Friday, 21st September 2018  

Vijayavani

Breaking News

ತರಲೆ ನಾಯಿ ಜತೆ ಗಂಭೀರ ನಾಯಕ

Thursday, 28.09.2017, 3:04 AM       No Comments

ಬೆಂಗಳೂರು: ರಕ್ಷಿತ್ ಶೆಟ್ಟಿ ಒಡೆತನದ ಪರಮ್ಾ ಸ್ಟುಡಿಯೋಸ್ ಮೂಲಕ ಬಂದ ‘ಕಿರಿಕ್ ಪಾರ್ಟಿ’ ಚಿತ್ರ ಸೂಪರ್​ಹಿಟ್ ಆಯಿತು. ಈಗ ಅದೇ ಬ್ಯಾನರ್​ನ ಎರಡನೇ ಚಿತ್ರವಾಗಿ ‘777 ಚಾರ್ಲಿ’ ಎಂಬ ಹೊಸ ಪ್ರಾಜೆಕ್ಟ್​ಗೆ ಈಗಾಗಲೇ ಸಿದ್ಧತೆ ನಡೆದಿದೆ. ವಿಶೇಷವೆಂದರೆ, ನಾಯಿ ಮತ್ತು ಮಾನವನ ನಡುವಿನ ಭಾವನಾತ್ಮಕ ಸಂಬಂಧದ ಕಥೆಯೇ ಇಡೀ ಚಿತ್ರದ ಹೈಲೈಟ್ ಆಗಿರಲಿದೆಯಂತೆ. ‘ರಿಕ್ಕಿ’ ಮತ್ತು ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ರಾಜ್ ಅವರು ‘777..’ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಲಿದ್ದಾರೆ. ‘ಕಿರಿಕ್..’ ಬಳಗದಿಂದ ಪರಿಚಿತಗೊಂಡ ಮತ್ತೋರ್ವ ಪ್ರತಿಭೆ ಅರವಿಂದ್ ಅಯ್ಯರ್ ಈ ಚಿತ್ರಕ್ಕೆ ನಾಯಕ. ‘ಇತ್ತೀಚಿನ ದಿನಗಳಲ್ಲಿ ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕುರಿತು ಸ್ಯಾಂಡಲ್​ವುಡ್​ನಲ್ಲಿ ಯಾವ ಚಿತ್ರವೂ ಬಂದಿಲ್ಲ. ಒಂಥರ ಹೊಸ ಪ್ರಯೋಗ. ಇಂಥ ಭಾವನಾತ್ಮಕ ಚಿತ್ರವನ್ನು ಪ್ರೇಕ್ಷಕರು ಖಂಡಿತ ಮೆಚ್ಚುತ್ತಾರೆ ಎಂಬ ನಂಬಿಕೆ ನಮಗಿದೆ’ ಎನ್ನುತ್ತಾರೆ ರಕ್ಷಿತ್. ನಿರ್ದೇಶಕ ಕಿರಣ್ ರಾಜ್ ಗಮನಿಸಿದ ಒಂದು ನೈಜ ಘಟನೆ ಆಧರಿಸಿಯೇ ಈ ಕಥೆ ಹೆಣೆದಿದ್ದಾರಂತೆ.

ಚಿತ್ರದಲ್ಲಿ ನಟಿಸಲಿರುವ ಒಂದು ನಾಯಿಯನ್ನೂ ಆಯ್ಕೆ ಮಾಡಲಾಗಿದೆ. ನಾಯಕ ಮತ್ತು ನಾಯಿಯ ನಡುವಿನ ಭಾಂದವ್ಯ ನೈಜವಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಅರವಿಂದ್ ಅಯ್ಯರ್ ಈಗಾಗಲೇ ನಾಯಿಯ ಜತೆ ಕಾಲ ಕಳೆಯುತ್ತಿದ್ದಾರಂತೆ. ಹೀಗೆ ಮೂರು ತಿಂಗಳು ನಾಯಿಗೆ ತರಬೇತಿ ನೀಡಿದ ಬಳಿಕ, ಜನವರಿಯಲ್ಲಿ ಶೂಟಿಂಗ್ ಪ್ರಾರಂಭಿಸುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ.

‘ನಗರ ಪಾಲಿಕೆಯವರು ನೀಡಿದ ನೋಂದಣಿ ಸಂಖ್ಯೆ 777. ನಾಯಿ ಹೆಸರು ಚಾರ್ಲಿ. ಹಾಗಾಗಿ ಸಿನಿಮಾಗೆ ಈ ಶೀರ್ಷಿಕೆ ಇಟ್ಟಿದ್ದೇವೆ. ಕಥಾನಾಯಕ ತುಂಬ ಗಂಭೀರ ಸ್ವಭಾವದವನು ಆದರೆ, ನಾಯಿ ತುಂಬ ತರ್ಲೆ. ಆ ನಾಯಿಯಿಂದಾಗಿ ಆತನ ಬದುಕು ಹೇಗೆ ಬದಲಾಗುತ್ತದೆ ಎಂಬುದೇ ಕಥೆಯ ತಿರುಳು‘ ಎನ್ನುತ್ತಾರೆ ಕಿರಣ್ ರಾಜ್. ಪೋಷಕ ಪಾತ್ರಧಾರಿಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ. ನೊಬಿನ್ ಪೌಲ್ ಸಂಗೀತ ನೀಡಲಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಲಿದ್ದಾರೆ.

ಮಾಮೂಲಿ ಕಮರ್ಷಿಯಲ್ ಸಿನಿಮಾಗಿಂತ ಹೆಚ್ಚು ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ನಾಯಿ ಒಂದು ದಿನಕ್ಕೆ 3-4 ಗಂಟೆ ಮಾತ್ರ ಕ್ರಿಯಾಶೀಲವಾಗಿರುತ್ತದೆ. ಹಾಗಾಗಿ ಜಾಸ್ತಿ ಸಮಯ ಬೇಕಾಗುತ್ತದೆ. ಇದು ನಮಗಿರುವ ಸವಾಲು.

| ಕಿರಣ್ ರಾಜ್ ನಿರ್ದೇಶಕ

 

Leave a Reply

Your email address will not be published. Required fields are marked *

Back To Top