Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

#MeToo ನಮ್ಮ ಆತ್ಮಸಾಕ್ಷಿಯನ್ನು ಮೀಟಲಿ

Sunday, 22.10.2017, 3:04 AM       No Comments

| ರವಿಶಂಕರ್​ ಎನ್​

ಏನು?

#MeToo ಅಥವಾ #ಮಿಟೂ, ನಾನೂ ಅಥವಾ ಕೂಡ ಎಂದು ಘೊಷಿಸುವುದಕ್ಕೆ ಸಂಕ್ಷಿಪ್ತವಾದ ಹ್ಯಾಷ್​ಟ್ಯಾಗ್.#ಮಿಟೂ, #ಮಿಟೂ, #ಮಿಟೂ- ಕಳೆದ ನಾಲ್ಕೈದು ದಿನಗಳಿಂದ, ಅಂತರ್ಜಾಲದಲ್ಲೆಲ್ಲೆಲ್ಲೂ ಕಿವಿಗಡಚಿಕ್ಕುವ #ಮಿಟೂ. ‘ನಿಮಗೆ ಎಂದಾದರೂ ಲೈಂಗಿಕ ಶೋಷಣೆ ಅಥವಾ ಲೈಂಗಿಕ ದೌರ್ಜನ್ಯದ ಅನುಭವವಾಗಿದ್ದರೆ, ನೀವು ಅದನ್ನು ಎಲ್ಲರೊಡನೆ ಹಂಚಿಕೊಳ್ಳಲು ನಿಮ್ಮ ಸ್ಟೇಟಸ್​ನಲ್ಲಿ #ಮಿಟೂ ಎಂದು ಬರೆಯಿರಿ. ಜಗತ್ತಿಗೆ ಈ ಸಮಸ್ಯೆಯ ಅಗಾಧತೆ ಗೊತ್ತಾಗಲಿ’ ಎಂಬ ಕರೆಗೆ ಫೇಸ್​ಬುಕ್ ಮತ್ತು ಟ್ವಿಟರ್ ಜಗತ್ತು ಅತ್ಯಂತ ಜೋರಾಗಿ ಸ್ಪಂದಿಸಿತು. ವಿಶ್ವಾದ್ಯಂತ ಹುಡುಗಿಯರು, ಮಹಿಳೆಯರು, ವಯಸ್ಸಿನ ಭೇದವಿಲ್ಲದೇ ಹೊರಬಂದು #ಮಿಟೂ ಎಂದು ತಂತಮ್ಮ ಸ್ಟೇಟಸ್​ಗಳಲ್ಲಿ ಬರೆದುಕೊಂಡರು, ತಾವು ಅನುಭವಿಸಿದ ಚಿತ್ರವಿಚಿತ್ರವಾದ ದೈಹಿಕ ಹಿಂಸೆಗಳನ್ನು ಬಿಚ್ಚಿಟ್ಟರು. ಹಿಂದೆಂದೂ ಆಗಿರದ ಪ್ರಮಾಣದಲ್ಲಿ #ಮಿಟೂ ಜಗತ್ತಿನ ಹೆಂಗಸರೆಲ್ಲರೂ ಅನುಭವಿಸುವ ನಿತ್ಯದ ಶೋಷಣೆ ಅಥವಾ ಲೈಂಗಿಕ ದೌರ್ಜನ್ಯದ ರಾಕ್ಷಸರೂಪವನ್ನು ತೆರೆದಿಟ್ಟಿತು.

ನಮ್ಮ ದೇಶದಲ್ಲಿಯೂ #ಮಿಟೂಗೆ ದೊಡ್ಡಮಟ್ಟದ ಪ್ರತಿಕ್ರಿಯೆ ದೊರೆಯಿತು. ಅಣ್ಣ-ತಮ್ಮ, ಅಕ್ಕ-ತಂಗಿಯರು, ಕುಟುಂಬವರ್ಗ, ಸ್ನೇಹಿತರು, ಸಹೋದ್ಯೋಗಿಗಳು, ಸಹಪಾಠಿಗಳು ಎಲ್ಲರೂ ಒಟ್ಟಿಗೆ ಇರುವ ಸಾಮಾಜಿಕ ಮಾಧ್ಯಮಗಳಲ್ಲಿ ಅವರೆಲ್ಲರ ಮುಂದೆ ಹೊರಬಂದು ಹೀಗೆ ‘ನಾನೂ ಒಂದಿಲ್ಲೊಂದು ಬಗೆಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ’ ಎಂದು ಹೇಳಿಕೊಳ್ಳುವುದು ನಮ್ಮ ಸಮಾಜದಲ್ಲಿ ಸುಲಭದ ವಿಷಯವಲ್ಲ. ಆದರೂ ವಯೋಭೇದವಿಲ್ಲದೇ, ಹಿನ್ನೆಲೆಯ ಹಂಗಿಲ್ಲದೆ ಹೆಂಗಸರು #ಮಿಟೂ ಎಂದು ಘೊಷಿಸಿದರು. ಸಾಮಾನ್ಯ ಕಾಲೇಜು ಹುಡುಗಿಯರಿಂದ ಹಿಡಿದು ದೊಡ್ಡ ಸೆಲೆಬ್ರಿಟಿಗಳವರೆಗೆ, ಹೈಫ್ಲೈಯಿಂಗ್ ಎಕ್ಸೆಕ್ಯುಟಿವ್​ಗಳಿಂದ ಹಿಡಿದು ಗೃಹಿಣಿಯರವರೆಗೆ ಎಲ್ಲರೂ ತಾವು ಒಳಗಾದ ಲೈಂಗಿಕ ನಿಂದೆಯ ಬಗ್ಗೆ ತಮ್ಮ ಸ್ಟೇಟಸ್​ಗಳಲ್ಲಿ ಬರೆದುಕೊಂಡರು. ಕೆಲವರು ಸೂಚ್ಯವಾಗಿ ಹೇಳಿದರೆ, ಮತ್ತೆ ಕೆಲವರು ಸಂಪೂರ್ಣ ವಿವರಗಳನ್ನೇ ಮುಂದಿಟ್ಟರು. ನಮ್ಮ ದೇಶದ ಮಟ್ಟಿಗಂತೂ #ಮಿಟೂ ನಿಜಕ್ಕೂ ಲೈಂಗಿಕತೆಯ ವಿಷಯದಲ್ಲಿನ ನಮ್ಮ ಅಷಾಢಭೂತಿ ಧೋರಣೆಗೆ ಹಿಡಿದ ಕನ್ನಡಿಯಾಯಿತು ಎಂದೇ ಹೇಳಬೇಕು.

ಯಾರು?

ಎಲ್ಲರೂ! ಪರಿಚಯವಿರುವವರು, ಪರಿಚಯವಿಲ್ಲದವರು, ಪಕ್ಕದ ಮನೆಯ ಹುಡುಗ, ಸ್ನೇಹಿತ, ಬಾಯ್ಫ್ರೆಂಡ್, ರಾಖಿ ಕಟ್ಟಿದವನು, ಸಹಪಾಠಿ, ಸಹೋದ್ಯೋಗಿ, ಸೋದರಮಾವ, ಆಫೀಸಿನ ಬಾಸ್, ಬಸ್ಸಿನಲ್ಲಿ ಜಾಗ ಮಾಡಿಕೊಂಡು ಮುಂದೆ ಬಂದ ಅಪರಿಚಿತ, ಜನನಿಬಿಡ ಸ್ಥಳದಲ್ಲಿ ಹತ್ತಿರ ಬಂದ ಆಗಂತುಕ, ವಯಸ್ಸಾದ ಅಜ್ಜ, ಆಗಿನ್ನೂ ಮೀಸೆ ಚಿಗುರುತ್ತಿರುವ ಬಾಲಕ, ಹೀಗೆ, ಇಂಥವರೇ ಎನ್ನುವಂತಿಲ್ಲ. #ಮಿಟೂನಲ್ಲಿ ನೀವು ಲೈಂಗಿಕ ದೌರ್ಜನ್ಯ ಮಾಡಿದವರು ಯಾರು ಎನ್ನುವುದನ್ನು ಗಮನಿಸಿದರೆ ಗಾಬರಿಯಾಗಿಬಿಡುತ್ತೀರಿ. ಯಾರನ್ನು ಹೆಂಗಸರು ಅತ್ಯಂತ ನಂಬಿದ್ದರೋ ಅವರೇ ಪರಿಸ್ಥಿತಿಯ ಲಾಭ ಪಡೆದುಕೊಂಡುಬಿಟ್ಟಿದ್ದರು. ಯಾರು ಎನ್ನುವುದನ್ನು ಗ್ರಹಿಸಿದಾಗ ಆಗುವಷ್ಟು ಭಯ, ಕಾಡುವ ಅನಾಥ ಪ್ರಜ್ಞೆ ಬಹಳ ದೊಡ್ಡದು.

ಎಲ್ಲಿ?

ಎಲ್ಲೆಂದರಲ್ಲಿ! ಶಾಲೆಗೆ ನಡೆದು ಹೋಗುತ್ತಿರುವಾಗ, ಮೆಟ್ರೋ ರೈಲಿನಲ್ಲಿ, ಕಿಕ್ಕಿರಿದ ಬಸ್ಸಿನಲ್ಲಿ, ಮೆಟ್ಟಿಲು ಹತ್ತುತ್ತಿರುವಾಗ, ಅಂಗಡಿಯಲ್ಲಿ ಏನೋ ಖರೀದಿ ಮಾಡುತ್ತಿರುವಾಗ, ಸಿನಿಮಾ ಮಂದಿರದಲ್ಲಿ ಮೈ ಮರೆತಿರುವಾಗ, ರಾತ್ರಿ ಬಸ್ಸಿನಲ್ಲಿ ಊರಿಗೆ ಹೋಗುತ್ತಿರುವಾಗ, ನಂಬಿದ ಸ್ನೇಹಿತನೊಡನೆ ಕುಳಿತು ಕಂಬೈಂಡ್-ಸ್ಟಡಿ ಮಾಡುತ್ತಿರುವಾಗ, ಸಹೋದ್ಯೋಗಿಗಳೆಲ್ಲ ಸೇರಿ ಆಗಿನ್ನೂ ದೊರೆತ ಯಶಸ್ಸನ್ನು ಒಟ್ಟಿಗೆ ಆಚರಿಸುತ್ತಿರುವಾಗ, ಮತ್ತಾವುದೋ ಸಾವಿಗೆ ಹೋಗಿದ್ದಾಗ- ಸಂತಾಪದಲ್ಲಿ, ಸಂತೋಷದಲ್ಲಿ, ಸಂಭ್ರಮದಲ್ಲಿ ಸ್ಥಳಭೇದವಿಲ್ಲದೇ ಎಲ್ಲೆಂದರಲ್ಲಿ! ಯಾವ ಸ್ಥಳಗಳು ಸುರಕ್ಷಿತ ಎಂದೆಣಿಸಿದ್ದರೋ ಆ ಸ್ಥಳಗಳಲ್ಲಿಯೇ ನಡೆಯಬಾರದ್ದು ಪರಿಚಿತರಿಂದಲೂ ಅಪರಿಚಿತರಿಂದಲೂ ನಡೆದುಹೋಗುತ್ತದೆ!

ಹೇಗೆ?

ಹೇಗೆಂದರೆ ಹಾಗೆ! ಹೇಗಾದರೂ! ಹೇಗ್ಹೇಗಾದರೂ! ಏನೋ ತೋರಿಸುವ ನೆಪದಲ್ಲಿ ಬೇಕಂತಲೇ ಮೈ ತಾಗುವಂತೆ ಬಂದು ನಿಂತುಬಿಡುವುದು. ಸ್ಥಳ ಸ್ವಲ್ಪ ಇಕ್ಕಟ್ಟಾದದ್ದನ್ನೇ ನೆಪವಾಗಿಸಿಕೊಂಡು ತಾಗಬಾರದ ಜಾಗಕ್ಕೆ ಕೈಯ್ಯೋ ಮೈಯ್ಯೋ ಸೋಕಿಸುವುದು. ಇದೇನನ್ನೂ ತಾನು ಬೇಕೆಂದು ಮಾಡುತ್ತಿಲ್ಲ ಎನ್ನುವಂಥ ಎಕ್ಸ್ ಪ್ರೆಷನ್ ಧರಿಸಿ, ಸಭ್ಯತೆಯ ಸೋಗಿನಲ್ಲಿ ಇನ್ನೊಬ್ಬರ ದೇಹದ ಪರಿಧಿಯನ್ನು ಉಲ್ಲಂಘಿಸುವುದು. ಮುಟ್ಟುವುದು, ಮೈ ಸೋಕಿಸುವುದು, ಜಿಗುಟುವುದು, ಹೊಡೆಯುವುದು, ಹಿಂಡುವುದು, ಸುಮ್ಮನೆ ಅವಾಚ್ಯವಾಗಿ ಪದಗಳನ್ನು ಬಳಸುವುದು, ಪೋಲಿ ಜೋಕು ಕಳುಹಿಸುವುದು, ಇನ್ನೂ ಏನೇನೋ! ಈ ಸಭ್ಯ ಶೋಷಕರ ವಿಧಗಳು ತರಹೇವಾರಿ. ಅವುಗಳನ್ನು ವಿವರವಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ನೀವೇ ಈ #ಮಿಟೂ ಜಾಡು ಹಿಡಿದು ನೋಡಬೇಕು. ಆಶ್ಚರ್ಯವಾಗುವಷ್ಟು ಹೊಸದಾದ ವಿಧಾನಗಳನ್ನು ಈ ನಿತ್ಯ ಶೋಷಕರು ಕಂಡುಕೊಳ್ಳುತ್ತಲೇ ಇರುತ್ತಾರೆ. ತಮ್ಮ ಮನೋವಿಕೃತಿಯನ್ನು ತಣಿಸಿಕೊಳ್ಳಲು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ಇಂತಹ ಕೆಲಸ ಮಾಡುತ್ತಾರೆ. ಹತ್ತಿರದವರು ತಮ್ಮ ಪರಿಚಯದ ಲಾಭ ಪಡೆದುಕೊಂಡು, ‘ನೀನು ನಮ್ಮವಳು’ ಎಂಬ ಆಶ್ವಾಸನೆ ಕೊಡುತ್ತಲೇ ಆಕೆಯ ದೇಹವನ್ನು ಭೋಗದ ದೃಷ್ಟಿಯಿಂದ ನೋಡಿದ ನಿದರ್ಶನಗಳು #ಮಿಟೂನಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಲಭ್ಯ. ಇನ್ನು ಅಪರಿಚಿತರದ್ದಂತೂ ಕೇಳುವಂತೆಯೇ ಇಲ್ಲ! ಇನ್ನೊಬ್ಬರ ದೇಹವೆಂದರೆ ತಮ್ಮ ಕೈಲಾದಾಗ, ಕೈಲಾದಷ್ಟು ಮುಟ್ಟಿ, ಸೋಕಿ, ಸವರಿ, ಆ ಕ್ಷಣಕ್ಕಾಗುವಷ್ಟು ಈರ್ಷೆಯನ್ನು ತಣಿಸಿಕೊಂಡು, ಏನೂ ಆಗಿಲ್ಲವೆಂಬಂತೆ ಹೋಗಿಬಿಟ್ಟರಾಯಿತು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು! ಇಲ್ಲಿಂದ ಮುಂದಿನ ತಿರುವಿನಲ್ಲಿ ಮತ್ತೊಬ್ಬ ಅಮಾಯಕ ಹೆಣ್ಣುಮಗಳು ಸಿಗುತ್ತಾಳೆ. ಈ ವಿಕೃತ ಮನಸ್ಸಿನ ಕಾಮಿಗೆ ಮತ್ತೊಂದು ಆಟದ ವಸ್ತು ಸಿಕ್ಕಂತೆ. ಯಾವ ಪಾಪಪ್ರಜ್ಞೆಯೂ ಇಲ್ಲದೆ, ಒಂದು ಹೆಣ್ಣಿನಿಂದ ಮುಂದಿನ ಹೆಣ್ಣಿಗೆ.

ಏಕೆ?

ಪೊಲೀಸರು, ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರ ಪ್ರಕಾರ ಭಾರತದಲ್ಲಿ ಗಂಭೀರ ರೂಪದ ಲೈಂಗಿಕ ದೌರ್ಜನ್ಯದ ಪ್ರಕರಣಗಳೇ ವರದಿಯಾಗುವುದು ತೀರಾ ಕಡಿಮೆ. ಇನ್ನು ‘ಕ್ಯಾಶುಯಲ್ ವಯೊಲೇಷನ್’ ಮತ್ತು ಪರಿಚಯದವರು ಎಸಗುವ ಲೈಂಗಿಕ ದೌರ್ಜನ್ಯವಂತೂ ಮೇಲ್ಪದರಕ್ಕೆ ಬರುವುದೇ ಇಲ್ಲ, ಎನ್ನುವಷ್ಟು ಕಡಿಮೆ. ಅದಕ್ಕೆ ಕಾರಣಗಳು ಹಲವಾರು. ಮೊದಲನೆಯದು, ನಾವು ಈ ಸಮಸ್ಯೆಯೊಂದಿಗೆ ನಡೆದುಕೊಳ್ಳುವ ರೀತಿ. ಅದಕ್ಕಂಟಿರುವ ‘ಸೋಷಿಯಲ್-ಸ್ಟಿಗ್ಮಾ’ದಿಂದಾಗಿ ನಮಗರಿವಿದ್ದೋ ಇಲ್ಲದೆಯೋ ನಾವು ಸಮಸ್ಯೆಯನ್ನು ಚಾಪೆಯಡಿ ಗುಡಿಸಿಬಿಡಲು ಪ್ರಯತ್ನಿಸುತ್ತೇವೆ. ಈ ಕೆಲವು ಉದಾಹರಣೆಗಳನ್ನು ನೀವೇ ವಿಶ್ಲೇಷಿಸಿ ನೋಡಿ.

ಒಂದು- ಮಗಳು ಹೇಳುತ್ತಾಳೆ, ‘ಅಪ್ಪಾ, ಕಳೆದೆರಡು ದಿನಗಳಿಂದ ನಾನು ನಿತ್ಯವೂ ಓಡಾಡುವ ಬಸ್ಸಿನಲ್ಲಿ ಯಾರೋ ಅಪರಿಚಿತನೊಬ್ಬ ನನ್ನನ್ನು ಗೋಳು ಹೊಯ್ದುಕೊಳ್ಳಲು ಯತ್ನಿಸುತ್ತಿದ್ದಾನೆ’. ಆಕ್ರಮಣಕಾರೀ ಅಪ್ಪನಾದರೆ, ‘ನಾಳೆ ನಾನೂ ನಿನ್ನ ಜೊತೆ ಬರುತ್ತೇನೆ. ಅವನ್ಯಾವನೋ ಹಿಡಿದು ಎರಡು ಒದೀತೀನಿ’. ಸ್ವಲ್ಪ ಮೆದು ಅಪ್ಪನಾದರೆ, ‘ನೋಡಮ್ಮಾ ನಮ್ಮ ಹುಷಾರಿನಲ್ಲಿ ನಾವಿರಬೇಕು. ನೀನು ನಾಳೆಯಿಂದ ಬೇರೆ ಸ್ಟಾಪಿನಿಂದ ಬಸ್ಸು ಹತ್ತು’.

ಎರಡು- ಅಮ್ಮನೊಡನೆ ಮಗಳು ಆಪ್ತವಿಷಯವೊಂದನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾಳೆ. ‘ಅಮ್ಮಾ ನಿನ್ನೆ ನನ್ನ ಬಾಯ್ಫ್ರೆಂಡ್ ನನ್ನೊಡನೆ ಅನುಚಿತವಾಗಿ ವರ್ತಿಸಲು ಯತ್ನಿಸಿದ ಎನಿಸುತ್ತದೆ…’ ತಕ್ಷಣವೇ ಅಮ್ಮ ಕಿಡಿಕಿಡಿಯಾಗಿ ‘ಇದಕ್ಕೇ ನಾನು ಈ ವಯಸ್ಸಿಗೇ ಇದೆಲ್ಲಾ ಬೇಡ ಎಂದು ಬಡ್ಕೊಂಡಿದ್ದು. ಅವನು ಒಳ್ಳೆಯವನು, ಹಾಗೆ, ಹೀಗೆ ಅಂತ ನಮಗೆಲ್ಲ ಮಂಕು ಬೂದಿ ಎರಚಿದೆ? ಈಗ ಅನುಭವಿಸು. ಅವನ ಸಹವಾಸ ಬಿಡು ಇಲ್ಲದಿದ್ದರೆ ನಿನ್ನ ಹಣೆಬರಹ’.

ಮೂರು- ಸಹೋದ್ಯೋಗಿಯೊಡನೆ ‘ಅವನ ದೃಷ್ಟಿ ಯಾಕೋ ಸರಿಯಿಲ್ಲ ಅನ್ನಿಸತ್ತೆ. ಅವನು, ಅವನ ಕಣ್ಣು ಯಾವಾಗಲೂ ಸ್ವಲ್ಪ ಕೆಳಗೇ ಇರತ್ತೆ ಅಂತ ನಿನಗೆ ಅನ್ನಿಸಲ್ವಾ?’ ‘ಹೌದು ಕಣೆ. ಅವನು ಸ್ವಲ್ಪ ಹಾಗೇ. ಆ ವಿಷಯ ಎಲ್ಲರಿಗೂ ಗೊತ್ತು. ಅದಕ್ಕೇ ಎಲ್ಲರೂ ಅವನನ್ನು ಇಗ್ನೋರ್ ಮಾಡ್ತಾರೆ. ನೀನೂ ಇಗ್ನೋರ್ ಮಾಡಿಬಿಡು. ಅದೇ ಒಳ್ಳೇದು ಅನಿಸುತ್ತೆ’.

ನಾಲ್ಕು- ಇವತ್ತು ಆಫೀಸ್-ಪಾರ್ಟಿಲಿ ನನ್ನ ಇಬ್ಬರು ಸಹೋದ್ಯೋಗಿಗಳು ಮಿಸ್​ಬಿಹೇವ್ ಮಾಡಲು ಯತ್ನಿಸಿದರು…’ ತಕ್ಷಣವೇ ಆಫೀಸ್-ಪಾರ್ಟಿಗಳಿಗೆ ಹೊಸಬನಲ್ಲದ ಒಡಹುಟ್ಟಿದ ಸಹೋದರ ಎದ್ದು ಬಂದು ಬುದ್ಧಿ ಹೇಳುತ್ತಾನೆ. ‘ಸ್ವಲ್ಪ ನೀನು ಹಾಕ್ಕೊಂಡಿರೋ ಬಟ್ಟೆ ನೋಡು. ಯು ಅರ್ ಇನ್​ವೈಟಿಂಗ್ ಟ್ರಬಲ್. ಅವರನ್ನ ಬ್ಲೇಮ್ ಮಾಡಿ ಪ್ರಯೋಜನವಿಲ್ಲ’ ಮೊಣಕೈವರೆಗೂ ಕೈ ಮುಚ್ಚಿರುವ, ಮಂಡಿಯಿಂದ ಕೆಳಗಿನವರೆಗೂ ಕಾಲು ಮುಚ್ಚಿರುವ ಬಟ್ಟೆ ಧರಿಸಿರುವ ಸಹೋದರಿ ಪ್ರತಿಭಟಿಸುತ್ತಾಳೆ. ‘ಏನಿಲ್ಲ. ಇದಕ್ಕಿಂತಲೂ ಪೂರ್ತಿ ಮೈ ಮುಚ್ಚೋ ಬಟ್ಟೆ ಹಾಕಿಕೊಂಡಿರುವಾಗಲೂ ಜನ ಮಿಸ್​ಬಿಹೇವ್ ಮಾಡಿದಾರೆ. ಇವತ್ತು, ಬೇರೆ ಥರ ಬಟ್ಟೆ ಹಾಕ್ಕೊಂಡಿರೋ ನನ್ನ ಕೊಲೀಗ್ಸ್ ಜೊತೆನೂ ಹಾಗೆಯೇ ವರ್ತಿಸಿದಾರೆ…’ ‘ಅದೆಲ್ಲಾ ನಿನಗೆ ಬೇಡ ಕಣೆ. ನೀನು ನೆಟ್ಟಗಿರು ಅಷ್ಟೇ’!

ಸಮಸ್ಯೆ ಇರುವುದು ಇಲ್ಲಿಯೇ! ನಮಗೆ ಲೈಂಗಿಕ ದೌರ್ಜನ್ಯಕ್ಕೆ, ಶೋಷಣೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ಸರಿಯಾದ ಅಂದಾಜು ಇಲ್ಲ. ಆ ಕ್ಷಣದ ಸಮಸ್ಯೆಯನ್ನು ಹೇಗಾದರೂ ಮಾಡಿ ತಪ್ಪಿಸಿಕೊಂಡುಬಿಡಬೇಕು ಅಥವಾ ಮರೆಮಾಚಿಬಿಡಬೇಕು ಎನ್ನುವುದು ಮಾತ್ರ ಉದ್ದೇಶವಾಗಿರುತ್ತದೆ. ಸಮಸ್ಯೆಯನ್ನು ನೇರವಾಗಿ ಎದುರಿಸಿ ಮೆಟ್ಟಿ ನಿಲ್ಲಬೇಕು ಎನ್ನುವುದರ ಕಡೆಗೆ ನಮ್ಮ ನಿಲುವು ಹೋಗುವುದೇ ಇಲ್ಲ. ಹಾಗಾಗಿಯೇ ಮೇಲೆ ಕಂಡಂತಹ ಅಲ್ಪಕಾಲಿಕವಾದ ಮತ್ತು ಸಮಸ್ಯೆಯನ್ನು ಬಗೆಹರಿಸದ, ಒಂದರ್ಥದಲ್ಲಿ ಸಮಸ್ಯೆಯನ್ನು ಮುಂದುವರಿಸಿಕೊಂಡೇ ಹೋಗುವಂತಹ ಸಲಹೆ ಸೂಚನೆಗಳು ನಮ್ಮ ಹತ್ತಿರದವರಿಂದಲೇ ನಮಗೆ ದೊರೆಯುವುದು!

ಮುಂದೇನು?

#ಮಿಟೂ ಇಂದಾಗಿ ಪ್ರಪಂಚಕ್ಕೆ ಸಮಸ್ಯೆಯ ಅಗಾಧತೆಯ ಪರಿಚಯವೇನೋ ಆಯಿತು. ಸುಶಿಕ್ಷಿತ ನಾಗರಿಕ ವಲಯದಲ್ಲೇ ಹೀಗಾದರೆ ಇನ್ನು ಸಮಾಜದ ಇತರ ಸ್ತರಗಳಿಗೆ ಹೋದಂತೆಲ್ಲ ಈ ಸಮಸ್ಯೆ ಇನ್ನೆಷ್ಟು ಬೃಹದಾಕಾರವಾಗಿ ಚಾಚಿಕೊಂಡಿದೆಯೋ ಊಹಿಸಬಹುದು! ಆದರೆ ಸಮಸ್ಯೆಯ ಅಗಾಧತೆಯ ಅರಿವು ಅದಕ್ಕೆ ತಕ್ಷಣದ ಮತ್ತು ಸಮರ್ಪಕವಾದ ಪರಿಹಾರ ಇದೆ ಎನ್ನುವುದರ ಸೂಚಕವೇನಲ್ಲ. ಇದು ಕೇವಲ ಈ ಹೊತ್ತು ನಾವು ಹಿಂಜರಿಕೆಯಿಲ್ಲದೇ ಹೊರಬಂದು ‘ನಮಗಾದ ಲೈಂಗಿಕ ಅನ್ಯಾಯದ ವಿರುದ್ಧ ದನಿಯೆತ್ತಲು ಸಿದ್ದರಿದ್ದೇವೆ’ ಎಂಬ ಆಶಾದಾಯಕ ಸೂಚನೆ ಮಾತ್ರ.

#ಮಿಟೂವಿನಲ್ಲಿ ಬಂದ ಮತ್ತೊಂದು ಆಶಾದಾಯಕ ಸೂಚನೆಯೆಂದರೆ, ಅನೇಕ ಗಂಡಸರೂ ಕೂಡ ಹೊರಬಂದು ತಾವು #ಮಿಟೂ ಬಳಸಿದ್ದು. ಅದೇ #ಮಿಟೂನಲ್ಲಿ ಒಂದು ರೀತಿಯ ತಪ್ಪೊಪ್ಪಿಗೆ ಬರೆದುಕೊಟ್ಟದ್ದು. ಕೆಲವರು ‘ನಾನು ಇಂಥ ಅನ್ಯಾಯವನ್ನು ನೋಡಿ, ಸುಮ್ಮನಿರುವುದರಿಂದ ತಪ್ಪಿತಸ್ಥ’ ಎಂದು ಬರೆದುಕೊಂಡರೆ, ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ‘ಅನೇಕ ದಶಕಗಳ ಕೆಳಗೆ ನಾನೂ ಕೂಡ ಇಂತಹ ಅನ್ಯಾಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಭಾಗಿಯಾಗಿದ್ದೇನೆ. ನನಗೆ ನನ್ನ ಬಗ್ಗೆ ಹೇಸಿಗೆಯಾಗುತ್ತಿದೆ’ ಎಂದು ಪಶ್ಚಾತ್ತಾಪ ಪಟ್ಟರು. ಸಮಸ್ಯೆಯನ್ನು ಎರಡೂ ಕಡೆಯವರು ಒಪ್ಪಿಕೊಂಡಂತಾದದ್ದು ಪರಿಹಾರದ ಕಡೆ ನಾವು ಹೊರಡಲು ಸಿದ್ಧರಿದ್ದೇವೆ ಎನ್ನುವುದರ ಮುನ್ಸೂಚನೆಯೇನೋ.

ಒಟ್ಟಿನಲ್ಲಿ, ನಮ್ಮ ಹೆಣ್ಣುಮಕ್ಕಳಿಗೆ ತಮ್ಮ ದೇಹವನ್ನು ರಕ್ಷಿಸಿಕೊಳ್ಳುವ ಪಾಠ ಹೇಳಿಕೊಡುವ ಮುನ್ನವೇ, ನಾವು ನಮ್ಮ ಗಂಡುಮಕ್ಕಳಿಗೆ ಹೆಣ್ಣಿನ ದೇಹವನ್ನು ಗೌರವಿಸುವ ಪಾಠವನ್ನು ಹೇಳಿಕೊಡಬೇಕು. ಅದನ್ನು ರಕ್ಷಿಸುವ ಜವಾಬ್ದಾರಿ ಆತನದ್ದೂ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು. ಎಲ್ಲಾದರೂ ಸಣ್ಣದೊಂದು ಅಹಿತಕರ ಘಟನೆ ನಡೆಯುತ್ತಿದೆ ಎನ್ನುವುದು ನಮ್ಮ ಗ್ರಹಿಕೆಗೆ ಬಂದಾಗ ನಾವು ದೊಡ್ಡ ಮಟ್ಟದಲ್ಲಿ ಅದನ್ನು ಪ್ರತಿಭಟಿಸಲು ಸಿದ್ಧರಿರಬೇಕು. ಆ ಕ್ಷಣಕ್ಕೆ ನಮ್ಮ ಮರ್ಯಾದೆಯನ್ನು ಪಣಕ್ಕಿಟ್ಟಾದರೂ ಆ ಸಂದರ್ಭದಲ್ಲಿ ಆಗುತ್ತಿರುವ ಅನ್ಯಾಯವನ್ನು ಎತ್ತಿ ಆಡಿ ಸುತ್ತಲಿರುವ ನೂರಾರು ಜನಕ್ಕೆ ಅದು ನಿದರ್ಶನಪ್ರಾಯವಾಗುವಂತೆ ಮಾಡುವಷ್ಟು ಅಂತಃಶಕ್ತಿ ಬೆಳೆಸಿಕೊಳ್ಳಬೇಕು.

ಯಾರೋ ಹೇಳಿದ್ದರು. ಈ ಎಲ್ಲ #ಮಿಟೂ ಗಳಲ್ಲಿ ಪಟ್ಟಿಯಾಗುವ ಅನ್ಯಾಯಗಳನ್ನೆಲ್ಲ ಒಗ್ಗೂಡಿಸಿ ದೇಶದಲ್ಲಿ ಇರುವ ಲಾಯರ್​ಗಳನ್ನೆಲ್ಲ ಸೇರಿಸಿ ಎಲ್ಲರ ಮೇಲೂ ಕೇಸ್ ಜಡಾಯಿಸಿಬಿಟ್ಟರೆ ಹೇಗೆ? ಎಂದು. ಅದು ಸಾಧ್ಯವೋ, ಮತ್ತು ಅದು ಪರಿಹಾರವೋ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ನಾವು ಮುಂದಾಗಬಹುದಾದ ಅನ್ಯಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅವನ್ನೆಲ್ಲವನ್ನೂ ಜಾಗೃತವಾಗಿ ಕೈಗೊಂಡಾಗ ಮಾತ್ರ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯನ್ನು ನಮ್ಮ ಸುತ್ತಲಿನಿಂದ ತೊಡಗಿಸಲು ಸಾಧ್ಯ. ಪರಿಚಿತರು, ಸಂಬಂಧಿಕರು ಇಂಥ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ರಕ್ಷಿಸುವ ಯಾವುದೇ ಪ್ರಯತ್ನವನ್ನೂ ಮಾಡದೇ ಅವರು ಮಾಡಿರುವ ದ್ರೋಹವನ್ನು ಆ ಸಂಬಂಧವನ್ನು ಮುರಿದಾದರೂ ಹೊರಗೆಳೆಯಲು ಸಿದ್ಧರಿರಬೇಕು. ಅಪರಿಚಿತರು ಮಾಡಿದ್ದಾದರೆ ಅವರಿಗೆ ಬೆದರದೆ ಪ್ರತಿಭಟಿಸಿದರೆ ಮೊದಲು ಇಂಥವರಲ್ಲಿ ಭಯ ನಿರ್ವಣವಾಗಿ ಪಿಡುಗು ಸ್ವಲ್ಪ ಕಡಿಮೆಯಾಗಬಹುದು. ಆದರೆ ಭಯವೇ ಪರಿಹಾರವಲ್ಲ. ನಿಜವಾದ ಪರಿಹಾರ ಜಾಗೃತಿ. ಅನುಮತಿಯಿಲ್ಲದೆ ಇನ್ನೊಬ್ಬರ ದೇಹವನ್ನು ಮುಟ್ಟುವ ಹಕ್ಕು ನಮಗಿಲ್ಲ ಎನ್ನುವುದರ ಪ್ರಜ್ಞಾಪೂರ್ವಕವಾದ ಅರಿವು. ನಾವು ಮನಬಂದಂತೆ ವರ್ತಿಸಿದರೆ ಅದು ನಮ್ಮ ಮನೆಯ ಹೆಣ್ಣುಮಕ್ಕಳಿಗೆ ನಾವು ಮಾಡುತ್ತಿರುವ ಅನ್ಯಾಯ ಎಂಬ ಪಾಪಪ್ರಜ್ಞೆ ಎಲ್ಲರಲ್ಲೂ ಜಾಗೃತವಾದರೆ ನಿಧಾನವಾಗಿಯಾದರೂ ಸ್ವಸ್ಥ ಸಮಾಜದೆಡೆಗೆ ಪಯಣಿಸಬಹುದು. ವರ್ಷಗಳುರುಳಿ ಮುಂದೊಂದು ದಿನ ಇದೇ #ಮಿಟೂ ಮತ್ತೊಮ್ಮೆ ಬಂದಾಗ, ನಮ್ಮ ದೇಶದ ಹೆಂಗಸರು ಹಂಚಿಕೊಳ್ಳುವ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಮಟ್ಟದ ಇಳಿಕೆ ಕಂಡು ಬಂದರೆ ಅದು ಈ ಹೊತ್ತಿನ #ಮಿಟೂನ ಯಶಸ್ಸು ಎಂದು ಪರಿಗಣಿಸಬಹುದು.

(ಲೇಖಕರು ಸಂವಹನ ಸಲಹೆಗಾರರು)

Leave a Reply

Your email address will not be published. Required fields are marked *

Back To Top