಾಗಿ ಬದಲಾಗಿದೆ: ಈಗ್ಗೆ ಕೆಲ ವರ್ಷಗಳ ಹಿಂದೆ ನನ್ನ ಗೆಳೆಯ ನಮ್ಮ ಪ್ರಾಥಮಿಕ ಶಿಕ್ಷಣದ ಬಗ್ಗೆ ಅಧ್ಯಯನ ಮಾಡಿದ್ದ. ಪಿಯುಸಿ ಮುಗಿದ ನಂತರ ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲ ಇಂಜಿನಿಯರಿಂಗ್, ವೈದ್ಯಕೀಯ, ವಾಣಿಜ್ಯ ಮೊದಲಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಎಲ್ಲಿಯೂ ಸಲ್ಲದ ವಿದ್ಯಾರ್ಥಿಗಳು ಶಿಕ್ಷಕ ತರಬೇತಿಗೆ ಬರುತ್ತಾರೆ ಎಂಬುದು ಅಧ್ಯಯನದ ಫಲಶೃತಿ. ಇಂತಹ ವಿದ್ಯಾರ್ಥಿಗಳೇ ಮುಂದೆ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರಾಗುತ್ತಾರೆ. ಇಂಥವರಿಂದ ಎಂತಹ ಶಿಕ್ಷಣವನ್ನು ನಮ್ಮ ಮಕ್ಕಳು ಪಡೆಯಬಹುದೆಂಬುದನ್ನು ಊಹಿಸಿ. ಇದು ಉನ್ನತ ಅಧ್ಯಯನದಲ್ಲೂ ಬಹುಮಟ್ಟಿಗೆ ನಿಜ. ಶಿಕ್ಷಕರಾಗಲು ಪ್ರತಿಭಾವಂತರು ಅಪೇಕ್ಷಿಸುತ್ತಿಲ್ಲ. ಯುಜಿಸಿ ಇದನ್ನು ಮನಗಂಡು ಪ್ರತಿಭಾವಂತರನ್ನು ಸೆಳೆಯಲು ಆಕರ್ಷಕ ವೇತನವನ್ನು ರೂಪಿಸಿದೆ. ಆದರೆ ಇತ್ತೀಚಿನ ಅಪಾಯಕಾರಿ ಬೆಳವಣಿಗೆಯೆಂದರೆ ಬಂಡವಾಳಶಾಹಿಗಳು ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿರುವುದು. ಈ ಮೊದಲು ಸೇವಾಕ್ಷೇತ್ರವಾಗಿದ್ದ ಇದು ಈಗ ಲಾಭದಾಯಕ ಉದ್ಯಮವಾಗಿ ರೂಪಾಂತರಗೊಂಡಿದೆ. ಹೀಗಾಗಿ ವಿದ್ಯೆಯೂ ಮಾರಾಟದ ಸರಕಾಗಿಬಿಟ್ಟಿದೆ. ಪರಿಣಾಮ ನಿಜಪ್ರತಿಭೆಗಾಗಲೀ ಬಹುಮುಖೀ ಜ್ಞಾನಕ್ಕಾಗಲೀ ಅವಕಾಶವಿಲ್ಲ. ಶೈಕ್ಷಣಿಕ ಸ್ವಾತಂತ್ರ್ಯಲ್ಲದ ಪರಿಸರದಲ್ಲಿ ಎಂತಹ ಶಿಕ್ಷಕರಿರಲು ಸಾಧ್ಯ?

ವಿದ್ವತ್ ಪರಂಪರೆ ಕಣ್ಮರೆ: ಈಗ ನಮ್ಮ ವಿಶ್ವವಿದ್ಯಾಲಯಗಳ ಬೋಧನಾಂಗವನ್ನು ಗಮನಿಸಿದರೆ ನಿಜಕ್ಕೂ ಆತಂಕವುಂಟಾಗುತ್ತದೆ. ಹೊರಗೆ ಸಿಂಗಾರ, ಒಳಗೆ ಗೋಣಿಸೊಪ್ಪು. ವಿಶ್ವವಿದ್ಯಾಲಯಗಳಲ್ಲಿ ವಿದ್ವತ್ ಪರಂಪರೆ ಕಣ್ಮರೆಯಾಗಿ ನಕಲಿ ವೇಷಧಾರಿಗಳ ನಲಿದಾಟ ವಿಜೃಂಭಿಸುತ್ತಿದೆ. ಬೌದ್ಧಿಕ ವಾತಾವರಣಕ್ಕೆ ಬದಲಾಗಿ ರಾಜಕೀಯದ ದುರ್ನಾತ ಆವರಿಸಿಕೊಂಡಿದೆ. ಕುಲಪತಿಗಳೇ ಮಾರಾಟಕ್ಕಿದ್ದಾರೆ ಎಂಬ ಸುದ್ದಿಯಿರುವಾಗ ಉಳಿದವರ ಪಾಡೇನು? ಇದು ಸುದ್ದಿ ಮಾತ್ರವಾಗಲಿ, ನಿಜವಾಗದಿರಲಿ ಎಂಬುದಷ್ಟೇ ನಾವು ಆಶಿಸಬಹುದಾದದ್ದು.

ವಿಶ್ವವಿದ್ಯಾಲಯದ ಮೂರನೆಯ ಅಂಗ ‘ಪ್ರಸಾರಾಂಗ’. ಇದು ವಿಶ್ವವಿದ್ಯಾಲಯದ ಹೃದಯವೆಂದು ಕುವೆಂಪು ಹೇಳುತ್ತಾರೆ. ಪ್ರಸಾರಾಂಗ ಎಂದರೇನು?

ಜ್ಞಾನಸಾಧನೆ ಹಾಗೂ ವೈಜ್ಞಾನಿಕ ಸೌಲಭ್ಯಗಳು ಪಟ್ಟಣಗಳಲ್ಲಿ ಮಾತ್ರ ಕೇಂದ್ರೀಕೃತವಾಗಿವೆ. ಇದರಿಂದಾಗಿ ಹಳ್ಳಿಯ ಜನರಿಗೆ ಈ ಅನುಕೂಲಗಳು ದೊರೆಯುವುದು ಕಷ್ಟಸಾಧ್ಯ. ವಿಶ್ವವಿದ್ಯಾಲಯದ ಪ್ರಯೋಜನವನ್ನು ನಾಡಿನ ಎಲ್ಲರೂ ಪಡೆದರೆ ಮಾತ್ರ ಉದ್ದೇಶ ಸಫಲವಾಗುತ್ತದೆ. ವಿಶ್ವವಿದ್ಯಾಲಯವನ್ನು ಪ್ರವೇಶಿಸದ ಕಾರಣವಾಗಿ ಜ್ಞಾನವನ್ನು ಪಡೆಯಲು ಅವಕಾಶ ಸಿಗಲಿಲ್ಲ ಎಂಬ ಕೊರತೆ ಕಾಡಬಾರದು. ವಿಶ್ವವಿದ್ಯಾಲಯದ ಜ್ಞಾನ ಹಳ್ಳಿ-ಹಳ್ಳಿಗಳಲ್ಲೂ ಪ್ರಚಾರವಾಗಬೇಕು. ಹೀಗೆ ವಿಸõತ ನೆಲೆಯಲ್ಲಿ ಜ್ಞಾನಪ್ರಸಾರ ಮಾಡುವುದೇ ‘ಪ್ರಸಾರಾಂಗ’ದ ಆಶಯ. ಇದನ್ನು ಎರಡು ನೆಲೆಯಲ್ಲಿ ಮಾಡಬಹುದು. ಒಂದು ಪ್ರಚಾರೋಪನ್ಯಾಸ, ಮತ್ತೊಂದು ಪ್ರಕಟಣೆ.

ದೇಶದಲ್ಲಿರುವ ಎಲ್ಲರೂ ವಿಶ್ವವಿದ್ಯಾಲಯಕ್ಕೆ ಹೋಗಲಾರರು. ಆದರೆ ವಿಶ್ವವಿದ್ಯಾಲಯ ಎಲ್ಲರ ಮನೆಬಾಗಿಲಿಗೂ ಹೋಗಬಲ್ಲುದು, ಹೋಗುವಂತಾಗಬೇಕು. ಯಾರು ಅಪೇಕ್ಷಿಸುತ್ತಾರೋ ಅಲ್ಲಿಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಥವಾ ವಿಷಯತಜ್ಞರು ಹೋಗಿ ಅವರಿಗೆ ತಿಳಿಯುವ ಭಾಷೆಯಲ್ಲಿ ಉಪನ್ಯಾಸ ನೀಡುವುದು. ಈ ಉಪನ್ಯಾಸದ ವಿಷಯ ಕೃಷಿ, ಆರೋಗ್ಯ, ಗೃಹಕೈಗಾರಿಕೆ, ಸಾಮಾನ್ಯಜ್ಞಾನ, ತಂತ್ರಜ್ಞಾನ, ಸಾಹಿತ್ಯ ಹೀಗೆ ಯಾವುದಾದರೂ ಆಗಬಹುದು. ಅದು ಅವರಿಗೆ ಉಪಯುಕ್ತ ಅನ್ನಿಸಬೇಕು ಅಷ್ಟೆ. ವಿಶ್ವವಿದ್ಯಾಲಯಕ್ಕೆ ಎಷ್ಟೇ ಉತ್ಸಾಹವಿದ್ದರೂ ನಾಡಿನ ಎಲ್ಲ ಕಡೆ ಹೀಗೆ ಉಪನ್ಯಾಸ ಏರ್ಪಡಿಸುವುದು ಕಷ್ಟ. ಆದ್ದರಿಂದ ಈ ಉಪನ್ಯಾಸಗಳನ್ನು ಕೇಳಲು ಸಾಧ್ಯವಿಲ್ಲದವರಿಗೂ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುವಂತೆ ಸಣ್ಣ ಸಣ್ಣ ಪುಸ್ತಿಕೆಗಳ ರೂಪದಲ್ಲಿ ಇವುಗಳನ್ನು ಪ್ರಕಟಿಸಿ, ಸುಲಭ ಬೆಲೆಗೆ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು. ಇದು ಪ್ರಸಾರಾಂಗದ ಎರಡನೆಯ ಆಶಯ. ಹೀಗೆ ವಿಶ್ವವಿದ್ಯಾಲಯದ ಪ್ರಚಾರೋಪನ್ಯಾಸ ಹಾಗೂ ಪ್ರಕಟಣೆಗಳು ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯದವರಿಗೂ ಜ್ಞಾನ ದೀವಿಗೆಯಾಗಬಲ್ಲವು.

ಜಗಖ್ಯಾತಿ ಹೊಂದಿದ್ದ ಮೈಸೂರು ಪ್ರಯೋಗ: ‘ಪ್ರಸಾರಾಂಗ’ದ ಪರಿಕಲ್ಪನೆಯನ್ನು ರೂಪಿಸಿ ಅದನ್ನು ನಾಡಿನಲ್ಲೇ ಮೊದಲು ಪ್ರಯೋಗ ಮಾಡಿದ್ದು ನಮ್ಮ ಮೈಸೂರು ವಿಶ್ವವಿದ್ಯಾಲಯ. ಈ ಪ್ರಯೋಗದ ಖ್ಯಾತಿ ಆಗ ಇಂಗ್ಲೆಂಡ್​ನವರೆಗೂ ಹಬ್ಬಿತ್ತು. 1934ರಲ್ಲಿ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಸಮ್ಮೇಳನವು ಆಕ್ಸ್​ಫರ್ಡ್​ನಲ್ಲಿ ನಡೆದಾಗ ಮೈಸೂರು ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ಪ್ರೊ.ರಾಲೋ ಅವರು ಮೈಸೂರು ವಿವಿ ಪ್ರತಿನಿಧಿಯಾಗಿ ಹೋಗಿದ್ದರು. ಅಲ್ಲಿ ಪ್ರಚಾರೋಪನ್ಯಾಸಗಳ ಹೊಸ ಪ್ರಯೋಗವನ್ನು ಕುರಿತು ಸಭೆಯಲ್ಲಿ ವಿವರಿಸಿದಾಗ ಸಮ್ಮೇಳನಕ್ಕೆ ಬಂದಿದ್ದ ದೇಶ-ವಿದೇಶಗಳ ಪ್ರತಿನಿಧಿಗಳು ತುಂಬ ಮೆಚ್ಚಿದರಂತೆ! ಈ ಪ್ರಯೋಗವು ‘ಮೈಸೂರಿನ ಪ್ರಯೋಗ’ ಎಂಬ ಹೆಸರಿನಿಂದ ಪ್ರಖ್ಯಾತವಾಗಿತ್ತು.

ಈಗ ನಮ್ಮ ಮೈಸೂರು ವಿಶ್ವವಿದ್ಯಾಲಯವೇ ಇದನ್ನು ಮರೆತಂತಿದೆ. ಇನ್ನು ಉಳಿದ ವಿಶ್ವವಿದ್ಯಾಲಯಗಳಲ್ಲಿ ಈ ಪರಿಕಲ್ಪನೆ ಅಲ್ಲಿರುವ ‘ಪ್ರಾಜ್ಞ’ರಿಗೆ ಹೊಳೆಯುವುದಾದರೂ ಹೇಗೆ? ಕೆಲ ವರ್ಷಗಳ ಹಿಂದೆ ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ‘ಪ್ರಸಾರಾಂಗ’ದ ಪರಿಕಲ್ಪನೆಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಂತೆ ನೆನಪು.

ಈಗ ವಿಶ್ವವಿದ್ಯಾಲಯಗಳ ‘ತಲೆ’ (ಸಂಶೋಧನಾಂಗ) ಕೆಟ್ಟಿದೆ. ‘ಕೈ ಅಥವಾ ದಾರಿದೀವಿಗೆ’ (ಬೋಧನಾಂಗ) ಪಾರ್ಶ್ವವಾಯು ಪೀಡಿತವಾಗಿದೆ. ‘ಹೃದಯ’ಕ್ಕೆ (ಪ್ರಸಾರಾಂಗ) ಆಘಾತವಾಗಿದೆ. ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿರುವ ನಮ್ಮ ವಿಶ್ವವಿದ್ಯಾಲಯಗಳಿಗೆ ಚಿಕಿತ್ಸೆ ನೀಡಬೇಕಾದ ಸರ್ಕಾರಕ್ಕೆ ತನ್ನ ಅಳಿವು-ಉಳಿವಿನ ಪ್ರಶ್ನೆಯೇ ಮುಖ್ಯವಾಗಿ ಜೀವನ್ಮರಣದ ಸ್ಥಿತಿಯಲ್ಲಿದೆ. ಕಾಯುವವರಾರು? ಜನಜಾಗೃತಿಯೇ ಇದಕ್ಕೆಲ್ಲ ಮದ್ದೆಂಬಂತೆ ತೋರುತ್ತಿದೆ. ಸಮೂಹಮಾಧ್ಯಮಗಳ ಪಾತ್ರ ಇಂತಹ ಸ್ಥಿತಿಯಲ್ಲಿ ಅತ್ಯಂತ ಮಹತ್ವದ್ದು.

ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗೆಳೆಯರೊಬ್ಬರ ಜೊತೆ ಈ ಕುರಿತು ರ್ಚಚಿಸುತ್ತಿದ್ದೆ. ಆಗ ಅವರು ಕೊಂಕುನಗೆ ಬೀರಿ, ‘‘ನಿಮ್ಮ ಮಾತುಗಳೆಲ್ಲ ಕೇಳಲು ಚೆನ್ನಾಗಿವೆ, ನಿಮ್ಮ ವಿಶ್ವವಿದ್ಯಾಲಯದ ಕನಸೂ ಚೆನ್ನಾಗಿದೆ, ನಿಮಗೆ ಸಮಕಾಲೀನ ಸಂದರ್ಭದ ಅರಿವೂ ಇದೆ, ನಿಮ್ಮ ಬಗ್ಗೆ ನನ್ನ ಸಹಾನುಭೂತಿಯೂ ಇದೆ’’ ಎಂದು ಒಂದೇ ಉಸಿರಿನಲ್ಲಿ ಮಿಶ್ರ ಭಾವನೆಗಳನ್ನು ವ್ಯಕ್ತಪಡಿಸಿದರು. ಸ್ವಲ್ಪ ಹೊತ್ತು ಮೌನವಾಗಿದ್ದು ನಂತರ ‘‘ನನ್ನ ಬಹುಪಾಲು ಬದುಕನ್ನು ವಿಶ್ವವಿದ್ಯಾಲಯದಲ್ಲಿಯೇ ಕಳೆದಿದ್ದೇನೆ. ಆ ಅನುಭವದಿಂದ ಎರಡು ಪ್ರಸಂಗ ಹೇಳುತ್ತೇನೆ ಕೇಳಿ’’ ಎಂದರು. ಅವರು ಹೇಳಿದ್ದು:

ಒಮ್ಮೆ ನಮ್ಮ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಅಧ್ಯಾಪಕರ ಬಗ್ಗೆ ಒಂದು ಸರ್ವೆ ನಡೆಯಿತು. ವಿಶ್ವವಿದ್ಯಾಲಯದ ಶೇಕಡ ಐದರಷ್ಟು ಮಂದಿ ಅಧ್ಯಾಪಕರು ಮಾತ್ರ ಗ್ರಂಥಾಲಯ ಬಳಸಿಕೊಳ್ಳುತ್ತಿದ್ದರು. ಅಧ್ಯಾಪಕರಿಂದ ವಿವರಣೆ ಬಯಸಿದಾಗ ಗ್ರಂಥಾಲಯದಲ್ಲಿ ಬೇಕಾದ ಪುಸ್ತಕ ಬಿಟ್ಟು ಉಳಿದೆಲ್ಲ ಸಿಗುತ್ತದೆ, ಹೋಗಿ ಪ್ರಯೋಜನವೇನು ಎಂಬ ಉತ್ತರ ಬಂತು. ಇದು ಏಕಕಾಲಕ್ಕೆ ಗ್ರಂಥಾಲಯದ ಸ್ಥಿತಿಯನ್ನೂ ನಮ್ಮ ಅಧ್ಯಾಪಕರ ಅಧ್ಯಯನದ ಸ್ವರೂಪವನ್ನೂ ತಿಳಿಸುತ್ತದೆ. ನಮ್ಮ ಬಹುಪಾಲು ಅಧ್ಯಾಪಕರು ಓದಿನ ಶತ್ರುಗಳು. ಇನ್ನು ಅಧ್ಯಯನ, ಬೋಧನೆ, ಸಂಶೋಧನೆ…

ಮತ್ತೊಂದು ಸಂಗತಿ: ನೀವು ಪ್ರಸಾರಾಂಗದ ಪರಿಕಲ್ಪನೆಯ ಬಗ್ಗೆ ಮಾತನಾಡುತ್ತಿದ್ದೀರಿ. ವಿಶ್ವವಿದ್ಯಾಲಯದ ತರಗತಿಗಳಲ್ಲಿಯೇ ಪಾಠ ಮಾಡದ ನಮ್ಮ ಅಧ್ಯಾಪಕರು ಜ್ಞಾನಪ್ರಸಾರದ ಉಪನ್ಯಾಸಗಳಲ್ಲಿ ಭಾಗವಹಿಸುವುದುಂಟೇ? ಆಧುನಿಕ ಯುಗದಲ್ಲಿಯೂ ಪವಾಡಗಳು ನಡೆಯುತ್ತವೆ. ತಮ್ಮ ಇಡೀ ಬದುಕಿನಲ್ಲಿ ಶಾಸ್ತ್ರಕ್ಕೆಂಬಂತೆ ಬಿಟ್ಟು ತರಗತಿಗಳನ್ನೇ ತೆಗೆದುಕೊಳ್ಳದೆ ವೃತ್ತಿಬದುಕನ್ನು ಮುಗಿಸಿದ ಪ್ರಾಧ್ಯಾಪಕ ಮಹನೀಯರೂ ನಮ್ಮಲ್ಲುಂಟು, ಅಂಥವರು ನಿಮಗೆ ಗೊತ್ತಿಲ್ಲವೇ, ಗೊತ್ತಿದ್ದರೂ ಹೇಳದಿದ್ದರೆ ನಿಮ್ಮ ತಲೆಯೇನೂ ಸಹಸ್ರ ಹೋಳಾಗುವುದಿಲ್ಲ ಬಿಡಿ, ಎಂದು ನಕ್ಕರು. ನಾನು ಮೌನ ತಾಳಿದೆ.

(ಲೇಖಕರು ಖ್ಯಾತ ವಿಮರ್ಶಕರು)

 

 

Leave a Reply

Your email address will not be published. Required fields are marked *

Back To Top