Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ತ್ಯಾಗ-ಸೇವೆಗಳ ಪ್ರತಿಮಾರೂಪ ಅಕ್ಕ ನಿವೇದಿತಾ

Sunday, 10.09.2017, 3:02 AM       No Comments

| ಪ್ರೋ. ಮಲ್ಲೇಪುರ. ಜಿ. ವೆಂಕಟೇಶ್​

ಸ್ವಾಮಿ ವಿವೇಕಾನಂದರ ಮಾನಸಪುತ್ರಿ ಎಂದೇ ಕರೆಸಿಕೊಂಡು ಭಾರತೀಯತೆಯನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡಾಕೆ ಸೋದರಿ ನಿವೇದಿತಾ. ಹುಟ್ಟಿದ್ದು ಐರ್ಲೆಂಡ್​ನಲ್ಲಾದರೂ ಆಕರ್ಷಿತಳಾಗಿದ್ದು ಭಾರತೀಯ ಸಂಸ್ಕೃತಿ-ಪರಂಪರೆಯೆಡೆಗೆ. ಭಾರತದಲ್ಲಿನ ತನ್ನ ಸೇವಾವಧಿಯಲ್ಲಿ ಒಮ್ಮೆ ಪ್ಲೇಗ್ ಪಿಡುಗು ಅಪ್ಪಳಿಸಿದಾಗ, ಔಷಧದ ಬಾಟಲಿಗಳನ್ನಿಟ್ಟುಕೊಂಡು ಮನೆಮನೆಗೂ ತಿರುಗಿ ರೋಗಿಗಳ ಸೇವೆ ಮಾಡಿದ ಮಾತೃಹೃದಯಿ ಈ ನಿವೇದಿತಾ.

ಭಾರತೀಯತೆಗೆ ಅನೇಕರು ಮನಸೋತು ಭಾರತಕ್ಕೆ ಬಂದದ್ದು ಸರಿಯಷ್ಟೆ. ಅಧ್ಯಾತ್ಮ, ಸಮಾಜಸೇವೆ, ಸಂಗೀತ, ಕಲೆ, ತತ್ತ್ವದರ್ಶನ ಮುಂತಾದ ಅನೇಕ ಪ್ರಕಾರಗಳಲ್ಲಿ ಸಿದ್ಧಿ-ಸಾಧನೆ ಮಾಡಿದ ಅನೇಕ ಮಹನೀಯರುಂಟು. ಅಧ್ಯಾತ್ಮದ ಸಿದ್ಧಿಯಲ್ಲಿ ಪಾಂಡಿಚೇರಿಯ ಶ್ರೀಮಾತಾ, ಸಂಗೀತಕ್ಷೇತ್ರದಲ್ಲಿ ಜಾನ್ ಬಿ.ಹಿಗ್ಗಿನ್ಸ್, ಕಲಾಕ್ಷೇತ್ರದಲ್ಲಿ ರೋರಿಚ್ ಇರುವಂತೆ ಸೇವಾಕ್ಷೇತ್ರದಲ್ಲಿ ಸಿಸ್ಟರ್ ನಿವೇದಿತಾ ಹೆಸರು ಅಜರಾಮರ. ಶ್ರೀಮಾತಾ ಅವರನ್ನು ಹೊರತು ಪಡಿಸಿದರೆ, ಉಳಿದವರು ಭಾರತೀಯತೆಯನ್ನು ತಮ್ಮದಾಗಿಸಿಕೊಂಡರೆ ಎಂಬ ಪ್ರಶ್ನೆ ಎತ್ತಿದರೆ ಅಕ್ಕ ನಿವೇದಿತಾ ಮಾತ್ರ ಪೂರ್ಣ ಭಾರತೀಯತೆಯನ್ನು ಬದುಕಿನುದ್ದಕ್ಕೂ ಹಾಸು-ಹೊಕ್ಕಾಗಿಸಿಕೊಂಡವರೆಂಬುದು ಸತ್ಯ. ಈಕೆ ಸ್ವಾಮಿ ವಿವೇಕಾನಂದರ ಏಕೈಕ ಮಾನಸಪುತ್ರಿ ಎಂಬುದೊಂದು ವಿಶಿಷ್ಟ ಅಂಶ!

ಜನನ-ವ್ಯಕ್ತಿತ್ವ: ನಿವೇದಿತಾ ಜನ್ಮನಾಮ ನೊಬೆಲ್ ಮಾರ್ಗರೆಟ್. ತಂದೆ ಸಾಮ್ಯುಅಲ್, ತಾಯಿ ಮೇರಿ. ಇವರು ನೊಬೆಲ್ ಮನೆತನಕ್ಕೆ ಸೇರಿದವರು. ಇವರು ಇದ್ದದ್ದು ಉತ್ತರ ಐರ್ಲೆಂಡಿನ ಡಂಗನಾನ್ ಎಂಬ ಪುಟ್ಟ ಊರಿನಲ್ಲಿ. ಇಂಥ ಸದ್ಗುಣ ದಂಪತಿ ಮಗಳಾಗಿ 1867 ಅಕ್ಟೋಬರ್ 28 ರಂದು ಮಾರ್ಗರೆಟ್ ಜನ್ಮಿಸಿದರು. ಚಿಕ್ಕಂದಿನಲ್ಲೇ ವಿಶೇಷವಾದ ಕಳೆಯನ್ನು ಹೊಂದಿದ್ದ ಮಾರ್ಗರೆಟ್ ಓದಿನಲ್ಲಿ ಸದಾ ಮುಂದು. ಆಕೆಯ ನೀಲಿಕಣ್ಣುಗಳು ಫಳಫಳನೆ ಹೊಳೆಯುತ್ತಿದ್ದವು. ಒಂದುದಿನ ಅವರ ಮನೆಗೆ ಧರ್ಮಗುರುಗಳೊಬ್ಬರು ಬಂದರು. ಆತ ಇಂಡಿಯಾದಲ್ಲಿ ಬಹಳವರ್ಷ ಇದ್ದವರು. ‘ಒಂದು ದಿನ, ಈ ಹುಡುಗಿ ಹಿಂದೂಸ್ಥಾನಕ್ಕೆ ಹೋಗಿ ಕೆಲಸ ಮಾಡುವಂತೆ ದೇವರ ಆದೇಶ ಬರುತ್ತದೆ. ಆಗ ಇವಳು ಹಿಂದೂಸ್ಥಾನಕ್ಕೆ ಹೋಗಬೇಕಾಗುತ್ತದೆ’ ಎಂದು ಹುಡುಗಿಯ ತಲೆಯನ್ನು ನೇವರಿಸಿ ಹೇಳಿದರು. ಎರಡು ವರ್ಷಗಳ ಅನಂತರ ಈ ಮಾತು ಸತ್ಯವಾಯಿತು. ಮಾರ್ಗರೆಟ್ ತಂದೆ ಕ್ರೈಸ್ತ ಧರ್ವೇಪದೇಶಕರಾಗಿದ್ದರು. ದೀನದುಃಖಿಗಳನ್ನು ಕಂಡರೆ ಬಲು ಆಪ್ತತೆಯಿಂದ ಉಪಚರಿಸುತ್ತಿದ್ದರು. ಮಾರ್ಗರೇಟ್ ಆಗ ಹತ್ತುವರ್ಷದ ಹುಡುಗಿ. ಆಕೆ ಬಿಡುವಿನ ವೇಳೆಯಲ್ಲಿ ತಂದೆಗೆ ಎಡಬಿಡದೆ ಸಹಕಾರ ಮಾಡುತ್ತಿದ್ದಳು. ಅವಿಶ್ರಾಂತ ದುಡಿಮೆಯ ಫಲವಾಗಿ ಸ್ಯಾಮ್ಯುಅಲ್ ಮೂವತ್ತನಾಲ್ಕನೆಯ ವಯಸ್ಸಿನಲ್ಲಿ ನಿಧನ ಹೊಂದಿದರು. ಅವರು ಸಾಯುವ ಮುನ್ನ ‘ಈಕೆಯಿಂದ ಮಹತ್ಕಾರ್ಯಗಳು ಆಗಬೇಕಿವೆ. ದೇವರ ಕರೆ ಬಂದಾಗ ಕಳಿಸು’ ಎಂದು ಹೇಳಿದ್ದು ದಶಕದ ನಂತರ ನಿಜವಾಯಿತು. ಮಾರ್ಗರೆಟ್ ತಾತ ಹ್ಯಾಮಿಲ್ಟನ್ ಉಗ್ರ ರಾಷ್ಟ್ರಭಕ್ತ. ತಂದೆಯಾದರೋ ಧಾರ್ವಿುಕ ಪರಮಪುರುಷ. ಇವೆರಡೂ ಗುಣಗಳು ಮಾರ್ಗರೆಟ್​ಳಲ್ಲಿ ಹಾಸು-ಹೊಕ್ಕಾಗಿದ್ದುವು. ಈಕೆ ತನ್ನ ಹದಿನೇಳನೆಯ ವಯಸ್ಸಿಗೆ ಕಾಲೇಜು ಶಿಕ್ಷಣವನ್ನು ಪೂರೈಸಿದಳು. ಅನಂತರ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಬಿಡುವಿನ ಸಮಯದಲ್ಲಿ ರೋಗಿಗಳ ಸೇವೆಯನ್ನು ಮಾಡುತ್ತಿದ್ದಳು. ಈ ನಡುವೆ ಕ್ರೈಸ್ತಧರ್ಮದಲ್ಲಿ ನಡೆಯುತ್ತಿದ್ದ ಪಕ್ಷಪಾತಗಳು ಹಿಡಿಸದೆ, ಆ ಧರ್ಮದಲ್ಲಿ ನಂಬಿಕೆಯನ್ನೇ ಮಾರ್ಗರೆಟ್ ಕಳೆದುಕೊಂಡಳು.

ನವದಿಗಂತ: 1895ರ ನವೆಂಬರ್ ಒಂದುದಿನ ಮಾರ್ಗರೆಟ್​ಳ ಕಲಾವಿದಮಿತ್ರ ‘ಲಂಡನ್ನಿಗೆ ಒಬ್ಬ ಹಿಂದೂ ಯೋಗಿ ಬಂದಿದ್ದಾರೆ. ಅವರು ಭಾನುವಾರ ಇಸಾಬೆಲ್ ಮಾರ್ಗಸನ್ ಮನೆಯಲ್ಲಿ ಉಪನ್ಯಾಸ ಮಾಡುತ್ತಿದ್ದಾರೆ. ನೀನು ಬಾ’ ಎಂದು ಆಹ್ವಾನಿಸಿದ. ಆ ಭಾನುವಾರ ಮಾರ್ಗರೇಟ್ ತುಸು ತಡವಾಗಿ ಹೋದಳು. ಅಲ್ಲಿ ಹದಿನೈದು ಮಂದಿ ಅರ್ಧವೃತ್ತಾಕಾರದಲ್ಲಿ ಕುಳಿತಿದ್ದರು. ಭವ್ಯವಾದ ಶರೀರ, ತೇಜಃಪುಂಜವಾದ ಮುಖಮಂಡಲ. ಸ್ನಿಗ್ಧ ಗಂಭೀರ ದೃಷ್ಟಿ. ಆಗಾಗ್ಗೆ ‘ಶಿವಶಿವ’ ಎನ್ನುವ ನಾಮೋಚ್ಚಾರ. ನಿರರ್ಗಳವಾಗಿ ಹರಿಯುವ ಮಧುರವಾಕ್ಕು, ಕಾಷಾಯಧಾರಿ ವ್ಯಕ್ತಿ, ಅರ್ಧನಿಮೀಲಿತ ನೇತ್ರರಾಗಿ ಕುಳಿತಿದ್ದರು. ಇವೆಲ್ಲಾ ಮಾರ್ಗರೆಟ್​ಳ ಮನಸ್ಸನ್ನು ಸೆರೆಹಿಡಿಯಿತು. ಅವರೇ ಸ್ವಾಮಿ ವಿವೇಕಾನಂದರು. ಅನಂತರ ಅದೇ ತಿಂಗಳು 16 ಮತ್ತು 23 ರಂದು ಸ್ವಾಮೀಜಿಯವರ ಎರಡು ಉಪನ್ಯಾಸಗಳಿದ್ದುವು. ಅವುಗಳನ್ನು ಕೇಳುತ್ತ ಹತ್ತಾರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿದಳು. ಆಕೆಯ ಪ್ರಶ್ನೆಗೆ ಸಾವಧಾನವಾಗಿ ಸ್ವಾಮೀಜಿ ಉತ್ತರಿಸಿದರು. ಒಮ್ಮೆ ‘ಸತ್ಯದ ಆರಾಧಕರಿಗೆ ಪೂರ್ವಗ್ರಹಗಳು ಇರಬಾರದು. ಮನಸ್ಸು ಪೂರಾ ತೆರೆದಿರಬೇಕು’ ಎಂದು ಹೇಳಿದರು. ವಿವೇಕಾನಂದರ ವಿಚಾರಗಳ ಭವ್ಯತೆಗೆ ಮಾರ್ಗರೆಟ್ ಮಾರುಹೋದಳು. ಅವಳ ಮನಸ್ಸಿನಲ್ಲಿ ನವದಿಗಂತವೊಂದು ತೆರೆಯುವಂತಾಯಿತು. ಲಂಡನ್ನಿನಲ್ಲಿ ನಡೆಯುತ್ತಿದ್ದ ಅನೇಕ ಉಪನ್ಯಾಸಗಳಿಗೂ ಪ್ರಶ್ನೋತ್ತರಗಳಿಗೂ ಮಾರ್ಗರೆಟ್ ಹೋಗುತ್ತಿದ್ದಳು. ‘ನಾನು ಅನುಸರಿಸುವುದಾದರೆ ಈತನನ್ನೇ’ ಎಂದು ಮನಸ್ಸಿನಲ್ಲಿ ದೃಢಮಾಡಿಕೊಂಡಳು! ತಾನು ಸಾಗಬೇಕಾದ ದಾರಿಯ ಬಗೆಗೆ ಸ್ವಾಮೀಜಿಗೆ ಪತ್ರ ಬರೆದು ಕೇಳಿದಳು. ಅದಕ್ಕೆ ‘ಜಗತ್ತಿನ ಧರ್ಮಗಳೆಲ್ಲವೂ ಇಂದು ನಿರ್ಜೀವ ಕಪಟಾಭಿನಯಗಳಾಗಿವೆ. ಇಂದು ಜಗತ್ತಿಗೆ ಚಾರಿತ್ರ್ಯ ನೀಡಬೇಕಾಗಿದೆ. ನಿಸ್ವಾರ್ಥ ಪ್ರೇಮಮಯ ಜೀವನ ಬೇಕಾಗಿದೆ’ ಎಂದು ಸ್ವಾಮೀಜಿ ಉತ್ತರಿಸಿದರು. ಸ್ವಾಮೀಜಿ ಮಾತನ್ನು ಕೇಳುತ್ತ ಸೇವಾಭಾವಕ್ಕೆ ಆಕೆ ಕಟಿಬದ್ಧಳಾದಳು. ಒಮ್ಮೆ ಸ್ವಾಮೀಜಿ ‘ನನ್ನ ದೇಶದ ಮಹಿಳೆಯರ ಸೇವೆಗೆ ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ನಾನು ಅದನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ನೀನು ನೆರವಾಗಬಲ್ಲೆ ಎಂಬ ವಿಶ್ವಾಸ ನನ್ನದಾಗಿದೆ’ ಎಂದ ಮಾತು ಮಾರ್ಗರೆಟ್​ಳಲ್ಲಿ ಸ್ಪಷ್ಟವಾದ ದಿಕ್​ಸೂಚಿಯನ್ನು ಸೂಚಿಸಿದಂತಾಯಿತು.

ನೊಬೆಲ್ ಆಗಾಗ್ಗೆ ಪತ್ರ ಬರೆದು ಭಾರತಕ್ಕೆ ಬರುವ ಅಪೇಕ್ಷೆಯನ್ನು ತಿಳಿಸುತ್ತಿದ್ದಳು. ಆದರೆ, ಸ್ವಾಮೀಜಿ ಹಲವು ಕಾರಣಗಳನ್ನು ಹೇಳುತ್ತಲೇ ಹೋದರು. ಹಿಂದೂಸ್ಥಾನಕ್ಕೆ ಹೋಗಬೇಕೆಂಬ ತುಡಿತ ಹೆಚ್ಚಾಯಿತು. ಸ್ವಾಮೀಜಿ ಭಾರತಕ್ಕೆ ಬರಲು ಆಹ್ವಾನಿಸಿದರು. ಆದರೆ ಭಾರತದ ಪ್ರಾಕೃತಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ-ಗತಿಗಳನ್ನು ಸೂಕ್ಷ್ಮವಾಗಿ ತಿಳಿಸಿ ‘ಭಾರತದ ಜನಕ್ಕೆ ಹಾಗೂ ಸ್ತ್ರೀಯರಿಗೆ ಸೇವೆ ಸಲ್ಲಿಸಲು ಈಗ ಅಗತ್ಯವಿರುವುದು ಪುರುಷರಲ್ಲ, ಸ್ತ್ರೀ ಸಾಕ್ಷಾತ್ ಸಿಂಹಿಣಿ’ ಎಂದು ಉತ್ತರಿಸಿದರು. 1897ನೆಯ ಡಿಸೆಂಬರ್ ಕೊನೆಯವಾರ ಹಡಗನ್ನು ಹತ್ತಿ ಭಾರತದತ್ತ ಹೊರಟ ಮಾರ್ಗರೆಟ್ 1898ರ ಜನವರಿ 28ರಂದು ಭಾರತಕ್ಕೆ ಕಾಲಿಟ್ಟಳು. ಆಕೆಯ ಹಡಗು ಕಲ್ಕತ್ತ ರೇವಿಗೆ ಬಂದಿತು. ಸ್ವಾಮಿ ವಿವೇಕಾನಂದರು ದೂರದಲ್ಲಿಯೇ ಕಂಡರು. ಅವರು ಮಾರ್ಗರೆಟ್​ಳನ್ನು ಹೃದಯದುಂಬಿ ಸ್ವಾಗತಿಸಿದರು. ತಾನೀಗ ತಾಯಿಯ ಮನೆ ಸೇರಿದ್ದೇನೆಂಬ ಭಾವ, ಆಕೆಯನ್ನು ಗಾಢವಾಗಿ ಆವರಿಸಿತು. 1898 ಫೆಬ್ರವರಿ 27 ಶ್ರೀರಾಮಕೃಷ್ಣ ಪರಮಹಂಸರ ಜನ್ಮದಿನ. ಮಾರ್ಗರೆಟ್ ರಾಮಕೃಷ್ಣರು ಇದ್ದ ಕೊಠಡಿಗೆ ಹೋಗಿ ಭಾವಪರವಶಳಾದಳು! ತನ್ನ ಗುರುವಿನ ಗುರು, ಮಂಡಿಯೂರಿ ತಲೆಬಾಗಿದಳು. 1898 ಮಾರ್ಚ್ 17 ರಂದು ಶ್ರೀಮಾತೆ ಶಾರದಾದೇವಿಯನ್ನು ಕಲ್ಕತ್ತದಲ್ಲಿ ಕಂಡಳು. ಶ್ರೀಮಾತೆ ನೊಬೆಲ್​ಳನ್ನು ತಮ್ಮ ಸಮೀಪ ಕುಳ್ಳಿರಿಸಿಕೊಂಡರು. ಅವರಿಬ್ಬರ ಪ್ರೇಮಲ ಸ್ವಭಾವಕ್ಕೆ ಭಾಷೆ ಅಡ್ಡಿ ಬರಲಿಲ್ಲ. ಆಕೆಯೊಡನೆ ಫಲಾಹಾರ ಸ್ವೀಕರಿಸಿದರು. ಸ್ವತಃ ವಿವೇಕಾನಂದರು ಈ ಘಟನೆಯಿಂದ ಸೋಜಿಗಗೊಂಡರು.

ಮಾರ್ಗರೆಟ್ ನೊಬೆಲ್​ಳ ಬದುಕಿನಲ್ಲಿ 1898 ಮಾರ್ಚ್ 25 ಕ್ರಾಂತಿಯ ದಿನ. ಆಕೆಯ ಬ್ರಹ್ಮಚಾರಿಣಿ ವ್ರತದ ಮೊದಲ ದೀಕ್ಷಾದಿನ ಅದಾಗಿತ್ತು. ಸ್ವಾಮೀಜಿ ಆಕೆಗೆ ವಿಭೂತಿಯನ್ನು ಹಚ್ಚಿದರು. ಶ್ರದ್ಧಾ, ಭಕ್ತಿ, ಧ್ಯೇಯನಿಷ್ಠೆಗಳನ್ನು ಬೋಧಿಸಿದರು. ಹಿಂದುತ್ವದ ಸೇವೆಯೊಂದೆ ಆಕೆಯ ಜೀವನ ಧ್ಯೇಯವಾಯಿತು. ಸ್ವಾಮೀಜಿ ಆಕೆಗೆ ‘ನಿವೇದಿತಾ’ ಎಂದು ನಾಮಕರಣ ಮಾಡಿದರು. ಇದೀಗ ನೊಬೆಲ್ ನಿವೇದಿತಾ ಆಗಿ ಸಂಪೂರ್ಣ ಭಾರತೀಯಳೇ ಆದಳು. ನಿವೇದಿತಾ ಹಾಗೂ ಆಕೆಯ ಇಬ್ಬರು ಶಿಷ್ಯರು ಬೇಲೂರಿನ ಹಳೆಯ ಮನೆಯಲ್ಲಿ ವಾಸಮಾಡತೊಡಗಿದರು. ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಸ್ವಾಮೀಜಿ ಬರುತ್ತಿದ್ದರು. ಆಕೆಗೆ ಭಾರತೀಯ ತತ್ತ್ವ-ಸಂಸ್ಕೃತಿ-ಭವಿಷ್ಯಭಾರತದ ಜತೆಗೆ ವರ್ತಮಾನಕಾಲದ ಭಾರತವನ್ನು ಪರಿಚಯ ಮಾಡಿಕೊಡುತ್ತಿದ್ದರು. ಭಾರತದ ಸೇವೆಯ ವ್ರತಕ್ಕೆ ನಿವೇದಿತಾಳನ್ನು ಅವರು ಸಜ್ಜುಗೊಳಿಸುತ್ತಿದ್ದರು. ಕಲ್ಕತ್ತದ ಸ್ಟಾರ್ ರಂಗಮಂದಿರದಲ್ಲಿ ರಾಮಕೃಷ್ಣಸಂಘದ ಉದ್ಘಾಟನೆ ಜರುಗಿತು. ‘ನಾನಿಂದು ಪಾವನ ಭೂಮಿಗೆ, ಹಿಂದೂಸ್ಥಾನಕ್ಕೆ ಬಂದಿರುವೆ. ನನ್ನ ಹೃದಯದ ಏಕಮಾತ್ರ ಉತ್ಕಟ ಅಭಿಲಾಷೆ-ಈ ಪುಣ್ಯಭೂಮಿಯ ಸೇವೆ. ಶ್ರೀ ರಾಮಕೃಷ್ಣರಿಗೆ ಜಯವಾಗಲಿ’ ಎಂಬ ಮಾತಿಗೆ ಅಲ್ಲಿದ್ದವರು ಕರತಾಡನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. 1898ರ ಮೇ-ಜೂನ್ ತಿಂಗಳಲ್ಲಿ ಸ್ವಾಮೀಜಿ ಅಲ್ಮೋರದಲ್ಲಿದ್ದಾಗ ಸ್ವಾಮಿ ಸ್ವರೂಪಾನಂದರು ಹಿಂದೂಧರ್ಮಗ್ರಂಥಗಳ ಪರಿಚಯವನ್ನು ನಿವೇದಿತಾಗೆ ಮಾಡಿಕೊಟ್ಟರು. ಅಲ್ಲಿಯೇ ಭಗವದ್ಗೀತೆಯ ಪಾಠಗಳು ಪ್ರಾರಂಭಗೊಂಡವು. ಸ್ವಾಮಿ ವಿವೇಕಾನಂದರ ಜತೆ ಅಮರನಾಥ ಯಾತ್ರೆಯನ್ನು ನಿವೇದಿತಾ ಕೈಗೊಂಡರು.

ಮಹಿಳಾ ಶಿಕ್ಷಣ: ಭಾರತೀಯ ಮಹಿಳೆಯರಿಗೆ ಶಿಕ್ಷಣಕೊಡಬೇಕೆಂದು ನಿವೇದಿತಾ ಸಂಕಲ್ಪಿಸಿದಳು. ಶಾರದಾಮಾತೆ ಸಾನ್ನಿಧ್ಯದಲ್ಲಿದ್ದು ಭಾರತೀಯತೆ ಹಾಗೂ ಸಂಸ್ಕೃತಿಯ ಪ್ರತಿಯೊಂದು ಅಂಶವನ್ನು ಅರಗಿಸಿಕೊಂಡಳು. ಶಾರದಾದೇವಿಯವರ ಆದರ್ಶವನ್ನು ಮೈಗೂಡಿಸಿಕೊಂಡಳು. ಭಜನೆ-ಧ್ಯಾನ-ಮನೆಯ ಪ್ರತಿಯೊಂದು ಸಣ್ಣ-ಪುಟ್ಟ ಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳತೊಡಗಿದಳು. ಪ್ರತಿನಿತ್ಯ ಕಾಳಿಕಾದೇವಿಯ ಮೂಲಕ ಹಿಂದೂದೇವಿಯರ ಸ್ವರೂಪವನ್ನು ತಿಳಿಯತೊಡಗಿದಳು. 1898 ನವೆಂಬರ್ 13 ರಂದು ದೀಪಾವಳಿ ಹಬ್ಬ. ಆದಿನ ಶಾರದಾದೇವಿ, ನಿವೇದಿತಾಳ ಆಗ್ರಹದ ಮೇರೆಗೆ ಭಗಿನಿನಿವಾಸಕ್ಕೆ ಬಂದಿದ್ದರು. ಅಂದಿನಿಂದ ‘ಬಾಲಿಕಾ ವಿದ್ಯಾಲಯ’ ಪ್ರಾರಂಭ ಆಯಿತು. ಮೂರು ಪುಟ್ಟಹುಡುಗಿಯರೊಡನೆ ಪ್ರಾರಂಭಗೊಂಡ ಶಾಲೆ, ಒಂದು ವರ್ಷ ಕಳೆಯುವುದರಲ್ಲಿ ಮೂವತ್ತಕ್ಕೆ ಏರಿತು! ಈ ನಡುವೆ ಕ್ರಿಶ್ಚಿಯನ್ ಪದ್ಧತಿಯ ಶಿಕ್ಷಣಕ್ಕೆ ಒಬ್ಬರು ಆಮಿಷ ಒಡ್ಡಿದಾಗ ನಿವೇದಿತಾ ಸಿಡಿದೆದ್ದರು. ಬಾಲಿಕಾ ವಿದ್ಯಾಲಯದಲ್ಲಿ ಪ್ರತಿ ಪುಷ್ಯಮಾಸದಲ್ಲಿ ಸರಸ್ವತಿಪೂಜೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದಿನ ನಿವೇದಿತಾ ಶ್ವೇತಕಪಿನಿ ಬದಲು ರೇಶಿಮೆಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟುಕೊಂಡು, ವೀಣಾವಾದಿನಿ ಸರಸ್ವತಿಯನ್ನು ತಂದು ಪೂಜಿಸಿ ಮರುದಿನ ಬೆಳಿಗ್ಗೆ ಗಂಗಾದೇವಿಗೆ ವಿಸರ್ಜಿಸುತ್ತಿದ್ದಳು. ತರಗತಿಯಲ್ಲಿ ಚರಿತ್ರೆ, ಭೂಗೋಳ, ಕಸೂತಿ, ಚಿತ್ರಕಲೆಗಳನ್ನು ಕಲಿಸಲಾಗುತ್ತಿತ್ತು. ಅಲ್ಲಿಯ ಪ್ರಾರ್ಥನಾಗೀತೆ ವಂದೇಮಾತರಂ. ‘ನಾವು ಇತಿಹಾಸವನ್ನು ನಿರ್ವಿುಸುತ್ತಿದ್ದೇವೆ. ರಾಷ್ಟ್ರದ ಕರ್ಮಯೋಗಕ್ಕೆ ಸಿಂಹಿಣಿಯರಾಗುವ ಕಡೆಗೂ ಹೆಣ್ಣುಮಕ್ಕಳು ತೊಡಗಬೇಕೆಂದು’ ನಿವೇದಿತಾ ಪ್ರೇರಿಸುತ್ತಿದ್ದಳು.

ಭಾರತದ ಜನಸೇವೆಗೆ ಬಂದ ನಿವೇದಿತಾ, ಆ ವರ್ಷ ಮಾರಿಯಂತೆ ಬಂದ ಪ್ಲೇಗಿನ ಜತೆ ಹೆಣಗಾಡಿದಳು. ರಾತ್ರಿ-ಹಗಲು ಔಷಧಿಯ ಬಾಟಲಿಗಳನ್ನು ಇಟ್ಟುಕೊಂಡು ಮನೆಮನೆಗೂ ಆಕೆ ತಿರುಗಾಡಿದಳು. ತಾತ್ಕಾಲಿಕ ಔಷಧಾಲಯವನ್ನು ತೆರೆದಳು. ಆಕೆಯ ಜತೆ ರಾಮಕೃಷ್ಣಸಂಘದ ಮೂವರು ಸಂನ್ಯಾಸಿಗಳು ಜತೆಯಾದರು. ಸೇವೆಯ ಪರಮೌನ್ಯತ್ಯವನ್ನು ಅಲ್ಲಿ ಸಾಕ್ಷಾತ್ತಾಗಿ ಕಂಡಳು. ಕಲ್ಕತ್ತದ ಮನೆಮನೆಯಲ್ಲೂ, ಬಡಗುಡಿಸಿಲಿನಲ್ಲೂ ಅಕ್ಕ ನಿವೇದಿತಾಳ ಸೇವಾರೂಪ ಕಂಡು ಜನ ಮೂಕವಿಸ್ಮಿತರಾದರು. ಈ ನಡುವೆ ಸ್ವಾಮೀಜಿ ಜತೆ ಹಲವು ಬಾರಿ ವಿದೇಶಪ್ರಯಾಣ ಕೈಗೊಂಡಿದ್ದುಂಟು. ಆದರೆ, ಸ್ವಾಮೀಜಿ ಹೇಳಿದಂತೆ: ‘ಹಿಂದೂಸ್ಥಾನಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಪೂರ್ತಿಯಾಗಿ ಹಿಂದುವೇ ಆಗಬೇಕು. ಹಿಂದುಪದ್ಧತಿಗಳನ್ನೆಲ್ಲಾ ಕಟ್ಟುನಿಟ್ಟಾಗಿ ಆಚರಿಸಲೇಬೇಕು.’ ಈ ಲಕ್ಷ್ಮಣರೇಖೆಯನ್ನು ನಿವೇದಿತಾ ಎಂದೂ ಮೀರಲಿಲ್ಲ. ಆಕೆಯ ನರನಾಡಿಗಳಲ್ಲಿ ಹಿಂದೂಸ್ತಾನದ ಮಹಾಸಂಸ್ಕೃತಿಯ ಮಹಾಮಂತ್ರವು ಹರಿದಾಡತೊಡಗಿತು.

ಅಂದು 1902ರ ಜುಲೈ 3 ಬುಧವಾರ. ಇದ್ದಕ್ಕಿದ್ದಂತೆ ಬೇಲೂರುಮಠಕ್ಕೆ ನಿವೇದಿತಾ ಬಂದರು. ಸ್ವಾಮೀಜಿ ಆಕೆಯನ್ನು ಕಂಡು ಊಟ ಬಡಿಸಿದರು. ಮೂರು ಗಂಟೆಗಳ ಕಾಲ ಇಬ್ಬರು ಮಾತಾಡಿಕೊಂಡರು. ಆಕೆ ಹಿಂದಿರುಗಿದ 3ನೇ ದಿನಕ್ಕೆ ಸ್ವಾಮಿ ವಿವೇಕಾನಂದರು ಪರಿನಿರ್ವಾಣಹೊಂದಿದರು. ಇದಾದ ಮೇಲೆ ನಿವೇದಿತಾ ವಾಸವಾಗಿದ್ದ ‘ಭಗಿನಿನಿವಾಸ’ಕ್ಕೆ ಜನ ಹಿಂಡುಹಿಂಡಾಗಿ ಬರಲಾರಂಭಿಸಿದರು. ಭಾರತೀಯ ಕ್ರಾಂತಿಕಾರರೂ ಬರುತ್ತಿದ್ದರು. 1902 ಅಕ್ಟೋಬರ್ 30 ರಂದು ಅರವಿಂದ ಘೊಷರ ಮೊದಲ ಭೇಟಿ ಆಯಿತು. ಅರವಿಂದರು ಆಕೆಯ ಪ್ರಭಾವಕ್ಕೆ ಸಿಕ್ಕಿ ಬಂಗಾಳಕ್ಕೆ ಬಂದು ನೆಲೆಸಬೇಕಾಯಿತು. 1903 ಫೆಬ್ರವರಿ 26 ರಂದು ಕಲ್ಕತ್ತಾದ ಪುರಭವನದಲ್ಲಿ ‘ಡೈನಮಿಕ್ ಹಿಂದೂಯಿಸಂ’ ಕುರಿತು ನಿವೇದಿತಾ ಮಾತನಾಡಿದರು. ಅಲ್ಲಿ ಸೇರಿದ್ದವರಿಗೆ ಹೊಸತೊಂದು ಅನುಭವವೇ ಆಯಿತು! ಈ ಮೂಲಕ ಅನೇಕರು ಮಿತ್ರರಾದರು. ಕವಿ ಗುರುದೇವ ರವೀಂದ್ರನಾಥ ಠಾಕೂರ್ ನಿವೇದಿತಾರ ಆಪ್ತವರ್ಗಕ್ಕೆ ಸೇರಿಕೊಂಡವರಲ್ಲಿ ಪ್ರಮುಖರು. ಯದುನಾಥ ಸರ್ಕಾರ್, ವಿಜ್ಞಾನಿ ಜಗದೀಶ ಚಂದ್ರಬೋಸ್, ಲೋಕಮಾನ್ಯ ತಿಲಕ್, ಗಾಂಧೀಜಿ, ಕವಿ ಸುಬ್ರಹ್ಮಣ್ಯ ಭಾರತಿ, ರಾಸ್​ಬಿಹಾರಿ ಘೊಷ್, ಉಗ್ರಗಾಮಿ ಬಿಪಿನ್​ಚಂದ್ರಪಾಲ್, ಸೌಮ್ಯವಾದಿ ಗೋಪಾಲಕೃಷ್ಣ ಗೋಖಲೆ ಮುಂತಾದ ಅಸಂಖ್ಯಾತರು ಈಕೆಯ ರಾಷ್ಟ್ರಭಕ್ತಿ, ಸಮರ್ಪಣಾ ಮನೋಭಾವ, ತ್ಯಾಗಬುದ್ಧಿ, ಸೇವಾತತ್ಪರತೆ, ಸ್ನೇಹಬುದ್ಧಿಗೆ ಮಾರುಹೋದರು. ಇಂಗ್ಲೆಂಡಿನ ಬಿಳಿಮಂದಿ ಆಕೆಯ ನಿಷ್ಠೆ ಕಂಡು ಬೆರಗಾದರು. ಅವರ ಜನವಿರೋಧಿ ಮತ್ತು ಒಡೆದು ಆಳುವ ನೀತಿಯನ್ನು ಕಟುವಾಗಿಯೇ ಟೀಕಿಸುವ ಎದೆಗಾರಿಕೆ ನಿವೇದಿತಾಗೆ ಸದಾ ಇತ್ತು.

ಸೇವಾಭಾವ: 1906 ರಲ್ಲಿ ಪೂರ್ವಬಂಗಾಳವು ಅತಿವೃಷ್ಟಿಯ ಅನಾಹುತಕ್ಕೆ ಸಿಕ್ಕಿ ಹಾಕಿಕೊಂಡಿತು. ಪೂರ್ವಬಂಗಾಳದ ನೂರಾರು ಹಳ್ಳಿಗಳು ಜಲಾವೃತಗೊಂಡವು. ನೂರಾರು ಜನ ಕುತ್ತಿಗೆಮಟ್ಟದ ನೀರಿನಲ್ಲಿ ನಿಂತು ಹಾಹಾಕಾರ ಮಾಡತೊಡಗಿದರು! ಅಕ್ಕ ನಿವೇದಿತಾ ಆಹಾರ-ವಸ್ತ್ರಗಳನ್ನು ಸಂಗ್ರಹಿಸಿ, ದೋಣಿಯಲ್ಲಿ ಸೇರಿಸಿಕೊಂಡು ಒಬ್ಬಿಬ್ಬರು ಸಹಕಾರಿಗಳೊಂದಿಗೆ ನೆರವಿಗೆ ಧಾವಿಸಿದಳು. ಪ್ರತಿಯೊಂದು ಮನೆಗೂ ಹೋಗಿ ನೆಚ್ಚಿನ ಅಕ್ಕನಂತೆ ಆರ್ತರ ಬಳಿ ಕುಳಿತು ತನ್ನಿಂದ ಆದಷ್ಟು ಸಾಂತ್ವನದ ಅಮೃತದಂಥ ಮಾತುಗಳನ್ನು ಎರೆದಳು.

ಭಾರತೀಯರಲ್ಲಿ ಕಾಣುತ್ತಿದ್ದ ಪ್ರಾಮಾಣಿಕತೆ, ಔದಾರ್ಯ, ಸ್ವಾಭಿಮಾನ, ಸ್ವಾವಲಂಬನೆ-ಗುಣಗಳನ್ನು ಕಂಡಾಗ ಹಾಡಿಹೊಗಳಿದ್ದುಂಟು. ನಿವೇದಿತಾಗೆ ಭಾರತದ ಹಳ್ಳಿಗಳ ಬಗೆಗೆ ಅತೀವ ಆಸಕ್ತಿ. ಆಕೆ ಸಮಯಸಿಕ್ಕಾಗಲೆಲ್ಲಾ ಗ್ರಾಮಾಂತರಗಳ ಜೀವನ ತಿಳಿಯಲು ಹಳ್ಳಿಗಳಿಗೆ ಹೋಗುತ್ತಿದ್ದಳು. ಒಮ್ಮೆ ಕವಿ ರವೀಂದ್ರರು ಈ ಬಗೆಗೆ ಕೇಳಿದಾಗ ಹೇಳಿದ್ದು-‘ಸ್ವದೇಶದ ಪ್ರತಿಯೊಂದು ಸಂಗತಿಯನ್ನು ಮನದಟ್ಟು ಮಾಡಿಕೊಳ್ಳದೆ; ಸ್ವದೇಶದ ಅಂತರಂಗ ತಿಳಿಯುವುದಾದರೂ ಹೇಗೆ?’

ಕಲ್ಕತ್ತಾದ ಡೀನ್​ಸೊಸೈಟಿ 1902 ರಲ್ಲಿ ಪ್ರಾರಂಭಗೊಂಡಿತು. ಅಲ್ಲಿ ಬಂಗಾಳದ ಕ್ರಾಂತಿಕಾರಿ ತರುಣವೃಂದ ಸೇರುತ್ತಿದ್ದರು. ರಾಷ್ಟ್ರಭಕ್ತಿಯನ್ನು ಉದ್ದೀಪಿಸುವುದು ಆ ಸಂಸ್ಥೆಯ ಉದ್ದೇಶ. ಅದರ ಸೂತ್ರಚಾಲಕಿ ನಿವೇದಿತಾ. ಅಲ್ಲಿ ಒಮ್ಮೆ ಸ್ವಾಮಿ ಶಂಕರಾನಂದರಿಂದ ಉಪನ್ಯಾಸ ನಡೆಯಿತು. ಅಲ್ಲಿದ್ದ ಕೆಲವರು ಗೀತೆಯ ವಿಷಯವಾಗಿ ನೀವೇನಾದರೂ ಹೇಳಿ ಎಂದು ನಿವೇದಿತಾಗೆ ಒತ್ತಾಯಿಸಿದಾಗ: ‘ಭಗವದ್ಗೀತೆ ಎಂದರೆ ಅದೊಂದು ಶಕ್ತಿಪುಂಜ. ಒಂದು ಕೈಯಲ್ಲಿ ಗೀತೆ ಹಿಡಿದು; ಇನ್ನೊಂದು ಕೈಯಲ್ಲಿ ಕತ್ತಿ ಹಿರಿದು ಧ್ಯೇಯದ ವಿಜಯಕ್ಕಾಗಿ ಎದೆ ಎತ್ತಿ ಹೊರಟ ಕ್ಷಾತ್ರವೀರನ ಚಿತ್ರ ಕಣ್ಮುಂದೆ ನಿಂತಾಗಲೇ ಗೀತೆಯ ನಿಜವಾದ ಅರ್ಥ ತಿಳಿದಂತೆ. ಅಂಥ ಮಹಾವೀರ ಸ್ವಾಮಿ ವಿವೇಕಾನಂದರು. ನಾವು ಅವರ ಹೆಜ್ಜೆಯಲ್ಲಿ ಹೆಜ್ಜೆಯನ್ನಿರಿಸಿ ಮುನ್ನಡೆಯೋಣ’ ಎಂದಾಗ ಕೇಳಿದವರ ಎದೆ ಝುಲ್ಲೆಂದಿತು.

ದೇಶಸೇವೆ, ದೇಶಭಕ್ತರ ಸೇವೆ ಸಲ್ಲಿಸುವಾಗ ತನ್ನ ಬಗೆಗೆ ಎಂದೂ ನಿವೇದಿತಾ ಚಿಂತಿಸಿದವಳಲ್ಲ. ಬಂಗಾಳದ ಕ್ರಾಂತಿಕಾರಿ ತರುಣರಿಗೆ ಸ್ಪೂರ್ತಿಸ್ಥಾನದಲ್ಲಿ ಆಕೆ ನೆಲೆನಿಂತಳು. ಅವರು ನಡೆಸುತ್ತಿದ್ದ ಯುಗಾಂತರ ಸಮಿತಿಗೆ ಊರುಗೋಲಾಗಿ ಆಕೆ ಆಸರೆಯಾದಳು. ಭಾರತದ ವೈಸ್​ರಾಯ್ ಆಗಿದ್ದ ಲಾರ್ಡ್ ಮಿಂಟೋನ ಪತ್ನಿ ಗುಟ್ಟಾಗಿ ಬಂದು ನಿವೇದಿತಾಳನ್ನು ಮಾತನಾಡಿಸಿ-ನೋಡಿಕೊಂಡು ಹೋದದ್ದುಂಟು! ಪ್ರಸಿದ್ಧ ಪತ್ರಕರ್ತರು, ಅನೇಕ ಪಾರ್ಲಿಮೆಂಟ್ ಸದಸ್ಯರು ನಿವೇದಿತಾಳ ಆಪ್ತವರ್ಗಕ್ಕೆ ಸೇರಿದ್ದವರೇ. 1911 ಅಕ್ಟೋಬರ್ 13 ಶುಕ್ರವಾರ ನಿವೇದಿತಾಳ ಜೀವನದ ಅಂತಿಮದಿನ. ಆಕೆ ಬಿಳಿಯ ಹಂಸದಂತೆ ಹಾಸಿಗೆಯ ಮೇಲೆೆ ಮಲಗಿದ್ದಳು. ಆಗ ಆಕೆಯ ವಯಸ್ಸು ಕೇವಲ ನಲವತ್ತನಾಲ್ಕು. ಆಕೆಯ ಕೊರಳಲ್ಲಿ ರುದ್ರಾಕ್ಷಿಮಾಲೆ ಶೋಭಿಸುತ್ತಿತ್ತು, ಬಲಗೈ ಧ್ಯಾನಮಾಲೆಯೊಂದನ್ನು ಹಿಡಿದಿತ್ತು. ನೀರವಜಪವನ್ನು ನಿವೇದಿತಾ ಮಾಡುತ್ತಿದ್ದಳು. ಆಕೆಯ ಸ್ನೇಹಿತೆ ಅಬಲಾ ಬಸು ಮ್ಲಾನವದನಳಾಗಿ ಮಂಚದ ಪಕ್ಕ ನಿಂತಿದ್ದಳು. ಆಕೆ ಮಲಗಿದ್ದ ಕಿಟಕಿಯ ಕಡೆಯಿಂದ ಸೂರ್ಯನ ಮೊದಲ ಕಿರಣಗಳು ತೂರಿಬಂದುವು. ನಿವೇದಿತಾ ಜಗದಂಬೆಯನ್ನು ನೆನೆಯುತ್ತಿರುವಾಗಲೇ ಆಕೆಯ ಉಸಿರು ನಿಂತಿತು. ಅನಂತರ ನಿವೇದಿತಾಳ ಅಂತಿಮ ಸಂಸ್ಕಾರ ಭಾರತೀಯ ಪದ್ಧತಿಯಂತೆ ನೆರವೇರಿತು.

ಭಾರತೀಯ ಸಂಸ್ಕೃತಿಯ ಉನ್ನತಾದರ್ಶನಗಳನ್ನು ಪಾಲಿಸುತ್ತಲೇ ಭಾರತದ ಶ್ರೀರಾಮಕೃಷ್ಣ-ವಿವೇಕಾನಂದರ ವಂಗನೆಲದಲ್ಲೆ ದೇಹವನ್ನು ಮುಡಿಪಿಟ್ಟ ಅಕ್ಕ ನಿವೇದಿತಾಗೆ ಇದೀಗ 150 ವರ್ಷ. ಎಲ್ಲಾ ಭಾರತೀಯ ತರುಣ-ತರುಣಿಯರಿಗೆ ಆಕೆಯೊಂದು ಉತ್ಸಾಹದ ರೂಪಕ! ತ್ಯಾಗ-ಸೇವೆಗಳ ಪ್ರತಿಮಾರೂಪ! ಹೀಗೆಂದು ಹೇಳಿದರೂ ಸಾಕಾಗದು. ಆಕೆ ನಮ್ಮೆಲ್ಲರ ಸ್ಪೂರ್ತಿಮಾತೆ.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *

Back To Top