Thursday, 20th September 2018  

Vijayavani

ಸಿಎಂ ಕುಟುಂಬದ ವಿರುದ್ಧ ಬಿಜೆಪಿ ಭೂ ಅಸ್ತ್ರ - ಮೈಸೂರು, ರಾಮನಗರದಲ್ಲೂ ಭೂ ಅಕ್ರಮ - ಬಿಜೆಪಿ ನಾಯಕರಿಂದ ಭೂ ಚಕ್ರ        ಹಾಸನದಲ್ಲಿ ಗೌಡರ ಕುಟುಂಬದಿಂದ ಗೋಮಾಳ ಕಬಳಿಕೆ - ದೇಶಪಾಂಡೆಗೆ ದೂರು -ಎ.ಮಂಜುರಿಂದ ಕಂಪ್ಲೆಂಟ್​ ದಾಖಲು        ಬಿಜೆಪಿಯಿಂದ ಅಭಿವೃದ್ಧಿಗೆ ಸಹಕಾರ ಸಿಗುತ್ತಿಲ್ಲ - ದಂಗೆ ಏಳುವಂತೆ ಸಿಎಂ ಕರೆ - ಎಚ್ಡಿಕೆ ಮಾತಿನ ಬೆನ್ನಲ್ಲೇ ದಾಂಧಲೆ ಶುರು        ಎಚ್​ಡಿಕೆ-ಬಿಎಸ್​ವೈ ವಾಗ್ದಾಳಿ ಬೆನ್ನಲ್ಲೇ ಹೈಡ್ರಾಮಾ -ಯಡಿಯೂರಪ್ಪ ನಿವಾಸದೆದುರು ಕೈ ಕಾರ್ಯಕರ್ತರ ಹಂಗಾಮಾ        ಡಾಲರ್ಸ್ ಕಾಲನಿ ನಿವಾಸದಲ್ಲಿ ಗಲಾಟೆ - ರೇಣುಕಾಚಾರ್ಯ ಮೇಲೆ ಹಲ್ಲೆಗೆ ಯತ್ನ - ಬಿಎಸ್​ವೈ ಭಾವಚಿತ್ರ ಹರಿದು ಹಾಕಿ ಆಕ್ರೋಶ        ಇಲ್ಲಿ ನಿಮ್ಮ ಸರ್ಕಾರ, ಅಲ್ಲಿ ನಮ್ಮ ಸರ್ಕಾರ - ನಿಮ್ಮ ಯಾವುದೇ ಧಮ್ಕಿಗೂ ಹೆದರಲ್ಲ -  ಅಟ್ಯಾಕ್​ಗೆ ಬಿಎಸ್​ವೈ ಕೌಂಟರ್​ ಅಟ್ಯಾಕ್       
Breaking News

ನನ್ನ ಬದುಕು ಕನ್ನಡ ಮೀಡಿಯಮ್ಮು!

Sunday, 12.11.2017, 3:04 AM       No Comments

| ಪ್ರೊ. ಕೃಷ್ಣೇಗೌಡ

ಭರ್ತಿ ನಾಲ್ಕು ವರ್ಷ ಆಯಿತು, ನಾನು ‘ಜಲದ ಕಣ್ಣು’ ಅಂಕಣ ಬರೆಯೋಕೆ ಹಿಡಿದು!!

– ನೋಡಿ, ಮೇಲಿನ ವಾಕ್ಯದ ಕೊನೆಯಲ್ಲಿ ಎರಡು ಆಶ್ಚರ್ಯಸೂಚಕ ಚಿಹ್ನೆ ಹಾಕಿದ್ದೇನೆ. ಅಲ್ಲಿ ಒಂದು ಸಣ್ಣ ಫುಲ್​ಸ್ಟಾಪ್ ಇಟ್ಟು ಮುಂದಿನ ವಾಕ್ಯ ಎತ್ತಿಕೊಳ್ಳಬಹುದಿತ್ತು. ಎರಡೆರಡು ಆಶ್ಚರ್ಯಸೂಚಕ ಹಾಕುವಂಥ ಅಚ್ಚರಿ ಏನಿದೆ ಆ ವಾಕ್ಯದಲ್ಲಿ? ಅಂತ ನಿಮಗೆ ಅನ್ನಿಸಿರಬಹುದು. ಅಥವಾ ನೀವು ಸರಳ ಓದುಗರಾಗಿದ್ದರೆ ಈ ಚಿಹ್ನೆ-ಗಿನ್ನೆ, ಗುನ್ನ-ಗುರುತುಗಳನ್ನೆಲ್ಲಾ ಕೇರುಮಾಡದೆ ಮುಂದೇನಿದೆ ಅಂತ ಸರಸರ ಕಣ್ಣು ಓಡಿಸಿಕೊಂಡು ಹೋಗಿಬಿಡಲೂಬಹುದು. ನಿಜವಾಗಿಯೂ ನನಗೆ ಈವತ್ತಿನ ಮೊದಲನೇ ವಾಕ್ಯವನ್ನು ಹೀಗೆ ಬರೆಯಬೇಕು ಅನ್ನಿಸಿತ್ತು-

ಭರ್ತಿ ನಾಲ್ಕು ವರ್ಷ! ಆಯಿತು! ನಾನು!! ಜಲದಕಣ್ಣು! ಅಂಕಣ ಬರೆಯೋದಕ್ಕೆ ಹಿಡಿದು!

– ಹೀಗೆ ಬರೆದರೆ ನಾನು ಲೇಖನ ಚಿಹ್ನೆಗಳನ್ನು ತುಂಬಾ ದುಂದು ಮಾಡುತ್ತಿದ್ದೇನೆ ಅಂತ ನೀವು ಭಾವಿಸಬಹುದು ಅಂದುಕೊಂಡು ಇಡೀ ವಾಕ್ಯ ಬರೆದು ಕೊನೆಯಲ್ಲಿ ಎರಡು ಆಶ್ಚರ್ಯಸೂಚಕ ಚಿಹ್ನೆ ಹಾಕಿಬಿಟ್ಟೆ.

ಯಾಕೆಂದರೆ, ನಿಮಗೆ ಏನನ್ನಿಸುತ್ತದೆಯೋ ಕಾಣೆ, ನನಗಂತೂ ಅಚ್ಚರಿಯೇ ನಾನು ನಾಲ್ಕು ವರ್ಷ ಕಾಲ ‘ವಿಜಯವಾಣಿ’ಗಾಗಿ ಈ ಅಂಕಣ ಬರೆದದ್ದು. ಬಡಬಡ ಮಾತಾಡಿಕೊಂಡು ಮಾತುಮಾತಿಗೂ ಚಪ್ಪಾಳೆ ಹೊಡೆಸಿಕೊಂಡು ಸಂಭ್ರಮಿಸುತ್ತಿದ್ದವನು ನಾನು. ಬರೆಯುವುದೆಂದರೆ ನನಗೊಂದು ಸೋಮಾರಿತನ, ಮತ್ತೊಂದು, ಗಾಬರಿ! ಸೋಮಾರಿತನಕ್ಕೆ ಕಾರಣ ಹೇಳಬೇಕಾಗಿಲ್ಲ. ಆದರೆ ಗಾಬರಿಗೆ ಮಾತ್ರ ಕಾರಣವಿದೆ. ಕನ್ನಡದ ಮೇಷ್ಟೂ ್ರ ಆದ ನಾನು ಒಂದು ಒಳ್ಳೆಯ ಬರಹವನ್ನೋ, ಸಾಹಿತ್ಯ ಕೃತಿಯನ್ನೋ ಓದಿದಾಗ ನಾನು ಹೀಗೆ ಬರೆಯಬಲ್ಲೆನಾ? ಹೀಗೆ ಬರೆಯದಿದ್ದರೆ ಯಾಕೆ ಬರೆಯಬೇಕು? ಒಂದಿಷ್ಟು ಗಟ್ಟಿಯಾಗಿ, ತೂಕವಾಗಿ, ಕಲಾತ್ಮಕವಾಗಿ ಬರೆಯದೇ ಹೋದರೆ ‘ಇವನದೇನಿದ್ದರೂ ಇಷ್ಟೇ, ಬರೀ ಬುಡುಬುಡಿಕೆ!’ ಅನ್ನಿಸಿಕೊಂಡುಬಿಡುತ್ತೇನಾ?- ಅನ್ನುವ ಗಾಬರಿ. ಬರೆಯೋದು ಅಂದರೆ ತನ್ನೊಳಗಿನ ತಿರುಳನ್ನೆಲ್ಲಾ ತೋಡಿ ಹೊರಕ್ಕಿಟ್ಟಂತೆ, ತನ್ನ ಜೀವನಾನುಭವದ ದ್ರವ್ಯವನ್ನೆಲ್ಲಾ ಭಾಷೆಯಲ್ಲಿ ಬಸಿದಿಟ್ಟಂತೆ ಬರೆಯಬೇಕಲ್ಲವಾ? ಹಾಗಲ್ಲವಾದರೆ ಯಾಕೆ ಬರೆಯಬೇಕು? ಅಂದುಕೊಂಡು ಬರೆಯುವುದಕ್ಕೆ ಕೂರಲೇ ಇಲ್ಲ ನಾನು. ಆಮೇಲೆ ‘ವಿಜಯವಾಣಿ’ಯ ತಿಮ್ಮಪ್ಪ ಭಟ್ಟರು, ಹರಿಪ್ರಕಾಶ ಕೋಣೆಮನೆ, ಗೆಳೆಯ ಸಿ.ಕೆ. ಮಹೇಂದ್ರ ನನ್ನಿಂದ ಬರೆಸತೊಡಗಿದರು. ಜತೆಗೆ ಪ್ರತೀವಾರ ಓದುಗರಿಂದ ಬರುತ್ತಿದ್ದ ಪ್ರತಿಕ್ರಿಯೆಗಳು, ನನ್ನ ಮೇಷ್ಟ್ರು ಪ್ರತಿವಾರವೂ ಪ್ರತಿಕ್ರಿಯಿಸಿ, ರ್ಚಚಿಸಿ ನನಗೆ ತುಂಬುತ್ತಿದ್ದ ಇಂಧನ- ಇವೆಲ್ಲವೂ ನನ್ನ ಕೈಹಿಡಿದು ಬರೆಸಿದವು. ಹಾಗೆಂದ ಮಾತ್ರಕ್ಕೆ ನಾನೇನೋ ಅದ್ಭುತವಾದುದನ್ನು ಬರೆದುಬಿಟ್ಟಿದ್ದೇನೆ ಎಂಬ ಭ್ರಮೆ ಚಿಟಿಕೆಯಷ್ಟೂ ಇಲ್ಲ. ನನ್ನ ಬರಹಗಳ ಗುಣಮಟ್ಟದ ಬಗೆಗೆ ನಾನು ಹೇಳಬೇಕಾದದ್ದು ಏನೂ ಇಲ್ಲ. ಯಾಕೆಂದರೆ ನೀವೂ ಅವನ್ನು ಓದಿದ್ದೀರಿ.

ಕ್ಷಮಿಸಿ, ಈ ವಾರ ಬರೆಯಬೇಕಾದುದು ಇದಲ್ಲ. ಇದು ನವೆಂಬರ್ ತಿಂಗಳು. ತಿಂಗಳಿಡೀ ನಮ್ಮ ರಾಜ್ಯದ ತುಂಬಾ ಬಗೆಬಗೆಯಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತದೆ. ಬೇರೆ ಬೇರೆ ರಾಜ್ಯಗಳಲ್ಲೂ, ದೇಶಗಳಲ್ಲೂ ನಮ್ಮ ಸೋದರ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಅಲ್ಲೆಲ್ಲಾ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳ ಬಗ್ಗೆ ಬೇಕಾದಷ್ಟು ಮಾತು ನಡೆಯುತ್ತದೆ. ಹಾಗೇ ನಾನೂ ಈ ತಿಂಗಳಲ್ಲಿ ಬೇಕಾದಷ್ಟು ಭಾಷಣ ಮಾಡುತ್ತೇನೆ. ಬೇಕಾದಷ್ಟು ಆಲೋಚಿಸುತ್ತೇನೆ, ಸಂಭ್ರಮಿಸುತ್ತೇನೆ, ಆನಂದಿಸುತ್ತೇನೆ, ಆತಂಕಪಡುತ್ತೇನೆ, ಕುದಿಯುತ್ತೇನೆ. ಈವತ್ತು ಅದರ ಬಗ್ಗೆ ಒಂದಿಷ್ಟು ಬರೆಯುತ್ತೇನೆ.

ನಾನು ಕನ್ನಡ ಮೀಡಿಯಮ್ಮು. ಕನ್ನಡ ಮೀಡಿಯಂ ಅಂದರೆ ನನ್ನ ಓದಿನ ಬಗ್ಗೆಯಲ್ಲ! ಓದಿನಲ್ಲಿ ಇಂಗ್ಲಿಷ್ ಮೀಡಿಯಮ್ಮಿಗೂ ಒಂದಿಷ್ಟು ಮಣ್ಣು ಹೊತ್ತಿದ್ದೇನೆ ನಾನು. ನನ್ನ ಬದುಕೇ ಕನ್ನಡ ಮೀಡಿಯಮ್ಮು. ಕನ್ನಡ ನನಗೊಂದು ಭಾಷೆಯಲ್ಲ, ಅದು ನನ್ನ ಇಡೀ ಬದುಕು (ಇದು ರಾಜ್ಯೋತ್ಸವ ಭಾಷಣ ಅಂತ ತಿಳಿಯಬೇಡಿ). ‘ಕನ್ನಡನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ’ ಅಂದರಲ್ಲ ಬಿಎಂಶ್ರೀ. ಇದೀಗ ಬದುಕಿನ ಉತ್ತರಭಾಗಕ್ಕೆ ಬಂದು ನಿಂತಿರುವ ನನಗೂ ಹೇಳಿಕೊಳ್ಳಬೇಕೆನಿಸುತ್ತಿದೆ- ನನಗೂ ಕನ್ನಡವೇ ಗತಿ, ಕನ್ನಡವೇ ಮತಿ, ಅನ್ಯಥಾ ಶರಣಂ ನಾಸ್ತಿ.

ಮೊನ್ನೆ ಮೈಸೂರಿನ ಇನ್ಪೋಸಿಸ್ ಸಂಸ್ಥೆಯ ಕನ್ನಡ ರಾಜ್ಯೋತ್ಸವಕ್ಕೆ ಹೋಗಿದ್ದೆ. ವೇದಿಕೆಯನ್ನೇರಿದಾಗ ಎದುರಿಗಿದ್ದ ಸಾಫ್ಟ್​ವೇರ್ ಹುಡುಗ-ಹುಡುಗಿಯರನ್ನು ಕಂಡು ನನಗೊಂದು ಆಲೋಚನೆ ಬಂತು. ಅದನ್ನೇ ಅಲ್ಲಿ ಹೇಳಿದೆ ಕೂಡಾ.

ಸಾಫ್ಟ್​ವೇರ್ ಹುಡುಗ-ಹುಡುಗಿಯರು ವ್ಯವಹರಿಸುವುದು ಕಂಪ್ಯೂಟರ್​ಗಳೊಂದಿಗೆ, ಆಧುನಿಕ ಸಂವಹನ ತಂತ್ರಜ್ಞಾನದೊಂದಿಗೆ. ಅವರದೇ ಒಂದು ಜಗತ್ತು. ಆ ಜಗತ್ತು ಅವರಿಗೆ ತೆರೆಯುವುದು ಕಂಪ್ಯೂಟರುಗಳು, ತಂತ್ರಜ್ಞಾನದ ಮುಖಾಂತರ. ನನಗೆ ಆ ವಿಷಯದಲ್ಲಿ ಅಂಥ ಪರಿಣತಿಯೇನೂ ಇಲ್ಲವಾದರೂ, ಸಿಕ್ಕ ಅಷ್ಟಿಷ್ಟು ಜ್ಞಾನವೇ ರೋಚಕವಾದ ಹೊಸಲೋಕವನ್ನು ತೆರೆಯುತ್ತದೆ. ಈಗ ನನ್ನ ಕೈಲೂ ಮೊಬೈಲ್ ಫೋನಿದೆ. ಅದನ್ನು ಒಂದು ಫೋನಷ್ಟೆ ಎಂದು ಭಾವಿಸಿದರೆ ಅದು ನನ್ನ ಅಲ್ಪಜ್ಞಾನವಷ್ಟೆ. ನಿಜವಾಗಿ ಅದು ಶುರುವಾದದ್ದು ಫೋನು ಅಂತ ಅಷ್ಟೆ. ಅಂಗೈಯಗಲದ ಈ ಮೊಬೈಲ್ ಫೋನು ಈಗ ನನಗೆ ಇಡೀ ಬ್ರಹ್ಮಾಂಡವನ್ನೇ ತೆರೆಯವ ಕಿಟಕಿ. ನನ್ನ ವ್ಯಾಪಾರ ವ್ಯವಹಾರೇತ್ಯಾದಿ ಸಕಲೆಂಟನ್ನೂ ನಿರ್ವಹಿಸಬಲ್ಲ ಮಹಾ ಅದ್ಭುತ! ಅದು ಈಗ ನನ್ನನ್ನು ಲಾಲಿಹಾಡಿ ಮಲಗಿಸಬಲ್ಲದು, ಕೂಗಿ ಎಬ್ಬಿಸಬಲ್ಲದು, ನನಗೆ ಬೇಕಾದ ಹಾಡು ಹಾಡಬಲ್ಲದು, ಯಾರನ್ನೋ ಪರಿಚಯಿಸಬಲ್ಲದು, ಯಾವೂರಿಗೋ ದಾರಿ ತೋರಬಲ್ಲದು, ಜಗತ್ತಿನ ಯಾವುದೋ ನದಿಯಲ್ಲಿ ಎಷ್ಟು ನೀರು ಹರಿಯುತ್ತಿದೆ ಅಂತೆಲ್ಲಾ ಹೇಳಬಲ್ಲದು. ನನ್ನ ದೇಹದ ಶಾಖ, ನಾಡಿಮಿಡಿತ, ರಕ್ತ ಪರಿಚಲನೆ ಇತ್ಯಾದಿತ್ಯಾದಿಗಳನ್ನೆಲ್ಲಾ ನನಗೇ ತೋರಿಸಬಲ್ಲದು. ಮುಂದಿನ ವಾರ ನಾನು ಹಾರಲಿರುವ ವಿಮಾನ ಈಗ ಎಲ್ಲಿ ಏರುತ್ತಿದೆ, ಎಲ್ಲಿ ಹಾರುತ್ತಿದೆ ಎಂದೆಲ್ಲಾ ಕಾಣಿಸಬಲ್ಲದು. ನನ್ನ ಈ ಹೊತ್ತಿನ ದನಿಯನ್ನು, ಚಿತ್ರವನ್ನು ಸೆರೆಹಿಡಿದುಕೊಂಡು ಅದನ್ನು ಹೊತ್ತೊಯ್ದು ಈ ಕ್ಷಣವೇ ಖಂಡಖಂಡಾಂತರಗಳನ್ನು ದಾಟಿ ಇನ್ನಾರಿಗೋ ಮುಟ್ಟಿಸಬಲ್ಲದು. ನನ್ನ ಮಡದಿ, ಮಕ್ಕಳು, ಮೊಮ್ಮಗ, ಬಂಧುಗಳನ್ನು ಈ ಕ್ಷಣವೇ ಪ್ರತ್ಯಕ್ಷ ಮಾಡಿಸಬಲ್ಲದು. ಅಬಾ ಅಬ್ಬಾ!! ಅದೆಷ್ಟು ಅನಂತ ಬಗೆಗಳಲ್ಲಿ ನನ್ನ ಪರಿಚಾರಿಕೆ ಮಾಡುತ್ತದೆಯಲ್ಲ, ಈ ಅಂಗೈಯಗಲದ ಮೊಬೈಲು! ಇನ್ನು ಅಂತರ್ಜಾಲ (Internet) ಅಂತಿದೆಯಲ್ಲಾ ಅದು! ವರ್ಣಿಸಲು ಸಾವಿರ ನಾಲಗೆಗಳೂ ಸಾಲದು. ಈ ಬ್ರಹ್ಮಾಂಡದ ಪ್ರತಿಸೃಷ್ಟಿ ಅದು! ಅದರಲ್ಲಿ ಅದೆಷ್ಟು ಮಾಹಿತಿ! ಅದೆಷ್ಟು ಚಿತ್ರಗಳು! ಅದೆಷ್ಟು ದನಿಗಳು! ಅಷ್ಟಕ್ಕೂ ಇಷ್ಟೆಲ್ಲಾ ಅಡಗಿಕೊಂಡಿರುವುದು ಒಂದು ಚಿಟಿಕೆಯಗಲವೂ ಇಲ್ಲದ ಚಿಪ್ಪಿನಲ್ಲಿ! (-ಕ್ಷಮಿಸಿ ‘ಚಿಪ್’ನಲ್ಲಿ!!). ಹಾಗೇ ಯೋಚಿಸುತ್ತಾ ಆ ಒಂದು ಬೆರಗಿಗೆ ಬಿದ್ದರೆ ಎದ್ದೇಳುವುದೇ ಕಷ್ಟ! ಶಿವಶಿವಾ!! ನನ್ನಂಥಾ ನನಗೇ ಇಷ್ಟು ತಿಳಿಯುವಾಗ ಇನ್ನು ಅದರಲ್ಲಿ ಪರಿಣತಿಯಿರುವ ನಮ್ಮ ಮುಂದಿನ ತಲೆಮಾರಿನ ಹುಡುಗರಿಗೆ ಏನೆಲ್ಲಾ ತಿಳಿಯುತ್ತದೋ! ಏನೆಲ್ಲಾ ಕಾಣುತ್ತದೆಯೋ! ಏನೇನು ಕೇಳಿಸುತ್ತದೆಯೋ!!

ಆವತ್ತು ಆ ಸಾಫ್ಟ್​ವೇರ್ ಹುಡುಗ-ಹುಡುಗಿಯರಿಗೆ ಇದನ್ನೆಲ್ಲಾ ಹೇಳಿ, ಹೇಳಿದೆ- ‘ಮಕ್ಕಳೇ, ಈವತ್ತು ನಿಮಗೊಂದು ಜ್ಞಾನ, ಗೌರವ, ಸಂಬಳ, ಸವಲತ್ತು, ಸಾಮಾಜಿಕ ಸ್ಥಾನಮಾನ, ನಿಮ್ಮ ಕಾರು, ಮನೆ, ಉಡುಗೆ-ತೊಡುಗೆ, ನಿಮ್ಮ ಮಾತು, ಕತೆ, ಹಾಡು, ಓಡಾಟ, ಹಾರಾಟ- ಇದೆಲ್ಲವನ್ನೂ ಕರುಣಿಸಿರುವುದು ನಿಮ್ಮ ತಂತ್ರಜ್ಞಾನ. ನಿಮ್ಮ ಪಕ್ಕ ಸುಮ್ಮನೆ ಕೂತುಕೊಂಡರೆ ನೀವು ನನಗೆ ಇನ್ನೂ ಒಂದು ದೊಡ್ಡ ವಿಶ್ವವನ್ನೇ ತೆರೆಯಬಲ್ಲಿರಿ, ನನ್ನನ್ನು ರೋಮಾಂಚನಗೊಳಿಸಬಲ್ಲಿರಿ. ನನ್ನ ಕ್ಷುದ್ರತೆಯನ್ನು ನನಗೆ ಅರಿವುಮಾಡಿಸಬಲ್ಲಿರಿ. ಅದೆಲ್ಲವೂ ನಿಜವೇ. ಆದರೆ ನಿಮಗಿನ್ನೊಂದು ಮಾತು ಹೇಳುತ್ತೇನೆ ಕೇಳಿ. ಹೇಗೆ ನಿಮ್ಮ ತಂತ್ರಜ್ಞಾನ ನಿಮಗೆ ಸಕಲೆಂಟನ್ನೂ ಕರುಣಿಸಿದೆಯೋ ಹಾಗೇ ನನಗೆ ಕನ್ನಡ. ಈ ಕನ್ನಡವೂ ನನಗೆ ಬೇಕು ಬೇಕಾದಷ್ಟು ಅರಿವನ್ನು, ವಿದ್ಯೆಯನ್ನು, ಆಶ್ಚರ್ಯವನ್ನು, ಆನಂದವನ್ನು ಕೊಟ್ಟಿದೆ. ನನಗೊಂದು ಸಾಮಾಜಿಕ ಗೌರವ, ಸ್ಥಾನಮಾನ, ವಿವೇಕ, ಸಂಬಳ, ಸಂಪಾದನೆ, ಸವಲತ್ತು, ನನ್ನ ಮಾತು, ಕತೆ, ನನ್ನ ಹಾಡು, ಹಾರಾಟ, ಓಡಾಟಗಳೆಲ್ಲವನ್ನೂ ನನಗೆ ಕರುಣಿಸಿದ್ದು ನನ್ನ ಕನ್ನಡವೇ! ಈ ಕನ್ನಡದ ಮುಖಾಂತರವೇ ನನಗೆ ಸಿಕ್ಕ ಬೆರಗು, ಆನಂದ, ಜ್ಞಾನ ನಿಮಗೆ ನಿಮ್ಮ ತಂತ್ರಜ್ಞಾನದಿಂದ ಸಿಕ್ಕಿದ್ದಕ್ಕಿಂತ ಯಾವ ಬಗೆಯಲ್ಲೂ ಕಡಿಮೆಯದಲ್ಲ. ಅದು ಬೇರೆ ಬಗೆಯದು ಅಷ್ಟೆ. ನೀವು ಹೇಗೆ ನಿಮ್ಮ ವಿಶ್ವದ ಇನ್ನೂ ಮುಂದುಮುಂದಿನ ಬಾಗಿಲುಗಳನ್ನು ತೆರೆದುಕೊಳ್ಳಲು ಕೀಲಿಕೈಗಳನ್ನು ಹುಡುಕುತ್ತಿರುವಿರೋ ಹಾಗೆಯೇ ಕನ್ನಡದ ಮುಖಾಂತರ ನನಗೆ ತೆರೆಯುವ ಹೊಸಲೋಕದ ಬಾಗಿಲುಗಳನ್ನು ತೆರೆಯಲು ನಾನೂ ಕೀಲಿಕೈಗಳನ್ನು ಹುಡುಕುತ್ತಿದ್ದೇನೆ…..’.

ಇದನ್ನೆಲ್ಲಾ ಆ ಹುಡುಗರ ಮುಂದೆ ಹೇಳಿದ್ದು ನಿಮಗಿಂತ ನಾನೇನೂ ಕಡಿಮೆಯಲ್ಲ ಎಂದು ಜಂಭ ಕೊಚ್ಚಿಕೊಳ್ಳುವುದಕ್ಕಲ್ಲ. ಕನ್ನಡವು ತೆರೆದ ಅನುಭವ ಪ್ರಪಂಚವನ್ನು ಕಂಡ ಅಭಿಮಾನದಿಂದ. ಈಗಲೂ ಒಂದೊಂದು ಬಾರಿ ಧ್ಯಾನಿಸುತ್ತಾ ಕೂತುಬಿಡುತ್ತೇನೆ. ನನ್ನನ್ನು ಕಂಡು ನಾನೇ ನಗುತ್ತೇನೆ. ಅಲ್ಲಾ, ಎಲ್ಲಿಂದ ಹೊರಟವನು ನಾನು! ಮಾರಿಗುಡಿಯ ಚಪ್ಪಡಿ ಹಾಸಿನ ಮೇಲೆ ಕೂತು ಕಲ್ಲುಸ್ಲೇಟಿನ ಮೇಲೆ ‘ಅ ಆ ಇ ಈ’ ತಿದ್ದಿದವನು ನಾನು! ನನ್ನ ಅಕ್ಷರಯಾತ್ರೆ ಹೊರಟದ್ದು ಅಲ್ಲಿಂದ. ನಾನೀಗಲೂ ಮಹಾಮೇಧಾವಿ, ಮುತ್ಸದ್ದಿ, ಪ್ರಾಜ್ಞ ಅದೇನೂ ಅಲ್ಲ. ಆದರೂ….! ಎಲ್ಲಿಗೆ ಬಂದು ತಲುಪಿದ್ದೇನೆ. ರಿಪೀಸು ಪಟ್ಟಿಗಳಿಂದ ಮಾಡಿದ ಮೂರುಕಾಲಿನ ಗಾಡಿ ಹಿಡಿದು ನಡೆಗಲಿತವನು, ಒಳಪೆಟ್ಲು ತುಳಿದು ಸೈಕಲ್ಲು ಕಲಿತವನು, ಈವತ್ತು ಲಕ್ಷಾಂತರ ರೂಪಾಯಿಗಳ ಕಾರು ಓಡಿಸುತ್ತಿದ್ದೇನೆ. ಕಾರು ಕಂಪನಿಯವರು ಇದು ಈ ಬೆಲೆಗೆ ತುಂಬಾ ‘ಇಂಟೆಲಿಜೆಂಟ್ ಕಾರ್!’ ಅಂತ ಹೇಳಿ ಕೊಟ್ಟರು. ಹೌದು, ನನಗಿಂತಲೂ ಇಂಟೆಲಿಜೆಂಟು ಅದು. ಲಡಾಸು ಬಸ್ಸಿಗೆ ಹತ್ತು ಪೈಸ ಕೊಟ್ಟು ಅರ್ಧ ಟಿಕೇಟು ತೆಗೆದುಕೊಂಡು ಹೈಸ್ಕೂಲಿಗೆ ಹೋದ ನಾನು ಈವತ್ತು ಲಕ್ಷಾಂತರ ರೂಪಾಯಿಗಳ ಟಿಕೇಟು ಖರೀದಿ ಮಾಡಿ ವಿಮಾನಗಳಲ್ಲಿ ಸಾವಿರ ಯೋಜನ ದೂರದ ಸಮುದ್ರಗಳನ್ನು ಹಾರುತ್ತಿದ್ದೇನೆ. ಆಹಾ ನನ್ನ ಕನ್ನಡವೇ! ಇದೆಲ್ಲವನ್ನೂ ಕರುಣಿಸಿದ್ದು ನನ್ನ ಕನ್ನಡ. ಬೆರಗಾಗಬಾರದಾ ನಾನು?!!

ಇದೆಲ್ಲಾ ಲೌಕಿಕವಾಯಿತು ಬಿಡಿ. ನಾನು ಮಹಾಜ್ಞಾನಿಯಾಗಲೀ ವಿದ್ವಾಂಸನಾಗಲೀ ಅಲ್ಲವೇ ಅಲ್ಲ ಎಂಬ ಅರಿವನ್ನು ಇಟ್ಟುಕೊಂಡೇ ಆಲೋಚಿಸುತ್ತೇನೆ. ಈ ಕನ್ನಡ ನನಗೆ ಕೊಟ್ಟ ಲೋಕಾನುಭವ, ತಾತ್ವಿ ್ತತೆ, ಅಲೌಕಿಕ ಆನಂದ- ಇವೆಲ್ಲ ಏನು ಕಡಿಮೆಯವಾ?

ಮತ್ತೆ ಹಿಂದಕ್ಕೋಡುತಿದೆ ಮನಸ್ಸು. ನಾನು ಹುಟ್ಟಿ ನಡೆದಾಡುವ ಕಾಲಕ್ಕೆ ನಮ್ಮ ಹಳ್ಳಿ ಇಡಿಇಡಿಯಾಗಿ ಕನ್ನಡದ ಹಳ್ಳಿ. ಅಲ್ಲಿದ್ದ ಹಾಡು, ಕತೆ, ಮಾತು ಎಲ್ಲಾ ಕನ್ನಡವೇ. ಇಂಗ್ಲಿಷರು ನಮ್ಮ ದೇಶವನ್ನೆಲ್ಲಾ ಆಳಿದ್ದರಾದರೂ, ಅವರು ಮೈಸೂರು ಬೆಂಗಳೂರಿನಂಥಾ ಊರುಗಳಲ್ಲಿ ಅವರ ಇಂಗ್ಲಿಷಿಗೆ ಒಂದಿಷ್ಟು ಗೌರವ ಮರ್ಯಾದೆಗಳನ್ನು ದೊರಕಿಸಿದ್ದರಾದರೂ ನಮ್ಮೂರಿನಂಥಾ ಸಹಸ್ರಾರು ಊರುಗಳಲ್ಲಿ ಇಂಗ್ಲಿಷಿನ ಬೇಳೆಕಾಳು ಬೇಯುತ್ತಿರಲಿಲ್ಲ. ನಮ್ಮೂರ ಮೆಣಸಿಗೆ ತಿಟ್ಟಿನ ತೊಗರಿಕಾಳು, ಬೇಳೆ, ಕಲ್ಲುಹೊಲದ ಹುಳ್ಳೀಕಾಳು ಎಲ್ಲಾ ಬೇಯುತ್ತಿದ್ದುದು ಕನ್ನಡದ ಒಲೆಯ ಮೇಲೇ. ಕನ್ನಡದ ಕಡಾಯದ ನೀರಿನಲ್ಲೇ. ಈಗ ನಮ್ಮ ಬುದ್ಧಿವಂತರು, ಬುದ್ಧಿಜೀವಿಗಳು, ಸಂಪ್ರದಾಯವಾದಿಗಳು, ರಾಜಕಾರಣಿಗಳು ಕಾಲು ಕೈ ಹೆಟ್ಟಿ ರಾಡಿ ಎಬ್ಬಿಸಿದ ನೈತಿಕತೆಗಳಾವುವೂ ನಮಗೆ ಗೊತ್ತಿರಲಿಲ್ಲ. ನಮ್ಮದೊಂದು ಸರಳ ನೈತಿಕತೆ, ಸರಳ ತಿಳಿವಳಿಕೆ. ನಮ್ಮಪ್ಪ ಆಗಾಗ ಹೇಳುತ್ತಿದ್ದ ಬುದ್ಧಿಮಾತುಗಳು ನೆನಪಾಗುತ್ತವೆ.

‘ಕಂಡೋರು ಕುಡಿಯೋ ನೀರಿಗೆ ಕಾಲು ಹೆಟ್ಟಬೇಡ’ ‘ಬೇರೆ ಮನೆಯೋರಿಗೆ ಬೆಳಕು ಕೊಡದೇ ಇದ್ರೂ ಪರವಾಗಿಲ್ಲ, ಬೆಂಕಿ ಹಾಕಬೇಡ’ ‘ಹೂಸಿದೋನು ಯಾರು? ಅಂದ್ರೆ ಮಾಸಿದ ಚಡ್ಡಿಯೋನು ಅಂತದೆ ಲೋಕ- ಹುಷಾರಾಗಿರು’ ‘ಮಂಡಿ ಊರಿಕೊಂಡು ಮ್ಯಾನೆ (ಮೇನೆ) ಮೇಲೆ ಕೂರೋದ್ಕಿಂತ, ಕಾಲು ಊರಿಕೊಂಡು ನಡಕೊಂಡು ಹೋಗೋದು ಲೇಸು’ ‘ಅಪ್ಪಂತೋರ ಮುಂದೆ ಅಹಂಕಾರ ತೋರಬೇಡ’ ‘ಉಚ್ಚೆ ಕುಡುದ್ರೂ ತನ್ನಿಚ್ಚೇಲಿ ಕುಡೀಬೇಕು’ ‘ಹಸದೋರ ಮುಂದ್ಗಡೆ ಅನ್ನ ಉಣ್ಣಬ್ಯಾಡ, ದುಡಿಯೋರ ಮುಂದ್ಗಡೆ ದವಲತ್ತು ತೋರಬ್ಯಾಡ’ ‘ನಾಯಿ ಮನೆ ಕಾಯ್ತದೆ, ನಾಲಗೆ ಮನೆತನ ಕಾಯ್ತದೆ’.

ಇವೆಲ್ಲಾ ನನಗೆ ಕನ್ನಡ ಮೀಡಿಯಮ್ಮಿನಲ್ಲೇ ಬಂದ ನೈತಿಕತೆಯ ಮಾದರಿಗಳು. ಹೊಸ ತಂತ್ರಜ್ಞಾನ ನಮ್ಮ ರಕ್ತದೊತ್ತಡ ಅಳೆಯುತ್ತೆ, ದೇಹದ ಉಷ್ಣತೆ ಹೇಳುತ್ತೆ. ಆದರೆ ನಮ್ಮಪ್ಪ ಕನ್ನಡ ಮೀಡಿಯಮ್ಮಿನಲ್ಲಿ ಕೊಟ್ಟ ಈ ತಿಳಿವಳಿಕೆಯನ್ನು ಕೊಡುವುದಿಲ್ಲ.

ಬಿ.ಎಸ್​ಸಿ ಓದುವವರೆಗೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಾನು ಸಾಹಿತ್ಯದ ಸೆಳವಿಗೆ ಬಿದ್ದು ಕನ್ನಡ ಎಂ.ಎ ಓದಿದೆ. ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಲಕ್ಷ್ಮೀಶ, ಕುಮಾರವ್ಯಾಸ, ಬಸವಣ್ಣ, ಅಕ್ಕ, ಅಲ್ಲಮರಿಂದ ಹಿಡಿದು ನಮ್ಮ ಕುವೆಂಪು, ಬೇಂದ್ರೆ, ಪುತಿನ, ಮಾಸ್ತಿ, ಕಾರಂತ, ನರಸಿಂಹಸ್ವಾಮಿಗಳು ತೆರೆದು ತೋರಿದ ಪ್ರಪಂಚ ಕನ್ನಡ ಮೀಡಿಯಮ್ಮಿನ ಮನಸ್ಸುಗಳಿಗೆ ಅನನ್ಯ! ಅದ್ಭುತ! ಆದರೆ ಆಗ ನನಗದು ಅರಿವಾಗಿರಲಿಲ್ಲ. ಅದು ನನಗೆ ಓದಿನ ವಿಷಯವಷ್ಟೇ ಆಗಿತ್ತು. ಈಗ ನಾನೂ ಅರವತ್ತು ಸಮೀಪಿಸುತ್ತಿದ್ದೇನೆ. ದೇಶದೇಶಗಳನ್ನು ಸುತ್ತಿದ್ದೇನೆ. ಒಂದಿಷ್ಟು ಓದಿದ್ದೇನೆ. ಒಂದಷ್ಟು ಗೆಳೆಯರು, ಗುರುಗಳನ್ನು ಸಂಪಾದಿಸಿದ್ದೇನೆ- ಎಲ್ಲಾ ಕನ್ನಡ ಮೀಡಿಯಮ್ಮಿನಲ್ಲೇ! ಈಗ ನಾನು ಕೇಳುವ ಯಾವುದೋ ಒಂದು ಮಾತು, ಹಾಡು, ಗಾದೆ, ನುಡಿಗಟ್ಟು, ಓದುವ ಒಂದು ಪುಸ್ತಕ ಎಲ್ಲವೂ ಕನ್ನಡ ಮೀಡಿಯಮ್ಮಿನಲ್ಲೇ ಹೊಸಹೊಸ ಲೋಕಗಳನ್ನು ತೆರೆಯುತ್ತವೆ. ಇದೊಂದು ಅನಂತದ ಯಾತ್ರೆ ಅನ್ನಿಸುತ್ತಿದೆ.

ಕನ್ನಡವೆನೆ ಕುಣಿದಾಡುವುದೆನ್ನೆದೆ

ಕನ್ನಡವೆನೆ ಕಿವಿ ನಿಮಿರುವುದು

ಕನ್ನಡವೇ ಸತ್ಯ! ಕನ್ನಡವೇ ನಿತ್ಯ!

ಎಂದು ಹಾಡಿದರಲ್ಲ ಕುವೆಂಪು, ಅವರೆದುರಿಗಿದ್ದ ಕನ್ನಡದ ಜಗತ್ತು ಅದೆಷ್ಟು ಭವ್ಯವಾಗಿತ್ತೋ! ಭೂಮವಾಗಿತ್ತೋ! ಅನನ್ಯವಾಗಿತ್ತೋ! ಅನಂತವಾಗಿತ್ತೋ!- ಅಂದಾಜಾಗುತ್ತಿದೆ ನನ್ನ ಅಲ್ಪಮತಿಗೂ ಕೂಡಾ!

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top