Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ದ್ವಿಪಕ್ಷೀಯ ಬಂಧಕ್ಕೆ ಬುಲೆಟ್ ವೇಗ

Thursday, 14.09.2017, 3:00 AM       No Comments

ಜಪಾನ್ ಪ್ರಧಾನಿ ಶಿಂಜೋ ಅಬೆ ಅವರ ಎರಡು ದಿನಗಳ ಭಾರತ ಪ್ರವಾಸ ಬುಧವಾರ ಆರಂಭವಾಗಿದೆ. ಭಾರತ ಮತ್ತು ಜಪಾನ್​ನ ದ್ವಿಪಕ್ಷೀಯ ಬಾಂಧವ್ಯ ದೃಷ್ಟಿಯಿಂದ ಈ ಭೇಟಿ ಮಹತ್ವದ್ದಾಗಿದ್ದು, ಜಾಗತಿಕ ಮಟ್ಟದಲ್ಲೂ ಹಲವು ಪರಿಣಾಮಗಳನ್ನು ಬೀರುವಂಥದ್ದಾಗಿದೆ. ದೇಶದ ಮೊದಲ ಬುಲೆಟ್ ರೈಲು ಯೋಜನೆ ಕಾಮಗಾರಿಗೆ ಚಾಲನೆ, ರಕ್ಷಣಾ ಕ್ಷೇತ್ರದ ಪಾಲುದಾರಿಕೆ, ಏಷ್ಯಾ-ಆಫ್ರಿಕಾ ಗ್ರೋತ್ ಕಾರಿಡಾರ್ ಮುಂತಾದ ವಿಷಯಗಳಲ್ಲಿ ಪರಸ್ಪರ ಸಹಕಾರದ ನಿಟ್ಟಿನಲ್ಲಿ ಈ ಭೇಟಿ ನಿರ್ಣಾಯಕ.

ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವಿನ ನಾಲ್ಕನೇ ದ್ವಿಪಕ್ಷೀಯ ಶೃಂಗ ಇದು. ಈಗ ಅಹಮದಾಬಾದ್​ನಲ್ಲಿ ನಡೆಯುತ್ತಿರುವುದು ಭಾರತ-ಜಪಾನ್​ನ 12ನೇ ಆವೃತ್ತಿಯ ವಾರ್ಷಿಕ ಶೃಂಗ. ಈ ಭೇಟಿಯೂ ಸೇರಿ ಇಬ್ಬರೂ ಅದಾಗಲೇ ಈವರೆಗೆ 10 ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭಾರಿ ಸಂಭ್ರಮ, ಸಡಗರಗಳೊಂದಿಗೆ ಅಬೆಯವರನ್ನು ಬರಮಾಡಿಕೊಳ್ಳಲಾಗಿದೆ. ಈ ಹಿಂದೆ 2014ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಮೋದಿ ಅಹಮದಾಬಾದ್​ನಲ್ಲಿ ಇದೇ ರೀತಿ ಸಂಭ್ರಮದಿಂದ ಬರಮಾಡಿಕೊಂಡಿದ್ದರು. ಈಗ ಶಿಂಜೋ ಅಬೆ ಭೇಟಿ ಸಂದರ್ಭದಲ್ಲಿ ಗಮನಸೆಳೆಯುತ್ತಿರುವ 6 ಅಂಶಗಳ ವಿವರ ಇಲ್ಲಿದೆ.

ವ್ಯೂಹಾತ್ಮಕ ಮತ್ತು ಸೇನಾ ಸಹಕಾರ ವಿಸ್ತರಣೆ – ಸೇನಾ ಸಹಕಾರದ ವಿಷಯದಲ್ಲಿ ಭಾರತದ ಮಟ್ಟಿಗೆ ಜಪಾನ್ ಅತ್ಯಂತ ವಿಶ್ವಾಸಾರ್ಹ ಹಾಗೂ ಪ್ರಮುಖ ಪಾಲುದಾರ ರಾಷ್ಟ್ರ. ಉಭಯ ದೇಶಗಳು ಇತ್ತೀಚೆಗಷ್ಟೇ ಹಿಂದು ಮಹಾಸಾಗರದಲ್ಲಿ ಅಮೆರಿಕದ ಜತೆಗೂಡಿ ತ್ರಿರಾಷ್ಟ್ರ ಸೇನಾ ಕವಾಯತು ನಡೆಸಿದ್ದವು. ಇದಲ್ಲದೆ ಉಭಯ ದೇಶಗಳ ನಡುವೆ, ಮಿಲಿಟರಿ ತಂತ್ರಜ್ಞಾನ ಪರಸ್ಪರ ಹಂಚಿಕೆ, ರಕ್ಷಣಾ ಸಹಕಾರ ಮತ್ತು ರಕ್ಷಣಾ ಸಾಮಗ್ರಿ ಉತ್ಪಾದನೆಯಲ್ಲೂ ಪಾಲುದಾರಿಕೆಗೆ ಸಂಬಂಧಿಸಿದ ಪ್ರಯತ್ನಗಳು ಸಾಗಿವ

ಸಾರ್ವಜನಿಕ ಆತಿಥ್ಯ- ಪ್ರಧಾನಮಂತ್ರಿ ಮೋದಿಯವರ ಉಸ್ತುವಾರಿಯಲ್ಲೇ ಅಬೆ ಆತಿಥ್ಯಕ್ಕೆ ವ್ಯವಸ್ಥೆಯಾಗಿದೆ. ಮೊದಲ ದಿನವೇ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದ ತನಕದ 8 ಕಿ.ಮೀ. ರಸ್ತೆಯಲ್ಲಿ ರೋಡ್​ಷೋ, ರಸ್ತೆ ಬದಿಯ 25ಕ್ಕೂ ಹೆಚ್ಚು ವೇದಿಕೆಗಳಲ್ಲಿ ದೇಶದ ವಿವಿಧೆಡೆಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಲಾಪ್ರದರ್ಶನವೂ ಆಯೋಜಿತವಾಗಿತ್ತು.

ರೈಲ್ವೆ ತಂತ್ರಜ್ಞಾನ – ದೇಶದ ರೈಲ್ವೆ ವ್ಯವಸ್ಥೆಯನ್ನೇ ಬದಲಾಯಿಸುವಂತಹ ಹೈಸ್ಪೀಡ್ ರೈಲು ಯೋಜನೆಗೆ ಜಪಾನ್ ಸಹಕಾರದೊಂದಿಗೆ ಚಾಲನೆ ನೀಡುತ್ತಿರುವುದು ಗಮನಾರ್ಹ. ಈ ಬೆಳವಣಿಗೆಯೊಂದಿಗೆ ಇದೀಗ ಚೀನಾ ಮತ್ತು ದಕ್ಷಿಣ ಕೊರಿಯಾಗಳು ಕೂಡ ತಮ್ಮಲ್ಲಿರುವ ಹೈಸ್ಪೀಡ್ ರೈಲು ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸಲು ಆಸಕ್ತಿವಹಿಸಿದ್ದು ವರದಿಯಾಗಿದೆ.

ಗುಜರಾತ್​ಗೆ ಹೆಚ್ಚಿನ ಪ್ರಯೋಜನ – ಹಡಗು ನಿರ್ಮಾಣ ಬಂದರು, ಕೈಗಾರಿಕಾ ಪಾರ್ಕ್ ಅಭಿವೃದ್ಧಿ ಸೇರಿ ಹಲವು ಯೋಜನೆಗಳಿಗೆ ತಾಂತ್ರಿಕ ನೆರವು ಜಪಾನ್​ನಿಂದ ಒದಗಿಬರಲಿದೆ.

ಅಂತಾರಾಷ್ಟ್ರೀಯ ಮಟ್ಟದ ಸಹಕಾರ- ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ಜತೆಗಿನ ಸಹಕಾರದ ವಿಷಯದಲ್ಲಿ ಎರಡೂ ರಾಷ್ಟ್ರಗಳು ಒಂದೇ ನಿಲುವು ಹೊಂದಿದ್ದು ಮೂಲಸೌಕರ್ಯ ಒದಗಿಸುವ ಕೆಲಸದಲ್ಲಿ ಜತೆಯಾಗಿ ಕೆಲಸ ಮಾಡಲು ಮುಂದಾಗಿವೆ. ಚೀನಾ ‘ಒನ್ ರೋಡ್, ಒನ್ ಬೆಲ್ಟ್‘ ಯೋಜನೆ ಮೂಲಕ ತ್ವರಿತವಾಗಿ ಪ್ರಾಬಲ್ಯ ಸಾಧಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಭಾರತ-ಜಪಾನ್ ಮೈತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಚೀನಾಕ್ಕೆ ಸೆಡ್ಡು ಹೊಡೆಯುವಂತೆ ಏಷ್ಯಾ-ಆಫ್ರಿಕಾ ಗ್ರೋತ್ ಕಾರಿಡಾರ್ ರಚನೆಗೆ ಉಭಯ ದೇಶಗಳು ಮುಂದಾಗಿವೆ.

ಪರಸ್ಪರ ಅಭಿವೃದ್ಧಿ ಸಹಕಾರ ವಿಸ್ತರಣೆ – ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಕ್ಲೀನ್ ಗಂಗಾ ಮಿಷನ್ ಸೇರಿ ಭಾರತ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಕೈಜೋಡಿಸಲು ಜಪಾನ್ ಆಸಕ್ತಿ ತೋರಿದೆ. 2015ರ ಮಾತುಕತೆ ಸಂದರ್ಭದಲ್ಲೆ ಜಪಾನ್ ಪ್ರಧಾನಿ ಅಬೆ ಈ ಬಗ್ಗೆ ಹೇಳಿಕೆಯನ್ನೂ ನೀಡಿದ್ದರು. ಈಶಾನ್ಯ ರಾಜ್ಯದ ಅಭಿವೃದ್ಧಿಯಲ್ಲೂ ಜಪಾನ್ ಕೈಜೋಡಿಸಲಿದೆ.

ಮೋದಿ-ಅಬೆ ದಶಕದ ಸ್ನೇಹ

ಭಾರತದ ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಅಬೆ ನಡುವಿನ ಸ್ನೇಹ ದಶಕದಷ್ಟು ಹಳೆಯದು. ಇಬ್ಬರೂ ಎರಡನೇ ವಿಶ್ವಯುದ್ಧದ ನಂತರ ಜನಿಸಿದವರು, ಮೊದಲ ಬಾರಿ ದೇಶದ ಪ್ರಧಾನಿ ಪಟ್ಟಕ್ಕೇರಿದವರು. ಇಬ್ಬರಿಗೂ ಚುನಾವಣೆಗಳಲ್ಲಿ ಸ್ಪಷ್ಟ ಐತಿಹಾಸಿಕ ಗೆಲುವು ದಕ್ಕಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತ ನಿಲುವುಗಳಲ್ಲೂ ಸಾಮ್ಯತೆ ಇದೆ.

2007 ಏಪ್ರಿಲ್: ಗುಜರಾತ್​ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮೊದಲ ಸಲ ಜಪಾನ್ ಪ್ರವಾಸ ಕೈಗೊಂಡಾಗ ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ವಿಷಯದಲ್ಲಿ ಶಿಂಜೋ ಅಬೆ ಜತೆಗೆ ಮಾತುಕತೆ ನಡೆಸಿದ್ದರು.

2007 ಆಗಸ್ಟ್: ಭಾರತ ಮತ್ತು ಜಪಾನ್ ನಡುವಿನ ಸ್ನೇಹದ ಅಧಿಕೃತ ವರ್ಷಾಚರಣೆ ದಾಖಲಿಸಲು ದೆಹಲಿಯ ಇಂಡಿಯಾ ಸೆಂಟರ್ ಫೌಂಡೇಷನ್ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಅಬೆ ಆಗಮನ. ಅಲ್ಲಿ, ಮೋದಿ, ರಾಜಸ್ಥಾನ ಸಿಎಂ ವಸುಂಧರಾ ರಾಜೇ ಮುಂತಾದವರು ಉಪಸ್ಥಿತರಿದ್ದರು.

2012 ಜುಲೈ: ನಾಲ್ಕು ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದ ಗುಜರಾತ್ ಸಿಎಂ ಮೋದಿ. ಅದೇ ವೇಳೆ, ವಿಪಕ್ಷ ನಾಯಕರಾಗಿದ್ದ ಅಬೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದನ್ನು ಬ್ಲಾಗ್​ನಲ್ಲಿ ಬರೆದುಕೊಂಡಿದ್ದ ಮೋದಿ, ತಾವು ಗೌರವಿಸುವ ಕೆಲವೇ ಜಪಾನೀ ರಾಜಕಾರಣಿಗಳಲ್ಲಿ ಅಬೆ ಒಬ್ಬರು ಎಂದು ದಾಖಲಿಸಿದ್ದರು.

2014 ಆಗಸ್ಟ್: ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು. ಆಗ, ಕ್ಯೂಟೋದ ಇಂಪೀರಿಯಲ್ ಗೆಸ್ಟ್ ಹೌಸ್​ನಲ್ಲಿ ಅವರಿಗೆ ಆತಿಥ್ಯ ನೀಡಲಾಗಿತ್ತು. ಸಾಮಾನ್ಯವಾಗಿ ಟೋಕಿಯೋದಲ್ಲಿ ವಿದೇಶಿ ಅತಿಥಿಗಳನ್ನು ಸತ್ಕರಿಸುತ್ತಾರೆ.

2015 ಡಿಸೆಂಬರ್: ಒಂಭತ್ತನೇ ಇಂಡೋ-ಜಪಾನ್ ಶೃಂಗದ ನಿಮಿತ್ತ ಮೂರು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ ಅಬೆ. ಅಬೆ ದೇಶದ ಆತ್ಮೀಯ ಸ್ನೇಹಿತ ಮತ್ತು ವಿಶ್ವದ ಪ್ರಭಾವಿ ನಾಯಕ ಎಂದು ಮೋದಿ ಹೊಗಳಿದ್ದರು. ಅಲ್ಲದೆ, ಬುಲೆಟ್ ರೈಲು ಯೋಜನೆಗೆ ಇಬ್ಬರೂ ಅಂಕಿತ ಹಾಕಿದ್ದು ಇದೇ ಭೇಟಿ ಸಂದರ್ಭದಲ್ಲಿ.

2016 ನವೆಂಬರ್:- ಪ್ರಧಾನಿ ಮೋದಿ ಜಪಾನ್ ಪ್ರವಾಸ ಕೈಗೊಂಡು ಟೋಕಿಯೋದಲ್ಲಿ ಜಪಾನ್ ಜತೆಗೆ ಐತಿಹಾಸಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿಹಾಕಿದರು. ಇಂಧನಕ್ಕಾಗಿ ಪರಮಾಣು ತಂತ್ರಜ್ಞಾನವನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಒಪ್ಪಂದ ಇದು. ಈ ಭೇಟಿ ಸಂದರ್ಭದಲ್ಲಿ ಮೋದಿ ಮತ್ತು ಅಬೆ ಶಿನ್​ಕನ್​ಸೆನ್ ಬುಲೆಟ್​ರೈಲಿನಲ್ಲಿ ಪ್ರಯಾಣಿಸಿದ್ದರು. ಇದೇ ರೈಲು ತಂತ್ರಜ್ಞಾನ ಈಗ ಭಾರತಕ್ಕೆ ಆಮದಾಗುತ್ತಿದೆ.

ತೆರೆದ ಜೀಪ್​ನಲ್ಲಿ ಎಂಟು ಕಿ.ಮೀ. ರೋಡ್ ಷೋ

ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದ ತನಕ 8 ಕಿ.ಮೀ. ರಸ್ತೆಯಲ್ಲಿ ತೆರೆದ ಜೀಪ್​ನಲ್ಲಿ ಮೋದಿ, ಅಬೆ ಮತ್ತು ಅವರ ಪತ್ನಿ ಅಕಿ ರೋಡ್ ಷೋ ನಡೆಸಿದರು. ರಸ್ತೆಯುದ್ದಕ್ಕೂ ನಿರ್ವಿುಸಿದ್ದ 28 ವೇದಿಕೆಗಳಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ತಂಡಗಳು ಕಲಾ ಪ್ರದರ್ಶನ ನೀಡಿದವು. ಅಬೆ, ರೋಡ್ ಷೋದಲ್ಲಿ ನೆಹರೂ ಕುರ್ತಾ, ಜಾಕೆಟ್ ಧರಿಸಿ ಗಮನಸೆಳೆದರು.

ಯೋಜನಾ ಹಂತದಲ್ಲಿರುವ ಇತರ ಮಾರ್ಗಗಳು

ದೆಹಲಿ- ಕೋಲ್ಕತ, ದೆಹಲಿ-ಮುಂಬೈ, ಮುಂಬೈ-ಚೆನ್ನೈ, ದೆಹಲಿ-ಚಂಡೀಗಢ, ಮುಂಬೈ-ನಾಗಪುರ, ದೆಹಲಿ-ನಾಗಪುರ

ಬುಲೆಟ್ ರೈಲು ಕನಸು ಇನ್ನೈದು ವರ್ಷಕ್ಕೆ ನನಸು

ನಮ್ಮ ದೇಶದ ಮಹತ್ವಾಕಾಂಕ್ಷೆಯ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಇಂದು(ಗುರುವಾರ) ಗುಜರಾತಿನ ಸಬರಮತಿ ಸ್ಟೇಷನ್ ಸಮೀಪ ಚಾಲನೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಈ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಈ ಹೈಸ್ಪೀಡ್ ರೈಲು ವ್ಯವಸ್ಥೆಗೆ ಅಗತ್ಯ ತಾಂತ್ರಿಕ ಹಾಗೂ ಹಣಕಾಸಿನ ನೆರವನ್ನು ಕೊಡುತ್ತಿರುವುದು ಜಪಾನ್. ಈ ಯೋಜನೆ ಭಾರತದ ರೈಲು ವ್ಯವಸ್ಥೆಯ ದಿಶೆಯನ್ನೇ ಬದಲಾಯಿಸುವಂಥದ್ದು ಎನ್ನಲಾಗುತ್ತಿದೆ. ಈ ಯೋಜನೆ 2019ರಲ್ಲಿ ಆರಂಭವಾಗಿ 2023ರಲ್ಲಿ ಮುಕ್ತಾಯವಾಗುವ ಗುರಿ ಹೊಂದಲಾಗಿದೆಯಾದರೂ, 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಗುತ್ತಿರುವ ಕಾರಣ ಅದೇ ವರ್ಷ ಈ ರೈಲು ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶ. ಹೀಗಾಗಿ ವರ್ಷ ಮೊದಲೇ ಈ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ.

ಮಾರ್ಗ ನಿರ್ಮಾಣ ಕಾಮಗಾರಿ

ಬುಲೆಟ್ ರೈಲಿನಿಂದ ಭಾರಿ ಉದ್ಯೋಗ ಸೃಷ್ಟಿ ಆಗಲಿದೆ. ಒಟ್ಟು 508 ಕಿ.ಮೀ ಉದ್ದದ ಮಾರ್ಗದಲ್ಲಿ 450 ಕಿ.ಮೀ ಮಾರ್ಗ ನಿರ್ವಣದ ಜವಾಬ್ದಾರಿಯನ್ನು ಭಾರತದ ಕಂಪನಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಉಳಿದ 51 ಕಿ.ಮೀ ಉದ್ದದ ಹಳಿ ನಿರ್ಮಾಣ ಕಾರ್ಯವನ್ನು ಜಪಾನ್​ನ ಸಂಸ್ಥೆಗಳು ಪೂರ್ಣಗೊಳಿಸಲಿವೆ. 7 ಕಿ.ಮೀ ರೈಲು ಮಾರ್ಗ ಸಮುದ್ರದಲ್ಲಿ ನಿರ್ಮಾಣ ಮಾಡಬೇಕಿದೆ. ಈ ತಂತ್ರಜ್ಞಾನ ಭಾರತದಲ್ಲಿ ಲಭ್ಯವಿಲ್ಲದ ಕಾರಣ ವಿದೇಶಿ ಕಂಪನಿಗಳಿಗೆ ಇದರ ಜವಾಬ್ದಾರಿ ನೀಡುವ ಉದ್ದೇಶ ಇದೆ.

850 ಹೆಕ್ಟೇರ್ ಭೂಮಿ ಅವಶ್ಯ

ಬುಲೆಟ್ ರೈಲು ಮಾರ್ಗ ನಿರ್ವಣಕ್ಕೆ ಒಟ್ಟು 850 ಹೆಕ್ಟೇರ್ ಭೂಮಿ ಅವಶ್ಯವಿದೆ. ಶೀಘ್ರದಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಭೂ ಮಾಲೀಕರಿಗೆ ಪರಿಹಾರ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೆಲಸ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ. ಬುಲೆಟ್ ರೈಲು ಹಳಿಯ ಬಹುತೇಕ ಭಾಗ ಭೂಮೇಲ್ಮೈನಲ್ಲೇ ಸಾಗಲಿದೆ.

ಪ್ರಮುಖ ಕಾರ್ಯಕ್ರಮಗಳು

ಅಹಮದಾಬಾದ್​ನಿಂದಲೇ ರಿಮೋಟ್ ಮೂಲಕ ಇಬ್ಬರೂ ಪ್ರಧಾನಿಗಳು ಹನ್ಸಲ್​ಪುರದಲ್ಲಿರುವ ಮಾರುತಿ-ಸುಜುಕಿ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಲಿದ್ದಾರೆ. ಈ ಘಟಕವನ್ನು 3,000 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿದೆ.

ಪ್ರಮುಖ ಒಪ್ಪಂದಗಳ ನಿರೀಕ್ಷೆ…

ಗುಜರಾತ್​ನ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಡಿ.ತಾರಾ ಅವರ ಪ್ರಕಾರ, ಶೃಂಗದ ವೇಳೆ 17-18 ಒಪ್ಪಂದಗಳು ಏರ್ಪಡಲಿವೆ. ಇದರಲ್ಲಿ ಮುಖ್ಯವಾಗಿ ಜಪಾನ್​ನ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಮತ್ತು ಗುಜರಾತ್ ಸಮುದ್ರ ಮಂಡಳಿ ನಡುವೆ ಅಲಾಂಗ್ ಹಡಗು ನಿರ್ಮಾಣ ನೆಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಪ್ಪಂದದ ನಿರೀಕ್ಷೆ ಇದೆ. ಇದಲ್ಲದೆ 2 ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೊಳಿಸುವ ಒಪ್ಪಂದವೂ ಏರ್ಪಡುವ ಸಾಧ್ಯತೆ ಇದೆ. 15 ಒಪ್ಪಂದಗಳು ನಿಗಮ, ಜಪಾನ್​ನ ವಿವಿಧ ಕಂಪನಿಗಳ ಜತೆಗೆ ಏರ್ಪಡಲಿವೆ. ಗುಜರಾತ್​ನಲ್ಲಿ ಜಪಾನ್​ನ ಹೂಡಿಕೆ ಪ್ರಮಾಣ 6500 ಕೋಟಿ ರೂ. ಇದ್ದು, 2020ರ ವೇಳೆಗೆ ಇದು 19,500 ಕೋಟಿ ರೂ.ಗೆ ತಲುಪಲಿದೆ.

  • ರೈಲ್ವೆ ಕಾರಿಡಾರ್ ಉದ್ದ – 509 ಕಿ.ಮೀ.
  • ಯೋಜನಾ ವೆಚ್ಚ – 1,10,000 ಕೋಟಿ ರೂ.
  • ಜಪಾನ್ ಸಾಲ 88,000 ಕೋಟಿ ರೂ.
  • ಯೋಜನೆಗೆ ಜಪಾನ್ ಹಣಕಾಸು ನೆರವು(ಸಾಲ)- 81%
  • ಜಪಾನ್ ಇಂಟರ್​ನ್ಯಾಷನಲ್ ಕಾರ್ಪೆರೇಷನ್ ಏಜೆನ್ಸಿ ಸಾಲದ ಬಡ್ಡಿದರ – 0.1%
  • ಸಾಲ ಮರುಪಾವತಿ ಅವಧಿ – 50 ವರ್ಷ
  • ಮರುಪಾವತಿಗೆ ತಾತ್ಕಾಲಿಕ ವಿರಾಮದ ಅವಧಿ – 15 ವರ್ಷ
  • ಈ ಮಾರ್ಗದಲ್ಲಿ ರೈಲಿನ ವೇಗ – 350 ಕಿ.ಮೀ./ಗಂಟೆಗೆ

Leave a Reply

Your email address will not be published. Required fields are marked *

Back To Top