Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಧರ್ಮಸಿಂಗ್ ಇನ್ನಿಲ್ಲ -ಇಂದು ಸ್ವಗ್ರಾಮ ನೆಲೋಗಿಯಲ್ಲಿ ಅಂತ್ಯಕ್ರಿಯೆ

Friday, 28.07.2017, 3:02 AM       No Comments

ಬೆಂಗಳೂರು: ವಿವಾದರಹಿತ ವ್ಯಕ್ತಿತ್ವ, ಐದು ದಶಕದ ಸಕ್ರಿಯ ರಾಜಕಾರಣ, ಯಾರಿಗೂ ಕೆಡುಕು ಮಾಡದ ಚಾರಿತ್ರ್ಯ ಧೀಮಂತ ರಾಜಕಾರಣಿ ಧರ್ಮ ಸಿಂಗ್ (81) ಇನ್ನು ನೆನಪು ಮಾತ್ರ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ, ಹಲವು ಖಾತೆಗಳ ಸಚಿವರಾಗಿ, ಮುಖ್ಯಮಂತ್ರಿಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ‘ಅಜಾತಶತ್ರು‘ ಎನ್ನಿಸಿಕೊಂಡಿದ್ದ ಕಾಂಗ್ರೆಸ್​ನ ಹಿರಿಯ ನಾಯಕ ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಹಲವು ತಿಂಗಳಿಂದ ಹೃದಯ ತೊಂದರೆ, ಮೂತ್ರಪಿಂಡ ಸಮಸ್ಯೆ ಹಾಗೂ ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮಸಿಂಗ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಗೌರವಾರ್ಥ ರಾಜ್ಯದಲ್ಲಿ ಜು. 27ರಿಂದ 3 ದಿನ ಶೋಕಾಚರಣೆ ಘೊಷಿಸಲಾಗಿದೆ.

 

ಜನನ: 25.12.1936

ಮರಣ: 27.07.2017

 

ವಿಧಾನಸಭಾ ಚುನಾವಣೆಯಲ್ಲಿ ಸತತ 8 ಬಾರಿ ಗೆಲುವು

1997ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ, 2004ರಲ್ಲಿ ಸಿಎಂ ಆಗಿ ಅಧಿಕಾರಕ್ಕೆ

 

ಆಪ್ತಮಿತ್ರನ ಅಗಲಿಕೆಗೆ ಬಿಕ್ಕಿ ಬಿಕ್ಕಿ ಅತ್ತ ಖರ್ಗೆ

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಆಪ್ತಮಿತ್ರನ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತರು. ಗೆಳೆಯನ ಅಗಲಿಕೆಯಿಂದ ಭೂಕಂಪದ ಅನುಭವವಾಗಿದೆ. 50 ವರ್ಷಗಳಿಂದ ನಾವು ಗೆಳೆಯರಾಗಿದ್ದೆವು. ಅವರು ನನ್ನ ಹಿರಿಯಣ್ಣ ಇದ್ದಂತೆ ಎಂದು ಖರ್ಗೆ ಪ್ರತಿಕ್ರಿಯಿಸಿದರು. ಖರ್ಗೆ, ಧರ್ಮ ಸಿಂಗ್ ರಾಜಕೀಯ ವಲಯದಲ್ಲಿ ಲವ ಕುಶ ಎಂದೇ ಪ್ರಸಿದ್ಧರು.

 

ಧರ್ಮಸಿಂಗ್ ರಾಜಕೀಯ ಅಜಾತಶತ್ರುವಾಗಿ ಎಲ್ಲರ ಪ್ರೀತಿ ಗಳಿಸಿದ್ದರು. ಶಾಸಕ, ಸಂಸದ, ಸಚಿವ ಹಾಗೂ ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮ ರೂಪಿಸಿದ್ದರು. 50 ವರ್ಷ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರ ನಿಧನ ಅತೀವ ದುಃಖ ತಂದಿದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ಇಂದು ಸಂಜೆ 4ಕ್ಕೆ ಅಂತ್ಯಕ್ರಿಯೆ

ಧರ್ಮಸಿಂಗ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದಕ್ಕೂ ಮೊದಲು ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತವರು ಕ್ಷೇತ್ರ ಜೇವರ್ಗಿಯಲ್ಲಿಯೂ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.

ಅಜಾತಶತ್ರುಗೆ ಭಾವಪೂರ್ಣ ನಮನ

ರಾಜಕಾರಣದಲ್ಲಿ ತಾಳ್ಮೆ ಬೆಳೆಸಿಕೊಂಡು ಅಜಾತಶತ್ರು ಎಂದೇ ಹೆಸರಾಗಿದ್ದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಿಧನಕ್ಕೆ ಎಲ್ಲ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ.

ನಿಧನ ಸುದ್ದಿ ತಿಳಿಯುತ್ತಿದ್ದಂತೆ ಧರ್ಮಸಿಂಗ್ ಅವರ ಅಭಿಮಾನಿಗಳು, ಹಿತೈಷಿಗಳು, ರಾಜಕೀಯ ಪಕ್ಷಗಳ ಮುಖಂಡರು ಸದಾಶಿವನಗರದ ಮನೆಯತ್ತ ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದು ನಮನ ಸಲ್ಲಿಸಿದರು. ಪ್ರೀತಿಪಾತ್ರರಾಗಿದ್ದ ಧರ್ಮಸಿಂಗ್ ಕಳೆದುಕೊಂಡ ದುಃಖ ತಾಳಲಾರದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ಪ್ರಭಾವತಿ ಧರ್ಮಸಿಂಗ್, ಪುತ್ರರಾದ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್, ಪುತ್ರಿ ಪ್ರಿಯದರ್ಶಿನಿ ಸೇರಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಣ್ಣೀರಿಟ್ಟರು. ಮಧ್ಯಾಹ್ನದ ವೇಳೆಗೆ ಖಾಸಗಿ ಆಂಬುಲೆನ್ಸ್​ನಲ್ಲಿ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು 15 ನಿಮಿಷ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

 

ಅಗಲಿಕೆಯ ಹಾದಿ

ಬೆ.8.30: ಎದೆನೋವು, ಆಸ್ಪತ್ರೆಗೆ ರವಾನೆ

ಬೆ.9.00: ತೀವ್ರ ಹೃದಯಾಘಾತವಾಗಿ ನಿಧನ

ಮ.12.30: ಸದಾಶಿವನಗರದ ಮನೆಯಲ್ಲಿ ದರ್ಶನಕ್ಕೆ ವ್ಯವಸ್ಥೆ

ಸಂಜೆ 4.15: ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ನಮನ

ಸಂಜೆ 4.30: ಆಂಬುಲೆನ್ಸ್ ನಲ್ಲೇ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಪಯಣ

ಸಂಜೆ 6: ಹೆಲಿಕಾಪ್ಟರ್​ನಲ್ಲಿ ಬೀದರ್​ಗೆ ಪಾರ್ಥಿವ ಶರೀರ. ಕಲಬುರಗಿಯಲ್ಲಿ ದರ್ಶನಕ್ಕೆ

 

ಧರ್ಮಸಿಂಗ್ ಅವರ ನಿಧನ ಅತೀವ ಶೋಕ ತಂದಿದೆ. ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯ ಕಾಂಗ್ರೆಸಿನ ಸಾರಥ್ಯ ವಹಿಸಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಸಂಸದರಾಗಿಯೂ ಸೇವೆ ಸಲ್ಲಿಸಿದ ಧರ್ಮಸಿಂಗ್ ಸದಾ ಜನಸೇವೆಯ ತುಡಿತದಲ್ಲಿದ್ದರು.

| ಡಾ.ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷ

 

ರಾಜ್ಯದ ಹಿಂದುಳಿದ ವರ್ಗಗಳ ನಾಯಕರಾಗಿದ್ದ ಧರ್ಮಸಿಂಗ್ ರಾಜ್ಯ ಕಂಡ ಅಪರೂಪದ ಮತ್ತು ವಿಶಾಲ ಹೃದಯದ ರಾಜಕಾರಣಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನಮ್ಮ ರಾಜ್ಯಕ್ಕೆ ಮತ್ತು ಅವರ ಕುಟುಂಬಕ್ಕೆ ನೀಡಲೆಂದು ಪ್ರಾರ್ಥಿಸುತ್ತೇನೆ.

| ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ

 

ಕಲಬುರಗಿ ನಗರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶಿಸಿ 8 ಬಾರಿ ಶಾಸಕರಾಗಿ, ಸಂಸದರಾಗಿ, ಮುಖ್ಯಮಂತ್ರಿಯಾಗಿ ಧರ್ಮಸಿಂಗ್ ಅವರು ಸಲ್ಲಿಸಿದ ಸೇವೆ ಅಪೂರ್ವ. ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಅವರು ರಾಜಕೀಯದಲ್ಲಿ ಅಜಾತಶತ್ರುವೆಂದೇ ಗುರುತಿಸಿಕೊಂಡಿದ್ದರು. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲಿ ಮತ್ತು ಅಗಲಿಕೆಯ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ದೇವರು ಕರುಣಿಸಲಿ.

| ಬಾಳೆಹೊನ್ನೂರು ಶ್ರೀ ರಂಭಾಪುರಿ

ವೀರಸೋಮೇಶ್ವರ ಜಗದ್ಗುರುಗಳು

 

ಧರ್ಮಸಿಂಗ್ ಸಿಎಂ ಆಗಿದ್ದ ಸಂದರ್ಭ ಉತ್ತಮ ಆಡಳಿತ ಕೊಟ್ಟಿದ್ದರು. ಧರ್ಮಸ್ಥಳ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದು ಆತ್ಮೀಯರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.

| ಡಾ.ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ ಧರ್ಮಾಧಿಕಾರಿ

 

ಕಣ್ಣೀರು ಹಾಕಿದ ಖರ್ಗೆ ಪತ್ನಿ

ಧರ್ಮಸಿಂಗ್ ನಿಧನ ವಾರ್ತೆ ಕೇಳಿ ನವದೆಹಲಿಯಿಂದ ಆಗಮಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನ ಧರ್ಮಸಿಂಗ್ ನಿವಾಸಕ್ಕೆ ತೆರಳಿ ಅವರ ಪತ್ನಿ ಪ್ರಭಾವತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇನ್ನು ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದುದನ್ನು ಕಂಡ ಖರ್ಗೆ ಅವರ ಪತ್ನಿ ರಾಧಾಬಾಯಿ ಕೂಡ ನೋವು ತಡೆಯಲಾಗದೆ ಕಣ್ಣೀರು ಹಾಕಿದರು. ನಂತರ ಸುಧಾರಿಸಿಕೊಂಡು ಖರ್ಗೆ ಅವರಿಗೆ ಕರೆ ಮಾಡಿ ಸಮಾಧಾನಪಡಿಸಿದರು.

 

ಸ್ವಗ್ರಾಮದಲ್ಲೇ ಅಂತ್ಯಕ್ರಿಯೆಗೆ ಪಟ್ಟು

ಕಲಬುರಗಿ: ಮಾಜಿ ಸಿಎಂ ಧರ್ಮಸಿಂಗ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ನೆಲೋಗಿಯಲ್ಲಿಯೇ ಮಾಡಬೇಕು ಎಂದು ಒತ್ತಾಯಿಸಿ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲೋಗಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಧರ್ಮಸಿಂಗ್ ನಮ್ಮ ನಾಯಕ. ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮಾಡುವುದನ್ನು ಬಿಟ್ಟು ಕಲಬುರಗಿಯ ನಾಗನಹಳ್ಳಿಯಲ್ಲಿ ನಡೆಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಒತ್ತಾಸೆ ಮೇರೆಗೆ ಹುಟ್ಟೂರಿನಲ್ಲೇ ಶುಕ್ರವಾರ ಅಂತ್ಯಕ್ರಿಯೆ ಮಾಡುವ ನಿರ್ಧಾರಕ್ಕೆ ಬರಲಾಯಿತು.

 

ಮೂರು ದಿನ ಶೋಕಾಚರಣೆ

ಮಾಜಿ ಸಿಎಂ ಧರ್ಮಸಿಂಗ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 3 ದಿನ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ನಿಧನ ಸುದ್ದಿ ತಿಳಿಯುತ್ತಿದ್ದಂತೆ ಗುರುವಾರ ಮಧ್ಯಾಹ್ನ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಯಿತು. ಅಲ್ಲದೆ, ಹಾವೇರಿಯ ಕಾಗಿನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ರದ್ದುಗೊಳಿಸಿ ಬೆಂಗಳೂರಿಗೆ ವಾಪಸಾದರು. ಶನಿವಾರದವರೆಗೂ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.

 

ಕರ್ನಾಟಕವನ್ನು ಸಮರ್ಥ ನಾಯಕತ್ವದಲ್ಲಿ ಮುನ್ನಡೆಸಿದ ದೂರದೃಷ್ಟಿಯ ನಾಯಕರೊಬ್ಬರನ್ನು ಕಳೆದುಕೊಂಡಂತಾಯಿತು. ಶ್ರೀಯುತರು ಸರ್ವಜನಾಂಗದ ಏಳ್ಗೆಗೆ ಶ್ರಮಿಸುತ್ತಿದ್ದರು. ಶ್ರೀಮಠಕ್ಕೆ ಅನೇಕ ಸಂದರ್ಭದಲ್ಲಿ ಆಗಮಿಸಿ, ಸಮಾರಂಭಗಳಲ್ಲಿ ಭಾಗವಹಿಸಿ ಭಕ್ತಿ, ಅಭಿಮಾನಗಳನ್ನು ವ್ಯಕ್ತಪಡಿಸಿದ್ದರು. ಅಗಲಿದ ಧರ್ಮಸಿಂಗ್ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಆಶಿಸುತ್ತೇವೆ.

| ಡಾ.ಶಿವಕುಮಾರ ಸ್ವಾಮೀಜಿ

ಶ್ರೀ ಸಿದ್ಧಗಂಗಾ ಮಠ, ತುಮಕೂರು

 

ಸಚಿವರಾಗಿ, ಮುಖ್ಯಮಂತ್ರಿಯಾಗಿ ಉತ್ತಮ ಸೇವೆ ಸಲ್ಲಿಸಿರುವ, ನಮಗೆ ಅತ್ಯಂತ ಆತ್ಮೀಯರೂ ಆದ ಧರ್ಮಸಿಂಗ್ ನಿಧನದಿಂದ ಅತೀವ ನೋವಾಗಿದೆ. ಅವರ ಆತ್ಮಕ್ಕೆ ಶ್ರೀಕೃಷ್ಣಮುಖ್ಯಪ್ರಾಣ ದೇವರು ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇವೆ.

| ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

 

ಧರ್ಮಸಿಂಗ್ ರಾಜ್ಯ

ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್​ನಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ, ರಾಜ್ಯದ ಸಿಎಂ ಹುದ್ದೆಯನ್ನು ಅಲಂಕರಿಸಿ ರಾಜ್ಯದ ಅಭಿವೃದ್ಧಿ ಶ್ರಮಿಸಿದ್ದರು.

| ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

 

ಧರ್ಮಸಿಂಗ್ ಅವರ ನಿಧನದಿಂದ ದುಃಖವಾಗಿದೆ. ಕರ್ನಾಟಕ, ರಾಷ್ಟ್ರ ರಾಜಕೀಯದಲ್ಲಿ ಅಪಾರ ಅನುಭವವನ್ನು ಅವರು ಹೊಂದಿದ್ದರು. ಅವರು ಸಲ್ಲಿಸಿದ ಸೇವೆಯನ್ನು ಸಮಾಜ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ.

| ನರೇಂದ್ರ ಮೋದಿ ಪ್ರಧಾನಿ

 

ಸ್ನೇಹ ಜೀವಿಯಾಗಿದ್ದ ಧರ್ಮಸಿಂಗ್ ಕರ್ನಾಟಕ ಕಂಡ ಅಪರೂಪದ ಮತ್ತು ವಿಶಾಲ ಹೃದಯದ ರಾಜಕಾರಣಿ. ಅವರ ನಿಧನದ ಮೂಲಕ ಒಬ್ಬ ಹಿರಿಯ, ಅನುಭವಿ ಹಾಗೂ ಹಿಂದುಳಿದ ವರ್ಗಗಳ ನಾಯಕನನ್ನು ರಾಜ್ಯ ಕಳೆದುಕೊಂಡಿದೆ.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

 

ಕರ್ತವ್ಯಪರತೆ ಹಾಗೂ ಬದ್ಧತೆಯಿಂದ ಧರ್ಮಸಿಂಗ್ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಅವರ ಸಮಾಜ ಸೇವೆ, ಜನಪರ ಕಾಳಜಿಗಳು ಎಂದಿಗೂ ಮಾದರಿ. ಐದು ದಶಕ ಕಾಂಗ್ರೆಸ್ ಕಟ್ಟಾಳುಗಳಾಗಿ ಪಕ್ಷಕ್ಕೆ ಶಕ್ತಿ ತುಂಬಿದವರು. ಸದಾ ಸ್ಮರಣೀಯರು.

| ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷೆ

 

ಅಂತಿಮ ದರ್ಶನ ಪಡೆದವರು

ಸಿಎಂ ಸಿದ್ದರಾಮಯ್ಯ, ಸಚಿವರಾದ ಕಾಗೋಡು ತಿಮ್ಮಪ್ಪ, ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ರಮೇಶ್​ಕುಮಾರ್, ಕೆ.ಜೆ.ಜಾರ್ಜ್, ಎಚ್.ಆಂಜನೇಯ, ಈಶ್ವರ್ ಖಂಡ್ರೆ, ಕೃಷ್ಣ ಬೈರೇಗೌಡ, ಉಮಾಶ್ರೀ, ಸ್ಪೀಕರ್ ಕೆ.ಬಿ.ಕೋಳಿವಾಡ, ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಕುಮಾರಸ್ವಾಮಿ, ಕೇಂದ್ರದ ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್, ಎಂ.ವಿ.ರಾಜಶೇಖರನ್, ಸಿ.ಎಂ.ಇಬ್ರಾಹಿಂ, ಶಾಸಕರಾದ ಪ್ರಿಯಕೃಷ್ಣ, ಬಾಲಕೃಷ್ಣ, ಬಿ.ಆರ್.ಪಾಟೀಲ್, ಮಾಲೀಕಯ್ಯ ಗುತ್ತೆದಾರ್, ಎನ್.ಎ.ಹ್ಯಾರೀಸ್, ಕೆ.ಸಿ.ಕೊಂಡಯ್ಯ, ರಾಜ್ಯ ಚುನಾವಣಾ ಅಯೋಗದ ಆಯುಕ್ತ ಶ್ರೀನಿವಾಸಾಚಾರಿ ಮತ್ತಿತರರು.

 

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಗಲಿಕೆ ಆತೀವ ನೋವುಂಟು ಮಾಡಿದೆ.

| ವಿ.ಆರ್.ವಾಲಾ ರಾಜ್ಯಪಾಲ

 

ಸರಳ, ಸೌಮ್ಯ ಸ್ವಭಾವದವರಾಗಿದ್ದ ಧರ್ಮಸಿಂಗ್ ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ನಿಧನ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಕುಟಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

 

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಧರ್ಮಸಿಂಗ್ ಬಹುಮೌಲಿಕ ಕೊಡುಗೆ ನೀಡಿದ್ದರು. ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ 8 ಸಲ ಆಯ್ಕೆಯಾಗಿ ದಾಖಲೆ ನಿರ್ವಿುಸಿದ್ದರು. ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ.

| ಡಾ.ಪ್ರಭಾಕರ ಕೋರೆ ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ

 

Leave a Reply

Your email address will not be published. Required fields are marked *

Back To Top