Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಧನರೇಖೆಯ ಕ್ಷಿಪ್ರವರ್ಧನೆ!

Tuesday, 12.09.2017, 3:00 AM       No Comments

ಸಾರ್ವತ್ರಿಕ ಚುನಾವಣೆಗೂ ಮುನ್ನ ಸಲ್ಲಿಸಿದ ಆದಾಯ ವಿವರಗಳು ಹಾಗೂ ತರುವಾಯದಲ್ಲಿನ ವಿವರಗಳನ್ನು ಪರಸ್ಪರ ತುಲನೆ ಮಾಡಿದಾಗ, ಆದಾಯ ಸಂಗ್ರಹಣೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ 7 ಸಂಸದರು ಹಾಗೂ 98 ವಿಧಾನಸಭಾ ಸದಸ್ಯರನ್ನು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಟಿಡಿ) ತನಿಖೆಗೆ ಒಳಪಡಿಸಿದೆ. ಹೀಗೆ ತನಿಖೆಗೊಳಪಟ್ಟ ರಾಜಕೀಯ ನಾಯಕರ ಹೆಸರು ಮತ್ತು ಈ ಸಂದರ್ಭದಲ್ಲಿ ಗಮನಕ್ಕೆ ಬಂದ ಪ್ರಮುಖಾಂಶಗಳನ್ನು ಗುರುವಾರ (ಸೆ. 14) ಸಲ್ಲಿಸುವುದಾಗಿ ಸಿಬಿಟಿಡಿ ಸವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕ್ರಮಕ್ಕೆ ಕಾರಣವಾದದ್ದು ಈಚೆಗಷ್ಟೆ ಸವೋಚ್ಚ ನ್ಯಾಯಾಲಯ ಈ ಕುರಿತು ಮುಟ್ಟಿಸಿದ ಬಿಸಿ. ಅಧಿಕಾರದಲ್ಲಿದ್ದಾಗ ಕೆಲ ಸಚಿವರು, ಶಾಸಕರ ಆಸ್ತಿಯಲ್ಲಿ ಗಣನೀಯ ಏರಿಕೆ ಆಗಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ, ಕೇಂದ್ರದಿಂದ ವರದಿ ಕೇಳಿದೆ.

ಅಕ್ರಮ ಪರಿಪಾಠಗಳಲ್ಲಿ ಕೈಮಸಿ ಮಾಡಿಕೊಂಡವರು ಸಮಾಜದ ಯಾವುದೇ ವಲಯದಲ್ಲಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರು ಕಳಂಕಿತರೇ. ಅವರಿಗಿರಬಹುದಾದ ಪ್ರಭಾವಳಿಯನ್ನು ಪರಿಗಣಿಸಿ ಶಿಸ್ತುಕ್ರಮದಿಂದ ವಿನಾಯಿತಿ ತೋರಲಾಗದು. ಕಪು್ಪಹಣ ನಿಮೂಲನೆ ಮತ್ತು ಭ್ರಷ್ಟಾಚಾರದ ಮೂಲೋತ್ಪಾಟನಾ ಉಪಕ್ರಮದ ಒಂದು ಅಂಗವಾಗಿ ಅಧಿಕ ಮುಖಬೆಲೆಯ ನೋಟುಗಳ ಅಮಾನ್ಯೀಕರಣಕ್ಕೆ ಮುಂದಾದ ಕೇಂದ್ರ ಸರ್ಕಾರವೀಗ, ಈ ವಿನೂತನ ಉಪಕ್ರಮಕ್ಕೆ ಮುಂದಾಗಿರುವುದು ‘ದೀಪದ ಕೆಳಗಿನ ಕತ್ತಲನ್ನು‘ ತೊಲಗಿಸುವ ಕಸರತ್ತೆಂದೇ ಹೇಳಬಹುದು. ಕಾರಣ, ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಕಾಯ್ದುಕೊಂಡು ಬರುವ ನಿಟ್ಟಿನಲ್ಲಿ ವೈವಿಧ್ಯಮಯ ಶಾಸನಗಳನ್ನು ರೂಪಿಸುವುದಕ್ಕೆ ಕೊಡುಗೆ ನೀಡುವ ಜನಪ್ರತಿನಿಧಿಗಳೇ ವಾಮಮಾರ್ಗದಲ್ಲಿ ಹೆಜ್ಜೆ ಇಡುವಂತಾದಲ್ಲಿ, ಅದು ಹೊಲವನ್ನು ಕಾಯುವುದಕ್ಕೆ ನರಿಗೆ ಗುತ್ತಿಗೆ ಕೊಟ್ಟಂತಾಗುತ್ತದೆ.

ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವವರಲ್ಲಿ ಮತ್ತು ಈಗಾಗಲೇ ಬೇರುಬಿಟ್ಟಿರುವವರಲ್ಲಿ, ‘ವೃತ್ತಿಪರ‘ ಜನಸೇವಕರು ಮಾತ್ರವಲ್ಲದೆ, ಸಮಾಜಸೇವೆ, ಉದ್ಯಮ, ವ್ಯಾಪಾರ-ವ್ಯವಹಾರದಂಥ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಹೆಸರು-ಹಣ ಮಾಡಿರುವವರೂ ಸೇರಿರುವುದು ದಿಟ. ಇಂಥವರ ಉದ್ಯಮ/ಸಂಸ್ಥೆಗಳು ಆಯಾ ಮಾರುಕಟ್ಟೆಯ ಸನ್ನಿವೇಶಗಳಿಗನುಸಾರವಾಗಿ ಗಮನಾರ್ಹ ಸಾಧನೆ ಮಾಡಿ ಆದಾಯ ಸಂಗ್ರಹಿಸಿದರೆ ಮತ್ತು ಅದು ವಿಧಿಬದ್ಧವಾಗಿದ್ದರೆ ಯಾರದೂ ಆಕ್ಷೇಪವಿರದು. ಆದರೆ, ಚುನಾವಣೆಗೆ ಮುಂಚಿತವಾಗಿ ನಿರ್ದಿಷ್ಟ ಮಟ್ಟದಲ್ಲಿದ್ದ ಇಂಥ ಜನಪ್ರತಿನಿಧಿಗಳ ಆದಾಯ, ತರುವಾಯದಲ್ಲಿ ಶಾಸಕರೋ ಮಂತ್ರಿಗಳೋ ಆಗುತ್ತಿದ್ದಂತೆ ದಿಢೀರ್ ಎಂದು ಹಲವು ಪಟ್ಟು ವರ್ಧಿಸುವುದೇಕೆ ಮತ್ತು ಇದರ ಹಿಂದಿನ ಯಕ್ಷಿಣಿಯಾದರೂ ಏನು? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಅದರಲ್ಲೂ ನಿರ್ದಿಷ್ಟವಾಗಿ, ಯಾವ ಉಪಉದ್ಯೋಗ/ವ್ಯವಹಾರದ ಅವಲಂಬನೆಯಿಲ್ಲದೆ, ರಾಜಕೀಯ ಬದುಕನ್ನೇ ನೆಚ್ಚಿರುವವರ ಆದಾಯವೂ ಏಕಾಏಕಿ ಏರುವುದು ಹೇಗೆ? ಎಂಬ ಪ್ರಶ್ನೆ ಶ್ರೀಸಾಮಾನ್ಯರನ್ನು ಬಹಳ ಕಾಲದಿಂದಲೂ ಕಾಡುತ್ತಿದೆ. ರಾಜಕೀಯ ಭ್ರಷ್ಟಾಚಾರದ ಅಥವಾ ಹಗರಣದ ವಾಸನೆ ಬಂದಾಗ ಅದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು ಸಲ್ಲಿಕೆಯಾಗುವ ಸಂದರ್ಭಗಳನ್ನು ಹೊರತುಪಡಿಸಿದರೆ, ಆದಾಯದ ಇಂಥ ಅತಿರೇಕದ ಹೆಚ್ಚಳವನ್ನು ವಿಧ್ಯುಕ್ತವಾಗಿ ಪ್ರಶ್ನಿಸಿ ಸಾಬೀತುಪಡಿಸುವ ಹೆಜ್ಜೆಯನ್ನು ಇದುವರೆಗೆ ಇಟ್ಟವರು ವಿರಳ. ಅಂಥದೊಂದು ಉಪಕ್ರಮಕ್ಕೆ ಈಗ ನ್ಯಾಯಾಲಯದ ಸೂಚನೆ ಕಾರಣವಾಗುತ್ತಿರುವುದು ಶ್ಲಾಘನೀಯ. ಇದು ರಾಜಕೀಯ ಅಸ್ತ್ರವಾಗಿ ಬಳಕೆಯಾಗದೆ, ಪಕ್ಷಾತೀತವಾಗಿ ಕಳಂಕಿತರನ್ನು ಪತ್ತೆಹಚ್ಚುವ ಅಗ್ನಿಪರೀಕ್ಷೆಯಾಗಲಿ.

Leave a Reply

Your email address will not be published. Required fields are marked *

Back To Top