Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಧೂಮಮಯ ದೆಹಲಿ

Friday, 10.11.2017, 3:01 AM       No Comments

ದೆಹಲಿಯಲ್ಲಿ ಮಾಲಿನ್ಯ ತುರ್ತಪರಿಸ್ಥಿತಿ ಘೋಷಿಸಲ್ಪಟ್ಟಿದೆ! ದೇಶದ ರಾಜಧಾನಿ ಮಾಲಿನ್ಯದ ರಾಜಧಾನಿಯಾಗಿ ಮಾರ್ಪಟ್ಟಿದೆ!! ಇದರಿಂದಲೇ ತಿಳಿಯಬಹುದು ಅಲ್ಲಿನ ವಾತಾವರಣ ಎಷ್ಟು ಹದಗೆಟ್ಟಿದೆ ಎಂದು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್​ಜಿಟಿ) ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದು, ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಮತ್ತು ನಗರದೊಳಗೆ ಟ್ರಕ್​ಗಳ ಪ್ರವೇಶ ನಿಷೇಧಿಸುವಂತೆ ಸೂಚಿಸಿದೆ. ದೆಹಲಿ ಸರ್ಕಾರವು ನವೆಂಬರ್ 13-17ರವರೆಗೆ ವಾಹನ ಸಂಚಾರಕ್ಕೆ ಸಂಬಂಧಿಸಿ ಸಮ-ಬೆಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಪರಿಸ್ಥಿತಿ ಈ ಮಟ್ಟಿಗೆ ವಿಷಮವಾದಾಗ ಇಂಥ ತಾತ್ಕಾಲಿಕ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾದುದು ಅಗತ್ಯ ಮತ್ತು ಅನಿವಾರ್ಯ. ಆದರೆ ಇಂಥ ಪರಿಸ್ಥಿತಿ ಯಾವಾಗ ಬೇಕಾದರೂ ಮರುಕಳಿಸಬಹುದಾದ್ದರಿಂದ ಶಾಶ್ವತ ಪರಿಹಾರೋಪಾಯ ಕ್ರಮಗಳತ್ತ ಆಲೋಚಿಸಲು ಇದು ಸಕಾಲ.

ಪಂಜಾಬ್, ದೆಹಲಿ ಮತ್ತು ಹರಿಯಾಣ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿ ಭೂಮಿಯ ಕೂಳೆಗೆ ಬೆಂಕಿ ಹಚ್ಚುವುದು, ವಾಹನಗಳ ಹೊಗೆ, ಧೂಳು, ಕೈಗಾರಿಕಾ ಮಾಲಿನ್ಯ ಮುಂತಾದವು ಇದಕ್ಕೆ ಕಾರಣಗಳು ಎಂದು ತಜ್ಞರು ಹೇಳುತ್ತಾರೆ. ಉಸಿರಾಟಕ್ಕೆ ಸಮಸ್ಯೆ, ಗಂಟಲು ಸೋಂಕು, ಕೆಮ್ಮು, ಕಣ್ಣಿನ ಸಮಸ್ಯೆ, ಹೃದ್ರೋಗದ ಅಪಾಯ ಮುಂತಾದವು ಈ ಪರಿಸ್ಥಿತಿಯಿಂದ ಉಂಟಾಗಬಹುದಾದ ತೊಂದರೆಗಳು. ದಟ್ಟ ಮಂಜು ಮುಸುಕಿದಂತಾಗುವುದು (ಫಾಗ್) ಮತ್ತು ಧೂಮ ಹಿಮ (ಸ್ಮಾಗ್) ನಡುವೆ ವ್ಯತ್ಯಾಸವಿದೆ. ದಟ್ಟ ಮಂಜಿನಿಂದ ಸ್ವಲ್ಪ ಕಾಣಿಸದಂತಾಗುತ್ತದೆ. ಆದರೆ ಮಾಲಿನ್ಯ ಮಿತಿಮೀರಿದಾಗ ನೈಟ್ರೋಜನ್ ಆಕ್ಸೆ ೖಡ್, ಧೂಳು ಇತ್ಯಾದಿ ಸೂರ್ಯಕಿರಣದ ಜತೆ ಸೇರಿ ನೆಲಮಟ್ಟದ ಪದರವೊಂದು ಸೃಷ್ಟಿಯಾಗುತ್ತದೆ. ಇದರಿಂದ ಎದುರಿಗಿದ್ದ ವಸ್ತುವೂ ಕಾಣಿಸದಂತಾಗುತ್ತದೆ. ಹೀಗಾಗಿಯೇ ದೆಹಲಿ ಹೈವೇಯಲ್ಲಿ ಅನೇಕ ವಾಹನಗಳು ಡಿಕ್ಕಿಯಾಗಿರುವುದು. ಕೆಲವು ತಜ್ಞರು ಹೇಳುವ ಪ್ರಕಾರ, ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕೃಷಿ ಭೂಮಿಯಲ್ಲಿ ಕೊಳೆಗೆ ಬೆಂಕಿಹಚ್ಚುವ ಪರಿಪಾಠ ಬಿಡದಿದ್ದರೆ ಈ ಸ್ಮಾಗ್ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಕಷ್ಟ. ಅಲ್ಲಿನ ರೈತರು ಬಹುವರ್ಷಗಳಿಂದ ಇಂಥ ರೂಢಿ ಅನುಸರಿಸಿಕೊಂಡು ಬಂದಿದ್ದು, ಪರ್ಯಾಯ ವಿಧಾನ ಅನುಸರಿಸುವಂತೆ ಅವರ ಮನವೊಲಿಸಿ ಈ ವಿಧಾನದಿಂದ ವಿಮುಖರನ್ನಾಗಿಸಲು ಯತ್ನಿಸಬೇಕಾಗುತ್ತದೆ.

ಮಾಲಿನ್ಯಕ್ಕೂ ಈ ಧೂಮ ಹಿಮಕ್ಕೂ ವ್ಯತ್ಯಾಸ ಇದೆಯಾದರೂ, ಮಾಲಿನ್ಯ ಮಾಲಿನ್ಯವೇ. ಮತ್ತು ಇಂಥ ಮಾಲಿನ್ಯ ದೆಹಲಿಗೆ ಮಾತ್ರ ಸೀಮಿತವೂ ಅಲ್ಲ. ಇಲ್ಲೇ ನಮ್ಮ ಬೆಂಗಳೂರಿನಲ್ಲಿ ಎಷ್ಟು ಮಾಲಿನ್ಯವಿದೆ ಎಂಬುದು ಇಲ್ಲಿನ ನಿವಾಸಿಗಳಿಗೆ ಚೆನ್ನಾಗಿ ಅನುಭವಕ್ಕೆ ಬಂದಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಬೆಂಗಳೂರಲ್ಲಿ ಮಾಲಿನ್ಯ ಮಟ್ಟ ಎಂ3 ಮಾನದಂಡದನ್ವಯ 60 ಇರಬೇಕಾದುದು 100ರ ಗಡಿ ದಾಟಿದೆ. ಕ್ರಮಬದ್ಧವಲ್ಲದ ನಗರಯೋಜನಾ ನೀತಿ, ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು, ದಿನೇದಿನೇ ಹೆಚ್ಚುವ ವಾಹನಗಳು, ರಸ್ತೆಗಳನ್ನು ಸರಿಯಾಗಿ ನಿರ್ವಹಿಸದಿರುವುದು, ಅನಿರ್ಬಂಧಿತ ಬೆಳವಣಿಗೆ ಹೀಗೆ ಅನೇಕ ಕಾರಣಗಳಿಂದಾಗಿ ನಮ್ಮ ನಗರಗಳು ಏದುಸಿರುಬಿಡುತ್ತಿವೆ. ಹೆಚ್ಚುತ್ತಿರುವ ನಗರವಲಸೆ ಕೂಡ ಈ ಸಮಸ್ಯೆಯ ಗಾತ್ರವನ್ನು ಹೆಚ್ಚಿಸಿದೆ. ಇಂದು ದೆಹಲಿಯಲ್ಲಿ ಆಗಿದ್ದು ನಾಳೆ ಬೆಂಗಳೂರಿನಲ್ಲೋ, ಮುಂಬೈಯಲ್ಲೋ ಅಥವಾ ಕೋಲ್ಕತಾದಲ್ಲೋ ಉಂಟಾದರೆ ಅಚ್ಚರಿಪಡಬೇಕಿಲ್ಲ. ಹೀಗಾಗಿ ವ್ಯವಸ್ಥಿತ ನಗರಯೋಜನೆ ಬಗ್ಗೆ ಇನ್ನಾದರೂ ಗಮನಹರಿಸದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಸಂಕಟಗಳು ಕಟ್ಟಿಟ್ಟ ಬುತ್ತಿ.

Leave a Reply

Your email address will not be published. Required fields are marked *

Back To Top