Sunday, 15th July 2018  

Vijayavani

ಬಾಲಕನ ವಿಡಿಯೋ ಹಿಂದೆ ಬಿಜೆಪಿ ಕೈವಾಡ ಆರೋಪ - ವಿಡಿಯೋ ತನಿಖೆಗೆ ಸದಾನಂದಗೌಡ ಆಗ್ರಹ - ರಾಜಕಾರಣಿಗಳ ಆಟಕ್ಕೆ ಕೊಡವರ ಆಕ್ರೋಶ        26 ವರ್ಷ ಲಿಂಗಾಯತರೇ ರಾಜ್ಯ ಆಳಿದ್ದಾರೆ - ಕುಮಾರಸ್ವಾಮಿ ಸಿಎಂ ಆಗಿ 2 ತಿಂಗಳಾಗಿದೆ - ಉತ್ತರ ಕರ್ನಾಟಕ ನಿರ್ಲಕ್ಷ್ಯ ಆರೋಪಕ್ಕೆ ದೇವೇಗೌಡ ತಿರುಗೇಟು        ಕೊನೆಗೂ ಶಿರಾಡಿ ಘಾಟ್‌ ಲೋಕಾರ್ಪಣೆ - ವಾಸ್ತು ಪ್ರಕಾರ ರೇವಣ್ಣ ಉದ್ಘಾಟನೆ - ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ        ಮಟನ್ ಬಿರಿಯಾನಿ, ಚಿಕನ್ ಚಾಪ್ಸ್, ಬೋಟಿ ಗೊಜ್ಜು, ಮೊಟ್ಟೆ - 25 ಸಾವಿರ ಮಂದಿಗೆ ಭರ್ಜರಿ ಬಾಡೂಟ - ಚಾಮುಂಡೇಶ್ವರಿ ಕ್ಷೇತ್ರದ ಜನರಿಗೆ ಜಿಟಿಡಿ ಕೃತಜ್ಞತೆ        ಒಂದು ದೇಶ ಒಂದೇ ಚುನಾವಣೆ - ಮೋದಿ ಪರಿಕಲ್ಪನೆಗೆ ಸೂಪರ್‌ಸ್ಟಾರ್‌ ಬೆಂಬಲ - ಹಣ, ಸಮಯ ಉಳಿತಾಯ ಎಂದ ರಜನಿ        ಉಕ್ಕಿಹರಿಯುತ್ತಿರೋ ಕೃಷ್ಣೆ - ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ಇತ್ತ ತಮಿಳುನಾಡಿನಲ್ಲಿ ಕಾವೇರಿ ಭೋರ್ಗರೆತ       
Breaking News

ದತ್ತು ಪಡೆದವರ ಆಸ್ತಿ ದತ್ತು ಕೊಟ್ಟವರಿಗೆ ಸಿಗುವುದೇ?

Thursday, 14.09.2017, 3:02 AM       No Comments

ಮಣಿಯ ತಂದೆ, ತಾಯಿಗೆ ಎರಡು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳು. ಅವಳ ತಂದೆಯ ಅಣ್ಣನಿಗೆ ಮಕ್ಕಳಿರಲಿಲ್ಲ ಎಂದು ರಮಣಿಯನ್ನು ದತ್ತಿಗೆ ಕೊಟ್ಟಿದ್ದರು. ಅವಳ ದೊಡ್ಡಪ್ಪ ಅಂದರೆ ಅವಳ ದತ್ತು ತಂದೆ ಅವಳು 12 ವರ್ಷದವಳಿದ್ದಾಗಲೇ ತೀರಿಕೊಂಡಿದ್ದರು. ರಮಣಿಯ ದತ್ತು ತಂದೆ ಸಂಪಾದಿಸಿದ ಹಲವಾರು ಸ್ವಯಾರ್ಜಿತ ಆಸ್ತಿಗಳು ಇದ್ದವು. ಅವರ ಮರಣಾನಂತರ ಖಾತೆ ಬದಲಾಯಿಸುವಾಗ ರಮಣಿಯ ದತ್ತಿನ ತಾಯಿ ಮತ್ತು ಅವಳಿಗೆ ಜನ್ಮ ಕೊಟ್ಟ ತಂದೆಯ ಹೆಸರಿಗೆ ಜಂಟಿಯಾಗಿ ಖಾತೆ ಬದಲಾಯಿಸಲಾಗಿತ್ತು. ಇದಕ್ಕೆ ರಮಣಿಯ ದತ್ತಿನ ತಾಯಿ ಒಪ್ಪಿಗೆ ಕೊಟ್ಟಿದ್ದರು. ಈಗ ರಮಣಿಯ ಜನ್ಮ ಕೊಟ್ಟ ತಂದೆ ತೀರಿಕೊಂಡಿದ್ದಾರೆ. ಅವಳ ಜನ್ಮ ಕೊಟ್ಟ ತಂದೆಯ ಉಳಿದ ಮಕ್ಕಳೆಲ್ಲ ತಮಗೂ ಆಸ್ತಿಯಲ್ಲಿ ರಮಣಿಯ ಜತೆ ಸಮಪಾಲು ಇದೆ ಎನ್ನುತ್ತಿದ್ದಾರೆ. ರಮಣಿಗೆ ಏನು ಮಾಡ ಬೇಕೆಂದು ತಿಳಿಯುತ್ತಿಲ್ಲ. ತನ್ನ ರಕ್ತ ಸಂಬಂಧಿಗಳಿಗೆ ಪಾಲು ಕೊಟ್ಟರೆ ತನಗೆ ಕಡಿಮೆ ಆಗುತ್ತದೆ ಎನ್ನುವ ಯೋಚನೆಯೂ ಇದೆ. ಇದರಿಂದ ಅವಳು ಕಂಗಾಲಾಗಿದ್ದಾಳೆ.

ಒಮ್ಮೆ ದತ್ತಿಗೆ ಕೊಟ್ಟ ಮೇಲೆ, ದತ್ತಿಗೆ ಹೋದವರಿಗೆ ತಮ್ಮ ರಕ್ತ ಸಂಬಂಧದ ಕುಟುಂಬದವರ ಆಸ್ತಿಯ ಮೇಲಿನ ಹಕ್ಕು ಇರುವುದಿಲ್ಲ. ಆದರೆ ದತ್ತು ಹೋಗುವವರೆಗೆ ಅವರಿಗೆ ಇದ್ದ ಹಕ್ಕು ಮಾತ್ರ ಮುಂದುವರಿಯುತ್ತದೆ. ಇದಕ್ಕೆ ಸರಿಹೋಗುವಂತೆ, ದತ್ತಿಗೆ ಹೋದ ವ್ಯಕ್ತಿ, ತನ್ನ ದತ್ತು ಕುಟುಂಬದಿಂದ ಪಡೆದ ಅಸ್ತಿಗಳಲ್ಲಿ, ದತ್ತಿಗೆ ಹೋದವರ ರಕ್ತಸಂಬಂಧಿಗಳಿಗೆ ಯಾವ ಹಕ್ಕೂ ಇರುವುದಿಲ್ಲ. ರೆವೆನ್ಯೂ ದಾಖಲೆಗಳಲ್ಲಿ ಆಗಿರುವ ಯಾವ ಬದಲಾವಣೆಗಳೂ ಕಾನೂನು ರೀತ್ಯ ಇರುವ ಹಕ್ಕನ್ನು ಕುಂಠಿತಗೊಳಿಸುವುದಿಲ್ಲ. ಮೇಲೆ ತಿಳಿಸಿದ ರಮಣಿಯ ಉದಾಹರಣೆಯಲ್ಲಿ ಆಕೆ ರೆವೆನ್ಯೂ ದಾಖಲೆಗಳನ್ನು ಸರಿಪಡಿಸುವಂತೆ ಕ್ರಮ ಕೈಗೊಳ್ಳಬಹುದು. ಆಕೆಯ ರಕ್ತ ಸಂಬಂಧಿಗಳಿಗೆ ಆಕೆಯ ದತ್ತು ತಂದೆಯಿಂದ ಆಕೆಗೆ ಬಂದಿರುವ ಆಸ್ತಿಯಲ್ಲಿ ಯಾವುದೇ ಹಕ್ಕೂ ಇರುವುದಿಲ್ಲ. ಅಥವಾ ಬೇಕಿದ್ದರೆ ಹಕ್ಕು ಘೊಷಣೆಯ ದಾವೆಯನ್ನೂ ಹಾಕಿಕೊಂಡು ಎಲ್ಲ ಆಸ್ತಿಯೂ ತನ್ನದೇ ಎನ್ನುವ ಹಕ್ಕು ಘೊಷಣೆಯನ್ನೂ ನ್ಯಾಯಾಲಯದಿಂದ ಪಡೆಯಬಹುದು.

ಆಸ್ತಿಗಳ ಬಗ್ಗೆ ರೆವೆನ್ಯೂ ದಾಖಲೆಗಳನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುವುದು ಒಳ್ಳೆಯದು ಲಿಮಿಟೇಷನ್ ಕಾಯ್ದೆಯ ಅಡಚಣೆ ಆಗುವ ಮುಂಚೆಯೇ ರೆವೆನ್ಯೂ ದಾಖಲೆಗಳಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ನಮೂದಾಗಿದ್ದರೆ, ಅಂತಹ ದಾಖಲೆಯನ್ನು ಸರಿಪಡಿಸಿಕೊಳ್ಳುವ ಕ್ರಮ ಜರುಗಿಸುವುದು ಒಳ್ಳೆಯದು.

ನನ್ನ ಮದುವೆಯಾಗಿ ಎಂಟು ವರ್ಷಗಳಾಗಿವೆ. ನಾನು ಆಗಾಗ ನನ್ನ ಗಂಡ ಮತ್ತು ಮಾವನಿಗೆ ಲಕ್ಷಾಂತರ ರೂಪಾಯಿ ಸಾಲ ಕೊಟ್ಟಿದ್ದೇನೆ. ಕೆಲವೊಮ್ಮೆ ಅವರು ವಾಪಸ್ ಕೊಟ್ಟಿದ್ದಾರೆ. ಈಗ ಮೂರು ವರ್ಷಗಳಿಂದ ಕೊಡುತ್ತಿಲ್ಲ. ಮತ್ತೆ ಮತ್ತೆ ಇನ್ನೂ ಹೆಚ್ಚಿನ ಸಾಲ ಕೇಳುತ್ತಿದ್ದಾರೆ. ಈ ಮಧ್ಯೆ ನನಗೂ, ಪತಿಗೂ ಈ ಕಾರಣಕ್ಕಾಗಿಯೇ ಗಲಾಟೆ ಹೆಚ್ಚಾಗುತ್ತಿದೆ. ಅವರು ಡಿವೋರ್ಸ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಹಣ ಕೊಟ್ಟರೆ ಮತ್ತೆ ವಾಪಸ್ ಬರುತ್ತದೆಯೇ? ಡಿವೋರ್ಸ್ ಆದರೆ ನನ್ನ ಹಣವಾದರೂ ನನಗೆ ಅವರು ಕೊಡುತ್ತಾರೆಯೇ? ನನಗೆ ಭಯವಾಗಿದೆ. ದಯವಿಟ್ಟು ತಿಳಿಸಿ.

| ರಮಾ(ಹೆಸರು ಬದಲಿಸಿದೆ) ಊರು ಬೇಡ

ಯಾವುದೇ ವ್ಯಕ್ತಿಗೆ ಹಣ ಕೊಟ್ಟರೂ ಅದನ್ನು ವಾಪಸ್ ಪಡೆಯಲು ಮೂರುವರ್ಷಗಳ ವಾಯ್ದೆ ಮಾತ್ರ ಕಾನೂನಿನಲ್ಲಿ ಇರುತ್ತದೆ. ಕೆಲವೊಮ್ಮೆ ಹಣ ಪಡೆದವರು ಮೂರು ವರ್ಷದ ಒಳಗೆ ಹಣ ವಾಪಸ್ ಕೊಡಲು ಆಗದೇ ಹೋದಾಗ ಹೆಚ್ಚಿನ ಸಮಯ ಬೇಕೆಂದು ಲಿಖಿತ ಮೂಲಕವಾಗಿ ಬರೆದುಕೊಟ್ಟಾಗ, ಅವರು ಬರೆದು ಕೊಟ್ಟ ದಿನದಿಂದ ಮತ್ತೆ ಮೂರುವರ್ಷದ ಸಮಯ ಹಣ ವಾಪಸ್ ಪಡೆಯಲು ಸಿಗುತ್ತದೆ. ನೀವು ನಿಮ್ಮ ಪತಿ ಮತ್ತು ಮಾವನವರಿಗೆ ಹಣ ಕೊಟ್ಟಿರುವ ಬಗ್ಗೆ ಬರಹ ಮಾಡಿಕೊಳ್ಳಿ. ಆಗ ನಿಮಗೆ ಮುಂದೆ ಹಣ ವಾಪಸ್ ಪಡೆಯುವಾಗ ಲಿಮಿಟೇಷನ್ ಕಾಯ್ದೆಯ ತೊಂದರೆ ಬರುವುದಿಲ್ಲ. ಸಂಬಂಧಿಕರೇ ಆದರೂ ಹಣಕಾಸಿನ ವ್ಯವಹಾರ ಈ ಕಾಲದಲ್ಲಿ ಬರಹದ ಮೂಲಕ ಇದ್ದರೆ ಒಳ್ಳೆಯದು. ಪತಿ, ಪತ್ನಿಯರ ಸಂಬಂಧ ವ್ಯವಹಾರದಂತೆ ಆಗಬಾರದು ಎನ್ನುವುದು ಸರಿಯಾದರೂ, ಹಣಕಾಸಿನ ವಿಷಯದಲ್ಲಿ ಮುಂದೆ ತಕರಾರು ಬಂದಾಗ, ಒಬ್ಬರು ಹಣವನ್ನು ಕೊಟ್ಟೇ ಇಲ್ಲ ಎನ್ನುವ ಆಪಾದನೆ ಬಂದರೆ ಅಥವಾ ಹಣವನ್ನು ನಾನು ಪಡೆದೇ ಇಲ್ಲ ಎನ್ನುವ ಹೇಳಿಕೆ ಬಂದರೆ ಆಗ ಏನೂ ಮಾಡಲೂ ಆಗುವುದಿಲ್ಲ. ಹೀಗಾಗಿ ನೀವು ನಿಮ್ಮ ಪತಿ ಮತ್ತು ಮಾವನಿಗೆ, ಅವರಿಗೆ ಹಣ ಬೇಕಾದರೆ ಬರಹ ಮಾಡಿಕೊಡಬೇಕೆಂದು ಕೇಳಿ ಬರೆಸಿಕೊಳ್ಳಿ. ಒಟ್ಟಾರೆ ದಾಖಲು ಇದ್ದರೆ ಒಳ್ಳೆಯದು.

ಒಂದು ವೇಳೆ ನಿಮ್ಮ ಪತಿ ನಿಮ್ಮ ವಿರುದ್ಧ ವಿಚ್ಛೇದನಕ್ಕೆ ಕೇಸು ಹಾಕಿದರೆ ಆಗ ನಿಮಗೆ ಬರಬೇಕಾದ ಹಣದ ವಿಷಯವನ್ನು ಅಲ್ಲಿ ಕೇಳಲಾಗುವುದಿಲ್ಲ. ಆ ಸಂದರ್ಭದಲ್ಲಿ ಅವರ ವಿರುದ್ಧ ಪ್ರತ್ಯೇಕ ಪ್ರಕರಣವನ್ನೇ ದಾಖಲಿಸಬೇಕಾಗುತ್ತದೆ. ಆಗ ನ್ಯಾಯಾಲಯ ನಿಮ್ಮಿಂದ ನೀವು ಹಣ ಕೊಟ್ಟಿರುವ ಬಗ್ಗೆ ದಾಖಲೆಗಳನ್ನು ನಿರೀಕ್ಷಿಸುತ್ತದೆ.

ನಾನು ಒಬ್ಬ ವಿಧವೆ ಮತ್ತು ಅಂಗವಿಕಲೆ. ಸದ್ಯ ಅಣ್ಣನ ಮನೆಯಲ್ಲಿ ಇದ್ದೇನೆ. ನನ್ನ ಮಗಳಿಗೆ ಮದುವೆಯಾಗಿದೆ. ಅವಳು ಗಂಡನ ಮನೆಯಲ್ಲಿದ್ದಾಳೆ. ಅವಳು ಕೆಲಸದಲ್ಲೂ ಇದ್ದಾಳೆ. ನಾನು ಕೆಲಸದಿಂದ ನಿವೃತ್ತಳಾಗಿದ್ದೇನೆ. ನನ್ನನ್ನು ನನ್ನ ಅಣ್ಣನೇ ಈವರೆಗೂ ನೋಡಿಕೊಂಡು ಬಂದಿದ್ದಾರೆ. ನಾನೂ ಅವರ ಕುಟುಂಬದ ಖರ್ಚಿಗೆ ನನ್ನ ಸಂಪಾದನೆಯ ಹೆಚ್ಚು ಹಣವನ್ನು ಕೊಟ್ಟಿದ್ದೇನೆ. ಈಗ ನಾನು ಸತ್ತರೆ ನನ್ನ ಪೆನ್ಷನ್ ಹಣ ನನ್ನ ಅಣ್ಣನಿಗೇ ಹೋಗುತ್ತದೆಯೇ? ನನ್ನ ಬ್ಯಾಂಕಿನಲ್ಲಿರುವ ಹಣ ನನ್ನ ಅಣ್ಣನಿಗೇ ಹೋಗುತ್ತ ಅಥವಾ ನನ್ನ ಮಗಳಿಗೆ ಸೇರುತ್ತ, ದಯವಿಟ್ಟು ತಿಳಿಸಿ.

| ಕಮಲಮ್ಮ ಊರು ಬೇಡ

ನಿಮ್ಮ ಮರಣಾ ನಂತರ ನಿಮ್ಮ ಪೆನ್ಷನ್ ನಿಮ್ಮ ಮಗಳಿಗೂ ನಿಮ್ಮ ಅಣ್ಣನಿಗೂ ಇಬ್ಬರಿಗೂ ಬರುವುದಿಲ್ಲ. ನಿಮ್ಮ ಮರಣದ ನಂತರ ನಿಮ್ಮ ಹೆಸರಿನಲ್ಲಿರುವ ಎಲ್ಲ ಚರ, ಸ್ಥಿರ ಆಸ್ತಿಗಳಿಗೂ ನಿಮ್ಮ ಮಗಳೇ ವಾರಸುದಾರಳಾಗುತ್ತಾಳೆ. ಎಲ್ಲವೂ ಅವಳಿಗೇ ಸೇರುತ್ತದೆ. ನಿಮ್ಮ ಅಣ್ಣನಿಗೆ ಅದರಲ್ಲಿ ಯಾವ ಹಕ್ಕೂ ಇರುವುದಿಲ್ಲ. ನಿಮ್ಮ ಬಾಬತ್ತು ಎಲ್ಲ ಚರ, ಸ್ಥಿರ ಸ್ವತುಗಳು ಅಥವಾ ಅದರಲ್ಲಿ ಕೆಲವು ಭಾಗ ಅಣ್ಣನಿಗೆ ಸೇರಬೇಕೆಂದು ನಿಮಗೆ ಇಷ್ಟವಿದ್ದರೆ ನೀವು ಈಗಲೇ ಒಂದು ವಿಲ್ ಮಾಡಿಸಿ ಅದನ್ನು ನೋಂದಣಿ ಮಾಡಿಸಿ ಇಡುವುದು ಒಳ್ಳೆಯದು. (ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)

(ಪ್ರತಿಕ್ರಿಯಿಸಿ: [email protected], [email protected])

 

Leave a Reply

Your email address will not be published. Required fields are marked *

Back To Top