Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ತಾಳ್ಮೆಗಿಂತ ತಪವಿಲ್ಲ

Wednesday, 06.09.2017, 3:01 AM       No Comments

ರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಈವರೆಗಿನ ಕಾರ್ಯಕ್ಷಮತೆಯನ್ನು ಪರಿಗಣನೆಗೆ ತೆಗೆದುಕೊಂಡಿದ್ದೇ ಆದಲ್ಲಿ, ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಯಂಥ ಎರಡು ಉಪಕ್ರಮಗಳು ಮಹತ್ವದ ಅಧ್ಯಾಯಗಳಾಗಿ ಗೋಚರಿಸುತ್ತವೆ. ಭ್ರಷ್ಟಾಚಾರ ಮತ್ತು ಕಾಳಧನಕ್ಕೆ ಲಗಾಮುಹಾಕುವ ಆಶಯದ ಒಂದು ಅಂಗವಾಗಿ ನೋಟುಗಳ ಅಮಾನ್ಯೀಕರಣದ ಘೋಷಣೆಯಾದಾಗ, ಅದು ಶ್ರೀಸಾಮಾನ್ಯರಿಗೆ ತಾತ್ಕಾಲಿಕವಾಗಿ ತಂದೊಡ್ಡಿದ ಸಂಕಷ್ಟಗಳನ್ನು ಮುಂದಿಟ್ಟುಕೊಂಡು ರಾಜಕೀಯ ಎದುರಾಳಿಗಳೂ, ಟೀಕಾಕಾರರೂ ಕೂರಂಬಿನ ಮಳೆಯನ್ನೇ ಸುರಿಸಿದ್ದುಂಟು. ಆದರೆ, ಈ ಉಪಕ್ರಮದ ಹಿಂದಿರುವ ದೂರಗಾಮಿ ಆಶಯದ ಕುರಿತು ಸಾರ್ವಜನಿಕರಿಗೇ ಅರಿವಾದಾಗ, ಟೀಕೆಗಳೂ ಮೂಲೆ ಸೇರಿದವೆನ್ನಿ. ನಿಗದಿತ ಕಾಲಾವಧಿಯ ನಂತರ, ದೇಶದ ಬೊಕ್ಕಸಕ್ಕೆ ಶೇ. 99ರಷ್ಟು ಹಳೆಯ ನೋಟುಗಳು ಮರಳಿವೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಮತ್ತೆ ಟೀಕಾಪ್ರಹಾರ ಶುರುವಾಗಿದೆ. ‘ಶೇ. 99ರಷ್ಟು ನೋಟುಗಳು ಮರಳಿವೆ ಎಂದಾದಲ್ಲಿ, ಶೇ. 1ರಷ್ಟು ಭಾಗ ಮಾತ್ರ ಕಪ್ಪುಹಣ ಎಂದಾಯಿತು. ಹೀಗಾಗಿ ಈ ಅಮಾನ್ಯೀಕರಣ ವ್ಯರ್ಥ ಕಸರತ್ತಾಯಿತಷ್ಟೇ’ ಎಂಬುದು ಇಂಥ ಟೀಕೆಗಳ ಒಂದು ಸ್ಯಾಂಪಲ್.

ಮೇಲ್ನೋಟಕ್ಕೆ ಈ ಅಭಿಪ್ರಾಯ ಸರಿ ಎನಿಸಿದರೂ, ಚರ್ಚಾವಿಷಯದ ಆಳಕ್ಕಿಳಿದು ನೋಡುವುದು ಯೋಗ್ಯನಡೆಯಾಗಬಲ್ಲದು. ನೋಟು ಅಮಾನ್ಯೀಕರಣದ ಉಪಕ್ರಮದಿಂದಾಗಿ ರಾತ್ರೋರಾತ್ರಿ ಕಪು್ಪಹಣದ ಪಿಡುಗಿಗೆ ಕಡಿವಾಣ ಹಾಕುವುದು ಸಾಧ್ಯವಾಗುವುದಿಲ್ಲವಾದರೂ, ಕಾಳಧನಿಕರಲ್ಲಿ ಒಂದು ಮಟ್ಟಿಗಿನ ಭಯವನ್ನಂತೂ ಅದು ಹುಟ್ಟುಹಾಕಿದೆ ಎನ್ನಲಡ್ಡಿಯಿಲ್ಲ. ಇನ್ನು, ಬ್ಯಾಂಕುಗಳಲ್ಲಿನ ನಗದು ವ್ಯವಹಾರದ ಮೇಲೆ ವಿಧಿಸಲಾಗಿರುವ ಇತಿಮಿತಿಗಳು, ಡೆಬಿಟ್-ಕ್ರೆಡಿಟ್ ಕಾರ್ಡ್, ವ್ಯಾಲೆಟ್, ಆನ್​ಲೈನ್, ಮೊಬೈಲ್ ಬ್ಯಾಂಕಿಂಗ್​ನಂಥ ಡಿಜಿಟಲ್ ವ್ಯವಹಾರಗಳಿಗೆ ತೆರೆದುಕೊಂಡಿರುವುದು ಈ ಎಲ್ಲ ಉಪಕ್ರಮಗಳಿಂದಾಗಿ ಯಾವುದೇ ವ್ಯಕ್ತಿಯ ಅಥವಾ ಸಂಸ್ಥೆಯ ವ್ಯವಹಾರಗಳಿಗೆ ಪಾರದರ್ಶಕ ನೆಲೆಗಟ್ಟು ಒದಗುವುದರಿಂದಾಗಿ ವ್ಯವಹಾರಗಳಿಗೆ ವಿಶಿಷ್ಟ ಶಿಸ್ತು ಒದಗಿದಂತಾಗಿದೆ. ಅಷ್ಟೇಕೆ, ಹಿಂದಿನ ವರ್ಷಗಳಿಗೆ ಹೋಲಿಸಿದಾಗ, ತೆರಿಗೆದಾರರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ ಎಂಬುದನ್ನು ಅಂಕಿ-ಅಂಶಗಳೇ ಹೇಳುತ್ತವೆ. ಕಾಲಾನಂತರದಲ್ಲಿ ಈ ಶಿಸ್ತು ದೈನಂದಿನ ಪರಿಪಾಠವಾಗುವುದರಿಂದ, ಆರ್ಥಿಕತೆಯು ಮತ್ತಷ್ಟು ಸದೃಢಗೊಳ್ಳುವುದಕ್ಕೆ ಅನುವಾಗುತ್ತದೆ ಎಂಬುದನ್ನು ಮರೆಯಲಾಗದು.

ಇನ್ನು ಜಿಎಸ್​ಟಿಯ ರೂಪರೇಷೆ, ಚರ್ಚೆ ಹಾಗೂ ಅನುಷ್ಠಾನದ ಸಂದರ್ಭದಲ್ಲೂ ಕೆಲ ಅಪಸ್ವರಗಳು ಹೊಮ್ಮಿದ್ದು ನಿಜ. ಜಿಎಸ್​ಟಿ ಜಾರಿಯಿಂದಾಗಿ ಕೆಲ ವಲಯಗಳಲ್ಲಿ ವ್ಯವಹಾರ ನಿರ್ವಹಣೆ ವ್ಯತ್ಯಸ್ಥವಾಗಿದೆ, ಇದರಿಂದ ಕ್ರಾಂತಿಕಾರಕ ಬದಲಾವಣೆಗಳೇನೂ ಆಗಿಲ್ಲ ಎಂಬುದು ಇಂಥ ಒಡಕುದನಿಗಳ ಪೈಕಿ ಒಂದು. ಭಾಷೆ-ಬಣ್ಣ-ಪ್ರಾದೇಶಿಕತೆಗಳ ವಿಷಯದಲ್ಲಿ ವೈವಿಧ್ಯತೆಯೇ ವೈಶಿಷ್ಟ್ಯವಾಗಿರುವ ಭಾರತದಂಥ ಗಣರಾಜ್ಯದಲ್ಲಿ, ಸಂಕೀರ್ಣ ತೆರಿಗೆ ವ್ಯವಸ್ಥೆಯ ಜಾಗದಲ್ಲಿ ಜಿಎಸ್​ಟಿಯಂಥ ಏಕರೂಪದ ತೆರಿಗೆ ಪದ್ಧತಿಯನ್ನು ಜಾರಿಗೆ ತರುವುದು ಅಂದುಕೊಂಡಷ್ಟು ಸುಲಭವಲ್ಲ. ಅಷ್ಟೇಕೆ, ಜಾರಿಯಾದ ಮರುದಿನದಿಂದಲೇ ಸಕಾರಾತ್ಮಕ ಫಲಶ್ರುತಿಯನ್ನು ನಿರೀಕ್ಷಿಸುವುದೂ ತರವಲ್ಲ. ಒಂದೊಮ್ಮೆ ತೆರಿಗೆ ನಿಗದಿಯಲ್ಲಿ ಅಸಮರ್ಪಕತೆಗಳು ತಲೆದೋರಿದ್ದರೆ, ಅದನ್ನು ಜಿಎಸ್​ಟಿ ಮಂಡಳಿಯ ಗಮನಕ್ಕೆ ತಂದು ಪರಿಹಾರೋಪಾಯ ಕಂಡುಕೊಳ್ಳುವ ಅವಕಾಶ ಇದ್ದೇ ಇದೆ. ಹೀಗಾಗಿ, ನೋಟು ಅಮಾನ್ಯೀಕರಣ ಮತ್ತು ಜಿಎಸ್​ಟಿ ಜಾರಿಯಂಥ ಉಪಕ್ರಮಗಳ ಸಾಧಕ-ಬಾಧಕಗಳನ್ನು ಈಗಿಂದೀಗಲೇ ಅಳೆದು-ತೂಗಿ ಷರಾ ಬರೆಯುವುದರ ಬದಲು ವ್ಯವಸ್ಥೆ-ವ್ಯವಹಾರಗಳು ಅದಕ್ಕೆ ಒಗ್ಗಿಕೊಳ್ಳುವುದಕ್ಕೆ ಕಾಲಾವಕಾಶ ನೀಡುವುದು ವಿವೇಕದ ನಡೆ ಎನಿಸಿಕೊಳ್ಳುತ್ತದೆ.

Leave a Reply

Your email address will not be published. Required fields are marked *

Back To Top