Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ದಿಗ್ವಿಜಯ ಸ್ಟಿಂಗ್‌ನಲ್ಲಿ ಬಯಲಾಯ್ತು ಭಾರಿ ಅಕ್ರಮ

Thursday, 12.10.2017, 3:05 AM       No Comments

ದಿಗ್ವಿಜಯ ನ್ಯೂಸ್, ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಳಿಕ ಎಲ್ಲರ ಬಾಯಲ್ಲಿಯೂ 7.65 ಎಂಎಂ ಪಿಸ್ತೂಲಿನದ್ದೇ ಚರ್ಚೆ. ಆಗ ದಿಗ್ವಿಜಯ ನ್ಯೂಸ್ ತಂಡವು ಈ ವಿವಾದಿತ ಮಾದರಿ ಪಿಸ್ತೂಲಿನ ಹಿಂದೆ ಬಿದ್ದಿತು. ಈ ಪಿಸ್ತೂಲ್ ನಿರ್ದಿಷ್ಟ ಸಂಘಟನೆಗೆ ಸೀಮಿತವಾಗಿದೆಯೇ? ಎಲ್ಲಿ, ಹೇಗೆ ಸಿಗುತ್ತದೆ? ಅದಕ್ಕೆ ಎಷ್ಟು ಖರ್ಚು ಮಾಡಬೇಕು? ಏನೆಲ್ಲ ಸಾಹಸ ಮಾಡಬೇಕು? ಎಂಬ ಜಾಡು ಹಿಡಿದು ಹೊರಟಿತು. ಆಗ ಕರ್ನಾಟಕದಲ್ಲಿನ ಗನ್ ಅಕ್ರಮ ದಂಧೆಯ ಹಿಂದೆ ಬೀಳಲಾಯಿತು.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಬಳಕೆಯಾಗ್ತಿದ್ದ ಶಸ್ತಾಸ್ತ್ರಗಳು ದಿನದಿಂದ ದಿನಕ್ಕೆ ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಸದ್ದು ಮಾಡತೊಡಗಿದವು. ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗನ್​ಗಳು ಸುಲಭವಾಗಿ ಸಿಗುವಂತಾಯಿತು. ವೈಯಕ್ತಿಕ ಕಾರಣಗಳಿಗೆ ನಡೆಯುತ್ತಿದ್ದ ಕ್ಷುಲ್ಲಕ ಜಗಳಗಳಿಗೂ ಬಂದೂಕು ಉತ್ತರ ಹೇಳತೊಡಗಿತ್ತು. ಕಂಟ್ರಿಮೇಡ್ ರಿವಾಲ್ವರ್ ಹಾಗೂ ಪಿಸ್ತೂಲ್​ಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುವಂತಾಗಿತ್ತು. ಹಾಗೆಯೇ ಇಲ್ಲಿಂದ ರಾಜ್ಯದ ಬೇರೆ ಬೇರೆ ಕಡೆಗೂ ಈ ಶಸ್ತಾಸ್ತ್ರ ಮಾರಾಟವಾಗಲು ಶುರುವಾಗಿದ್ದನ್ನು ಮೂಲಗಳಿಂದ ತಿಳಿದುಕೊಳ್ಳಲಾಯಿತು.

ಕಂಟ್ರಿಮೇಡ್ ಪಿಸ್ತೂಲ್​ಗಳ ತಯಾರಿಕೆ ಎಲ್ಲಿ ನಡೆಯುತ್ತದೆ ಎನ್ನುವ ಮಾಹಿತಿ ಸಿಗಲೇ ಇಲ್ಲ. ಆದರೆ ಅಗತ್ಯವಿದೆ ಎಂದರೆ ತಂದು ಕೊಡುವವರಿದ್ದಾರೆ ಎನ್ನುವ ವಿಚಾರ ತಿಳಿಯಿತು. ಆದರೆ, ಮಾಹಿತಿ ಜಾಲಾಡಿದಾಗ ಸಿಕ್ಕ ಮಾಹಿತಿಯೆಂದರೆ ಜೈಲಿನಿಂದಲೇ ಇಂಥದೊಂದು ದಂಧೆ ನಿರ್ವಹಿಸಲಾಗುತ್ತಿದೆ.

ಕಾರ್ಯಾಚರಣೆ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಲಾಯಿತು. ಆತನ ಹೆಸರು ಏನೆಂಬುದು ಗೊತ್ತಿರಲಿಲ್ಲ, ಆದರೆ ಕಲಬುರಗಿ ಮೂಲದವನು ಎಂಬ ಮಾಹಿತಿ ದೊರೆತಿತ್ತು. ಅಲ್ಪಸ್ವಲ್ಪ ಅಂಡರ್​ವರ್ಲ್ಡ್ ಜಾಲದ ಭಾಷೆ ಮೂಲಕ ‘ಘೋಡಾ‘ ಬೇಕು ಎಂದಾಗ ದಂಧೆಕೋರ ಚುರುಕಾಗಿದ್ದ. ಆರಂಭದಲ್ಲಿ ಫೋನ್​ನಲ್ಲೂ ಮಾತನಾಡೋಕೆ ಹಿಂದೆ ಮುಂದೆ ನೋಡ್ತಿದ್ದವನು, ಪಿಸ್ತೂಲ್ ನೀಡಲು ಒಂದು ಹಂತಕ್ಕೆ ಒಪ್ಪಿಕೊಂಡಿದ್ದ. ಆದಾಗ್ಯೂ ನೀವು ಯಾರು, ಎಲ್ಲಿಯವರು, ಯಾವ ಕಾರಣಕ್ಕೆ ಬೇಕು ಎಂದೆಲ್ಲ ಪ್ರಶ್ನೆ ಮಾಡಿದ್ದ. ಆದರೆ ದುಡ್ಡಿನ ಆಸೆ ತೋರಿಸಿದಾಗ ಅದೆಲ್ಲವನ್ನು ಬಿಟ್ಟು ಪಿಸ್ತೂಲ್ ಡೀಲ್ ಮಾಡಲು ನಿರ್ಧರಿಸಿದ್ದ.

ಹೀಗೆ ಕೆಲ ದಿನಗಳ ಸಂಭಾಷಣೆ ನಡೆಯುತ್ತಿದ್ದರೂ ಭೇಟಿ ಅಥವಾ ಪಿಸ್ತೂಲ್ ಹಸ್ತಾಂತರಕ್ಕೆ ಮುಂದೆ ಬರುತ್ತಿರಲಿಲ್ಲ. ಆದರೆ ಪ್ರಯತ್ನ ಮುಂದುವರಿಸಿದ ಹಿನ್ನೆಲೆಯಲ್ಲಿ ಮಾತುಕತೆ ನಿರಂತರವಾಗಿತ್ತು. ಇದರಿಂದ ಆ ದಂಧೆಕೋರನಿಗೆ ವಿಶ್ವಾಸವೂ ಬಂದಿತ್ತು. ಅಂತಿಮವಾಗಿ 7.65 ಎಂಎಂ ಕಂಟ್ರಿಮೇಡ್ ಪಿಸ್ತೂಲೇ ಬೇಕು ಅಂತ ಕೇಳಿದಾಗ ಅದಕ್ಕೂ ಒಪ್ಪಿಕೊಂಡಿದ್ದ. ಆದರೆ ಅದಕ್ಕೂ ಮುನ್ನ ಆತ ಡಬಲ್ ಬ್ಯಾರಲ್ ಗನ್ ಬೇಕಾದರೆ ಕೂಡಲೇ ನೀಡುವ ಇನ್ನೊಂದು ಭಯಂಕರ ಸತ್ಯ ಹೊರ ಹಾಕಿದ್ದ.

ಮೊದಲಿಗೆ ಒಂದು ಲಕ್ಷ ರೂ.ಗೆ ಡೀಲ್ ಒಪ್ಪಿಕೊಂಡಿದ್ದವನು, ಅದನ್ನು ಏಕಾಏಕಿ 2.80 ಲಕ್ಷ ರೂ.ಗೆ ಏರಿಸಿದ್ದ. ಆದರೆ ಜಾಡು ಹಿಡಿಯಲು ಹೊರಟಿರುವಾಗ ಹಣದ ಮುಖ ನೋಡದೇ ವ್ಯಕ್ತಿಯನ್ನು ಹಿಡಿಯುವತ್ತ ಗಮನ ಕೇಂದ್ರೀಕರಿಸಲಾಗಿತ್ತು. ಆದರೆ ಈ ಹಂತದಲ್ಲಿ ಷರತ್ತು ಹಾಕಿ ಪಿಸ್ತೂಲ್ ಹಸ್ತಾಂತರಿಸುವ ಮುಂಚೆ 30 ಸಾವಿರ ರೂ. ಮುಂಗಡ ನೀಡುವಂತೆ ಹೇಳಿದ್ದ. ಮುಂಗಡ ಹಣ ತೆಗೆದುಕೊಂಡು ಹೋದರೆ ಅಲ್ಲಿ ಹಣ ಪಡೆಯಲು ಒಬ್ಬ ಅಜ್ಜಿ ಕುಳಿತಿದ್ದಳು.

ಅಜ್ಜಿ ಜತೆಗಿನ ಸಂಭಾಷಣೆ

ದಿಗ್ವಿಜಯ: ನೀವೇನಾ… ?

ಅಜ್ಜಿ: ಹೌದು.. ನಾನೇ.. ಏನಪ್ಪಾ… ಯಾರಪ್ಪಾ ಕಳಿಸಿದ್ದು…

ದಿಗ್ವಿಜಯ:  ಇರಿ ಒಂದು ನಿಮಿಷ… ಅಣ್ಣಾ ಕೊಡ್ಲಾ ಫೋನ್ ಅವರಿಗೆ…

ಅಜ್ಜಿ: ಹೇ ಇದೆಲ್ಲ ಗೊತ್ತಾಗ್ಬಾರ್ದು..

ದಿಗ್ವಿಜಯ: ಹೂಂ ಅದಿಕ್ಕೆ…

ಅಜ್ಜಿ: ಹಲೋ.. ಹಲೋ…. ಏನಪ್ಪಾ…. ಹಾಂ ಸರಿ… ಎಷ್ಟು.. ಒಕೆ… ಆಯ್ತಪ್ಪಾ… ಸರಿ ಸರಿ ಸರಿ…

ದಿಗ್ವಿಜಯ: ಹಲೋ.. ಹಾಂ.. ಒಂದು ಎರಡು ನಿಮಿಷ ಕೊಡ್ತೀನಿ… ಕೊಟ್ಟ್​ಬಿಟ್ಟು ಕಾಲ್ ಮಾಡ್ತೀನಿ ನಿಮ್ಗೆ..

ಅಜ್ಜಿ: ಚಕ್ಕಂತ ಕೊಟ್ಟ್​ಬಿಡು.. ನಾನು ಎಣಿಸಲ್ಲ.. ನೀನು ಎಣಿಸಿ ಇಟ್ಟಿದ್ಯಲ್ಲಾ.. ಹಂಗೇ ಕರೆಕ್ಟ್ ಆಗಿ ಇಟ್ಟಿರ್ತೀನಿ..

ದಿಗ್ವಿಜಯ: 30 ಸಾವಿರ ರೂ. ಐತೆ ನೋಡಿ…

ಅಜ್ಜಿ: ಸರಿ… ಒಂದು, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು, ಒಂಭತ್ತು, ಹತ್ತು, ಹನ್ನೊಂದು, ಹನ್ನೆರಡು, ಹದಿಮೂರು, ಹದಿನಾಲ್ಕು, ಹದಿನೈದು… ಕರೆಕ್ಟ್ ಇದೆ…

ಇದಾದ ಬಳಿಕ ಒಂದೆರಡು ದಿನ ನಂತರ ಬಂದ ಕರೆಯಲ್ಲಿ ಐಟಂ ರೆಡಿಯಾಗಿದೆ, ಉಳಿದ ಹಣ ನೀಡಿ ಪಿಸ್ತೂಲ್ ಪಡೆಯಿರಿ ಎಂದಿದ್ದ ದಂಧೆೆಕೋರ. ಆದರೆ ಪಿಸ್ತೂಲ್ ಮಾತ್ರ ನೀಡುತ್ತೇವೆ, ಬುಲೆಟ್ ಬೇರೆಡೆ ಸಿಗಲಿದೆ ಎಂದು ಹೇಳಿದ್ದ. ಆತನ ಎಲ್ಲ ನಿರ್ದೇಶನ ಒಪ್ಪಿಕೊಂಡು ಅಂತಿಮ ಡೀಲ್​ಗೆ ದಿಗ್ವಿಜಯ ತಂಡ ತಯಾರಾಗಿತ್ತು.

ಪೊಲೀಸ್ ಆಯುಕ್ತರ ಸಂಪರ್ಕ: ಎಲ್ಲ ಮಾಹಿತಿ ಇರಿಸಿಕೊಂಡು ನೇರವಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ದಿಗ್ವಿಜಯ ನ್ಯೂಸ್ ತಂಡ ಹೋಯಿತು. ಕಾರ್ಯಾಚರಣೆಯ ಸಂಪೂರ್ಣ ವಿವರ ನೀಡಲಾಯಿತು. ಮುಂದಿನ ಹಂತವು ಜೀವಕ್ಕೂ ಅಪಾಯಕಾರಿ ಆಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ಸೂಕ್ತವಾಗಿ ಸ್ಪಂದಿಸಿದರು. ಅಂತಿಮ ಕಾರ್ಯಾಚರಣೆಗೆ ಆಯುಕ್ತರು ಹಸಿರು ನಿಶಾನೆ ತೋರಿದರು. ಅಂತಿಮವಾಗಿ ಮಹಾಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಬಳಿ ಬರೋಕೆ ಸೂಚನೆ ದೊರೆತಿತ್ತು. ಅಲ್ಲಿಗೆ ಹೋದರೆ ಪಿಸ್ತೂಲ್ ನೀಡುವವರು ಬಂದೇ ಇರಲಿಲ್ಲ. ಆದರೆ, ದಂಧೆಕೋರನ ವ್ಯಕ್ತಿಗಳು ಬಂದು ಎಲ್ಲ ವಿವರ ರವಾನಿಸಿದ್ದರು. ಆ ಬಳಿಕ ಮತ್ತೆ ಅ.8ರಂದು ಅಂತಿಮ ಡೀಲ್​ಗೆ ಒಪ್ಪಿಗೆ ಸಿಕ್ಕಿತು. ಈ ಮಾಹಿತಿಯನ್ನು ಮಹಾಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ತೆರಳಿ

ಇನ್ಸ್​ಪೆಕ್ಟರ್ ಬಿ.ಎನ್.ಲೋಹಿತ್ ಅವರ ತಂಡಕ್ಕೆ ನೀಡಲಾಯಿತು. ಜಂಟಿ ಕಾರ್ಯಾಚರಣೆಗೆ ಅವರು ಒಪ್ಪಿಗೆ ಸೂಚಿಸಿದರು. ಸಿನಿಮೀಯ ರೀತಿಯಲ್ಲಿ ಮಾಸ್ಟರ್ ಪ್ಲ್ಯಾನ್ ತಯಾರಾಗಿತ್ತು.

ಪಿಸ್ತೂಲ್ ನೀಡಲು ಬಂದು ಬಲೆಗೆ: ಅ.8ರಂದು ಎಲ್ಲಿ ಪಿಸ್ತೂಲ್ ಕೊಡುತ್ತಾರೆ ಎನ್ನುವುದು ಮಾತ್ರ ಗೊತ್ತಾಗಿರಲಿಲ್ಲ. ನಿರ್ಜನ ಪ್ರದೇಶವಾದರೆ ಕಾರ್ಯಾಚರಣೆ ತಂಡದ ಮೇಲೆ ದಾಳಿಯಾಗುವ ಆತಂಕವೂ ಇತ್ತು. ಯಾವುದೇ ಸಂದೇಹ ಬಂದರೆ ಜೀವವೇ ಹೋಗುವ ಸಾಧ್ಯತೆಯಿತ್ತು. ಹಾಗಾಗಿ ಪೊಲೀಸರ ಜತೆಗೆ ಹಲವಾರು ಸುತ್ತಿನ ಚರ್ಚೆ ಬಳಿಕ ಕ್ಲೈಮಾಕ್ಸ್​ಗೆ ತಯಾರಾಗಲಾಗಿತ್ತು. ಆ ದಿನ ಬೆಳಗ್ಗೆಯಿಂದ ದಂಧೆಕೋರನ ಕರೆಗಾಗಿ ಕಾಯಲಾಗಿತ್ತು. ಮಧ್ಯಾಹ್ನದ ವೇಳೆಗೆ ಕರೆ ಮಾಡಿ, 3 ಗಂಟೆಗೆ ಸಿಗುವುದಾಗಿ ಜಾಗ ಹೇಳಿದ. ಡೀಲರ್ ಕೊನೆಗೂ ರೆಡ್ ಹ್ಯಾಂಡ್ ಆಗಿ ಸಿಗುತ್ತಾನೆ ಎನ್ನುವ ಖುಷಿಯಲ್ಲಿ ಕಾರ್ಯಾಚರಣೆ ತಂಡವಿತ್ತು. ಆದರೆ ಅಲ್ಲಿ ಹೋಗಿ ನೋಡಿದರೆ ಪರಿಸ್ಥಿತಿ ಬೇರೆಯಿತ್ತು.

ಜಾಗ ಅಂತಿಮವಾಗುತ್ತಿದ್ದಂತೆ ಪೊಲೀಸರು ಕೂಡ ಎಲ್ಲ ತುರ್ತು ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿದ್ದರು. ಇನ್ಸ್​ಪೆಕ್ಟರ್ ಲೋಹಿತ್, ಪೊ›ಬೆಷನರಿ ಪಿಎಸ್​ಐ ವೆಂಕಟರಮಣಪ್ಪ ಸೇರಿ ಐವರು ಪೊಲೀಸರು 9 ಎಂಎಂ ಸರ್ವೀಸ್ ಪಿಸ್ತೂಲ್​ನ ಲೋಡ್ ಮಾಡಿಕೊಂಡು ಕಾಯುತ್ತಿದ್ದರು. ಸಂಜೆ 4 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದು, ಕರೆ ಮಾಡಿದರು. ಕಾರಿನಲ್ಲೇ ಕುಳಿತು ಪಿಸ್ತೂಲ್ ಹಸ್ತಾಂತರಿಸಿ ಹಣ ಪಡೆಯಲು ನಿರ್ಧರಿಸಿದರು. ಕಾರಿನೊಳಗೆ ಬಂದ ಇಬ್ಬರು ವ್ಯಕ್ತಿಗಳು ಕಂಟ್ರಿಮೇಡ್ 7.65 ಎಂಎಂ ಪಿಸ್ತೂಲ್ ಕೈಗಿಟ್ಟಿದ್ದರು. ಅವರು ಬರುತ್ತಿದ್ದಂತೆ ದಿಗ್ವಿಜಯ ತಂಡದೊಂದಿಗಿದ್ದ ಪೊಲೀಸ್ ಇತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮಫ್ತಿಯಲ್ಲಿ ಬಂದು ಕಾರಿನ ಹಿಂಬದಿಯ ಎರಡೂ ಬಾಗಿಲು ತೆರೆದು ಆರೋಪಿಗಳ ಹಣೆಗೆ ಪಿಸ್ತೂಲ್ ಇಟ್ಟರು. ಅಲ್ಲಿಗೆ ಬಂದಿದ್ದ ಸೋಮಲಿಂಗ ಅಲಿಯಾಸ್ ಸೋಮಾರಯ್ಯ ಹಾಗೂ ಸೂರ್ಯಕಾಂತ್ ಅಲಿಯಾಸ್ ಸೂರ್ಯ ಎನ್ನುವರು ಬೆವತು ಹೋಗಿದ್ದರು.

7.65 ಪಿಸ್ತೂಲ್ ಅಚ್ಚರಿ!

ಕಲಬುರ್ಗಿ ಹಾಗೂ ಗೌರಿ ಹತ್ಯೆಗೆ ಇದೇ ಮಾದರಿಯ ಪಿಸ್ತೂಲ್ ಬಳಸಲಾಗಿದೆ ಎನ್ನುವ ಮಾಹಿತಿ ಬರುತ್ತಿದ್ದಂತೆ ಯಾವುದೋ ಸಂಘಟನೆ ಅಥವಾ ಆಲೋಚನೆ ಹೊಂದಿದವರು ಹತ್ಯೆ ಮಾಡಿಸಿದ್ದಾರೆ ಎಂದು ಕೆಲವರು ಘೋಷಿಸಿದರು. ಆದರೆ ಈ ಪಿಸ್ತೂಲ್ ಯಾವುದೇ ಎಡ, ಬಲ ಸಂಘಟನೆ ಅಥವಾ ಸಾಮಾನ್ಯ ವ್ಯಕ್ತಿಗೂ ಈ ರಾಜ್ಯ ಹಾಗೂ ದೇಶದಲ್ಲಿ ದೊರೆಯುತ್ತಿದೆ. ಈ ನೆಲದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಅಷ್ಟೊಂದು ಸ್ವಚ್ಛಂದವಾಗಿ ದಂಧೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಜೈಲು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯೇ ಈ ದಂಧೆ ನಡೆಸಲು ಅವಕಾಶ ಕೊಡುವಂತಹ ವ್ಯವಸ್ಥೆ ನಮ್ಮ ರಾಜ್ಯದಲ್ಲಿದೆ. ಇದರ ದುರುಪಯೋಗ ಪಡೆದುಕೊಂಡು ಹಿಂದಿನ ಪ್ರಕರಣಗಳ ಮಾಹಿತಿ ಕಲೆ ಹಾಕಿ, ತನಿಖೆಯ ದಿಕ್ಕು ತಪ್ಪಿಸಲು ಕೆಲವು ಸಮಾಜ ಘಾತುಕ ಶಕ್ತಿಗಳು 7.65 ಪಿಸ್ತೂಲ್ ತಂತ್ರವನ್ನು ಹೆಣೆದಿರುವ ಸಾಧ್ಯತೆಯೂ ಇದೆ.

ಮಾರಾಟಗಾರರ ಸ್ಪೋಟಕ ಮಾಹಿತಿ

ಮಾರಾಟಗಾರ ರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ಆರಂಭಿಸಿದಾಗ, ತಮಗೆ ಯಾವುದೇ ಮಾಹಿತಿಯಿಲ್ಲ, ಯಾರು ಡೀಲರ್ ಎನ್ನುವುದು ಗೊತ್ತಿಲ್ಲ, ನಮಗೆ ಕೊಡಲು ಹೇಳಿದ್ದರು, ಪಿಸ್ತೂಲ್ ತಲುಪಿಸಲು ಬಂದಿದ್ದೆವು ಎಂದೆಲ್ಲ ಹೇಳುತ್ತಿದ್ದರು. ಆದರೆ ಪೊಲೀಸರು ವಿಚಾರಣೆ ತೀವ್ರಗೊಳಿಸುತ್ತಿದ್ದಂತೆ, ಲಕ್ಷ್ಮಣ ಪೂಜಾರಿ ಎಂಬ ಹೆಸರು ಬಯಲಿಗೆ ಬಂತು. ಆರೋಪಿಗಳು ನೀಡಿದ ಮಾಹಿತಿ ಬೆನ್ನು ಬಿದ್ದು ಹೊರಟಾಗ ಲಕ್ಷ್ಮಣ ಪೂಜಾರಿ ಎನ್ನುವ ಡೀಲರ್ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿಯೇ ಇದ್ದಾನೆ ಎನ್ನುವ ಬೆಚ್ಚಿಬೀಳುವ ಸತ್ಯ ಹೊರಗೆ ಬಂತು. ಕಲಬುರಗಿಯಲ್ಲಿ ಈತನ ವಿರುದ್ಧ ನಾಲ್ಕೈದು ಪ್ರಕರಣಗಳು ದಾಖಲಾಗಿವೆ. ಆಳಂದ ಪೊಲೀಸ್ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ಕಲಬುರಗಿ ಜೈಲಿನಿಂದ ತಪ್ಪಿಸಿಕೊಂಡಿರುವುದು ಸೇರಿ ಕೆಲ ಪ್ರಕರಣ ದಾಖಲಾಗಿತ್ತು. ಆದರೆ ಈ ವ್ಯಕ್ತಿ ಇವೆಲ್ಲ ಆರೋಪಗಳನ್ನು ಹೊತ್ತು ಜೈಲಿನಲ್ಲಿ ಕುಳಿತುಕೊಂಡೇ ತನ್ನ ಹಳೆಯ ದಂಧೆ ಮುಂದುವರಿಸಿದ್ದ. ಹೊರಗಡೆ ನಡೆಯುವ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದ. ಸದ್ಯ ಇಬ್ಬರು ಆರೋಪಿಗಳು, ಪಿಸ್ತೂಲ್ ಪೊಲೀಸರ ವಶದಲ್ಲಿದೆ. ಲಕ್ಷ್ಮಣ ಪೂಜಾರಿಯನ್ನು ವಶಕ್ಕೆ ಪಡೆಯಲು ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ವ್ಯಾಪ್ತಿಯಲ್ಲಿ ದೂರು ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

ಜೈಲಿನ ಅಕ್ರಮಗಳ ಬಗ್ಗೆ ಪತ್ತೆ ಹಚ್ಚಿದ್ದಕ್ಕೆ ಧನ್ಯವಾದ. ಆದರೆ ಪಿಸ್ತೂಲ್ ತಯಾರಿಕೆ ಮೂಲ ಪತ್ತೆ ಹಚ್ಚಬೇಕು. ಇದರಿಂದ ಹಲವು ಪ್ರಕರಣಗಳ ಪತ್ತೆಗೆ ಸಹಕಾರಿಯಾಗಲಿದೆ.

| ಡಾ.ದಿನೇಶ್ ರಾವ್ ವಿಧಿ ವಿಜ್ಞಾನ ತಜ್ಞ

 

Leave a Reply

Your email address will not be published. Required fields are marked *

Back To Top