Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ದಕ್ಷತೆ ಸರ್ವವ್ಯಾಪಿಯಾಗಲಿ

Tuesday, 10.10.2017, 3:00 AM       No Comments

ವಿಐಪಿ ಸಂಸ್ಕೃತಿಯ ಅನುಸರಣೆಗೆ ಅನುವುಮಾಡಿಕೊಟ್ಟಿದ್ದ 1981ರ ಸುತ್ತೋಲೆಯನ್ನು ರದ್ದುಗೊಳಿಸುವ ಮೂಲಕ ರೈಲ್ವೆ ಸಚಿವಾಲಯ ಒಳ್ಳೆಯ ಮೇಲ್ಪಂಕ್ತಿಯನ್ನೇ ಹಾಕಿಕೊಟ್ಟಿದೆ. ರೈಲ್ವೆ ಮಂಡಳಿಯ ಚೇರ್ಮನ್ ಮತ್ತು ಇತರ ಸದಸ್ಯರು ರೇಲ್ವೆ ವಲಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ, ಅವರನ್ನು ಹೂಗುಚ್ಛ-ಕೊಡುಗೆಗಳೊಂದಿಗೆ ಬರಮಾಡಿಕೊಳ್ಳಲು ಹಾಗೂ ತರುವಾಯದಲ್ಲಿ ಬೀಳ್ಕೊಡಲು ಜನರಲ್ ಮ್ಯಾನೇಜರ್ ಹಾಜರಿರಬೇಕೆಂಬ ಶಿಷ್ಟಾಚಾರವೂ ಸೇರಿದಂತೆ, ಹಿರಿಯ ಅಧಿಕಾರಿಗಳ ಮನೆಗೆಲಸಕ್ಕೆ ಟ್ರಾ್ಯಕ್​ವುನ್​ಗಳಂಥ ರೈಲ್ವೆ ಸಿಬ್ಬಂದಿಯನ್ನು ನಿಯೋಜಿಸುವ ಪರಿಪಾಠವೀಗ ಈ ಹೊಸ ಆದೇಶದನ್ವಯ ರದ್ದುಗೊಂಡಂತಾಗಿದೆ. ಕಾರ್ಯಾಚರಣೆಯ ಅಗಾಧವ್ಯಾಪ್ತಿ, ಸಿಬ್ಬಂದಿಯ ಸಂಖ್ಯಾಬಾಹುಳ್ಯ, ಕೇಂದ್ರ ಆಯವ್ಯಯ ಮಂಡನೆಯ ವೇಳೆ ದಕ್ಕಿಸಿಕೊಳ್ಳುವ ಪ್ರಾಮುಖ್ಯ ಈ ಎಲ್ಲ ವಿಷಯಗಳಲ್ಲೂ ಮುನ್ನೆಲೆಗೆ ಬರುವಷ್ಟು ಗಮನಾರ್ಹವೆನಿಸಿಕೊಂಡಿರುವ ರೈಲ್ವೆ ಇಲಾಖೆಯಲ್ಲಿನ ಈ ಬದಲಾವಣೆ ಅದರ ಒಟ್ಟಾರೆ ಕಾರ್ಯವೈಖರಿಯ ಮೇಲೆ ಬೃಹತ್ ಪರಿಣಾಮವನ್ನೇನೂ ಬೀರುವುದಿಲ್ಲವಾದರೂ, ಬ್ರಿಟಿಷರ ಕಾಲದಿಂದಲೂ ವ್ಯವಸ್ಥೆಯಲ್ಲಿ ಹೆಣೆದುಕೊಂಡುಬಿಟ್ಟಿರುವ ಮತ್ತು ಈಗ ಅಪ್ರಸ್ತುತವೆನಿಸಿರುವ ಒಂದಷ್ಟು ಪರಿಪಾಠಗಳ ರದ್ದತಿಗೆ ಈ ಚಿಕ್ಕ ಬದಲಾವಣೆ ಮುನ್ನುಡಿಯಾಗಬಲ್ಲದು.

ಈ ಹಿನ್ನೆಲೆಯಲ್ಲಿ ಸರ್ಕಾರದ ಮತ್ತು ಅದರ ಅಂಗಭಾಗಗಳ ಕಾರ್ಯವೈಖರಿಯನ್ನು ಸಮಷ್ಟಿ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಸರ್ಕಾರವೊಂದು ಹಲವು ಇಲಾಖೆಗಳ, ಸಂಬಂಧಿತ ಸಚಿವ, ಅಧಿಕಾರಿ ಮತ್ತಿತರ ಸಿಬ್ಬಂದಿಯ ಒಟ್ಟು ಸ್ವರೂಪವೇ ಆಗಿರುವಂತೆ, ಅಭಿವೃದ್ಧಿ ಎಂಬುದೂ ಹಲವು ಇಲಾಖೆಗಳು ಮತ್ತು ಅದರ ವಿವಿಧ ಸ್ತರಗಳ ಕಾರ್ಯವೈಖರಿಯಲ್ಲಿ ಆಗಬೇಕಿರುವ ಸುಧಾರಣೆ, ಕಾರ್ಯದಕ್ಷತೆಯಲ್ಲಿನ ಹೆಚ್ಚಳ, ಮೂಲಸೌಕರ್ಯ ಕಲ್ಪಿಸುವಿಕೆ, ಆದಾಯ ಸಂಗ್ರಹಣೆಯ ಮಾಗೋಪಾಯಗಳನ್ನು ಹುಡುಕುವಿಕೆ ಈ ಎಲ್ಲದರ ಫಲಿತವೇ ಆಗಿರುತ್ತದೆ ಎಂಬುದು ಸರ್ವವೇದ್ಯ. ರೈಲ್ವೆ ಇಲಾಖೆಯಲ್ಲೀಗ ಜಾರಿಯಾಗಿರುವ, ಚಿಕ್ಕದಾದರೂ ಮಹತ್ವಪೂರ್ಣವಾಗಿರುವ ಈ ಬದಲಾವಣೆ ಅದೊಂದೇ ಇಲಾಖೆಗೆ ಸೀಮಿತವಾಗಬಾರದು ಮತ್ತು ಅಂಥ ಒಂದು ಬದಲಾವಣೆಗೆ ಮಾತ್ರವೇ ರೈಲ್ವೆ ಇಲಾಖೆಯೂ ‘ಸ್ವಯಂಮಿತಿ’ ಹೇರಿಕೊಳ್ಳಬಾರದು. ಇಂಥದೊಂದು ಮೇಲ್ಪಂಕ್ತಿ ಮಿಕ್ಕ ಇಲಾಖೆಗಳಿಗೂ, ಅವುಗಳ ಅಂಗಸಂಸ್ಥೆಗಳಿಗೂ ವಿಸ್ತರಣೆಯಾಗುವಂತಾದರೆ, ಜನಕಲ್ಯಾಣ ಕಾರ್ಯಕ್ರಮಗಳು ಅಂತಿಮ ಫಲಾನುಭವಿಗಳಿಗೆ ಸರಾಗವಾಗಿ ತಲುಪುವಂತಾಗುತ್ತದೆ, ಅಭಿವೃದ್ಧಿಯ ಪಯಣಕ್ಕೂ ವೇಗ ದಕ್ಕುತ್ತದೆ. ನಮ್ಮ ಸಂಕಟ-ಸಂಕಷ್ಟಗಳನ್ನು ಕೇಳಿಸಿಕೊಂಡು ಕ್ಷಿಪ್ರವಾಗಿ ಪ್ರತಿಸ್ಪಂದಿಸುವವರು ಇದ್ದಾರೆ ಎಂಬ ವಿಶ್ವಾಸ ಜನಮಾನಸದಲ್ಲೂ ಮೂಡಿ, ಸರ್ಕಾರದ ಎಲ್ಲ ಉಪಕ್ರಮಗಳಿಗೆ ಸಾರ್ವಜನಿಕರ, ಸಂಘ-ಸಂಸ್ಥೆಗಳ ಸಹಕಾರ ಹಸ್ತ ಸಿಗುವಂತಾಗುತ್ತದೆ ಎಂಬುದನ್ನು ಮರೆಯಲಾಗದು.

ಯಾವುದೇ ಇಲಾಖೆಯು ಮೂಲಮಟ್ಟದಿಂದ ಸುಧಾರಣೆಯಾಗಬೇಕೆಂದಾದಲ್ಲಿ, ಉನ್ನತಾಧಿಕಾರಿಗಳು ದಂತಗೋಪುರದಲ್ಲೇ ದಿನದೂಡದೆ ಶ್ರೀಸಾಮಾನ್ಯರೊಂದಿಗೆ ಬೆರೆತು ಆಗಬೇಕಾದ ಕೆಲಸ-ಕಾರ್ಯಗಳ ಕುರಿತು ಅವರಿಂದ ಹಿಮ್ಮಾಹಿತಿ ಪಡೆಯುವಂತಾಗಬೇಕು. ಈ ಸದಾಶಯಕ್ಕೆ ಪುಷ್ಟಿ ನೀಡಲೆಂಬಂತೆ, ಐಷಾರಾಮಿ ಮತ್ತು ಎಕ್ಸಿಕ್ಯುಟಿವ್ ದರ್ಜೆಯ ಬೋಗಿಗಳ ಬದಲಿಗೆ ಸ್ಲೀಪರ್, ತ್ರೀ ಟೈರ್ ಎಸಿ ಬೋಗಿಗಳಲ್ಲಿ ಉನ್ನತಾಧಿಕಾರಿಗಳು ಪಯಣಿಸುವ ಮೂಲಕ, ಪ್ರಯಾಣಿಕರೊಡನೆ ಬೆರೆಯಲು ಯತ್ನಿಸಬೇಕು ಎಂಬುದಾಗಿ ರೈಲ್ವೆ ಸಚಿವರು ನೀಡಿರುವ ಸೂಚನೆಯೂ ಶ್ಲಾಘನೀಯವೇ. ಈ ಸೂಚನೆ ಕೂಡ ಮಿಕ್ಕ ಇಲಾಖೆಗಳಲ್ಲೂ ಅನುಸರಣೆ ಯಾಗುವಂತಾಗಬೇಕು. ವ್ಯವಸ್ಥೆಯ ಯಾವ ಹಂತದಲ್ಲಿ, ಯಾವ ಮಟ್ಟದಲ್ಲಿ ಕೊರತೆಯಿದೆ, ಜನಕಲ್ಯಾಣ ಯೋಜನೆಗಳ ಪೂರ್ಣಪ್ರಯೋಜನ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದಂತಿರಲು ಕಾರಣವಾಗಿರುವ ತಡೆಗೋಡೆಗಳಾವುವು ಎಂಬುದನ್ನು ಅಧಿಕಾರಿಗಳು ಪ್ರತ್ಯಕ್ಷವಾಗಿ ಗ್ರಹಿಸುವುದಕ್ಕೆ ಇಂಥ ಉಪಕ್ರಮಗಳು ನೆರವಾಗಬಲ್ಲವು. ಸರ್ಕಾರಿ ಇಲಾಖೆಗಳಲ್ಲಿ ಇದಕ್ಕೆಂದೇ ಮೀಸಲಾದ ವಿಭಾಗಗಳು ಇಲ್ಲವೆಂದೇನಿಲ್ಲ; ಆದರೆ ಅವಕ್ಕೊಂದು ಮಾರ್ಗದರ್ಶಿ ಸೂತ್ರದ, ಶಿಸ್ತಿನ ಅನುಸರಣೆಯ, ಉತ್ತರದಾಯಿತ್ವದ ಅಗತ್ಯವಿದೆ. ಅವುಗಳ ಜಾರಿಗೆ ಇದು ಸಕಾಲ.

Leave a Reply

Your email address will not be published. Required fields are marked *

Back To Top