Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ದಿಲ್​ವಾಲೆಯ ದುಲ್ಹನ್ ಚಿತ್ರ ಪಯಣಕ್ಕೆ 25 ವರ್ಷ

Wednesday, 02.08.2017, 3:05 AM       No Comments

ಸಿನಿಮಾ ಹಿನ್ನೆಲೆ ಇದ್ದರೂ ಕಾಜೋಲ್ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಬೆಳೆದವರು. ಕೇವಲ ನಟನೆಯಿಂದಲೇ ಬೇಡಿಕೆ ಬೆಳೆಸಿಕೊಂಡವರು. ಮೊನ್ನೆ ಜುಲೈ 31ನೇ ತಾರೀಖಿಗೆ ಕಾಜೋಲ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳೇ ಕಳೆದುಹೋದವು. ಯಾವುದೇ ನಟಿಯ ವೃತ್ತಿಜೀವನದಲ್ಲಿ ಇದೊಂದು ದೊಡ್ಡ ಮೈಲಿಗಲ್ಲೇ ಸರಿ.

 ‘ಹೋಗು ಸಿಮ್ರನ್ ಹೋಗು, ನಿನ್ನಿಷ್ಟದಂತೆ ಬದುಕು…’

ಮುಂಬೈನ ಚಿತ್ರಮಂದಿರವೊಂದರಲ್ಲಿ ಸತತ 20 ವರ್ಷ ಅಥವಾ 1009 ವಾರ ಓಡಿದ ಬಾಲಿವುಡ್​ನ ಸಾರ್ವಕಾಲಿಕ ಜನಪ್ರಿಯ ಚಿತ್ರ ‘ದಿಲ್​ವಾಲೆ ದುಲ್ಹನಿಯ ಲೇ ಜಾಯೆಂಗೆ’ ಚಿತ್ರದ ಲೋಕಪ್ರಿಯ ಸಂಭಾಷಣೆ ಇದು. ತುಂಬಾ ಕಟ್ಟುನಿಟ್ಟಾಗಿ, ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆಸಿದ ಮಗಳನ್ನು ಕೊನೆಯಲ್ಲಿ ಜೀವಕ್ಕೆ ಜೀವ ಕೊಡುವ ಹುಡುಗನ ಜೊತೆ ನಿನ್ನಿಷ್ಟದಂತೆ ಬದುಕಿಕೊ ಹೋಗು ಎಂದು ತಂದೆಯೇ (ಅಮರೀಶ ಪುರಿ) ಕಳುಹಿಸುವ ದೃಶ್ಯ. ವಿಶೇಷವೆಂದರೆ, ಈ ಚಿತ್ರದ ನಾಯಕಿ ಕಾಜೋಲ್ ಸಿನಿಮಾದಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ಆ ಮಾತಿಗೆ ಅನ್ವರ್ಥವಾಗಿ ಬದುಕುತ್ತಿರುವವರು.

ಬಾಲಿವುಡ್​ನ ಎರಡು ಅತ್ಯಂತ ಯಶಸ್ವಿ ಚಿತ್ರಗಳು ಫೂಲ್ ಔರ್ ಕಾಂಟೆ ಮತ್ತು ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ.. ಸಾಹಸ ಕಲಾವಿದ ವೀರೂ ದೇವಗನ್ ಪುತ್ರ ಅಜಯ್ ಬಾಲಿವುಡ್ ಪ್ರವೇಶಿಸಿದ್ದು 1991ರಲ್ಲಿ ಫೂಲ್ ಔರ್ ಕಾಂಟೆ ಚಿತ್ರದ ಮೂಲಕ. ಅದೇ ವರ್ಷ ಬೇಖುದಿ ಮೂಲಕ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಲಿಟ್ಟಿದ್ದ ಕಾಜೋಲ್, ತಮ್ಮ 2ನೇ ಚಿತ್ರ ಬಾಝಿಗರ್ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು. ಅವರ ವೃತ್ತಿಜೀವನಕ್ಕೊಂದು ಸ್ಪಷ್ಟ ದಿಕ್ಕು ತೋರಿದ್ದು ದಿಲ್​ವಾಲೆ ದುಲ್ಹನಿಯ ಲೇ ಜಾಯೆಂಗೆ. ಒಂದು ಸ್ವಾರಸ್ಯವೆಂದರೆ, ಕಾಜೋಲ್ ಮತ್ತು ಅಜಯ್ ಇಬ್ಬರೂ ಚಿತ್ರರಂಗದಲ್ಲಿ ತದ್ವಿರುದ್ಧ ಶೈಲಿಯಲ್ಲಿ ತಮ್ಮ ವೃತ್ತಿಜೀವನ ಕಟ್ಟಿಕೊಂಡವರು. 1994ರಲ್ಲಿ ಗೂಂಡಾರಾಜ್ ಚಿತ್ರದ ಸಂದರ್ಭದಲ್ಲಿ ವಿರುದ್ಧ ಧ್ರುವಗಳ ಈ ತಾರೆಗಳು ಪರಸ್ಪರ ಆಕರ್ಷಣೆ ಬೆಳೆಸಿಕೊಂಡರು. 1999ರಲ್ಲಿ ಮದುವೆಯಾದರು.

ಇವರಿಬ್ಬರ ವಿವಾಹವೂ ಬಾಲಿವುಡ್ ಪಂಡಿತರು, ಮಾಧ್ಯಮಗಳ ಪಾಲಿಗೆ ಅಚ್ಚರಿಯೇ ಆಗಿತ್ತು. ಜೋಡಿ ಸರಿಯಿಲ್ಲ ಎಂದರು. ಅವನ ಸ್ವಭಾವವೋ, ಇವಳ ಹುಡುಗಾಟವೋ… ಹೊಂದಾಣಿಕೆ ಸಾಧ್ಯವೇ ಇಲ್ಲ ಬಿಡಿ ಎಂದರು. ಕೆರಿಯರ್ ಉತ್ತುಂಗದಲ್ಲಿದ್ದಾಗ ಇವಳಿಗೆ ಮದುವೆ ಯಾಕೆ ಬೇಕಿತ್ತೆಂದರು. ಆರು ತಿಂಗಳು ಒಟ್ಟಿಗಿರುವುದಿಲ್ಲ, ಡಿವೋರ್ಸ್ ಪಕ್ಕಾ ಎಂದರು. ಅವನ ಅಪ್ಪ-ಅಮ್ಮನ ಜೊತೆ ಇವಳು ಏಗುವುದು ಸಾಧ್ಯವೇ ಇಲ್ಲ… ನೋಡುತ್ತಿರಿ ಎಂದರು. ಆದರೆ, ಯಾವುದಕ್ಕೂ ಜಪ್ಪಯ್ಯ ಎನ್ನದ ಕಾಜೋಲ್ -ಅಜಯ್ ದೇವಗನ್ ದಾಂಪತ್ಯಕ್ಕೀಗ 18 ವರ್ಷ.

ಪ್ರತಿಯೊಬ್ಬ ವ್ಯಕ್ತಿಗೆ ಬದುಕು ಎರಡು ಆಯ್ಕೆಗಳನ್ನು ನೀಡಿರುತ್ತದೆ. ಮೊದಲನೆಯದು ಬದುಕು ಸಾಗಿದಂತೆ ನಾವು ಅನುಸರಿಸುವುದು. ಅಲ್ಲಿ ನಮ್ಮ ಪ್ರಯತ್ನ, ಹೋರಾಟ ಕಡಿಮೆ. ಆದದ್ದಾಗಲಿ ಎಂಬ ಶರಣಾಗತ ಭಾವದಿಂದ ಬದುಕು ಬಂದಂತೆ ಸ್ವೀಕರಿಸುವುದು. ಎರಡನೆಯ ಆಯ್ಕೆಯೆಂದರೆ, ನಾವು ಬಯಸಿದಂತೆ ನಮ್ಮ ಬದುಕು ರೂಪಿಸಿಕೊಳ್ಳುವುದು. ಇಲ್ಲಿ ಯಾರ ಅವಲಂಬನೆ ಇರುವುದಿಲ್ಲ. ದಿಟ್ಟ ಗುರಿ, ಸ್ಪಷ್ಟ ಹಾದಿಯಲ್ಲಿ ನಮ್ಮ ಇಷ್ಟದಂತೆ ಬದುಕುವ ಶೈಲಿ ಅದು. ಕಾಜೋಲ್ ಇಂಥ ಸ್ವತಂತ್ರ ಮನೋಭಾವದ ಹುಡುಗಿ.

ಕಾಜೋಲ್ ಹುಟ್ಟಿದ್ದು ಬೆಳೆದಿದ್ದು ಅಪ್ಪಟ ಫಿಲ್ಮಿ ಕುಟುಂಬದಲ್ಲಿ. ಬಂಗಾಳಿ, ಮರಾಠಿ ಮಿಶ್ರ ಸಂಸ್ಕೃತಿಯ ಜೊತೆಗೆ ಅಪ್ಪ, ಅಮ್ಮ, ಎರಡೂ ಕಡೆಯ ಅಜ್ಜ, ಅಜ್ಜಿ, ಮುತ್ತಜ್ಜ ಎಲ್ಲರೂ ಚಿತ್ರರಂಗದೊಂದಿಗೆ ಒಂದಲ್ಲ ಒಂದು ರೀತಿ ನಂಟು ಹೊಂದಿದ್ದವರೇ. ಕಾಜೋಲ್ ಅಮ್ಮ ತನುಜಾ ಖ್ಯಾತ ನಟಿ. ಹಾಗೆ ನೋಡಿದರೆ, ಚೊಚ್ಚಲ ಬೇಖುದಿ ಚಿತ್ರದಲ್ಲೂ ಕಾಜೋಲ್ ಅಮ್ಮನ ಪಾತ್ರದಲ್ಲಿ ತನುಜಾ ನಟಿಸಿದ್ದರು. ಇದೊಂದು ವಿಶೇಷ. ಅಪ್ಪ ಶೋಮು ಮುಖರ್ಜಿ ನಿರ್ವಪಕ, ನಿರ್ದೇಶಕರಾಗಿದ್ದವರು. ತಂಗಿ ತನಿಷಾ ನಟಿ. ಖ್ಯಾತ ಅಭಿನೇತ್ರಿ ನೂತನ್ ಅಮ್ಮನ ಕಡೆಯಿಂದ ಹತ್ತಿರದ ಸಂಬಂಧಿ. ತನುಜಾ ತಾಯಿ ಶೋಭನಾ ಸಮರ್ಥ್, ಮುತ್ತಜ್ಜಿ ರತನ್ ಬಾಯಿ ಇವರೆಲ್ಲರೂ ಹಿಂದಿ ಚಿತ್ರರಂಗದ ನಂಟು ಹೊಂದಿದ್ದವರೇ. ಚಿಕ್ಕಪ್ಪಂದಿರಾದ ಜಾಯ್ ಮುಖರ್ಜಿ, ದೇಬ್ ಮುಖರ್ಜಿ ಸಹ ನಿರ್ವಪಕರು. ಎರಡೂ ಕಡೆಯ ಅಜ್ಜಂದಿರು ಶಶಿಧರ್ ಮುಖರ್ಜಿ ಹಾಗೂ ಕುಮಾರ್​ಸೇನ್ ಸಮರ್ಥ್ ನಿರ್ವಪಕರು. ಇನ್ನು ನಟಿಯರಾದ ರಾಣಿ ಮುಖರ್ಜಿ, ಶರ್ಬಾನಿ ಮುಖರ್ಜಿ ಮತ್ತು ನಟ ಮೊಹನೀಶ್ ಬೆಹ್ಲ್ ಸೋದರ ಸಂಬಂಧಿಗಳು. ಮತ್ತೋರ್ವ ನಿರ್ದೇಶಕ ಅಯಾನ್ ಮುಖರ್ಜಿ ಸಹ ದಾಯಾದಿ. ಇಷ್ಟೆಲ್ಲ ಸಿನಿಮಾ ಹಿನ್ನೆಲೆ ಇದ್ದರೂ ಕಾಜೋಲ್ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಬೆಳೆದವರು. ಕೇವಲ ನಟನೆಯಿಂದಲೇ ಬೇಡಿಕೆ ಬೆಳೆಸಿಕೊಂಡವರು.

ಮೊನ್ನೆ ಜುಲೈ 31ನೇ ತಾರೀಖಿಗೆ ಕಾಜೋಲ್ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳೇ ಕಳೆದುಹೋದವು. ಯಾವುದೇ ನಟಿಯ ವೃತ್ತಿಜೀವನದಲ್ಲಿ ಇದೊಂದು ದೊಡ್ಡ ಮೈಲಿಗಲ್ಲೇ ಸರಿ. ದೊಡ್ಡ ಹೀರೋಗಳ ಚಿತ್ರದಲ್ಲಿ ಮರಸುತ್ತುವ ಪಾತ್ರಗಳಿಗೇ ತೃಪ್ತಿ ಪಡುವ, ನಟನೆಗಿಂತ ಗ್ಲ್ಯಾಮರ್, ನಕರಾಗಳಿಂದಲೇ ಸುದ್ದಿಯಲ್ಲಿರುವ ಹೀರೋಯಿನ್​ಗಳ ನಡುವೆ ಕಾಜೋಲ್ ತಮ್ಮದೇ ಆದ ಛಾಪು ಮೂಡಿಸಿದ್ದು, ಬೆಳೆಸಿಕೊಂಡಿದ್ದು ಅದ್ಭುತ. ಈ ಇಪ್ಪತೆôದು ವರ್ಷಗಳ ವೃತ್ತಿಜೀವನದಲ್ಲಿ ಕಾಜೋಲ್ ನಟಿಸಿದ್ದು ಕೇವಲ 30 ಚಿತ್ರಗಳಲ್ಲಿ ಮಾತ್ರ. ಅತಿಥಿ ಪಾತ್ರದಲ್ಲಿ ಬಂದು ಹೋಗಿದ್ದನ್ನು ಲೆಕ್ಕ ಹಾಕಿದರೆ 37-38 ಆಗಬಹುದು. ಆದರೆ, ಅವರ ಒಂದೊಂದು ಚಿತ್ರವೂ ಒಂದೊಂದು ರೀತಿಯಿಂದ ದಾಖಲೆ. ಬಾಲಿವುಡ್​ನಲ್ಲಿ ಕಳೆದ ಎರಡು ದಶಕಗಳಿಂದ ಮುಂಚೂಣಿಯಲ್ಲಿರುವ ಬಹುತೇಕ ಎಲ್ಲ ಸ್ಟಾರ್ ನಟರ ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಸರಿಸಮನಾಗಿ ನಟಿಸಿ ಗೆದ್ದ ನಟಿ ಕಾಜೋಲ್.

ಬಾಝಿಗರ್, ದಿಲ್​ವಾಲೆ ದುಲ್ಹನಿಯ ಲೇಜಾಯೆಂಗೆ, ಮೈ ನೇಮ್ ಈಸ್ ಖಾನ್, ಕುಚ್ ಕುಚ್ ಹೋತಾಹೆ, ದಿಲ್​ವಾಲೆ, ಕಭಿ ಖುಷಿ ಕಭಿ ಘಮ್ ಫನಾ, ಪ್ಯಾರ್ ಕಿಯಾ ತೊ ಡರ್ ನಾ ಕ್ಯಾ, ಕರಣ್ ಅರ್ಜುನ್, ದಿಲ್ ಕ್ಯಾ ಕರೆ, ಹಮ್ ಆಪ್ ಕೆ ದಿಲ್ ಮೆ ರೆಹತೇ ಹೆ, ಪ್ಯಾರ್ ತೋ ಹೋ ನಾಹಿ ತಾ, ಇಷ್ಕ್, ಗುಪ್ತ್, ತಾಕತ್, ಹಲ್ಚಲ್ ಹೀಗೆ ಬಗೆಬಗೆಯ ಚಿತ್ರಗಳಲ್ಲಿ ನಾನಾ ರೀತಿಯ ಪಾತ್ರ ನಿರ್ವಹಿಸಿದ್ದು ಅವರ ವೈವಿಧ್ಯ ಪ್ರತಿಭೆಗೆ ಸಾಕ್ಷಿ.

ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ಕರಿಷ್ಮಾ ಕಪೂರ್, ಕರೀನಾ ಕಪೂರ್, ರವೀನಾ ಟಂಡನ್, ಶಿಲ್ಪಾ ಶೆಟ್ಟಿಯಂಥ 1990 ಹಾಗೂ 2000ದ ದಶಕದ ಪ್ರಮುಖ ನಟಿಯರ ಸಾಲಿನಲ್ಲಿ ಕಾಜೋಲ್ ತಮಗೊಂದು ಸ್ಥಾನ ಕಲ್ಪಿಸಿಕೊಂಡ ಬಗೆಯೇ ವಿಭಿನ್ನ. 1991ರಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಅರ್ಧಕ್ಕೆ ಬಿಟ್ಟು ಬೇಖುದಿ ಚಿತ್ರೀಕರಣಕ್ಕೆ ಹಾಜರಾಗಿದ್ದ ಅವರು ಮತ್ತೆಂದೂ ಶಾಲೆಗೆ ಮರಳಲಿಲ್ಲ, ವಿದ್ಯಾಭ್ಯಾಸವನ್ನೂ ಪೂರ್ಣಗೊಳಿಸಲಿಲ್ಲ. ಆದರೆ, ಅವರಿಗೆ ಓದುವ ಗೀಳು ವಿಪರೀತ. ಶೂಟಿಂಗ್​ನ ನಡುವೆ ಸಮಯ ಸಿಕ್ಕಾಗಲೆಲ್ಲಾ ಪುಸ್ತಕದೊಳಗೆ ಮುಖ ಹುದುಗಿಸಿ ಕೂರುವುದು ಅವರ ಅಭ್ಯಾಸ. ಗ್ಲ್ಯಾಮರ್, ಮೇಕಪ್ ಎಂದು ಟೈಂವೇಸ್ಟ್ ಮಾಡಿದ್ದು ಅವರ ಜೀವನದಲ್ಲೇ ಇಲ್ಲ. ಶೂಟಿಂಗ್ ಸೆಟ್​ಗಳಲ್ಲಿ ಅವರಿಗೆ ಕಾಸ್ಟ್ಯೂಂ ತೊಟ್ಟು ಸಿದ್ಧವಾಗುವುದಕ್ಕೆ ಕೇವಲ 15 ನಿಮಿಷ ಸಾಕಿತ್ತು. ಕನ್ನಡಿ ಮುಂದೆ ಕಾಜೋಲ್ ನಿಂತಿದ್ದನ್ನಂತೂ ನೋಡಿದವರೇ ಇಲ್ಲ. ಆ ನಿಟ್ಟಿನಲ್ಲಿ ಆಕೆ ಸಹಜ ಸುಂದರಿ. ಅಷ್ಟೇ ಅದ್ಭುತ ನಟಿ ಕೂಡ. ಆ ವಿಚಾರದಲ್ಲಿ ನಟಿ ಶ್ರೀದೇವಿಗೆ ಹೋಲಿಕೆ. ಸ್ವಿಚ್ ಆನ್ ಮಾಡಿ ಆಫ್ ಮಾಡಿದರೆ ಲೈಟ್ ಬಂದು ಹೋಗುವಂತೆ ಲೈಟ್ ಕ್ಯಾಮೆರಾ ಆಕ್ಷನ್ ಎಂದೊಡನೆ ಥಟ್ ಎಂದು ಪಾತ್ರದಲ್ಲಿ ಮುಳುಗುವ ಕಲೆ ಅವರಿಗೆ ಸಿದ್ಧಿಸಿತ್ತು. ಸೆಟ್​ನಲ್ಲಿ ಪುಸ್ತಕ ಓದುತ್ತ ಕಾಲ ಕಳೆಯುವ ಹುಡುಗಿ ನಿರ್ದೇಶಕರು ಆಕ್ಷನ್ ಎಂದೊಡನೆ ಪಾತ್ರದಲ್ಲಿ ತಲ್ಲೀನರಾಗುವ ಪರಿ ವಿಶೇಷವೆನಿಸುತ್ತಿತ್ತು. ಕಾಜೋಲ್ ನಿರ್ದೇಶಕರ ನಟಿ ಎನಿಸಿದ್ದು ಕೂಡ ಇಂಥ ಕಾರಣಗಳಿಂದಲೇ.

ಥಳಕು-ಬಳುಕು, ಗಾಸಿಪ್​ಗಳಿಂದ ಸದಾ ದೂರ ಇರುವ ಕಾಜೋಲ್, 25 ವರ್ಷಗಳಲ್ಲಿ ಮೂವತ್ತೇ ಚಿತ್ರಗಳಲ್ಲಿ ನಟಿಸಿದ್ದಕ್ಕೂ ಅವರ ಮನೋಭಾವವೇ ಕಾರಣ. ಬೇಡಿಕೆ ಇದೆ ಎಂದು ಯಾವತ್ತೂ ಆಕೆ ಬಂದ ಚಿತ್ರಗಳನ್ನೆಲ್ಲ ಒಪ್ಪಿಕೊಳ್ಳಲಿಲ್ಲ. ಯಶ್ ಚೋಪ್ರಾ ಅವರ ವೀರ್ ಝಾರಾ, ಕರಣ್ ಜೋಹರ್​ರ ಕಭಿ ಅಲ್ವಿದ ನಾ ಕೆಹನಾ, ರಾಜ್​ಕುಮಾರ್ ಹಿರಾನಿಯ 3 ಈಡಿಯಟ್ಸ್, ಮಣಿರತ್ನಂರ ದಿಲ್ ಸೆ ಚಿತ್ರಗಳನ್ನು ಕಾಜೋಲ್ ನಿರಾಕರಿಸಿದ್ದರು. ಆದರೆ, ಬಾಬ್ಬಿ ಡಯೊಲ್ ನಾಯಕರಾಗಿದ್ದ ಗುಪ್ತ್ ಚಿತ್ರದಲ್ಲಿ ಖಳನಾಯಕಿ ಪಾತ್ರದಲ್ಲಿ ಮಿಂಚಿದ್ದು ಓರ್ವ ನಟಿಯಾಗಿ ಪ್ರಯೋಗಶೀಲ ಮನೋಭಾವಕ್ಕೆ ಉದಾಹರಣೆ. ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಖಳನಟಿ ಪಾತ್ರಕ್ಕಾಗಿ ಫಿಲ್ಮ್​ಫೇರ್ ಪ್ರಶಸ್ತಿ ಪಡೆದ ಏಕೈಕ ನಾಯಕಿ ಕಾಜೋಲ್.

ದಿಲ್​ವಾಲೆ ದುಲ್ಹನಿಯ ಲೇಜಾಯೆಂಗೆ ಚಿತ್ರದ ಮುಗ್ಧ ಪ್ರೇಮಿಕೆಯಾಗಿ, ಹಮ್ ಆಪ್ ಕೆ ದಿಲ್ ಮೆ ರೆಹತೇ ಹೆ ಚಿತ್ರದಲ್ಲಿ ಗೃಹಿಣಿಯಾಗಿ, ಗುಪ್ತ್ ಚಿತ್ರದಲ್ಲಿ ಖಳನಾಯಕಿಯಾಗಿ, ಫನಾ ಚಿತ್ರದಲ್ಲಿ ಅಂಧೆಯಾಗಿ, ದುಷ್ಮನ್ ಚಿತ್ರದ ಅವಳಿ ಪಾತ್ರದಲ್ಲಿ ಕಾಜೋಲ್ ನಟನೆ ಸದಾ ಸ್ಮರಣೀಯ.

ಸದ್ಯ ತಮಿಳು ಸೂಪರ್​ಸ್ಟಾರ್ ಧನುಷ್ ಜತೆ ಅವರು ನಟಿಸಿರುವ ವಿಐಪಿ 2 ಇದೇ ಆ.25ರಂದು ಬಿಡುಗಡೆಯಾಗಲಿದೆ. ಒಂದು ಸಂಗತಿಯೆಂದರೆ, ಚಿತ್ರ ಹೇಗೇ ಇದ್ದರೂ, ಕಾಜೋಲ್ ನಟನೆಯಂತೂ ಅದ್ಭುತವಾಗಿಯೇ ಇರುತ್ತದೆ. ಅವರು ಯಾವತ್ತೂ ಪ್ರೇಕ್ಷಕರನ್ನು ನಿರಾಸೆ ಮಾಡಿಲ್ಲ. ಇದೇ ಕಾರಣಕ್ಕೆ ಅವರು ಚಿತ್ರರಂಗಕ್ಕೆ ಬಂದು ಇಪ್ಪತೆôದು ವರ್ಷಗಳ ನಂತರವೂ ಪ್ರಸ್ತುತತೆ ಉಳಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಹೇಳಲೇ ಬೇಕು. ಏನಂತೀರಿ?

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

Leave a Reply

Your email address will not be published. Required fields are marked *

Back To Top