Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ತವರಿನ ಟೆಸ್ಟ್​ನಲ್ಲಿ ಭಾರತವೇ ಬೆಸ್ಟ್

Tuesday, 14.11.2017, 3:05 AM       No Comments

1982ರ ಫೆಬ್ರವರಿ 17ರಂದು ತನ್ನ ಮೊಟ್ಟಮೊದಲ ಟೆಸ್ಟ್ ಆಡಿದ್ದ ದ್ವೀಪರಾಷ್ಟ್ರ ಶ್ರೀಲಂಕಾ ತಂಡ ಸದ್ಯ ಭಾರತ ಪ್ರವಾಸದಲ್ಲಿದೆ. ಟೆಸ್ಟ್ ಮಾನ್ಯತೆ ಪಡೆದ ವರ್ಷವೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡಕ್ಕೆ ಇದು 8ನೇ ಪ್ರವಾಸ. ಭಾರತದಲ್ಲಿ ಬರೋಬ್ಬರಿ 17 ಟೆಸ್ಟ್ ಆಡಿರುವ ಲಂಕಾ ಈವರೆಗೂ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಅರ್ಜುನ ರಣತುಂಗ, ಅರವಿಂದ ಡಿಸಿಲ್ವ, ಮಹೇಲ ಜಯವರ್ಧನೆ, ಕುಮಾರ ಸಂಗಕ್ಕರ, ಮುತ್ತಯ್ಯ ಮುರಳೀಧರನ್, ಚಾಮಿಂಡ ವಾಸ್​ರಂಥ ವಿಶ್ವ ಕ್ರಿಕೆಟ್​ನ ದಿಗ್ಗಜರೆನಿಸಿಕೊಂಡ ಆಟಗಾರರು ಇದ್ದಾಗಲೇ ಭಾರತದಲ್ಲಿ ಟೆಸ್ಟ್ ಗೆಲುವು ಕಾಣುವಲ್ಲಿ ವಿಫಲವಾಗಿರುವ ಲಂಕಾ, ಈ ಬಾರಿ ಅನನುಭವಿ ತಂಡವನ್ನು ಕಟ್ಟಿಕೊಂಡು ಇತಿಹಾಸ ರಚಿಸುವ ಇರಾದೆಯಲ್ಲಿದೆ. ಶ್ರೀಲಂಕಾ ತಂಡಕ್ಕೆ ಟೆಸ್ಟ್ ಸರಣಿ ಗೆಲುವಿಗಿಂತ ಭಾರತದ ವಿರುದ್ಧ ಒಂದು ಟೆಸ್ಟ್ ಗೆದ್ದರೆ ಅದೇ ಇತಿಹಾಸವೆನಿಸಲಿದೆ. ಗುರುವಾರ ಕೋಲ್ಕತದಲ್ಲಿ ಆರಂಭಗೊಳ್ಳಲಿರುವ ಸರಣಿಗೆ ಮುನ್ನ ಉಭಯ ತಂಡಗಳ ನಡುವೆ ಭಾರತದಲ್ಲಿ ನಡೆದ ಹಿಂದಿನ ಏಳು ಸರಣಿಗಳ ಹಿನ್ನೋಟ ಇಲ್ಲಿದೆ…

1982 ಏಕೈಕ ಟೆಸ್ಟ್ ಡ್ರಾ

ಟೆಸ್ಟ್ ಮಾನ್ಯತೆ ಪಡೆದ ಬೆನ್ನಲ್ಲಿಯೇ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಚೆನ್ನೈನಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಡ್ರಾ ಫಲಿತಾಂಶ ಸಾಧಿಸಿತ್ತು. ದುಲೀಪ್ ಮೆಂಡೀಸ್ ಎರಡೂ ಇನಿಂಗ್ಸ್ ಗಳಲ್ಲೂ ಶತಕ ಬಾರಿಸಿದ್ದರಿಂದ ಲಂಕಾ ಬಲಿಷ್ಠ ಭಾರತದ ವಿರುದ್ಧ ಎರಡೂ ಇನಿಂಗ್ಸ್​ಗಳಲ್ಲಿ 300ಕ್ಕೂ ಅಧಿಕ ಮೊತ್ತ ಪೇರಿಸಿತ್ತು.

1986-87 ಭಾರತಕ್ಕೆ 2-0 ಗೆಲುವು

1985ರ ಶ್ರೀಲಂಕಾ ಪ್ರವಾಸದ ವೇಳೆ ಅಪರೂಪದ ಟೆಸ್ಟ್ ಸರಣಿ ಸೋಲು ಕಂಡಿದ್ದ ಭಾರತ 1986-87ರಲ್ಲಿ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಿದ್ದ ವೇಳೆ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತ್ತು. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಡ್ರಾ ಕಂಡರೆ, ನಾಗ್ಪುರದಲ್ಲಿ ನಡೆದ ಪಂದ್ಯವನ್ನು ಇನಿಂಗ್ಸ್ ಮತ್ತು 106 ರನ್​ಗಳಿಂದ ಹಾಗೂ ಕಟಕ್​ನಲ್ಲಿ ನಡೆದ ಪಂದ್ಯದಲ್ಲಿ ಇನಿಂಗ್ಸ್ ಮತ್ತು 67 ರನ್​ಗಳಿಂದ ಗೆದ್ದಿತ್ತು.

1990 ಏಕೈಕ ಟೆಸ್ಟ್ ಗೆದ್ದ ಭಾರತ

ಅಂದಾಜು ಎರಡು ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಆಡಿದ ಭಾರತ ತಂಡ ಶ್ರೀಲಂಕಾ ವಿರುದ್ಧ ಚಂಡೀಗಢದಲ್ಲಿ ನಡೆದ ಪಂದ್ಯವನ್ನು ಇನಿಂಗ್ಸ್ ಮತ್ತು 8 ರನ್​ಗಳಿಂದ ಜಯಿಸಿತ್ತು. ವೆಂಕಟಪತಿ ರಾಜು (12ಕ್ಕೆ 6) ಸ್ಪಿನ್ ದಾಳಿ ಮುಂದೆ ಮೊದಲ ಇನಿಂಗ್ಸ್​ನಲ್ಲಿ ಲಂಕಾ ಕೇವಲ 82 ರನ್​ಗೆ ಆಲೌಟ್ ಆಗಿತ್ತು.

1994 ಭಾರತ ಕ್ಲೀನ್​ಸ್ವೀಪ್

ಪಾಕ್ ತಂಡ ಭಾರತ ಪ್ರವಾಸದಿಂದ ಹಿಂದೆ ಸರಿದ ಕಾರಣ ಶ್ರೀಲಂಕಾ, ಭಾರತಕ್ಕೆ ಆಗಮಿಸಿತು. ದುರಂತವೆಂದರೆ, ಲಂಕಾ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿತು. ಲಖನೌ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 119 ರನ್​ಗಳಿಂದ ಸೋತರೆ, ಬೆಂಗಳೂರು ಟೆಸ್ಟ್​ನಲ್ಲಿ ಇನಿಂಗ್ಸ್ ಹಾಗೂ 95 ರನ್​ಗಳ ಸೋಲಿನ ಅವಮಾನ ಕಂಡಿತ್ತು. ಅಹಮದಾಬಾದ್​ನಲ್ಲಿ ನಡೆದ ಅಂತಿಮ ಪಂದ್ಯದಲ್ಲೂ ಇನಿಂಗ್ಸ್ ಹಾಗೂ 17 ರನ್ ಸೋಲು ಕಂಡಿತ್ತು.

ದಾದಾ ದಾಖಲೆ ಸನಿಹ ಕೊಹ್ಲಿ

ಕೋಲ್ಕತ: ಇತಿಹಾಸ ಹಾಗೂ ಹಾಲಿ ಫಾಮ್ರ್ ಗಮನಿಸಿದರೆ, ಪ್ರವಾಸಿ ಶ್ರೀಲಂಕಾ ವಿರುದ್ಧದ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತವೇ ಹಾಟ್ ಫೇವರಿಟ್. ಸರಣಿಯನ್ನು ಕ್ಲೀನ್​ಸ್ವೀಪ್ ಮಾಡುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಇದು ಯಶಸ್ವಿಯಾದಲ್ಲಿ, ವಿರಾಟ್ ಕೊಹ್ಲಿ ‘ದಾದಾ’ ಖ್ಯಾತಿಯ ಸೌರವ್ ಗಂಗೂಲಿ ನಾಯಕತ್ವ ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ 27 ಪಂದ್ಯಗಳಿಂದ 19 ಗೆಲುವು ಸಾಧಿಸಿದ್ದಾರೆ. ಈ ಮೂರೂ ಪಂದ್ಯಗಳನ್ನು ಗೆದ್ದಲ್ಲಿ ಗರಿಷ್ಠ ಟೆಸ್ಟ್​ಗಳಲ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟ ನಾಯಕರ ಪಟ್ಟಿಯಲ್ಲಿ ಗಂಗೂಲಿ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಗಂಗೂಲಿ 49 ಟೆಸ್ಟ್​ಗಳಲ್ಲಿ 21 ಗೆಲುವು ತಂದುಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎಂಎಸ್ ಧೋನಿ ನಾಯಕತ್ವ ವಹಿಸಿದ 60 ಪಂದ್ಯಗಳ ಪೈಕಿ 27ರಲ್ಲಿ ಜಯ ದೊರಕಿಸಿಕೊಟ್ಟಿದ್ದಾರೆ.

1997 ಅತ್ಯಂತ ಕಠಿಣ ಸರಣಿ

1997ರ ಅಂತ್ಯದಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಸರಣಿ ಅತ್ಯಂತ ಕಠಿಣವಾಗಿತ್ತು. ಹಿಂದಿನ ಮೂರು ಭಾರತ ಪ್ರವಾಸದಲ್ಲಿ ಆಡಿದ್ದ 7 ಟೆಸ್ಟ್​ಗಳಲ್ಲಿ 6 ಇನಿಂಗ್ಸ್ ಸೋಲು ಕಂಡಿದ್ದ ಶ್ರೀಲಂಕಾ, ಮೂರು ಪಂದ್ಯಗಳ ಸರಣಿಯನ್ನು 0-0ಯಿಂದ ಡ್ರಾ ಮಾಡಿಕೊಂಡಿದ್ದೇ ಸಾಧನೆ ಎನಿಸಿತ್ತು. ಮೊಹಾಲಿ, ನಾಗ್ಪುರ ಹಾಗೂ ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ ಕ್ರಮವಾಗಿ 515, 485 ಹಾಗೂ 512 ರನ್ ಬಾರಿಸಿತ್ತು. ಆದರೆ, ಬೌಲರ್​ಗಳು ಮಾತ್ರ ಒಮ್ಮೆಯೂ ಲಂಕಾ ತಂಡವನ್ನು 2 ಬಾರಿ ಆಲೌಟ್ ಮಾಡುವಲ್ಲಿ ಯಶ ಕಾಣಲಿಲ್ಲ. ಮೊಹಾಲಿ ಹಾಗೂ ಮುಂಬೈನಲ್ಲಿ ಗೆಲುವಿನ ಸನಿಹ ಬಂದಿದ್ದರೆ, ನಾಗ್ಪುರದಲ್ಲಿ ಮಳೆ ಆಟವಾಡಿತ್ತು.

2005 ಭಾರತಕ್ಕೆ 2-0 ಗೆಲುವು

ರಾಹುಲ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ದ್ರಾವಿಡ್ ನೇತೃತ್ವದಲ್ಲಿ ಆಡಿದ ಚೆನ್ನೈ ಟೆಸ್ಟ್ ನೀರಸ ಡ್ರಾ ಕಂಡರೆ, ದೆಹಲಿ ಪಂದ್ಯದಲ್ಲಿ 188 ರನ್ ಗೆಲುವು ಸಿಕ್ಕಿತು. ಅಹಮದಾಬಾದ್​ನಲ್ಲಿ ಸೆಹ್ವಾಗ್ ನೇತೃತ್ವದಲ್ಲಿ ಆಡಿದ ಟೀಮ್ ಇಂಡಿಯಾ 259 ರನ್​ಗಳ ಭರ್ಜರಿ ಜಯ ಸಾಧಿಸಿತು. ಭಾರತದ ಸ್ಪಿನ್ನರ್​ಗಳಾದ ಅನಿಲ್ ಕುಂಬ್ಳೆ (20 ವಿಕೆಟ್) ಹಾಗೂ ಹರ್ಭಜನ್ ಸಿಂಗ್ (14) ದಾಳಿಗೆ ಶ್ರೀಲಂಕಾ ಬಳಿ ಉತ್ತರವೇ ಇರಲಿಲ್ಲ.

2009 ಭಾರತಕ್ಕೆ ಮತ್ತೆ ಗೆಲುವು

ಶ್ರೀಲಂಕಾ ಕೊನೆಯ ಬಾರಿಗೆ ಭಾರತ ಪ್ರವಾಸ ಮಾಡಿದ್ದ ಸರಣಿ. 3 ಪಂದ್ಯಗಳ ಸರಣಿಯನ್ನು ಭಾರತ 2-0 ಯಿಂದ ಜಯಿಸಿತ್ತು. ಅಹಮದಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಡ್ರಾ ಕಂಡರೆ, ಕಾನ್ಪುರದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಮತ್ತು 144 ರನ್​ಗಳಿಂದ ಹಾಗೂ ಮುಂಬೈನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 24 ರನ್​ಗಳಿಂದ ಜಯಿಸಿತ್ತು. ಮುಂಬೈ ಟೆಸ್ಟ್​ನಲ್ಲಿ ಸೆಹ್ವಾಗ್ ದಾಖಲೆಯ 293 ರನ್ ಸಿಡಿಸಿದ್ದರು.

Leave a Reply

Your email address will not be published. Required fields are marked *

Back To Top