Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ದುಗುಡ ದುಮ್ಮಾನಕ್ಕೆ ದಿವ್ಯೌಷಧ ಯೋಗ-ಧ್ಯಾನ

Saturday, 15.04.2017, 3:05 AM       No Comments

ಈ ವರ್ಷ ಏಪ್ರಿಲ್ 7ರಂದು ಆಚರಿಸಿದ ‘ವಿಶ್ವ ಆರೋಗ್ಯ ದಿನ’ದಂದು ವಿಶ್ವದಾದ್ಯಂತ ಚರ್ಚೆ ಆದದ್ದು ಮಾನಸಿಕ ಒತ್ತಡ ಮತ್ತು ದುಗುಡ. ವಿಶ್ವ ಆರೋಗ್ಯ ಸಂಸ್ಥೆ (WHO) ಈ ಸಲ ‘Depression let’s talk’  ಅನ್ನುವ ಶೀರ್ಷಿಕೆ ಘೊಷಿಸಿ- ‘ಮನಸ್ಸಿನ ದುಗುಡ ಮುಚ್ಚಿಡಬೇಡಿ, ಬನ್ನಿ ಮಾತಾಡೋಣ’ ಎಂದು ಮುಕ್ತವಾಗಿ ತಮ್ಮ ಮನದಾಳದ ಮಾತುಗಳನ್ನು ಆಡಿ ದುಃಖ, ದುಮ್ಮಾನ, ದುಗುಡದಿಂದ ಮನಸ್ಸನ್ನು ಮುಕ್ತಗೊಳಿಸಿ ಎಂದಿದೆ. ಮನಸ್ಸುಗಳನ್ನು ಅರಳಿಸುವ ಕೆಲಸಮಾಡಬೇಕೆಂದು ಕರೆಕೊಟ್ಟಿದೆ. ಇದಕ್ಕೆ ಬಲವಾದ ಕಾರಣವಿದೆ. ವೇಗದಿಂದ ಓಡುತ್ತಿರುವ, ಜಾಗತೀಕರಣಗೊಂಡ ಜಗತ್ತಿನಲ್ಲಿ ಜನರ ಮನಸ್ಸಿನ ಒತ್ತಡ ಮತ್ತು ದುಗುಡ ಸರ್ವೆಸಾಮಾನ್ಯವಾಗಿಬಿಟ್ಟಿದೆ! ಮಾನಸಿಕ ಒತ್ತಡದಿಂದ ಆರೋಗ್ಯ ಏರುಪೇರು ಆಗಿ ಜನಸಾಮಾನ್ಯರು ನರಳುತ್ತಿದ್ದಾರೆ. ಬದುಕು ಬರಡಾಗುತ್ತಿದೆ. ಬಹುಶಃ ಇದನ್ನು ಮೊದಲೇ ಅರಿತಂತೆ ಮಿಲ್ಟನ್- ‘ಮನಸ್ಸು ಮಾಡಿದರೆ, ಮನಸ್ಸು ಸ್ವರ್ಗವನ್ನು ನರಕ ಮಾಡಬಹುದು, ಇಲ್ಲ ನರಕವನ್ನು ಸ್ವರ್ಗವಾಗಿಸಬಹುದು!’ ಎಂದು ಹೇಳಿದ್ದರು. ಅವರ ಮಾತು ಸತ್ಯವೆಂದು ಇಂದಿನ ಮನೋವಿಜ್ಞಾನ ಒಪ್ಪಿಕೊಂಡಿದೆ. ಮನಸ್ಸು ಮುದುಡಿದರೆ ದುಗುಡದಿಂದ ಬರುವ ಕಾಯಿಲೆ ಗಳಿಂದ ಶರೀರ ಜಜ್ಜರಿತವಾಗಿ ಬದುಕು ನರಕವಾಗುತ್ತದೆ.

ಅಮೆರಿಕದಲ್ಲಿ ಕೆಲಸ ಮಾಡುವವರಲ್ಲಿ ಶೇ.80 ಜನ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದಾರೆ. ಇದರಿಂದ ವರ್ಷಕ್ಕೆ ಸುಮಾರು 4 ಲಕ್ಷ ಜನರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಸಮೀಕ್ಷೆಗಳಿಂದ ತಿಳಿದು ಬಂದಿದೆ. ‘ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಇರಲಿ’ ಎಂದು ಭಗವಂತನನ್ನು ಬಲವಂತವಾಗಿ ನಂಬಿದ್ದ ನಮ್ಮ ಭಾರತದಲ್ಲಿ ಕೂಡ ಇತ್ತೀಚೆಗೆ ಆತ್ಮಹತ್ಯೆ ಮತ್ತು ಹೃದಯಾಘಾತದಿಂದ ಆಗುವ ಸಾವಿನ ಸಂಖ್ಯೆ ಯುವಕರಲ್ಲಿ ಹೆಚ್ಚುತ್ತಿದೆ. ಕಾರಣ ಭಗವಂತನನ್ನು ಬಲವಾಗಿ ನಂಬಿದ ಆಸ್ತಿಕರ ಸಂಖ್ಯೆ ಕಡಿಮೆ ಆಗುತ್ತಿದೆ! ಆಸ್ತಿಕರಾಗಿರುವುದಕ್ಕೂ, ಮನಸ್ಸಿನ ದುಗುಡಕ್ಕೂ ಮತ್ತು ಸಾಯುವುದಕ್ಕೂ ಏನು ಸಂಬಂಧ? ಎಂದು ನೀವು ಕೇಳಬಹುದು. ಅಮೆರಿಕದ ಲೊಯೊಲಾ ವಿಶ್ವವಿದ್ಯಾಲಯದ ವೈಜ್ಞಾನಿಕ ಸಮಿತಿಯ ಪ್ರಕಾರ, ಭಗವಂತನನ್ನು ನಂಬಿದವರಲ್ಲಿ ಆತ್ಮಹತ್ಯೆ ಮತ್ತು ದಿಢೀರ್ ಎಂದು ಹೃದಯಾಘಾತದಿಂದ ಸಾಯುವವರ ಸಂಖ್ಯೆ ಶೇ.50ರಷ್ಟು ಕಡಿಮೆ ಎಂದು ತಿಳಿದುಬಂದಿದೆ! ನಮ್ಮ ಪೂರ್ವಜರ ‘ಚಿಂತೆ ಯಾಕೆ ಮಾಡುವೆ ಚಿನ್ಮಯನಿದ್ದಾನೆ’ ಎಂಬ ಸಕಾರಾತ್ಮಕ ಚಿಂತನೆ ಆತ್ಮಬಲದ ವೃದ್ಧಿಗೆ ಎಷ್ಟು ಮುಖ್ಯವೆಂಬುದನ್ನು ಇದು ತಿಳಿಸುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ಭಗವಂತನನ್ನು ಮರೆತವರು ಜೀವನದಲ್ಲಿ ಆರ್ಥಿಕ, ಕೌಟುಂಬಿಕ, ವೈಯಕ್ತಿಕ ಸಮಸ್ಯೆ ಬಂದಾಗ ಕುಗ್ಗಿಬಿಡುತ್ತಾರೆ. ಮುಂದೇನು ಎಂದು ದಾರಿಗಾಣದೆ ಆಕಾಶ ಕಳಚಿ ಬಿದ್ದಂತೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲೂ ಮೂರು ತರಹದ ಸಮಸ್ಯೆಗಳು ಬಂದೇಬರುತ್ತವೆ. ಒಂದು, ದಿನನಿತ್ಯದ ಕೆಲಸದಲ್ಲಿ ಬರುವ ಸಮಸ್ಯೆಗಳು. ನಮ್ಮ ಬುದ್ಧಿ ಚತುರತೆ ಉಪಯೋಗಿಸಿ ಅವುಗಳಿಗೆ ಪರಿಹಾರ ಹುಡುಕಿಕೊಳ್ಳುತ್ತೇವೆ. ಎರಡನೆಯದು, ಹೊಂದಾಣಿಕೆ ಅನ್ಯೋನ್ಯತೆಯ ಸಮಸ್ಯೆ. ಉದಾಹರಣೆಗೆ, ಗಂಡ-ಹೆಂಡಿರ, ಅತ್ತೆ-ಸೊಸೆಯ, ಮೇಲಧಿಕಾರಿ-ಅಧೀನ ಸಿಬ್ಬಂದಿ ಮುಂತಾದವರಲ್ಲಿ ಕಂಡುಬರುವ ದಿನನಿತ್ಯದ ಕಿರಿಕಿರಿ. ನಾವು ಇವುಗಳನ್ನು ನಗುನಗುತ್ತ ಉದಾಸೀನ ಮಾಡಿ, ಅವಕ್ಕೆ ಸೊಪ್ಪುಹಾಕದೆ ನಮ್ಮ ಕೆಲಸದ ಕಡೆಗೆ ಗಮನ ಕೊಡಬೇಕು. ಇಂಥ ಹಳಸಿದ ಸಂಬಂಧಕ್ಕೆ, ಕಿರಿಕಿರಿಯ ಮಾತಿಗೆ ಮನಸ್ಸು ಕೆಡಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರೂ ಇದ್ದಾರೆ. ಇಂಥವರು ತಮ್ಮ ಮನಸ್ಸನ್ನು ಗಟ್ಟಿಗೊಳಿಸಲು ಯೋಗ, ಧ್ಯಾನ ಮಾಡಬೇಕು. ಇನ್ನು ಮೂರನೆಯದು, ಭಯಂಕರವಾದ ಆಪತ್ತು, ಕುತ್ತು ಬಂದಾಗ ಹಲವರು ಎದೆಒಡೆದುಕೊಂಡು ಸಾಯುತ್ತಾರೆ. ಅಂದರೆ ವೈದ್ಯಕೀಯ ಭಾಷೆಯಲ್ಲಿ ಹೃದಯಾಘಾತ, ಅದರಿಂದ ‘Cardiac rupture’ ಆಗಿ ದಿಢೀರ್ ಅಂತ ಸಾಯುತ್ತಾರೆ. ಇನ್ನು ಕೆಲವರು ಇಡೀ ಕುಟುಂಬದ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದು ದೊಡ್ಡ ದುರಂತ. ಇದನ್ನು ಓದಿದಾಗ ನಮ್ಮ ಎದೆ ‘ಝುಲ್’ ಎನ್ನುತ್ತದೆ.

ಹತ್ತಿರದವರು ಮೃತರಾದರೆ ಮಾನಸಿಕ ಒತ್ತಡ ಹೆಚ್ಚಾಗಿ ಮನಸ್ಸು ಕುಗ್ಗಿ ದೇಹದ ಶಕ್ತಿ ಕುಂದಿ ವ್ಯಕ್ತಿ ಸೋತು ಸುಣ್ಣವಾಗಿ ಧೃತಿಗೆಡುತ್ತಾನೆ. ಇಂಥ ಸಮಯದಲ್ಲಿ ಮನಸ್ಸನ್ನು ಭಗವಂತನಲ್ಲಿ ಗಟ್ಟಿಯಾಗಿ ನೆಡದಿದ್ದರೆ, ಅವರ ಮಿದುಳಿನಿಂದ 400 ಪಟ್ಟು ಹೆಚ್ಚು ‘Catacholomines’ ಉತ್ಪತ್ತಿ ಆಗುತ್ತವೆ. ಇದರಿಂದ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕಿರೀಟಧಮನಿಗಳು (Coronary Arteries) ಸಂಕುಚಿತಗೊಂಡು (Spasm), ಹೃದಯಕ್ಕೆ ಸರಬರಾಜು ಆಗಬೇಕಾದ ಪ್ರಾಣವಾಯು ಪೋಷಣೆ ಕಡಿಮೆ ಆಗಿ ಹೃದಯ ನಿಷ್ಕ್ರಿಯಗೊಳ್ಳುತ್ತದೆ. ಹೃದಯದ ಒತ್ತಳ್ಳುವ ಶಕ್ತಿ ಶೇ. 60ರಿಂದ ಶೇ. 15-20ಕ್ಕೆ ಕುಸಿಯುತ್ತದೆ. ಆಗ ನಮ್ಮ ಶರೀರದಲ್ಲಿರುವ 102 ಟ್ರಿಲಿಯನ್ ಜೀವಕಣಗಳಿಗೆ ಪ್ರಾಣವಾಯು ಪೋಷಣೆ ಸರಬರಾಜು ಮಾಡುವ ರಕ್ತದ ಸಂಚಲನ ಕಡಿಮೆಯಾಗಿ ವ್ಯಕ್ತಿಗೆ ಸುಸ್ತಾಗುತ್ತದೆ. ಹೀಗೆ ಮನಸ್ಸಿನ ದುಗುಡದಿಂದ ಹೃದಯ ನಿಷ್ಕ್ರಿಯವಾಗಿ ಅದರಿಂದ ಇದೇ ಶರೀರದ ಚೈತನ್ಯ ಉಡುಗುತ್ತದೆ ಎಂದು ವಿಜ್ಞಾನ ತೋರಿಸಿದೆ! ಅದೇ ಯೋಗ, ಧ್ಯಾನ ಮಾಡುವ ವ್ಯಕ್ತಿಯ ಮಿದುಳಿನಿಂದ ಉತ್ಪತ್ತಿ ಆಗುವ ರಾಸಾಯನಿಕಗಳಿಗೆ  Endorphin ಮತ್ತು Neuropeptides ಎನ್ನುತ್ತೇವೆ. ಇವುಗಳಿಗೆ ‘Feel-good harmones’ ಎಂದು ಕರೆಯುತ್ತೇವೆ. ಕಾರಣ ಇವು ಮನಸ್ಸನ್ನು ನಿರಾಳಗೊಳಿಸಿ ನಿಶ್ಚಿಂತೆಯಿಂದ ನಗುನಗುತ ಬದುಕಲು ಸಹಕಾರಿಯಾಗಿವೆ. ಆದ್ದರಿಂದಲೇ ಭಾರತದ ಪ್ರಧಾನಿ ‘ವಿಶ್ವ ಯೋಗದಿನ’ ಆಚರಿಸಲು ವಿಶ್ವ ಆರೋಗ್ಯ ಸಂಸ್ಥೆಗೆ ಕೇಳಿಕೊಂಡಾಗ 192 ರಾಷ್ಟ್ರಗಳು ತಾವೇ ಮುಂದಾಗಿರುವುದಕ್ಕೆ ಕಾರಣ, ಇಂದು ಯೋಗ, ಧ್ಯಾನದಿಂದ ಮನಸ್ಸಿನ ಮೇಲೆ ಆಗುವ ಉತ್ತಮ ಪರಿಣಾಮ, ಇದರಿಂದ ಆರೋಗ್ಯ ಉತ್ತಮವಾಗುವ ಅರಿವು ವಿಶ್ವಕ್ಕೆ ಆಗಿದೆ!

ಇದನ್ನು 12ನೇ ಶತಮಾನದಲ್ಲಿ ಒಡಿಶಾದಿಂದ ಬಂದ ವೈದ್ಯ ಸಂಗಣ್ಣ ಹೇಳುತ್ತಾರೆ- ‘ಜಿಹ್ವೇಂದ್ರಿಯ ಎಂಬ ರೋಗ ಬಾಯಲ್ಲಿ ಹುಟ್ಟಿ (ಬಾಯಿರುಚಿಗೆ ಮಿತಿಮೀರಿ ತಿನ್ನುವುದು) ಗುಹ್ಯೇಂದ್ರಿಯವೆಂಬ ರೋಗ ಚಿತ್ತದಲ್ಲಿ ತತ್ತರಿಸಿದೆ ನೋಡ, ಆಸೆಯೆಂಬ ರೋಗ ಸರ್ವಾಂಗದಲ್ಲಿ ಹೊಕ್ಕು ಸರ್ವರಿಗೆಲ್ಲಕ್ಕೂ ಪಾಖಂಡಿ ವೇಷಧಾರಿಗಳೆನಿಸುತ್ತಿದೆ ನೋಡ, ಈ ರೋಗ ನಿರೋಗವಾಗುವುದಕ್ಕೊಂದು ಮದ್ದುಂಟು… ಅದೇ ನಮ್ಮ ಚಂಚಲ ಮನಸ್ಸನ್ನು ದೃಢವಾಗಿಸಿ ಆಸೆಯನ್ನು ಹತ್ತಿಕ್ಕಿ ಪಂಚೇಂದ್ರಿಯಗಳನ್ನು ನಿಯಂತ್ರಿಸಿದರೆ ಮುಕ್ಕಾಲು ಪಾಲು ರೋಗಗಳು ಬರದಂತೆ ತಡೆಯಬಹುದು’.

ಇಂದು ಬಾಯಿರುಚಿಗೆ ಜನ ಎಲ್ಲೆಂದರಲ್ಲಿ ಸಿಕ್ಕಾಪಟ್ಟೆ ಸಿಕ್ಕಿದ್ದನ್ನೆಲ್ಲ ತಿಂದು ಹೊಟ್ಟೆಬಾಕರಾಗಿ, ಜತೆಗೆ ಹೊಟ್ಟೆ ಬೆಳೆಸಿಕೊಂಡು ಸ್ಥೂಲಕಾಯರಾಗುತ್ತಿದ್ದಾರೆ. ಹೆಣ್ಣು, ಗಂಡು, ಮಕ್ಕಳು ಎನ್ನದೆ ಮಿತಿಮೀರಿ ತಿಂದು ದಪ್ಪಗಾಗುತ್ತಿದ್ದಾರೆ. ಇಂದಿನ ವೈದ್ಯಕೀಯ ವಿದ್ಯಮಾನದ ಪ್ರಕಾರ, ಸ್ಥೂಲಕಾಯ ಒಂದು ದೊಡ್ಡರೋಗ. ದುಗುಡ ಇದ್ದವರಂತೂ ತಿನ್ನುವುದನ್ನು ನಿಯಂತ್ರಿಸುವುದೇ ಇಲ್ಲ. ಇದರಿಂದ 4 ಮಾರಣಾಂತಿಕ ಕಾಯಿಲೆಗಳು ಬೆಲ್ಲಕ್ಕೆ ನೊಣ ಮುತ್ತುವಂತೆ ಆವರಿಸಿ, ಶರೀರ ರೋಗಗಳ ಆಗರವಾಗುತ್ತದೆ. ಅಂದರೆ, ದಪ್ಪಗಿದ್ದವರಿಗೆ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೆಚ್ಚು ಜಿಡ್ಡು ಮತ್ತು ಹೃದಯಾಘಾತ ಆಗಿ ಜನ ಅಕಾಲಿಕವಾಗಿ ಸಾಯುತ್ತಿದ್ದಾರೆ. ಈ ಕಾಯಿಲೆಗಳೊಂದಿಗೆ ಮದ್ಯಪಾನ ಮತ್ತು ಧೂಮಪಾನ ಅಭ್ಯಾಸವಿದ್ದರಂತೂ ಮುಗಿದೇಹೋಯಿತು. ಯಾರೂ ಅವರನ್ನು ಸಾವಿನ ದವಡೆಯಿಂದ ಉಳಿಸಲು ಆಗುವುದಿಲ್ಲ.

ಇದನ್ನೇ ಬಹುರೂಪಿ ಚೌಡಯ್ಯ- ‘ಮಿತ ಭೋಜನ, ಮಿತ ವಾಕ್ಕು, ಮಿತ ನಿದ್ರೆ ಮಾಡಿರಣ್ಣಾ, ಯೋಗ ಸಿದ್ಧಿ ಬೇಕಪ್ಪಡೆ ಅತ್ಯಾಹಾರ, ಇಂದ್ರಿಯ ವ್ಯವಹಾರ…. ಕಾಯ ಅಳಿಯದಂತೆ ಉಳಿಸಿಕೊಳ್ಳಿರಣ್ಣಾ’ ಎಂದಿದ್ದಾರೆ. ಮರ್ಕಟದಂಥ ಮನಸ್ಸನ್ನು ನಿಗ್ರಹಿಸಲು ಯೋಗ, ಧ್ಯಾನದಿಂದ ಮಾತ್ರ ಸಾಧ್ಯ. ಯೋಗ ಎಂದರೇನೇ ಮನಸ್ಸನ್ನು ನಿಗ್ರಹಿಸುವುದು. ಧ್ಯಾನವು ಮನಸ್ಸಿನ ಆತಂಕ, ತಳಮಳ, ಒತ್ತಡಗಳನ್ನು ಕಡಿಮೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಮಿದುಳಿನಿಂದ ಸಿರೊಟೋನಿನ್ ಉತ್ಪತ್ತಿ ಹೆಚ್ಚಿಸಿ ದುಗುಡ ಕಡಿಮೆ ಮಾಡುತ್ತದೆ. ಧ್ಯಾನದಿಂದ ಚೈತನ್ಯ, ಶಕ್ತಿ, ಚಲನಶೀಲತೆ ಹೆಚ್ಚುತ್ತದೆ. ಹೃದಯದ ಮಿಡಿತ ಕಡಿಮೆ ಆಗಿ, ರಕ್ತದ ಒತ್ತಡ ಕೂಡ ಕಡಿಮೆ ಆಗಿ ಮನಸ್ಸಿಗೆ ಶಾಂತಿ ನೆಮ್ಮದಿ ಸಿಕ್ಕಿ ಏಕಾಗ್ರತೆ ಹೆಚ್ಚುತ್ತದೆ.

ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯಕ್ಕಾಗಿ ಯೋಗ, ಧ್ಯಾನ ಅತ್ಯುತ್ತಮ ಸಾಧನಗಳು. ಭಯಂಕರ ಕಷ್ಟ ಎದುರಾದಾಗ ‘Adrenolgic Drive’ ನಿಂದ ಮನಸ್ಸು, ಶರೀರ ಕುಗ್ಗುತ್ತವೆ. ಯೋಗ, ಧ್ಯಾನದಿಂದ ‘Feelgood harmone’  ಉತ್ಪತ್ತಿ ಆಗಿ ನಮ್ಮಲ್ಲಿ ಕಷ್ಟವನ್ನು ಎದುರಿಸುವ ಎದೆಗಾರಿಕೆ ಹೆಚ್ಚುತ್ತದೆ. ಮಾನಸಿಕ ಒತ್ತಡ, ಅದರಿಂದ ಶರೀರದ ಮೇಲಾಗುವ ದುಷ್ಪರಿಣಾಮ ನಿಯಂತ್ರಿಸಲು ವಿಶ್ವಕ್ಕೆ ಇರುವ ಸನ್ಮಾರ್ಗವೇ ಯೋಗ-ಧ್ಯಾನ.

Leave a Reply

Your email address will not be published. Required fields are marked *

Back To Top