Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ತನಿಖೆ ನಡೆಯಲಿ

Tuesday, 07.11.2017, 3:02 AM       No Comments

ಹದಿನೆಂಟು ತಿಂಗಳ ಹಿಂದೆ ಪನಾಮಾ ಪೇಪರ್ ಸೃಷ್ಟಿಸಿದ ಸಂಚಲನದಿಂದ ತೆರಿಗೆಗಳ್ಳರು ಆಘಾತ ಅನುಭವಿಸಿದರೆ, ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು. ಪನಾಮಾ ಪೇಪರ್ ಸಂಬಂಧಿಸಿದ ಪ್ರಕರಣಗಳು ಭಾರತದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಪ್ಯಾರಡೈಸ್ ಪೇಪರ್ ಪ್ರಕಟವಾಗಿದ್ದು, ಕಾಳಧನಿಕರ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. 19 ತೆರಿಗೆ ಸ್ವರ್ಗಗಳನ್ನು ಈ ವರದಿ ಅನಾವರಣಗೊಳಿಸಿದೆ. 180 ದೇಶಗಳಿಗೆ ಸಂಬಂಧಿಸಿದ ದತ್ತಾಂಶವನ್ನು 70 ರಾಷ್ಟ್ರಗಳ 200ಕ್ಕೂ ಹೆಚ್ಚು ತನಿಖಾ ಪತ್ರಕರ್ತರ ಒಕ್ಕೂಟ ಬಿಡುಗಡೆ ಮಾಡಿದೆ. 700ಕ್ಕೂ ಹೆಚ್ಚು ಭಾರತೀಯರ ಹೆಸರು ವರದಿಯಲ್ಲಿ ಉಲ್ಲೇಖವಾಗಿದ್ದು, ರಾಜಕೀಯ, ಉದ್ಯಮ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಒಟ್ಟು 1.34 ಕೋಟಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ದೇಶದ ಕೆಲವು ಪ್ರಮುಖ ಕಾರ್ಪೆರೇಟ್ ಕಂಪನಿಗಳು, ಕೆಲವು ಅತಿಶ್ರೀಮಂತರು ಕಡಲಾಚೆ ದೇಶಗಳಲ್ಲಿ ನಡೆಸುತ್ತಿರುವ ವ್ಯವಹಾರದ ವಿವರ ದಾಖಲೆಗಳಲ್ಲಿವೆ. ಕೇಂದ್ರ ಸರ್ಕಾರ ಕಾಳಧನದ ವಿರುದ್ಧ ಸಮರ ಸಾರಿದ್ದು, ತೆರಿಗೆ ಕಳುವನ್ನು ತಡೆಯನ್ನು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಹೊತ್ತಲ್ಲೇ ಪ್ಯಾರಡೈಸ್ ಪೇಪರ್ ಬಹಿರಂಗವಾಗಿರುವುದು ಮತ್ತು ತೆರಿಗೆ ಸ್ವರ್ಗಗಳ ವಿವರಗಳು ಲಭ್ಯವಾಗಿದ್ದು ಸರ್ಕಾರದ ಅಭಿಯಾನಕ್ಕೆ ಮತ್ತಷ್ಟು ಬಲ ತುಂಬಬಹುದು.

ಹಲವು ರಾಜಕಾರಣಿಗಳು ತಮ್ಮ ಹೆಸರು ಉಲ್ಲೇಖವಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು ‘ಕಾನೂನಿನ ಪ್ರಕಾರವೇ ವ್ಯವಹಾರ ಮಾಡಲಾಗಿದೆ, ತೆರಿಗೆ ವಂಚಿಸಿಲ್ಲ’ ಎಂದಿದ್ದಾರೆ. ಯಾವುದೇ ಉದ್ಯಮ-ವಹಿವಾಟುಗಳ ಬಗ್ಗೆ ಆರೋಪ ಬಂದಲ್ಲಿ ಶಂಕೆಗಳು ಮೂಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಹೀಗೆ ಆರೋಪಗಳು ಬಂದಾಗ ಸೂಕ್ತ ತನಿಖೆ ನಡೆಸುವುದು ಅವಶ್ಯವೂ ಹೌದು, ಅನಿವಾರ್ಯವೂ ಹೌದು. ಆದರೆ, ಈ ತನಿಖೆ ನಿಗದಿತ ಕಾಲಾವಧಿಯಲ್ಲಿ ಮುಗಿದು ತೀರ್ಪು ಬರುವಂತಿರಬೇಕು. ಏಕೆಂದರೆ, ಯಾವುದೇ ವರದಿ ಅಥವಾ ಆರೋಪಿತರ ಪಟ್ಟಿಯಲ್ಲಿ ನಿರಪರಾಧಿಗಳೂ ಇರಬಹುದು. ಇಂಥ ಪ್ರಕರಣಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆದು, ತೀರ್ಪು ಪ್ರಕಟವಾದರೆ ನಿರಪರಾಧಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ, ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ.

ವಿವಿಧ ರಾಷ್ಟ್ರಗಳು ತೆರಿಗೆ ಸ್ವರ್ಗಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ, ಆತಂಕ ಹಿಂದಿನಿಂದಲೂ ಕೇಳಿಬಂದಿದೆ. ಪ್ಯಾರಡೈಸ್ ಪೇಪರ್ ಆ ಒಳಸುಳಿಗಳನ್ನು ಹೊರತರುವ ಪ್ರಯತ್ನ ಮಾಡಿದ್ದು, ಈ ಮೂಲಕ ತೆರಿಗೆಗಳ್ಳತನದ ಬಾಗಿಲುಗಳು ಶಾಶ್ವತವಾಗಿ ಬಂದ್ ಆಗುವ ಆಶಾವಾದವಿದೆ. ಉದ್ಯಮ ಅಥವಾ ವ್ಯಕ್ತಿ ತನ್ನ ಪಾಲಿನ ತೆರಿಗೆಯನ್ನು ಪ್ರಾಮಾಣಿಕವಾಗಿ ಕಟ್ಟಿದಾಗ ಮಾತ್ರ ಸರ್ಕಾರದ ಖಜಾನೆ ಭದ್ರವಾಗಿದ್ದು, ಅಭಿವೃದ್ಧಿ ಕಾರ್ಯಗಳು ತಡೆಯಿಲ್ಲದೆ ನಡೆಯುತ್ತವೆ ಎಂಬುದು ನಿರ್ವಿವಾದ. ಆದರೆ, ಭಾರಿ ಲಾಭ ಗಳಿಸಿದರೂ ತೆರಿಗೆ ಉಳಿಸಿಕೊಳ್ಳಲು ಅಡ್ಡದಾರಿ ಹಿಡಿಯುವ ನಿದರ್ಶನಗಳಿಗೆ ಕೊರತೆಯಿಲ್ಲ. ಭಾರತ ಸೇರಿದಂತೆ ವಿಶ್ವದ ನೂರಾರು ರಾಷ್ಟ್ರಗಳ ಇಂಥ ನಿದರ್ಶನಗಳು ಬೆಳಕಿಗೆ ಬಂದಿರುವುದು ಮಹತ್ವದ ವಿದ್ಯಮಾನವೇ ಸರಿ, ಅಲ್ಲದೆ ಇಂದಿನ ಮಾಹಿತಿ ಪ್ರಪಂಚದಲ್ಲಿ ಯಾವುದೇ ಅವ್ಯವಹಾರವನ್ನು ಅಡಗಿಸಿಡಲು ಸಾಧ್ಯವಿಲ್ಲ ಎಂಬುದು ಸಹ ಪ್ಯಾರಡೈಸ್ ಪೇಪರ್​ನಿಂದ ಸ್ಪಷ್ಟಗೊಂಡಿದೆ.

Leave a Reply

Your email address will not be published. Required fields are marked *

Back To Top