Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

ದುಂದುವೆಚ್ಚ ಸಲ್ಲ

Tuesday, 17.10.2017, 3:00 AM       No Comments

ರಾಜ್ಯದ ಆಡಳಿತದ ಶಕ್ತಿಕೇಂದ್ರವೆನಿಸಿರುವ ವಿಧಾನಸೌಧಕ್ಕೆ 60 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಮತ್ತು ಅದರ ನೆಪದಲ್ಲಿ ದುಂದುವೆಚ್ಚಕ್ಕೆ ಮುಂದಾಗಿರುವ ವಿಧಾನಸೌಧ ಸಚಿವಾಲಯದ ವರ್ತನೆಗೆ ಸಾರ್ವಜನಿಕ ವಲಯದಿಂದ, ಸಂಘ-ಸಂಸ್ಥೆಗಳಿಂದ ಅಸಮಾಧಾನ ವ್ಯಕ್ತವಾಗಿದೆ. ಯಾವುದೇ ಸ್ಥಾಪಿತ ವ್ಯವಸ್ಥೆ ಅಥವಾ ಸಂಸ್ಥೆಗೆ 60 ವರ್ಷ ತುಂಬಿದಾಗ, ಅದರ ಸಂಭ್ರಮದ ಸಂಕೇತವಾಗಿ ‘ವಜ್ರಮಹೋತ್ಸವ’ದ ಆಯೋಜನೆ-ಆಚರಣೆಯಾಗುವುದರಲ್ಲಿ ತಪ್ಪೇನಿಲ್ಲ. ಆದರೆ ಸಂಭ್ರಮದ ಸೋಗಿನಲ್ಲಿ ತೆರಿಗೆದಾರರ ಹಣವನ್ನು ಬೇಕಾಬಿಟ್ಟಿ ಖರ್ಚುಮಾಡುವುದು, ಬೇಡದ ಬಾಬತ್ತುಗಳಿಗೆ ವಿನಿಯೋಗಿಸುವುದು ವಿವೇಚನೆಯ ನಡೆ ಎನಿಸಿಕೊಳ್ಳುವುದಿಲ್ಲ. ಒಟ್ಟು ಎರಡು ದಿನ ನಡೆಯಲಿರುವ ಈ ಕಾರ್ಯಕ್ರಮಕ್ಕೆ 26.87 ಕೋಟಿ ರೂ. ವೆಚ್ಚಮಾಡುವ ಪ್ರಸ್ತಾವವನ್ನು ವಿಧಾನಸೌಧದ ಸಚಿವಾಲಯವು ಹಣಕಾಸು ಇಲಾಖೆಯ ಸಮ್ಮುಖದಲ್ಲಿ ಮಂಡಿಸಿರುವುದು ಕೂಡ ‘ಅಂಧಾ ದರ್ಬಾರ್’ನ ಪ್ರತಿರೂಪವೇ ಸರಿ. ಈ ಪ್ರಸ್ತಾವನೆಗೆ ಹಣಕಾಸು ಇಲಾಖೆ ಸಮ್ಮತಿಸಿಲ್ಲ ಎಂಬುದು ಬೇರೆ ಮಾತು; ಆದರೆ ಸಚಿವಾಲಯವು ವಿವೇಚನಾರಹಿತವಾಗಿ ಇಂಥ ಪ್ರಸ್ತಾವನೆ ಸಲ್ಲಿಸಿದ್ದೇಕೆ? ಉತ್ತರದಾಯಿತ್ವವೆಂಬುದು ಅಲ್ಲಿ ಮಾಯವಾಗಿದೆಯೇ? ಎಂಬುದು ಸಹಜವಾಗಿ ಉದ್ಭವಿಸುವ ಪ್ರಶ್ನೆ.

ಈ ಅಭಿಪ್ರಾಯಕ್ಕೆ ಕಾರಣವೂ ಇಲ್ಲದಿಲ್ಲ. ರಾಜ್ಯವನ್ನು ನಿರಂತರವಾಗಿ ಅಪ್ಪಳಿಸಿದ ಕ್ಷಾಮ ಮತ್ತು ಇತ್ತೀಚಿನ ಅತಿವೃಷ್ಟಿ ಪರ್ವದ ನಿರ್ವಹಣೆ ಸೇರಿದಂತೆ ಆಳುಗ ವ್ಯವಸ್ಥೆಯ ಆದ್ಯಗಮನ ಹರಿಸಬೇಕಾದಂಥ ವಿಷಯಗಳು ಬಹಳಷ್ಟಿವೆ. ಆದರೆ ಅವನ್ನೆಲ್ಲ ನಿರ್ಲಕ್ಷಿಸಿ ಸಂಭ್ರಮಾಚರಣೆಯ ನೆಪದಲ್ಲಿ ಬಡಬೋರೇಗೌಡನ ದುಡ್ಡನ್ನು ಪೋಲುಮಾಡುವುದನ್ನು ಜನಸ್ನೇಹಿ ರಾಜಕೀಯ ಎನ್ನಲಾದೀತೇ? ಇಂಥ ನಿರ್ಲಕ್ಷ್ಯಕ್ಕೆ ಪುರಾವೆ ಅರಸಿಕೊಂಡು ತುಂಬ ದೂರಕ್ಕೇನೂ ಹೋಗುವುದು ಬೇಡ; ಅದು ಬೆಳಗಾವಿಯ ಸುವರ್ಣಸೌಧದ ಬಳಿಯೇ ಕಾಲುಮುರಿದುಕೊಂಡು ಬಿದ್ದಿದೆ! ಕಸ ಬಳಿಯುವುದೂ ಸೇರಿದಂತೆ ಸುವರ್ಣಸೌಧದ ನಿರ್ವಹಣೆಗೆಂದು 5 ತಿಂಗಳ ಹಿಂದೆಯೇ ಹಣಕಾಸು ಇಲಾಖೆಯಿಂದ 7 ಕೋಟಿ ರೂ. ಬಿಡುಗಡೆಯಾಗಿದ್ದರೂ ಅದಿನ್ನೂ ಲೋಕೋಪಯೋಗಿ ಇಲಾಖೆಗೆ ಸಂದಿಲ್ಲ ಎಂಬುದು ಆಳುಗರಲ್ಲಿ ಮಡುಗಟ್ಟಿರುವ ನಿರ್ಲಕ್ಷ್ಯಕ್ಕೆ, ಮಲತಾಯಿ ಧೋರಣೆಗೆ ಸಾಕ್ಷಿ. ಸಚಿವಾಲಯ ಸಲ್ಲಿಸಿರುವ ಪ್ರಸ್ತಾವನೆಯಲ್ಲಿನ ‘ಊಟ-ತಿಂಡಿ-ಕಾಫಿ’ಯ ಬಾಬತ್ತುಗಳೆಡೆಗೆ ಒಮ್ಮೆ ಕಣ್ಣುಹಾಯಿಸಿದವರು ಹೌಹಾರುವುದು ನಿಶ್ಚಿತ. ಎರಡು ದಿನಾವಧಿಯ ವಜ್ರಮಹೋತ್ಸವದಲ್ಲಿ 4 ಸಾವಿರ ಜನರಿಗೆ ಕಾಫಿ/ಚಹಾ ನೀಡಲು 35 ಲಕ್ಷ ರೂ. ಹಾಗೂ 10 ಸಾವಿರ ಜನರ ಊಟದ ವ್ಯವಸ್ಥೆಗೆಂದು 3.75 ಕೋಟಿ ರೂ. ಅಗತ್ಯವಿದೆಯೆಂಬ ಸಮರ್ಥನೆ, ಪಂಚತಾರಾ ಹೋಟೆಲ್​ನ ದರಪಟ್ಟಿಯನ್ನೂ ನೀವಾಳಿಸಿ ಎಸೆಯುವಂತಿದೆ ಎಂದರೆ ಅತಿಶಯೋಕ್ತಿಯಲ್ಲ.

ವಜ್ರಮಹೋತ್ಸವದ ಸವಿನೆನಪಿಗೆಂದು ಜನಪ್ರತಿನಿಧಿಗಳಿಗೆ ಚಿನ್ನದ ನಾಣ್ಯ, ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡುವ ಯತ್ನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆಯೊಡ್ಡಿದ್ದಾರೆ ಎಂದೇನೋ ಮೂಲಗಳು ತಿಳಿಸಿವೆ. ಆದರೆ ಹಮ್ಮಿಕೊಂಡಿರುವ ಮಿಕ್ಕ ಬಾಬತ್ತುಗಳ ಖರ್ಚುವೆಚ್ಚಗಳಿಗೆ ಉತ್ತರದಾಯಿಗಳಾರು ಎಂಬುದಿಲ್ಲಿ ಪ್ರಶ್ನೆ. ವಜ್ರಮಹೋತ್ಸವ ಸಂಭ್ರಮಾಚರಣೆಯನ್ನು ಸಾಂಕೇತಿಕವಾಗಿಯೂ ಆಚರಿಸಲು ಸಾಧ್ಯವಿದೆ. ಆದರೆ ಆಳುಗ ವ್ಯವಸ್ಥೆಯನ್ನು ಆವರಿಸಿರುವ ವಿಭಿನ್ನ ಸ್ತರ-ಸ್ವರೂಪದ ಹಿತಾಸಕ್ತಿಗಳನ್ನು ತಣಿಸುವ ನಿಟ್ಟಿನಲ್ಲಿ ಇಂಥ ‘ಬೃಹದಾಯಾಮದ ಪ್ರಸ್ತಾವನೆಗಳು’ ಹುಟ್ಟಿಕೊಳ್ಳುತ್ತವೆ ಎನ್ನಲು ಬ್ರಹ್ಮಜ್ಞಾನ ಬೇಕಿಲ್ಲ. ಸರ್ಕಾರಿ ಬೊಕ್ಕಸದಲ್ಲಿರುವುದು ಜನರ ಬೆವರಿನ ಹಣವೇ ಹೊರತು, ಅತಿರೇಕದ ಮೋಜು-ಮೇಜವಾನಿಗೆ ಎಗ್ಗಿಲ್ಲದೆ ಬಳಸಬಹುದಾದ ಅಕ್ಷಯ ಭಂಡಾರವಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂಥದೊಂದು ವಿವೇಚನೆಯ ಮತ್ತು ಉತ್ತರದಾಯಿತ್ವದ ಪಾಠವನ್ನು ಪರರಿಂದ ಹೇಳಿಸಿಕೊಳ್ಳಬೇಕಾಗಿ ಬಂದಿರುವುದು ಪ್ರಜಾಪ್ರಭುತ್ವದ ದುರದೃಷ್ಟ ಎನ್ನದೆ ವಿಧಿಯಿಲ್ಲ. ಆಳುಗರು ಇಂಥ ಅತಿರೇಕದ ನಡೆಗಳಿಗೆ ಸ್ವಯಂ ನಿಯಂತ್ರಣ ಹೇರಿಕೊಳ್ಳದಿದ್ದಲ್ಲಿ ಸಾರ್ವಜನಿಕರು ತಮ್ಮಲ್ಲಿಟ್ಟಿರುವ ವಿಶ್ವಾಸಕ್ಕೆ ಸಂಚಕಾರ ತಂದುಕೊಳ್ಳುವುದಂತೂ ದಿಟ.

Leave a Reply

Your email address will not be published. Required fields are marked *

Back To Top