Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ದೇಶದ ಅಭಿವೃದ್ಧಿ ಹಾದಿಯಲ್ಲಿ ಅಡ್ಡಗಾಲು…

Monday, 04.09.2017, 3:03 AM       No Comments

| ತರುಣ್​ ವಿಜಯ್​

ನಮ್ಮ ಅಜ್ಞಾನ ಮತ್ತು ದೇಶಭಕ್ತಿಯ ಕೊರತೆ ಶತ್ರುಗಳಿಗೆ ದೊಡ್ಡಶಕ್ತಿಯಾಗುತ್ತದೆ. ಈ ಕೊರತೆ ನಿವಾರಿಸಿಕೊಂಡರೆ ಇತರರು ನಮ್ಮ ಸುದ್ದಿಗೆ ಬರಲಾರರು. ಭಾರತವು ಅಭಿವೃದ್ಧಿಯ ಪಥದಲ್ಲಿರುವಾಗ ಅಡ್ಡಿಆತಂಕಗಳು ಎದುರಾಗುವುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ.

ನಮ್ಮ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ಹಾಕಿದರೆ ಅದರಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿರುವಾಗ ಅಚಾನಕ್ ಆಗಿ, ಕಾರಣವೇ ಇಲ್ಲದೆ ಶತ್ರುಗಳು ದಾಳಿ ನಡೆಸಿದ್ದು ಮತ್ತು ಇದರಿಂದ ದೇಶದ ಪ್ರಗತಿ ಹಾದಿಯಲ್ಲಿ ತೊಡಕುಂಟಾಗಿರುವುದನ್ನು ಕಾಣಬಹುದು. ರಾಜಾ ದಾಹಿರ್ ಯಾರ ಮೇಲಾದರೂ ದಾಳಿ ನಡೆಸಿದ್ದನೇ? ಇಲ್ಲ. ಆದರೂ ಮಹಮ್ಮದ್ ಬಿನ್ ಕಾಸಿಂ ಸಿಂಧ್​ನ ಮೇಲೆ ದಾಳಿಗೈದ. ಧನ ಧಾನ್ಯದಿಂದ ಸಂಪನ್ನವಾಗಿದ್ದ, ಸುಖ ಸಂತೋಷ, ಸಮೃದ್ಧಿಯಿಂದ ಕೂಡಿದ್ದ ಪರಾಮರ್ ರಾಜರು ಯಾರ ಮೇಲೆ ದಾಳಿ ನಡೆಸಿದ್ದರೆಂದು ಅವರ ಮೇಲೆ ಘಜ್ನಿ ದಂಡೆತ್ತಿಬಂದ? ರಾಣಾ ಸಾಂಗಾ ಅಥವಾ ಮರಾಠರು ಕಾಬುಲ್, ತೆಹ್ರಾನ್ ಅಥವಾ ಬಾಗ್ದಾದ್ ಮೇಲೆ ದಾಳಿ ನಡೆಸಿದ್ದರೇ? ಆದರೂ ಅವರ ಮೇಲೆ ದಾಳಿಗಳಾಗಿದ್ಯಾಕೆ?

ಇಂದು ಭಾರತ ಅಭಿವೃದ್ಧಿ ಪಥದಲ್ಲಿದೆ. ಆತಂಕವಾದದ ವಿರುದ್ಧದ ಹೋರಾಟ ಪ್ರಬಲವಾಗಿದೆ. ದೇಶದ ಸಂಸ್ಕೃತಿಯನ್ನು ಪಸರಿಸುವವರಿಗೆ ಮೊದಲ ಬಾರಿ ಸ್ವಾತಂತ್ರ್ಯದ ಅನುಭವವಾಗುತ್ತಿದೆ. ವಿಶ್ವಾಸಕ್ಕೆ ಬೆಲೆ ಹೆಚ್ಚುತ್ತಿದೆ. ಹಗರಣಗಳು ನಿಂತಿವೆ. ಮನೆ ಮನೆಗಳಿಗೂ ವಿದ್ಯುತ್ ಮತ್ತು ಸೌರಶಕ್ತಿಯ ಮೂಲಕ ಬೆಳಕು ನೀಡಲಾಗುತ್ತಿದೆ. ವಿಶ್ವಾದ್ಯಂತ ಭಾರತದ ಬಗ್ಗೆ ಚರ್ಚೆಗಳಾಗುತ್ತಿದೆ. ಹೀಗಿರುವಾಗಲೇ ಭಾರತದ ಗಡಿಯಲ್ಲಿ ವಿವಾದಗಳು ಹುಟ್ಟಿಕೊಂಡವು. ಡೋಕ್ಲಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಭೂತಾನನ್ನು ಬೆಂಬಲಿಸಿದ್ದು ಚೀನಾಗೆ ಅಸಮಾಧಾನ ತಂದಿತ್ತು. ಯುದ್ಧಕ್ಕೂ ಹಿಂದೆ ಮುಂದೆ ಯೋಚಿಸುವುದಿಲ್ಲ ಎಂದು ಚೀನಾ ಧಮಕಿಯನ್ನೂ ಹಾಕಿತ್ತು. ಆದರೆ ಭಾರತ ತನ್ನ ನಿಲುವಿನಲ್ಲಿ ದೃಢವಾಗಿತ್ತು. ಚೀನಾದ ಬೆದರಿಕೆಗೆ ಜಗ್ಗಲಿಲ್ಲ. ತಾನೂ ಯುದ್ಧಕ್ಕೆ ಸಿದ್ಧವಿರುವುದಾಗಿ ಭಾರತ ಎದಿರೇಟು ನೀಡಿತು. ಹೀಗಾಗಿ ಚೀನಾ ಹಿಂದಡಿಯಿಟ್ಟಿತು. ಆದರೂ ಇದು ಭಾರತದ ಅಭಿವೃದ್ಧಿ ದಾರಿಯಲ್ಲಿನ ಅಡ್ಡಿಯೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈಗ ಹುಟ್ಟಿಕೊಂಡಿರುವ ಪ್ರಶ್ನೆಯೆಂದರೆ ಹೀಗೆ ಎಷ್ಟು ದಿನ ನಡೆಯಬೇಕು? ಭಾರತ ಬಡತನ, ಶಿಕ್ಷಣ, ನಿರುದ್ಯೋಗ ಮತ್ತು ಆಂತರಿಕ ಸುರಕ್ಷತೆ ಮುಂತಾದವುಗಳಿಗೆ ಪರಿಹಾರ ಕಂಡುಕೊಳ್ಳುವುದು ಮಾತ್ರವಲ್ಲ, ವಿದೇಶಗಳಿಂದ ನಡೆಯಬಹುದಾದ ಸಂಭವನೀಯ ದಾಳಿಗಳನ್ನೂ ತಡೆಯಬೇಕಿದೆ.

ಯಾರು ವ್ಯಕ್ತಿಗತ ದ್ವೇಷ, ಕಲುಷಿತ ಹೃದಯದಿಂದ ರಾಜಕೀಯ ಮಾಡುತ್ತಾರೋ, ಅಧಿಕಾರದ ಕುತಂತ್ರವನ್ನು ಮಾಡುತ್ತಾರೋ, ನ್ಯಾಯ ವ್ಯವಸ್ಥೆಯ ಬಗ್ಗೆ ಹಾಸ್ಯ ಮಾಡುತ್ತಾರೋ ಅವರು ಎಂದಾದರೂ ಭಾರತದ ಸಾಮೂಹಿಕ ಸುರಕ್ಷೆ ಮತ್ತು ಸಮೃದ್ಧಿಯಲ್ಲಿ ತಮ್ಮ ಯೋಗದಾನವೇನು ಎನ್ನುವ ಬಗ್ಗೆ ಯೋಚಿಸಿದ್ದಾರೆಯೇ? ಕಾಡಮೃಗಗಳು ಉಳಿಯಲೊಂದು ಸೂಕ್ತ ಸ್ಥಳವನ್ನು ಹುಡುಕಿಕೊಂಡು ಹೊಟ್ಟೆ ತುಂಬಿಸಿಕೊಂಡು ಆರಾಮವಾಗಿ ಜೀವಿಸುತ್ತವೆ ಮತ್ತು ಅಂತ್ಯ ಕಾಣುತ್ತವೆ. ಮನುಷ್ಯನೂ ಅದೇ ರೀತಿ ತಾನು ತನ್ನದು ಎಂದು ಮಾತ್ರ ನೋಡುವುದಾದರೆ ಆತನಿಗೂ ಕಾಡುಪ್ರಾಣಿಗಳಿಗೂ ವ್ಯತ್ಯಾಸವೇನಿರುತ್ತದೆ?

ಯಾರೇ ಆದರೂ ಆಂತರಿಕವಾಗಿ ಸಶಕ್ತರಾಗಿದ್ದಾಗ ಹೊರಗಿನ ಶತ್ರುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಯೋಚಿಸಿ. ಯಾವಾಗ ರಾಣಿ ಪದ್ಮಿನಿಯ ಮೇಲೆ ಖಿಲ್ಜಿಯ ವಕ್ರದೃಷ್ಟಿ ಬಿದ್ದಿತ್ತೋ ಆಗ ಉಳಿದ ರಾಷ್ಟ್ರಗಳು ಏನು ಮಾಡುತ್ತಿದ್ದವು? ಕಾಶ್ಮೀರದ ಮೇಲೆ ದಾಳಿಯಾದಾಗ, ಸ್ವರ್ಣ ಮಂದಿರದ ಸರೋವರವನ್ನು ಅಪವಿತ್ರಗೊಳಿಸಿದಾಗ ಉಳಿದ ದೇಶಗಳೆಲ್ಲಿದ್ದವು? ಅದಕ್ಕೂ ಮೊದಲು ಗುರು ತೇಗ್ ಬಹದ್ದೂರರನ್ನು ಸಹೋದರರಾದ ಮತಿದಾಸ್ ಮತ್ತು ಸತಿದಾಸ್ ಹತ್ಯೆ ಮಾಡಿದಾಗ ವಿದೇಶಗಳು ಏನು ಮಾಡುತ್ತಿದ್ದವು? ದೇಶ ಅಪಾಯದಲ್ಲಿದ್ದಾಗ ಯಾರೂ ನೆರವಿಗೆ ಬರಲಿಲ್ಲ. ಅಭಿವೃದ್ಧಿಗೆ ಮಾತ್ರ ಅಡ್ಡಿ ಪಡಿಸುತ್ತವೆ.

ಗುರು ತೇಗ್ ಬರದ್ದೂರ್ ತಮ್ಮ ಪ್ರಾಣ ಬಲಿದಾನ ನೀಡಿ ಕಾಶ್ಮೀರದ ಹಿಂದುಗಳನ್ನು ರಕ್ಷಿಸಿದ್ದರು. ಆದರೆ ಎಷ್ಟು ಹಿಂದೂ ಮಂದಿರಗಳಲ್ಲಿ ಅವರ ಭಾವಚಿತ್ರವನ್ನು ಕಾಣುತ್ತೇವೆ? ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯ ಮತ್ತು ಸ್ವಯಂಸೇವಕರ ಮನೆಗಳಲ್ಲಿ ಮಾತ್ರ ಅವರ ಚಿತ್ರಗಳನ್ನು ಕಾಣಬಹುದು.

ದೆಹಲಿಯ ಕೆಂಪುಕೋಟೆಯಲ್ಲಿ ಸಿಖ್ಖರ ವಿಜಯಗೀತೆ, ಸೂರಜ್​ವಾಲ್ ಜಾಟ್​ರ ಜಯ ಪತಾಕೆ, ಮರಾಠಿಗರ ಹರ ಹರ ಮಹಾದೇವ ಘೋಷಣೆಗಳನ್ನು ಎಂದಾದರೂ ಕೇಳಿದ್ದೀರೇನು? ನಾನು ಯಾಕೆ ಹೀಗೆ ಕೇಳುತ್ತಿದ್ದೇನೆ ಎಂದು ನಿಮಗೆ ಅನಿಸಬಹುದು. ಇಂದಿಗೂ 2017ರಲ್ಲೂ ವಿಶ್ವಾದ್ಯಂತದ ಭಾರತ ಸರ್ಕಾರದ ಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನ ಅಥವಾ ಗಣತಂತ್ರ ದಿನದ ಆಚರಣೆಗಳು ನಡೆಯುವಾಗ ಅಲ್ಲಿ ಯಾವ ಚಿತ್ರಗಳನ್ನು ಬಳಸಲಾಗುತ್ತದೆ? ಹಿಂದೂ ಮಂದಿರಗಳ ನಾಶ ಮಾಡಿ ನಿರ್ವಿುಸಿರುವ ಕುತುಬ್ ಮಿನಾರ್, ಕೆಂಪುಕೋಟೆ, ಬ್ರಿಟಿಷರ ಅಧಿಕಾರ ವಿಸ್ತರಿಸಲು ಹೋರಾಡಿ ಮಡಿದ ಸೈನಿಕರ ನೆನಪಿಗಾಗಿ ನಿರ್ವಿುಸಿದ ಇಂಡಿಯಾ ಗೇಟ್, ಹುಮಾಯೂನ್​ನ ಸಮಾಧಿ, ಲೋಟಸ್ ಟೆಂಪಲ್​ನ ಹೊರತಾಗಿ ಬೇರೇನಾದರೂ ಕಾಣಿಸುತ್ತದೆಯೇ? ವಿಶ್ವಾದ್ಯಂತ ನೆಲೆಸಿರುವ ಭಾರತೀಯರ ಮನೆ ಅಥವಾ ಕಚೇರಿಗಳಲ್ಲಿ ರಾಮೇಶ್ವರಂ, ಗುರುವಾಯೂರು, ಮೀನಾಕ್ಷಿ ದೇಗುಲ, ಅಕ್ಷರಧಾಮದ ಅದ್ಭುತ ವಾಸ್ತು ಸೌಂದರ್ಯ, ಜೋಧಪುರದ ಕೋಟೆಗಳು, ಅರುಣಾಚಲದ ಪರಶುರಾಮಕುಂಡ, ಮಣಿಪುರ, ಹಂಪಿ, ತಂಜಾವೂರು, ಬದರಿ, ಕೇದಾರ, ಗಂಗೋತ್ರಿ, ಯಮುನೋತ್ರಿ ಮುಂತಾದವುಗಳನ್ನು ಕಂಡಿದ್ದೀರಾ? ಬರ್ಬರತೆಯ ಪ್ರತೀಕದಂತಿರುವ ಕಟ್ಟಡಗಳನ್ನಷ್ಟೇ ನಾವು ಎಲ್ಲ ಕಡೆ ಪ್ರದರ್ಶಿಸುತ್ತಿದ್ದೇವೆ. ಅದು ಅನಿವಾರ್ಯ ಎಂದೇನಲ್ಲ. ಅದು ನಮ್ಮ ಮನೋಭಾವವಷ್ಟೇ. ಒಂದುವೇಳೆ ಯಾರಾದರೂ ಶ್ರೀ ಗುರು ಗೋವಿಂದ ಸಿಂಗ್ ಅವರ 300ನೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಮಂದಿರ ಕಟ್ಟಬೇಕು, ಅದರಲ್ಲಿ ಗುರುವಿನ ದೇಶಪ್ರೇಮ, ಬಲಿದಾನದ ಕಥೆಗಳನ್ನು ಚಿತ್ರಗಳ ಸಮೇತ ಪ್ರದರ್ಶಿಸಬೇಕು ಎಂದು ಅಭಿಪ್ರಾಯಪಟ್ಟರು ಎನ್ನಿ, ಕೂಡಲೇ ವಿರೋಧಗಳು ಆರಂಭವಾಗಿಬಿಡುತ್ತವೆ.

ನಮಗೆ ಇತಿಹಾಸವನ್ನು ತಿಳಿದುಕೊಳ್ಳುವ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಅದೆಷ್ಟೋ ಜನರು ನೀಡಿರುವ ಬಲಿದಾನಗಳನ್ನು ಅರಿತುಕೊಳ್ಳುವ ಆಗತ್ಯವಾದರೂ ಏನಿದೆ? ಉದ್ಯೋಗ ಪಡೆದುಕೊಳ್ಳಲು ಇದೆಲ್ಲ ಬೇಕು ಎಂದಿಲ್ಲವಲ್ಲ? ಇತಿಹಾಸದ ಜ್ಞಾನವಿಲ್ಲದ ಜನರಿಗೆ ಚೀನಾ, ಪಾಕಿಸ್ತಾನದ ವಸ್ತುಗಳಲ್ಲಿ ಯಾವುದೇ ವ್ಯತ್ಯಾಸ ತಿಳಿಯುವುದಿಲ್ಲ. ಇದು ತಿಳಿದಿದ್ದರೆ ತಾನೇ ಆವೇಶ, ಆಕ್ರೋಶ ಉಂಟಾಗುವುದು? ನಮ್ಮಲ್ಲಿ ದೇಶಭಕ್ತಿಯ ಭಾವವನ್ನು ಮೂಡಿಸುವುದಕ್ಕೂ ಮನವಿ ಮಾಡಿಕೊಳ್ಳಬೇಕಾಗುತ್ತದೆ. ಅಭಿಯಾನಗಳನ್ನು ನಡೆಸಬೇಕಾಗುತ್ತದೆ. ಮಾಧ್ಯಮಗಳಿಗಂತೂ ಈ ಬಗ್ಗೆ ಏನಾದರೂ ಬರೆಯಿರಿ ಎಂದು ಬೊಬ್ಬಿಡಬೇಕಾಗುತ್ತದೆ. ದೇಶಭಕ್ತಿ ಎಂದರೆ ಯಾರೂ ಹೇಳದೆಯೇ, ಏನೂ ಮಾಡದೆಯೇ ನಮ್ಮ ಮನಸ್ಸಿನಲ್ಲಿ ಹುಟ್ಟಿಸಿಕೊಳ್ಳಬೇಕಾಗಿರುವ ಭಾವನೆ. ಆದರೆ ನಮಗೆ ಇದರ ಬಗ್ಗೆ ಗಮನವೇ ಇಲ್ಲ.

ಇದರ ಪ್ರಭಾವ ಕೇವಲ ಗಡಿಯಲ್ಲಷ್ಟೆ ಕಾಣುತ್ತಿಲ್ಲ. ಕಳಪೆ ಗುಣಮಟ್ಟದ ವಸ್ತುಗಳಿಗೆ ದುಬಾರಿ ಪ್ಯಾಕಿಂಗ್ ಮಾಡಿ ಭಾರಿ ಬೆಲೆಗೆ ಮಾರಾಟ ಮಾಡುವವರೆಗೆ ಈ ಹುನ್ನಾರ ಇದೆ. ಜಿಎಸ್​ಟಿಯಂತಹ ಉತ್ತಮ ಯೋಜಗೆ ವಿರೋಧದಿಂದ ದೇಶದ ಬೆಳವಣಿಗೆಗೆ ಅಡ್ಡಿಯಾಗುತ್ತದೆಂಬುದು ನಮಗೇಕೆ ತಿಳಿಯುತ್ತಿಲ್ಲ?

ದೇಶ ವಿದೇಶಿ ಆಕ್ರಮಣಕಾರಿಗಳಿಂದ ಮಾತ್ರ ತೊಂದರೆಗೀಡಾಗುವುದಿಲ್ಲ. ದೇಶದೊಳಗಿರುವ ಆಲಸಿ, ವಿದೇಶಿ ವಸ್ತುಗಳ ದಾಸರ ಕಾರಣದಿಂದಲೂ ಸಮಸ್ಯೆ ಎದುರಿಸುತ್ತದೆ. ದೇಶಭಕ್ತಿಯೆಂದರೆ ಜೋರಾಗಿ ದೇಶಭಕ್ತಿ ಗೀತೆ ಹಾಡುವುದಷ್ಟೇ ಅಲ್ಲ. ವಿದ್ಯೆ ಕಲಿಯುವುದು ಮತ್ತು ಕಲಿಸುವುದು, ಸೇವೆ ಮತ್ತು ಸ್ವಾಸ್ಥ್ಯ್ಕೆ ಸಂಬಂಧಿಸಿದ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಮುಂತಾದವೂ ಇದರಲ್ಲಿ ಸೇರಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವುದು, ಸೇವಾ ಭಾವನೆಯಿಂದ ಚಿಕಿತ್ಸೆ ಒದಗಿಸುವುದು, ಕಚೇರಿಯಲ್ಲಿ ಸ್ವಚ್ಛತೆ ಕಾಪಾಡುವುದು, ರಸ್ತೆ ನಿಯಮಗಳನ್ನು ಪಾಲಿಸುವುದು ಕೂಡಾ ದೇಶಭಕ್ತಿಯೇ.

ಕಾಬುಲ್, ರಾವಲ್ಪಿಂಡಿ, ಕರಾಚಿ, ಢಾಕಾ ಮತ್ತು ರಂಗೂನ್​ನಲ್ಲೂ ನೂರಾರು ಹಿಂದೂ ಮಂದಿರಗಳಿದ್ದವು. ಅವೆಲ್ಲ ಈಗ ಎಲ್ಲಿ ಹೋದವು? ಧರ್ಮದೊಂದಿಗೆ ದೇಶವನ್ನು ಜೋಡಿಸಿದವರು ಕೆಲ ಸಂತರಷ್ಟೇ. ದೇಶಭಕ್ತಿ ಮತ್ತು ಧರ್ಮ ಒಂದಕ್ಕೊಂದು ಸಂಬಂಧಿಸಿದ್ದಾಗಿದೆ. ದೇವರ ನಾಮಸ್ಮರಣೆಯೇ ಎಲ್ಲವೂ ಎನ್ನುವುದಾಗಿದ್ದರೆ, ಸ್ವಾಮಿ ವಿವೇಕಾನಂದರು ಷಿಕಾಗೋಗೆ ತೆರಳಬೇಕಿರಲಿಲ್ಲ. ಧರ್ಮ ಮತ್ತು ದೇಶಭಕ್ತಿ ಒಂದಕ್ಕೊಂದು ಸಂಬಂಧಿಸಿದ್ದು ಎಂಬುದರ ಅರಿವು ಅವರಲ್ಲಿತ್ತು. ಹೀಗಾಗಿಯೇ ಅವರು ಯುವಕರಿಗೆ ಪ್ರೇರಣೆಯಾದರು.

ನಮ್ಮ ಅಜ್ಞಾನ ಮತ್ತು ದೇಶಭಕ್ತಿಯ ಕೊರತೆ ಶತ್ರುಗಳಿಗೆ ದೊಡ್ಡಶಕ್ತಿಯಾಗುತ್ತದೆ. ಇದರ ಅರಿವು ನಮಗೇಕಾಗುತ್ತಿಲ್ಲ? ಇದನ್ನು ನಾವು ಮೆಟ್ಟಿನಿಲ್ಲಬೇಕಿದೆ. ಆಗ ಇತರ ದೇಶಗಳು ನಮ್ಮ ವಿಚಾರದಲ್ಲಿ ತಲೆಹಾಕಲು ಹಿಂದೆ ಮುಂದೆ ನೋಡಬೇಕಾಗುತ್ತದೆ. ಅಂಥದೊಂದು ಅರಿವು ಎಲ್ಲರಲ್ಲೂ ಮೂಡಲಿ.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top