Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ದಂಡು ಪಾಳಯಗಳಲ್ಲಿ ಬಂಡಾಯದ ಹೊಗೆ

Thursday, 12.10.2017, 3:03 AM       No Comments

ಕ್ರಾಂತಿ ಚಟುವಟಿಕೆ ಮುಂದುವರಿಸುವ ಮಹತ್ತರ ಜವಾಬಾರಿ ಹೊತ್ತ ಪ್ರಮುಖನಾಗಿದ್ದ ರಾಸ್​ಬಿಹಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವುದರಲ್ಲಿ ನಿಸ್ಸೀಮನಾಗಿದ್ದ. ವರ್ಣರಂಜಿತ ವ್ಯಕ್ತಿತ್ವ, ಶಿವಾಜಿಯ ಚಾಕಚಕ್ಯತೆ ಅವನದು. ಬಗೆ ಬಗೆ ವೇಷಗಳನ್ನು ಧರಿಸುತ್ತಿದ್ದ ಆತನನ್ನು ಪತ್ತೆಹಚ್ಚುವುದೇ ಬ್ರಿಟಿಷರಿಗೆ ಸವಾಲಾಗಿತ್ತು. 

ಲಾರ್ಡ್ ಪಾರ್ಡಿಂಜ್​ನ ಮೇಲೆ ಬಾಂಬ್ ಸ್ಪೋಟಿಸಿದ ಪ್ರಕರಣ ದೆಹಲಿ ಷಡ್ಯಂತ್ರ ಮೊಕದ್ದಮೆ ಎಂಬ ಹೆಸರಲ್ಲಿ ಪ್ರಸಿದ್ಧವಾಯಿತು. 1914ರ ಫೆಬ್ರವರಿಯಲ್ಲಿ ದೆಹಲಿಯ ಗೃಹಶೋಧದಲ್ಲಿ ಈ ಷಡ್ಯಂತ್ರದ ರೂವಾರಿ ರಾಸ್​ಬಿಹಾರಿಯೇ ಎಂಬುದು ಖಚಿತಪಟ್ಟ ಮೇಲೆ ಪಂಜಾಬ್, ದೆಹಲಿ, ಬಂಗಾಳ, ಸಂಯುಕ್ತ ಭಾರತಗಳಲ್ಲಿನ ಪೊಲೀಸ್ ಪಡೆಗಳು, ಗೂಢಚಾರರು ರಾಸ್​ಬಿಹಾರಿಯ ಬೆನ್ನ ಹಿಂದೆ ಬಿದ್ದರು. ಶತಾಯಗತಾಯ ಅವನನ್ನು ಹಿಡಿಯಬೇಕೆಂಬ ಛಲ ಅವರಲ್ಲಿ ಮೂಡಿತು. ಮೇಲಾಗಿ ಹಾಗೆಂದು ಸರ್ಕಾರದ ಆದೇಶವೂ ಇತ್ತು.

ವ್ಯಕ್ತಿ ಏಕ ವೇಷ ಅನೇಕ: ಆದರೆ ಚಂದ್ರಶೇಖರ ಆಜಾದನಂತೆ ರಾಸ್​ಬಿಹಾರಿ ಪೊಲೀಸರಿಗೆ ಕಡೆಗೂ ಸಿಕ್ಕಿ ಬೀಳಲಿಲ್ಲ. ಶಿವಾಜಿಯ ಚಾಕಚಕ್ಯತೆ ಆತನದು. ಫ್ರೆಂಚ್ ಕ್ರಾಂತಿ ಹಿನ್ನೆಲೆಯ ಕಾದಂಬರಿಯ ಕಾಲ್ಪನಿಕ ಪಾತ್ರ ಸ್ಕಾರ್ಲೆಟ್ ಪಿಂಪರ್ನಲ್​ಗೂ ಮಿಗಿಲಾಗಿ ತನ್ನನ್ನು ಬೇಟೆಯಾಡಲು ಬಂದ ಪೊಲೀಸ ರೊಂದಿಗೆ ಕಣ್ಣಾಮುಚ್ಚಾಲೆಯಾಡುತ್ತಾ ತನ್ನಷ್ಟಕ್ಕೆ ತಾನು ಕ್ರಾಂತಿಯ ಕೆಲಸದಲ್ಲಿ ತೊಡಗಿದ್ದ.

ಅದೆಷ್ಟು ವೇಷಗಳು! ಅವೆಷ್ಟು ಪಾತ್ರಗಳು! ವರ್ಣರಂಜಿತ ವ್ಯಕ್ತಿತ್ವ ಅವನದು. ಅವನಿದ್ದ ಹೋಟೆಲ್​ನ ಸುಳಿವು ಸಿಕ್ಕಿ ಪೊಲೀಸರು ದಾಳಿ ನಡೆಸಿದರೆ ಹಿಂದುಗಡೆಯಿಂದ ಮಾಳಿಗೆಗೆ ಹೋಗಿ ಆ ಮೂಲಕ ಪಕ್ಕದ ಹೋಟೆಲ್​ಗೆ ಹಾರಿ ಹಾಯಾಗಿ ಅಲ್ಲಿ ವಾಸ್ತವ್ಯ ಹೂಡುತ್ತಾನೆ.

ಚೀಫ್ ಪೊಲೀಸ್ ಕಮಿಷನರ್ ಮೊದಲ ದರ್ಜೆಯ ರೈಲು ಡಬ್ಬಿಯಲ್ಲಿ ಪಯಣಿಸುತ್ತಿದ್ದರೆ ಎದುರುಗಡೆ ಜರ್ಬಾಗಿ ಸೂಟು ಬೂಟು ಧರಿಸಿ ಪೇಪರ್ ಓದುತ್ತಿದ್ದ ಬಂಗಾಳಿ ಆಫೀಸರ್ ರಾಸ್​ಬಿಹಾರಿಯೇ ಆಗಿರಬೇಕೆ! ಅವನಿಗಾಗಿ ಪೊಲೀಸರು ರೈಲುಗಳನ್ನು, ರೈಲು ನಿಲ್ದಾಣಗಳನ್ನು ಜಾಲಾಡುತ್ತಾ, ನಿಲ್ದಾಣದಿಂದ ಹೊರಕ್ಕೆ ಹೋಗುವವರ ಮೇಲೆ ಹದ್ದಿನ ಕಣ್ಣಿಡುತ್ತಾ ಹುಡುಕುತ್ತಿದ್ದರೆ ಚೀಫ್ ಪೊಲೀಸ್ ಕಮಿಷನರ್ ಜೊತೆಯಲ್ಲಿ ಹರಟೆ ಹೊಡೆಯುತ್ತಾ ಪಯಣಿಸುತ್ತಿದ್ದ ಫಟಿಂಗನೇ ಅವನಾಗಿರಬೇಕೆ! ವಾರಾಣಸಿಯಲ್ಲಿ ತಂಗಿದ್ದ ರಾಸ್​ಬಿಹಾರಿಗೆ ಕ್ಷಣ ಗಂಡ ಪೂರ್ಣಾಯಸ್ಸು ಎಂಬ ಸ್ಥಿತಿ. ಒಬ್ಬ ಗೃಹಸ್ಥನ ಮನೆಯಲ್ಲಿ ಅವನು ಅವಿತಿಟ್ಟುಕೊಂಡಿದ್ದಾನೆಂದು ತಿಳಿದು ಆ ಮನೆಯ ಮೇಲೆ ಪೊಲೀಸ್ ದಾಳಿ. ಸುತ್ತಲೂ ಸರ್ಪಗಾವಲು. ರಾಸ್​ಬಿಹಾರಿ ಹೊರಹೋಗಬೇಕು. ಹೇಗೆ? ಆ ಮನೆಯಿಂದ ಇಬ್ಬರು ಮುತ್ತೈದೆಯರು ಹೂ ಬುಟ್ಟಿ ಹಿಡಿದು ಪೊಲೀಸರ ಮುಂದೆಯೆ ದೇವಸ್ಥಾನಕ್ಕೆ ಹೊರಟರು. ಅವರ ಪೈಕಿ ಒಬ್ಬಳು ರಾಸ್​ಬಿಹಾರಿ! ಗೃಹಿಣಿಯೇ ಅವನಿಗೆ ಸೀರೆ ಉಡಿಸಿ ಅಲ್ಲಿಂದ ಪಾರು ಮಾಡಿದ್ದಳು.

ವಾರಾಣಸಿಯಲ್ಲಿ ಅವನಿದ್ದ ಮನೆಯ ಮೇಲೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಪೊಲೀಸರು ಮನೆಯನ್ನು ಸುತ್ತುವರಿದಿದ್ದಾಗ ಪೊಲೀಸರ ಕಣ್ಣ ಮುಂದೆಯೇ ಮಂತ್ರ ಪಠಿಸುತ್ತಾ ಮಡಿಮಡಿಯಾಗಿ ರೇಷ್ಮೆ ಪಂಚೆ ಉಟ್ಟು ಅಲ್ಲಿಂದ ಹೊರಬಿದ್ದ ಪೂಜಾರಿಯೇ ಅವನಾಗಿರಬೇಕೆ! ಒಳಗೆ ರಾಸ್​ಬಿಹಾರಿ ಇದ್ದಾನೆಯೇ ಎಂಬ ಪ್ರಶ್ನೆಯನ್ನು ಆ ಪೂಜಾರಿಯನ್ನೇ ಕೇಳಿದಾಗ ‘ಇದ್ದಾನೆ ಒಂದು ಕೋಣೆಯಲ್ಲಿ ಮಲಗಿದ್ದಾನೆ. ಹೋಗಿ ನೋಡಿ’ ಎಂದು ಗಂಟೆ ಅಲ್ಲಾಡಿಸುತ್ತಾ ದಶಾಶ್ವಮೇಧ ಘಾಟ್ ಕಡೆ ಹೆಜ್ಜೆ ಹಾಕಿದ ರಾಸ್​ಬಿಹಾರಿ!

ಮತ್ತೊಮ್ಮೆ ಕಲ್ಕತ್ತೆಯ ಸೆಲ್ಡಾ ಕ್ಷೇತ್ರದಲ್ಲಿ ಅಂಚೆ ಕಚೇರಿಯ ಸನಿಹದಲ್ಲೆಲ್ಲೋ ರಾಸ್​ಬಿಹಾರಿ ಅಡಗಿ ಕುಳಿತಿದ್ದಾನೆ ಎಂಬ ಖಚಿತ ಮಾಹಿತಿಯೊಂದಿಗೆ ಕಲ್ಕತ್ತೆಯ ಪೊಲೀಸರು ಧರ್ಮತಲಾ ಎಂಬ ಸ್ಥಳದಿಂದ ಆರಂಭಿಸಿ ಇಡೀ ಸೆಲ್ಡಾವನ್ನು ಜಾಲಾಡುತ್ತಿದ್ದರೆ ಸೆಲ್ಡಾ ಫೋಸ್ಟ್ ಆಫೀಸಿನ ಎರಡನೆಯ ಮಹಡಿಯಲ್ಲಿ ಪಿಟೀಲು ನುಡಿಸುತ್ತಾ ಪಾಶ್ಚಾತ್ಯ ಸಂಗೀತ ಆಲಿಸುವುದರಲ್ಲಿ ತಲ್ಲೀನನಾಗಿದ್ದ ಸೂಟುಹ್ಯಾಟುಧಾರಿ ಆಂಗ್ಲೋ ಇಂಡಿಯನ್ ಪೊಲೀಸರು ಹುಡುಕುತ್ತಿದ್ದ ಮಿಕವೇ ಆಗಿರಬೇಕೆ!

ಚಟ್ಟದ ಮೇಲೆ ಹೆಣವಾಗಿ…: ಅವನ ಸ್ವಕ್ಷೇತ್ರವಾಗಿದ್ದ ಚಂದನ್​ನಾಗೋರ್​ನಲ್ಲಿ ಇರುವನೆಂಬ ವಿಶ್ವಸನೀಯ ಸುಳಿವಿನೊಂದಿಗೆ ಅವನಿದ್ದನೆಂದು ಹೇಳಲಾದ ಮನೆಯನ್ನು ಸುತ್ತುವರಿದಾಗ ಅಲ್ಲಿ ಯಾವ ಕುರುಹೂ ಸಿಗಲಿಲ್ಲ. ಅವನು ತಪ್ಪಿಸಿಕೊಂಡು ಹೋದ ಲಕ್ಷಣಗಳೂ ಕಾಣಲಿಲ್ಲ. ಪೊಲೀಸ್ ಅಧಿಕಾರಿ ಏನೂ ತೋಚದೆ ತಲೆ ಚಚ್ಚಿಕೊಳ್ಳುತ್ತಿದ್ದಾಗ ತನ್ನ ಕಣ್ಣ ಮುಂದೆಯೇ ಚರಂಡಿಯನ್ನು ತೊಳೆಯುತ್ತಾ ಕೊಳಕು ಬಟ್ಟೆ ಧರಿಸಿ ಗಬ್ಬುನಾತ ಹೊಡೆಯುತ್ತಿದ್ದ ತೋಟಿಯೊಬ್ಬ ಪೊರಕೆ ಮತ್ತು ಕಸದ ಬುಟ್ಟಿಯೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ ಅಲ್ಲಿಂದ ಹೊರಟು ಹೋಗಿದ್ದು ನೆನಪಾಗಿ ಮೈ ಎಲ್ಲ ಪರಚಿಕೊಳ್ಳುವ ಸ್ಥಿತಿ ಆ ಅಧಿಕಾರಿಯದಾಗಿತ್ತು. ಏಕೆಂದರೆ ಆ ತೋಟಿ ರಾಸ್​ಬಿಹಾರಿಯೇ ಎಂಬುದು ಅವನಿಗೆ ನಿಚ್ಚಳವಾಗಿತ್ತು.

ಮತ್ತೊಮ್ಮೆ ಶವದಂತೆ ಚಟ್ಟದ ಮೇಲೆ ಮಲಗಿದ್ದು ನಾಲ್ವರು ಸಹಕಾರಿಗಳು ಚಟ್ಟವನ್ನು ಹೆಗಲುಗಳ ಮೇಲೆ ಹೊತ್ತುಕೊಂಡು ಮಿಕ್ಕ ಸಹಕಾರಿಗಳ ಜೊತೆ ‘ರಾಮ್ ನಾಮ್ ಸತ್ಯ ಹೈ’ ಎಂದು ಪಠಿಸುತ್ತಾ ಜಾರಿಕೊಂಡಾಗ ಆ ಶವವೇ ರಾಸ್​ಬಿಹಾರಿಯಾಗಿದ್ದನೆಂಬುದು ಆಗ ಅವನ ಅಭಿಮಾನಿಗಳಲ್ಲಿ ಪ್ರಚಲಿತವಿದ್ದ ಮಾತು.

ಪಶ್ಚಿಮ ಬಂಗಾಳ ಸರ್ಕಾರದ ಗೂಢಚಾರ ಇಲಾಖೆಯ ಫೈಲುಗಳಲ್ಲಿ ಹೀಗೊಂದು ಟಿಪ್ಪಣಿ ಇದೆ; ‘…ಸಾಕಷ್ಟು ಎತ್ತರವಿರುವ, ವಿಶಾಲ ನೇತ್ರಗಳ, ಇತ್ತೀಚೆಗೆ ಮೀಸೆಯನ್ನು ಬೋಳಿಸಿಕೊಂಡಿರುವ ಒಂದು ಅಪಘಾತದಲ್ಲಿ ಆದ ಪೆಟ್ಟಿನ ಕಾರಣ ಬಲ ಹಸ್ತದ ಮೂರನೆ ಬೆರಳು ಸೆಟೆದು ನಿಂತಿರುವ 30 ವರ್ಷದ ಈ ವ್ಯಕ್ತಿ ಕೆಲವೊಮ್ಮೆ ಬಂಗಾಳಿಯಂತೆಯೂ ಇನ್ನು ಕೆಲವು ಸಲ ಪಂಜಾಬಿಯಂತೆಯೂ ಉಡುಪು ಧರಿಸಿ ಸಂಚರಿಸುತ್ತಿರುತ್ತಾನೆ. ರಾವಲ್ಪಿಂಡಿ, ಮುಲ್ತಾನ್, ಅಂಬಾಲಾ, ಸಿಮ್ಲಾ, ಅಮೃತಸರ, ಗುರುದಾಸಪುರ, ಫಿರೋಜ್​ಪುರ, ಝೀಲಮ್ ಮತ್ತು ಲಾಹೋರ್​ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾನೆ. ಬಂಗಾಳಿ ಕಾಲನಿಗಳನ್ನು, ಹಿಂದೂ ಶಿವಾಲಯಗಳನ್ನು, ಛತ್ರಗಳನ್ನು, ರೈಲು ನಿಲ್ದಾಣಗಳನ್ನು ಎಚ್ಚರಿಕೆಯಿಂದ ಜಾಲಾಡಬೇಕು (File no. 430/14 pf.records of Government of West Bengal)

ಗದರ್ ಎಂಬ ಕ್ರಾಂತಿ ಕೂಟ: 1912ರಿಂದ 1919ರ ಜಲಿಯನ್​ವಾಲಾ ಬಾಗ್ ದುರಂತದವರೆಗೆ ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೇಲ್ ಓಡ್ಕೈಯರ್ (India As I Knew It) ಎಂಬ ತನ್ನ ಪುಸ್ತಕದಲ್ಲಿ ರಾಸ್​ಬಿಹಾರಿಯನ್ನು ಕುರಿತು ಸಾಕಷ್ಟು ಉಲ್ಲೇಖಗಳನ್ನು ಮಾಡಿ ಅವನೇ ಕ್ರಾಂತಿಕಾರಿ ಆಂದೋಲನದ ನೇತಾರ ಎಂದು ಸ್ಪಷ್ಪಪಡಿಸುತ್ತಾ ಒಂದು ಕಡೆ ಹೀಗೆ ಬರೆದಿದ್ದಾನೆ: ‘….ಲಾಲಾ ಹರದಯಾಳನು ಅಮೆರಿಕಾಕ್ಕೆ ತೆರಳಿದ ಮೇಲೆ ಯುವಜನರ ರಾಜಕೀಯ ಶಿಕ್ಷಣದ ಹೊಣೆಯನ್ನು ದೆಹಲಿಯ ಕೇಂಬ್ರಿಡ್ಜ್ ಮಿಷನ್ ಸ್ಕೂಲಿನ ನಿಷ್ಠಾವಂತ ಶಿಕ್ಷಕ ಅಮೀರ್​ಚಂದ್ ಹಾಗೂ ಡೆಹ್ರಾಡೂನ್​ನಲ್ಲಿ ಅರಣ್ಯ ಇಲಾಖೆಯಲ್ಲಿ ಗುಮಾಸ್ತನಾಗಿದ್ದ ರಾಸ್​ಬಿಹಾರಿ ಎಂಬ ಬಂಗಾಳಿಯ ಪಾಲಿಗೆ ಬಂತು. ಈ ಇಬ್ಬರೂ ಇಂಡಿಯಾದ ಷಡ್ಯಂತ್ರಗಳ ಪ್ರಮುಖ ಪ್ರೇರಕರಾದರು. ಈ ಜನರ ಪೈಕಿ ಸಾಕಷ್ಟು ಬಂಗಾಳಿಗಳೂ ಇದ್ದು ಅವರು ಬಂಗಾಳದಿಂದ ಹಣ ಮತ್ತು ಬಾಂಬ್​ಗಳನ್ನು ತರುತ್ತಿದ್ದರು. ಈ ಜನರೇ 1912ರ ಡಿಸೆಂಬರ್​ನಲ್ಲಿ ವೈಸ್ರಾಯರ ಮೇಲೆ ಬಾಂಬ್ ಹಾಕಿದ್ದು. ಅಪರಾಧ ತನಿಖಾ ವಿಭಾಗವು ಅತ್ಯಂತ ಚಾಣಾಕ್ಷತೆಯಿಂದ ಈ ಷಡ್ಯಂತ್ರವನ್ನು ಭೇದಿಸಿತು. ದೀನಾನಾಥ್ ಎಂಬುವನು ಅಪೂ›ವರ್ ಆದರೆ ಇತರ ಮೂವರನ್ನು ಗಲ್ಲಿಗೆ ಹಾಕಲಾಯಿತು. ಆದರೆ ರಾಸ್​ಬಿಹಾರಿ ಮಾತ್ರ ಮಹಾಯುದ್ಧದ ವೇಳೆ ಪರಾರಿಯಾಗಿ ತನ್ನ ಬರ್ಬರ ಯೋಜನೆಗಳನ್ನು ಮುಂದುವರಿಸಿದ್ದಾನೆ. ಈಗಲೂ ಅವನ ಪತ್ತೆ ಆಗಿಲ್ಲ….’

ಮೊದಲನೆಯ ಮಹಾಯುದ್ಧ 1914ರ ಜುಲೈನಲ್ಲಿ ಆರಂಭವಾಯಿತು. ರಾಸ್​ಬಿಹಾರಿ, ಬಾಘಾ ಜತೀನ್ ಮೊದಲಾದ ಕ್ರಾಂತಿನಾಯಕರು ಬ್ರಿಟಿಷ್ ಸರ್ಕಾರವನ್ನು ಬುಡಮೇಲು ಮಾಡಲು ಇದೇ ಸುಸಮಯವೆಂದು ನಿರ್ಧರಿಸಿದರು. ಅದಕ್ಕಾಗಿ ಯೋಜನೆಗಳೂ ಆರಂಭಗೊಂಡವು. ಅಮೆರಿಕಾ, ಕೆನಡಾ, ಜರ್ಮನಿಗಳಲ್ಲಿದ್ದ ಭಾರತೀಯ ಯುವ ಕ್ರಾಂತಿಕಾರಿಗಳು ಸಂಘಟಿತರಾಗಿದ್ದರು. ಲಾಲಾ ಹರ್​ದಯಾಳರ ನಾಯಕತ್ವದಲ್ಲಿ ಗದರ್ ಎಂಬ ಸಂಘಟನೆ ರೂಪುಗೊಂಡಿತ್ತು.

18 ವರ್ಷದ ಸಿಡಿಲ ಮರಿಯಂತಿದ್ದ ಕರ್ತಾರ್​ಸಿಂಗ್ ಸರಾಬಾ, ಮಹಾರಾಷ್ಟ್ರ ಮೂಲದ ವಿಷ್ಣು ಗಣೇಶ ಪಿಂಗ್ಳೆ ಅಮೆರಿಕಾದಿಂದ ಭಾರತಕ್ಕೆ ಬಂಡಾಯದ ಸಲುವಾಗಿಯೇ ದೃಢ ಸಂಕಲ್ಪ ತೊಟ್ಟು ಬಂದಿದ್ದರು. ಅವರು 1914ರ ನವೆಂಬರ್​ನಲ್ಲಿ ಕಲ್ಕತ್ತೆಗೆ ಹೋಗಿ ಬಾಘಾ ಜತೀನನೊಂದಿಗೆ ಸಮಾಲೋಚನೆ ನಡೆಸಿದರು. ಅವರ ಎಲ್ಲ ವಿಚಾರಗಳನ್ನು ಸಾವಧಾನಚಿತ್ತನಾಗಿ ಕೇಳಿಸಿಕೊಂಡ ಬಾಘಾ ಜತೀನ್ ಅವರನ್ನು ವಾರಾಣಸಿಯಲ್ಲಿದ್ದ ರಾಸ್​ಬಿಹಾರಿಯನ್ನು ಕಾಣುವಂತೆ ತಿಳಿಸಿ ಅಲ್ಲಿಗೆ ಕಳುಹಿಸಿದ.

ರಾಸ್​ಬಿಹಾರಿ ಹಾಗೂ ಬಾಘಾ ಜತೀನರು ಆ ದಿನಗಳಲ್ಲಿ ರೂಪಿಸಿದ ಯೋಜನೆ ಹೀಗಿತ್ತು. ಸೈನ್ಯದ ವಿವಿಧ ರೆಜಿಮೆಂಟುಗಳನ್ನು ಸಂರ್ಪಸಿ ಒಂದೇ ನಿಶ್ಚಿತ ದಿವಸ ಸೈನಿಕರು ತಂತಮ್ಮ ಪಾಳೆಯಗಳಲ್ಲಿ ಬಂಡೇಳುವಂತೆ ಮಾಡುವುದು. ಇದು ಬೃಹತ್ ಯೋಜನೆಯಾಗಿದ್ದಂತೆ ಸವಾಲಿನ ಕೆಲಸವೂ ಆಗಿತ್ತು. ಆ ಕೆಲಸಕ್ಕೆ ಕರ್ತಾರ್ ಸಿಂಗ್ ಸರಾಬಾ ಹಾಗೂ ವಿಷ್ಣು ಪಿಂಗಳೆಯನ್ನು ನೇಮಿಸಲಾಗಿತ್ತು. ಅಂತೆಯೇ ಸ್ವತಃ ರಾಸ್​ಬಿಹಾರಿ ಇನ್ನು ಕೆಲವರನ್ನು ಹಲವಾರು ಹಳ್ಳಿಗಳಿಗೆ ಕಳುಹಿಸಿ ಗ್ರಾಮೀಣ ಜನರೂ ಅದೇ ವೇಳೆ ಬಂಡೇಳುವಂತೆ ಸಂಘಟನೆ ಮಾಡಿದ್ದ. ಒಂದೇ ಸಮಯದಲ್ಲಿ ಲಾಹೋರ್, ಫಿರೋಜ್​ಪುರ್, ರಾವಲ್ಪಿಂಡಿಗಳಲ್ಲಿ ಕ್ರಾಂತಿ ಕಹಳೆ ಮೊಳಗಿಸಬೇಕು; ಅದರ ಹಿಂದೆಯೇ ಢಾಕಾ, ವಾರಾಣಸಿ, ಜಬ್ಬಲಪುರಗಳಲ್ಲಿ ಅದೇ ಕೆಲಸ ನಡೆಯಬೇಕೆಂದೂ ನಿಶ್ಚಯಿಸಲಾಗಿತ್ತು. ಈ ನಿಟ್ಟಿನಲ್ಲಿ ಅಪಾರ ಕೆಲಸವೂ ನಡೆದಿದ್ದು ಅನೇಕ ದಂಡು ಪಾಳೆಯಗಳಲ್ಲಿ ಸೈನಿಕರು ಆ ಸಮಯಕ್ಕಾಗಿ ಕಾಯುತ್ತಿದ್ದುದೂ ಉಂಟು.

ಕೃಪಾಲ್ ಸಿಂಗನ ದೇಶದ್ರೋಹ: 1915ರ ಜನವರಿ ತಿಂಗಳ ಆರಂಭದ ದಿನಗಳಲ್ಲಿ ವಾರಣಾಸಿಯಲ್ಲಿ ಒಂದು ಮುಖ್ಯ ಸಭೆ ನಡೆದು ಮುಂದಿನ ಕ್ರಾಂತಿಯ ರೂಪರೇಷೆಗಳನ್ನು ಕುರಿತು ರ್ಚಚಿಸಲಾಯಿತು. ರಾಸ್​ಬಿಹಾರಿ, ಬಾಘಾ ಜತೀನ್, ನರೇನ್ ಭಟ್ಟಾಚಾರ್ಯ, ಅತುಲಕೃಷ್ಣ ಘೊಷರಿದ್ದ ಈ ಸಭೆಯಲ್ಲಿ ಫೋರ್ಟ್ ವಿಲಿಯಂನ 16ನೇ ರಜಪೂತ್ ರೈಫಲ್ಸ್​ನ ಹವಲ್ದಾರ್ ಮಾನ್ಷಾಸಿಂಗನನ್ನು ಜತೀನನ ಪಂಗಡದವರು ಸಂರ್ಪಸಿ ಯುದ್ಧಕ್ಕೆ ಸಿದ್ಧಗೊಳಿಸಿದ ಸಂಗತಿ ತಿಳಿಸಲಾಯಿತು. ಜೊತೆಗೆ ಜತೀನ್ ತಾನು ನಿರೀಕ್ಷಿಸುತ್ತಿದ್ದ ಜರ್ಮನ್ ಶಸ್ತ್ರಾಸ್ತ್ರಗಳು ಕೈ ಸೇರುವವರೆಗೆ ಬಂಡಾಯವನ್ನು ತಡೆಹಿಡಿಯಬೇಕೆಂದು ಅಭಿಪ್ರಾಯಪಟ್ಟ.

ಆದರೆ ಪಂಜಾಬಿನ ಕ್ರಾಂತಿಕಾರಿಗಳ ಒತ್ತಡ ಹೆಚ್ಚಾಗಿತ್ತು. ಅದಕ್ಕೆ ಕಾರಣ 1915ರ ಜನವರಿ ವೇಳೆಗೆ (ಒಂದು ಅಂದಾಜು ಪ್ರಕಾರ) 8000 ಮಂದಿ ಗದರ್ ಯೋಧರು ಅಮೆರಿಕಾದಿಂದ ಪಂಜಾಬಿಗೆ ಹಿಂದಿರುಗಿದ್ದರು. ಅವರು ಅಶಾಂತಿಯಿಂದ ಚಡಪಡಿಸುತ್ತಿದ್ದರು. ಆ ಕಾರಣ 1915ರ ಫೆಬ್ರವರಿ 21ರಂದು ನಿಶ್ಚಿತ ದಂಡು ಪಾಳೆಯಗಳಲ್ಲಿ ಸೈನಿಕರು ಬಂಡೆದ್ದು ಬ್ರಿಟಿಷ್ ಸೈನ್ಯಾಧಿಕಾರಿಗಳನ್ನು ಕೊಂದು ಹಾಕಬೇಕೆಂದು ನಿರ್ಧಾರವಾಯಿತು.

ರಾಸ್​ಬಿಹಾರಿ ಲಾಹೋರ್​ನಲ್ಲಿ ಒಂದು ಸ್ಥಳದಲ್ಲಿ ಅಡಗಿಕೊಂಡು ಬಂಡಾಯದ ಸೂತ್ರಗಳನ್ನು ಚಲಾಯಿಸುತ್ತಿದ್ದ. ಆಗ ಹಡಗಿನಲ್ಲಿ ರಂಧ್ರ ಒಂದು ಉಂಟಾಯಿತು; ಬಿರುಕು ಬಿಟ್ಟಿತು.

ಕ್ರಾಂತಿಕಾರಿಗಳ ಗುಂಪಿನಲ್ಲೇ ಇದ್ದ ಕೃಪಾಲ್ ಸಿಂಗ್ ಎಂಬುವನು ಮನೆಮುರುಕನಾದ. ಫೆಬ್ರವರಿ 15ರಂದು ರಾಸ್​ಬಿಹಾರಿ ಇದ್ದ ಮೋಚಿಗೇಟ್ ಸಮೀಪದ ಸ್ಥಳದಲ್ಲಿ 15 ಮಂದಿ ಕ್ರಾಂತಿಯ ಮುಖ್ಯ ನಾಯಕರು ಸಭೆ ಸೇರಿದ್ದನ್ನು ಈ ಕೃಪಾಲ್ ಸಿಂಗ್ ಪೊಲೀಸರಿಗೆ ತಿಳಿಸಿಬಿಟ್ಟ. ಹಾಗೂ ಅವರ ಮೊದಲು ನಿಶ್ಚಯಿಸಿದ್ದ 1915ರ ಫೆಬ್ರವರಿ 21ಕ್ಕೆ ಬದಲಾಗಿ ಬಂಡಾಯವನ್ನು 19ಕ್ಕೆ ಹಿಂದೂಡಿದ್ದಾರೆಂದು ತಿಳಿಸಿದ. ಸರ್ಕಾರ ಎಚ್ಚರಗೊಂಡು ಈ ಬಂಡಾಯವನ್ನು ಮಟ್ಟ ಹಾಕುವುದರಲ್ಲಿ ಯಶಸ್ವಿಯಾಯಿತು. ಯಾವ ಯಾವ ಸೈನಿಕ ತುಕಡಿಗಳೊಂದಿಗೆ ಕ್ರಾಂತಿಕಾರಿಗಳ ಸಂಬಂಧವಿತ್ತೋ ಅವುಗಳನ್ನು ಉನ್ನತ ಸೈನ್ಯಾಧಿಕಾರಿಗಳು ನಿಃಶಸ್ತ್ರಗೊಳಿಸಿದರು.

ಕೃಪಾಲ್ ಸಿಂಗನ ಮಾಹಿತಿ ಹಿಡಿದು ಲಾಹೋರಿನ ಹತ್ತಾರು ಮನೆಗಳಲ್ಲಿ ರಾಸ್​ಬಿಹಾರಿಗಾಗಿ ಹುಡುಕಲಾಯಿತು. ಆದರೆ ಎಂದಿನಂತೆ, ತನ್ನೆಲ್ಲ ಪ್ರಯತ್ನಗಳೂ ನೀರಿನಲ್ಲಿ ಹೋಮ ಮಾಡಿದಂತಾದ ಅನಂತರ, ಲಾಹೋರಿನಿಂದ ಜಾರಿಕೊಂಡ ರಾಸ್​ಬಿಹಾರಿ ನಿರಾಶೆಗೊಳ್ಳದೆ ಮುಂದಿನ ಯೋಜನೆಗಳನ್ನು ಕುರಿತು ಚಿಂತಿಸಲಾರಂಭಿಸಿದ. ಒಂದು ತಿಂಗಳ ಕಾಲ ವಾರಾಣಸಿಯಲ್ಲೇ ತಂಗಿದ್ದು ಸೋಲಿನಿಂದ ನಿರಾಶೆಗೊಂಡಿದ್ದ ಕ್ರಾಂತಿಕಾರಿ ಸೋದರರ ಮನಸ್ಸುಗಳಲ್ಲಿ ಸ್ಪೂರ್ತಿ ತುಂಬಿ ಮತ್ತೆ ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸ ಮಾಡಿದ. ಆಗ ರಾಸ್​ಬಿಹಾರಿಯ ಮುಂದಿನ ಹೆಜ್ಜೆ ಕುರಿತು ಸಹಕಾರಿಗಳ ನಡುವೆ ಚಿಂತನ ಮಂಥನ ನಡೆಯಿತು. ಎಲ್ಲರೂ ಒಮ್ಮತದಿಂದ ರಾಸ್​ಬಿಹಾರಿ ಭಾರತವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿ ಅಲ್ಲಿಂದ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಬೇಕೆಂದು ಸಲಹೆ ನೀಡಿದರು. ರಾಸ್​ಬಿಹಾರಿಗೂ ಅದು ಸರಿ ಎನ್ನಿಸಿತು. ಅದಕ್ಕಾಗಿ ಸಿದ್ಧತೆ ಮಾಡಲಾರಂಭಿಸಿದ. ತನ್ನ ನೆಲೆಯನ್ನು ಕಲ್ಕತ್ತೆಗೆ ಸ್ಥಳಾಂತರಿಸಿದ.

(ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top