Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಧಮ್ಮಪದ ಧರ್ಮಧಾರೆಯ ಅಕ್ಷಯ ಚಿಲುಮೆ

Thursday, 12.10.2017, 3:05 AM       No Comments

ಹಿಂದೂಗಳಿಗೆ ‘ಭಗವದ್ಗೀತೆ’ಯಂತೆ ಬೌದ್ಧರಿಗೆ ‘ಧಮ್ಮಪದ’ವು ಪೂಜ್ಯವಾಗಿದೆ. ಅದು ಬೇರೆಬೇರೆ ಭಾಷೆಗಳಲ್ಲಿ ಪರಿವರ್ತಿತವಾಗಿ ಭೂಮಂಡಲವನ್ನೆಲ್ಲ ವ್ಯಾಪಿಸಿದೆ. ಬೌದ್ಧಧರ್ಮವು ಭಾರತಭೂಮಿಯಲ್ಲಿಯೇ ಹುಟ್ಟಿದ್ದರೂ ಅದರ ವಿಚಾರವಾಗಿ ನಮ್ಮವರಿಗೆ ಹೆಚ್ಚೇನೂ ತಿಳಿದಿಲ್ಲ. ಇದರಲ್ಲಿರುವ ಎಷ್ಟೋ ಉಪದೇಶಗಳು ಪ್ರತಿಯೊಬ್ಬರಿಗೂ ಅವಶ್ಯವಾಗಿವೆ. ವೇದಾಂತದರ್ಶನಕ್ಕೂ ಬೌದ್ಧದರ್ಶನಕ್ಕೂ ಇರುವ ಸಾಮ್ಯ-ತಾರತಮ್ಯಗಳನ್ನೆಲ್ಲ ವಿಶದಪಡಿಸಲು ಮತ್ತು ಕನ್ನಡಿಗರಿಗೆ ಪರಿಚಯಿಸಲು ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು 1935ರಲ್ಲೇ ‘ಧಮ್ಮಪದ’ವನ್ನು ಕನ್ನಡ ಅನುವಾದ, ಟಿಪ್ಪಣಿ, ಪರಿಶಿಷ್ಟಗಳೊಡನೆ ಪ್ರಕಟಿಸಿದ್ದರು. ಪಾಲೀಮೂಲ, ಸಂಸ್ಕೃತ ಛಾಯಾಪದ್ಯಗಳನ್ನು ಸೇರಿಸಿ 2017ರಲ್ಲಿ ಮರುಮುದ್ರಣಗೊಂಡ ‘ಧಮ್ಮಪದ’ ಕೃತಿಗೆ ಸ್ವಾಮಿಗಳು ಬರೆದ ಪ್ರೌಢ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

| ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು

ಬೌದ್ಧಮತವು ಭರತಖಂಡದಲ್ಲಿ ಹುಟ್ಟಿ ಬೆಳೆದು ಮೈಗರೆದು ಇಂದಿಗೆ ಹದಿನಾಲ್ಕು ಶತಮಾನಗಳ ಮೇಲೆ ಆಯಿತು. ತನ್ನ ಎಂಬತ್ತನೆಯ ವರ್ಷದವರೆಗೂ ಧಮೋಪದೇಶವನ್ನು ಮಾಡುತ್ತಿದ್ದು ಭರತಖಂಡದಲ್ಲೆಲ್ಲ ವಿಷ್ಣುವಿನ ಅವತಾರವೆಂದು ಭಾವಿಸಲ್ಪಡುವಷ್ಟು ಪೂಜ್ಯತೆಯನ್ನು ಹೊಂದಿ ದೇಹವನ್ನು ಇಟ್ಟ ಗೌತಮಬುದ್ಧನ ಚರಿತ್ರೆಯು ನಮ್ಮ ದೇಶದಲ್ಲಿ ಯಾರೊಬ್ಬರ ಕಿವಿಗೂ ಬೀಳದಂಥ ಅಜ್ಞಾತವಾಸವನ್ನು ಅನುಭವಿಸಿ ಈಗ ತಾನೆ ಅಲ್ಲಲ್ಲಿ ತಲೆಯೆತ್ತುತ್ತಿದೆ. ಗೌತಮನ ಧರ್ಮವು ಪ್ರಪಂಚದ ಮೂರನೆಯ ಒಂದು ಭಾಗದಷ್ಟು ಜನರ ಆದರಕ್ಕೆ ಪಾತ್ರವಾಗಿದ್ದರೂ ಅದನ್ನು ಕಣ್ಣೆತ್ತಿ ಕೂಡ ನೋಡದೆ ಇದ್ದ ನಮ್ಮ ದೇಶದವರು ಯುರೋಪಿನವರ, ಅದರಲ್ಲಿಯೂ ನಮ್ಮನ್ನಾಳುವ ಆಂಗ್ಲೇಯರ, ಸಹಾನುಭೂತಿಯನ್ನು ಪಡೆದು ಇಂಗ್ಲಿಷಿನ ಉಡುಪಿನಲ್ಲಿ ಇಲ್ಲಿಗೆ ಹೊಸದಾಗಿ ಬಂದಿರುವ ಈ ಧರ್ಮದ ಉಪದೇಶಗಳನ್ನು ಈಗ ತುಂಬ ಗೌರವದಿಂದ ಕಾಣುವದಕ್ಕೆ ಮೊದಲು ಮಾಡಿರುತ್ತಾರೆ. ಈ ಸುಸಮಯವನ್ನು ಸಾಧಿಸಿಕೊಂಡು ಬೌದ್ಧರೂ ಕಾಶಿಯಲ್ಲಿ ತಮ್ಮ ವಿದ್ಯಾಪೀಠವನ್ನು ಸ್ಥಾಪಿಸಿ ಮತಪ್ರಸಾರವನ್ನು ಮಾಡುವ ಹವಣಿಕೆಯನ್ನು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಬೌದ್ಧಮತವು ಈಶ್ವರನನ್ನಾಗಲಿ ಜೀವನನ್ನಾಗಲಿ ಒಪ್ಪದೆ ವೇದಪ್ರಾಮಾಣ್ಯವನ್ನು ಕಡೆಗಣಿಸಿದುದೇ ನಮ್ಮ ದೇಶದಲ್ಲಿ ಆ ಮತದ ಹೀನಸ್ಥಿತಿಗೆ ಕಾರಣವಾಯಿತೆಂದು ಕೆಲವರು ಊಹಿಸುತ್ತಾರೆ. ಇದರ ನಿಜವು ಹೇಗಾದರೂ ಇರಲಿ. ಪುಣ್ಯಪಾಪಕರ್ಮ, ಜನ್ಮಾಂತರ, ಜನ್ಮಾಂತರದಿಂದ ಬಿಡುಗಡೆ – ಈ ವಿಚಾರಗಳಲ್ಲಿ ಭರತಖಂಡದ ಉಳಿದ ದರ್ಶನಗಳಂತೆಯೇ ತನ್ನದೊಂದು ವಿಶಿಷ್ಟವಾದ ಸಿದ್ಧಾಂತವನ್ನು ಹೊರಕ್ಕೆ ತಂದಿರುವ ಗೌತಮಬುದ್ಧನ ದರ್ಶನದ ಸಾರವೇನೆಂಬುದನ್ನು ತಿಳಿಯುವದರಿಂದ ನಮ್ಮೆಲ್ಲರಿಗೂ ಪ್ರಯೋಜನವುಂಟೆಂಬುದರಲ್ಲಿ ಸಂದೇಹವೇ ಇಲ್ಲ. ಗೌತಮಬುದ್ಧನ ಧರ್ಮದಲ್ಲಿ ನಮಗಿದ್ದ ತಿರಸ್ಕಾರ ಬುದ್ಧಿಯ ಕಾಲದಲ್ಲಿ ನಾವು ಸಂಪಾದಿಸಿಕೊಂಡಿರುವ ತಪ್ಪುತಿಳಿವಳಿಕೆಯು ಹೋಗಬೇಕಾದರೆ ಪಾಲಿಯಲ್ಲಿಯೂ ಸಂಸ್ಕೃತದಲ್ಲಿಯೂ ಚೈನ, ಜಪಾನಿ, ಟಿಬ್ಬೆಟಿ ಭಾಷೆಗಳಲ್ಲಿಯೂ ಕಾಣಬರುವ ಗ್ರಂಥಗಳನ್ನು ಓದುವದು ಅತ್ಯವಶ್ಯವು; ಅದರಲ್ಲಿಯೂ ಅತ್ಯಂತ ಪ್ರಾಚೀನವಾದ ಬೌದ್ಧಧರ್ಮದ ಉಪದೇಶಗಳನ್ನು ತಿಳಿಯಬೇಕೆನ್ನುವವರು ಪಾಲಿಭಾಷೆಯಲ್ಲಿರುವ ‘ತ್ರಿಪಿಟಕ’ಗಳನ್ನು ಮೊಟ್ಟಮೊದಲು ಓದಬೇಕು.

ಪಾಲಿಗ್ರಂಥಗಳು ಹಲವು ಈಗ ಇಂಗ್ಲಿಷು ಅಕ್ಷರದಲ್ಲಿ ಅಚ್ಚಾಗಿವೆ, ದೇವನಾಗರಿಯಲ್ಲಿಯೂ ಅಚ್ಚಾಗುತ್ತಲಿವೆ. ಇವುಗಳ ಪರಿವರ್ತನೆಗಳೂ ವಿಚಾರ ಗ್ರಂಥಗಳೂ ಇಂಗ್ಲಿಷು, ಜರ್ಮನ್, ಫ್ರೆಂಚು – ಈ ಯೂರೋಪಿನ ಭಾಷೆಗಳಲ್ಲಿಯೂ ಮರಾಠಿ, ಹಿಂದಿ, ಬಂಗಾಳಿ – ಈ ಭರತಖಂಡದ ಭಾಷೆಗಳಲ್ಲಿಯೂ ಈಗ ಸಿಕ್ಕುತ್ತವೆ. ನಮ್ಮ ಕನ್ನಡದಲ್ಲಿ ಮಾತ್ರ ಬೌದ್ಧಧರ್ಮಗ್ರಂಥಗಳು ತೀರ ಕಡಿಮೆ, ಮಾತ್ರವಲ್ಲ ಇಲ್ಲವೇ ಇಲ್ಲವೆಂದರೂ ಸಲ್ಲುವಂತಿದೆ.

ವೈದಿಕರಿಗೆ ಸಂಸ್ಕೃತವು ಹೇಗೋ ಹಾಗೆ ದಾಕ್ಷಿಣಾತ್ಯಬೌದ್ಧರಿಗೆ ಪಾಲೀಭಾಷೆಯು ಧಾರ್ವಿುಕಗ್ರಂಥಗಳ ಭಾಷೆಯಾಗಿದೆ. ಪಾಲೀಭಾಷೆಯು ಬುದ್ಧನ ಕಾಲದಲ್ಲಿ ಪ್ರಚಾರದಲ್ಲಿರಲಿಲ್ಲವೆಂದು ಕೆಲವರು; ಅದು ಮಾಗಧೀ ಭಾಷೆಯೆಂದು ಕೆಲವರು; ಅದರ ರೂಪಾಂತರವೆಂದು ಕೆಲವರು; ಹೀಗೆ ಬಗೆಬಗೆಯಾಗಿ ಶೋಧಕರು ಅಭಿಪ್ರಾಯಪಡುತ್ತಿದ್ದಾರೆ. ಸಂಸ್ಕೃತನಾಟಕಗಳಲ್ಲಿ ಕಂಡುಬರುವ ಪ್ರಾಕೃತಭಾಷೆಗಳ ಗುಂಪಿಗೆ ಸೇರತಕ್ಕದ್ದಾಗಿರುವ ಈ ಭಾಷೆಯು ಅವುಗಳಂತಯೇ ಈಗ ಬರಿಯ ಗ್ರಂಥಸ್ಥಭಾಷೆಯಾಗಿರುತ್ತದೆ. ಸಂಸ್ಕೃತದ ಎಷ್ಟೋ ಶಬ್ದಗಳು ಈ ಭಾಷೆಯಲ್ಲಿ ಸೇರಿಕೊಂಡಿವೆ; ಮಿಕ್ಕ ಬಹುಭಾಗದ ಶಬ್ದಗಳು ಸಂಸ್ಕೃತದ ತದ್ಭವಗಳಾಗಿರುತ್ತವೆ ಶುದ್ಧಪಾಲಿಯೆಂದು ಹೇಳಬಹುದಾದ ಶಬ್ದಗಳು ಅತ್ಯಲ್ಪವಾಗಿರುತ್ತವೆ. ಆದ್ದರಿಂದ ಸಂಸ್ಕೃತವನ್ನು ಬಲ್ಲವರು ಈ ಭಾಷೆಯನ್ನು ಬಹು ಬೇಗನೆ ಕಲಿತುಕೊಳ್ಳಬಹುದಾಗಿ­ರುತ್ತದೆ.

ಪಾಲಿಯಲ್ಲಿರುವ ತ್ರಿಪಿಟಕಗಳೆಂಬ ಧರ್ಮಭಾಂಡಾಗಾರವನ್ನು ಸುತ್ತಪಿಟಕ (ಸೂತ್ರಪಿಟಕ), ವಿನಯಪಿಟಕ, ಅಭಿಧಮ್ಮಪಿಟಕ (ಅಭಿಧರ್ಮಪಿಟಕ)ವೆಂದು ಮೂರು ಭಾಗವಾಗಿ ವಿಂಗಡಿಸಬಹುದು. ಸೂತ್ರಪಿಟಕದಲ್ಲಿ ದೀಘ(ದೀರ್ಘ) ನಿಕಾಯ, ಮಜ್ಝಿಮ (ಮಧ್ಯಮ) ನಿಕಾಯ, ಸಂಯುತ್ತ (ಸಂಯುಕ್ತ) ನಿಕಾಯ, ಅಂಗುತ್ತರ ನಿಕಾಯ, ಖುದ್ದಕನಿಕಾಯ (ಕ್ಷುದ್ರಕನಿಕಾಯ) – ಎಂಬ ಐದು ವಿಭಾಗಗಳಿವೆ. ಹೀಗೆಯೇ ವಿನಯಪಿಟಕದಲ್ಲಿ ಮೂರು ಭಾಗಗಳಿವೆ, ಅಭಿಧರ್ಮ ಪಿಟಕದಲ್ಲಿ ಏಳು ಗ್ರಂಥಗಳಿವೆ. ಈಗ ನಾವು ಕನ್ನಡಿಸಿರುವ ಧಮ್ಮಪದವು ಸುತ್ತಪಿಟಕದ ವಿಭಾಗವಾದ ಖುದ್ದಕನಿಕಾಯದಲ್ಲಿ ಸೇರಿರುವ ಹದಿನೈದು ಗ್ರಂಥಗಳಲ್ಲಿ ಒಂದೆಂದು ಬೌದ್ಧರು ಹೇಳುತ್ತಾರೆ.

ತ್ರಿಪಿಟಕವೆಲ್ಲ ಬುದ್ಧನ ವಚನವೆಂದು ಬೌದ್ಧರು ಹೇಳುತ್ತಾರಾದರೂ ಬುದ್ಧನ ಕಾಲದಲ್ಲಿ ಅಥವಾ ಅವನ ಪರಿನಿರ್ವಾಣವಾದ ಮೇಲೆ ಈ ಗ್ರಂಥಗಳನ್ನು ಬರೆದಿರಬೇಕೆಂದು ಅನೇಕ ಕಾರಣಗಳಿಂದ ಹೇಳಬಹುದಾಗಿರುತ್ತದೆ. ಎಷ್ಟೋ ಗ್ರಂಥಗಳ ಪ್ರಾರಂಭದಲ್ಲಿ ‘‘ಹೀಗೆಂದು ನಾನು ಕೇಳಿದೆನು’’ (ಏವಂ ಮೇ ಶ್ರುತಮ್ ಎಂಬುದೊಂದು ಪಲ್ಲವಿಯು ಕಂಡುಬರುತ್ತದೆ. ಇದರ ನಿಜವು ಹೇಗಾದರೂ ಇರಲಿ. ಪ್ರಕೃತದಲ್ಲಿ ನಾವು ಕನ್ನಡಕ್ಕೆ ತಂದಿರುವ ಧಮ್ಮಪದದಲ್ಲಿರುವ ಎಷ್ಟೋ ‘‘ಗಾಥೆ’’(ಶ್ಲೋಕ)ಗಳು ಬೇರೆ ಬೌದ್ಧಗ್ರಂಥಗಳಲ್ಲಿಯೂ ದೊರೆಯುತ್ತಿರುವವು. ಆದ್ದರಿಂದ ಈ ಗ್ರಂಥವು ಭರ್ತೃಹರಿಯ ಸುಭಾಷಿತವೇ ಮುಂತಾದ ಗ್ರಂಥಗಳ ಹಾಗೆ ಮೊದಲು ಬೇರೆ ಬೇರೆ ಕಡೆಯಿಂದ ಸಂಕಲಿತವಾಗಿದ್ದು ಈಚೆಗೆ ಖುದ್ದಕನಿಕಾಯದಲ್ಲಿ ಸೇರಿದ ಗ್ರಂಥವೆಂದು ಪರಿಗಣಿತವಾಯಿತೆಂತ ತೋರುತ್ತದೆ.

ಧಮ್ಮಪದವು ಬೌದ್ಧರಲ್ಲಿ ಬಹಳ ಪೂಜ್ಯವಾದ ಸ್ಥಾನವನ್ನು ಹೊಂದಿರುತ್ತದೆ. ಬೌದ್ಧಭಿಕ್ಷುಗಳು ಇದನ್ನು ಕಂಠಪಾಠಮಾಡಿಯೇ ತೀರುತ್ತಾರೆ. ನಮ್ಮ ದೇಶದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಸಂಭಾಷಣೆಯಲ್ಲಿಯೂ ಉಪನ್ಯಾಸದಲ್ಲಿಯೂ ಹೇಗೆ ಅಲ್ಲಲ್ಲಿ ಉದಾಹರಿಸುವರೋ ಅದರಂತೆ ಧಮ್ಮಪದದ ಗಾಥೆಗಳನ್ನೂ ಆಗಾಗ್ಗೆ ಬೌದ್ಧರು ಉದಾಹರಿಸುತ್ತಿರುತ್ತಾರೆ. ಭಗವದ್ಗೀತೆಯಂತೆಯೇ ಇದು ಪ್ರಪಂಚದ ಮುಖ್ಯಭಾಷೆಗಳಿಗೆಲ್ಲ ಪರಿವರ್ತನೆಯಾಗಿರುತ್ತದೆ. ಇದನ್ನು ಬೌದ್ಧರ ಭಗವದ್ಗೀತೆ ಅಥವಾ ‘ಬುದ್ಧಗೀತೆ’ ಎಂದು ಕರೆದರೆ ತಪ್ಪಾಗದು. ಬುದ್ಧಗೀತೆಯೆಂಬ ಹೆಸರಿನಿಂದಲೇ ಇದನ್ನು ಆಗಲೆ ಅನೇಕರು ಪರಿವರ್ತಿಸಿಯೂ ಇರುತ್ತಾರೆ. ಈ ಗ್ರಂಥದಲ್ಲಿರುವ ಕೆಲವು ಗಾಥೆಗಳು ಸಂಸ್ಕೃತರೂಪದಲ್ಲಿ ಮಹಾಭಾರತದಲ್ಲಿಯೂ ಮನುಸ್ಮೃಯಲ್ಲಿಯೂ ಕಂಡುಬರುತ್ತವೆ. ಬೌದ್ಧಧರ್ಮವು ಹುಟ್ಟುವದಕ್ಕೆ ಮೊದಲೇ ಆರ್ಯರಲ್ಲಿ ಹರಡಿಕೊಂಡಿದ್ದ ಎಷ್ಟೋ ನೀತಿವಚನಗಳನ್ನು ಇಲ್ಲಿ ಸೇರಿಸಿದೆಯೆಂಬುದು ಇದರಿಂದ ವ್ಯಕ್ತವಾಗುತ್ತದೆ. ಧಮ್ಮಪದವೆಂಬ ಮಾತಿಗೆ ‘ಧರ್ಮವನ್ನು ತಿಳಿಸುವ ವಚನ’ ಎಂದೇ ಅರ್ಥವೆಂದು ತೋರುತ್ತದೆ; ಚೈನಭಾಷೆಯಲ್ಲಿ ಇದಕ್ಕೆ ಈ ಅರ್ಥವನ್ನೇ ಮಾಡಿದೆಯಂತೆ. (1. exts from the Buddhist Canon by Samul Beal.)

ಧಮ್ಮಪದವನ್ನು ಇಪ್ಪತ್ತಾರು ವರ್ಗಗಳಾಗಿ ವಿಂಗಡಿಸಿರುತ್ತದೆ. (ಶ್ರೀಯುತ ಸ್ಯಾಮ್ಯುಎಲ್ ಬೀಲ್​ರವರು ಇಂಗ್ಲೀಷಿಗೆ ಪರಿವರ್ತಿಸಿರುವ ಚೈನ ಧಮ್ಮಪದದಲ್ಲಿ ಮೂವತ್ತೊಂಬತ್ತು ವರ್ಗಗಳಿವೆ. ಇದರಲ್ಲಿ ಪಾಲಿಗ್ರಂಥದ 26 ವರ್ಗಗಳೂ ಅಡಕವಾಗಿವೆ. ಧಮ್ಮಪದ ಎಂಬ ಹೆಸರಿನಿಂದ ಅನೇಕ ಸಂಗ್ರಹಗಳಾಗಿದ್ದವೆಂಬುದು ತೋರುತ್ತದೆ.) ಒಂದೊಂದು ವರ್ಗದಲ್ಲಿ ಕೆಲವು ಗಾಥೆಗಳು ಅಥವಾ ಶ್ಲೋಕಗಳು ಇವೆ. ವರ್ಗಗಳನ್ನು ಒಂದು ಕ್ರಮದಲ್ಲಿ ಜೋಡಿಸಿರುವದಿಲ್ಲ. ವರ್ಗಗಳಿಗೆ ಕೊಟ್ಟಿರುವ ಹೆಸರು ಗಾಥೆಗಳಲ್ಲಿ ವಿಶೇಷವಾಗಿ ಬಂದಿರುವ (ಪುಷ್ಪ, ಸಹಸ್ರ) ಮುಂತಾದ ಒಂದೊಂದು ಮಾತಿನ ಆಧಾರದ ಮೇಲೆ ಬಂದಿರುತ್ತದೆಯೇ ಹೊರತು ಮತ್ತೇನೂ ವಿಶೇಷಕಾರಣದಿಂದಲ್ಲ; ಕೆಲವು ಗಾಥೆಗಳನ್ನು ಎರಡೆರಡು ಸಲ ಕೊಟ್ಟಿರುತ್ತದೆ. ಸಂಸ್ಕೃತದ ಸುಭಾಷಿತಗಳನ್ನು ಓದಿರುವವರಿಗೆ ಗ್ರಂಥದ ಶೈಲಿಯು ಸ್ವಾಭಾವಿಕವಾಗಿಯೇ ಕಾಣುತ್ತದೆ.

ಧಮ್ಮಪದವನ್ನು ಕೆಲವು ವರ್ಷಗಳ ಹಿಂದೆ ಕೈಲಾಸವಾಸಿಗಳಾದ ಬಿ. ಅಶ್ವತ್ಥನಾರಾಯಣಶಾಸ್ತ್ರಿಗಳವರು ಕನ್ನಡಕ್ಕೆ ಅನುವಾದಮಾಡಿದ್ದರು. ಆ ಅನುವಾದವು ಪಾಲಿಯಿಂದಲೇ ನೇರಾಗಿ ಮಾಡಿದ್ದೆಂತ ತೋರುವದಿಲ್ಲ. ಅದರಲ್ಲಿ ಪ್ರತಿಯೊಂದು ಪುಟದಲ್ಲಿಯೂ ವೈದಿಕಗ್ರಂಥಗಳಿಂದ – ಎಂದರೆ ಉಪನಿಷತ್ತುಗಳು, ಭಾರತ, ಸ್ಮೃ, ಗೀತೆ – ಮುಂತಾದವುಗಳಿಂದ ಆರಿಸಿದ ಕೆಲವು ಉದಾಹರಣೆಗಳನ್ನು ಸಮಾನಾರ್ಥಕವೆಂದು ಕೊಡಲಾಗಿದ್ದಿತು. ಅದ್ವೆ ೖತವೇದಾಂತಕ್ಕೂ ಬೌದ್ಧಮತಕ್ಕೂ ಸಿದ್ಧಾಂತದಲ್ಲಿ ಯಾವ ತಾರತಮ್ಯವೂ ಇಲ್ಲವೆಂದೂ ಬೌದ್ಧನು ಮಾಡಿದ್ದ ಉಪದೇಶಗಳನ್ನೇ ಕಾಲಾಂತರದಲ್ಲಿ ಶಂಕರಾಚಾರ್ಯರೂ ಮಾಡಿದರೆಂದೂ ಅನುವಾದಕರು ತಮ್ಮ ಪೀಠಿಕೆಯಲ್ಲಿ ಬರೆದಿದ್ದರು. ನಾನು ಮೊದಲನೆಯ ಸಲ

ಆ ಅನುವಾದವನ್ನು ಓದಿದಾಗ, ಎಂದರೆ ಸುಮಾರು ಮೂವತ್ತು ವರ್ಷಗಳ ಹಿಂದೆ, ನನಗೆ ಅನುವಾದಕರ ಅಭಿಪ್ರಾಯವು ಸರಿಯೆಂದೇ ತೋರಿತು; ಅಮರಕೋಶದಲ್ಲಿ ಬುದ್ಧದೇವನಿಗೆ ‘ಅದ್ವಯವಾದಿ’ ಎಂಬ ಹೆಸರಿಟ್ಟಿರುವದನ್ನು ಕಂಡು ಮಾಯಾದೇವಿಯ ಮಗನಾದ ಬುದ್ಧನು ಉಪದೇಶಿಸಿದ ಸಿದ್ಧಾಂತವು ಅದ್ವೆ ೖತವೂ ಮಾಯಾವಾದವೂ ಆಗಿರುವದರಲ್ಲಿ ಆಶ್ಚರ್ಯವೇನೂ ಇಲ್ಲವೆಂದು ಕೂಡ ನಾನು ಒಮ್ಮೆ ಅಭಿಪ್ರಾಯಪಟ್ಟಿದ್ದೆನು. ಶಂಕರಾಚಾರ್ಯರನ್ನು ಪ್ರಚ್ಛನ್ನಬೌದ್ಧರೆಂದು ಮತಾಂತರದವರು ಕರೆಯುವದಕ್ಕೆ ಇದೇ ಕಾರಣವಿರಬಹುದೆಂದೂ ನನಗೆ ಆಗ ಅನಿಸಿತ್ತು. ಆದರೆ ಕುತೂಹಲದಿಂದ ಬೌದ್ಧಲೇಖನಗಳನ್ನು ನೋಡುತ್ತಬಂದಹಾಗೆಲ್ಲ ಈ ನನ್ನ ಅಭಿಪ್ರಾಯವು ಕನಸಿನಂತೆ ಕರಗಿಹೋಗಿ ಅನಾತ್ಮವಾದವನ್ನು ಹೇಳುವ ಬೌದ್ಧಮತಕ್ಕೂ ಸರ್ವಾತ್ಮವಾದವನ್ನು ಹೇಳುವ ಅದ್ವೆ ೖತಕ್ಕೂ ಯಾವದೊಂದು ಸಾಮ್ಯವೂ ಇರುವದು ಸಾಧ್ಯವಿಲ್ಲವೆಂದು ನಿಶ್ಚಿತವಾಯಿತು. ಬುದ್ಧನು ಕೂಡ ಮೊದಲು ಆತ್ಮವಾದವನ್ನೇ ಇಟ್ಟುಕೊಂಡಿದ್ದನೆಂದು ಕೆಲವರು ಶೋಧಕರು ಈಚೆಗೆ ಊಹಿಸುತ್ತಿದಾರೆಯಾದರೂ ಬೌದ್ಧಗ್ರಂಥಗಳಲ್ಲಿಯಾಗಲಿ ವೇದಾಂತಗ್ರಂಥಗಳಲ್ಲಿಯಾಗಲಿ

ಈ ಅಭಿಪ್ರಾಯಕ್ಕೆ ಯಾವದೊಂದು ಆಧಾರವೂ ದೊರಕಿರುವದಿಲ್ಲ; ಇಷ್ಟೇ ಅಲ್ಲ, ಬೌದ್ಧರಿಗೂ ವೇದಾಂತಿಗಳಿಗೂ ಆಗಿರುವ ವಾದಗಳೆಲ್ಲ ಆತ್ಮವಿಷಯವಾಗಿಯೇ ಉಂಟಾಗಿರುತ್ತವೆಯೆಂಬುದು ಅತ್ಯಂತವಾಗಿ ಸ್ಪುಟವಾಗಿರುತ್ತದೆ.

ಈ ನನ್ನ ಅಭಿಪ್ರಾಯವನ್ನು ಸ್ಪಷ್ಟಗೊಳಿಸುವದಕ್ಕಾಗಿ ಕೆಲವು ಪ್ರಧಾನವಾದ ಬೌದ್ಧಗ್ರಂಥಗಳನ್ನು ಕನ್ನಡಿಸಬೇಕೆಂಬ ಸಂಕಲ್ಪವನ್ನು ನಾಲ್ಕಾರು ವರ್ಷಗಳ ಹಿಂದೆಯೇ ಮಾಡಿಕೊಂಡೆನು. ಧಮ್ಮಪದವನ್ನು ಕನ್ನಡಿಸಿ ಮೂರು ವರ್ಷವಾದರೂ ಮುದ್ರಿಸುವದಕ್ಕೆ ತಕ್ಕ ಅನುಕೂಲವಿಲ್ಲದೆ ಅದರ ಪ್ರಕಟನೆಯನ್ನು ಸ್ವಲ್ಪ ತಡಮಾಡಬೇಕಾಯಿತು. ಈಚೆಗೆ ಶ್ರೀಯುತ ಜಿ.ಪಿ.ರಾಜರತ್ನಂ, ಎಂ.ಎ. ಇವರು ‘ಸುಬೋಧ’ ಪತ್ರಿಕೆಯಲ್ಲಿ ಇದೇ ಗ್ರಂಥದ ಪರಿವರ್ತನೆಯನ್ನು ಅನುವಾದ ಮಾಡಿದ್ದನ್ನು ಕಂಡೆನು. ನನ್ನ ಭಾಷಾಂತರವು ಹೊರಕ್ಕೆ ಬರುವದು ಈಗಲೂ ಅಗತ್ಯವೆ? ಎಂದು ಯೋಚಿಸಲಾರಂಭಿಸಿದೆನು. ಆದರೆ ಶ್ರೀಯುತರವರು ಕನ್ನಡಿಸಿರುವ ಕ್ರಮವೂ ಅದನ್ನು ಅವರು ಪ್ರಕಟಿಸಿರುವದರಲ್ಲಿ ಅವರ ದೃಷ್ಟಿಕೋನವೂ ನನ್ನ ಕ್ರಮ, ದೃಷ್ಟಿಕೋನ – ಇವುಗಳಿಗಿಂತ ತೀರ ಬೇರೆಯಾಗಿ­ರುವದೆಂದು ನಿಶ್ಚಿತವಾದ ಮೇಲೆ ನನ್ನ ಅನುವಾದವನ್ನು ಅಚ್ಚಿಗೆ ಕೊಟ್ಟೆನು.

ಈ ಅನುವಾದದಲ್ಲಿ (1) ಧಮ್ಮಪದ (ದೇವನಾಗರಿಯಲ್ಲಿ) ಮೂಲ, ಶ್ರೀಯುತ ಎನ್.ಜಿ. ಪಿಂಗಲೆ ಬಿ.ಎ.ರವರು ಪೊ›ಫೆಸರ್ ಧರ್ವನಂದ ಕೋಶಾಂಬಿ ಎಂಬವರ ಸಹಾಯದಿಂದ ಪೂನದಲ್ಲಿ ಪ್ರಕಟಿಸಿದ್ದು; (2) ಧಮ್ಮಪದ (ದೇವನಾಗರಿಯಲ್ಲಿ) ಮೂಲ, ಇಂಗ್ಲಿಷ್ ಪೀಠಿಕೆ, ಭಾಷಾಂತರ, ಟಿಪ್ಪಣಿಸಹಿತ, ಡಾಕ್ಟರ್ ಪಿ. ಎಲ್. ವೈದ್ಯ ಇವರು ಪ್ರಕಟಿಸಿದ್ದು; (3) ಧಮ್ಮಪದ (ದೇವನಾಗರಿಯಲ್ಲಿ) ಮೂಲ, ಸಂಸ್ಕೃತಛಾಯಾ ಹಿಂದೀ ಅನುವಾದಸಹಿತ, ಮಹಾಪಂಡಿತ ತ್ರಿಪಿಟಿಕಾಚಾರ್ಯ ರಾಹುಲ ಸಾಂಕೃತ್ಯಾಯನರು ಪ್ರಯಾಗದಲ್ಲಿ ಪ್ರಕಟಿಸಿದ್ದು; (4) ಈಜಚಞಞಚಟಚಛಚ ಟ್ಟ ಗಚಢ ಟ್ಛ ಖ್ಟ್ಠಜ ಶ್ರೀಶಿಲಾಚಾರ (ಭಿಕ್ಕು) – ಇವರು ಲಂಡನ್ನಿನಲ್ಲಿ ಪ್ರಕಟಿಸಿದ್ದು (5) ಖಜಛಿ ಆಛಛಜಚ’ಠ ಕಚಠಿಜ ಟ್ಛ ಡಜ್ಟಿಠ್ಠಿಛಿ ಶ್ರೀಯುತ ಎಫ್.ಎಲ್.ವುಡ್​ವಾರ್ಡ್ ಎಮ್​ಎ.ರವರು ಮದರಾಸಿನಲ್ಲಿ ಪ್ರಕಟಿಸಿದ್ದು – ಈ ಐದು ಗ್ರಂಥಗಳ ನೆರವನ್ನು ಮುಖ್ಯವಾಗಿ ಪಡೆದಿರುತ್ತೇನೆ. ಮಿಕ್ಕ ಗ್ರಂಥಗಳಿಂದಲೂ ಅಲ್ಪಸ್ವಲ್ಪ ಸಹಾಯವಾಗಿರುತ್ತದೆ. ಮುಖ್ಯವಾಗಿ ಸಾಂಕೃತ್ಯಾಯನರ ಪರಿವರ್ತನೆಯಿಂದಲೂ ಪೂನಾದ ಪರಿವರ್ತನೆಗಳಿಂದಲೂ ನನಗೆ ತುಂಬ ಸಹಾಯವಾಗಿರುತ್ತದೆಯಾಗಿ ಆ ಗ್ರಂಥಗಳ ಪ್ರಕಾಶಕರಿಗೆ ನಾನು ತುಂಬ ಕೃತಜ್ಞನಾಗಿರುತ್ತೇನೆ.

ಮೂಲದ ಅಕ್ಷರಾರ್ಥವನ್ನು ಕೊಡಬೇಕೆಂಬ ದೃಷ್ಟಿಯಿಂದ ಪಾಲಿಯನ್ನು ಕನ್ನಡಿಸಿಲ್ಲವಾದ್ದರಿಂದ ಮೂಲದ ಛಾಯೆಯನ್ನೇ ಅನುಸರಿಸುವ ಕಷ್ಟಕ್ಕೆ ಬೀಳಬೇಕಾದ ಸಂಭವವು ಒದಗಲಿಲ್ಲ. ಮೂಲದಲ್ಲಿ ಕೊಟ್ಟಿರುವ ಕೆಲವು ಪದಗಳು ಬೌದ್ಧರಲ್ಲಿ ಪಾರಿಭಾಷಿಕವಾಗಿವೆಯೆಂಬುದನ್ನು ಸೂಚಿಸುವದಕ್ಕಾಗಿ ಅವುಗಳನ್ನು ದಪ್ಪಕ್ಷರದಲ್ಲಿಟ್ಟು ಟಿಪ್ಪಣಿಯಲ್ಲಿ ಅವನ್ನು ಸಂಕ್ಷೇಪವಾಗಿ ವಿವರಿಸಿ ಅಂಥ ಶಬ್ದಗಳ ಸೂಚಿಯೊಂದನ್ನು ಗ್ರಂಥದ ಕೊನೆಯಲ್ಲಿ ಕೊಟ್ಟಿರುತ್ತೇನೆ. ವೈದಿಕಧರ್ಮದ ವಿಚಾರವು ನಮ್ಮ ದೇಶದಲ್ಲಿ ಪ್ರಚಾರವಾಗಿಯೇ ಇರುವದರಿಂದ ಆ ದೃಷ್ಟಿಯಿಂದ ನೋಡಿದರೆ ಮೂಲದಲ್ಲಿ ಯಾವಯಾವ ವಿವರವು ಅಗತ್ಯವೆಂದು ತೋರಿತೋ ಅದನ್ನೆಲ್ಲ ಸಂಗ್ರಹಿಸಿರುತ್ತೇನೆ. ಅನುವಾದವು ನನಗೆ ಸರಿಯಾಗಿ ತಿಳಿಯದೆಯೂ ನಾನು ನಂಬಿರುವ ಬೇರೆ ಬೇರೆ ಗ್ರಂಥಗಳಲ್ಲಿ ಭಿನ್ನಾಭಿಪ್ರಾಯದಿಂದ ವಾದಗ್ರಸ್ತವಾಗಿಯೂ ಇದ್ದ ಕಡೆಯಲ್ಲಿ ಟಿಪ್ಪಣಿಯಲ್ಲಿ ಆಯಾ ಮತಭೇದವನ್ನು ಸಂಕ್ಷೇಪವಾಗಿ ತಿಳಿಸಿರುತ್ತೇನೆ. ಪರಿಶಿಷ್ಟದಲ್ಲಿ ವೇದಾಂತಕ್ಕೂ ಬೌದ್ಧದರ್ಶನಕ್ಕೂ ಇರುವ ತಾರತಮ್ಯವನ್ನು ಸ್ವಲ್ಪದರಲ್ಲಿಯೇ ಸ್ಪುಟವಾಗಿ ತೋರುವಂತೆ ಬರೆದಿರುತ್ತೇನೆ; ವೇದಾಂತಿಗಳು ಮುಂದಕ್ಕೆ ತಂದಿರುವ ಅವಸ್ಥಾತ್ರಯ ದೃಷ್ಟಿ, ಸಾಕ್ಷಿಚೈತನ್ಯವಾದ – ಇವೆರಡೂ ಬೌದ್ಧದರ್ಶನದಲ್ಲಿ ತಿಲಮಾತ್ರವೂ ಕಂಡುಬಾರದೆ ಇರುವದರಿಂದ ಈ ಎರಡು ದರ್ಶನಗಳು ಅತ್ಯಂತ ಭಿನ್ನಪ್ರಸ್ಥಾನಗಳಾಗಿವೆಯೆಂಬುದುಈ ಪರಿಶಿಷ್ಟದಿಂದ ಸ್ಪಷ್ಟಪಡುವಂತಿದೆ.

ನೀತ್ಯುಪದೇಶದಲ್ಲಿ ಹಿಂದೂಮತವೂ ಬೌದ್ಧಮತವೂ ಒಂದೇ ಮರದಲ್ಲಿ ಒಡೆದುಕೊಂಡಿರುವ ಎರಡು ಕೊಂಬೆಗಳಂತೆ ಕಾಣುತ್ತವೆ; ಆದ್ದರಿಂದ ಈ ವಿಷಯದಲ್ಲಿ ಅನೇಕ ಸಾಮ್ಯಗಳಿರುವದು ಸ್ವಾಭಾವಿಕವಾಗಿರುತ್ತದೆ. ಈ ವಚನಗಳಲ್ಲಿ ಕೆಲವನ್ನು ನಾನು ಮೊಟ್ಟಮೊದಲನೆಯ ಸಲ ಹುಡುಕಿ ತೆಗೆದಿರುತ್ತೇನೆ; ಇನ್ನೂ ಇಂಥ ಅನೇಕ ವಚನಗಳು ಮಹಾಭಾರತದಲ್ಲಿಯೂ ಪುರಾಣಗಳಲ್ಲಿಯೂ ಹುದುಗಿರುವವೆಂದು ನನ್ನ ದೃಢವಿಶ್ವಾಸವಿರುತ್ತದೆ. ಇಂಥ ವಚನಗಳನ್ನು ಕಂಡುಕೊಂಡಹಾಗೆಲ್ಲ ಬೌದ್ಧಧರ್ಮದಲ್ಲಿ ವೈದಿಕರಿಗೆ ಹೆಚ್ಚು ಹೆಚ್ಚು ಸಹಾನುಭೂತಿಯುಂಟಾಗುವದರಲ್ಲಿ ಸಂದೇಹವಿಲ್ಲ.

ಧಮ್ಮಪದದಲ್ಲಿ ಕೆಲಕೆಲವು ಗಾಥೆಗಳನ್ನು ಕೆಲಕೆಲವು ಸಂದರ್ಭಗಳಲ್ಲಿ ಬುದ್ಧನು ಹೇಳಿದನೆಂದು ವರ್ಣಿಸುವದು ಬೌದ್ಧರ ಸಂಪ್ರದಾಯವಾಗಿದೆ. ಧಮ್ಮಪದಕ್ಕೆ ಬುದ್ಧಘೊಷನು ಬರೆದದ್ದೆಂದು ಪ್ರಸಿದ್ಧವಾಗಿರುವ ಅಟ್ಟಕಥಾ (ಅರ್ಥಕಥಾ) ಎಂಬ ಒಂದು ವಿಸ್ತಾರವಾದ ವ್ಯಾಖ್ಯಾನವಿದೆ. ಯಾವ ಯಾವ ಗಾಥೆಗಳನ್ನು ಎಲ್ಲಿ ಯಾವ ಸಂದರ್ಭದಲ್ಲಿ ಯಾರಿಗೆ ಬುದ್ಧನು ಹೇಳಿದನೆಂಬುದನ್ನು ಈ ವ್ಯಾಖ್ಯಾನದಲ್ಲಿ ವಿವರಿಸಿರುತ್ತದೆ. ಭಗವದ್ಗೀತೆಯ ಶ್ಲೋಕಗಳೇ ಸಾಕ್ಷಾತ್ತಾಗಿ ಶ್ರೀಕೃಷ್ಣನ ಮುಖದಿಂದ ಬಂದವೆಂದು ನಂಬುವ ಕೆಲವರು ಹಿಂದುಗಳ ವಿಶ್ವಾಸಕ್ಕೆ ಇಲ್ಲೊಂದು ಸಮಾನ ದೃಷ್ಟಾಂತವಿದೆಯೆಂದು ಹೇಳಬಹುದು. ಇದಿರಲಿ. ಮೊದಲು ಪಾಲಿಯಲ್ಲಿ ಬರೆದಿದ್ದ ಧಮ್ಮಪದವು ಭರತಖಂಡದಲ್ಲಿಯೇ ಅಸ್ತವಾಗಲು ಅನೂರಾಧಪುರಕ್ಕೆ ಹೋಗಿದ್ದ ಬುದ್ಧಘೊಷನು ಸಿಂಹಳಭಾಷೆಯಿಂದ ಅದನ್ನು ಮತ್ತೆ ಪಾಲಿಗೆ ತಿರುಗಿಸಿದನೆಂದೂ ಈಗ ಸಿಂಹಳಭಾಷೆಯ ಮೂಲವೂ ಸಿಕ್ಕುವಹಾಗಿಲ್ಲವೆಂದೂ ಹೇಳುತ್ತಾರೆ. ಈ ಕಥೆಯು ಎಷ್ಟು ಮಟ್ಟಿಗೆ ವಿಶ್ವಾಸಾರ್ಹವೋ ಹೇಳುವದಕ್ಕೆ ಬರುವದಿಲ್ಲ; ಆದರೂ ಬುದ್ಧಘೊಷನು ಬೌದ್ಧಮತವನ್ನು ಪುನಃಪ್ರತಿಷ್ಠೆ ಮಾಡಿದವನೆಂಬ ಗೌರವಕ್ಕೆ ಪಾತ್ರನಾಗಿರುವದರಿಂದಲೂ ಸದ್ಯಕ್ಕೆ ಸಿಕ್ಕುವದು ಅವನ ವ್ಯಾಖ್ಯಾನುಸಾರವಾದ ಪಾಠವೇ ಆಗಿರುವದರಿಂದಲೂ ಟಿಪ್ಪಣಿಯಲ್ಲಿ ಅಲ್ಲಲ್ಲಿ ವ್ಯಾಖ್ಯಾನುಸಾರವಾದ ವಿಶೇಷವನ್ನು ಸೂಚಿಸಿರುತ್ತೇನೆ. ಸಂದರ್ಭವನ್ನೆಲ್ಲ ವಿವರಿಸದೆ ಗಾಥೆಯನ್ನು ಹೇಳಿದ ಸ್ಥಳ, ಯಾರಿಗೆ ಹೇಳಿದ್ದು – ಇವೆರಡನ್ನು ಮಾತ್ರ ಕೊಡುವದರಿಂದ ಯಾವ ಪ್ರಯೋಜನವೂ ಕಾಣಲಿಲ್ಲವಾದ್ದರಿಂದ ಸಂಗ್ರಹವಾಗಿ ಬರೆದಿರುವ ಈ ಗ್ರಂಥದಲ್ಲಿ ಅದರ ಗೋಜಿಗೆ ಹೋಗಲಿಲ್ಲ.

ಬೌದ್ಧಧರ್ಮವು ಮೂಲರೂಪದಲ್ಲಿ ಹೇಗಿರುವದೆಂಬುದನ್ನು ತಿಳಿಯಬೇಕೆನ್ನುವವರಿಗೂ ವೇದಾಂತಕ್ಕೂ ಬೌದ್ಧದರ್ಶನಕ್ಕೂ ಇರುವ ಸಾಮ್ಯ ವೈಷಮ್ಯಗಳನ್ನು ತಿಳಿಯಬೇಕೆನ್ನುವವರಿಗೂ ಈ ಚಿಕ್ಕ ಪುಸ್ತಕವು ವಿಷಯ ಪ್ರವೇಶಿಕೆಯಾಗಿ ಪರಿಣಮಿಸಿದರೆ ನನ್ನ ಶ್ರಮವು ಸಾರ್ಥಕವೆಂದು ಭಾವಿಸುವೆನು.

ಬೌದ್ಧಮತದ ಸಾರ

ಬುದ್ಧನ ಮುಖ್ಯೋಪದೇಶವನ್ನು ತಿಳಿದುಕೊಳ್ಳಬೇಕೆನ್ನುವವರು ಆತನು ಉಪದೇಶಿಸಿರುವ ನಾಲ್ಕು ಆರ್ಯಸತ್ಯಗಳನ್ನು ತಿಳಿದುಕೊಳ್ಳಬೇಕು; ಅದರಲ್ಲಿ ಅಡಕವಾಗಿರುವ ಕರ್ಮವಿಪಾಕದ ವರ್ಣನೆಯನ್ನೂ ನಿರ್ವಾಣಪ್ರಾಪ್ತಿಯ ಮಾರ್ಗವನ್ನೂ ತಿಳಿದುಕೊಳ್ಳಬೇಕು. ಇವುಗಳನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸಲಾಗುವದು.

ನಾಲ್ಕು ಆರ್ಯಸತ್ಯಗಳು

ಪ್ರಪಂಚವು ಶಾಶ್ವತವೆ, ಅಶಾಶ್ವತವೆ? ಇದು ಹೇಗೆ ಉಂಟಾಯಿತು? – ಎಂಬಿವೇ ಮುಂತಾದ ಚರ್ಚೆಗಳು ಬೌದ್ಧಮತದಲ್ಲಿಲ್ಲ. ಚೇತನಾಚೇತನಾತ್ಮಕವಾದ ಜಗತ್ತು ನಮ್ಮ ಎದುರಿಗೆ ಇದೆಯ. ಇದರಲ್ಲಿರುವ ಚೇತನಪ್ರಾಣಿಗಳೆಲ್ಲವೂ ಪಂಚಸ್ಕಂಧಗಳಿಂದ ಆಗಿರುತ್ತವೆ. ಈ ಸ್ಕಂಧಗಳು ಎಲ್ಲವೂ ಅನಿತ್ಯವಾಗಿರುತ್ತವೆ, ಅನಾತ್ಮವಾಗಿರುತ್ತವೆ, ಎಂದರೆ ಮೇಲೆ ಕಾಣುವ ವಿಕಾರಿಯಾದ ರೂಪವಲ್ಲದೆ ಸ್ಥಿರವಾದ ಯಾವದೊಂದು ಆಧಾರವಸ್ತುವೂ ಇಲ್ಲದವುಗಳಾಗಿರುತ್ತವೆ; (ಧಮ್ಮಪದ: 277, 279) ಇದನ್ನು ಅರಿಯದೆ ಇರುವದರಿಂದ ಮನುಷ್ಯನಿಗೆ ತಾನು ಒಬ್ಬ ವ್ಯಕ್ತಿಯಾಗಿ ಸ್ಥಿರವಾದ ಆತ್ಮರೂಪದಿಂದ ಇರುವೆನೆಂಬ ನಂಬಿಕೆಯಾಗಿ ಈ ತಪ್ಪು ತಿಳಿವಳಿಕೆಯಿಂದ ಪಾಪಪುಣ್ಯಕರ್ಮಗಳನ್ನು ಮಾಡುತ್ತಾ ಜನ್ಮಾಂತರವನ್ನು ಹೊಂದಿ ಸಂಸಾರದಲ್ಲಿ ತೊಳಲಬೇಕಾಗುತ್ತದೆ. ಈ ಪಾಪಪುಣ್ಯಗಳ ಹಾದಿಯನ್ನು ದಾಟಿ ಪ್ರಜ್ಞೆಯಿಂದ ನಿರ್ವಾಣವನ್ನು ಪಡೆದು ಆನಂದವಿರುವ ಮಾರ್ಗವನ್ನು ತಿಳಿದುಕೊಳ್ಳಬೇಕೆಂಬುವನು ನಾಲ್ಕು ಆರ್ಯಸತ್ಯಗಳನ್ನು ತಿಳಿದುಕೊಳ್ಳಬೇಕು. ದುಃಖ, ದುಃಖಸಮುದಯ, ದುಃಖನಿರೋಧ, ದುಃಖನಿರೋಧಗಾಮಿನೀಪ್ರತಿಪತ್ತು – ಇವೇ ಆ ನಾಲ್ಕು ಆರ್ಯಸತ್ಯಗಳು. (ಧ. 191)

ಹುಟ್ಟುವದು, ಬೆಳೆಯುವದು, ಸವೆಯುವದು, ಬೇನೆ ಬೀಳುವದು, ಸಾಯುವದು, ರಾಗ, ದ್ವೇಷ, ಮೋಹ, ತೃಷ್ಣಾ – ಇವೆಲ್ಲಾ ದುಃಖವೇ, ಐದು ಉಪಾದಾನಸ್ಕಂಧಗಳೂ ದುಃಖವೇ – ಹೀಗೆಂದು ತಿಳಿಯುವದು ‘ದುಃಖ’ವೆಂಬ ಆರ್ಯಸತ್ಯದ ಜ್ಞಾನವು.

ಇಂದ್ರಿಯಗಳಿಗೂ ವಿಷಯಗಳಿಗೂ ಸಂಬಂಧವಾಗಲು ಭೋಗದ ತೃಷ್ಣೆಯುಂಟಾಗುವದು. ವಿಷಯಗಳನ್ನು ಚೆನ್ನಾಗಿ ಅನುಭವಿಸಬೇಕು. ಇದಕ್ಕಾಗಿ ಬಹುಕಾಲವಿರಬೇಕು, ಮತ್ತೊಂದು ಜನ್ಮವನ್ನು ಪಡೆಯಬೇಕು – ಎಂಬ ರೂಪದಲ್ಲಿ ಆಗುವ ತೃಷ್ಣೆಯೇ ದುಃಖವುಂಟಾಗುವದಕ್ಕೆ ಕಾರಣವು. ಇದು ‘ದುಃಖಸಮುದಯ’ ಎಂಬ ಎರಡನೆಯ ಆರ್ಯಸತ್ಯವು. (ಧ. 338, 342)

ದುಃಖವು ಹೋಗಬೇಕಾದರೆ ಈ ತೃಷ್ಣೆಯು ನಾಶವಾಗಬೇಕು; ಈ ಭೋಗಕ್ಕಾಗಿ ಬದುಕಿರಬೇಕೆಂಬ ಮತ್ತೊಂದು ಜನ್ಮವನ್ನು ಪಡೆಯಬೇಕೆಂಬ ತೃಷ್ಣೆಯು ಪೂರ ತೊಲಗಬೇಕು – ಹೀಗೆಂಬುದು

‘ದುಃಖನಿರೋಧ’ವೆಂಬ ಆರ್ಯಸತ್ಯವು. (ಧ. 354)

ದುಃಖವನ್ನು ತೊಲಗಿಸುವದಕ್ಕಾಗಿ ತೃಷ್ಣೆಯನ್ನು ಹೊಡೆದಟ್ಟಬೇಕಾದರೆ ಒಂದೇ ಒಂದು

ಮಾರ್ಗವಿರುವದು. ಇದಕ್ಕೆ ಆರ್ಯಾಷ್ಟಾಂಗಿಕ ಮಾರ್ಗವೆಂದು ಹೆಸರು. ಈ ಮಾರ್ಗವೇ

‘ದುಃಖನಿರೋಧಗಾಮಿನೀಪ್ರತಿಪತ್ತು’ – ಎಂಬ ಆರ್ಯಸತ್ಯವು. (ಧ. 273, 274, 275)

 

ಧಮ್ಮಪದದ ಇಪ್ಪತ್ತಾರು ವರ್ಗಗಳು

ಯಮಕವರ್ಗ, ಅಪ್ರಮಾದ ವರ್ಗ, ಚಿತ್ತವರ್ಗ, ಪುಷ್ಪವರ್ಗ, ಬಾಲವರ್ಗ, ಪಂಡಿತವರ್ಗ, ಅರ್ಹನ್ತವರ್ಗ, ಸಹಸ್ರವರ್ಗ, ಪಾಪವರ್ಗ, ದಂಡವರ್ಗ, ಜರಾವರ್ಗ, ಆತ್ಮವರ್ಗ, ಲೋಕವರ್ಗ, ಬುದ್ಧವರ್ಗ, ಸುಖವರ್ಗ, ಪ್ರಿಯವರ್ಗ, ಕ್ರೋಧವರ್ಗ, ಮಲವರ್ಗ, ಧರ್ಮಸ್ಥವರ್ಗ, ಮಾರ್ಗವರ್ಗ, ಪ್ರಕೀರ್ಣವರ್ಗ, ನಿರಯವರ್ಗ, ನಾಗವರ್ಗ, ತೃಷ್ಣಾವರ್ಗ, ಭಿಕ್ಷುವರ್ಗ, ಬ್ರಾಹ್ಮಣವರ್ಗ

Leave a Reply

Your email address will not be published. Required fields are marked *

Back To Top