Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ತ್ರಿವಳಿ ತಲಾಕ್ ವಿರುದ್ಧ ಕಾನೂನು ರಚಿಸಲು ಹಿಂದೇಟೇಕೆ?

Tuesday, 30.05.2017, 3:05 AM       No Comments

ಮುಸ್ಲಿಂ ರಾಷ್ಟ್ರವಾಗಿರುವ ಪಾಕಿಸ್ತಾನ ಕೂಡ ತಲಾಕ್ ಪದ್ಧತಿಯಲ್ಲಿ ಬದಲಾವಣೆ ತರಲು ಆಲೋಚಿಸುತ್ತಿದೆ. ಹೀಗಿರುವಾಗ ನಮ್ಮಲ್ಲಿ ತಲಾಕ್ ನಿಷೇಧಕ್ಕೆ ಹಿಂದೇಟು ಹಾಕುವುದು ಎಷ್ಟು ಸರಿ? ಮುಸ್ಲಿಂ ಮಹಿಳೆಯರೇ ತ್ರಿವಳಿ ತಲಾಕ್ ವಿರೋಧಿಸಿ ಆಂದೋಲನ ನಡೆಸುತ್ತಿದ್ದಾರೆ. ಈಗಲಾದರೂ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಬಗ್ಗೆ ಚಿಂತನೆ ನಡೆಸಲಿ.

ತ್ರಿವಳಿ ತಲಾಕ್ ಪದ್ಧತಿ ಬಗ್ಗೆ ಇದೀಗ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆಯೂ ನಡೆಯುತ್ತಿದೆ. ಜತೆಗೆ ಮುಸ್ಲಿಂ ಮಹಿಳೆಯರೇ ಈ ಪದ್ಧತಿ ವಿರುದ್ಧ ಸಿಡಿದು ನಿಂತಿದ್ದು, ಆಂದೋಲನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ವಿರುದ್ಧ ಕಾನೂನು ರಚನೆಯ ಅಗತ್ಯವನ್ನು ಮನಗಂಡಿರುವುದು ಶ್ಲಾಘನೀಯ ವಿಚಾರ. ಮುಸ್ಲಿಂ ಸಮುದಾಯ ತಮ್ಮ ವೈಯಕ್ತಿಕ ಕಾನೂನಿನಲ್ಲಿ ಬದಲಾವಣೆ ತರುವುದಕ್ಕೆ ಹಿಂದೇಟು ಹಾಕಿದ್ದಲ್ಲಿ ತಲಾಕ್ ಪದ್ಧತಿಯನ್ನು ನಿಷೇಧಿಸುವಂತಹ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಇತ್ತೀಚೆಗೆ ಹೇಳಿದ್ದರು.

ನಿಕಾಹ್(ಮದುವೆ) ಎಂದರೆ ಅದೊಂದು ಧಾರ್ವಿುಕ ಪ್ರಕ್ರಿಯೆ. ಪರಿವಾರಗಳ ಬಾಂಧವ್ಯ, ರೀತಿ ನೀತಿ, ಪರಂಪರೆಗಳ ಮೂಲಕ ಅಲ್ಲಿ ಸಾಮಾಜಿಕ ಸಂಬಂಧ ಬಲಿಷ್ಠವಾಗುತ್ತದೆ. ಎರಡು ಕುಟುಂಬಗಳನ್ನು ಜೋಡಿಸುವ ಬಂಧನವದು. ಈ ದೃಷ್ಟಿಯಿಂದ ನಿಕಾಹ್​ಗೆ ಭಾರಿ ಮಹತ್ವವಿದೆ. ಆದರೆ ತಲಾಕ್​ನ ಕಾರಣದಿಂದಾಗಿ ಮುಸ್ಲಿಂ ಸಮಾಜದ ಬಗ್ಗೆ, ಅದರ ರೀತಿ ರಿವಾಜುಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇನ್ನು ತಲಾಕ್ ನೀಡಲಾದ ಮಹಿಳೆಯ ಪರಿವಾರದ ಸ್ಥಿತಿಯಂತೂ ಶೋಚನೀಯ. ಈ ಸಮಸ್ಯೆಯಿಂದ ಹೊರಬರಲು ಮಹಿಳೆ ಭಾರಿ ಸಂಘರ್ಷವನ್ನೇ ನಡೆಸಬೇಕಾಗುತ್ತದೆ. ಇಷ್ಟೆಲ್ಲ ಸಮಸ್ಯೆ, ಚರ್ಚೆಗಳು, ವಿರೋಧಗಳು ಎದುರಾಗುತ್ತಿದ್ದರೂ ತಲಾಕ್​ನ ಪ್ರಮಾಣ ಸಮಾಜದಲ್ಲಿ ಏರಿಕೆಯಾಗುತ್ತಲೇ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸಮಾಜ ಮತ್ತು ಸರ್ಕಾರ ಎರಡಕ್ಕೂ ದೊಡ್ಡ ಸವಾಲಾಗಿದೆ.

ತಲಾಕ್ ವಿಚಾರದಲ್ಲಿ ನ್ಯಾಯಾಲಯದಲ್ಲಾಗುತ್ತಿರುವ ವಿಚಾರಣೆ ಕೂಡ ಪರಸ್ಪರ ವಿರೋಧ ಮತ್ತು ಭ್ರಮೆಯನ್ನು ಹುಟ್ಟಿಸುವಂಥದ್ದಾಗಿದೆ. ಯಾವುದೋ ಒಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ಉದಾಹರಣೆ ರೂಪದಲ್ಲಿ ಮಂಡಿಸಿದರೆ ಅಂತಹದ್ದೇ ಪ್ರಕರಣದ ಬಗ್ಗೆ ಇನ್ನೊಂದು ನ್ಯಾಯಾಲಯದಲ್ಲಿ ನೀಡಿರುವ ತೀರ್ಪು ಭಿನ್ನವಾಗಿಯೇ ಇರುತ್ತದೆ. ಹೀಗಾಗಿ ಯಾವ ಪ್ರಕರಣವನ್ನು, ಯಾವ ತೀರ್ಪನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬ ಗೊಂದಲಗಳು ಹುಟ್ಟಿಕೊಳ್ಳುತ್ತವೆ.

ವೈಯಕ್ತಿಕ ಕಾನೂನು ಮತ್ತು ನ್ಯಾಯಾಲಯದಲ್ಲಿ ಇಂತಹ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಇದರಿಂದ ಯಾವ ಪ್ರಕರಣವನ್ನು ಆಧಾರವಾಗಿಟ್ಟುಕೊಳ್ಳಬೇಕು, ಯಾವ ದೃಷ್ಟಿಕೋನದಲ್ಲಿ ವಿಚಾರಣೆ ನಡೆಸಬೇಕು ಎಂಬ ಬಗ್ಗೆಯೇ ಹತ್ತು ಬಾರಿ ಯೋಚಿಸಬೇಕಾಗುತ್ತದೆ. ಯಾವುದೋ ಒಂದು ಉದಾಹರಣೆಯನ್ನು ಆಧಾರವಾಗಿಟ್ಟುಕೊಂಡು ತೀರ್ಪು ನೀಡಿದರೆ ಅದರ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ. ಹೀಗಾಗಿ ತಲಾಕ್​ನ ಪ್ರಕರಣಗಳು ಸಮಾಜ ಮತ್ತು ಕಾನೂನು ಎರಡಕ್ಕೂ ಅಸಹಾಯಕ ಪರಿಸ್ಥಿತಿ ನಿರ್ಮಾಣ ಮಾಡಿವೆ. ಇಂಥ ವಿರೋಧಾಭಾಸಗಳ ಕಾರಣದಿಂದಾಗಿಯೇ ಮೂಲ ವಿಚಾರ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇದರಿಂದ ಸಾಮಾಜಿಕ ಸುರಕ್ಷೆ ಕಷ್ಟಕರವಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಪಾಕ್​ನಲ್ಲೂ ವಿಚಾರಣೆ: ನಮ್ಮ ದೇಶದಲ್ಲಿ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠ ತ್ರಿವಳಿ ತಲಾಕ್ ಬಗ್ಗೆ ವಿಚಾರಣೆ ನಡೆಸುತ್ತಿರುವಂತೆಯೇ ಪಾಕಿಸ್ತಾನದ ಸವೋಚ್ಚ ನ್ಯಾಯಾಲಯವೂ ಮೇ 11ರಿಂದ 19ರವರೆಗೆ ತ್ರಿವಳಿ ತಲಾಕ್ ಬಗ್ಗೆ ವಿಚಾರಣೆ ನಡೆಸಿದೆ. ಪಂಚ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಿದೆ. ಇದರಲ್ಲಿ ಎತ್ತಲಾಗಿರುವ ಮೊದಲ ಪ್ರಶ್ನೆಯೆಂದರೆ, ಯಾವುದೇ ಸಮುದಾಯದ ವೈಯಕ್ತಿಕ ಕಾನೂನು ಸಂವಿಧಾನದ ಅನುಚ್ಛೇದ 13ರ ಅಡಿಯಲ್ಲಿ ಬರುತ್ತದೆಯೇ? ಎಂಬುದಾಗಿದೆ. ಎರಡನೆಯ ಪ್ರಶ್ನೆ ತ್ರಿವಳಿ ತಲಾಕ್, ನಿಕಾಹ್, ಹಲಾಲಾ ಮತ್ತು ಬಹುವಿವಾಹ ಮುಂತಾದ ಪದ್ಧತಿಗಳು ಸಂವಿಧಾನ ಅನುಚ್ಛೇದ 25ರ ಅಡಿಯಲ್ಲಿ ನಾಗರಿಕರಿಗೆ ನೀಡಿರುವ ಧಾರ್ವಿುಕ ಅಧಿಕಾರಗಳ ಅನ್ವಯ ಬರಲಿವೆಯೇ? ಎಂಬುದು. ಅದೇನಿದ್ದರೂ, ಪಾಕ್​ನಲ್ಲೂ ಈ ಎಲ್ಲ ಪದ್ಧತಿಗಳ ಬಗ್ಗೆ ಮರುಚಿಂತನೆ ನಡೆದಿದ್ದು, ಜನರು ಆಧುನಿಕ ವಿಚಾರಧಾರೆಗಳತ್ತ ವಾಲುತ್ತಿದ್ದಾರೆ. ಮುಖ್ಯವಾಗಿ, ಮಹಿಳೆಯರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತರಿಸುತ್ತಿದ್ದಾರೆ.

ಉತ್ತರಾಖಂಡದ ಸಾಯಿರಾ ಬಾನೋ ಅವರು ತ್ರಿವಳಿ ತಲಾಕ್, ನಿಕಾಹ್, ಹಲಾಲಾ ಮತ್ತು ಬಹುವಿವಾಹ ಮುಂತಾದ ಪದ್ಧತಿಗಳನ್ನು ಕೊನೆಗೊಳಿಸಬೇಕೆಂದು ಸವೋಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯ ತಿಳಿಸುವಂತೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಾಲಯ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ನಿಷೇಧದ ಪರ ಅಭಿಪ್ರಾಯ ಮಂಡಿಸಿದೆ. ಒಂದು ವೇಳೆ ನ್ಯಾಯಾಲಯ ವೈಯಕ್ತಿಕ ಕಾನೂನನ್ನು ಸಂವಿಧಾನದ ಅನುಚ್ಛೇದ 13ರಲ್ಲಿ ಅಂತರ್ಗತ ಕಾನೂನು ಎಂದು ಪರಿಗಣಿಸಿದಲ್ಲಿ ಇದರಲ್ಲಿ ಸುಧಾರಣೆ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸಿಗುತ್ತದೆ. ಈ ರೀತಿ ನಡೆದಲ್ಲಿ ತ್ರಿವಳಿ ತಲಾಕ್ ಎಂಬ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಸಿಗಲಿದೆ. ಸದ್ಯ ಸಂತ್ರಸ್ತ ಮಹಿಳೆಯರಿಗೆ ಇಂತಹ ಸಮಸ್ಯೆಯನ್ನು ಎದುರಿಸುವುದು ಅನಿವಾರ್ಯವಾದರೂ ಮುಂದಿನ ದಿನಗಳಲ್ಲಿ ಈ ಸಮಸ್ಯೆಯ ಜಟಿಲತೆ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ ಅಥವಾ ಈ ಸಮಸ್ಯೆಗೆ ಶಾಶ್ವತ ಪರಿಹಾರಗಳೂ ಸಿಗುವ ಸಾಧ್ಯತೆಯೂ ಇದೆ.

ಬದಲಾಗುತ್ತಿದೆ ನಿಲುವು: ಈಗಿನ ಬೆಳವಣಿಗೆಗಳನ್ನು ನೋಡಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಗೊಂದಲಕ್ಕೆ ಸಿಲುಕಿದೆ. ತನ್ನ ಅಧಿಕಾರ ಉಳಿಸಿಕೊಳ್ಳುವುದು ಹೇಗೆ ಎಂದು ತಲೆ ಕೆಡಿಸಿಕೊಳ್ಳುತ್ತಿದೆ. ಮುಸ್ಲಿಂ ವೈಯಕ್ತಿಕ ನ್ಯಾಯಮಂಡಳಿಯ ಸದಸ್ಯ ಕಲ್ಬೆ ಸಾದಿಕ್ ಅವರು ಸರ್ಕಾರ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ತಲೆ ಹಾಕುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಮಂಡಳಿಯೇ ತ್ರಿವಳಿ ತಲಾಕ್ ವ್ಯವಸ್ಥೆಯನ್ನು ಅಂತ್ಯಗೊಳಿಸಲಿದೆ ಎಂದೂ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಅನುಭವದ ಆಧಾರದಲ್ಲಿ ಹೇಳುವುದಾದರೆ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗಾಗಲಿ, ಬಹುತೇಕ ಮುಸ್ಲಿಂ ಮುಖಂಡರಿಗಾಲಿ ತ್ರಿವಳಿ ತಲಾಕ್ ಸಮಸ್ಯೆಯ ತೀವ್ರತೆಯ ಅರಿವಿಲ್ಲ. ಸುನ್ನಿ, ಶಿಯಾ, ದೇವಬಂಧಿ ಯಾರೆ ಆಗಿರಲಿ ಅವರು ಈ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಆದರೆ ತಲಾಕ್ ಸಮಾಜಕ್ಕೆ ದೊಡ್ಡ ಸಮಸ್ಯೆಯಾಗಿದೆ ಎಂಬುದನ್ನು ಅವರ ಅರಿವಿಗೆ ತರುವ ಅಗತ್ಯವಿದೆ.

ಸಮಸ್ಯೆಯ ತೀವ್ರತೆ ಅರಿಯಬೇಕು: ತ್ರಿವಳಿ ತಲಾಕ್​ನಿಂದ ಮಹಿಳೆಯರಷ್ಟೇ ಅಲ್ಲ ಮಕ್ಕಳೂ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳಿಗೆ ತಾಯಿ ಪ್ರೀತಿ ತೀರಾ ಅಗತ್ಯ. ತಾಯಿಯ ಮಮತೆ ಅವರನ್ನು ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ತಲಾಕ್​ನಿಂದಾಗಿ ಮಕ್ಕಳು ಅಮ್ಮನಿಂದ ದೂರವಾಗಿ ಬಿಡುತ್ತಾರೆ. ಬೆಳೆಯುವ ವಯಸ್ಸಿನಲ್ಲಿ ತಾಯಿಯ ಪ್ರೀತಿಯಿಂದ ವಂಚಿತರಾಗುವ ಮಕ್ಕಳು ಹಲವು ಬಗೆಯ ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆ ಸಂವೇದನಾಶೀಲ ವ್ಯಕ್ತಿಯನ್ನು ವಿಚಲಿತಗೊಳಿಸುತ್ತದೆ. ಭಾವನಾತ್ಮಕ ವ್ಯಕ್ತಿಯೊಬ್ಬನ ಹೃದಯ ಇಂತಹ ಘಟನೆಯಿಂದ ಕರಗದಿರಲು ಸಾಧ್ಯವಿಲ್ಲ. ಒಂದು ವೇಳೆ ತಾಯಿಯಿಂದ ಬೇರ್ಪಟ್ಟ ಮಗುವಿನ ಆಕ್ರಂದನ ನೋಡಿಯೂ ತಂದೆಯೊಬ್ಬನ ಮನಸ್ಸು ಕರಗುವುದಿಲ್ಲ ಎಂದಾದರೆ ಆತ ಅಪ್ಪ ಎಂದು ಕರೆಯಲು ಅರ್ಹನೇ? ಆದರೆ ಮುಸ್ಲಿಂ ಸಮಾಜವನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿಕೊಂಡಿರುವ ಕೆಲ ನಾಯಕರಿಗೆ ಇಂತಹ ಸಮಸ್ಯೆಯ ತೀವ್ರತೆ ಅರಿವಿಗೆ ಬರುವುದೇ ಇಲ್ಲವಲ್ಲ ಎಂಬುದು ಕಳವಳದ ಸಂಗತಿ.

ತ್ರಿವಳಿ ತಲಾಕ್ ವಿಚಾರದಲ್ಲಿ ಬದಲಾವಣೆ ಅಗತ್ಯವಾಗಿದೆ ಎಂಬ ಕೂಗು ಮುಸ್ಲಿಂ ಸಮುದಾಯದೊಳಗಿನಿಂದಲೇ ತೀವ್ರವಾಗುತ್ತಿರುವಾಗ ಅದಕ್ಕೆ ಕಿವಿಗೊಟ್ಟು, ಸ್ಪಂದಿಸುವ ಕೆಲಸವಾಗಬೇಕು. ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಸ್ಲಿಂ ಮಹಿಳೆಯರೇ ಬೀದಿಗೆ ಇಳಿದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಕಳೆದಿದ್ದರೂ ಬದಲಾಗದಿರುವ ಅವರ ಸ್ಥಿತಿಗತಿಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಾಗೃತ ಹಾಗೂ ಪ್ರಜ್ಞಾವಂತ ಮುಸ್ಲಿಂ ಮಹಿಳೆಯರು ಜತೆಗೆ ವಿಚಾರಶೀಲ ವ್ಯಕ್ತಿಗಳು ಮುಂದೆ ಬಂದಿದ್ದಾರೆ. ಇಂತಹ ವಾತಾವರಣದಲ್ಲಿ ನ್ಯಾಯವ್ಯವಸ್ಥೆ ಕೂಡ ಪ್ರಮುಖ ಪಾತ್ರ ನಿಭಾಯಿಸಲಿದೆ. ದೇಶಾದ್ಯಂತ ಆಗುತ್ತಿರುವ ಚರ್ಚೆಗಳು ಮತ್ತು ಜನಮತಗಳು, ನಿರ್ವಣವಾಗುತ್ತಿರುವ ಒತ್ತಡ ಮುಂತಾದವುಗಳನ್ನು ಗಮನಿಸಿದರೆ ಮುಸ್ಲಿಂ ಮಹಿಳೆಯರ ದಶಕಗಳ ಸಂಕಷ್ಟಕ್ಕೆ ಇದೀಗ ಪರಿಹಾರ ಸಿಗುವ ಮುನ್ಸೂಚನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ಪ್ರಗತಿಶೀಲ ವಿಚಾರಧಾರೆ ಹೊಂದಿರುವ ವ್ಯಕ್ತಿಗಳಿಂದ ಬದಲಾವಣೆಗೆ ಪ್ರೋತ್ಸಾಹ ಸಿಗುತ್ತಿದೆ ಎಂಬುದು ಸ್ಪಷ್ಟ. ಜತೆಗೆ ಮುಸ್ಲಿಂ ಮಹಿಳೆಯರೇ ಹೋರಾಟದ ಮುಂಚೂಣಿಗೆ ಬಂದಿರುವುದರಿಂದ ಒಂದಲ್ಲ ಒಂದು ಉತ್ತಮ ಬದಲಾವಣೆ ಆಗಲಿದೆ ಎಂಬುದು ಖಚಿತವಾಗಿದೆ. ತಲಾಕ್ ಎಂಬುದು ಕೇವಲ ಪತಿ ಮತ್ತು ಪತ್ನಿಯ ನಡುವಿನ ಸಮಸ್ಯೆಯಲ್ಲ, ಇಡೀ ಸಮಾಜಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂಬುದು ಮನದಟ್ಟಾಗುತ್ತಿದೆ.

ಜಾತ್ಯತೀತ ಭಾರತದಲ್ಲಿ ಹಲಾಲಾ, ಬಹುವಿವಾಹ ಮತ್ತು ತಲಾಕ್ ವಿರುದ್ಧದ ಕಾನೂನು ರಚನೆಗೆ ವಿರೋಧ, ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಖೇದಕರ ವಿಚಾರವಾಗಿದೆ. ಮತ್ತೊಂದೆಡೆ ಪಾಕಿಸ್ತಾನದಲ್ಲಿ ಹಿಂದೂ ವಿವಾಹ ಮಸೂದೆ ಅನುಮೋದನೆ ಪಡೆದುಕೊಂಡಿದೆ. ಪಾಕಿಸ್ತಾನ ಸರ್ಕಾರ ತಮ್ಮ ದೇಶದ ಅಲ್ಪಸಂಖ್ಯಾತರ ವೈಯಕ್ತಿಕ ಜೀವನದ ಬಗ್ಗೆ ಕಾನೂನು ರಚಿಸಬಹುದು ಎಂದಾದರೆ ನಾವು ನಮ್ಮ ದೇಶದ ಬಹುದೊಡ್ಡ ಸಮುದಾಯ ಮುಸ್ಲಿಮರ ಜೀವನಶೈಲಿ ಸಂಬಂಧಿಸಿ ಕಾನೂನು ರಚನೆ ಮಾಡಲು ಯಾಕೆ ಸಾಧ್ಯವಿಲ್ಲ?

ಆಯಾ ಸಮಾಜಗಳು ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆಗೆ ಒಡ್ಡಿಕೊಳ್ಳುತ್ತವೆ. ಕಾಲ ಒಂದೇ ರೀತಿಯಲ್ಲಿ ಇರುವುದಿಲ್ಲ. ಹಳೆಯದ್ದೇ ಸರಿ ಎಂಬ ವಾದ ಇಂಥ ಸಂದರ್ಭದಲ್ಲಿ ಪ್ರಸ್ತುತವಾಗುವುದಿಲ್ಲ. ಸೌದಿ ಅರೇಬಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಬದಲಾವಣೆ ಹಾದಿಯಲ್ಲಿವೆ. ಮಹಿಳೆಯರ ಸಂಕಷ್ಟ ತಗ್ಗಿಸಲು ಅವು ಮುಂದಾಗಿವೆ. ಸೌದಿ ಹಾಗೂ ಆಫ್ಘಾನ್​ನಲ್ಲಿ ತಡವಾಗಿಯಾದರೂ ಮಹಿಳೆಯರಿಗೆ ಸ್ವಾತಂತ್ರ್ಯ ದೊರೆಯುತ್ತಿದೆ. ಇದೆಲ್ಲವೂ ಸಕಾರಾತ್ಮಕ ಬದಲಾವಣೆಗಳು ಅಲ್ಲವೇನು? ಭಾರತದಲ್ಲಿ ತ್ರಿವಳಿ ತಲಾಕ್ ಪರ ವಾದ ಮಾಡುತ್ತಿರುವವರು ಮಹಿಳೆಯ, ಅವಳಿಂದ ದೂರವಾಗುವ ಮಕ್ಕಳ ಸಂಕಷ್ಟವನ್ನು ಅರಿಯಬೇಕು. ಕುಟುಂಬಗಳ ಈ ವಿಭಜನೆಯಿಂದ ಸೃಷ್ಟಿಯಾಗುವ ಸಮಸ್ಯೆಗಳ ತೀವ್ರತೆಯನ್ನು ಅರಿಯಬೇಕು. ಎಲ್ಲಡೆ ಬದಲಾವಣೆಯ ಗಾಳಿ ಬೀಸಿ ಸುಧಾರಣೆಯ ದಾರಿ ತೆರೆದುಕೊಳ್ಳುತ್ತಿರುವಾಗ ಇಲ್ಲೂ ಪರಿವರ್ತನೆ ಕಾಣಿಸಿಕೊಳ್ಳಬೇಕು. ಇದು ಮುಸ್ಲಿಂ ಮಹಿಳೆಯರ ಆಗ್ರಹವೂ ಆಗಿದ್ದು, ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಿ ಸ್ಪಂದಿಸಲು ಇದು ಸಕಾಲ.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top