Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ದೇಶಭಕ್ತಿ ಉಸಿರಾಗಲಿ

Friday, 12.01.2018, 3:00 AM       No Comments

ಸಿನಿಮಾ ಹಾಲ್​ಗಳಲ್ಲಿ ರಾಷ್ಟ್ರಗೀತೆಗೆ ಎದ್ದುನಿಲ್ಲುವುದನ್ನು ಕಡ್ಡಾಯಗೊಳಿಸಿದ್ದ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಪರಿಷ್ಕರಿಸಿ ಈ ನಿಯಮವನ್ನು ಐಚ್ಛಿಕಗೊಳಿಸಿದೆ. ಅಂದರೆ, ರಾಷ್ಟ್ರಗೀತೆ ಮೊಳಗಿಸುವುದನ್ನು ಸದ್ಯಕ್ಕೆ ಚಿತ್ರಮಂದಿರಗಳ ಮಾಲೀಕರ ವಿವೇಚನೆಗೆ ಬಿಡಲಾಗಿದೆ. ಮುಖ್ಯವಾಗಿ, ಯಾವೆಲ್ಲ ಸಂದರ್ಭಗಳಲ್ಲಿ ರಾಷ್ಟ್ರಗೀತೆ ಮೊಳಗಿಸಬೇಕು ಎಂಬುದರ ಕುರಿತಂತೆ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರ ರಚಿಸಿರುವ 12 ಸದಸ್ಯರ ಆಂತರಿಕ ಸಚಿವಾಲಯ ಸಮಿತಿಗೆ ನ್ಯಾಯಾಲಯ ಸೂಚನೆ ನೀಡಿದೆ. ಭಾರಿ ಚರ್ಚೆ ಮತ್ತು ವಿವಾದ ಹುಟ್ಟುಹಾಕಿದ್ದ ಪ್ರಸಕ್ತ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್​ನದು ಸೂಕ್ತ ನಡೆ ಎಂದು ಹೇಳಬಹುದು. ಏಕೆಂದರೆ, ರಾಷ್ಟ್ರಗೀತೆ ಮೊಳಗಿಸುವಾಗ ಕೆಲವರು ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೆ ಘರ್ಷಣೆಗಳೇ ಏರ್ಪಟ್ಟಿದ್ದವು. ಉದಾಹರಣೆಗೆ, 2017ರ ಅಕ್ಟೋಬರ್ 21ರಂದು ಗುವಾಹಟಿಯ ಚಿತ್ರಮಂದಿರದಲ್ಲಿ ಗಾಲಿಕುರ್ಚಿಯಲ್ಲಿದ್ದ ಅಂಗವಿಕಲ ವ್ಯಕ್ತಿ ಎದ್ದು ನಿಲ್ಲಲಿಲ್ಲ ಎಂಬ ಕಾರಣಕ್ಕೂ ಗಲಾಟೆ ನಡೆದಿತ್ತು. ರಾಷ್ಟ್ರಗೀತೆಗಾಗಿ ಎದ್ದುನಿಲ್ಲುವವರು ದೇಶಭಕ್ತರು ಮತ್ತು ಎದ್ದು ನಿಲ್ಲದವರು ದೇಶದ್ರೋಹಿಗಳು ಎಂಬಂತೆ ಬಿಂಬಿಸುತ್ತ ಈ ವಿವಾದವನ್ನು ತಾರಕಕ್ಕೆ ಒಯ್ಯಲಾಯಿತು. ಸಿನಿಮಾ ಹಾಲ್​ಗಳು ಮನರಂಜನಾ ತಾಣಗಳು. ಇಲ್ಲಿ ಜನರು ಬರುವುದು ದೈನಂದಿನ ಒತ್ತಡಗಳಿಂದ ಸ್ವಲ್ಪ ಸಮಯ ಮುಕ್ತವಾಗಿ ಮನಸ್ಸನ್ನು ಆಹ್ಲಾದವಾಗಿಸಿಕೊಳ್ಳಲು. ಹೀಗಿರುವಾಗ ರಾಷ್ಟ್ರಗೀತೆ ಮೊಳಗಿಸುವಾಗ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂಬ ನಿಯಮ ಕೆಲವರಿಗೆ ಅಪಥ್ಯ ಎನಿಸಬಹುದು. ಒಂದು ವೇಳೆ, ನಿಯಮದಂತೆ ಎದ್ದುನಿಂತರೂ ಅದು ನೈಜ ರಾಷ್ಟ್ರಭಕ್ತಿಯನ್ನು ಪ್ರದರ್ಶಿಸಿದಂತಾಗುವುದೇ? ದೇಶಭಕ್ತಿ ಎಂಬುದು ಪ್ರತಿ ವ್ಯಕ್ತಿಯ ಉಸಿರಲ್ಲಿ ಸದಾ ಇರಬೇಕಾದ ಮೌಲ್ಯವೇ ಹೊರತು ಅದನ್ನು ಒತ್ತಾಯಪೂರ್ವಕವಾಗಿ ಹೇರಲಾಗದು. ಕ್ರೀಡೆಗಳ ವಿಷಯಕ್ಕೆ ಬಂದಾಗ ಪಂದ್ಯಗಳ ಮುನ್ನ ರಾಷ್ಟ್ರಗೀತೆ ಮೊಳಗಿಸುವುದರಿಂದ ಆಟಗಾರರಲ್ಲಿ ಪ್ರೇರಣೆ ಮೂಡಿ, ತಂಡಸ್ಪೂರ್ತಿ ಹೆಚ್ಚುತ್ತದೆ. ಹಾಗಾಗಿ, ರಾಷ್ಟ್ರೀಯ ಉತ್ಸವಗಳ ಆಚರಣೆ ವೇಳೆ, ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಗೀತೆ ಮೊಳಗಿಸಿ, ಅದಕ್ಕೆ ಗೌರವ ಸೂಚಿಸುವುದರಲ್ಲಿ ಅರ್ಥವಿದೆ.

‘ದೇಶಭಕ್ತಿಯನ್ನು ಜನರು ಎಲ್ಲೆಡೆ ಹೊತ್ತೊಯ್ಯುವಂತೆ ಒತ್ತಾಯಿಸಲಾಗದು. ವ್ಯಕ್ತಿಯೊಬ್ಬ ರಾಷ್ಟ್ರಗೀತೆ ಸಂದರ್ಭದಲ್ಲಿ ಎದ್ದು ನಿಂತಿಲ್ಲ ಎಂಬ ಮಾತ್ರಕ್ಕೆ ಆತನಿಗೆ ದೇಶಭಕ್ತಿ ಇಲ್ಲ ಎಂದು ಭಾವಿಸುವುದು ತಪು್ಪ’ ಎಂದು 2017ರ ಅಕ್ಟೋಬರ್​ನಲ್ಲಿ ಸುಪ್ರೀಂ ಕೋರ್ಟ್ ಹೇಳಿದ ನಂತರ ಕೇಂದ್ರ ಸರ್ಕಾರವೂ ತನ್ನ ನಿಲುವು ಬದಲಾಯಿಸಿಕೊಂಡಿದೆ.

ಅಷ್ಟಕ್ಕೂ, ದೇಶಭಕ್ತಿ ಪ್ರದರ್ಶನಕ್ಕೆ ಸೀಮಿತವಾಗಿರಬಾರದು. ಅದನ್ನು ಉನ್ನತ ಮೌಲ್ಯವಾಗಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನಿತ್ಯಜೀವನದ ಆಚರಣೆಯಾಗಬೇಕು. ದೇಶಭಕ್ತಿಯನ್ನು ಕೇವಲ ನಿಯಮಗಳಿಂದ ಅನುಷ್ಠಾನಕ್ಕೆ ತರಲಾಗದು. ಈ ಬಗ್ಗೆ ಜನರು ಕೆಲವು ನಿರ್ಣಯ ಕೈಗೊಳ್ಳಬೇಕು. ಕೇವಲ ಘೋಷಣೆ ಮೊಳಗಿಸುವುದಷ್ಟೇ ದೇಶಭಕ್ತಿಯಲ್ಲ. ಸ್ವಚ್ಛತೆ ಕಾಪಾಡುವುದು, ಭ್ರಷ್ಟನಾಗದಿರುವುದು, ವಿಪತ್ತಿನ ಸಂದರ್ಭದಲ್ಲಿ ನೆರವಿಗೆ ಬರುವುದು… ಇವು ಸಹ ರಾಷ್ಟ್ರಭಕ್ತಿಯ ಮೌಲ್ಯದ ಪ್ರತಿಬಿಂಬಗಳೇ. ಅತಿ ಹೆಚ್ಚು ಯುವಕರನ್ನು ಹೊಂದಿರುವ ಭಾರತ ಇಂದು ‘ರಾಷ್ಟ್ರೀಯ ಯುವ ದಿನ’ಆಚರಿಸುತ್ತಿದ್ದು, ನೈಜ ರಾಷ್ಟ್ರಭಕ್ತಿಯ ಮೌಲ್ಯ ಅಳವಡಿಕೆಗೆ ಇದು ಮತ್ತೊಂದು ವೇದಿಕೆಯಾಗಲಿ, ಯುವಭಾರತ ಉತ್ಕರ್ಷದತ್ತ ಮುನ್ನುಗ್ಗುವ ಸಂಕಲ್ಪ ಮತ್ತಷ್ಟು ಗಟ್ಟಿಗೊಳ್ಳಲಿ.

Leave a Reply

Your email address will not be published. Required fields are marked *

Back To Top