Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಧೂಮಪಾನ ಯಮನ ಪಾಶ, ದೇಶನಾಶಕ್ಕೆ ಮೂಲ…

Saturday, 03.06.2017, 3:05 AM       No Comments

ಹುಸಿ ಪ್ರತಿಷ್ಠೆಯ ಅಭಿವ್ಯಕ್ತಿಯ ಹಪಹಪಿಯಿಂದಲೋ ಅಥವಾ ಕೆಟ್ಟ ಕುತೂಹಲದ ಕಾರಣದಿಂದಲೋ ಧೂಮಪಾನಕ್ಕೆ ಮುಂದಾಗುವವರು, ತಾವು ಸಿಗರೇಟನ್ನಷ್ಟೇ ಅಲ್ಲ ಬದುಕನ್ನೂ ನಿಧಾನವಾಗಿ ಸುಟ್ಟುಕೊಳ್ಳುತ್ತಿದ್ದೇವೆ ಎಂಬುದನ್ನು ಗ್ರಹಿಸುವ ಗೋಜಿಗೇ ಹೋಗುವುದಿಲ್ಲ. ಅದು ಅರಿವಾಗುವ ಹೊತ್ತಿಗೆ ಅವರ ಅನಾರೋಗ್ಯ ಸಮಸ್ಯೆ ವಿಷಮಸ್ಥಿತಿಯನ್ನು ಮುಟ್ಟಿರುತ್ತದೆ!

 ಒಂದು ಸಲ ದೂರವಾಣಿಯಲ್ಲಿ ನನ್ನ ಅಪ್ಪನವರಿಗೆ ‘ಹೇಗಿದ್ದೀರಿ ಅಪ್ಪಾ?’ ಅಂತ ಎಂದಿನಂತೆ ಕೇಳಿದೆ. ಅದಕ್ಕೆ ಅವರು ‘ಹೂಂ… ಇದ್ದೀನಿ, ಕುರಿ ಹಾಗೆ ಇದೀನಿ!’ ಎಂದು ಉತ್ತರಿಸಿದ್ದು ಕೇಳಿ ಸೋಜಿಗವಾಯಿತು. ಏನೂ ಅರ್ಥವಾಗದೆ ನಾನು ‘ಯಾಕ್ರಪ್ಪ?’ ಅಂತ ಮರುಪ್ರಶ್ನೆ ಹಾಕಿದೆ. ಆಗ ಅವರು ನನ್ನ ಮಾತನ್ನು ನನಗೇ ತಿರುಗಿಸಿ ಹೇಳಿದರು- ‘‘ರೇಡಿಯೋ ವೈದ್ಯ ಕಾರ್ಯಕ್ರಮದಲ್ಲಿ ನೀನೇ ಹೇಳಿದೆಯಲ್ಲ- ‘ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಗಾದೆಮಾತಿದೆ. ಹಿಂದೆ-ಮುಂದೆ ನೋಡದೆ ಮಂದೆ ಮಂದೆಯಾಗಿ ಮುಂದೆ ನುಗ್ಗಿದರೆ ‘ಕುರಿಹಾಗೆ’ ಅನ್ನುತ್ತೇವೆ. ಅಂಥ ಆಡು, ಕುರಿಗಳು ಕೂಡ ಎಂದೂ ಹೊಗೆಸೊಪ್ಪು ಮುಟ್ಟುವುದಿಲ್ಲ. ಆದರೆ ಮೇಧಾವಿ ಎಂದು ಮೆರೆಯುವ ಮನುಷ್ಯ ಮಾತ್ರ ಹೊಗೆಸೊಪ್ಪಿಗೆ ಗುಲಾಮನಾಗಿ ಅದರ ತಲುಬಿನಲ್ಲಿ ಸಾಯುತ್ತಿದ್ದಾನೆ’- ಅಂತ! ನಾನು ಎಂದೂ ತುಂಬಾಕು ಮುಟ್ಟದವನು, ‘ಕುರಿಹಾಗೆ ’ ಆದೆನಲ್ಲ? ಅದಕ್ಕೇ ಹಾಗೆ ಹೇಳಿದೆ..!’’.

ನನ್ನ ಅಪ್ಪನ ಹಾಸ್ಯಪ್ರವೃತ್ತಿಯಲ್ಲಿ ಕೂಡ ನಮ್ಮ ಯುವಪೀಳಿಗೆ ಕುರಿಗಳಿಗಿಂತ ಕಡೆ ಆಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ತಂಬಾಕನ್ನು ಎಂದೂ ಮುಟ್ಟದ ನನ್ನ ಅಜ್ಜ 95 ವರ್ಷ, ನನ್ನಪ್ಪ 93 ವರ್ಷ ಬದುಕಿ ಸಾರ್ಥಕ ಜೀವನ ನಡೆಸಿದರು. ನನ್ನ ಅಜ್ಜ ತಾಕೀತು ಮಾಡಿದ್ದಕ್ಕೆ ನನ್ನ ಚಿಕ್ಕಪ್ಪ ಸಿಗರೇಟು ಸೇದುವುದನ್ನು ಸಕಾಲಕ್ಕೆ ನಿಲ್ಲಿಸಿ ಈಗ 90 ವರ್ಷಕ್ಕೆ ಮೊಮ್ಮಕ್ಕಳು, ಮರಿಮಕ್ಕಳನ್ನು ಕಂಡಿದ್ದಾರೆ. ಆದರೆ ದುರಂತವೆಂದರೆ, ಯಾರ ಮಾತೂ ಕೇಳದ ಅವರ ಮಗ ದುಶ್ಚಟದಿಂದ 40 ವರ್ಷಕ್ಕೇ ಅಕಾಲಿಕ ಮರಣ ಹೊಂದಿದರು. ಇದು ಇಂದು ಮನೆಮನೆಯ ದಾರುಣ ಕತೆಯಾಗಿದೆ. ಹಲವು ಕುಟುಂಬಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳ ಶವಸಂಸ್ಕಾರವನ್ನು ತಂದೆ ಮಾಡುವಂಥ ದುಃಸ್ಥಿತಿ ಬಂದಿದೆ. ಕಾರಣ ಧೂಮಪಾನ ಮತ್ತು ಮಾನಸಿಕ ಒತ್ತಡ ಎರಡೂ ಬೆಂಕಿ ಮತ್ತು ಗಳಗಳಂತಿವೆ. ಹಲವರು ಅಕಾಲಿಕ ಮರಣ ಹೊಂದಲು ಇಂಥ “2S’  ಅಂದರೆ Stress ಮತ್ತು Smoking ಕಾರಣವೆಂದು ವೈಜ್ಞಾನಿಕ ಸಮೀಕ್ಷೆಗಳಿಂದ ತಿಳಿದುಬಂದಿದೆ.

ಹಲವು ಶತಮಾನಗಳ ಹಿಂದೆಯೇ ಸರ್ವಜ್ಞ ಈ ಕುರಿತು ಹೀಗೆ ಹೇಳಿದ್ದಾನೆ- ‘ವ್ಯಸನದೇಹ ಮಸಣವನು ಕಾಣುವುದು, ವ್ಯಸನವನು ಬಿಟ್ಟು ಹಸನಾಗಿ ದುಡಿದರೆ, ಅಶನ-ವಸನಗಳು ಸರ್ವಜ್ಞ’. ಕನ್ನಡ ಪದಕೋಶದ ಪ್ರಕಾರ ‘ವ್ಯಸನ’ ಅಂದರೆ ದುಃಖವಾಗುವುದು ಮತ್ತು ದುರಭ್ಯಾಸಕ್ಕೆ ತುತ್ತಾಗುವುದು. ವ್ಯಸನವನ್ನು ಇಂದು ನಾವು Stress ಮತ್ತು Smoking  ಎಂದು ಪರಿಗಣಿಸಿದರೆ, ಮಸಣವನ್ನು ಕಾಣುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ರಸ್ತೆ ಅಪಘಾತದಲ್ಲಿ ಪ್ರತಿವರ್ಷ 90,000 ಜನ ಸತ್ತರೆ ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಆದರೆ ತಂಬಾಕಿನ ವ್ಯಸನದಿಂದ ಪ್ರತಿವರ್ಷ 9 ಲಕ್ಷ ಜನ ಸಾಯುತ್ತಿರುವುದು ಎಲ್ಲೂ ವರದಿಯಾಗುತ್ತಿಲ್ಲ! ಆದ್ದರಿಂದ ವ್ಯಸನದಿಂದ ಮಸಣ ಕಂಡವರು ಜನರ ಗಮನಕ್ಕೆ ಬರುವುದೇ ಇಲ್ಲ. ಹೀಗಾಗಿ ಜವರಾಯನ ರೂಪದಲ್ಲಿರುವ ತಂಬಾಕಿನ ಬಗ್ಗೆ ಜನರಿಗೆ ಭಯವೇ ಇಲ್ಲ! ಒಂದು ಕಾಲಕ್ಕೆ ಕದ್ದು-ಮುಚ್ಚಿ ಸೇದುತ್ತಿದ್ದರು; ಇಂದು ವಿದ್ಯಾವಂತರೆನಿಸಿಕೊಂಡವರೇ ಯಾರ ಭಯವೂ ಇಲ್ಲದೆ ಸಾರ್ವಜನಿಕವಾಗಿ ಠೀವಿಯಿಂದ ಧೂಮಪಾನ ಮಾಡುತ್ತಾರೆ.

ತಂಬಾಕು ಉದ್ಯಮಕ್ಕೆ ಸರ್ಕಾರಗಳ ಸಹಾಯಹಸ್ತ ಸದಾ ಇದೆ. ಕಾರಣ ಅವರ ‘ಪಾರ್ಟಿಫಂಡ್’ಗೆ ತಂಬಾಕು ಉದ್ಯಮಿಗಳು ಹಣ ಕೊಡುತ್ತಾರೆ. ಇದರಿಂದ ಇಂದು ವಿಶ್ವದಲ್ಲಿ ತಂಬಾಕು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಭಾರತದ ಆರ್ಥಿಕತೆಯ ಶೇ. 5ರಷ್ಟು ಹಣ ತಂಬಾಕು ಉತ್ಪಾದನೆಯಿಂದ ಬರುತ್ತದೆ. ಇದರಿಂದ ಹಣಕ್ಕಾಗಿ ತಂಬಾಕು ಬೆಳೆಯುವವರ, ಮಾರುವವರ ಪರವಾಗಿರುವ ಸರ್ಕಾರ, ಪ್ರತಿನಿತ್ಯ ಸಾಯುವವರ, ಅಳುವವರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಪ್ರತಿದಿನ ಎರಡು ಜಂಬೋ ಜೆಟ್ ವಿಮಾನಗಳು ಧ್ವಂಸವಾದಷ್ಟು ಜನ ತಂಬಾಕಿನಿಂದಾಗುವ ಮಾರಣಾಂತಿಕ ರೋಗದಿಂದ ಸಾಯುತ್ತಿರುವುದು ಕಾಣುವುದೇ ಇಲ್ಲ! ಒಂದು ಸಿಗರೇಟು ಸೇದುವುದರಿಂದ ತಮ್ಮ ಆಯಸ್ಸಿನಲ್ಲಿ 6 ದಿನ ಕಡಿಮೆ ಆಗುತ್ತದೆ, ಮುಕ್ಕಾಲು ಪಾಲು ಧೂಮಪಾನಿಗಳು ನಿವೃತ್ತರಾಗುವ ಮೊದಲೇ ಸಾಯುತ್ತಾರೆ.

ಸಿಗರೇಟಿನಲ್ಲಿ 4,600 ರಾಸಾಯನಿಕಗಳಿದ್ದು ಪ್ರಮುಖವಾಗಿ ಒಂದು ಮಿಲಿಗ್ರಾಂ ನಿಕೋಟಿನ್ ಇದೆ. ಇದನ್ನು ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಂಡರೆ ಆ ಮನುಷ್ಯ ತಕ್ಷಣ ಸತ್ತುಬಿಡುತ್ತಾನೆ. ಅಂದರೆ ಈ ನಿಕೋಟಿನ್ ಅನ್ನುವ ವಿಷ ಸೈನೈಡ್​ಗಿಂತಲೂ ಭಯಂಕರ. ಆದರೆ ಸೇದುವವರು ಕೇವಲ ಶೇ. 15ರಷ್ಟು ಹೊಗೆಯನ್ನು ಶ್ವಾಸಕೋಶದಲ್ಲಿ ತೆಗೆದುಕೊಂಡು ಮಿಕ್ಕ ಶೇ. 85 ಹೊಗೆಯನ್ನು ಹೊರಗೆ ಊದಿ, ಇಲ್ಲವೇ ಉರಿಯುವ ಸಿಗರೇಟನ್ನು ಕೈಯಲ್ಲಿ ಹಿಡಿದುಕೊಂಡು ಸುತ್ತಲಿದ್ದವರ ಅದರಲ್ಲೂ ಹೆಂಡತಿಯ ಆರೋಗ್ಯ ಹದಗೆಡಲೂ ಕಾರಣವಾಗುತ್ತಾರೆ. ಇದಕ್ಕೆ “Passive Smoking’ ಅನ್ನುತ್ತೇವೆ. ‘ದುಷ್ಟರಿಂದ ದೂರವಿರಿ’ ಎಂಬ ಗಾದೆಮಾತಿದೆ. ಆದರೆ ಇಂದು ನಾವು ‘ಧೂಮಪಾನಿಗಳಿಂದ ದೂರವಿರಿ’ ಎಂಬ ಹೊಸ ಗಾದೆಮಾತು ಹುಟ್ಟುಹಾಕಬೇಕಾದ ಪರಿಸ್ಥಿತಿ ಬಂದಿದೆ. ನಿಕೋಟಿನ್ ಅಲ್ಲದೆ ಸಿಗರೇಟಿನಲ್ಲಿ ಆರ್ಸೆನಿಕ್, ಅಮೋನಿಯಾ, ಫಾರ್ವಲ್ಡಿಹೈಡ್, ಇಂಗಾಲದ ಮಾನಾಕ್ಸೈಡ್ ಮತ್ತು ಟಾರ್ ಇವೆ. ಇದಲ್ಲದೆ ಕ್ಯಾನ್ಸರ್ ಬರುವಂತೆ ಮಾಡುವ 40 ವಿಷಕಾರಿ ವಸ್ತುಗಳು ಇವೆ. ಟಾರ್ ಅಂದರೆ ಡಾಂಬರಿನಂಥ ಕಪ್ಪುವಸ್ತು ಶ್ವಾಸಕೋಶದಲ್ಲಿ ಸೇರಿಕೊಂಡು ವ್ಯಕ್ತಿಗೆ ಸದಾ ಕೆಮ್ಮು (Smoker’s Cough) ಬರುವಂತೆ ಮಾಡುತ್ತದೆ. ಆದರೆ ನಮ್ಮ ಕೆಲವು ರೋಗಿಗಳು ಧೂಮಪಾನ ಮಾಡಿದರೆ ಒಳಗಡೆಯ ಕಫ ತೆಗೆಯಬಹುದು ಎಂದು ವಾದಿಸುತ್ತಾರೆ. ವಾಸ್ತವವಾಗಿ ಧೂಮಪಾನದಿಂದ ಒಳಗಡೆ ಕಫ ಉತ್ಪತ್ತಿ ಆಗುವ ಜತೆಗೆ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂಬ ಕಲ್ಪನೆ ಅವರಿಗೆ ಇರುವುದಿಲ್ಲ.

ಇನ್ನು ಇಂಗಾಲದ ಮಾನಾಕ್ಸೈಡ್ ಅಂತೂ, ನಮ್ಮ ಪ್ರಾಣಕ್ಕೆ ಪ್ರಮುಖವಾಗಿರುವ ಪ್ರಾಣವಾಯುವಿನ ಸ್ಥಾನಪಲ್ಲಟನ ಮಾಡಿ ರಕ್ತದ ಮುಖಾಂತರ ಇಡೀ ಶರೀರದಲ್ಲಿ ಹರಿದು ತಲೆಯಿಂದ ಕಾಲಿನವರೆಗೂ ಇರುವ ಎಲ್ಲ ರಕ್ತನಾಳಗಳನ್ನು ನಾಶಮಾಡುತ್ತದೆ. ಇದರಿಂದ ಕೈಕಾಲಿಗೆ ಸರಬರಾಜು ಆಗುವ ರಕ್ತಕ್ಕೆ ಅಡೆತಡೆ ಆಗಿ ಅವು ಕೊಳೆತು (ಗ್ಯಾಂಗ್ರೀನ್), ಕತ್ತರಿಸುವ ಪ್ರಮೇಯ ಬರುತ್ತದೆ. ಹೀಗೆ ದುಡಿದು ಮನೆಯವರನ್ನು ನೋಡಿಕೊಳ್ಳಬೇಕಾದ ಯಜಮಾನ ಕೈಕಾಲು ಕಳೆದುಕೊಂಡು ಮನೆಯವರಿಗೆ ಹೊರೆಯಾಗಿ, ಬದುಕಿದರೂ ಸತ್ತಂತೆ ಆಗುತ್ತಾರೆ.

ಆತಂಕವಾದಿ ಒಸಾಮ ಬಿನ್ ಲಾಡೆನ್, ಅಮೆರಿಕದ ಆರ್ಥಿಕತೆಯ ಆಧಾರವಾದ ಅವಳಿ ಗೋಪುರವನ್ನು ಧ್ವಂಸಮಾಡಿದ. ಆದರೆ ಅಮೆರಿಕನ್ನರ ಭದ್ರತೆಯ ಸ್ಥಾನವಾದ ಪೆಂಟಗನ್ ಅನ್ನು ನಾಶಮಾಡಲಾಗಲಿಲ್ಲ. ಅವನಿಗಿಂತಲೂ ಭಯಂಕರವಾದ ತಂಬಾಕು ಮನುಷ್ಯನ ಅವಳಿ ಗೋಪುರಗಳಾದ ಮಿದುಳು ಮತ್ತು ಹೃದಯವನ್ನು ನಾಶಮಾಡುತ್ತದೆ. ಅದಲ್ಲದೆ ಅವನ ಬದುಕಿಗೆ ಪ್ರಾಣವಾಯುವನ್ನು ಒದಗಿಸುವ ಶ್ವಾಸಕೋಶಗಳನ್ನು (ಪೆಂಟಗನ್) ನಾಶಮಾಡಿ ಕ್ಯಾನ್ಸರಿನಿಂದ ಉಸಿರಾಡಲು ತೊಂದರೆಯಾಗಿ, ಮೇಲಿನ ಉಸಿರು ಮೇಲು, ಕೆಳಗಿನ ಉಸಿರು ಕೆಳಗಾಗಿ ಪ್ರಾಣಪಕ್ಷಿ ಹಾರುವಂತೆ ಮಾಡುತ್ತದೆ ಈ ಖತರ್ನಾಕ್ ಧೂಮಪಾನ.

ಆದರೆ ನಮ್ಮ ದೇಶದ ದುರಂತವೆಂದರೆ, ಧೂಮಪಾನದಿಂದ ಆಗುವ ದುಷ್ಪರಿಣಾಮವನ್ನು ಪಠ್ಯಪುಸ್ತಕದ ಮೂಲಕ ಮಕ್ಕಳಿಗೆ ತಿಳಿಸುವ ಬದಲು, ಅದನ್ನು ‘ಆರ್ಥಿಕ ಬೆಳೆ’ (Cash Crop) ಎಂದು ಕಲಿಸಲಾಗುತ್ತದೆಧೂಮಪಾನದಿಂದಾಗುವ ದುಷ್ಪರಿಣಾಮಗಳನ್ನು ಪಠ್ಯಪುಸ್ತಕಗಳಲ್ಲಿ ಕಡ್ಡಾಯವಾಗಿ ಉಲ್ಲೇಖಿಸಬೇಕು, ಶಾಲೆಗಳು ಈ ವಿಷಯದಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ಅರಿವುಮೂಡಿಸಬೇಕು. ಕಾರಣ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಶಾಲೆಗೆ ಹೋಗುವ ಮಕ್ಕಳು ಪ್ರತಿವರ್ಷ 20,000 ಸಂಖ್ಯೆಯಲ್ಲಿ ಹೊಸದಾಗಿ ಈ ಚಟಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲವೆಡೆ ಶಾಲೆಯ ಹತ್ತಿರದಲ್ಲೇ ‘ಹುಕ್ಕಾ ಬಾರ್’ಗಳನ್ನು ಕೆಲವರು ಪ್ರಾರಂಭಿಸಿರುವುದೂ ಇದಕ್ಕೊಂದು ಕಾರಣ. ಇಂಥ ಅಡ್ಡೆಗಳಿಗೆ ಬಿಬಿಎಂಪಿಯಿಂದ ಪರವಾನಗಿ ಬೇಕಾಗಿಲ್ಲವೆಂದು ನ್ಯಾಯಾಲಯ ತೀರ್ಪಿತ್ತಿರುವುದು ಇಂಥ ಬಾರ್​ಗಳ ಮಾಲೀಕರಿಗೆ ವರದಾನವಾಗಿದೆ. ಇದರ ಪರಿಣಾಮವಾಗಿ, ಬೆಂಗಳೂರಿನಲ್ಲಿ ಅದರಲ್ಲೂ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಮಕ್ಕಳು ಶಾಲೆ ತಪ್ಪಿಸಿ ಧೂಮಪಾನ ಮಾಡಲು ಇಂಥ ಹುಕ್ಕಾ ಬಾರ್​ಗಳಿಗೆ ಮುಗಿಬೀಳುತ್ತಿದ್ದಾರೆ. ಧೂಮಪಾನ ಮುಂದೆ ಡ್ರಗ್ಸ್ ಸೇವನೆಗೆ ಮೊದಲ ಹೆಜ್ಜೆಯಾಗುತ್ತದೆ.

ಒಂದು ಕಾಲಕ್ಕೆ ಗಂಡ ಸಿಗರೇಟು ಸೇದಿದರೆ ಹೆಂಡತಿಯು ‘ಬೇಡ’ ಎಂದು ಹೇಳಿ ಬಿಡಿಸಲು ಪ್ರಯತ್ನಿಸುತ್ತಿದ್ದಳು. ಅಂದರೆ ‘ಒಲೆ ಹೊತ್ತಿ ಉರಿದರೆ ನಿಲಬಹುದು’ ಎಂದು ಶತಪ್ರಯತ್ನ ಮಾಡುತ್ತಿದ್ದಳು. ಆದರೆ ಇಂದು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತಿರುವ ಆಧುನಿಕ ವಿದ್ಯಾವಂತ ಮಹಿಳೆಯರು ಸ್ವತಃ ಧೂಮಪಾನದ ಚಟವನ್ನು ಪ್ರಾರಂಭಿಸಿದ್ದಾರೆ. ಇದು ‘ಧರೆ ಹೊತ್ತಿ ಉರಿದಂತೆ’ ಅಲ್ಲವೇ?! ಗರ್ಭಿಣಿಯು ಧೂಮಪಾನ ಮಾಡಿದರೆ ಅವಳ ಪಾಪ ಭ್ರೂಣಕ್ಕೆ ತಟ್ಟಿ ಅದು ಸತ್ತು ಹುಟ್ಟುತ್ತದೆ, ಇಲ್ಲವೇ ತೂಕ ಕಡಿಮೆ ಇರುವ ರೋಗಗ್ರಸ್ತ ಮಗುವಾಗಿ ಹುಟ್ಟುತ್ತದೆ. ಬಾಲ್ಟಿಮೋರ್ ವೈಜ್ಞಾನಿಕ ವಿಶ್ಲೇಷಣೆ ಪ್ರಕಾರ, ಹೀಗೆ ಧೂಮಪಾನ ಮಾಡುವವರಿಗೆ ಹುಟ್ಟುವ ಮಗುವಿನ ಹೃದಯದಲ್ಲಿ ನ್ಯೂನತೆ ಉಂಟಾಗುತ್ತದೆ ಎಂದು ತಿಳಿದುಬಂದಿದೆ.

ಆದ್ದರಿಂದ, ವಿಶ್ವ ಆರೋಗ್ಯ ಸಂಸ್ಥೆಯು- Tobacco threat to development -ಅಂದರೆ ‘ತಂಬಾಕು ವಿಕಾಸಕ್ಕೆ ಸಂಚಕಾರ’ ಎಂಬ ಘೊಷಣೆಯನ್ನು ನೀಡಿದೆ. ನ್ಯೂಯಾರ್ಕ್​ನ ಮಾಜಿ ಮೇಯರ್ ಬ್ಲೂಮ್​ಗ್ ಅವರು ಕೋಟ್ಯಂತರ ಹಣ ಖರ್ಚು ಮಾಡಿ ವಿಶ್ವದ ಹಲವು ನಗರಗಳನ್ನು ತಂಬಾಕು-ಮುಕ್ತ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ನಮ್ಮ ಬೆಂಗಳೂರು ಕೂಡ ಒಂದು. ಬನ್ನಿ, ಉದ್ಯಾನನಗರಿಯನ್ನು ತಂಬಾಕುಮುಕ್ತ ಮಾಡಲು ಪಾಲಕರು, ಪೋಷಕರು, ಶಾಲಾ-ಕಾಲೇಜುಗಳ ಸಿಬ್ಬಂದಿ, ವೈದ್ಯರು, ಸಾರ್ವಜನಿಕರು ಎಲ್ಲ ಸೇರಿ ಕೈಜೋಡಿಸೋಣ. ಈ ‘ಜಾಗೃತಿ ಜಾಥಾ’ದಲ್ಲಿ ತುಂಬಾಕು ಬೆಳೆಯುವ ರೈತರೂ ಸೇರಿದರೆ ಇನ್ನೂ ಉತ್ತಮ. ಕೇಂದ್ರ ಸರ್ಕಾರ ಕೊಟ್ಟಿರುವ ಸಹಾಯವಾಣಿ 1800110456 ಬಳಸಿ, ದೇಶ ಉಳಿಸಿ.

Leave a Reply

Your email address will not be published. Required fields are marked *

Back To Top