Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ನಂಜುಂಡಿ ಕಲ್ಯಾಣದ ಸಂಭ್ರಮ ಮತ್ತು ವಿಷಾದ..

Friday, 16.03.2018, 3:02 AM       No Comments

ಒಂದೇ ಒಂದು ವರ್ಷ ಕಳೆದರೆ ’ನಂಜುಂಡಿ ಕಲ್ಯಾಣ’ ಚಿತ್ರಕ್ಕೆ ಭರ್ತಿ 30 ವರ್ಷ! 1989ರಲ್ಲಿ ತೆರೆ ಕಂಡು ದಿಗ್ವಿಜಯ ಸಾಧಿಸಿದ ಈ ಚಿತ್ರ ವರನಟ ಡಾ.ರಾಜಕುಮಾರ್ ಕುಟುಂಬದ ಕಿರೀಟಕ್ಕೊಂದು ಸುವರ್ಣ ಗರಿ! ಬೆಂಗಳೂರಿನ ಸ್ಟೇಟ್ಸ್ (ಈಗಿನ ’ಭೂಮಿಕಾ’) ಚಿತ್ರಮಂದಿರದಲ್ಲಿ ಸತತ ಒಂದು ವರ್ಷ ಪ್ರದರ್ಶಿತವಾದದ್ದಲ್ಲದೆ, ಕನ್ನಡ ಚಿತ್ರರಂಗದ ಆಗಿನ 50 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ 30 ಕೇಂದ್ರಗಳಲ್ಲಿ ರಜತೋತ್ಸವ ಆಚರಿಸಿ ಸಂಭ್ರಮಿಸಿತು. ವಿಶೇಷವೆಂದರೆ, ಈ ಚಿತ್ರದ ಅದ್ಭುತ ಯಶಸ್ಸಿಗೆ ಕಾರಣವೇನು ಎನ್ನುವುದರ ಬಗ್ಗೆ ವರ್ಷಗಟ್ಟಲೇ ಚರ್ಚೆಯಾದದ್ದು ಕೂಡ ಒಂದು ದಾಖಲೆಯಾಗಿಯೇ ಉಳಿಯಿತು!

ಕ್ಷುಲ್ಲಕ ಮನಸ್ತಾಪದ ಕಾರಣಕ್ಕೆ ತಂದೆ ಮತ್ತು ಮಾವನ ನಡುವಿನ ಸಂಬಂಧ ಕಡಿದು ಹೋದಾಗ, ಮಾವನ ಮಗಳನ್ನು ಮದುವೆಯಾದ ನಾಯಕ ಆಕೆಯ ಮನಸ್ಸನ್ನು ಗೆದ್ದು ಅವರಿಬ್ಬರ ಸಂಬಂಧಕ್ಕೆ ಬೆಸುಗೆ ಹಾಕುವುದೇ ಈ ಚಿತ್ರದ ಒನ್​ಲೈನ್ ಸ್ಟೋರಿ! ಇಂಥ ಕಥೆಯ ಚಿತ್ರಗಳು ಬೇರೆ ಬೇರೆ ಭಾಷೆಗಳಲ್ಲಿ, ಬೇರೆ ಬೇರೆ ಸೀಜನ್ನುಗಳಲ್ಲಿ ತೆರೆಕಂಡು ಜನಮನ ಸೂರೆಗೊಂಡಿದ್ದರೂ ಅದೆಲ್ಲವನ್ನೂ ಮೀರಿ ’ನಂಜುಂಡಿ ಕಲ್ಯಾಣ’ ಚಿತ್ರ ಬೇರೆಯದ್ದೇ ಆದ ಇತಿಹಾಸ ಸೃಷ್ಟಿಸಿದ್ದು ಮಾತ್ರ ಅಚ್ಚರಿಯ ವಿಚಾರ!

ಈ ಚಿತ್ರದ ನಾಯಕ; ರಾಘವೇಂದ್ರ ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಆಯ್ಕೆ ಮಾಡಿದ ಮಾಲಾಶ್ರೀ ಈ ಚಿತ್ರದ ನಾಯಕಿ. ತೆಲುಗು ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಅವರ ಮೂಲ ಹೆಸರು ಶ್ರೀದುರ್ಗಾ. ಯಾವಾಗ ಪಾರ್ವತಮ್ಮನವರ ಕಣ್ಣಿಗೆ ಬಿದ್ದರೋ ಅವರ ಅದೃಷ್ಟ ಖುಲಾಯಿಸಿಬಿಟ್ಟಿತು! ‘ಮಾಲಾಶ್ರೀ’ನಾಮಕರಣದೊಂದಿಗೆ ’ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ ಪಾತ್ರ ಮಾಡಿದ್ದೇ ತಡ, ಅಖಂಡ 10 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಅನಭಿಷಿಕ್ತ ನಾಯಕಿಯಾಗಿ ಮೆರೆವ ಯೋಗ ಕೂಡಿ ಬಂತು. ನಾಯಕನ ಮಗಳಾಗಿ ನಟಿಸಿದ ಮಾಲಾಶ್ರೀ ದುರಹಂಕಾರದ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು! ಅದರಲ್ಲೂ ಮಾಲಾಶ್ರೀ ನಟಿಸಿದ ಗುಂಡಿನ ಹಾಡು ಲೋಕಪ್ರಿಯವಾಯಿತು! ಇಂದಿಗೂ ಈ ಹಾಡಿಗೆ ಅದೇ ಬೇಡಿಕೆಯಿದೆ ಎನ್ನುವುದು ಆ ಹಾಡು ಬೀರಿದ ಪ್ರಭಾವಕ್ಕೆ ಸಾಕ್ಷಿ! ನಂತರದ ದಿನಗಳಲ್ಲೂ ಇದೇ ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಯಿತು. ಈ ಎರಡೂ ಹಾಡುಗಳಿಗೆ ಧ್ವನಿ ನೀಡಿದವರು ಗಾಯಕಿ ಮಂಜುಳಾ ಗುರುರಾಜ್. ಈ ಗಾಯಕಿ ಕೂಡ ಪಾರ್ವತಮ್ಮನವರ ಆಯ್ಕೆಯೇ!

‘ನಂಜುಂಡಿ ಕಲ್ಯಾಣ’ದ ನಂತರ ಮಾಲಾಶ್ರೀ ಅವರನ್ನು ’ಗುಂಡಿನ ನಾಯಕಿ’ ಎಂದೂ ಮಂಜುಳಾ ಅವರನ್ನು ‘ಗುಂಡಿನ ಗಾಯಕಿ’ ಎಂದೂ ಬ್ರಾ್ಯಂಡ್ ಮಾಡಲಾಯಿತು! ಮಂಜುಳಾ ಅವರಂತೂ ಎಸ್. ಜಾನಕಿ, ಪಿ.ಸುಶೀಲಾ ರೇಂಜ್​ಗೆ ಬೆಳೆದು ಬಿಟ್ಟರು! ಗೀತಾರಚನಕಾರ ಭಂಗೀರಂಗ ಅವರಿಗೂ ಡಿಮಾಂಡ್ ಏರಿತು. ಕೊನೆಕೊನೆಗೆ ಮಂದಿ ಇವರನ್ನು ’ಗುಂಡು ಮಾಸ್ಟರ್’ ಎಂದೇ ಕರೆಯ ತೊಡಗಿದರು! ಹೀಗಾಗಿ ಅವರು ತಮ್ಮ ಹೆಸರನ್ನೇ ಬದಲಾಯಿಸಿಕೊಳ್ಳುವಂಥ ಪರಿಸ್ಥಿತಿ ಬಂತು! ಸಂಗೀತ ನಿರ್ದೇಶಕ ಉಪೇಂದ್ರಕುಮಾರ್ ಅವರ ಖ್ಯಾತಿ ಸಹ ಎತ್ತರಕ್ಕೆ ಹೋಗಲು ಕಾರಣವಾದ ಚಿತ್ರವಿದು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಉಪೇಂದ್ರಕುಮಾರ್ ಅವರಿಗೆ 1988-89ರ ಸಾಲಿನ ರಾಜ್ಯ ಪ್ರಶಸ್ತಿ ಸಂದಾಯವಾಯಿತು.

ಈ ಚಿತ್ರದ ನಿರ್ದೇಶಕ ಎಂ.ಎಸ್.ರಾಜಶೇಖರ್ ಅವರ ಬಗ್ಗೆ ನಾಲ್ಕು ಮಾತು ಬರೆಯಲೇ ಬೇಕು; ಖ್ಯಾತ ಮೇಕಪ್ ಕಲಾವಿದ ಎಂ.ಎಸ್. ಸುಬ್ಬಣ್ಣ ಅವರ ಪುತ್ರರಾದ ರಾಜಶೇಖರ್ ಸಹಾಯಕ ನಿರ್ದೇಶಕರಾಗಿದ್ದವರು. ರಾಜಕುಮಾರ್ ತಂಡದಲ್ಲಿದ್ದ ರಾಜಶೇಖರ್​ಗೆ ಅದೃಷ್ಟ ಕೂಡಿ ಬಂದದ್ದು 17 ವರ್ಷಗಳ ಪರಿಣತಿಯ ನಂತರ! ಇವರು ನಿರ್ದೇಶಿಸಿದ ಮೊದಲ ಚಿತ್ರ ಡಾ.ರಾಜಕುಮಾರ್ ಅಭಿನಯದ ‘ಧ್ರುವತಾರೆ’. ಆ ನಂತರ ಹಿಂದಿರುಗಿ ನೋಡದ ರಾಜಶೇಖರ್ ಸತತವಾಗಿ ‘ಅನುರಾಗ ಅರಳಿತು’, ‘ರಥಸಪ್ತಮಿ’, ‘ಮನ ಮೆಚ್ಚಿದ ಹುಡುಗಿ’, ‘ಹೃದಯ ಹಾಡಿತು’, ‘ಕಲ್ಯಾಣ ರೇಖೆ’, ‘ಮಣ್ಣಿನ ದೋಣಿ’, ‘ಗಂಡು ಸಿಡಿಗುಂಡು’… ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ ’ಧ್ರುವತಾರೆ’ ಚಿತ್ರಕ್ಕೆ 1985-86ನೇ ಸಾಲಿನ ದ್ವಿತೀಯ ಉತ್ತಮ ಚಿತ್ರ ರಾಜ್ಯ ಪ್ರಶಸ್ತಿ ಲಭ್ಯವಾಯಿತು. ಇಂಥ ಜನಪ್ರಿಯ ನಿರ್ದೇಶಕ ಎಂ.ಎಸ್.ರಾಜಶೇಖರ್ ನಿರ್ದೇಶಿಸಿದ ಚಿತ್ರವೇ ‘ನಂಜುಂಡಿ ಕಲ್ಯಾಣ’!

ಒಂದು ಸಂಭ್ರಮದ ಬೆನ್ನ ಹಿಂದೆಯೇ ಒಂದು ವಿಷಾದದ ಘಟನೆ ನಡೆದಿರುತ್ತದೆ. ಇದು ನಡೆದದ್ದು ‘ನಂಜುಂಡಿ ಕಲ್ಯಾಣ’ ಚಿತ್ರದ ಶತದಿನ ಸಮಾರಂಭದಂದು. ಎಲ್ಲವೂ ಸಿದ್ಧವಾಗಿತ್ತು. ಅದೊಂದು ಅಪರೂಪದ ಸಂಭ್ರಮ. ‘ನಂಜುಂಡಿ ಕಲ್ಯಾಣ’ ಚಿತ್ರ ಈ ಮಟ್ಟದ ಯಶಸ್ಸು ಪಡೆಯುತ್ತದೆ ಎಂಬ ಸಣ್ಣ ಸುಳಿವೂ ಚಿತ್ರತಂಡಕ್ಕಿರಲಿಲ್ಲ. ಚೌಡಯ್ಯ ಸ್ಮಾರಕ ಭವನದ ಸಿಂಗಾರವೇ ಹಾಗಿತ್ತು. ಹಿಂದಿನ ರಾತ್ರಿ ಪೂರ್ತಿ ಚಿತ್ರತಂಡ ಹೂವಿನ ಅಲಂಕಾರ ಮಾಡಿ ಮಾರನೇ ಮುಂಜಾವಿನ ಸಮಾರಂಭಕ್ಕೆ ರೆಡಿಯಾಗಿತ್ತು. ಅಷ್ಟರಲ್ಲೇ ಬಂತಲ್ಲ ಸಿಡಿಲಬ್ಬರದ ಸುದ್ದಿ!

ಸಮಾರಂಭದಲ್ಲಿ ಭಾಗವಹಿಸಲೆಂದು ಹಿಂದಿನ ರಾತ್ರಿ ಕಾರಿನಲ್ಲಿ ಹೊರಟಿದ್ದ ಚಿ.ಉದಯಶಂಕರ್ ಅವರ ಕಿರಿಯ ಪುತ್ರ ರವಿಶಂಕರ್ ಮಾರ್ಗಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀರಿಕೊಂಡ ವಿಷಾದಪೂರಿತ ಸುದ್ದಿಯದು. ಹೌದು, ‘ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ ರವಿಶಂಕರ್ ಕೂಡ ಒಂದು ಗಮನಾರ್ಹ ಪಾತ್ರ ಮಾಡಿದ್ದರು. ಶತದಿನ ಸಮಾರಂಭದಲ್ಲಿ ಭಾಗವಹಿಸಲೆಂದೇ ರವಿಶಂಕರ್, ವಿಕ್ರಮ್ ಶ್ರೀನಿವಾಸ್ ಪುತ್ರ ಮುರಳಿ ಮತ್ತಿತರ ಸ್ನೇಹಿತರು ಹಿಂದಿನ ರಾತ್ರಿಯೇ ಕಾರಿನಲ್ಲಿ ಮದರಾಸಿನಿಂದ ಹೊರಟಿದ್ದರು. 4-5 ಗಂಟೆಗಳ ರಾತ್ರಿ ಪ್ರಯಾಣದ ನಂತರ ಹೊಸಕೋಟೆ ದೊಡ್ಡಕೆರೆ ಏರಿಯಾದ ಸೇತುವೆ ಬಳಿ ಬರುತ್ತಿರುವಂತೆಯೇ ನಿದ್ದೆಗೆ ಜಾರಿದ ಚಾಲಕನಿಂದಾಗಿ ಕಾರು ನಿಯಂತ್ರಣ ತಪ್ಪಿ ಸೇತುವೆಗೆ ಬಡಿಯಿತು. ಸ್ಥಳದಲ್ಲೇ ರವಿಶಂಕರ್​ವುತ್ತು ಮುರಳಿ ದುರ್ಮರಣಕ್ಕೀಡಾದರು.

ಈ ಸುದ್ದಿ ಬೆಂಗಳೂರು ತಲುಪಿದಾಗ ಶತದಿನ ಸಮಾರಂಭವನ್ನು ರದ್ದು ಪಡಿಸಲಾಯಿತು. ಇಡೀ ಚಿತ್ರದ ಜೀವ ಜೀವಾಳವಾಗಿದ್ದ ಚಿ.ಉದಯಶಂಕರ್ ಮನೆಯಲ್ಲಿ ಅಳುತ್ತ ಕುಳಿತುಬಿಟ್ಟರು. ಮುಂದೆ ಇದೇ ಚಿತ್ರ 25 ವಾರ ಪೂರೈಸಿತು. ಆಗ ನಡೆದ ರಜತೋತ್ಸವ ಸಮಾರಂಭದಲ್ಲೂ ಚಿ. ಉದಯಶಂಕರ್ ಭಾಗವಹಿಸದೆ ಮನೆಯಲ್ಲೇ ಉಳಿದರು. ಪುತ್ರ ಶೋಕ ನಿರಂತರಂ. ಪಿತೃ ಹೃದಯ ಘಾಸಿಗೊಂಡಿತ್ತು. ನಂತರದ ದಿನಗಳಲ್ಲಿ ಬದುಕಿನಲ್ಲಿ ಆಸಕ್ತಿ ಕಳೆದುಕೊಂಡ ಉದಯಶಂಕರ್ ಒಂಟಿಯಾಗಿಯೇ ಇರಲು ಬಯಸಿದರು. ಪ್ರೀತಿಯ ಕಿರಿಯ ಪುತ್ರನ ದುರ್ಮರಣದ ಶಾಕ್​ನಿಂದ ಹೊರಬರಲಾಗದೆ ಮಂಕಾದರು. ಮತ್ತೆ ಚೇತರಿಸಿಕೊಳ್ಳದ ಕನ್ನಡ ಚಿತ್ರರಂಗದ ಈ ‘ಕಾಳಿದಾಸ’ ಇದೇ ಕೊರಗಿನಲ್ಲೇ ಇಹಲೋಕದ ವ್ಯವಹಾರ ಮುಗಿಸಿ ಹೊರಟು ಬಿಟ್ಟರು.

Leave a Reply

Your email address will not be published. Required fields are marked *

Back To Top