Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ನನ್ನದು ಮೀನಿನ ಕಣ್ಣೀರು, ಹಕ್ಕಿಯ ನಿಟ್ಟುಸಿರು, ಕೃಷ್ಣಾ!

Sunday, 20.08.2017, 3:00 AM       No Comments

ಸುಜನಾ ಅಧ್ಯಯನದ ವ್ಯಾಪ್ತಿ, ಪ್ರತಿಭೆಯ ಬೀಸು ಗೊತ್ತಿರುವವರಿಗೆ ಅವರು ಬರೆದದ್ದು ಕಡಿಮೆಯೇ ಅನ್ನಿಸುತ್ತದೆ. ಅವರ ಸಾಹಿತ್ಯಕ ನಿಲುವು, ವಿಮರ್ಶೆಯ ಬಗ್ಗೆ ಯಾರಿಗಾದರೂ ಭಿನ್ನಾಭಿಪ್ರಾಯ ಇರಬಹುದಿತ್ತು. ಆದರೆ ಅವರ ವಿದ್ವತ್ತು, ಪ್ರತಿಭೆಗಳ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಸಾಧ್ಯವೇ ಇರಲಿಲ್ಲ. ನನ್ನದು ಮೀನಿನ ಕಣ್ಣೀರು, ಹಕ್ಕಿಯ ನಿಟ್ಟುಸಿರು, ಕೃಷ್ಣಾ!

ತಂಪು ಹೊತ್ತಿನಲ್ಲಿ ನೆನೆಯಬೇಕು ಅವರನ್ನ! ಅಂಥಾ ಒಳ್ಳೆಯ ಮೇಷ್ಟ್ರು!

ಅವರು ಪಾಠ ಮಾಡುತ್ತಿದ್ದರೆ- ಅದರಲ್ಲೂ ಕುಮಾರವ್ಯಾಸನನ್ನೋ, ಪಂಪನನ್ನೋ, ಕುವೆಂಪು-ಬೇಂದ್ರೆ-ಪುತಿನ ಅವರನ್ನೋ ಪಾಠ ಮಾಡುತ್ತಿದ್ದರೆ ಅದೊಂದು ತರಗತಿ ಅನ್ನುವುದನ್ನೂ ಮರೆತು ಯಾವುದೋ ಲಹರಿಗೆ ಸಂದುಹೋಗುತ್ತಿದ್ದರು. ಒಮ್ಮೊಮ್ಮೆ ಪಾಠದ ನಡುನಡುವೆ ಒಂದರ್ಧ ನಿಮಿಷ, ಒಂದು ನಿಮಿಷ ಕಣ್ಣುಮುಚ್ಚಿ ಏನನ್ನೋ ಧ್ಯಾನಿಸುತ್ತಾ, ಏನೋ ಆಲೋಚಿಸುತ್ತಾ ಸ್ತಬ್ಧವಾಗಿಬಿಡುತ್ತಿದ್ದರು. ಮನಸ್ಸಿನಲ್ಲಿ ಯಾವುದೋ ಮಿಂಚು ಫಳ್ಳೆಂದಂತೆ ತಟಕ್ಕನೆ ಕಣ್ ತೆರೆದು, ನಾವು ಕೂಡಾ ‘ಅಹ್!’ ಅನ್ನುವಂಥ ಯಾವುದಾದರೊಂದು ಉಪಮೆಯನ್ನೋ, ರೂಪಕವನ್ನೋ, ಪ್ರತಿಮೆಯನ್ನೋ ಉರುಳಿಸಿಬಿಡುತ್ತಿದ್ದರು. ನಾವು ನಿಜವಾದ ಆಸಕ್ತಿಯಿಂದ ಅವರ ಮಾತುಗಳನ್ನೇ ಕೇಳುತ್ತಿದ್ದರೆ, ಅವರನ್ನೇ ನೋಡುತ್ತಿದ್ದರೆ ನಮ್ಮ ಕಣ್ಣುಗಳನ್ನೇ ದಿಟ್ಟಿಸುತ್ತಾ, ಕಣ್ಣೊಳಗೇ ಇಳಿದುಬಿಡುತ್ತಿದ್ದರು. ಒಂದಿಷ್ಟು ಸಾಹಿತ್ಯಾಸಕ್ತಿ ಇದ್ದವರಿಗೆ, ಭಾವಕೋಶ ಸಂಪನ್ನರಿಗೆ ಅವರ ಪಾಠ, ಕೇವಲ ಪಾಠವಲ್ಲ. ಅದೊಂದು ಅನನ್ಯವಾದ ಅನುಭೂತಿ!

ಆವತ್ತೊಂದು ದಿನ ಮೇಷ್ಟ್ರು ಹೀಗೇ ಪಾಠ ಮಾಡುತ್ತಿದ್ದರು. ಯಾರೋ ಒಬ್ಬ ಹುಡುಗ ಆವತ್ತು ತರಗತಿಗೆ ಸುಮಾರು ಅರ್ಧಗಂಟೆ ತಡವಾಗಿ ಬಂದ. ಕ್ಲಾಸ್​ರೂಮಿನ ಬಾಗಿಲು ತೆಗೆದೇ ಇತ್ತು. ಅವರೆಂದೂ ತಡವಾಗಿ ಬಂದವರನ್ನು ಬಯ್ಯೋದು ಗಿಯ್ಯೋದು ಮಾಡುತ್ತಿರಲಿಲ್ಲ. ಆದರೂ ಹುಡುಗನಿಗೆ ಅದೇನು ಅನ್ನಿಸಿತೋ ಬಾಗಿಲ ಹತ್ತಿರವೇ ಯಾರಿಗೂ ಗೊತ್ತಾಗದಂತೆ (?) ಕದ್ದುನಿಂತಿದ್ದು, ಮೇಷ್ಟ್ರು ಎತ್ತಲೋ ತಿರುಗಿದಾಗ, ಯಾವುದೋ ಮಾತಿನ ಲಹರಿಗೆ ಬಿದ್ದು ತಲ್ಲೀನರಾಗಿರುವಂತಿದ್ದಾಗ, ಆ ಹುಡುಗ ಮುಕ್ಕಾಲುಪಾಲು ಬಗ್ಗಿಕೊಂಡು ಬಂದು ಮೆಲ್ಲಗೆ ಹಿಂದಿನ ಬೆಂಚಿನಲ್ಲಿ ಕೂತ. ಮೇಷ್ಟ್ರಿಗೆ ತಾನು ಬಂದುದು ಗೊತ್ತಾಗಲಿಲ್ಲವೆಂದು ನಿರಾಳವಾದ. ಮೇಷ್ಟ್ರು ಆ ಪಾಠ ಮಾಡುತ್ತಿದ್ದ ಲಹರಿಯಲ್ಲೇ ಎಲ್ಲೋ ನೋಡಿಕೊಂಡು ಹೇಳತೊಡಗಿದರು-

‘ನಮ್ಮನ್ನು ಹೆತ್ತ ತಾಯಂದಿರಿಗೆ ನಾವು ಋಣಿಯಾಗಿರುತ್ತೇವೆ ಯಾಕೆಂದರೆ ನಾವೆಲ್ಲಾ ಇಂಥದೊಂದು ಆಕಾರ ಪಡೆದುಕೊಂಡು, ಜೀವ ಕಟ್ಟಿಕೊಂಡು ಬಂದದ್ದೇ ತಾಯ ಗರ್ಭದಿಂದ. ಹಾಜಿ ಮಸ್ತಾನನೂ, ವಿಶ್ವೇಶ್ವರಯ್ಯನೂ, ಒಬ್ಬ ದರೋಡೆಕೋರನೂ, ಧರ್ಮರಾಯನೂ ರೂಪುಗೊಳ್ಳುವುದು ಆ ಪುಟ್ಟಗರ್ಭದಲ್ಲಿಯೇ. ಅವನೆಂಥ ಮಹಾನುಭಾವನಾಗಲೀ, ಮಹಾದುಷ್ಟನಾಗಲೀ ತಾಯಗರ್ಭದಲ್ಲಿರುವುದು ಒಂಭತ್ತು ತಿಂಗಳಷ್ಟೇ. ಒಂಭತ್ತು ತಿಂಗಳು ತಾಯಗರ್ಭದಲ್ಲಿ ಬೆಳೆದ ಮಗು ಅದೇನೇನು ಸಾಧಿಸಬೇಕೆಂಬ ಆಸೆಯಿಂದಲೋ, ಆಕಾಂಕ್ಷೆಯಿಂದಲೋ ತನ್ನ ಅಂಗಾಂಗಗಳನ್ನೆಲ್ಲಾ ಮುದುರಿ ಮುದ್ದೆ ಮಾಡಿಕೊಂಡು, ತನ್ನ ತಾಯಿಗೂ ಅಗಾಧ ಯಾತನೆ ಕೊಟ್ಟುಕೊಂಡು ಆ ಪುಟ್ಟ ಯೋನಿದ್ವಾರದಿಂದ ನಿಧಾನ ಹೊರಗೆ ಬಂದು ಕಣ್ ಬಿಡುತ್ತದೆ……’.

ಇಷ್ಟನ್ನು ಅದೆಲ್ಲೋ ಶೂನ್ಯದಲ್ಲಿ ದೃಷ್ಟಿ ನೆಟ್ಟುಕೊಂಡು ಗಂಭೀರವಾಗಿ ಹೇಳಿದ ಮೇಷ್ಟ್ರು ಈಗ ತಟಕ್ಕನೆ ತರಗತಿಯನ್ನುದ್ದೇಶಿಸಿ ಹೇಳಿದರು- ‘ಆದರೆ ಈ ಹುಡುಗ ಅದೇನು ಸಾಧನೆ ಮಾಡುವುದಕ್ಕಾಗಿ ಇಷ್ಟು ದೊಡ್ಡ ಬಾಗಿಲಿನಿಂದ ತನ್ನ ಅಂಗಾಂಗಗಳನ್ನು ಇಷ್ಟು ಕೊಕ್ಕರಿಸಿಕೊಂಡು ಕ್ಲಾಸ್​ನೊಳಗೆ ಬಂದನೋ…..?!’.

ಅವರು ಮಾತಾಡುತ್ತಿದ್ದುದೇ ಹೀಗೆ. ನಮ್ಮ ಯೂನಿವರ್ಸಿಟಿಯಲ್ಲಿ ನಾವು ಓದುತ್ತಿದ್ದ ಕಾಲಕ್ಕೆ ಅದೊಂದು ಗ್ರೇಟ್ ಮೈಂಡ್! ಅಗಾಧ ವಿದ್ವತ್ತು! ವಿಸ್ತಾರವಾದ ಜ್ಞಾನ, ಮಾತಿಗೆ ನಿಂತರೆ ಪ್ರತಿವಾದಿ ಭಯಂಕರ. ಕನ್ನಡದ ಪ್ರಾಧ್ಯಾಪಕರಾದರೂ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಮನಶ್ಶಾಸ್ತ್ರ ಮುಂತಾದ ವಿಜ್ಞಾನ ವಿಷಯಗಳನ್ನು ಸಾಕಷ್ಟು ಸ್ವತಃ ಓದಿಕೊಂಡಿದ್ದರು. ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆ, ಸಾಹಿತ್ಯಗಳಲ್ಲಿ ಕೂಡಾ ಒಳ್ಳೆಯ ಪರಿಶ್ರಮವಿತ್ತು. ಬಹಳ ‘ಜನಪ್ರಿಯ’ ಮೇಷ್ಟ್ರೇನಲ್ಲ. ಆದರೆ ಸಾಹಿತ್ಯದಲ್ಲಿ ಒಂದಿಷ್ಟು ಆಸಕ್ತಿ, ಪೂರ್ವಸಿದ್ಧತೆ ಇಟ್ಟುಕೊಂಡು ಅವರ ತರಗತಿಗೆ ಹೋದರೆ, ಬರೀ ಪಾಠವಾ ಅದು? ಅದೊಂದು ಹಬ್ಬ. ಬಾಯಿಬಿಟ್ಟರೆ ಮಾತಿಗೊಂದು ಉಪಮೆ, ರೂಪಕ, ಪ್ರತಿಮೆಗಳು! ದೇಶಾವರಿ ಮಾತುಗಳಲ್ಲಿ ಪಾಠಮಾಡಿದವರೇ ಅಲ್ಲ ಅವರು.

ಸುಜನಾ- ಅದು ಅವರ ಕಾವ್ಯನಾಮ. ಆ ಹೆಸರಿನಲ್ಲೇ ಹೆಚ್ಚು ಪರಿಚಿತರು. ಪೂರ್ತಾ ಹೆಸರು ಎಸ್. ನಾರಾಯಣ ಶೆಟ್ಟಿ. ಅವರ ನೆರಳು ಕೂಡಾ ಬಿಳಿದೇ ಇರಬಹುದೆನ್ನಿಸುವಷ್ಟು ಸದಾ ಸ್ವಚ್ಛ ಬಿಳಿಯ ಉಡುಪು- ಜುಬ್ಬ, ಪಾಯಿಜಾಮ. ಯಾವಾಗ ನೋಡಿದರೂ ಮುಖದ ಮೇಲೊಂದು ಮಂದಹಾಸ, ಅಥವಾ ಗಾಂಭೀರ್ಯ. ತಮಾಷೆ ಮಾಡಿದರೂ, ಕೋಪ ಬಂದರೂ ಬಾಯಲ್ಲಿ ಹೊರಬೀಳುತ್ತಿದ್ದುದು ಮಾತ್ರ ಸಾಹಿತ್ಯವೇ.

ನಾನು ಬಿ.ಎಸ್​ಸಿ ಓದುವುದಕ್ಕೆ ಯುವರಾಜಾ ಕಾಲೇಜು ಸೇರಿಕೊಂಡಿದ್ದೆ. ಆಗವರು ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ವಿಜ್ಞಾನದ ವಿದ್ಯಾರ್ಥಿಯಾಗಿದ್ದೂ ಕನ್ನಡ ಸಾಹಿತ್ಯದ ಒಲವಿಗೆ ಬಿದ್ದಿದ್ದ ನನ್ನನ್ನು ಯುವರಾಜಾ ಕಾಲೇಜಿನಲ್ಲಿ ಸಿಕ್ಕಿದ ಕನ್ನಡ ಮೇಷ್ಟರುಗಳು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟರು. ‘ಇನ್ನು ನನಗೂ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ’ ಅನ್ನಿಸುವಂತೆ ನನ್ನಲ್ಲಿ ಕನ್ನಡವನ್ನು ಬಿತ್ತಿದವರು, ಕನ್ನಡದ ದೀಕ್ಷೆ ಕೊಟ್ಟವರು ಆ ಮೇಷ್ಟ್ರುಗಳೇ. ಅದೇನು ಅದೃಷ್ಟವೋ, ನಾನು ಓದುತ್ತಿದ್ದ ಆ ವರ್ಷವೇ ವಿಜ್ಞಾನದ ವಿದ್ಯಾರ್ಥಿಗಳು ಎರಡು ವಿಜ್ಞಾನ ವಿಷಯಗಳ ಜತೆಗೆ ಕನ್ನಡವನ್ನೂ ಐಚ್ಛಿಕವಾಗಿ ಓದಬಹುದೆಂದು ವಿಶ್ವವಿದ್ಯಾಲಯ ಅವಕಾಶ ಮಾಡಿಕೊಟ್ಟಿತು. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು! ನಾನು ಐಚ್ಛಿಕ ಕನ್ನಡದ ವಿದ್ಯಾರ್ಥಿಯಾದೆ. ಅದು ನನ್ನ ಬದುಕಿಗೆ ದೊರೆತ ಒಳ್ಳೆಯ ಅವಕಾಶ. ಅದರ ಜತೆಗೆ ನನಗೆ ಆ ಮೇಷ್ಟ್ರುಗಳು ಸಿಕ್ಕಿದ್ದು ದೊಡ್ಡ ಅದೃಷ್ಟ!

ಸುಜನಾ ಅವರ ಸಾಹಿತ್ಯಕ ನಿಲುವುಗಳ ಬಗ್ಗೆ, ವಿಮರ್ಶೆಯ ಬಗ್ಗೆ ಯಾರಿಗಾದರೂ ಭಿನ್ನಾಭಿಪ್ರಾಯ ಇರಬಹುದಿತ್ತು. ಆದರೆ ಅವರ ವಿದ್ವತ್ತಿನ ಬಗ್ಗೆ, ಪ್ರತಿಭೆಯ ಬಗ್ಗೆ ಭಿನ್ನಾಭಿಪ್ರಾಯ ಇರುವುದು ಸಾಧ್ಯವೇ ಇರಲಿಲ್ಲ. ಅವರು ಪಾಠ ಮಾಡುತ್ತಿದ್ದರೆ, ಭಾಷಣ ಮಾಡುತ್ತಿದ್ದರೆ ಅಥವಾ ಅವರೊಂದಿಗೆ ಮಾತಿಗೆ ಕುಳಿತರೆ ಯಾರಿಗಾದರೂ ಅವರ ವಿದ್ವತ್ತಿನ ವಿಸ್ತಾರ, ಪ್ರತಿಭೆಯ ಎತ್ತರ ಗೊತ್ತಾಗಿಬಿಡುತ್ತಿತ್ತು.

ಸುಜನಾ, ಕುವೆಂಪು ಅವರ ನೇರಶಿಷ್ಯರು. ಅಷ್ಟು ಮಾತ್ರವೇ ಅಲ್ಲ, ಕುವೆಂಪು ಚಿದ್ವಲಯಕ್ಕೆ ಸೇರಿದ್ದ ವಿರಳರಲ್ಲಿ ಒಬ್ಬರು. ಹಾಗೆಯೇ ಸುಜನಾ ಅವರಿಗೂ ತಮ್ಮ ಗುರುಗಳಲ್ಲಿ ಅಗಾಧ ಭಕ್ತಿ. ಆರಾಧ್ಯಭಾವ. ಕುವೆಂಪು ಬದುಕಿದ್ದಾಗ ಅದೆಷ್ಟೊ ಸಂಜೆಗಳಲ್ಲಿ ಅವರ ಮನೆಗೆ ಸುಜನಾ ನಡೆದುಕೊಂಡೇ ಹೋಗುತ್ತಿದ್ದುದನ್ನು ನಾನು ನೋಡುತ್ತಿದ್ದೆ (ನನ್ನ ಮಾವನವರ ಮನೆ ಸುಜನಾ ಮನೆಗೆ ನಾಲ್ಕೈದು ಮನೆಗಳಷ್ಟು ಅಂತರವಷ್ಟೇ). ಹಾಗೆ ಹೋಗುವಾಗ ಅವರು ತಮ್ಮ ಎರಡೂ ಕೈಗಳನ್ನು ಎದೆಯ ಮೇಲಿಟ್ಟುಕೊಂಡು- ನಮಸ್ಕಾರ ಭಂಗಿಯಲ್ಲಿ- ಮೌನವಾಗಿ, ಗಂಭೀರವಾಗಿ ನಡೆದುಹೋಗುತ್ತಿದ್ದರು. ಯಾಕೆಂದರೆ ಕುವೆಂಪು ಮನೆ ಅವರಿಗೆ ಗುರುಮಂದಿರ, ಅದೇ ದೇವಸ್ಥಾನ- ಅದೊಂದು ತಲೆಮಾರು!

ಅವರು ನನಗೊಮ್ಮೆ ಹೇಳಿದ್ದರು- ‘ಈ ಗೋಕುಲಂ ರಸ್ತೆ ನನಗೆ ರಸ್ತೆಯಲ್ಲ, ಅದು ಗುರುಮಂದಿರದ ದಾರಿ. ಕೃಷ್ಣಾ, ನಾನು ಎಂಥ ಅನಿವಾರ್ಯತೆಯಲ್ಲಿಯೂ ಮೈಸೂರಿನ ರಸ್ತೆಗಳ ಮೇಲೆ ಉಗುಳುವುದಿಲ್ಲ. ಯಾಕೆಂದರೆ ಇವೆಲ್ಲ ನನ್ನ ಗುರುಗಳು ವಾಕಿಂಗ್ ಮಾಡಿದ ರಸ್ತೆಗಳು!’.

ಕುವೆಂಪು ಅವರ ಅಂಧಭಕ್ತರಲ್ಲ ಸುಜನಾ. ಅವರ ಸಾಹಿತ್ಯವನ್ನು ತಲರ್ಸ³ಯಾಗಿ, ವಿಶ್ಲೇಷಣಾತ್ಮಕವಾಗಿ, ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದ್ದರು. ಕುವೆಂಪು ಸಾಹಿತ್ಯ, ವ್ಯಕ್ತಿತ್ವದ ಬಗ್ಗೆ ಸುಜನಾ ಬರೆದಿರುವ ‘ಪರಂಪರೆ ಮತ್ತು ಕುವೆಂಪು’ ಎಂಬ ಸುದೀರ್ಘ ಲೇಖನ ಇವತ್ತಿಗೂ ಕುವೆಂಪು ಸಾಹಿತ್ಯದ ಅಧ್ಯಯನ ಮಾಡುವವರು ಓದಲೇಬೇಕಾದ ಪ್ರಬಂಧ. ಕುವೆಂಪು, ಬೇಂದ್ರೆ ಮತ್ತು ಪುತಿನ ನವೋದಯ ಸಂದರ್ಭದಲ್ಲಿ ಸುಜನಾ ಅವರ ಅಚ್ಚುಮೆಚ್ಚಿನ ಕವಿಗಳು. ಆ ಕವಿಗಳ ಕಾವ್ಯದರ್ಶನವನ್ನು ಕುರಿತು ಸುಜನಾ ಅವರಷ್ಟು ಅಧಿಕಾರಯುತವಾಗಿ ಮಾತಾಡಬಲ್ಲವರು ಆ ಕಾಲದಲ್ಲೂ ಬಹಳ ಮಂದಿ ಇರಲಿಲ್ಲ.

ಸುಜನಾ ಅಧ್ಯಯನದ ವ್ಯಾಪ್ತಿ, ಪ್ರತಿಭೆಯ ಬೀಸು ಗೊತ್ತಿರುವವರಿಗೆ ಅವರು ಬರೆದದ್ದು ಕಡಿಮೆಯೇ ಅನ್ನಿಸುತ್ತದೆ. 1960ರ ದಶಕದಲ್ಲಿ ಅವರು ಪ್ರಕಟಿಸಿದ ‘ಹೃದಯ ಸಂವಾದ’ ಎಂಬ ವಿಮರ್ಶಾಕೃತಿ ವಿಮರ್ಶೆಯ ಸಾಧ್ಯತೆಗಳನ್ನೇ ವಿಸ್ತರಿಸಿದ ಒಂದು ಗಂಭೀರ ಪ್ರಯತ್ನ. ಇವತ್ತಿಗೂ ಯಾರಾದರೊಬ್ಬ ವಿಮರ್ಶೆಯ ವಿದ್ಯಾರ್ಥಿ ಅವರ ಹೃದಯ ಸಂವಾದವನ್ನು ಓದದಿದ್ದರೆ ಅವನ ಓದು ಅಪೂರ್ಣವೆಂದೇ ಅರ್ಥ. ‘ಜನಪದ ಸಾಹಿತ್ಯದಲ್ಲಿ ರಾಗೀಕಲ್ಲು’, ‘ಮಹಾಭಾರತದಲ್ಲಿ- ಅವರು ಯಾರೂ ಕಾಯಲಿಲ್ಲ’ ಎಂಬಂಥ ಪ್ರಬಂಧಗಳನ್ನು ಓದದಿದ್ದರೆ ಅದು ಕನ್ನಡದ ಓದುಗನಿಗಾಗುವ ಬಹುದೊಡ್ಡ ನಷ್ಟ. ಹಾಗೆಯೇ ‘ನಾಣ್ಯಯಾತ್ರೆ’, ‘ಒಂದೆ ಸೂರಡಿಯಲ್ಲಿ’ ಎಂಬ ಅವರ ಕವನ ಸಂಕಲನಗಳು, ‘ಇಬ್ಬನಿ ಆರತಿ’ ಎಂಬ ವಚನಗಳ ಸಂಕಲನ ನಾವು ಓದಲೇಬೇಕಾದ ಪುಸ್ತಕಗಳು. ಭಾರತ, ಭಾಗವತಗಳನ್ನು ತುಂಬಾ ಆಳವಾಗಿ ಅಧ್ಯಯನ ಮಾಡಿದ್ದ ಸುಜನಾ ಬದುಕಿನ ಸಾಹಿತ್ಯ ತಪಸ್ಸಿನ ಫಲಿತಕೃತಿ ಅವರ ಮಹಾಕಾವ್ಯ ‘ಯುಗಸಂಧ್ಯಾ’- ಅದು ಮಹಾಭಾರತ ಯುದ್ಧಾನಂತರ ನಡೆದಿರಬಹುದಾದ ಘಟನೆಗಳನ್ನು ಕವಿ ಕಲ್ಪಿಸಿಕೊಂಡು ಬರೆದಿರುವ ಸೃಜನಾತ್ಮಕ ಕೃತಿ.

ನಿಜವಾಗಿ ನಾನು ಈ ಲೇಖನ ಬರೆಯಲು ಆರಂಭಿಸಿದ್ದು ಸುಜನಾ ಸಾಹಿತ್ಯದ ಪರಿಚಯ ಮಾಡುವುದಕ್ಕಾಗಿ ಅಲ್ಲ. ನನ್ನ ನೆನಪಿನಲ್ಲಿ ಅಳಿಯದೆ ನಿಂತಿರುವ ಅವರಾಡಿದ, ನಾನು ಕೇಳಿದ ಮಾತುಗಳನ್ನು ಹೇಳುವುದಕ್ಕಾಗಿ. ಹಿಂದೆಯೇ ಹೇಳಿದೆ, ಸುಜನಾ ಮಾತಾಡುತ್ತಿದ್ದುದೇ ರೂಪಕ, ಪ್ರತಿಮೆಗಳಲ್ಲಿ.

ಅವರ ಪ್ರೀತಿಯ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬ. ಅದೊಂದು ವಾತ್ಸಲ್ಯದಿಂದ, ಕಕ್ಕುಲಾತಿಯಿಂದ, ಆರ್ದ್ರ ದನಿಯಿಂದ ನನ್ನನ್ನು ‘ಕೃಷ್ಣಾ…’ ಅಂತ ಕರೆಯುತ್ತಿದ್ದರು. ಕೈಗೆ ಸಿಕ್ಕಾಗ ಪ್ರೀತಿಯಿಂದ- ಸ್ವಲ್ಪ ಜೋರಾಗಿಯೇ- ನನ್ನ ಬೆನ್ನಿಗೆ ಒಂದೆರಡು ಗುದ್ದು ಕೊಡುತ್ತಿದ್ದರು. ಅವರು ನಿವೃತ್ತರಾದ ನಂತರವೂ ಅವರ ಮಾತು ಕೇಳುವುದಕ್ಕೆಂದೇ ನಾನವರ ಮನೆಗೆ ಹೋಗಿ ಕೂರುತ್ತಿದ್ದೆ. ಗಂಟೆಗಟ್ಟಲೆ ಮಾತಾಡುತ್ತಿದ್ದರು ಸುಜನಾ. ಸಾಹಿತ್ಯ-ಸಂಸ್ಕೃತಿ ವಿಷಯಗಳನ್ನು ಬಿಟ್ಟರೆ ಬೇರಾವ ಮಾತಾಡುವುದಕ್ಕೂ ಅವರಿಗೆ ತಿಳಿಯುತ್ತಿರಲಿಲ್ಲ. ಅವರದೊಂದು ಬಗೆಯ ಋಷಿಜೀವನ.

ಸುಜನಾ ನಿವೃತ್ತರಾದ ನಂತರ ಹತ್ತಾರು ವರ್ಷ ಕಾಲ ರ್ಪಾನ್​ಸನ್ ಕಾಯಿಲೆಯಿಂದ ನರಳಿದರು. ಕೊನೆಕೊನೆಯಲ್ಲಿ ಅವರ ಮಾತು, ನೆನಪು ಎಲ್ಲವೂ ಅಸ್ಪಷ್ಟವಾಯಿತು. ಆದರೂ ದೊಡ್ಡ ಅಚ್ಚರಿಯೆಂದರೆ, ಅವರು ಎಂದೂ ನಿರಾಶಾವಾದಿಗಳಾಗಿರಲಿಲ್ಲ. ಈ ಬದುಕು, ಈ ಕಾಲ ಎಲ್ಲವೂ ಒಳ್ಳೆಯದೇ ಎಂದು ಅವರು ವಾದಿಸುತ್ತಿದ್ದರು. ಅವರೊಂದಿಗೆ ಮಾತಾಡುವುದೇ- ಹೇಳಿದೆನಲ್ಲ! ಅದೊಂದು ದಿವ್ಯವಾದ ಅನುಭೂತಿ.

ಒಮ್ಮೆ ಒಬ್ಬ ವಿದ್ಯಾರ್ಥಿ ಕ್ಲಾಸಿನಲ್ಲಿ ಏನೋ ಒಂದು ಹೇಳಿ, ತಾನು ಹೇಳಿದ್ದೇ ಸರಿ ಅಂತ ವಾದಿಸಿದ. ಅದಕ್ಕೆ ಸುಜನಾ ಹೇಳಿದ್ದು ಹೀಗೆ- ‘ರೈಲ್ವೆ ಸ್ಟೇಷನ್​ನಲ್ಲಿ ನಿಂತಿರುವ ರೈಲಿನಲ್ಲಿ ಕೂತಿರುವವನಿಗೆ ತನ್ನ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಹೋಗುವಾಗ, ತನ್ನ ರೈಲೇ ಹೋಗುತ್ತಿದೆ, ಪಕ್ಕದ ರೈಲು ನಿಂತಿದೆ ಅನ್ನುವ ಭ್ರಮೆ ಬರುತ್ತದೆ. ಆ ರೈಲು ಪೂರ್ತಾ ಹೋಗುವವರೆಗೂ ತನ್ನ ರೈಲು ನಿಂತಿದೆ ಅನ್ನುವುದು ಅವನಿಗೆ ಅರಿವಾಗುವುದಿಲ್ಲ. ಹಾಗೆ ಕಣೋ ಅಣ್ಣಾ ನೀನು, ಪಕ್ಕದ ರೈಲು ಹೋಗಲಿ ತಡಿ, ನಿನ್ನ ರೈಲು ನಿಂತಿದೆ ಅಂತ ನಿನಗೇ ಗೊತ್ತಾಗುತ್ತೆ’.

ಇನ್ನೊಂದು ಸಂದರ್ಭದಲ್ಲಿ ಅವರು ಹೇಳಿದ ಮಾತು- ‘ನೀನೇ ಹೊತ್ತುತಂದ ಸೌದೆ ಇರಬಹುದು. ಆದರೆ ಅದಕ್ಕೆ ಉರಿ ಹತ್ತಿರುವಾಗ ನೀನು ಎಚ್ಚರವಾಗಿರಬೇಕು. ಹಾಗೆಯೇ ನೀನೇ ಎತ್ತಿತಂದು ಕೂರಿಸಿದವನಿರಬಹುದು. ಆದರೆ ಅವನು ಅಧಿಕಾರದಲ್ಲಿರುವಾಗ ನೀನು ಎಚ್ಚರವಾಗಿರಬೇಕು‘.

ನಮ್ಮ ಮಾತಿನ ಮಧ್ಯೆ ಅವರೊಮ್ಮೆ ಹೇಳಿದ್ದು- ‘ನನ್ನದು ಹಕ್ಕಿಯ ನಿಟ್ಟುಸಿರು, ಮೀನಿನ ಕಣ್ಣೀರು ಕಣೋ ಕೃಷ್ಣಾ! ಯಾರಿಗೆ ಗೊತ್ತಾಗುತ್ತೆ?’.

ಡಾ. ವೈ.ಪಿ. ರುದ್ರಪ್ಪನವರು ಕುಲಪತಿಯಾಗಿದ್ದಾಗ ಸುಜನಾ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ (ರಿಜಿಸ್ಟ್ರಾರ್)ರಾಗಿದ್ದರು. ಆದರೆ ಕುಲಪತಿಯವರೊಂದಿಗೆ ಯಾತಕ್ಕೋ ಭಿನ್ನಾಭಿಪ್ರಾಯ ಬಂದು ಕುಲಸಚಿವ ಹುದ್ದೆಗೆ ರಾಜೀನಾಮೆ ಕೊಟ್ಟು ಯುವರಾಜಾ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಗೆ ವಾಪಸಾದರು. ಆಗ ಅವರ ರಾಜೀನಾಮೆ ಪತ್ರದಲ್ಲಿ ಬರೆದಿದ್ದ ಒಂದು ವಾಕ್ಯ- ‘ನನಗೆ ತಲೆಯನ್ನು ಮಾರಿ ಕಿರೀಟ ಕೊಂಡುಕೊಳ್ಳುವ ಅಗತ್ಯವಿಲ್ಲ’.

ಡಾ. ಹಾ.ಮಾ. ನಾಯಕರು ಹಠಾತ್ತನೆ ತೀರಿಕೊಂಡಾಗ ಅವರ ಮಗ್ಗಲುಮನೆಯಲ್ಲೇ ವಾಸಿಸುತ್ತಿದ್ದ ಸುಜನಾ ನೋಡಲು ಬಂದರು. ಆ ಹೊತ್ತಿಗೆ ಸುಜನಾ ಕೂಡ ತೀವ್ರ ಅನಾರೋಗ್ಯದಲ್ಲಿದ್ದರು. ಅವರ ಕೈಹಿಡಿದುಕೊಂಡು ನಾನೇ ಶವದ ಬಳಿ ಕರೆದೊಯ್ದೆ. ಆಗ ಸುಜನಾ, ಹಾಮಾನಾ ಅವರ ತುಂಬು ಗಲ್ಲಗಳನ್ನು ಸವರುತ್ತಾ, ‘ಧೀರ, ಧೀರ, ಧೀರ ಮಾನಪ್ಪಾ ನೀನು! ಸ್ವಚ್ಛ, ನೇರ ಬದುಕು ನಡೆಸಿದ ಮಹಾನುಭಾವ ಮಾನಪ್ಪಾ, ಧೀರ, ಧೀರ ನೀನು. ನಿನ್ನ ಹೆಸರು ಹೇಳಿದವರಿಗೂ ದೈನ್ಯ ಬರುವುದಿಲ್ಲ….’. ಹಾಗೆ ಮಾತಾಡಿ ಒಂದಿಷ್ಟು ಕಣ್ಣೀರು ಹಾಕಿ ನನ್ನ ಕಡೆಗೆ ತಿರುಗಿ ಹೇಳಿದರು- ‘ಸಾವಿನ ಕಾಗದ ತಪು್ಪ ಅಡ್ರಸ್ಸಿಗೆ ಬಂದಿದೆ ಕಣೋ ಕೃಷ್ಣಾ…. ಅಥವಾ ನನ್ನ ಕಾಗದವನ್ನು ಯಾವನೋ ಮಾನಪ್ಪನ ಮನೆಗೆ ಎಸೆದುಹೋಗಿರಬೇಕು!’.

ಹೇಳಿದೆನಲ್ಲ?! ಸುಜನಾ ಅವರ ಮಾತೇ ಹೀಗೆ. ಅವರ ಮಾತಿಗಿಂತಲೂ ಘನವಾದುದು ಅವರ ಬದುಕು. ತಮಗೆ ದೇವರಾಜ ಅರಸು ಪ್ರಶಸ್ತಿ ಬಂದಾಗ ಸುಜನಾ ಪ್ರತಿಕ್ರಿಯಿಸಿದ್ದು ಹೀಗೆ- ‘ಇಷ್ಟು ದೊಡ್ಡ ಮೊತ್ತದ ಪ್ರಶಸ್ತಿ ನನಗೆ ಭಯ ಹುಟ್ಟಿಸುತ್ತಿದೆ. ಈ ಪ್ರಶಸ್ತಿಗಳು ಮಳೆ ಬಂದ ಹಾಗೆ. ಎಷ್ಟೋ ಗಿಡಮರಗಳು ಅದರಿಂದ ಬೆಳೆಯುತ್ತವೆ. ಆದರೆ ನಾನು ಅವರೆಯ ಹೂವು. ದೊಡ್ಡ ಮಳೆ ಬಿದ್ದರೆ ಉದುರಿಹೋಗುತ್ತೇನೆ. ಫಲ ಕಚ್ಚುವುದು ಎಲ್ಲಿಂದ?’.

ಅದೊಂದು ದೊಡ್ಡ ಆದರ್ಶದ ಬದುಕು. ಸುಜನಾ ಒಂದಿಷ್ಟೂ ಹಣ ಸಂಪಾದಿಸಲಿಲ್ಲ. ಬಂದ ಹಣವನ್ನೂ ಇಟ್ಟುಕೊಳ್ಳಲಿಲ್ಲ. ದೇವರಾಜ ಅರಸು ಪ್ರಶಸ್ತಿಯಿಂದ ಬಂದ- ಆ ಕಾಲದ- ಎರಡು ಲಕ್ಷ ರೂಪಾಯಿಗಳನ್ನು ತನ್ನೂರ ಶಾಲೆಗೆ ಕೊಟ್ಟುಬಂದರು (ಆಗ ಅವರಿಗೆ ನಿಜಕ್ಕೂ ಹಣದ ಅಗತ್ಯ ಇತ್ತು, ಆದರೂ…).

ಅವರು ಮೇಷ್ಟ್ರು ಮಾತ್ರವಲ್ಲ, ‘ಗುರು’ ಅನ್ನುತ್ತಾರಲ್ಲ, ಆ ಪರಂಪರೆಯವರು, ಆ ಪರಂಪರೆಯ ಕೊನೆಕೊನೆಯ ಕೊಂಡಿ. ನಾನವರ ಶಿಷ್ಯನಾಗಿದ್ದೆ ಎಂಬ ಧನ್ಯತೆ ನನ್ನದು. ಅವರ ನೆನಪಾದಾಗ ಅದೆಷ್ಟೋ ಬಾರಿ ಶಿರಬಾಗಿ ಕೈಮುಗಿದುಬಿಡುತ್ತೇನೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

 

Leave a Reply

Your email address will not be published. Required fields are marked *

Back To Top