Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ದನಿಯೆತ್ತದಿದ್ದರೆ ಮತ್ತಷ್ಟು ಅಪಾಯ ಕಾದಿದೆ

Tuesday, 05.09.2017, 3:01 AM       No Comments

ಪಿಎಫ್​ಐ ಸಂಘಟನೆ ನಿಷೇಧ, ಸಚಿವ ರಮಾನಾಥ ರೈ ರಾಜೀನಾಮೆ ಇತ್ಯಾದಿ ಆಗ್ರಹವನ್ನಿಟ್ಟುಕೊಂಡು ಬಿಜೆಪಿ ಯುವಮೋರ್ಚಾ ‘ಮಂಗಳೂರು ಚಲೋ’ ಹಮ್ಮಿಕೊಂಡಿದೆ. ಈ ಪ್ರತಿಭಟನೆ ಏಕೆ ಎಂಬ ಕುರಿತು ಲೇಖಕರು ಇಲ್ಲಿ ವಿವರಿಸಿದ್ದಾರೆ.

 

ಬಹುಶಃ, ಹಿಂದೆಂದೂ ಕರ್ನಾಟಕವು ಇಂತಹ ಹಿಂದೂವಿರೋಧಿ ಸರ್ಕಾರವನ್ನು ಕಂಡಿರಲಿಲ್ಲ. ಮಠಗಳು, ದೇವಸ್ಥಾನಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ, ಹಿಂದೂ ಸನ್ಯಾಸಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಮಠಮಾನ್ಯಗಳನ್ನು ವ್ಯವಸ್ಥಿತವಾಗಿ ಕುಗ್ಗಿಸುವ ಯತ್ನ, ಅಲ್ಪಾವಧಿ ರಾಜಕೀಯ ಲಾಭಕ್ಕೆ ಹಿಂದೂ ಸಮಾಜವನ್ನು ಜಾತಿಯ ಆಧಾರದಲ್ಲಿ ಒಡೆಯುವ ಪ್ರಯತ್ನ, ಮೂಢನಂಬಿಕೆ ನಿಷೇಧ ಕಾಯ್ದೆಯ ರೂಪದಲ್ಲಿ ಹಿಂದೂಗಳ ಧಾರ್ವಿುಕ ಆಚರಣೆಗಳನ್ನು ಹತ್ತಿಕ್ಕುವ ಹುನ್ನಾರ, ಸಮಾಜಘಾತುಕ ಕೃತ್ಯಗಳನ್ನು ಎಸಗುವ ಸಂಘಟನೆಗಳಿಗೆ ಪೋಷಣೆ, ಆರೋಪಿ ಮುಸ್ಲಿಮ್ ಸಂಘಟನೆಗಳ ಮೇಲಿರುವ ಕೇಸುಗಳನ್ನು ಕೈ ಬಿಡುವುದು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡುವುದು- ಇವೆಲ್ಲ ಸಿದ್ದರಾಮಯ್ಯ ಸರ್ಕಾರದ ಪ್ರಮುಖ ಗುಣಲಕ್ಷಣಗಳು ಎನ್ನಬೇಕು.

ಹಿಂದೂವಿರೋಧವನ್ನೇ ತಮ್ಮ ರಾಜಕೀಯದ ವೈಚಾರಿಕ ತಳಹದಿಯನ್ನಾಗಿಸಿಕೊಂಡಿರುವ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗಿನಿಂದಲೂ, ಅವರ ಹಿಂದೂ ದ್ವೇಷದ ಹಲವಾರು ಮಜಲುಗಳನ್ನು ನೋಡಿದ್ದೇವೆ. ಅವರ ವಿರೋಧವು ಹಿಂದುತ್ವದ ವಿಚಾರಕ್ಕೇ ಸೀಮಿತವಾಗಿದ್ದರೆ, ಯಾರ ತಕರಾರೂ ಇರುತ್ತಿರಲಿಲ್ಲ. ಆದರೆ, ವೈಚಾರಿಕವಾಗಿ ಸಮರ ಸಾರುವ ಬದಲು, ಮುಖ್ಯಮಂತ್ರಿಗಳು ಪರೋಕ್ಷವಾಗಿ ಹಿಂದೂಗಳ ಮೇಲೆಯೇ ವೈಯಕ್ತಿಕ ಯುದ್ಧ ಸಾರಿದಂತಿರುವುದು ಖೇದನೀಯ.

ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಿನಲ್ಲಿ ಆದ್ಯತೆಯ ಮೇರೆಗೆ ಮಾಡಿದ ಕೆಲಸವೆಂದರೆ, ಪಿಎಫ್​ಐ ಮತ್ತು ಎಸ್​ಡಿಪಿಐ ಎಂಬ ಮುಸ್ಲಿಂ ಸಂಘಟನೆಗಳ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಕೈಬಿಟ್ಟದ್ದು. ಆ ಸಂಘಟನೆಗಳಿಗೆ ಸೇರಿದ ಸುಮಾರು 1,600ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು. ಶಿವಮೊಗ್ಗದ ವಿಶ್ವನಾಥ ಶೆಟ್ಟಿ, ಮೂಡುಬಿದರೆಯ ಬಜರಂಗ ದಳದ ಪ್ರಶಾಂತ್ ಪೂಜಾರಿ, ಕುಶಾಲನಗರದಲ್ಲಿ ಪ್ರವೀಣ್ ಪೂಜಾರಿ ಈ ಮುಂತಾದ ಕೊಲೆ ಪ್ರಕರಣಗಳಲ್ಲಿ ಪಿಎಫ್​ಐ ಕಾರ್ಯಕರ್ತರ ಕೈವಾಡವಿರುವುದು ತನಿಖೆಯಿಂದ ಸಾಬೀತಾಗಿದೆ. ಇನ್ನಿತರೆ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನೂ ಕೊಲೆಮಾಡುವ ಉದ್ದೇಶವನ್ನು ಪಿಎಫ್​ಐ ಹೊಂದಿರುವುದಾಗಿ ಬಂಧಿತ ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟರು.

ಜವಾಬ್ದಾರಿಯುತ ಸರ್ಕಾರವಾಗಿದ್ದರೆ ಅಂದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿರುತ್ತಿತ್ತು. ಆದರೆ, ಸಮಾಜದಲ್ಲಿ ಒಡಕನ್ನು ಉಂಟುಮಾಡಿಯೇ ರಾಜಕೀಯ ಮಾಡುವ ‘ಜಾತ್ಯತೀತ‘ ಸಿದ್ದರಾಮಯ್ಯನವರು, ಈ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡುವ ಬದಲು, ಅವರ ಒತ್ತಾಯಕ್ಕೆ ಮಣಿದು ಸರ್ಕಾರದಿಂದ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸ ಹೊರಟರು. ಇದರಿಂದ ತಮಗೆ ಸರ್ಕಾರದ ಅಭಯವಿದೆ ಎಂದು ಅವರು ತಿಳಿಯುವಂತಾಯಿತು. ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳು ರಾಜ್ಯದಲ್ಲಿ ನಡೆದಿವೆ. ಮಡಿಕೇರಿಯ ಕುಟ್ಟಪ್ಪ, ಮೈಸೂರಿನ ರಾಜು, ಕಿತ್ತಗಾನಹಳ್ಳಿಯ ವಾಸು, ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಮತ್ತು ಇತ್ತೀಚೆಗೆ ಮಂಗಳೂರಿನಲ್ಲಿ ಹತ್ಯೆಯಾದ ಶರತ್ ಮಡಿವಾಳ- ಹೀಗೆ, ಕಳೆದ ನಾಲ್ಕು ವರ್ಷಗಳಲ್ಲಿ 12 ಕ್ಕೂ ಹೆಚ್ಚು ಹತ್ಯೆಗಳು, 25ಕ್ಕೂ ಹೆಚ್ಚು ಮಾರಣಾಂತಿಕ ಹಲ್ಲೆಗಳ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ.

ಈ ಸರ್ಕಾರದಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ದಿವಂಗತ ರುದ್ರೇಶರ ಕುಟುಂಬದವರು ರಾಷ್ಟ್ರೀಯ ತನಿಖಾ ದಳದಿಂದ (ಎನ್​ಐಎ) ತನಿಖೆ ಮಾಡಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸರ್ಕಾರವು ಪ್ರಕರಣವನ್ನು ಎನ್​ಐಎಗೆ ವಹಿಸಿತು. ತನಿಖೆಯ ನಂತರ, ಎನ್​ಐಎ ಆರು ಜನ ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಿ, ಚಾರ್ಜ್​ಶೀಟ್ ಸಲ್ಲಿಸಿತು. ಈ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಬೆಚ್ಚಿಬೀಳಿಸುವಂತಹ ಮೂರು ಸಂಗತಿಗಳನ್ನು ಮುಖ್ಯವಾಗಿ ಗಮನಿಸಬೇಕು. ಮೊದಲನೆಯದು, ರುದ್ರೇಶ್ ಕೊಲೆಗೆ ಕಾರಣ ವೈಯಕ್ತಿಕವಾದುದಲ್ಲ, ಬದಲಿಗೆ ಅವರು ಆರೆಸ್ಸೆಸ್ ಕಾರ್ಯಕರ್ತ ಎಂಬುದು. ಎರಡನೆಯದು, ಈ ಷಡ್ಯಂತ್ರದ ಮುಖ್ಯ ಉದ್ದೇಶ ಸಂಘ ಪರಿವಾರಕ್ಕೆ ಸೇರ್ಪಡೆಯಾಗದಂತೆ ಜನರಲ್ಲಿ ಭಯಬಿತ್ತುವುದು ಮತ್ತು ಭಾರತವನ್ನು ಇಸ್ಲಾಮಿ ರಾಷ್ಟ್ರವನ್ನಾಗಿಸುವುದು! ಮೂರನೆಯದು, ಈ ರೀತಿಯ ಕೃತ್ಯಗಳನ್ನು ಮಾಡಲು ಪಿಎಫ್​ಐ ಹಾಗೂ ಎಸ್​ಡಿಪಿಐ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ನಡೆಸಿ ಉತ್ತೇಜಿಸುವ ವ್ಯವಸ್ಥೆ ಹೊಂದಿರುವುದು, ತನಿಖೆಯಿಂದ ಹೊರಬಂದ ಸತ್ಯಾಂಶ! ಹೀಗಾಗಿ ಎನ್​ಐಎ ಈ ಹತ್ಯೆಯನ್ನು ‘ಭಯೋತ್ಪಾದಕ ಕೃತ್ಯ‘ ಎಂದು ಪರಿಗಣಿಸಿ, ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ ಯಡಿಯಲ್ಲಿ ಹಂತಕರಿಗೆ ಶಿಕ್ಷೆಯಾಗಬೇಕೆಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದೆ.

ರುದ್ರೇಶ್ ರೀತಿಯಲ್ಲೇ ಮಂಗಳೂರಿನ ಶರತ್ ಮಡಿವಾಳರ ಹತ್ಯೆ ನಡೆದಿರುವುದು ಮತ್ತು ಅಲ್ಲಿಯೂ ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರೇ ಸಿಕ್ಕಿಕೊಂಡಿರುವುದು, ಈ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ತಿಳಿಸುತ್ತದೆ. ಈ ಜಾಲವನ್ನು ಹತ್ತಿಕ್ಕಬೇಕಾದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಆದರೆ, ‘ಹಿಂದುತ್ವದ ಪರ ಮನಸ್ಸಿರುವ ಪೊಲೀಸ್ ಅಧಿಕಾರಿಗಳನ್ನು ಬಲಿ ಹಾಕುತ್ತೇನೆ‘ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕುವ ಸರ್ಕಾರದಿಂದ ಇದನ್ನು ನಿರೀಕ್ಷಿಸುವುದು ಮೂರ್ಖತನವಲ್ಲವೇ? ಇನ್ನು, ಹಿಂದೂ ಸಂಘಟನೆಯ ನಾಯಕರನ್ನು ಯಾವುದಾದರೂ ಕೇಸಿನಲ್ಲಿ ತಗುಲಿಸಿ ಜೈಲಿಗೆ ಅಟ್ಟಿ ಎಂದು ಪೊಲೀಸರಿಗೆ ನಿರ್ದೇಶನ ಕೊಡುವ ರಮಾನಾಥ ರೈ ಅವರಂತಹ ಸಚಿವರು ಇರುವಾಗ, ನಿರ್ಭಯವಾಗಿರಲು ಸಾಧ್ಯವೇ? ಇನ್ನಾದರೂ ಪಿಎಫ್​ಐ ಹಾಗೂ ಎಸ್​ಡಿಪಿಐಯಂತಹ ಸಂಘಟನೆಗಳನ್ನು ನಿಷೇಧಿಸದಿದ್ದರೆ ಕರ್ನಾಟಕವೂ ಕೇರಳದಂತಾಗುವ ದಿನಗಳು ದೂರವಿಲ್ಲ ಎನಿಸುತ್ತದೆ.

ಈ ಪ್ರಶ್ನೆಗಳನ್ನೇ ಎತ್ತಿ, ಬಿಜೆಪಿ ಯುವ ಮೋರ್ಚಾ, ‘ಮಂಗಳೂರು ಚಲೋ‘ ಹೋರಾಟಕ್ಕೆ ಕರೆ ನೀಡಿರುವುದು. ರಾಜ್ಯದಲ್ಲಿ ನಡೆದಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಮತ್ತು ಹಲ್ಲೆ ಪ್ರಕರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು, ಪಿಎಫ್​ಐ, ಎಸ್​ಡಿಪಿಐ ಹಾಗೂ ಕೆಎಫ್​ಡಿಯಂತಹ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ಕೈಬಿಡಬೇಕೆಂಬ ಮೂರು ಪ್ರಮುಖ ಆಗ್ರಹಗಳನ್ನು ಹೊತ್ತು ‘ಮಂಗಳೂರು ಚಲೋ‘ ನಡೆಯಲಿದೆ.

ಈಗಾಗಲೇ ಕರ್ನಾಟಕದ ಕರಾವಳಿ, ಚಿಕ್ಕಮಗಳೂರು, ಮೈಸೂರು, ಕೊಡಗು ಜಿಲ್ಲೆಗಳ ಕೆಲ ಭಾಗಗಳು ಕಾನೂನಿನ ವ್ಯಾಪ್ತಿಗೆ ಹೊರತಾದಂತೆ ಕಾಣುತ್ತಿರುವುದು ಓಲೈಕೆ ರಾಜಕಾರಣದ ಪರಿಣಾಮವೇ ಸರಿ. ಯಾಸಿನ್ ಭಟ್ಕಳ್​ನ ವಿಚಾರಣೆಯ ವೇಳೆ ಹೊರಬಂದ ಅಂಶಗಳಿರಬಹುದು, ರುದ್ರೇಶ್ ಹಂತಕರು ಬಿಚ್ಚಿಟ್ಟ ಮಾಹಿತಿಯಿರಬಹುದು ಎಲ್ಲವೂ ಕರ್ನಾಟಕವು ಹೇಗೆ ವೇಗವಾಗಿ ಜಿಹಾದಿಗಳ ಸೇಫ್ ಹೆವನ್ ಆಗುತ್ತಿದೆ ಎಂಬುದನ್ನು ಬೊಟ್ಟುಮಾಡಿ ತೋರಿಸುತ್ತಿವೆ. ಅವ್ಯಾಹತ ಗೋಹತ್ಯೆ ಮತ್ತು ಗೋ ಕಳ್ಳತನ, ವ್ಯವಸ್ಥಿತ ಲವ್ ಜಿಹಾದ್, ಹಿಂದೂ ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ಹತ್ಯೆಗಳು, ಪೊಲೀಸ್ ಮತ್ತು ಗುಪ್ತಚರ ದಳದ ತನಿಖೆಯಲ್ಲಿ ಬಯಲಾಗಿರುವ ಸ್ಪೋಟಕ ಯೋಜನೆಗಳು, ಈ ಸಂಘಟನೆಗಳು ಕೇರಳದ ಮತಾಂಧ ಸಂಘಟನೆಗಳೊಂದಿಗೆ ಹೊಂದಿರುವ ನಂಟು ಇವೆಲ್ಲ ಯಾವುದೇ ಪ್ರಾಮಾಣಿಕ ಮತ್ತು ಪ್ರಜ್ಞಾವಂತ ಸರ್ಕಾರವನ್ನು ಚಿಂತೆಗೆ ಹಚ್ಚುವಂಥದ್ದು. ದುರದೃಷ್ಟವೆಂದರೆ, ಕಠಿಣ ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ, ಅವರ ಪೋಷಣೆ ಮತ್ತು ರಕ್ಷಣೆಗೇ ನಿಂತಂತೆ ವರ್ತಿಸುತ್ತಿದೆ.

ಭಯೋತ್ಪಾದಕ ಯಾಸಿನ್ ಭಟ್ಕಳನನ್ನು ಬಹುವಚನದಲ್ಲಿ ಸಂಬೋಧಿಸಿ, ನಾಡು ಕಂಡ ಶೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರನ್ನು ಏಕವಚನದಲ್ಲಿ ಸಂಬೋಧಿಸುವ ಮುಖ್ಯಮಂತ್ರಿಗಳಿರುವಷ್ಟು ದಿನ, ಕರ್ನಾಟಕದ ಈ ಅಧಃಪತನವನ್ನು ತಡೆಯಲು ಸಾಧ್ಯವಿಲ್ಲ. ಕಾರಣ, ನಾವು ಇಂದೇ ನಮ್ಮ ಧ್ವನಿ ಎತ್ತಬೇಕಿದೆ. ಪ್ರತಿಭಟಿಸಬೇಕಿದೆ. ನ್ಯಾಯಕ್ಕಾಗಿ ಆಗ್ರಹಿಸಬೇಕಿದೆ.

(ಲೇಖಕರು ವಕೀಲರು ಮತ್ತು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ)

Leave a Reply

Your email address will not be published. Required fields are marked *

Back To Top