Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ದೇಹದ ಕಾಯಿಲೆಗೆ ಮದ್ದುಂಟು, ಮನಸ್ಸಿನ ಕಾಯಿಲೆಗೆ ಮದ್ದಾವುದು?

Tuesday, 31.10.2017, 3:02 AM       No Comments

| ಶಾಂತಾ ನಾಗರಾಜ್

ನಮ್ಮದು ಸುಖಿ ಕುಟುಂಬವಾಗಬೇಕಿತ್ತು. ದುರದೃಷ್ಟವಶಾತ್ ಆಗಿಲ್ಲ. ಕಾರಣ ನಮ್ಮ ತಾಯಿ. 52ವರ್ಷದ ಆಕೆ ಹೆಚ್ಚು ವಿದ್ಯಾವಂತೆಯಲ್ಲ. ನಮ್ಮ ತಂದೆ ಉಪಾಧ್ಯಾಯರಾಗಿದ್ದವರು. ಇಂದಿಗೂ ಮನಸ್ಸನ್ನು ಆರೋಗ್ಯವಾಗಿಟ್ಟುಕೊಂಡಿದ್ದಾರೆ. ನಾನು, ನಮ್ಮಣ್ಣ ಮತ್ತು ಅಕ್ಕ ಹಳ್ಳಿಯ ಹಿನ್ನೆಲೆಯಿಂದ ಬಂದರೂ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಒಳ್ಳೆಯ ಉದ್ಯೋಗವನ್ನು ಮಾಡುತ್ತ ಆರ್ಥಿಕವಾಗಿ ಚೆನ್ನಾಗಿದ್ದೇವೆ. ಈಗ ನಾವೆಲ್ಲರೂ ನೆಮ್ಮದಿಯನ್ನು ಕಳೆದುಕೊಂಡಿರುವುದು ನಮ್ಮ ತಾಯಿಯ ‘ಗೀಳುರೋಗ’ ದ ಕಾರಣದಿಂದ. ಅವರು ತೊಳೆದಿದ್ದನ್ನೇ ತೊಳೆಯುತ್ತ, ಮಾಡಿದ ಕೆಲಸವನ್ನೇ ಮಾಡುತ್ತ, ಅಡುಗೆಮನೆಯ ತುಂಬ  ಸಾಮಾನುಗಳನ್ನು ಹರಡಿಕೊಂಡು, ಮತ್ತೊಬ್ಬರು ಒಳಗೆ ಕಾಲಿಡದಂತೆ ಮಾಡುತ್ತಾರೆ. ಶುದ್ಧತೆಯ ಹೆಸರಿನಲ್ಲಿ ಬರೀ ಕೊಳಕೇ ತುಂಬಿಸಿರುತ್ತಾರೆ. ಯಾವೊಂದು ಬೇಡದ ಸಾಮಾನನ್ನೂ ಎಸೆಯಲು ಬಿಡುವುದಿಲ್ಲ. ಇವರ ಈ ಉಪದ್ವಾಪದಲ್ಲಿ ಸಮಯಕ್ಕೆ ಸರಿಯಾಗಿ ಅಡುಗೆಯಾಗುವುದಿಲ್ಲ. ತಾವು ಸರಿಯಾಗಿ ಅಡುಗೆ ಮಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ. ಹಬ್ಬದ ದಿನಗಳಲ್ಲಂತೂ ಅಕ್ಕಪಕ್ಕದ ಜನ ಊಟಮಾಡುತ್ತಿದ್ದರೆ, ನಮ್ಮಮನೆಯಲ್ಲಿ ಒಲೆಯನ್ನೇ ಹಚ್ಚಿರುವುದಿಲ್ಲ. ನಮಗಂತೂ ಒಂದೊಂದು ದಿನ ಕಳೆಯುವುದೂ ಸಾಹಸವೇ ಆಗುತ್ತಿದೆ. ಸಾವಧಾನವಾಗಿ ತಿಳಿಹೇಳಿದರೆ ಅವರು ಕಿವಿಯಮೇಲೇ ಹಾಕಿಕೊಳ್ಳುವುದಿಲ್ಲ. ಸ್ವಲ್ಪ ಜೋರಾಗಿ ಹೇಳಿದರೆ ಅಳುವುದಕ್ಕೆ ಪ್ರಾರಂಭಿಸುತ್ತಾರೆ. ತಾವು ಹೀಗೆ ಶುದ್ಧತೆಯನ್ನು ಕಾಪಾಡುತ್ತಿರುವುದರಿಂದಲೇ ದೇವರು ಪ್ರಸನ್ನನಾಗಿ ನಮಗೆ ಒಳ್ಳೆಯ ಕೆಲಸ ಸಿಕ್ಕಿದೆಯೆಂದು ನಂಬಿದ್ದಾರೆ. ಅವರಿಗೆ ಇತ್ತೀಚೆಗೆ ಸಕ್ಕರೆಕಾಯಿಲೆ ಬೇರೆ ಪ್ರಾರಂಭವಾಗಿದೆ. ಅವರ ಉಪವಾಸಗಳು, ಹೊತ್ತಲ್ಲದ ಹೊತ್ತಿನಲ್ಲಿ ಊಟ, ಇವುಗಳಿಂದ ಅವರ ಆರೋಗ್ಯ ಮತ್ತಷ್ಟು ಹದಗೆಡುತ್ತದೆಯೆನ್ನುವ ಭಯ ನಮಗೆ. ಇದರ ಜತೆಯಲ್ಲಿ ಮತ್ತೊಂದು ಗೀಳು ಶುರುವಾಗಿದೆ. ಪರಿಚಿತರೋ ಅಪರಿಚಿತರೋ, ಹತ್ತಿರದವರೋ, ದೂರದ ನೆಂಟರೋ ಯಾರು ಯಾವುದೇ ಸಮಾರಂಭಕ್ಕೆ ಕರೆದರೂ, ಇವರು ತಪ್ಪದೇ ಹೋಗಿಯೇ ಬಿಡುತ್ತಾರೆ. ಅಲ್ಲಿ ಇವರು ಪಥ್ಯಮಾಡದೆ ಊಟ ಮಾಡುತ್ತಾರೆ. ಇದರಿಂದಲೂ ಅವರ ಆರೋಗ್ಯ ಹಾಳಾಗಬಹುದು. ಮಿಕ್ಕಂತೆ ನಮ್ಮ ತಾಯಿ ತುಂಬ ಒಳ್ಳೆಯವರು. ಯಾರು ಕೇಳಲಿ ಬಿಡಲಿ ತಾವಾಗಿಯೇ ಹೋಗಿ ಸಹಾಯ ಮಾಡುವವರು. ನಮಗೆ ದಿನದಿನಕ್ಕೂ ಸಮಸ್ಯೆಯಾಗುತ್ತಿದ್ದಾರೆ. ಇದನ್ನು ಹೇಗೆ ಸರಿಯಾಗಿಸುವುದು ತಿಳಿಸಿ.

ಹೆಸರು, ಊರು ಬೇಡ

ನೀವೇ ಊಹಿಸಿರುವಂತೆ ನಿಮ್ಮ ತಾಯಿಗೆ ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್- ಅಂದರೆ ಗೀಳುರೋಗವಿದೆ. ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಅದು ಹೆಚ್ಚಾಗಿ ವಾಸ್ತವದ ಅರಿವನ್ನೇ ನಾಶ ಮಾಡಬಹುದು. ನೀವೇ ಬರೆದಿರುವಂತೆ ಎಲೆಟ್ರಿಕ್ ಮೀಟರ್ ಮೇಲೆ ನೀರುಹಾಕಿ ತೊಳೆದರೆ ಅದು ಶಾಕ್ ಹೊಡೆಯಲು ಕಾರಣವಾಗಬಹುದು ಎನ್ನುವ ವಾಸ್ತವ ಅವರಿಗೆ ಈಗಾಗಲೇ ಹೋಗಿದೆ. ಮತ್ತೆ ಯಾರು ಆಹ್ವಾನವಿತ್ತರೂ ಅಗತ್ಯವಿಲ್ಲದಿದ್ದರೂ ಹೋಗುತ್ತಾರೆ ಎಂದು ಬರೆದಿದ್ದೀರಿ. ಇದು ಸಹ ಅವರಿಗೆ ಮತ್ತೊಂದು ಡಿಸಾರ್ಡರ್ ಇರುವ ಸಂಭವನೀಯವನ್ನು ತೋರಿಸುತ್ತಿದೆ. ನೀವು ಅವರನ್ನು ಕೌನ್ಸಿಲಿಂಗ್​ಗೆ ಕರೆದುಕೊಂಡು ಹೋದರೆ ಅವರು ವೈಯುಕ್ತಿಕವಾಗಿ ನೊಂದುಕೊಳ್ಳಬಹುದು ಎಂದು ಹೆದರುತ್ತೀರಿ. ಆದರೆ ನೀವೇ ಯೋಚನೆ ಮಾಡಿ, ಈಗಲೇ ಅವರಿಗೆ ಸರಿಯಾದ ಆರೈಕೆ ಮಾಡಿಸದಿದ್ದರೆ ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆಗೇನು ಮಾಡುತ್ತೀರಿ? ಹೇಗೆ ದೇಹಕ್ಕೆ ಅನಾರೋಗ್ಯವಾದರೆ ವೈದ್ಯರ ಹತ್ತಿರ ಹೋಗುತ್ತೇವೆಯೋ ಹಾಗೆಯೇ ಮನಸ್ಸಿನ ಅನಾರೋಗ್ಯಕ್ಕೂ ಮನೋವೈದ್ಯರ ಹತ್ತಿರ ಹೋಗಲೇಬೇಕಾಗುತ್ತದೆ. ನಿಮ್ಮ ತಾಯಿಗೆ ಕೇವಲ ಕೌನ್ಸಿಲಿಂಗ್ ಸಾಕಾಗುವುದಿಲ್ಲ. ನೀವು ಅವರನ್ನು ಹೇಗಾದರೂ ಒಪ್ಪಿಸಿ ನಿಮ್ಮ ಊರಿನ ಮನೋವೈದ್ಯರ ಹತ್ತಿರ ಕರೆದುಕೊಂಡು ಹೋಗಿ. ಈ ಗೀಳು ರೋಗಕ್ಕೆ ಔಷಧದ ಜತೆಗೆ ಕೆಲವು ಥೆರಪಿಗಳ ಅಗತ್ಯವೂ ಇದೆ. ಕಾಗ್ನೆಟಿವ ಬಿಹೇವಿಯರ್ ಥೆರಪಿಯಿಂದ ಇಂಥ ಡಿಸಾರ್ಡರ್ ತಹಬಂದಿಗೆ ಬರುವ ಸಾಧ್ಯತೆ ಇದೆ. ಕಾಗ್ನೆಟಿವ್ ಥೆರಪಿಯೇನೆಂದರೆ ನಮ್ಮ ಮೂಲ ಯೋಚನಾಕ್ರಮಗಳಲ್ಲಿ ಇರುವ ‘ಹದವಿಲ್ಲದ’ ಚಿಂತನೆಗಳನ್ನು ನಾವೇ ಬದಲಾಯಿಸಿಕೊಳ್ಳುವಂತೆ ಮಾಡುವುದು. ಇದಕ್ಕೆ ಹಲವು ಬಾರಿ ವೈದ್ಯರ ಹತ್ತಿರ ಹೋಗಬೇಕು. ಸಹನೆಯಿಂದ ವೈದ್ಯರು ಹೇಳಿದಂತೆ ಮಾಡಬೇಕಾಗುತ್ತದೆ. ಉತ್ತಮ ಮಾನಸಿಕ ಆರೋಗ್ಯ ಬೇಕೆಂದರೆ ಇದು ಅನಿವಾರ್ಯ. ಆದಷ್ಟು ಬೇಗ ನಿಮ್ಮ ತಾಯಿಯನ್ನು ಮನೋವೈದ್ಯರ ಹತ್ತಿರ ಕರೆದುಕೊಂಡು ಹೋಗಿ.

Leave a Reply

Your email address will not be published. Required fields are marked *

Back To Top