Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ತಾರಕಕ್ಕೇರಿತು ಐಪಿಎಸ್ ಸಮರ

Monday, 17.07.2017, 3:03 AM       No Comments

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಉನ್ನತ ಪೊಲೀಸ್ ಅಧಿಕಾರಿಗಳಿಬ್ಬರ ಪ್ರತಿಷ್ಠೆಯ ಕಲಹ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶನಿವಾರ ಮಧ್ಯರಾತ್ರಿ ಯಿಂದೀಚೆಗೆ ನಡೆದ ದಿಢೀರ್ ನಾಟಕೀಯ ಬೆಳವಣಿಗೆಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ 21 ಕೈದಿಗಳನ್ನು ರಾತ್ರೋರಾತ್ರಿ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಮೂಲಕ ಸಾಕ್ಷ್ಯನಾಶ ಪಡಿಸುವ ಪ್ರಯತ್ನ ನಡೆದಿದೆ ಎಂಬ ಹೊಸ ಆರೋಪ ಕೇಳಿಬಂದಿದೆ.

ಜೈಲಿನ ಅಕ್ರಮಗಳ ಕುರಿತು ಬಂಧಿಖಾನೆ ಡಿಐಜಿ ಡಿ.ರೂಪಾ ವರದಿಯಲ್ಲಿ ಉಲ್ಲೇಖಿಸಿದ್ದ ಆರೋಪಗಳಿಗೆ ಸಂಬಂಧಿಸಿದ ನಾಶಪಡಿಸುವ ಕುತಂತ್ರ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿನ ಅಕ್ರಮಗಳ ಆರೋಪ ಪ್ರಕರಣ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳನ್ನು ನಾಶ ಮಾಡಬಾರದು. ಜೈಲಾಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಅಶಿಸ್ತು ತೋರಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ.

ಇಂದಿನಿಂದ ತನಿಖೆ

ಸರ್ಕಾರ ರಚಿಸಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್ಕುಮಾರ್ ನೇತೃತ್ವದ ಸಮಿತಿ ಸೋಮವಾರ ತನಿಖೆ ಆರಂಭಿಸುವ ಸಾಧ್ಯತೆ ಇದೆ. ನಿವೃತ್ತಿ ನಂತರ ದೆಹಲಿಯಲ್ಲಿ ನೆಲೆಸಿದ್ದ ವಿನಯ್ಕುಮಾರ್ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ಮುಖ್ಯಮಂತ್ರಿ ಕಚೇರಿಯಿಂದ ಸರ್ಕಾರದಿಂದ ಆದೇಶ ಪ್ರತಿಯನ್ನು ಪಡೆಯಲಿದ್ದಾರೆ. ಡಿಐಜಿ ರೂಪಾ ಅವರ ವರದಿಯಲ್ಲಿ ಉಲ್ಲೇಖಿಸಿರುವ ಶಶಿಕಲಾಗೆ ರಾಜಾತಿಥ್ಯಕ್ಕೆ 2 ಕೋಟಿ ರೂ. ಲಂಚ ಸೇರಿ ಎಲ್ಲ ಆರೋಪಗಳ ಕುರಿತು ತನಿಖೆಗೆ ಜೈಲಿಗೆ ಭೇಟಿ ಕೊಡುವ ಸಾಧ್ಯತೆ ಇದೆ.

ಸಾಕ್ಷಿ ಹೇಳಿದ್ದಕ್ಕೆ ಥಳಿತ

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ರೂಪಾಗೆ ಮಾಹಿತಿ ಕೊಟ್ಟ ಕೈದಿಗಳಿಗೆ ಶನಿವಾರ ರಾತ್ರಿ ಜೈಲು ಅಧಿಕಾರಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಳಗಾವಿ ಹಿಂಡಲಗಾ ಜೈಲಿಗೆ ಕೈದಿಗಳಾದ ಆನಂತಮೂರ್ತಿ, ಬಾಬು ಮತ್ತು ಲಾಂಗ್ ಬಾಬು ಎಂಬುವರು ವಿಶೇಷ ವಾಹನಗಳಲ್ಲಿ ಇಳಿದಾಗ ಕುಂಟುತ್ತ ಜೈಲು ಪ್ರವೇಶಿಸಿದರು. ಅಲ್ಲದೆ, ಕೈದಿಗಳ ಬಟ್ಟೆ ಮೇಲೆ ರಕ್ತದ ಕಲೆಗಳು ಮತ್ತು ಗಾಯದ ಗುರುತು ಪತ್ತೆಯಾಗಿರುವುದು ಇದಕ್ಕೆ ಪುಷ್ಠಿ ಕೊಟ್ಟಿದೆ.

ಕೃಷ್ಣಕುಮಾರ್ ಕಾರಣ ?: ಶನಿವಾರ ಪರಪ್ಪನ ಅಗ್ರಹಾರ ಜೈಲಿಗೆ ರೂಪಾ ಭೇಟಿ ನೀಡಿದಾಗ ಜೈಲು ಅಧೀಕ್ಷಕ ಕೃಷ್ಣಕುಮಾರ್ ವಿರುದ್ಧ ಕೆಲ ಕೈದಿಗಳು ದೂರು ನೀಡಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ಕೃಷ್ಣಕುಮಾರ್ ಕೈದಿಗಳಿಗೆ ಮಾತನಾಡಲು ಅವಕಾಶ ಕೊಡದೆ ಕಳುಹಿಸಿದರು. ಇದನ್ನು ಪ್ರಶ್ನಿಸಿದ ರೂಪಾ ಅಧೀಕ್ಷಕರಿಗೆ ಎಚ್ಚರಿಕೆ ನೀಡಿದರು. ರೂಪಾ ಬೆಂಬಲಕ್ಕೆ ನಿಂತ ಕೆಲ ಕೈದಿಗಳು ಅಧೀಕ್ಷಕರ ವಿರುದ್ಧ ಘೊಷಣೆ ಕೂಗಿದರು.

ಅಲ್ಲಿಂದ ರೂಪಾ ಹೊರಹೋದ ಬಳಿಕ ಕೃಷ್ಣಕುಮಾರ್ ವಿರುದ್ಧ ದೂರು ಕೊಟ್ಟ ಕೈದಿಗಳನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ ಎನ್ನಲಾಗಿದೆ. ಆಗ ಕೈದಿಗಳಲ್ಲಿ ಎರಡು ಗುಂಪುಗಳಾಗಿ ಪ್ರತಿಭಟನೆ ನಡೆಸಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಆಗ್ನೇಯ ವಿಭಾಗ ಡಿಸಿಪಿ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸರು ಜೈಲು ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಕೈದಿಗಳನ್ನು ಬ್ಯಾರೆಕ್​ಗಳಿಗೆ ರವಾನಿಸಿ ಜೈಲಿನ ಒಳಗೆ ಹೆಚ್ಚಿನ ಭದ್ರತೆ ಒದಗಿಸಿದರು.

21 ಕೈದಿಗಳ ಸ್ಥಳಾಂತರ: ರೂಪಾಗೆ ದೂರು ನೀಡಿದ 21 ಸಜಾ ಕೈದಿಗಳನ್ನು ಶನಿವಾರ ರಾತ್ರೋರಾತ್ರಿ ಸ್ಥಳಾಂತರಿಸಲಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಬಳ್ಳಾರಿ ಜೈಲಿಗೆ ರಾಮಮೂರ್ತಿ, ಶ್ರೀನಿವಾಸ್ ಮತ್ತು ಶಿವಕುಮಾರ್ ಎಂಬುವರನ್ನು ಕರೆತರಲಾಗಿದೆ. ಕಲಬುರಗಿ ಜೈಲಿಗೆ ಸಜಾ ಬಂದಿಗಳಾದ ಸೈಯದ್ ಕೈಸರ್ ಷಾ, ವಸಂತ ಅರಸ್, ನಾಗರಾಜ ಅರಸ್, ಕೃಷ್ಣ ಮಲ್ಲಯ್ಯ ಸ್ಥಳಾಂತರ ಮಾಡಲಾಗಿದೆ.

ಧಾರವಾಡ ಜೈಲಿಗೆ ಕೈದಿಗಳಾದ ನಾರಾಯಣಗೌಡ, ರವಿ, ಮಹೇಶ್ ಮತ್ತು ಸುನೀಲ್ ಹಾಗೂ ಬೆಳಗಾವಿ ಹಿಂಡಲಗಾ ಜೈಲಿಗೆ ಆನಂತಮೂರ್ತಿ, ಬಾಬು ಹಾಗೂ ಲಾಂಗ್ ಬಾಬು ಎಂಬುವರನ್ನು ಸ್ಥಳಾಂತರಿಸಲಾಗಿದೆ. ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಕುರಿತು ಸಾಕ್ಷಿ ಹೇಳುವರನ್ನೇ ಹುಡುಕಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪ ತಳ್ಳಿ ಹಾಕಿರುವ ಜೈಲು ಅಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಗಲಾಟೆಯಲ್ಲಿ ಭಾಗವಹಿಸಿದ್ದ ಕೈದಿಗಳನ್ನು ಮಾತ್ರ ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಕಳುಹಿಸಲಾಗಿದೆ. ಈ ಕುರಿತು ಡಿಜಿಪಿ ಸತ್ಯನಾರಾಯಣ ರಾವ್​ಗೂ ವರದಿ ನೀಡಿರುವುದಾಗಿ ಹೇಳುತ್ತಿದ್ದಾರೆ.

ಜೈಲ್​ನಲ್ಲಿ ಕೈದಿ ಬರ್ತ್​ಡೇ ಪಾರ್ಟಿ

ದುಡ್ಡು ಕೊಟ್ಟರೆ ಜೈಲಿನಲ್ಲಿ ಬೀಡಿ, ಸಿಗರೇಟ್, ಮಾದಕ ವಸ್ತು, ಮೊಬೈಲ್ ಫೋನ್ ಸೌಲಭ್ಯ ಸಿಗುತ್ತದೆ ಎಂಬ ಆರೋಪದ ಬೆನ್ನಲ್ಲೆ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಜೈಲು ಅಧಿಕಾರಿಗಳಿಗೆ ಹಣ ಕೊಟ್ಟು ಜೈಲಿನಲ್ಲಿ ವಿಚಾರಣಾಧಿನ ಕೈದಿ ಕ್ಯಾತೆ ಚೇತನ್ ಎಂಬಾತ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಸಂಭ್ರಮಿಸಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬಂದಿಖಾನೆ ಇ ಬ್ಲಾಕ್​ಗೆ ಕ್ಯಾತೆ ಚೇತನ್ ಬೇರೆ ಬ್ಯಾರಕ್​ನಲ್ಲಿ ಬಂಧಿಯಾಗಿದ್ದ ತನ್ನ ಸಹಚರರನ್ನು ಕರೆಸಿಕೊಂಡು ಹುಟ್ಟು ಹಬ್ಬ ಆಚರಿಸಿದ್ದಾನೆ ಎನ್ನಲಾಗಿದೆ.

ಕಾರಾಗೃಹದ ಭ್ರಷ್ಟಾಚಾರ ಕುರಿತಂತೆ ಡಿಐಜಿ ಡಿ.ರೂಪಾ 2ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. 1ನೇ ವರದಿ ನೀಡಿದ್ದರೂ ಸರ್ಕಾರ ಇದುವರೆಗೆ ಕ್ರಮ ಜರುಗಿಸಿಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು.

| ಜಗದೀಶ ಶೆಟ್ಟರ್ ವಿಧಾನಸಭೆ ಪ್ರತಿಪಕ್ಷ ನಾಯಕ

ಸಾವಿನ ಸುದ್ದಿ ತಿಳಿಸಲು ಪರದಾಟ

ರಾಬರಿ ಪ್ರಕರಣದಲ್ಲಿ ಕೋಡಿಗೆಹಳ್ಳಿ ಠಾಣೆ ಪೊಲೀಸರಿಗೆ ಸೆರೆಸಿಕ್ಕು ಜೈಲು ಸೇರಿದ್ದ ವಿಚಾರಣಾಧೀನ ಕೈದಿ ರಾಜಣ್ಣ ಎಂಬಾತನ ತಂದೆ ಲಕ್ಷ್ಮಿನಾರಾಯಣ ಅವರು ತುಮಕೂರಿನ ಬೆಳ್ಳಾವಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 5 ಗಂಟೆಯಲ್ಲಿ ಅಸುನೀಗಿದ್ದರು. ವಿಷಯ ತಿಳಿಸಲು ರಾಜಣ್ಣ ಪತ್ನಿ ಅರುಣಾ ಮತ್ತು ನಾದಿನಿ ಪ್ರೇಮಾ ಬೆಳಗ್ಗೆ 6 ಗಂಟೆಗೆ ಜೈಲು ಬಳಿಗೆ ಬಂದಿದ್ದರು. ಜೈಲು ಅಧಿಕಾರಿಗಳು ಅವಕಾಶ ಕೊಡದೆ ಭಾನುವಾರ ರಜೆ ಎಂದು ಹೇಳಿದ್ದರು. ಈ ಕುರಿತು ಸುದ್ದಿ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಮೇಲೆ ಮಧ್ಯಾಹ್ನದ ವೇಳೆಗೆ ಪತಿಯ ಭೇಟಿಗೆ ಅರುಣಾಗೆ ಅವಕಾಶ ಕಲ್ಪಿಸಿದ ಪ್ರಸಂಗ ನಡೆಯಿತು.

ರೂಪಾ 2ನೇ ವರದಿಯಲ್ಲಿ ಏನಿದೆ?

ಡಿಐಜಿ ವಿರುದ್ಧ ಹೇಳಿಕೆ ಮತ್ತು ಪ್ರತಿಭಟನೆ ನಡೆಸಿರುವ ಕಿರಿಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂದರ್ಶನ ವಿಭಾಗದಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ಸ್ಪಷ್ಟವಾಗಿಲ್ಲ. ಈ ಜಾಗದಲ್ಲಿ 2 ಸಿಸಿ ಕ್ಯಾಮರಾಗಳು ಇದ್ದು, ಅದರಲ್ಲಿ ಸೆರಎಯಾಗಿರುವ ಕೆಲ ದೃಶ್ಯಾವಳಿಗಳು ನಾಶವಾಗಿವೆ. ಯಾರು, ಯಾರನ್ನು ಯಾವಾಗ ಭೇಟಿ ಮಾಡಿದ್ದಾರೆ ಎಂಬ ದಾಖಲೆಗಳನ್ನು ನಿರ್ವಹಿಸಿಲ್ಲ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ವಿ.ಶಶಿಕಲಾ ತನ್ನ ಆಪ್ತರನ್ನ ಭೇಟಿ ಮಾಡಲು ಜೈಲು ಅಧೀಕ್ಷಕರ ಕಚೇರಿ ಪಕ್ಕದಲ್ಲೇ ವಿಶೇಷ ಕೊಠಡಿ ಕೊಟ್ಟು ಆತಿಥ್ಯ ನೀಡಲಾಗುತ್ತಿದೆ. ಶಶಿಕಲಾ ಇರುವ ಬ್ಯಾರೆಕ್ ಬಳಿ ಸಿಸಿ ಕ್ಯಾಮರಾ ಅಳವಡಿಸಿಲ್ಲ ಎಂದು ರೂಪಾ ಅವರು 2ನೇ ವರದಿಯಲ್ಲಿ ವಿಸ್ತಾರವಾಗಿ ಬರೆದು ಸರ್ಕಾರಕ್ಕೆ ಒಪ್ಪಿಸಿದ್ದಾರೆ.

ಜೈಲಿನಲ್ಲಿ ಉದ್ವಿಗ್ನಕ್ಕೆ ಅಧೀಕ್ಷಕರೇ ಕಾರಣ ?

ಜೈಲಿನ ಅಡುಗೆ ಕೋಣೆ ಜವಾಬ್ದಾರಿ ವಹಿಸಿದ್ದ ಕರಡಿ ಶಿವ, ಶಿವಕುಮಾರ್, ಮಂಜು, ಲೋಕೇಶ್, ನಾಗೇಶ್ ಪುಟ್ಟರಾಜು, ರವಿ ಎಂಬುವರು ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳ ಕುರಿತು ರೂಪಾ ಅವರಿಗೆ ಮಾಹಿತಿ ಕೊಟ್ಟಿದ್ದರು. ಸಿಟ್ಟಿಗೆದ್ದ ಕೃಷ್ಣಕುಮಾರ್ ಈ 7 ಕೈದಿಗಳು ಮಾಡಿದ ಊಟವನ್ನು ಸೇವಿಸದಂತೆ ತಡೆದರು. ಅಧೀಕ್ಷಕರ ಬೆಂಬಲಕ್ಕೆ ನಿಂತ ಕೆಲ ಕೈದಿಗಳು ಊಟ ಮಾಡದಂತೆ ಧಮ್ಕಿ ಹಾಕಿದ್ದರು. ಹೀಗಾಗಿ ಉಪವಾಸ ನಡೆಸಲು ಕಾರಣವೆಂದು ಜೈಲಿನ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Back To Top