Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ದೇಹ ಕುಬ್ಜವಾದರೇನು ಆತ್ಮಸ್ಥೈರ್ಯ ಹಿಮಾಲಯದಷ್ಟು!

Wednesday, 22.11.2017, 3:05 AM       No Comments

ಬದುಕನ್ನು ಎಷ್ಟೋ ಬಾರಿ ಕ್ರೂರಿ, ನಿರ್ದಯಿಯೆಂದು ಹೀಗಳೆಯುತ್ತೇವೆ. ಆದರೆ, ಬದುಕನ್ನು ಬದಲಿಸಿಕೊಳ್ಳಬೇಕು, ಜತೆಗೆ ಸಮಾಜಕ್ಕೂ ನಮ್ಮಿಂದಾದ ಕೊಡುಗೆ ನೀಡಬೇಕು ಎಂದು ನಿಶ್ಚಯಿಸಿಕೊಂಡು ಮುಂದೆ ಸಾಗುವವರು ವಿಜಯದ, ಪ್ರೇರಣೆಯ ಹೆಜ್ಜೆಗುರುತುಗಳನ್ನು ಮೂಡಿಸುತ್ತಾರೆ. ಈ ಮಹಿಳೆಯನ್ನೇ ನೋಡಿ. ವಯಸ್ಸು 31. ಇವರ ದೇಹಕ್ಕಾಗಿರುವ ಫ್ಯಾಕ್ಚರ್​ಗಳು ವಯಸ್ಸಿಗಿಂತ ಹಲವು ಪಟ್ಟು ಹೆಚ್ಚು! ಶಸ್ತ್ರಚಿಕಿತ್ಸೆಗಳೂ 30ಕ್ಕಿಂತ ಹೆಚ್ಚು!! ಇವರ ಸ್ಥಿತಿಗೆ ಮೊದಲು ಸಮಾಜ ‘ಇವಳೇನು ಮಾಡಿಯಾಳು’ ಎಂದು ಉಪೇಕ್ಷಿಸಿತು, ವಿಚಿತ್ರ ದೃಷ್ಟಿಯಿಂದ ನೋಡಿ ಅವಮಾನಿಸಿತು, ಹೀಯಾಳಿಸಿತು. ಆದರೀಗ, ‘ಹೀರೋಯಿಸಂ ನಿನ್ನನ್ನು ನೋಡಿ ಕಲಿಯಬೇಕು, ನಾವೆಲ್ಲ ತೆರೆಯ ಮೇಲೆ ಮಿಂಚೋ ಹೀರೋಗಳಷ್ಟೇ’ ಎಂದಿರುವ ಬಾಲಿವುಡ್ ನಟ ಅಕ್ಷಯಕುಮಾರ್ ‘ನಾನು ನಿನ್ನ ದೊಡ್ಡ ಅಭಿಮಾನಿ’ ಎಂದು ಕೈ ಮುಗಿದಿದ್ದಾರೆ, ಈ ಮಹಿಳೆ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ನಿಕಟಪೂರ್ವ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡುವಾಗ(2015) ‘ಹೆಣ್ಣಿನ ಶಕ್ತಿ ಎಷ್ಟು ವಿಶಿಷ್ಟವಾದದ್ದು ಎಂಬುದನ್ನು ತೋರಿಸಿಕೊಟ್ಟಿದ್ದೀರಿ’ ಎಂದು ಪ್ರಶಂಸಿಸಿದ್ದಾರೆ. ಯಾವ ಸಮಾಜ ಇವರಿಗೆ ಉದ್ಯೋಗ ನೀಡದೆ ಸತಾಯಿಸಿತ್ತೋ ಅದೇ ಸಮಾಜದ ಸೇವೆಗೆ ನಿಂತು ಸಾವಿರಾರು ಜನರ ಬದುಕು ರೂಪಿಸಿದ್ದಾರೆ, ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ್ದಾರೆ ಈ ಮಹಾತಾಯಿ!

ಹೆಸರು ಪೂನಂ ಶ್ರೊತಿ. 2 ಅಡಿ 10 ಇಂಚು ದೇಹ. ನಡೆದಾಡಲು ಸಾಧ್ಯವಿಲ್ಲ. ಗಾಲಿಕುರ್ಚಿಯೇ ಇವರ ಸಾರಿಗೆಸಾಧನ. ಊರು ಮಧ್ಯಪ್ರದೇಶದ ಭೋಪಾಲ್. ಪೂನಂ ಎಂದರೆ ಪೂರ್ಣಿಮೆ ಎಂದರ್ಥ. ಆಗಸ-ಭೂವಿಯ ಕತ್ತಲನ್ನು ಸೀಳಿ ಹಾಯಾದ, ಚೆಲುವಾದ ಬೆಳಕನ್ನು ಹುಣ್ಣಿಮೆ ಹೇಗೆ ಚೆಲ್ಲುತ್ತದೋ ಹಾಗೇ ಸಮಾಜದಲ್ಲಿ ಶಿಕ್ಷಣ, ಸ್ವಾವಲಂಬನೆ, ಮಹಿಳಾ ಸಬಲೀಕರಣ ಎಂಬ ಬೆಳಕನ್ನು ಬೀರುತ್ತ ದಿನವೂ ಬೆಳಗುವ, ಮಾನವನ ಎದೆಯ ಕತ್ತಲನ್ನು ಕಳೆಯುವ ಹುಣ್ಣಿಮೆಯಾಗಿದ್ದಾರೆ ಪೂನಂ.

ಹುಟ್ಟಿದ ಕೆಲ ವರ್ಷಗಳಲ್ಲೇ ಇದ್ದಕ್ಕಿದ್ದಹಾಗೆ ಹಲವು ಬಾರಿ ಮೂಳೆಮೂರಿತಕ್ಕೊಳಗಾದ ಪೂನಂ 15 ವರ್ಷ ತುಂಬುವಷ್ಟರಲ್ಲೇ ಜೀವನದ ಯಾತನೆಯ ಕರಾಳ ಮುಖಗಳನ್ನು ಅನುಭವಿಸಿದರು. ಲಕ್ಷಕ್ಕೆ ಒಬ್ಬರಲ್ಲೋ, ಇಬ್ಬರಲ್ಲೋ ಕಾಣಿಸಿಕೊಳ್ಳುವ brittle bone disease ಎಂದೂ ಕರೆಯಲ್ಪಡುವ Osteogenesis Imperfecta ಕಾಯಿಲೆಗೆ ತುತ್ತಾದರು. ಮೂಳೆಗಳು ಅತೀ ದುರ್ಬಲವಾಗಿದ್ದು, ಯಾವುದೇ ಕ್ಷಣಕ್ಕೂ ಮುರಿತಕ್ಕೊಳಗಾಗುವ ಭೀತಿ ಇರುತ್ತದೆ. ಪರಿಣಾಮ, ಪದೇಪದೇ ಫ್ಯಾಕ್ಚರ್​ಗಳನ್ನು, ಅದರ ಅಸಾಧ್ಯ ನೋವನ್ನು ಅನುಭವಿಸುತ್ತ ಜೀವನ ದೂಡಬೇಕು. ಬಹುತೇಕ ರೋಗಿಗಳು ಈ ಕಾಯಿಲೆಯೊಂದಿಗೆ ಗುದ್ದಾಡದೆ ಸೋತು ಹೋಗುತ್ತಾರೆ, ಇಲ್ಲವೆ ಮನೆಗೇ ಸೀಮಿತವಾಗಿದ್ದು ಬಿಡುತ್ತಾರೆ.

ಪೂನಂ ಓದಿನಲ್ಲಿ ಭಾರಿ ಚೂಟಿ. ಶಾಲೆಗೆ ಹೋಗಬೇಕಾದರೆ ಇವಳ ಕುಬ್ಬ ಶರೀರ ಕಂಡು ಜನ ವಿಚಿತ್ರವಾಗಿ ನೋಡೋರು. ಆಗ ಈಕೆ ‘ಅಪ್ಪಾ ಅವರೆಲ್ಲ ನನ್ನ ಕಡೆಯೇ ನೋಡುತ್ತಿದ್ದಾರೆ. ನನಗೆ ಮುಜುಗರವಾಗುತ್ತಿದೆ’ ಅಂದರೆ ಅಪ್ಪಾ-‘ಮಗು-ಸಮಾಜ ತನಗಿಂತ ಭಿನ್ನವಾಗಿರುವವರನ್ನು, ವಿಶೇಷವಾಗಿರುವವರನ್ನು ನೋಡುತ್ತದೆ, ಕೇಳುತ್ತದೆ. ಯೂ ಆರ್ ಸ್ಪೆಷಲ್ ಮೈ ಚೈಲ್ಡ್, ಡೋಂಟ್ ವರಿ’! ಎಂದು ಹುರಿದುಂಬಿಸಿದರೆ ಈ ಹುಡುಗಿ ಥೇಟ್ ಹುಣ್ಣಿಮೆ ಚಂದ್ರನಂತೆ ನಕ್ಕು ಮನದ ನೋವನ್ನೆಲ್ಲ ಮೋಡದಾಚೆಗೆ ನೂಕುತ್ತಿದ್ದಳು.

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಂದೆ ರಾಜೇಂದ್ರ ಪ್ರಸಾದ್ ಶ್ರೊತಿ, ತಾಯಿ ಮತ್ತು ಇಬ್ಬರು ಅಣ್ಣಂದಿರು ಪೂನಂರನ್ನು ಸಾಮಾನ್ಯ ಮಗುವಿನಂತೇ ಬೆಳೆಸಿದರು. ಸಂಬಂಧಿಕರೆಲ್ಲ ‘ಇವಳ ಭವಿಷ್ಯವೇನು’ ಎಂದು ಪ್ರಶ್ನಿಸಿದರೆ ತಂದೆ ‘ಅವಳಿಗೇನಾಗಿದೆ, ಆಕೆ ಇತರರ ಭವಿಷ್ಯವನ್ನೂ ರೂಪಿಸುತ್ತಾಳೆ’ ಎನ್ನುತ್ತಿದ್ದರು. 12ನೇ ತರಗತಿಯವರೆಗಿನ ವ್ಯಾಸಂಗದ ನಂತರ ಭೋಪಾಲ್​ನ ನೂತನ ಕಾಲೇಜಿನಲ್ಲಿ ಬಿಕಾಂ ಆ ಬಳಿಕ ಎಂಬಿಎ (ಹಣಕಾಸು) ಪೂರ್ಣಗೊಳಿಸಿದ ಪೂನಂ ಕೆಲಸಕ್ಕೆ ಸೇರಲೆಂದು ಸಂದರ್ಶನಗಳಿಗೆ ಹಾಜರಾಗತೊಡಗಿದಾಗ ಸಮಾಜ ದೇಹನ್ಯೂನತೆ ಹೊಂದಿರುವವರ ಬಗ್ಗೆ ತಳೆಯುವ ತಾತ್ಸಾರ ನೋಡಿ ಕಳವಳಪಟ್ಟರು. ಇವರು ಎಲ್ಲೇ ಸಂದರ್ಶನಕ್ಕೆ ಹೋದರೂ ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸದೆ ‘ಇಷ್ಟು ಕುಬ್ಜ ಶರೀರ ನಿನ್ನದು, ಏನು ಕೆಲಸ ಮಾಡುತ್ತಿಯಮ್ಮ, ಸ್ವಾರಿ ನಿನಗೆ ನಮ್ಮಲ್ಲಿ ಕೆಲಸ ನೀಡಲಾಗದು’ ಎನ್ನುತ್ತಿದ್ದರು. ಹಲವು ತಿಂಗಳುಗಳ ಕಾಲ ಈ ರೀತಿ ಅಲೆದಾಡಿ ಸುಸ್ತಾದ ಪೂನಂ ಅದೊಂದು ದಿನ ಪ್ರೀಮಿಯಂ ವರ್ಕ್​ಫೋರ್ಸ್ ಎಂಬ ಖಾಸಗಿ ಕಂಪನಿಯ ಸಂದರ್ಶನಕ್ಕೆ ಹೋದವರೇ-‘ನನ್ನ ಶರೀರವನ್ನು ನೋಡಿ ಜಜ್ ಮಾಡಬೇಡಿ. ಮೊದಲು ಕೆಲಸ ಕೊಟ್ಟು ನೋಡಿ. ಸಮರ್ಥವಾಗಿ ಕೆಲಸ ಮಾಡಿದರಷ್ಟೇ ಸಂಬಳ ನೀಡಿ’ ಎಂದು ಖಂಡತುಂಡವಾಗಿ ಮಾತಾಡಿದರು. ಪೂನಂಳ ಧೈರ್ಯ ನೋಡಿದ ಕಂಪನಿ ಎಚ್​ಆರ್ ವಿಭಾಗದಲ್ಲಿ ಕೆಲಸ ನೀಡಿತು. 9 ಗಂಟೆಯ ಶಿಫ್ಟ್​ನಲ್ಲಿ ಕುಳಿತು ಕೆಲಸ ಮಾಡುವುದು ಭಾರಿ ಯಾತನಾಮಯವಾಗಿತ್ತು. ಆದರೆ ತನ್ನನ್ನು ಪ್ರೂವ್ ಮಾಡಲು ಪೂನಂ ಜಿದ್ದಿಗೆ ಬಿದ್ದು ಕೆಲಸ ಮಾಡಿದರು, ಎಲ್ಲರಿಗಿಂತ ಮೊದಲು ಕಚೇರಿಗೆ ಬಂದು ಎಲ್ಲರೂ ತೆರಳಿದ ಬಳಿಕ ಕೊನೆಗೆ ಹೋಗುತ್ತಿದ್ದರು. ಇವರ ಕಾರ್ಯನಿಷ್ಠೆಗೆ ಹಲವು ಬಡ್ತಿಗಳು ಒಲಿದು ಡೆಪ್ಯೂಟಿ ಮ್ಯಾನೇಜರ್ ಹುದ್ದೆವರೆಗೂ ತಲುಪಿದರು. ಆದರೆ, ಪೂನಂ ಮನಸ್ಸಿನಲ್ಲಿ ಬೇರೆಯದೇ ಹೊಯ್ದಾಟ ನಡೆಯುತ್ತಿತ್ತು. ‘ನನಗೇನೋ ಕುಟುಂಬದ ಬೆಂಬಲವಿತ್ತು. ಎಲ್ಲ ಕಷ್ಟಗಳನ್ನು ದಾಟಿಕೊಂಡು ಬಂದೆ. ಆದರೆ, ಬಡವರು ಮತ್ತು ಕುಟುಂಬದ ಬೆಂಬಲ ಸಿಗದ ಅಂಗವಿಕಲರ ಗತಿಯೇನು? ಅವರಿಗೆ ನೆರವು ನೀಡೋರು ಯಾರು?’ ಎಂದು ಯೋಚಿಸುತ್ತ, ಇದಕ್ಕಾಗಿ ಪರಿಹಾರ ಹುಡುಕುತ್ತಿದ್ದರು. ಜೀವನಕ್ಕೆ ಸಾರ್ಥಕತೆ ಸಿಗುವಂಥ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಸ್ನೇಹಿತರೊಂದಿಗೆ, ಸಮಾನ ಮನಸ್ಕರೊಂದಿಗೆ ರ್ಚಚಿಸಿದರು. 6 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಕಂಪನಿಗೆ 2013ರಲ್ಲಿ ರಾಜೀನಾಮೆ ನೀಡಿ ‘ಉಡೀಪ್ ಸೋಷಿಯಲ್ ವೆಲ್ಪೇರ್ ಸೊಸೈಟಿ’ಯನ್ನು(www.uddip.org) ಸ್ಥಾಪಿಸಿದರು. ಇದು ಪೂನಂ ಜೀವನಕ್ಕೆ ಮಹತ್ವದ ತಿರುವು ಕೊಟ್ಟ ಘಟನೆ.

ಈ ಸಂಸ್ಥೆ ಮುಖೇನ ಸಮಾಜಮುಖಿ ಜೀವನ ಆರಂಭಿಸಿದ ಪೂನಂ ಸ್ನೇಹಿತರೊಂದಿಗೆ ಹಳ್ಳಿಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಜೀವನಕೌಶಲ ಮತ್ತು ಕಂಪ್ಯೂಟರ್ ಶಿಕ್ಷಣ ನೀಡಲು ಆರಂಭಿಸಿದರು. ಗ್ರಾಮಾಂತರ ಭಾಗದಲ್ಲಿ ಮಹಿಳೆಯರಿಗೆ ಕೆಲಸದ ಅವಶ್ಯಕತೆ ಇರುವುದನ್ನು ಮನಗಂಡರು. ಅಲ್ಲದೆ ಮಹಿಳೆಯರನ್ನು, ಅಂಗವಿಕಲರನ್ನು, ಬಡವರನ್ನು ಸ್ವಾವಲಂಬಿಯಾಗಿಸಿದರೆ ಹಳ್ಳಿಯ ಅಭಿವೃದ್ಧಿ ಸಾಧ್ಯ ಎಂದು ಯೋಚಿಸಿ ಸ್ವಉದ್ಯೋಗ ತರಬೇತಿ ನೀಡತೊಡಗಿದರು. ಕರಕುಶಲ ಕಲೆ, ಹಸ್ತಶಿಲ್ಪ, ಹೊಲಿಗೆ, ಪೇಪರ್ ಬ್ಯಾಗ್ ತಯಾರಿಕೆ ಸೇರಿದಂತೆ ಜೀವನಕ್ಕೆ ದಿಕ್ಕು ಕಲ್ಪಿಸುವ ಹಲವು ಮಾರ್ಗಗಳನ್ನು ತೋರಿಸುತ್ತಿದ್ದಾರೆ. ತಮ್ಮ ಗಳಿಕೆಯ ಮೂಲಕ ಹೊಸ ಜೀವನ ಆರಂಭಿಸಿರುವ ಮಹಿಳೆಯರಂತೂ ‘ಪೂನಂ ದೀದಿ ಹಮಾರಿ ಜಿಂದಗಿ ಮೇ ರೋಶ್ನಿ ಲೇಕರ್ ಆಯೀ ಹೈ’(ಪೂನಂ ಅಕ್ಕ ನಮ್ಮ ಬದುಕಿನಲ್ಲಿ ಬೆಕಳು ತಂದಿದ್ದಾರೆ) ಎಂದು ಹೇಳುವಾಗ ಅವರ ಮುಖದಲ್ಲಿ ಕಾಣುವ ಸಾರ್ಥಕತೆಯೇ ಅನನ್ಯ. ಈ ಸಾಮಾಜಿಕ ಯಾತ್ರೆಯನ್ನು ಜಿಲ್ಲೆಯಿಂದ ಜಿಲ್ಲೆಗೆ ವಿಸ್ತರಿಸುತ್ತ ಸಾಗುತ್ತಿದ್ದಾರೆ. ಸಂಸ್ಥೆಯ ಬಹುತೇಕ ಸ್ವಯಂಸೇವಕರು ಪೂನಂ ಸ್ನೇಹಿತರೇ. ಶುಲ್ಕ ತುಂಬಲಾಗದೆ ಓದು ನಿಲ್ಲಿಸಿದ ಅಥವಾ ಬ್ಯಾಗ್, ಪಠ್ಯಪುಸ್ತಕ ಸಮವಸ್ತ್ರ ಇಲ್ಲದೆ ಶಾಲೆ ಬಿಡುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯ ನೆರವನ್ನು ನೀಡಲಾಗುತ್ತಿದೆ. ಇದಕ್ಕಾಗಿ, ಫೇಸ್​ಬುಕ್​ನಲ್ಲಿ ಸ್ಟೇಟಸ್ ಹಾಕಿ ವಿವರಗಳನ್ನು ನೀಡುತ್ತಾರೆ ಪೂನಂ. ಸಂವೇದನಾಶೀಲ ಮನಸ್ಸುಗಳು ಸಹಾಯಕ್ಕೆ ಧಾವಿಸುತ್ತವೆ. ಟಿಕಮಗಢ ಜಿಲ್ಲೆಯೊಂದರಲ್ಲೇ 6 ಸಾವಿರ ಮಕ್ಕಳಿಗೆ ನೆರವಿನ ಜತೆಗೆ ಗುಣಮಟ್ಟದ ಶಿಕ್ಷಣವನ್ನು ಇವರ ಸಂಸ್ಥೆಯಿಂದ ನೀಡಲಾಗುತ್ತಿದೆ. ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮುಖ್ಯವಾಗಿ, ಗ್ರಾಮೀಣ ಭಾಗದ ಸಂಪನ್ಮೂಲಗಳನ್ನು ಗುರುತಿಸಿ ಅದರ ಬಲದ ಮೇಲೆ ಅಲ್ಲೇ ಉತ್ತಮ ಶಿಕ್ಷಣ ನೀಡುವ ಮತ್ತು ಉದ್ಯೋಗ ಸೃಷ್ಟಿಸುವ ಪ್ರಯತ್ನದಲ್ಲಿ ಮಹತ್ವದ ಯಶಸ್ಸು ಸಿಕ್ಕಿದೆ. ಅಂದಹಾಗೆ ಪೂನಂಗೆ (ಟ್ಠ್ಞಞಠಜ್ಟಟಠಿಜಿಃಜಞಚಜ್ಝಿ.ಟಞ) ಬಾಲ್ಯದಿಂದಲೂ ಒಂದು ಹಠವಂತೆ! ಯಾರಾದರೂ, ‘ನಿನ್ನಿಂದ ಇದನ್ನು ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರೆ ಅದನ್ನು ಮಾಡಿ ತೋರಿಸುವ ತನಕವೂ ವಿಶ್ರಮಿಸುವುದಿಲ್ಲ. ಇಂಥ ಅಸಾಧಾರಣ ಆತ್ಮಸ್ಥೈರ್ಯದಿಂದಲೇ ಪೂನಂ ಸಾಧನೆಯ ಎತ್ತರವನ್ನು ತಲುಪಿದ್ದಾರೆ, ಮಾತ್ರವಲ್ಲ, ಟೀಕೆ, ಅನುಮಾನಗಳಿಗೆ ಹೆದರದೆ ಕರ್ತೃತ್ವ ಬಲದ ಮೇಲೆಯೇ ಸಾರ್ಥಕತೆಯನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

‘ಜೀವನದ ಪ್ರತಿ ಹೆಜ್ಜೆಯಲ್ಲೂ ಸವಾಲು, ಕಷ್ಟಗಳನ್ನು ಅನುಭವಿಸಿರುವ ನನ್ನ ಮಗಳು ಇಂದು ಸಾವಿರಾರು ಜನರಿಗೆ ಸಂತೋಷ ಹಂಚುತ್ತಿದ್ದಾಳಲ್ಲ, ಅದಕ್ಕಿಂತ ಹೆಚ್ಚೇನು ಬೇಕು? ಆಕೆಯ ಬದುಕಿನಿಂದ ನಾವೂ ಸಾಕಷ್ಟು ಕಲಿತುಕೊಂಡಿದ್ದೇವೆ’ ಎಂದು ಆಕೆಯ ತಂದೆ ರಾಜೇಂದ್ರ ಪ್ರಸಾದ್ ಹೇಳುವಾಗ ಭಾವುಕರಾಗುತ್ತಾರೆ.

ಅನಾರೋಗ್ಯ, ದೈಹಿಕ ಅಕ್ಷಮತೆ ಇವನ್ನೆಲ್ಲ ಹಿಂದಿಕ್ಕಿ ಉತ್ಕರ್ಷ ಸಾಧಿಸಿದ್ದಲ್ಲದೆ ಈಗ ಸಮಾಜದ ಉತ್ಥಾನಕ್ಕಾಗಿ ಶ್ರಮಿಸುತ್ತಿರುವ ಪೂನಂ ಬದುಕು ಹುಣ್ಣಿಮೆಯ ಬೆಳದಿಂಗಳಷ್ಟೇ ಅಲ್ಲ ಪ್ರೇರಣೆಯ ಶುಭ್ರ ಬೆಳಕೂ ಹೌದು.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top